‘ಶುಭೋದಯ’ ಕೃತಿ ಪರಿಚಯ

ಕಾದಂಬರಿಕಾರರಾದ ತ.ಪು.ವೆಂಕಟರಾಮ್ ಅವರ ‘ಶುಭೋದಯ’ ಗ್ರಾಮೀಣ ಜನ ಜೀವನದ ಹಿನ್ನಲೆಯಲ್ಲಿ ಹೆಣೆದ ಸಾಮಾಜಿಕ ಕಾದಂಬರಿಯು ಇದಾಗಿದೆ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಶುಭೋದಯ.
ಲೇಖಕರು: ತ.ಪು. ವೆಂಕಟರಾಮ್.
ಸಾಹಿತ್ಯ ನಂದನ ಬೆಂಗಳೂರು.
ಮುದ್ರಣದ ವರ್ಷ: ೧೯೯೭ರಿಂದ ೨೦೧೦(೨ ಮುದ್ರಣ).
ಪುಟಗಳು:೧೮೪.
ಬೆಲೆ:೯೦.

ದೇವದುರ್ಗ ಎಂಬ ಹಳ್ಳಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿದ್ದ ನೈತಿಕ ಮೌಲ್ಯಗಳು ನಂತರದಲ್ಲಿ ರಾಜಕೀಯ ಸೋಂಕು ತಗುಲಿ, ಅಸತ್ಯ ಅಧರ್ಮಗಳು ತಾಂಡವವಾಡುತ್ತಾ ಜನರು ಹೇಗೆಲ್ಲಾ ಬದಲಾಗುತ್ತಾರೆ ಎನ್ನುವುದನ್ನು ಲೇಖಕರು ಇಲ್ಲಿ ಅನೇಕ ವ್ಯಕ್ತಿಗಳ ಪಾತ್ರಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಕಥೆಯಲ್ಲಿ ಬರುವ ಆ ಊರ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಯ್ಯ, ಉಪಾಧ್ಯಕ್ಷಿಣಿ ಅನಕ್ಷರಸ್ಥೆ ಹೆಬ್ಬೆಟ್ಟು ತಿಮ್ಮಕ್ಕ, ಒಂದುಕಾಲದಲ್ಲಿ ಪಾಳೇದಾರಿಕೆ ವಂಶಸ್ಥನಾಗಿದ್ದ ಈಗ ಏನೂ ಇಲ್ಲದ ಬುರುಡೆ ಬಿಡುವ ಸಂಕಪ್ಪ ನಾಯ್ಕ , ಚಪ್ಪಲಿ ಅಂಗಡಿ ದಾಸಣ್ಣ, ಕಿರಾಣಿ ಶೆಟ್ಟಿ ಇವರೆಲ್ಲರ ಗ್ರಾಮೀಣ ಸೊಗಡಿನ ಸಂಭಾಷಣೆಗಳು ನಗು ತರಿಸುವಂತೆ ವಿನೋದ ಮಯವಾಗಿದ್ದರೂ ,ಅಲ್ಲಿರುವ ಸತ್ಯದ ವಿಚಾರವನ್ನು ಕೂಡಾ ಅಲ್ಲಗಳೆಯುವಂತಿಲ್ಲ.

 

ಪ್ರಮುಖವಾಗಿ ಸಂಕಪ್ಪ ನಾಯ್ಕನ ಸಂಸಾರ, ಆತನ ದಡ್ಡ ಮಗ ಹನುಮಪ್ಪ ನಾಯ್ಕ, ಯಶೋಧಾ ಮತ್ತು ಸರೋಜಾ ಎನ್ನುವ ಇಬ್ಬರು ಹೆಣ್ಣುಮಕ್ಕಳು, ಹೆಂಡತಿ ಅನುಸೂಯಾ ಇವರ ಪರಿಚಯ ನಮಗೆ ಅವರೆಲ್ಲರ ಗುಣ ಸ್ವಭಾವಗಳನ್ನು ತಿಳಿಸುತ್ತದೆ. ಹಿಂದೆ ಮಹಾರಾಜರ ಕೃಪಾಕಟಾಕ್ಷದಲ್ಲಿದ್ದ ಅವರ ಪಾಳೇದಾರಿಕೆ ಮನೆತನದ ಅಂದಿನ ಆಸ್ತಿ ಕಳೆದುಹೋದ ಬಗೆಗಿನ ಸವಿಸ್ತಾರವಾದ ವಿಷಯ ಕಾದಂಬರಿಯ ಬಹುಪಾಲು ತುಂಬಿಕೊಂಡಿದೆ .

ಸಂಕಪ್ಪ ನಾಯ್ಕನ ಹಿರಿ ಮಗಳು ಮದುವೆಯಾಗಿ ಎರಡೇ ವರ್ಷದಲ್ಲಿ ವಿಧವೆಯಾಗಿ ತವರು ಸೇರುತ್ತಾಳೆ. ಬಡತನದ ಸಂಸಾರಕ್ಕೆ ಆದಾಯದ ಚಿಂತೆಯಲ್ಲಿದ್ದಾಗಲೇ ಇವರ ಮನೆಯ ಮುಂದಿನ ಕೋಣೆಯೊಂದನ್ನು ಶಂಕರಪ್ಪ ಎಂಬ ಶಾಲಾ ಮೇಷ್ಟರೊಬ್ಬರಿಗೆ ಬಾಡಿಗೆಗೆ ಕೊಡುತ್ತಾರೆ . ಆತ ಬಹಳ ಒಳ್ಳೆಯ ವ್ಯಕ್ತಿಯಾಗಿದ್ದ. ದಡ್ಡ ಹುಡುಗ ಹನುಮ ಮತ್ತು ಸರೋಜಾಗೆ ಪಾಠ ಹೇಳಿ ತಿದ್ದುತ್ತಾ, ಬಾಡಿಗೆ ರೊಕ್ಕವನ್ನೂ ನೀಡುತ್ತಾ ಆ ಮನೆಯವರ ಕಷ್ಟಗಳಿಗೆ ನೆರವಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದ.

ಆದರೆ ಒಮ್ಮೆ ಅವನ ಕೋಣೆಯಲ್ಲಿ ತನ್ನ ಮಗಳು ಯಶೋಧಾಳನ್ನು ಕಂಡು ತಪ್ಪು ಕಲ್ಪನೆಯಿಂದ ಸಂಕಪ್ಪ ನಾಯ್ಕ ಮೇಷ್ಟ್ರನ್ನು ಮಾತಾಡಲು ಅವಕಾಶ ಕೊಡದೇ ಹಿಗ್ಗಾ ಮುಗ್ಗ ಥಳಿಸಿದಾಗ ಆತ ಕುಸಿದು ಬಿದ್ದ.ತಾನು ಶಂಕರಪ್ಪ ಮೇಷ್ಟ್ರನ್ನು ಸಾಯಿಸಿಬಿಟ್ಟೆ…ಈಗ ಕೊಲೆ ಆಪಾದನೆ ಮೇಲೆ ಪೊಲೀಸರು ತನ್ನ ಜೈಲಿಗೆ ಹಾಕುತ್ತಾರೆ …ಎಂದು ಹೆದರಿ ಸಂಕಪ್ಪ ನಾಯ್ಕ ಊರು ಬಿಟ್ಟು ಪರಾರಿಯಾಗಿದ್ದ.

ಹೀಗೇ …ವೇಷ ಮರೆಸಿಕೊಂಡು ಸನ್ಯಾಸಿಗಳ ಗುಂಪಿನಲ್ಲಿ ಸೇರಿ ಕೊಂಡು ಎಲ್ಲೆಲ್ಲೋ ತಿರುಗುತ್ತಾ ಐದಾರು ವರ್ಷ ಸವೆಸಿದ.ಅವನು ಹೋದ ನಂತರ ಮನೆಯಲ್ಲಿ ಏನೇನು ನಡೆಯಿತು?..ಶಂಕರಪ್ಪ ಏನಾದ? ಮತ್ತೆ ಸಂಕಪ್ಪನನ್ನು ಗುರ್ತಿಸಿ ,ಮರಳಿ ಊರಿಗೆ ಕರೆ ತಂದವರು ಯಾರು?…ಇವೆಲ್ಲಾ ಘಟನೆಗಳು ಬಹಳ ಸ್ವಾರಸ್ಯಕರವಾಗಿದೆ.

ಈ ನಡುವೆ ಆರಾಧನಾ ಎಂಬ ಯುವತಿ ಮತ್ತು ಬಸವರಾಜ ಎಂಬ ಕೃಷಿ ಪದವೀಧರ ಯುವಕನೊಬ್ಬ ಆ ಹಳ್ಳಿಯ ಅವಿದ್ಯಾವಂತ ಜನರ ಮನಸ್ಸನ್ನು ಪರಿವರ್ತಿಸಿ, ಹಳ್ಳಿಯ ಅಭಿವೃದ್ಧಿಗೆ ಹೇಗೆಲ್ಲಾ ಕಾರಣನಾಗುತ್ತಾರೆ ಎನ್ನುವುದನ್ನು ಇಲ್ಲಿ ಲೇಖಕರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ . ಹೆಸರೇ ಸೂಚಿಸುವಂತೆ ಅಜ್ಞಾನದಿಂದ ಕತ್ತಲಾಗಿದ್ದ ಹಳ್ಳಿಯಲ್ಲಿ ಶುಭೋದಯವಾಗಿದ್ದು ಹೇಗೆ ಎನ್ನುವುದನ್ನು ನೀವೂ ಓದಿ ಆನಂದಿಸಿ…

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading