ಲೇಖಕರಾದ ಗಿರೀಶ ಜಕಾಪುರೆ ಮತ್ತು ಶ್ರೀದೇವಿ ಕೆರೆಮನೆ ಅವರ ‘ನನ್ನ ದನಿಗೆ ನಿನ್ನ ದನಿಯು’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಕೃತಿ : ನನ್ನ ದನಿಗೆ ನಿನ್ನ ದನಿಯು.
ಲೇಖಕರು: ಗಿರೀಶ ಜಕಾಪುರೆ ಮತ್ತು ಶ್ರೀದೇವಿ ಕೆರೆಮನೆ.
ಪ್ರಕಾಶನ: ಪೂರ್ವಶ್ರೀ ಪ್ರಕಾಶನ ಮಹಾರಾಷ್ಟ್ರ.
ಮುದ್ರಣದ ವರ್ಷ: ೨೦೧೯
ಪುಟಗಳು:೧೫೨.
ಬೆಲೆ:೧೨೦.
ಗಜಲ್ ಅಂದರೆ ಸುಂದರವಾದ ಕಾವ್ಯ ಪ್ರಕಾರ.ಇದೊಂದು ” ಗಜಲ್ ಗಳ ‘ಜುಗಲ್ ಬಂಧಿ.’ ಸಾಮಾನ್ಯವಾಗಿ ನಾವು ಈ ಶಬ್ಧವನ್ನು ಸಂಗೀತದಲ್ಲಿ ಕೇಳುತ್ತೇವೆ.ಒಂದೇ ಲಯದಲ್ಲಿ ಎರಡೂ ವಾದ್ಯಗಳು ಅಥವಾ ಸ್ವರಗಳು ಪರಸ್ಪರ ಸ್ಪರ್ಧೆಗಿಳಿದಿರುವಂತೆ ಕಂಡರೂ,í ಅವು ಒಂದೇ ಲಯದಲ್ಲಿರುತ್ತವೆ. ಹಾಗೇ ಇಲ್ಲಿ ‘ ಸಿರಿ’ ಎಂದು ಶ್ರೀದೇವಿ ಕೆರೆಮನೆ ಹಾಗೂ ‘ಅಲ್ಲಮ ‘ ಎಂಬ ಕಾವ್ಯನಾಮದಲ್ಲಿ ಗಿರೀಶ ಜಕಾಪುರೆ ಅವರುಗಳು ಗಜಲ್ ಗಳ ನೆಪದಲ್ಲಿ ಕಾವ್ಯಾತ್ಮಕವಾಗಿ ಪರಸ್ಪರ ಮುಖಾಮುಖಿಯಾಗಿದ್ದಾರೆ.
ಇಬ್ಬರೂ ತಲಾ ೬೦ ಗಜಲ್ ಗಳಂತೆ ಒಟ್ಟೂ ೧೨೦ ಪದ್ಯ ರಚಿಸಿ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ.ಮಾನಸಿಕವಾಗಿ ಅತ್ಯಂತ ಶ್ರಮದಾಯಕವಾದ ಈ ಕಾರ್ಯಕ್ಕೆ ಅವರು ಎರಡೂವರೆ ವರ್ಷ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಇಲ್ಲಿನ ಗಜಲ್ ಗಳಲ್ಲಿ ಎರಡೂ ವಿಭಿನ್ನ ಧ್ವನಿಗಳು ಅನುಗಾಮಿ- ಪ್ರತಿಗಾಮಿಯಾಗಿ ಚಲಿಸುವುದನ್ನು ನಾವು ನೋಡಬಹುದು.

ಕಾಫಿಯಾ, ರದೀಫ್,ರವಿ, ಮತ್ಲಾ , ಮಕ್ತಾ, ವೃತ್ತ ಇವೆಲ್ಲಾ (ಏನೆಂದು ಸತ್ಯವಾಗಿಯೂ ನಾನು ತಿಳಿಯೆ.) ಗಜಲ್ ಬರೆಯವ ಕವಿಗಳು ತಿಳಿಯಬೇಕಾದ ನಿಯಮಗಳು ಎಂದಿದ್ದಾರೆ.ಕವಿತೆ ಆ ಕ್ಷಣದಲ್ಲಿಯೇ ಹುಟ್ಟುವ ಪ್ರಯೋಗಶೀಲತೆಯ ಗಜಲ್ ಗಳಿಗೆ ತನ್ನದೇ ಆದ ಸೃಜನಶೀಲ ಹಿನ್ನೆಲೆಯಿದೆ.೧೩ ನೆಯ ಶತಮಾನದ ‘ನಾಗಚಂದ್ರ ‘ ಮತ್ತು ‘ಕಂತಿ ‘ ಎಂಬ ಕವಿಗಳ ಒಂದೆರಡು ಸಂವಾದಗಳ ಬಗ್ಗೆ ಮುನ್ನುಡಿಯಲ್ಲಿ ಜ. ನಾ. ತೇಜಶ್ರೀ ಅವರು ಪ್ರಸ್ತಾಪಿಸಿದ್ದಾರೆ.

೧೮ ನೆಯ ಶತಮಾನದಲ್ಲಿ ಸಾಹಿತ್ಯ ಸಂಗೀತದ ಕೇಂದ್ರವಾದ ಲಖನೌದ ನವಾಬ *ಮೊತ ಮುದೌಲ್ ಬಹದ್ದೂರ ಲಖನ್ವಿ ಎಂಬಾತ ವಿದ್ವಾಂಸರನ್ನು ತನ್ನ ಆಸ್ಥಾನಕ್ಕೆ ಕರೆಸಿ ಗಜಲ್ ಕಾವ್ಯ ಕೇಳುತ್ತಿದ್ದ ಹಾಗೂ ರಚಿಸುತ್ತಿದ್ದನಂತೆ! ಎಂಬ ಪ್ರತೀತಿಯಿದೆ. ಅವನ ಮಗಳು “ಸುಲ್ತಾನಾ ಬೇಗಂ ” ಕೂಡ ಗಜಲ್ ಕೇಳುತ್ತಾ, ಅದರ ಪ್ರಭಾವಕ್ಕೊಳಗಾಗಿ, *ಸುಲ್ತಾನಾ ಎಂಬ ಕಾವ್ಯನಾಮದಲ್ಲಿ ತಂದೆಯ ಮಾರ್ಗದರ್ಶನದಲ್ಲಿ ಗಜಲ್ ಬರೆಯತೊಡಗಿದಳು. ತಂದೆ ಮಗಳಿಗೆ ಕಲಿಸಿದ ಉದಾಹರಣೆಯ ಒಂದು ಮಾದರಿ ನೋಡಿ…
* ‘ಸುಲ್ತಾನಾ ‘ ಗಜಲ್ ಏಕ್ ಔರ್ ಬದಲ್ ಕರ್ ರದೀಪ್ ಲಿಖ್
ಪರ್ ಶರ್ತ್ ಹೈ ಕಿ ಲಫ್ಜ ಎ ಗುಲ್ ಆಯೇ ಬಜಾಯೇ ದಿಲ್
*ಸುಲ್ತಾನಾ,ರದೀಪ್ ನ್ನು ಬದಲಾಯಿಸಿ ಇನ್ನೊಂದು ಗಜಲ್ ಬರೆ.
ಹೃದಯ ಎಂಬ ಶಬ್ದದ ಬದಲಿಗೆ ಹೂವು ಶಬ್ಧ ಬಳಸಬೇಕಿದೆ ಎಂದು ತಂದೆ ಮಗಳಿಗೆ ಅವಳ ಓರೆ ಕೋರೆಗಳನ್ನು ತಿದ್ದುತ್ತಿದ್ದ ಎಂಬುದಾಗಿ ಕವಿ ಗಿರೀಶ ಜಕಾಪುರೆ ಉಲ್ಲೇಖಿಸಿದ್ದಾರೆ. ಹಾಗೆಯೇ ತಾವು ೧೮ ನೆಯ ವಯಸ್ಸಿನಿಂದಲೇ ಹಿಂದಿ -ಉರ್ದು ಗಜಲ್ ಗಳನ್ನು ಮೋಹಿಸಿ,ಕಲಿತಿದ್ದಾಗಿ ಹೇಳಿಕೊಂಡಿದ್ದಾರೆ.

ಮತ್ತೊಬ್ಬ ಕವಿಯತ್ರಿ ಶ್ರೀದೇವಿ ಕೆರೆಮನೆಯವರು ಗಜಲ್ ನ ಎಲ್ಲಾ ಪಟ್ಟುಗಳನ್ನೂ ತಾವು ಮಹಾರಾಷ್ಟ್ರದ ಕವಿ ಗಿರೀಶ ಜಕಾಪುರೆ ಯವರಿಂದ ಕಲಿತಿದ್ದಾಗಿಯೂ , ತಮ್ಮ ಜುಗಲ್ ನ ಜಂಟಿ ಪಯಣದ ಅದ್ಭುತ ಅನುಭವವನ್ನು ಹಂಚಿಕೊಂಡಿದ್ದಾರೆ.
ಹಿಂದಿಯ ಕೆಲವು ಗಜಲ್ ಗಳನ್ನು ಗಾಯನದಲ್ಲಿ ಕೇಳಿದ್ದ ನನಗೆ ಇದರ ಬಗ್ಗೆ ತಿಳಿಯುವ ಕುತೂಹಲವಿತ್ತು. ಮಾತು,ಪ್ರೀತಿ, ವಿರಹ,ಗೆಲುವು, ಸೋಲು, ಆತ್ಮ , ಕಾಲ, ಎಲ್ಲಾ ಅನುಭಾವದ ಕಾವ್ಯಾತ್ಮಗಳ ಜಗಲ್ ಗಳನ್ನು ಬರೆಯುವುದಕ್ಕಿಂತ ನಾವು ಓದಿ ಆಸ್ವಾದಿಸಿದರೇ ,ಇನ್ನೂ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದು.
೧೬ ಸಾಲಿನ ಗಜಲ್ ಗಳ ತಲಾ ಆಯ್ದ ಎರಡು ಸಾಲುಗಳು…..
ಅಲ್ಲಮ: ಬಿಡುವು ಸಿಕ್ಕಾಗ ಉತ್ತರಿಸು,ಸದ್ಯಕ್ಕಂತೂ ಏನೂ ಬೇಕಿಲ್ಲ.
ಸಿರಿ: ನಿನ್ನೊಳಗೆ ಲೀನವಾಗಿದೆ ಮನಸು ಸದ್ಯಕ್ಕಂತೂ ಏನೂ ಬೇಕಿಲ್ಲ.
ಅಲ್ಲಮ: ನನ್ನ ತಪ್ಪು ಎತ್ತಿ ಹಿಡಿಯುವೆ ನಿನ್ನ ದೋಷಗಳಿಗೆ ಪರದೆ ಹಾಕುವೆ
ಕೊನೆಗೊಮ್ಮೆ ತೆರೆ ಸರಿಯುತ್ತವೆ ಎಷ್ಟು ಹುಳುಕುಗಳಿಗೆ ಪರದೆ ಹಾಕುವೆ
ಸಿರಿ: ನಿನ್ನ ಕಾಣಲಾಗದ ಕಂಗಳಿಗೆ ಪರದೆ ಹಾಕುವೆ
ನೀನಿರದ ಯಾವುದೇ ಚಿತ್ರಗಳಿಗೆ ಪರದೆ ಹಾಕುವೆ
ಅಲ್ಲಮ: ಶೂನ್ಯದಿ ಹುಟ್ಟಿದ ಅಲ್ಲಮ ಶೂನ್ಯದಲಿ ಬೆರೆತ
ಶೂನ್ಯದಲಿ ಹೊಸ ಶೂನ್ಯ ಉದಿಸಿತೆಂಬುದು ಶೂನ್ಯ.
ಸಿರಿ: ಸಿರಿ ಸಾಕ್ಷಿ ತೋರಿಸಬೇಕಿಲ್ಲ ನಮ್ಮಿಬ್ಬರ ಪ್ರೀತಿಗೆ
ಗೌರವವಿರದೆ ಹೋದರೆ ವಂದನೆಯೆಂಬುದು ಶೂನ್ಯ
ಹೀಗೆ ಕನ್ನಡದ ಈ ಗಜಲ್ ಗಳ ಜುಗಲ್ ಬಂಧಿ ಒಂದು ರೀತಿಯಲ್ಲಿ ಚೇತೋಹಾರಿಯಾಗಿದೆ. ಗಜಲ್ ಗಳನ್ನು ಶಾಸ್ತ್ರಬದ್ಧ ಚೌಕಟ್ಟಿನಲ್ಲಿ ಚಿಂತನಾಕ್ರಮ ಹಾಗೂ ಕಾವ್ಯದ ಪ್ರಯೋಗಶೀಲತೆಯಲ್ಲಿ ಹಾಗೂ ಕರಾರುವಕ್ಕಾಗಿ ಇಷ್ಟಿಷ್ಟು ಮಾತ್ರೆಗಳಲ್ಲಿ ಬರೆಯುವುದು ಸುಲಭವಲ್ಲ. ಇದನ್ನು ಓದುತ್ತಾ ಗಜಲ್ ಪ್ರಪಂಚ ಎಷ್ಟೊಂದು ವಿಸ್ಮಯ ಹಾಗೂ ವಿದ್ವತ್ಪೂರ್ಣವಾಗಿದೆ ಎನಿಸಿತು. ಪುಸ್ತಕದ ನಡುನಡುವೆ ಕಾಣುವ ಒಂದೇ ಗೆರೆಯಿಂದ ಪ್ರಾರಂಭವಾದ ರೇಖಾಚಿತ್ರಗಳು ಕೂಡ ಅಧ್ಬುತವಾಗಿದೆ.ನೀವೊಮ್ಮೆ ಓದಿ ಆನಂದಿಸಿ…
- ಮಾಲತಿ ರಾಮಕೃಷ್ಣ ಭಟ್
