ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋ ತನಕ ಸಂಸಾರ್ದೊಳಗೆ ಗಂಡಾಗುಂಡಿ ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ ಇರೋದ್ರೊಳಗೆ ನೋಡು ಒಮ್ಮೆ ಶಿವಗಂಗೆ ಬೆಟ್ಟ ಅನ್ನಿಸಿದ್ದು ಸುಳ್ಳಲ್ಲ, ಶಿವಗಂಗೆ ಬೆಟ್ಟಕ್ಕೆ ಚಾರಣ ಹೋದ ಅನುಭವನನ್ನು ಹಂಚಿಕೊಂಡಿದ್ದೇನೆ. ತಪ್ಪದೆ ಮುಂದೆ ಓದಿ….
ಕೂತ್ರೆ ನಿಲ್ಲೋಕೆ ಕಷ್ಟ, ನಡದ್ರೆ ಹಿಮ್ಮಡಿಗೆ ಕಷ್ಟ, ಈ ಸಣ್ಣ ವಯಸ್ಸಿಗೆ ಹೀಗೆಲ್ಲಾ ಆದ್ರೆ ಏನ್ ಕತೆ ದೇವರೇ… ಹೀಗೆಲ್ಲಾ ಮಾಡೋಕೆ ಮನಸ್ಸಾದ್ರೂ ಹೇಗೆ ಬಂತು… ಅಂತ ದೇವರನ್ನು ಸ್ವಲ್ಪ ಮನಸ್ಸಲ್ಲೇ ಪ್ರತಿದಿನ ಬೈದುಕೊಳ್ಳುತ್ತಿದ್ದೆ. ಕೂತು ಎದ್ದಗೆಲ್ಲ, ಎದ್ದು ಕೂತಾಗಲೆಲ್ಲ ಪಾಪ…ಆ ದೇವರು ನನ್ನಿಂದ ಎಷ್ಟೆಲ್ಲ ಸಹಸ್ರನಾಮ ಮಾಡಿಸ್ಕೊಂಡನೋ ಗೊತ್ತಿಲ್ಲ. ವಯಸ್ಸಾಯ್ತು ಅನ್ಕೊಂಡು ತೆಪ್ಪಗೆ ಇರೋಣ ಅಂದ್ರೆ, 70-80 ವರ್ಷದವರೆಲ್ಲ ನನ್ನ ಮುಂದೆ ಧಿಮಾಕಿನಿಂದ ವಾಕಿಂಗ್ ಹೋಗುವಾಗ ನನ್ನ ವಯಸ್ಸು ವಿಲ್ ವಿಲನೇ ಒದ್ದಾಡುತ್ತಿತ್ತು.

ಆಗಿದಾಗ್ಲಿ ನನ್ನನ್ನು ನಾನು ರಿಪೇರಿ ಮಾಡಿಕೊಳ್ಳಲೇಬೇಕು ಅಂದುಕೊಂಡು ನನ್ನ ಅಣ್ಣನಾದ ಡಾ ಕಟ್ಟಿಮನಿ ಅವರ ಬಳಿ ಹೋದೆ. ನನ್ನ ನೋವನ್ನೆಲ್ಲ ಹೇಳಿ ಮನಸ್ಸಿನ ಭಾರವನ್ನು ಇಳಿಸಿಕೊಂಡೆ. ನನ್ನ ಕಷ್ಟವನ್ನೆಲ್ಲ ಕೇಳಿದ ನಮ್ಮಣ್ಣ, ವಿಟಮಿನ್ ಟೆಸ್ಟ್ ಗಳನ್ನೆಲ್ಲ ಬರೆದು ಇಷ್ಟೆಲ್ಲಾ ಮಾಡಸ್ಕೊಂಡು ಬಾ ತಂಗಿಯವ್ವ… ಅಂದ. ನಾನು ತಡಮಾಡದೇ ಹತ್ತಿರದಲ್ಲಿದ್ದ ರಕ್ತ ಪರೀಕ್ಷೆಗೆ ಕರೆ ಮಾಡಿ ನನ್ನ ರಕ್ತ ಹೀರಲು ಬೆಳಗ್ಗೆ ಬನ್ನಿ ಎಂದೆ. ರಕ್ತ ಹೀರಲು ಎಷ್ಟು ಖುಷಿನೋ ಅವನು ಕೂಡಾ ಬೆಳಗ್ಗೆ ಬೆಳಗ್ಗೆಯೇ ಮನೆಗೆ ಬಂದು ಕೂತ . ಅವನು ರಕ್ತ ಹೀರಲು ಸೂಜಿ ರೆಡಿ ಮಾಡಿಕೊಳ್ಳುತ್ತಿದ್ದ, ಭಯಕ್ಕೆ ಒಂದೊಂದೆ ಹನಿಗಳು ಸೇರಿ ಕಂಗಳಲ್ಲಿ ನೀರು ತುಂಬಿತು. “ಮೇಡಂ, ಇನ್ನೂ ಸೂಜಿನೇ ಹಾಕಿಲ್ಲ. ಅಳ್ತೀರಾ ಅಲಾ”… ಅಂದು ಗದರಿ ಕೈಗೆ ಸೂಜಿ ಹಾಕಿದ. ಅ… ಮ್ಮಾ… ಅನ್ನೋವಷ್ಟರಲ್ಲಿ ಸೂಜಿ ಒಳಗೆ ಹೋಗಿ ಹೊರಕ್ಕೆ ಬಂತು. ಅ…ಪ್ಪ… ಅನ್ನುವಷ್ಟರಲ್ಲಿ ರಕ್ತ ಸ್ವಲ್ಪ ಹೊರಕ್ಕೆ ಬಂತು. ಹತ್ತಿ ಚೂರು ಕೊಟ್ಟು ಕೈಗೆ ಇಡ್ಕೊಳ್ಳಿ, ಸಾಯಂಕಾಲ ರಿಪೋರ್ಟ್ ಕೊಡ್ತೀನಿ ಹೇಳಿ ಹೊರಟೆ ಹೋದ.
ಸಾಯಂಕಾಲ ಆಗ್ತಿದ್ದ ಹಾಗೆ ಬಾಲ ಸುಟ್ಟ ಬೆಕ್ಕಿನಂತೆ ಅತ್ತಿoದಿತ್ತ ಓಡಾಡುತ್ತಿದ್ದೆ. ಮೊಬೈಲ್ ನಲ್ಲಿ ಟಿಣ್…ಅಂತ ಶಬ್ದ ಬರುತ್ತಿದ್ದಂತೆ ಓಡಿಹೋಗಿ ವಾಟ್ಸಪ್ಪ್ ಮೆಸೇಜ್ ನೋಡಿದೆ. ರಿಪೋರ್ಟ್ ನ್ನು ಕಣ್ಣು ದೊಡ್ಡದು ಮಾಡಿ ನೋಡಿದೆ, ಕಣ್ಣು ಉಜ್ಜಿ ನೋಡಿದೆ ಎಲ್ಲವೂ ಕೆಳಕಚ್ಚಿದ್ದವು. ಸೀದಾ ಡಾಕ್ಟರ್ ಣ್ಣನ ಹತ್ರ ರಿಪೋರ್ಟ್ ತಗೆದುಕೊಂಡು ಹೋದೆ.
ಡಾಕ್ಟರ್ ಣ್ಣ ಅಯ್ಯೋ… ಅಬ್ಬಾ… ಅಂತೆಲ್ಲ ಎಕ್ಸ್ಪ್ರೆಷನ್ ಕೊಡ್ತಾರೆ ಅನ್ಕೊಂಡೆ, ಶಾಂತಚಿತ್ತವಾಗಿ ನನ್ನ ರಿಪೋರ್ಟ್ ನೋಡಿ ವಿಟಮಿನ್ ಎಲ್ಲವೂ ಕೆಳಕ್ಕೆ ಹೋಗಿವೆ. ಅದಕ್ಕೆ ವಾರಕ್ಕೆ ನಾಲ್ಕು ವಿಟಮಿನ್ ಇಂಜೆಕ್ಷನ್ ಬರೀತೀನಿ… ತಗೋ “…. ಅಂತ ಡಾಕ್ಟರ್ ಣ್ಣ ಬರೆದ. ಒಂದು ಇಂಜೆಕ್ಷನ್ ತಗೋಳೋದೆ ಕಷ್ಟ ಅಂತದ್ದು ನಾಲ್ಕು ತಗೋಬೇಕು ಎಂದಾಗ ಆಕಾಶ ನೋಡಿದೆ. ವಿಧಿಯೇ ಇಲ್ಲಾ… 80 ವರ್ಷದವರನ್ನ ಓವರ್ ಟೇಕ್ ಮಾಡಬೇಕು ಅಂದ್ರೆ ಇಂಜೆಕ್ಷನ್ ತಗೋಳಲೇ ಬೇಕೆಂದು ನಿರ್ಧಾರ ಮಾಡಿದೆ.
ಮೊದಲ ವಿಟಮಿನ್ ಇಂಜೆಕ್ಷನ್ ದೇಹದೊಳಗೆ ಹೋಗುವಾಗ ಶುಗರ್ ವ್ಯಕ್ತಿಗಳು, ಇತರೆ ಖಾಯಿಲೆ ಬಂದಿರೋ ವ್ಯಕ್ತಿಗಳು ಕಣ್ಮುಂದೆ ಹಾದು ಹೋದರು. ವರ್ಷಕ್ಕೆ ಇಂತಹ ಎಷ್ಟೋ ಸೂಜಿಗಳು ಅವರ ದೇಹದೊಳಗೆ ಹೋಗಿಬಂದಿರಬೇಕು, ಅವರ ಯಾತನೆ ನೆನೆದು ನಿಟ್ಟುಸಿರು ಬಿಟ್ಟೆ. ಅದೇ ಚಿಂತೆಯಲ್ಲಿದ್ದೆ.
ಆಫೀಸ್ ನಲ್ಲಿದ್ದ ಪದ್ಧಣ ಫೋನ್ ಮಾಡಿ “ಶನಿವಾರ ಫ್ರೆಂಡ್ಸ್ ಎಲ್ಲ ಟ್ರೇಕಿಂಗ್ ಹೋಗೋ ಪ್ಲಾನ್ ಮಾಡ್ತಿದ್ದಾರೆ. ಏನ್ ಹೇಳ್ತೀಯಾ?”…
“ಟ್ರಕಿಂಗ್ ಒಳ್ಳೇದು ಹೋಗು, ಹೊಟ್ಟೆ ಕರಗುತ್ತೆ…ಎಂದೆ.
ನಾನೊಬ್ಬನೇ ಅಲ್ಲ… ಫ್ಯಾಮಿಲಿ ಟ್ರೇಕಿಂಗ್…ಅಂದಾಗ.. “ಅಯ್ಯೋ…ಈಗಾಗ್ಲೇ ನೊಂದು ಬೆಂದಿರೋ ದೇಹನ ಬೆಟ್ಟದ ಮೇಲೆ ನಿಲ್ಲಿಸುವ ಪ್ರಯತ್ನ ಮಾಡ್ತಿಯಾ”… ಅಂತ ಕೊಂಕು ಮಾತಾಡಿದೆ.
ಹತ್ತಬೇಕು…ಅಂತ ನಿರ್ಧಾರ ಮಾಡಿಯೇ ಬಿಟ್ಟ.
ಹತ್ತಸೋದು ಹತ್ತಸ್ತಿದ್ದಾನೆ ಇಲ್ಲೇ ರಾಗಿಗುಡ್ಡ ಹತ್ತಸಿದ್ರು ಸಾಕಿತ್ತು. ಅದನ್ನ ಬಿಟ್ಟು ಶಿವಗಂಗೆ ಬೆಟ್ಟ ಹತ್ತಸೋದು ಅಂದ್ರೆ ಉಸಿರೇ ಕೈಗೆ ಬಂತು. ಯಾಕೆಂದರೆ ನಾನು ಕೇಳಲ್ಪತಂತೆ ಶಿವಗಂಗೆ ಬೆಟ್ಟ ಒಂದೇ ಸಮವಿಲ್ಲ. ಅಂಕು ಡೊಂಕು ಮಣ್ಣಿನ ದಾರಿಗಳಿವೆ. ಅಂತಹ ದಾರಿಯಲ್ಲಿ ನಡೆದರೆ ಮೂಳೆ ರಿಪೇರಿಯಲ್ಲಿರುವ ನನ್ನ ಕತೆಯೇನು ಭಯಕ್ಕೆ ಏನಾದ್ರೂ ನೆವ ವಡ್ಡಿ ತಪ್ಪಿಸಿಕೊಳ್ಳೋಣ ಎಂದು ನಿರ್ಧಾರ ಮಾಡಿದೆ.
*
ನಾವು ಅಂದುಕೊಂಡದ್ದು ವಾಸ್ತವದಲ್ಲಿ ನಡೆಯಬೇಕಲ್ಲ. ನನ್ನ ಪತಿರಾಯ ಕುಂಬಳಕಾಯಿ ಹೊಟ್ಟೆ ಇಡ್ಕೊಂಡು ಬೆಟ್ಟ ಹತ್ತೋ ಜೋಶ್ ತೋರಸಿದ್ರೆ ನಾನ್ಯಾಕೆ ಹಿಂದೆ ಉಳಿಯಲಿ ಹಠದಲ್ಲಿ ಬೆಟ್ಟ ಹತ್ತಲು ನಿರ್ಧಾರ ಮಾಡಿದೆ.
ಬೆಳಗ್ಗೆ 4 ಗಂಟೆಗೆ ಎದ್ದು ಹೊರಟು ಅಲ್ಲಿ 5 ಇಲ್ಲವೆ 5.30ಕ್ಕೆ ಬೆಟ್ಟ ಹತ್ತುಲು ಶುರು ಮಾಡಬೇಕು, ಬಿಸಿಲು ನಮ್ಮ ಮೈ ಸುಡುವಷ್ಟರಲ್ಲಿ ಬೆಟ್ಟದಿಂದ ಇಳಿದಿರಬೇಕೆಂದು ಪತಿರಾಯ ಪದ್ದಣ ಪಿಟಿ ಮಾಸ್ತರ್ ತರ ಖಡಕ್ ವಾರ್ನಿಂಗ್ ಕೊಟ್ಟ. ಹುo… ಅನ್ನೋಕೆ ಯಾರ ಗಂಟು ಹೋಗುತ್ತೆ. ಮಲಗಿದ್ಮೇಲೆ ಮುಗಿತು, ನಿದ್ದೆ ನಮ್ದು… ಏಳಸೋದು ಅಲರಾಂದು…ಒಂದು ವೇಳೆ ಅಲಾರಾಂ ಶಬ್ದ ಕಿವಿಗೆ ಬಿದ್ರೆ, ಹೋಗೋದು. ಇಲ್ಲಾಂದ್ರೆ ನಿದ್ದೇಯನ್ನೇ ಮುಂದುವರೆಸುವುದು ಅನ್ಕೊಂಡು ಗೋಡೆಯತ್ತ ತಿರುಗಿ ಮಲಗಿದೆ. ಯಾವತ್ತೂ ಇಲ್ಲದ ನಿದ್ದೆ ಅವತ್ತು ಜೋರಾಗಿಯೇ ಹತ್ತಿತು.
ಅಲರಾಂ ಏನೋ ಹೊಡ್ಕೊಂತು, ಆದ್ರೆ ನಾನೇ ಅದರ ತಲೆಗೆ ಕುಕ್ಕಿ ಮತ್ತೆ ತಿರುಗಿ ಮಲಗಿದೆ. ಟ್ರೇಕಿಂಗ್ ಜೋಶ್ ನಲ್ಲಿದ್ದ ಪದ್ಧಣ ರಾತ್ರಿಯೆಲ್ಲಾ ನಿದ್ದೆಯೇ ಮಾಡಿರಲಿಲ್ಲ . ದೆವ್ವಗಳು ಓಡಾಡೋ ಸಮಯದಲ್ಲಿ ಮೂರು ಗಂಟೆಗೆ ಎದ್ದು ಸ್ನಾನ ಮಾಡಿ ಕೂತಿದ್ದ. ಅಷ್ಟೇ ಅಲ್ಲ ನನಗೆ, ಮಕ್ಕಳಿಗೆ ಹೊಡೆದು ಜೋರ್ ಮಾಡಿ ರೆಡಿ ಆಗುವಂತೆ ಮಾಡಿದ.
ಕಾರಂತೂ ನಾವು ಓಡಸಲ್ಲ, ಹೇಗಿದ್ರೂ ಪದ್ದಣನೇ ಓಡಸೋದು. ಹಾಗಿದ್ದಾಗ ಕಾರ್ ಲ್ಲೇ ನಿದ್ದೆ ಹೊಡದ್ರೆ ಆಯ್ತು ಅಂತ ಮಕ್ಕಳು ನಾನು ರೆಡಿಯಾಗಿ ಕಾರ್ ಹತ್ತಿ ಪಿಲ್ಲೋ ಹಿಡ್ಕೊಂಡು ಕೂತ್ವಿ…
ಪದ್ಧಣನ ಫ್ರೆಂಡ್ ಕುಟುಂಬ ದಾರಿಯ ಮಧ್ಯೆದಲ್ಲೇ ಸೇರಿಕೊಂಡರು. ಯಾರೇ ಬಂದ್ರೂ ಶಿವಗಂಗೆವರೆಗೂ ನಿದ್ದೆ ನಮ್ದೇ ಅಂತ ನಾವು ಮಾತ್ರ ಕಾಂಪ್ರಮೈಸ್ ಆಗದೆ ಮಲಗಿದ್ವಿ. ಪದ್ಧಣ ಕಣ್ಣಿಗೆ ಎಣ್ಣೆ ಬಿಡ್ಕೊಂಡು ಕಾರ್ ನೈಸ್ ರಸ್ತೆಯಲ್ಲಿ ಓಡಿಸಿದ.
ಕಾರ್ ಸರಿಯಾಗಿ 5.30 ಕ್ಕೆ ಬೆಂಗಳೂರು ನಗರದಿಂದ 54 ಕಿಮೀ ದಾಟಿ, ದಾಬಸ್ ಪೇಟೆಯಿಂದ ಸುಮಾರು ೬ ಕಿ.ಮೀ ಹಾಗೂ ತುಮಕೂರಿನಿಂದ 20 ಕಿಮಿ ದೂರದಲ್ಲಿದ್ದ ಶಿವಗಂಗೆ ದೇವಸ್ಥಾನದ ಕೆಳಗೆ ನಿಂತಿತು. ಸಂಕ್ರಾಂತಿ ಹಬ್ಬದ ದಿನದಂದು ಅದ್ದೂರಿಯಾಗಿ ನಡೆಯುವ ಶ್ರೀ ಗಂಗಾಧರೇಶ್ವರ ಮತ್ತು ಶ್ರೀ ಹೊನ್ನಮ್ಮದೇವಿ (ಪಾರ್ವತಿ) ಅವರ ವಿವಾಹ ಕಾರ್ಯದಲ್ಲಿ ಗಂಗಾ ಪವಿತ್ರ ನೀರು ಬೆಟ್ಟದ ತುದಿಯಲ್ಲಿರುವ ಬಂಡೆಯಿಂದ ಬರುತ್ತದೆ ಎನ್ನಲಾಗುತ್ತದೆ. ಹೀಗೆ ಸಾಕಷ್ಟು ಕಥೆಗಳಿರುವ ಈ ದೇವಾಲಯದ ಕೆಳಗೆ ಕಾರ್ ನಿಂತಾಗ, ಕೆಳಗಿಳಿದು ಒಮ್ಮೆ ಮೇಲೆ ನೋಡಿದೆ. ಅಬ್ಬಾ, ದೇವರೇ… ಎಂದೆ. ಅಷ್ಟು ದೊಡ್ಡ ಗುಡ್ಡ ಹತ್ತಿ ಇಳಿಯೋದು ಸಾಮಾನ್ಯವಾಗಿರಲಿಲ್ಲ. ಇಳಿಯುವಷ್ಟರಲ್ಲಿ ಕಾಲುಗಳು ಪಕ್ಕ ಬ್ರೇಕ್ ಡಾನ್ಸ್ ಮಾಡೇ ಮಾಡುತ್ತೆ ಅಂತ ಖಾತ್ರಿಯಾಯಿತು.
ಪದ್ಧಣ ಮತ್ತು ಅವರ ಗೆಳೆಯರ ಬಳಗ ಕಾರಿನಿಂದ ಇಳಿದು ಹಸು ಓಡಿಸಿಕೊಂಡು ಹೋಗುವಂತೆ ಅವರವರ ಹೆಂಡತಿ ಮಕ್ಕಳನ್ನು ಬೆಟ್ಟದತ್ತ ಓಡಿಸಿಕೊಂಡು ಹೊರಟರು.
ಬೆಟ್ಟದ ಪ್ರಾರಂಭದಲ್ಲಿದ್ದ ಶಿವನ ದೇವಾಲಯಕ್ಕೆ ಕನಿಷ್ಠ 80 ಮೆಟ್ಟಿಲುಗಳಿರಬೇಕು. ಈ ದೇವಾಲಯದಲ್ಲಿನ ಶಿವನ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಮತ್ತು ಅಲ್ಲಿರುವ ಸಣ್ಣ ಸುರಂಗವು ಶ್ರೀರಂಗಪಟ್ಟಣ ತಲುಪಬಹುದು ಎಂಬ ವಿಸ್ಮಯ ವಿಷಯವನ್ನು ಗೆಳೆಯರು ಹಂಚಿಕೊಂಡಾಗ ಈ ಜಾಗ ಸಾಮಾನ್ಯದಲ್ಲ, ಇದರ ಮಹಿಮೆಯನ್ನು ಇನ್ನಷ್ಟು ತಿಳಿಯುವ ಕುತೂಹಲ ಶುರುವಾಯಿತು. ಆಗ ಬೆಟ್ಟ ಹತ್ತುವ ಉತ್ಸಾಹ ಹಂತ ಹಂತವಾಗಿ ಹೆಚ್ಚಿತು.
ಮೆಟ್ಟಿಲು ಹತ್ತಿ ಶಿವನ ದೇವಾಲಯಕ್ಕೆ ಬಂದಾಗ ಕೊರೆಯುವ ಚಳಿಯಲ್ಲಿಯೂ ಬೆವರು ಕಿತ್ತು ಬಂತು. ನೂರು ಹೆಜ್ಜೆ ಹಾಕಿಲ್ಲ, ಈಗ್ಲೇ ಇಷ್ಟು ಸುಸ್ತು ಇನ್ನೂ ಎಷ್ಟು ದೂರ ಹತ್ತಬೇಕು ಗೊಳಾಡುತ್ತಾ ಗುಂಪಿನ ಹಿಂದಿಂದೆ ಹೊರಟೆ. ಮೆಟ್ಟಿಲು ದಾಟಿದ ಮೇಲೆ ಬೃಹತಾಕಾರದ ಬಂಡೆಗಲ್ಲಿನಲ್ಲಿ ಹಸುವಿನ ಮಹಾದ್ವಾರವಿತ್ತು. ಅದರ ಮಧ್ಯೆ ಅಂಕು ಡೊಂಕಾದ ಮೆಟ್ಟಿಲುಗಳು ಮತ್ತು ಬೀಳದಂತೆ ಕೈ ಹಿಡಿಯಲು ಕಬ್ಬಿಣದ ರಾಡ್ ಗಳಿದ್ದವು. ಗುಂಪಿನಲ್ಲಿದ್ದವರು ಅವರವರ ಹೆಂಡತಿಯರನ್ನ ಬಿಟ್ಟು ಮುಂದೆ ಮುಂದೆ ಸಾಗಿದರೆ, ಹೆಂಡತಿಯರು ಒಂದೊಂದು ಹೆಜ್ಜೆಗೂ ಹೆಬ್ಬಾವಿನಂತೆ ಉಸಿರು ಹಾಕುತ್ತಾ ಮಂದಗತಿಯಲ್ಲಿ ಸಾಗುತ್ತಿದ್ದರು.ಅವರಲ್ಲಿ ನಾನು ಒಬ್ಬಳಾಗಿದ್ದೆ.
ನಾವ್ಯಾರು ಹಿಂದೆ ಕಾಣದಿದ್ದಾಗ ಅವರವರ ಗಂಡ, ಮಕ್ಕಳು ಮುಂದೆ ಹೋಗಿ ನಿಂತಿದ್ದರು.ಮನೆಯಲ್ಲಿ ನಮ್ಮ ಕಾಟ ತಡೆಯೋಕೆ ಆಗದೆ ಇಲ್ಲಿ ಏನಾದ್ರೂ ಮಾಸ್ಟರ್ ಪ್ಲಾನ್ ಮಾಡಿಕೊಂಡು ಬಿಟ್ಟು ಹೋಗ್ತಾರೆ ಅಂದುಕೊಂಡೆ. ದೇವರಂತ ಅವರವರ ಗಂಡಂದಿರು. ಹಾಗೇನೂ ಮಾಡಲಿಲ್ಲ. ಹಸಿವೆ ಆದ್ರೆ ತಿನ್ನೋಕೆ ಕೊಡಸ್ತೀವಿ ಅಂದ್ರು, ಅಷ್ಟು ಬೆಳಬೆಳಗ್ಗೆ ಯಾರ್ ಆ ಗುಡ್ಡದಲ್ಲಿ ಅಂಗಡಿ ತಗಿಬೇಕು. ಪಾಪ ಮೊದಲೇ ಅರ್ಥ ಮಾಡಿಕೊಂಡು ಬ್ಯಾಗ್ ನಲ್ಲಿ ಚಿಪ್ಸ್, ಜೂಸ್, ನೀರು ಇಟ್ಟುಕೊಂಡು ಅವರೆಲ್ಲ ಬಂದಿದ್ದರು. ಆ ಬ್ಯಾಗ್ ಹೆಂಡತಿ ಮಕ್ಕಳಿಗೆ ಭಾರ ಆಗಬಾರದು ಅಂತ ಎಲ್ಲ ಭಾರವನ್ನು ಹೊತ್ತು ಗಂಡಂದಿರು ಮುಂದೆ ಸಾಗಿದ್ದರು. ಮಧ್ಯ ಮಧ್ಯದಲ್ಲಿ ಗಂಡ ಹೆಂಡತಿ ನಡುವಿನ ಪ್ರೀತಿ ಅರ್ಥವಾಗುತ್ತಿತ್ತು, ಜ್ಯೂಸ್ ಕುಡುತೀಯಾ … ನೀರು ಕುಡಿತೀಯಾ?…. ಅಂತೇಲ್ಲಾ ಆಗಾಗ ಗಂಡ ಒಮ್ಮೆ ಕೇಳಿದರೆ, ಚಿಪ್ಸ್ ಬೇಕಾ? ಹಣ್ಣು ತಿಂತೀರಾ?..ಅಂತ ಹೆಂಡತಿ ಕೇಳುತ್ತಿದ್ದಳು. ಟ್ರಕಿಂಗ್ ಕೇವಲ ದೇಹಕ್ಕಷ್ಟೇ ವ್ಯಾಯಾಮವಾಗಿರಲಿಲ್ಲ. ಸಂಬಂಧಗಳ ನಡುವಿನ ಉತ್ತಮ ಬಾಂಧವ್ಯಕ್ಕೂ ದಾರಿಯಾಗಿತ್ತು.
ದೇಹದ ಭಾರ ಎಷ್ಟಿದೆ ಅಂತ ಬೆಟ್ಟ ಹತ್ತುತ್ತಾ ಹೋದಂತೆ ಅರ್ಥವಾಗುತ್ತಾ ಹೋಯಿತು. ಬೆಟ್ಟ ಹತ್ತುವಾಗ ಜೊತೆಗೆ ಇದ್ದವರೊಬ್ಬರು ಇದು ‘ಒಳಕಲ್ಲು ತೀರ್ಥ’ ಎಂದು ಮುಚ್ಚಿದ್ದ ಬಾಗಿಲು ತೋರಿಸಿದರು. “ಬರುವಾಗ ಇಲ್ಲಿ ಹೋಗೋಣ…ಇಲ್ಲಿ ವರ್ಷದ ೩೬೫ ದಿನಗಳೂ ನೀರು ದೊರೆಯುತ್ತದೆ.. ಜಗದ್ಗುರು ರೇವಣಸಿದ್ದೇಶ್ವರದಿಂದ ಈ ಒಳಕಲ್ಲು ತೀರ್ಥ ಉತ್ಪತ್ತಿಯಾಯಿತು. ಅಗಸ್ತ್ಯ ಮುನಿಗೆ ದೀಕ್ಷೆ ಕೊಡುವಾಗ ಪ್ರೊಕ್ಷಣೆಗೆ ನೀರು ಸಿಗದಿದ್ದಾಗ, ತಮ್ಮ ದಂಡದಿಂದ ಕಲ್ಲಿಗೆ ಗುದ್ದಿ ನೀರು ಹೊರಗೆ ತಗೆದರು. ಆ ಜಾಗಕ್ಕೆ ಒಳಕಲ್ಲು ತೀರ್ಥ ಎನ್ನುತ್ತಾರೆ. ಒಳ್ಳೆ ಮನಸ್ಸಿನಿಂದ ಏನಾದ್ರೂ ಅಂದುಕೊಂಡು ಒಳಕಲ್ಲು ತೀರ್ಥದಲ್ಲಿ ಕೈ ಹಾಕಿದರೆ ನಮ್ಮ ಕೆಲಸ ಆಗುವುದೇ ಇದ್ದರೇ ಕೈಗೆ ನೀರು ಸಿಗುತ್ತದೆ. ಇಲ್ಲದಿದ್ದರೆ ನೀರು ಸಿಗೋಲ್ಲ”…ಎಂದಾಗ ಅಚ್ಚರಿಯಾಯಿತು. ವಾಪಾಸ್ ಬರುವಾಗ ಒಮ್ಮೆ ನೋಡಿಯೇ ಬಿಡ್ಬೇಕು ಎನ್ನುತ್ತಾ ಬೆಟ್ಟದ ಮುಂದಿನ ಹಾದಿ ಹಿಡಿದೆವು.
ಹತ್ತುವಾಗ ಅಲ್ಲಲ್ಲಿ ಸಣ್ಣ ಪುಟ್ಟ ಅಂಗಡಿಗಳು ಇದ್ದವು. ಆದರೆ ಅಷ್ಟು ಬೆಳಬೆಳಗ್ಗೆ ತೆರೆದಿರಲಿಲ್ಲ. ಬೆಟ್ಟ ಹತ್ತುತ್ತಾ ಹೋದಂತೆ ಮೋಡಕ್ಕೆ ಹತ್ತಿರವಾಗುತ್ತಿದ್ದೇವೆ ಎನ್ನುವಂತೆ ಭಾಸವಾಯಿತು, ಜೊತೆಗೆ ಉತ್ಸಾಹದ ನಡುವೆ ಆಯಾಸವು ಗೊತ್ತಾಗಲಿಲ್ಲ. ಅಲ್ಲಲ್ಲಿ ಸೆಲ್ಫಿ ತಗೆಯುತ್ತಾ, ಮೇಲಿಂದ ಇಳಿಯುವವರನ್ನು ಇನ್ನೂ ಎಷ್ಟು ದೂರ… ಇನ್ನೂ ದೂರನಾ?… ದಾರಿ ಹೀಗೇನಾ?… ಅಂತೆಲ್ಲ ಕೇಳುತ್ತಿದ್ದೆವು. ಅವರು ಜಾಸ್ತಿ ದೂರವಿಲ್ಲಾ, ಇಲ್ಲೇ… ಇದೆ… ಎಂದಾಗ ಮತ್ತೆ ಉತ್ಸಾಹದಿಂದ ಹೆಜ್ಜೆ ಇಡುತ್ತಾ ಸಾಗಿದೆವು.
ಮುಂದೆ ಸಿಕ್ಕಿದ್ದು ಸೊಂಟದ ಎತ್ತರಕ್ಕೆ ಇದ್ದಂತಹ ಮೆಟ್ಟಿಲುಗಳು. ಕೀಲು ನೋವಿಗೆ ಫಿಸಿಯೋ ಥೆರಪಿ ಮಾಡಸಿ ಅಂದಿದ್ದ ವೈದ್ಯರು ನನಗೆ ಅಲ್ಲಿ ನೆನಪಿಗೆ ಬಂದರು. ನೋವು ಅನ್ನುವರು ಇಲ್ಲಿ ಹತ್ತಿ ಇಳಿದರೆ ಎಲ್ಲ ನೋವು ಕಿತ್ತಕೊಂಡು ಹೋಗೋದು ಗ್ಯಾರಂಟಿ ಅನ್ನೋದು ಖಾತ್ರಿಯಾಯಿತು. ಕಷ್ಟ ಪಟ್ಟು ಸಾಹಸ ಮಾಡಿ ಆ ಮೆಟ್ಟಿಲನ್ನು ಹತ್ತಿ ನಿಂತಾಗ ಹನುಮನ ಬಂಟರು ಎದುರಿಗೆ ಗುಂಪು ಕಟ್ಟಿಕೊಂಡು ನಿಂತಿದ್ದರು. ಗಾಬರಿಯಿಂದ ವಾಪಾಸ್ ಹೋಗೋಣ ಎಂದರೆ ಬಹು ದೂರ ಸಾಗಿ ಇನ್ನೇನು ಬೆಟ್ಟದ ತುತ್ತ ತುದಿಗೆ ಬಂದು ವಾಪಾಸ್ ಹೋಗೋದು ಹೇಗೆ?…ಎಂದರು ಜೊತೆಗಾರರು. ಆದರೆ ಹನುಮಾನ್ ಬಂಟರನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಲ್ಲೂ ಇರಲಿಲ್ಲ. ಒಂದೊಂದೆ ಹನುಮಾನ್ ಬಂಟರು ಬಂದು ಬ್ಯಾಗ್ ಹಾಕಿಕೊಂಡವರ ಬ್ಯಾಗ್ ಜಿಪ್ ತೆರೆದು ಅಲ್ಲಿದ್ದ ಚಿಪ್ಸ್, ಜ್ಯೂಸ ಬಾಟಲ್ ಎತ್ತಕೊಂಡು ಹೋದವು. ಕೆಲವು ಪ್ಯಾಟ್ ನಲ್ಲಿದ್ದ ಜೇಬ್ ನ್ನು ಪರಿಶೀಲಿಸಿದವು. “ಅಬ್ಬಬ್ಬಾ… ಎಂತ ಬುದ್ದಿ ಇವಕ್ಕೆ, ನನ್ನ ಗಂಡನ ಪ್ಯಾಟ್ ನಲ್ಲಿ ಎಷ್ಟು ಜೇಬ್ ಗಳಿವೆ ಅಂತ ನನಗೇ ಗೊತ್ತಿರಲಿಲ್ಲ… ಇವಕ್ಕೆ ಹೇಗೆ ಗೊತ್ತು”…. ಅಚ್ಚರಿಯಿಂದ ಹೆಂಡತಿ ಕೇಳಿದರೆ, “ಅದಕ್ಕೆ ಹೇಳೋದು ಆಗಾಗ ಬಟ್ಟೆ ತೊಳಿಬೇಕು, ಆವಾಗ್ಲೇ ಬಟ್ಟೆಯಲ್ಲಿ ಜೋಬು ಎಷ್ಟಿದೆ ಗೊತ್ತಾಗೋದು ” ಎಂದು ಗಂಡ ಹೇಳಿದ. ಗಂಡ ಹೆಂಡತಿಯ ಕೌಂಟರ್ ಕೇಳಿ ನಗುತ್ತಾ ಹೆಜ್ಜೆ ಮುoದಿಡುತ್ತಾ ನಡೆದವು.. ಬೆಟ್ಟ ಹತ್ತುವಾಗ ಹೆಜ್ಜೆ ಹೆಜ್ಜೆಗೂ ಹನುಮಾನ್ ಚೆಕ್ ಪೋಸ್ಟ್ ಇರುತ್ತೆ ಅಂತ ಖಾತ್ರಿಯಾಯಿತು. ಹಾಗಾಗಿ ಬ್ಯಾಗ್ ಹೊತ್ತಿದ್ದವರೆಲ್ಲ ಭಯದಲ್ಲಿ ಬ್ಯಾಗ್ ಮುಚ್ಚಿಕೊಂಡು ಹೊರಟರು.
**
ಕಡಿದಾದ ಬೆಟ್ಟ ತಲುಪಿದಾಗ ಆಯಾಸ ವಿಪರೀತವಾಗಿತ್ತು.. ಕಾಲುಗಳು ನಡುಗುತ್ತಿದ್ದವು. ಆದರೆ ಕಣ್ಣೆತ್ತಿ ಸುತ್ತಲೂ ನೋಡಿದಾಗ ಆ ಸೌಂದರ್ಯದ ಮುಂದೆ ಎಲ್ಲ ನೋವುಗಳು ಒಂದು ಕ್ಷಣಕ್ಕೆ ಮಂಗಮಾಯಾವಾಗಿತ್ತು. ಸುತ್ತಲೂ ಮಂಜು, ಮೋಡಗಳಲ್ಲಿ ತೇಲುವ ಹಕ್ಕಿಯಂತೆ ನಾವಿದ್ದೆವು.
ಬಂಡೆಯ ತುತ್ತು ತುದಿಯಲ್ಲಿ ದೊಡ್ಡದಾದ ನಂದಿಯ ಸ್ಥಾಪನೆ ಆಗಿದೆ. ಅದರ ಸುತ್ತಲು ಪ್ರದಕ್ಷಿಣೆ ಹಾಕುವುದೇ ಒಂದು ಹರ ಸಾಹಸದ ಕೆಲಸ. ಒಂದು ಹೆಜ್ಜೆ ತಪ್ಪಿದರೂ ಪ್ರಪಾತಕ್ಕೆ ಬೀಳುವ ಸಾಧ್ಯತೆ ಹೆಚ್ಚು. ಅಂತಹ ಸ್ಥಳದಲ್ಲಿ ಹನುಮಾನ್ ಕುಟುಂಬಸ್ಥರಿದ್ದರೇ ಧೈರ್ಯ ಕ್ಷಿಣಿಸುವುದು ಗ್ಯಾರಂಟಿ.
ಇನ್ನೊಂದು ಅಚ್ಚರಿಯೆಂದರೆ ಬಂಡೆಯ ತುತ್ತ ತುದಿಯಲ್ಲಿ ಗಂಟೆಯಿದೆ. ಅದು ಬೆಳ್ಳಿಯದು ಎನ್ನುತ್ತಾರೆ. ಅದನ್ನು ಕಟ್ಟಿದ ಮಹಾನ್ ಪುರುಷ, ಕೈಗೆ ಸಿಕ್ಕಿದ್ದರೇ ಇಂದಿನ ಕಾಲದಲ್ಲಿ ವೈರಲ್ ಆಗಿ ಬಿಡುತ್ತಿದ್ದ. ಎಂತಹ ಗುಂಡಿಗೆ ಇರಬೇಕು ಆ ವ್ಯಕ್ತಿಗೆ. ಅದನ್ನೇ ನೋಡುತ್ತಾ ಸ್ವಲ್ಪ ಹೊತ್ತು ನಿಂತೇವು.

ಮತ್ತೊಂದು ಸ್ಥಳ ಹೊಯ್ಸಳ ರಾಜ ವಿಷ್ಣುವರ್ಧನನ ಪತ್ನಿ ರಾಣಿ ಶಾಂತಲಾ ದೇವಿ ಮಕ್ಕಳಾಗದ ಕಾರಣ ನೊಂದು ಆತ್ಮಹತ್ಯೆ ಮಾಡಿಕೊಂಡಳು ಎನ್ನುತ್ತಾರೆ. ಆ ಸ್ಥಳವನ್ನು ಶಾಂತಲಾ ಡ್ರಾಪ್ ಎನ್ನುತ್ತಾರೆ.ಆ ಸ್ಥಳವನ್ನು ನೋಡುವಾಗ ದೇಹವೆಲ್ಲ ನಡುಗಿತ್ತು. ಅಷ್ಟು ಎತ್ತರದಿಂದ ಹಾರಿದರೆ ದೇಹ ನಜ್ಜು ಗುಜ್ಜಾಗಿ ಗುರುತೇ ಸಿಗೋಲ್ಲ. ಅಷ್ಟು ದೊಡ್ಡ ಸಾಹಸ ಮಾಡೋವ ಬದಲು ಬುದ್ಧಿಗೇಡಿ ಶಾಂತಲಾ ದೇವಿ ಒಂದು ಅನಾಥ ಮಗುವನ್ನು ದತ್ತು ಪಡೆದಿದ್ದರೆ ಪುಣ್ಯ ಬರತ್ತಿತ್ತಲ್ಲ, ಆ ಸಾವು ಅನ್ಯಾಯ ಅನಿಸಿತು.
ಗುಡ್ಡದ ತುದಿ ಮುಟ್ಟಿದಮೇಲೆ ಆಯಾಸ ಸುಧಾರಿಸಿಕೊಳ್ಳಲು ಒಂದು ಕಡೆ ಕೂತೆವು. ಸುತ್ತಲು ಬೆಟ್ಟದ ಸೌಂದರ್ಯ ಸವಿಯುತ್ತಾ ಸುತ್ತಲೂ ನೋಡುವಾಗ ಪಕ್ಕದಲ್ಲಿ ಹನುಮಾನ್ ಸಾಮ್ರಾಜ್ಯ ನಮ್ಮ ಸುತ್ತುವರೆದಿತ್ತು. ಆದನ್ನು ನೋಡಿ ಎಲ್ಲರ ಹವಾ ಠುಸ್ ಎಂದಿತು. ಭಯದಲ್ಲಿ ಹೆಂಡತಿಯರು ತಮ್ಮ ಬ್ಯಾಗ್, ತಮ್ಮ ಮಕ್ಕಳನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಗಂಡಂದಿರು ಕುಟುಂಬದ ರಕ್ಷಣೆಗೆ ಯೋಧರಂತೆ ನಿಂತಿದ್ದರು. ಹನುಮಾನ್ ಸಾಮ್ರಾಜ್ಯ ತನ್ನ ಕೋರೆ ಹಲ್ಲು ತೋರಿಸಿ ಹೆದರಿಸುತ್ತಿದ್ದರೆ, ಗಂಡಂದಿರು ಕೋಲು ತೋರಿಸಿ ಹೆದರಿಸುತ್ತಿದ್ದರು, ಇಬ್ಬರ ಭಂಗಿ ಅಖಾಡಕ್ಕೆ ಇಳಿದು ನಾನಾ ನೀನಾ… ಅನ್ನುವ ಹಾಗಿತ್ತು. ಅದನ್ನು ನೋಡುತ್ತಿದ್ದ ನಾವೆಲ್ಲ ಒಂದು ಕ್ಷಣ ಭಯವಾದರೆ, ಇನ್ನೊಂದು ಕ್ಷಣ ನಗು ತಡೆಯಲಾಗದೆ ಜೋರಾಗಿ ನಗುತ್ತಿದ್ದೆವು.
ಬೆಟ್ಟ ಇಳಿಯುವಾಗ ಶಿವಗಂಗೆಯು ಸೌಂದರ್ಯದ ಗಣಿ ಮನಸ್ಸಿಗೆ ಉಲ್ಲಾಸನೂ ಕೊಡುತ್ತದೆ, ಭಯನೂ ಹುಟ್ಟಿಸುತ್ತದೆ ಎನ್ನುವುದು ಎಲ್ಲರ ಮನಸ್ಸಲ್ಲೂ ಬೇರೂರಿತು. ಈ ಸ್ಥಳದಲ್ಲಿ ಉಡಾಫೆಯಿಂದ ಸೆಲ್ಫಿ, ರೀಲ್ಸ್ ಮಾಡಲು ಹೊರಟರೆ ಪಾತಾಳಕ್ಕೆ ಬೀಳೋದಂತೂ ಖಚಿತ. ಮಕ್ಕಳನ್ನು ಅತಿ ಜಾಗೃತೆಯಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಸ್ವಲ್ಪ ಯಾಮಾರಿದರೂ ಮುಗಿತು ಕತೆ. ಬೆಟ್ಟ ಹತ್ತುವಾಗ ಇಳಿಯುವಾಗ ಹಿಡಿದುಕೊಳ್ಳಲು ಕಂಬಿಗಳು ಗಟ್ಟಿಯಾಗಿಲ್ಲವಲ್ಲ.ನಮ್ಮ ಜೀವಕ್ಕೆ ನಾವೇ ಹೊಣೆಗಾರರಾಗಿರಬೇಕು.ಎನ್ನುತ್ತಾ ಕೆಳಗೆ ಹೆಜ್ಜೆ ಇಡುತ್ತಾ ವಾಪಾಸ್ ಹೊರಟೆವು. ಒಂದೊಂದು ಹೆಜ್ಜೆ ಇಡುವಾಗ ಕಾಲು ಎಲ್ಲ ಡಾನ್ಸ್ ಮಾಡಲು ಶುರು ಮಾಡಿತು. ಅಷ್ಟೋತ್ತಿಗೆ ಚಹಾ ಪುಟ್ಟ ಅಂಗಡಿ ಬಾಗಿಲುಗಳು ತೆರೆದಿದ್ದವು. ಕಾಲಿಗೆ ವಿಶ್ರಾಂತಿ ಮತ್ತು ಹೊಟ್ಟೆಗೆ ಒಂದಷ್ಟು ಮ್ಯಾಗಿ ಹಾಕಿ ಇಳಿಯತೊಡಗಿದೆವು. ಆಗ ಸಿಕ್ಕೇದ್ದೆ ಹೊನ್ನಾದೇವಿ ದೇವಸ್ಥಾನ. ಇದು ಕೂಡಾ ಪ್ರಮುಖವಾದ ದೇವಸ್ಥಾನ. ಶ್ರೀ ಗಂಗಾಧರೇಶ್ವರ ಮತ್ತು ಶ್ರೀ ಹೊನ್ನಾದೇವಿ ದೇವಸ್ಥಾನಗಳ ಗವಿಗಳಲ್ಲಿದ್ದು, ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ದಿನ ಎರಡೂ ದೇವರುಗಳಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ. ಆ ದಿನ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. ಶ್ರೀ ಹೊನ್ನಾದೇವಿ ಮತ್ತು ಶ್ರೀ ಗಂಗಾಧರೇಶ್ವರನಿಗೆ ಆದೇ ಜಲದಿಂದ ಧಾರೆ ಎರೆದು ಕೊಡಲಾಗುತ್ತದೆ ಎನ್ನುವ ವಿಷಯವನ್ನು ಚಾರಣಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಹೇಳಿ ಗುಡ್ಡದ ಕಡೆ ನಡೆದರು. ನಾವು ಇಳಿಯುತ್ತಾ ಒಂದೊಂದು ಸ್ಥಳದ ಮಹಿಮೆ ತಿಳಿಯುತ್ತಾ ಹೊರಟೆವು.
ಕೆಳಗೆ ಬಂದಾಗ ಸಿಕ್ಕಿದ್ದು ಒಳಕಲ್ಲು ತೀರ್ಥ. ಇದೊಂದು ಮಹತ್ವದ ಆಕರ್ಷಣೀಯ ಸ್ಥಳ. ಈ ದೇವಸ್ಥಾನದ ಆವರಣದಲ್ಲಿ ಒಂದು ವೃತ್ತಕಾರದ ಗುಂಡಿಯಿದ್ದು, ಇದನ್ನು ಒಳಕಲ್ಲು ತೀರ್ಥಎಂದು ಕರೆಯುತ್ತಾರೆ. ಇದರೊಳಗಿನ ನೀರು ವರ್ಷದ ೩೬೫ ದಿನಗಳೂ ದೊರೆಯುತ್ತದೆ. ಭಕ್ತಿಯಿಂದ ಬೇಡಿಕೊಂಡು ಇದರೊಳಗೆ ಕೈ ಹಾಕಿದರೆ ಕೈಗೆ ನೀರು ಸಿಕ್ಕರೆ ನಮ್ಮ ಇಷ್ಟಾರ್ಥಗಳು ಸಿದ್ದಿಸುವುದು ಎನ್ನುವ ಪ್ರತೀತಿ ಇದೆ ಇದರ ಮಹಿಮೆ ತಿಳಿದಾಕ್ಷಣ ಎಲ್ಲರೂ ಕೈ ಹಾಕಿ ಕೇಳುವುದರಲ್ಲಿ ಬ್ಯುಸಿಯಾದರು. ಒಳಕಲ್ಲ ತೀರ್ಥದಲ್ಲಿ ನೀರು ಮೇಲೆಯೆ ಇರುವಂತೆ ಕಂಡರೂ ಕೈ ಹಾಕಿದಾಗ ಕೆಲವರಿಗೆ ಕೈಗೆ ನೀರು ಸಿಕ್ಕರೆ ಇನ್ನೂ ಕೆಲವರಿಗೆ ನೀರೇ ಸಿಗಲಿಲ್ಲ. ಪದೆ ಪದೆ ಪರೀಕ್ಷಿಸುವುದರಲ್ಲಿಯೇ ಇದ್ದರು. ಕೈಗೆ ನೀರು ಸಿಗದಿದ್ದವರ ಮುಖ ಬಾಡಿ ಹೋಗಿತ್ತು. ನೀರು ಸಿಕ್ಕವರ ಮುಖ ಅರಳಿತ್ತು. ನಾನು ದೂರದಿಂದ ನೋಡಿ ಸ್ಥಳದ ಮಹಿಮೆಯನ್ನು ಅಚ್ಚರಿಯಿಂದ ನೋಡಿ ಮುಂದಿನ ಹಾದಿ ಶಿವಲಿಂಗ ದೇವಸ್ಥಾನ, ಅಲ್ಲಿ ಶಿವಲಿಂಗುವಿನ ಮೇಲೆ ಬೆಣ್ಣೆ ತುಪ್ಪವಾಗುವುದನ್ನು ಕಣ್ತುಂಬಿಕೊಂಡೆ.
**
ಪಾತಾಳ ಗಂಗೆಗೆ ಹೋದೆ, ಅದರ ವಿಶೇಷತೆ ತಿಳಿದೆ. ಪಾತಾಳ ಗಂಗೆಯಲ್ಲಿ ಯಾವಾಗಲೂ ನೀರಿನಿಂದ ತುಂಬಿರುತ್ತದೆಯಂತೆ. ಇನ್ನೊಂದು ಅಚ್ಚರಿಯೆಂದರೆ ಎಲ್ಲೆಡೆ ಮಳೆಗಾಲದಲ್ಲಿ ನೀರಿನಿಂದ ತುಂಬಿದರೆ, ಈ ಪಾತಾಳ ಗಂಗೆಯಲ್ಲಿ ಮಳೆಗಾಲದಲ್ಲಿ ನೀರು ಆಳಕ್ಕೆ ಇಳಿದು, ಬೇಸಿಗೆಯಲ್ಲಿ ನೀರು ಮೇಲಕ್ಕೆ ಬರುತ್ತದೆಯಂತೆ. ಅಲ್ಲಿನ ಎಲ್ಲವೂ ವಿಸ್ಮಯವಾಗಿತ್ತು.
ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲ್, ಚಿಪ್ಸ್ ಪ್ಯಾಕೆಟ್ ಗಳ ರಾಶಿ ಮತ್ತು ಯುವ ಜನರ ಸಿಗರೇಟ್ ಹಾವಳಿ ನೋಡಿ ಕತ್ತೆ ವಯಸ್ಸಾದರೂ ಬುದ್ದಿ ಬಂದಿಲ್ಲವಲ್ಲ ಎಂದು ಮನಸ್ಸಲ್ಲೇ ಬೈದುಕೊಂಡೆ.
ಶಿವಗಂಗೆ ಬೆಟ್ಟವನ್ನು ಇಳಿದು ಕೆಳಕ್ಕೆ ಬಂದಾಗ ಮಧ್ಯಾಹ್ನ 12 ಗಂಟೆಯಾಗಿತ್ತು. ಹೊಟ್ಟೆ ಬೇರೆ ಸಿಕ್ಕಾಪಟ್ಟೆ ಹಸಿದಿತ್ತು. ಸೀದಾ ಕಾರಿನಲ್ಲಿ ಕೂತೆ. ಕಾಲುಗಳು ಆನೆ ಭಾರದಷ್ಟು ಭಾರವಾಗಿದ್ದವು. ಆದರೂ ಮನಸ್ಸಲ್ಲಿ ಈ ಸ್ಥಳಕ್ಕೆ ಬಾರದೇ ಹೋಗಿದ್ದರೆ, ವಂಚಿತಳಾಗುತ್ತಿದ್ದೆ ಎನ್ನುವ ಭಾವ ಮೂಡಿತು. ಒಲ್ಲದ ಮನಸ್ಸಿನಿಂದ ಬಂದರೂ ಈ ಶಿವಗಂಗೆ ಎಷ್ಟೆಲ್ಲ ಸುಂದರ ನೆನಪುಗಳನ್ನು ಕಟ್ಟಿಕೊಟ್ಟಿತ್ತಲ್ಲ ಮನಸ್ಸು ಪ್ರಫುಲ್ ವಾಗಿತ್ತು. ಆಗಾಗ ಇಂತಹ ಬೆಟ್ಟ, ಗುಡ್ಡ ಹತ್ತಬೇಕು ಎನ್ನುವ ಉತ್ಸಾಹ ಚಿಗುರೋಡೆದಿತ್ತು. ಎಲ್ಲ ಸ್ನೇಹಿತರ ಕುಟುಂಬಕ್ಕೆ ಧನ್ಯವಾದಗಳು ಹೇಳಿ ಅಲ್ಲಿಂದ ಹೊರಟೆವು.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ, ಬೆಂಗಳೂರು.
