ಬದುಕಿಗೊಂದು ಸೆಲೆ (ಭಾಗ- ೭೭)

ತಮ್ಮ ‘ಆ್ಯಸ್ ಯು ಲೈಕ್ ಇಟ್’ ‘ ಎಂಬ ಕವನ ಸಂಕಲನದಲ್ಲಿ ಇಂಗ್ಲೀಷ್ ನ ಖ್ಯಾತ ಸಾಹಿತಿ, ಕವಿ ಹಾಗೂ ನಾಟಕಕಾರ ಶೇಕ್ಸ್ ಪಿಯರ್ ಮನುಷ್ಯ ಜೀವನದ ಏಳು ಹಂತಗಳನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾನೆ. ಕವನದ ಶೀರ್ಷಿಕೆ ‘ದ ಸೆವೆನ್ ಸ್ಟೇಜಸ್ ಆಫ್ ಮ್ಯಾನ್’ ಎಂದು. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಜೀವನದ ಏಳು ಹಂತಗಳು… ಶೇಕ್ಸ ಪಿಯರ್’ ತಪ್ಪದೆ ಮುಂದೆ ಓದಿ…

ಕವನದ ಆರಂಭದಲ್ಲಿ ‘ಈ ಜಗವೇ ಒಂದು ನಾಟಕ ರಂಗ ‘ ಎಂದು ಹೇಳಿರುವ ಆತ ನಾವೆಲ್ಲರೂ ಇಲ್ಲಿ ಪಾತ್ರಧಾರಿಗಳು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯದಲ್ಲಿ ಬದುಕೆಂಬ ರಂಗಭೂಮಿಯ ಮೇಲೆ ಪ್ರವೇಶ ಮತ್ತು ನಿರ್ಗಮನಗಳು ಇವೆ.

ಪ್ರತಿಯೊಬ್ಬ ಮನುಷ್ಯನು ಬದುಕು ಎಂಬ ರಂಗದ ಮೇಲೆ ಹಲವಾರು ಪಾತ್ರಗಳನ್ನು ಮಾಡುತ್ತಾನೆ ಎಂಬ ಸಾಲಿನ ಅರ್ಥ ಅದೆಷ್ಟು ಅದ್ಭುತವಾಗಿದೆ ಅಲ್ವೇ…. ನಿಜ ಹೆತ್ತವರಿಗೆ ಮಕ್ಕಳಾಗಿ, ಜೊತೆಗೆ ಹುಟ್ಟಿದವರಿಗೆ ಒಡಹುಟ್ಟಿದವರಾಗಿ, ಸಂಗಾತಿಯಾಗಿ,ತಂದೆ ತಾಯಿಗಳಾಗಿ, ಸ್ನೇಹಿತರಾಗಿ, ಬಂಧುಗಳಾಗಿ,ಗುರುವಾಗಿ, ಹಿರಿಯನಾಗಿ ಓರ್ವ ಮನುಷ್ಯ ಹೇಗೆ ತನ್ನ ಬದುಕಿನಲ್ಲಿ ತನ್ನ ಜೊತೆಗೆ ಬೆಸೆದ ನೂರಾರು ಜನರೊಂದಿಗೆ ಒಂದಲ್ಲ ಒಂದು ರೀತಿಯ ವಿಭಿನ್ನವಾದ ನಂಟನ್ನು ಹೊಂದಿರುತ್ತಾನೆ. ಮುಂದುವರೆದು ಕವಿ ಆತನ ಬದುಕನ್ನು ವಿವಿಧ ಹಂತಗಳಲ್ಲಿ ನಾವು ನೋಡಬಹುದು ಎಂದು ಹೇಳುವ ಮೂಲಕ ಮನುಷ್ಯ ಬದುಕಿನ ಏಳು ಹಂತಗಳನ್ನು ಅನಾವರಣ ಮಾಡುತ್ತಾನೆ. ಅವುಗಳೆಂದರೆ ಶೈಶವ, ಬಾಲ್ಯ, ಹರಯ,ಯವ್ವನ, ಪ್ರೌಢ,ಮಧ್ಯ ವಯಸ್ಸು, ವೃದ್ಧಾಪ್ಯ, ಶೈಶವದಲ್ಲಿ ತಾಯಿಯ ಗರ್ಭದಿಂದ ಹೊರಬರುವ ಮಗು ಪಾಲಿಸುವವರ ಕೈಯಲ್ಲಿನ ಕೂಸಾಗಿರುತ್ತದೆ. ಹೊಟ್ಟೆ ಹಸಿದಾಗ ಅಳುವ ಅಥವಾ ತನ್ನ ಯಾವುದೇ ಅವಶ್ಯಕತೆಗಳ ಸಲುವಾಗಿ ಅಳುವ ಮೂಲಕ ವ್ಯಕ್ತಪಡಿಸುವ ಮಗು ಹೊಟ್ಟೆ ತುಂಬಿದ ನಂತರ ಅದನ್ನು ಹೆಚ್ಚಾದದ್ದನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಕಕ್ಕುವ ಮೂಲಕ ಹೊರ ಹಾಕುತ್ತದೆ. ಶೈಶವಾವಸ್ಥೆಯಲ್ಲಿರುವ ಮಗುವನ್ನು ಪಾಲಿಸಲೇಬೇಕು. ಯಾಕೆಂದರೆ ತನ್ನದೇ ಕೆಲಸಗಳನ್ನು ಮಾಡಿಕೊಳ್ಳಲು ಆಗದಷ್ಟು ಮಗು ಪರಾಧೀನವಾಗಿ ಬದುಕುತ್ತದೆ. ನಂತರ ನಿಧಾನವಾಗಿ ಬೆಳವಣಿಗೆಯ ಹಂತವನ್ನು ತಲುಪುತ್ತದೆ. ಶೇಷಾವಸ್ಥೆಯ 2 ವರ್ಷಗಳಲ್ಲಿ ಮಗು ಹೊರಳಿ ಬೀಳುವುದರಿಂದ ಹಿಡಿದು ಅಂಬೆಗಾಲಿಟ್ಟು ನಂತರ ನಡೆಯುವವರೆಗೆ ದೈಹಿಕವಾಗಿ ವಿಕಸಿತಗೊಳ್ಳುತ್ತಾ ಸಾಗುತ್ತದೆ.. ಮಾನಸಿಕವಾಗಿಯೂ ಬೆಳವಣಿಗೆಯನ್ನು ಕಾಣುವ ಮಗು ನಿಧಾನವಾಗಿ ತಪ್ಪು ಹೆಜ್ಜೆ ಇಡುತ್ತಾ ಒಂದೊಂದೇ ಮಾತುಗಳನ್ನು ಆಡುತ್ತಾ ಇತರರನ್ನು ಅನುಕರಿಸುತ್ತಾ ಬೆಳೆಯುತ್ತದೆ. ಹನಿ ಹಾಲನ್ನು ಗುಟುಕರಿಸಲು ಮಾತ್ರ ಸಾಧ್ಯವಿರುವ ಮಗು ನಿಧಾನವಾಗಿ ಮೆದು ಆಹಾರವನ್ನು ಸೇವಿಸುತ್ತಾ ನಂತರ ಗಟ್ಟಿಯಾದ ಆಹಾರವನ್ನು ಸೇವಿಸುವುದನ್ನು ಕಲಿಯುತ್ತದೆ ಹಲ್ಲುಗಳು ಮೂಡಿದಂತೆ ಕಚ್ಚಿ ತಿನ್ನುವ ರೂಢಿಯನ್ನು ಮಾಡಿಕೊಳ್ಳುತ್ತದೆ ಆದರೂ ಕೂಡ ಶೈಶವ ವಸ್ಥೆಯಲ್ಲಿ ಮಕ್ಕಳು ಒಂದು ರೀತಿಯಲ್ಲಿ ಅದರಲ್ಲೂ ತನ್ನ ತಾಯಿಯ ಮೇಲೆ ಮಗು ಸಂಪೂರ್ಣವಾಗಿ ಅವಲಂಬನೆ ಹೊಂದಿರುತ್ತದೆ.


ಒಂದೊಮ್ಮೆ ಬೆಳೆದು ನಿಂತ ಮಗು ಲೋಕಜ್ಞಾನವನ್ನು ಪಡೆಯಲು ಬದುಕಿನ ಮುಖ್ಯಘಟ್ಟವಾದ ಶೈಕ್ಷಣಿಕ ಹಂತಕ್ಕೆ ತಲುಪುತ್ತದೆ. ಈ ಸಮಯದಲ್ಲಿ ಮಗು ಪ್ರತಿಯೊಂದನ್ನು ಕುತೂಹಲದ ದೃಷ್ಟಿಯಿಂದ ನೋಡುತ್ತಾ ಶಾಲೆಗೆ ಹೋಗುವ ಪ್ರತಿ ಕ್ಷಣದಲ್ಲೂ ನಿಧಾನವಾಗಿ ನಡೆಯುತ್ತಾ ಬದುಕಿನ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ಹೊಸ ಬದುಕಿನತ್ತ ಮುಖ ಮಾಡುತ್ತದೆ.
ಮುಂಜಾನೆಯ ತಾಜಾತನವನ್ನು ಹೊತ್ತು ಮಗುವಿನ ಮುದ್ದು ಮುಖ,ಹೊಳೆಯುವ ಕಣ್ಣುಗಳು ಹಾಗೂ ತಲೆ ಕೂದಲು ಮಗುವಿನ ಎಳೆತನವನ್ನು ಎತ್ತಿ ತೋರಿಸುತ್ತದೆ. ಅತ್ಯಂತ ಸಾವಕಾಶವಾಗಿ ಸಾಗುವ ಮೃದ್ವಂಗಿಯಂತೆ ತನ್ನಿಚ್ಛೆಯ ವಿರುದ್ಧವಾಗಿ ಮಗು ಶಾಲೆಗೆ ತೆರಳುತ್ತಾನೆ ಎಂದು ಕವಿ ಬಣ್ಣಿಸಿದ್ದಾನೆ.

ನಂತರ ಬರುವುದು ಯೌವನದ ಹಂತ ಸಣ್ಣಗೆ ಶಬ್ದ ಮಾಡುತ್ತಾ ಉರಿಯುವ ಬರ್ನರಿನಂತೆ ತಾನು ಪ್ರೀತಿಸುವ ಯುವತಿಯ ಪ್ರೀತಿಯಲ್ಲಿ, ಆಕೆಯ ಕಣ್ಣ ಹೊಳಪಿನಲ್ಲಿ ಕಳೆದುಹೋಗುವ ಹಂತವಿದು. ನಂತರ ಓರ್ವ ಶಪಥಗೈದ ಸೈನಿಕರಂತೆ ಆತನ ಬದುಕು ತಿರುವನ್ನು ತೆಗೆದುಕೊಳ್ಳುತ್ತದೆ. ಚಿರತೆಯ ಭಾವವನ್ನು ಹೊಂದಿದಂತೆ ಆತ ಮತ್ತೊಂದು ಹಂತವನ್ನು ತಲುಪುತ್ತಾನೆ.

ತಮ್ಮ ಆತ್ಮ ಗೌರವದ ಕುರಿತು ಅತಿಯಾದ ಅಭಿಮಾನ ಮತ್ತು ಸೂಕ್ಷ್ಮತೆಯನ್ನು ಹೊಂದಿರುವ ಈ ಹಂತದಲ್ಲಿ ಸಿಡುಕುತನ ಸಾಮಾನ್ಯ. ಅತ್ಯಂತ ಪ್ರಾಣಾಪಾಯದ ಸಮಯದಲ್ಲಿಯೂ ಆತ್ಮ ಗೌರವಕ್ಕಾಗಿ ಹೊಡೆದಾಡುವ ಆತನ ಕೀರ್ತಿ ನೀರ ಮೇಲಣ ಗುಳ್ಳೆಯಂತದ್ದು ಎಂಬುದನ್ನು ಆತ ನವಿರಾಗಿ ತಿಳಿಸಿದ್ದು ಪ್ರಸಿದ್ಧಿ ಎನ್ನುವುದು ಮನುಷ್ಯನ ಬದುಕಿನಲ್ಲಿ ಅತ್ಯಂತ ಕ್ಷಣಿಕ ಎಂದು ಹೇಳುತ್ತಾನೆ. ಇದು ಆತನ ಬದುಕಿನ ನಾಲ್ಕನೇ ಹಂತ.

ಐದನೇ ಹಂತದಲ್ಲಿ ಆತ ಅತ್ಯಂತ ನೇರವಾಗಿ ಹಾಗೂ ನಿಖರವಾಗಿ ಮಾತನಾಡುವ ನ್ಯಾಯಾಧೀಶನಾಗುತ್ತಾನೆ. ಅಧಿಕಾರ ಅವನ ಕೈಯಲ್ಲಿ ಇರುತ್ತದೆ. ಒಂದು ರೀತಿಯಲ್ಲಿ ಸಂಪೂರ್ಣವಾಗಿ ಅರಳಿದ ವ್ಯಕ್ತಿತ್ವ ಆತನದಾಗಿರುತ್ತದೆ. ಅದರ ಪರಿಣಾಮವಾಗಿ ಆತ ಸುಂದರವಾದ ದುಂಡಗಿನ ಹೊಟ್ಟೆ, ನಿಖರ ಕಣ್ಣುಗಳನ್ನು ಹೊಂದಿದ ಬುದ್ಧಿವಂತ ವ್ಯಕ್ತಿಯಾಗುತ್ತಾನೆ ಔಪಚಾರಿಕವಾಗಿ ಮಾತನಾಡುವ ಜಾಣ್ಮೆ ಆತನದಾಗಿರುತ್ತದೆ ಇದು ಆತನ ಬದುಕಿನ ಐದನೇ ಹಂತ.

ನಂತರ ಬರುವುದು ಪ್ಯಾಂಟಲೂನ್ ಎಂಬ ಆತನ ಬದುಕಿನ ಆರನೇ ಹಂತ. ಈ ಹಂತದಲ್ಲಿ ವ್ಯಕ್ತಿಯು ದೈಹಿಕವಾಗಿ ಕುಗ್ಗುತ್ತಾನೆ. ಆತನ ಬಟ್ಟೆಗಳು ಸಡಿಲವಾಗುತ್ತವೆ. ಅದರಲ್ಲೂ ಬೆಲ್ಟ್ ಇಲ್ಲದೆ ಪ್ಯಾಂಟ್ ಧರಿಸಲು ಬರುವುದೇ ಇಲ್ಲ ಎಂಬಷ್ಟು ಪ್ಯಾಂಟು ತುಸು ಹೆಚ್ಚೇ ಸಡಿಲವಾಗುತ್ತದೆ ಎಂಬುದನ್ನು ಅತ್ಯಂತ ಸೂಕ್ತವಾಗಿ ಹೇಳುತ್ತಾನೆ. ಇದರ ಅರ್ಥ ತನ್ನ ಬದುಕಿನ ಆರನೇ ಹಂತದಲ್ಲಿ ಆತ ಮೊದಲಿನ ಮೊನಚನ್ನು ಕಳೆದುಕೊಂಡು ದೈಹಿಕವಾಗಿ ಬಲಹೀನನಾಗುತ್ತಾನೆ. ನಿಧಾನವಾಗಿ ವೃದ್ಧಾಪ್ಯ ಆತನನ್ನು ಆವರಿಸುತ್ತದೆ.

ಈ ಮುಂಚಿನ ವಯೋಸಹಜ ಅಬ್ಬರದ ಧ್ವನಿ ಇದೀಗ ತನ್ನ ಹರಿತವನ್ನು ಕಳೆದುಕೊಳ್ಳುತ್ತದೆ. ಗಾಂಭೀರ್ಯರ ಜೊತೆ ಕೆಲವೊಮ್ಮೆ ಬಾಲಿಶತೆ ಕೂಡ ಆತನದ್ದಾಗುತ್ತದೆ. ಬಹುಶಃ ಈ ಸಮಯದಲ್ಲಿ ಆತ ತನ್ನಲಾಗುತ್ತಿರುವ ಮನೋದೈಹಿಕ ಬದಲಾವಣೆಗಳು ಉಂಟುಮಾಡುವ ಅಸ್ಥಿರತೆಯಿಂದಾಗಿ ಒಳಗಿಂದೊಳಗೆ ಕುಗ್ಗಿ ಹೋಗುತ್ತಾನೆ. ಅದು ಕಾರಣ ಆತನಲ್ಲಿ ಕೀಳರಿಮೆ ಉಂಟಾಗುತ್ತದೆ ಈ ಕೀಳರಿಮೆಯನ್ನು ಮುಚ್ಚಿ ಹಾಕಲು ಬಹುಶಹ ಆತ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿ ಅದು ಬಾಲಶರವೆನಿಸಿಕೊಳ್ಳಬಹುದು.

ಇನ್ನು ಕೊನೆಯದಾಗಿ ಏಳನೆಯ ಹಂತವನ್ನು ಎರಡನೇ ಬಾಲಿಶತನವೆಂದೇ ಕರೆಯಬಹುದು. ಈ ಹಂತದಲ್ಲಿ ಮನುಷ್ಯ ಮತ್ತೆ ಮಗುವಿನಂತಾಗುತ್ತಾನೆ ಆತನ ದೃಷ್ಟಿ ಇನ್ನಷ್ಟು ಮಂದವಾಗುತ್ತದೆ ನಾಲಿಗೆ ರುಚಿಯನ್ನು ಕಳೆದುಕೊಳ್ಳುತ್ತದೆ ಹಲ್ಲುಗಳು ಒಂದೊಂದಾಗಿ ಉದುರತೊಡಗುತ್ತವೆ. ನಡಿಗೆ ನಿಧಾನವಾಗುತ್ತದೆ ಆತ ತನ್ನ ವಿಸರ್ಜನೆಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಮರೆವು ಆತನನ್ನು ಆವರಿಸಬಹುದು ಸಂಪೂರ್ಣ ಅಸಹಾಯಕ ಪರಿಸ್ಥಿತಿ ಆತನದ್ದಾಗುತ್ತದೆ. ಒಂದೊಮ್ಮೆ ವಿಸರ್ಜನೆಗಳ ಆತ ನಿಯಂತ್ರಣವನ್ನು ಕಳೆದುಕೊಂಡು ಪರಾಧೀನನಾದಾಗ ಆತನ ಬದುಕು ದುಸ್ತರವಾಗುತ್ತದೆ ಜೀವನೇಚ್ಛೆಯು ಕುಂಠಿತವಾಗಿ ಇಹಲೋಕ ತ್ಯಜಿಸಲು ಆಶಿಸುತ್ತಾನೆ.

ಇದನ್ನು ಅತ್ಯಂತ ಮಾರ್ಮಿಕವಾಗಿ ಶೇಕ್ಸ ಪಿಯರ್ ತನ್ನ ಕವನದಲ್ಲಿ ವಿವರಿಸಿದ್ದಾನೆ. ಬದುಕು ಒಂದು ನಾಟಕ ರಂಗ ನಾವೆಲ್ಲ ಇದರ ಪಾತ್ರಧಾರಿಗಳು ಎಂಬ ಮಾತು ಜಗತ್ತಿನ ಎಲ್ಲ ಭಾಷೆಯ ಎಲ್ಲಾ ಲಿಪಿಗಳಲ್ಲೂ ಅಲ್ಲಲ್ಲಿ ಕಂಡು ಬಂದಿದೆ ಆದರೂ ಇದನ್ನು ಮೊದಲು ಬರೆದದ್ದು ಶೇಕ್ಸ್ ಪಿಯರ್ ಎಂಬ ಗಾಢ ಭಾವ ನಮ್ಮನ್ನು ತಟ್ಟುತ್ತದೆ ಏನಂತೀರಾ ಸ್ನೇಹಿತರೇ ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading