ಬದುಕಿಗೊಂದು ಸೆಲೆ (ಭಾಗ- ೬೦)

ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಇಂದಿನ ಅಹಿಲ್ಯನಗರ್ ಜಿಲ್ಲೆಯ ಹಿವರೇ ಬಜಾರ್ ಎಂಬ ಪುಟ್ಟ ಹಳ್ಳಿ. ಕೇವಲ ಒಂದು ಸಾವಿರ ಜನಸಂಖ್ಯೆ ಇರುವ ಆ ಪುಟ್ಟ ಹಳ್ಳಿಯಲ್ಲಿ ದುಡಿಯುವ ಜನರಿಗಿಂತ ಸೋಮಾರಿ ಜನರೇ ಹೆಚ್ಚಾಗಿದ್ದರು. ಕಳ್ಳ ಭಟ್ಟಿ ತಯಾರಿಸುವ ಕೆಲಸವೇ ಮುಖ್ಯ ದಂಧೆಯಾಗಿತ್ತು. ಆಗ ಬಂದಿದ್ದೆ  ಪೋಪಟ್ ರಾವ್ ಬಾಗೂಜಿ ಪವಾರ್.  ಮುಂದೇನಾಯಿತು, ವೀಣಾ ಹೇಮಂತಗೌಡ ಪಾಟೀಲ್ ಅವರ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ ಲೇಖನದಲ್ಲಿ ತಪ್ಪದೆ ಮುಂದೆ ಓದಿ…

ಓರ್ವ ವ್ಯಕ್ತಿಯ ಸಂಕಲ್ಪ ಹಾಗೂ ಒಂದಿಡೀ ಗ್ರಾಮದ ಜನರ ಇಚ್ಛಾಶಕ್ತಿ ಆ ಗ್ರಾಮದ ಚಿತ್ರಣವನ್ನೇ ಬದಲಿಸಬಹುದು ಎಂಬುದಕ್ಕೆ ಕೆಳಗಿನ ಯಶೋಗಾಥೆಯೇ ಸಾಕ್ಷಿ. ನಿನ್ನ ಆಲೋಚನೆಗಳು ಅತ್ಯಂತ ಉನ್ನತವಾಗಿದ್ದು ಆ ಆಲೋಚನೆಗಳ ದಿಕ್ಕಿನಲ್ಲಿ ಎಲ್ಲರ ಮನವೊಲಿಸಿ ಮುನ್ನಡೆಯುವ ಸಾಮರ್ಥ್ಯ ಇದ್ದರೆ ನಿನಗಿಂತ ದೊಡ್ಡ ನಾಯಕ ಬೇರೊಬ್ಬರಿಲ್ಲ ಎಂಬ ಮಾತಿಗೆ ಪುಷ್ಟಿ ದೊರೆಯುವುದು ಮಹಾರಾಷ್ಟ್ರ ರಾಜ್ಯದ ಅಹಿಲ್ಯಾ ನಗರ ಜಿಲ್ಲೆಯ ಹಿವರೇ ಬಜಾರ್ ಎಂಬ ಗ್ರಾಮದ ಯುವಕನೇ ಸಾಕ್ಷಿ.

ಗ್ರಾಮ ಸುಧಾರಣೆಯ ಪರಿಕಲ್ಪನೆಯ ಮೂಲಕ ಗ್ರಾಮೀಣ ಜನರ ಬದುಕನ್ನು ಬದಲಿಸುವ ಶಕ್ತಿಯ ಪರಿಣಾಮವಾಗಿ ಇಡೀ ಗ್ರಾಮದ ಜನರ ಬದುಕು ಸುಧಾರಣೆ ಮಾಡುವ ಮೂಲಕ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಸ್ಥಾಪನೆ ಮಾಡಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಆ ಗ್ರಾಮ ಬೆಳೆಯಿತು.

ಅದು ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಇಂದಿನ ಅಹಿಲ್ಯನಗರ್ ಜಿಲ್ಲೆಯ ಹಿವರೇ ಬಜಾರ್ ಎಂಬ ಪುಟ್ಟ ಹಳ್ಳಿ. ಕೇವಲ ಒಂದು ಸಾವಿರ ಜನಸಂಖ್ಯೆ ಇರುವ ಆ ಪುಟ್ಟ ಹಳ್ಳಿಯಲ್ಲಿ ದುಡಿಯುವ ಜನರಿಗಿಂತ ಸೋಮಾರಿ ಜನರೇ ಹೆಚ್ಚಾಗಿದ್ದರು. ಕಳ್ಳ ಭಟ್ಟಿ ತಯಾರಿಸುವ ಕೆಲಸವೇ ಮುಖ್ಯ ದಂಧೆಯಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಆಗಾಗ ಹೊಡೆದಾಟ, ಬಡಿದಾಟಗಳಿಗೂ ಆ ಊರು ಸಾಕ್ಷಿಯಾಗಿತ್ತು.

ಇನ್ನೆಂದೂ ಬಿಡಿಸಲಾಗದ ಗ್ರಹಣ ಹಿಡಿದ ಕುಗ್ರಾಮವಾಗಿತ್ತು ಆ ಊರು. ಅತ್ಯಂತ ಬರಗಾಲ ಪೀಡಿತ ಪ್ರದೇಶವಾದ ಹಿವರೇ ಬಜಾರ್ ನಲ್ಲಿ ಮಳೆಯ ಹನಿಗಿಂತ ಹೆಚ್ಚು ಹೆಂಗಸರ ಕಣ್ಣೀರ ಹನಿ ಉದುರುತ್ತಿತ್ತು ಎಂದರೆ ತಪ್ಪಿಲ್ಲ.

ಆ ಊರಿನ ಕೆಲ ಜನರಿಗೆ ಗ್ರಾಮವನ್ನು ಸುಧಾರಿಸುವ ಆಶಯ. ಹೇಗಾದರೂ ಮಾಡಿ ತಮ್ಮ ಊರಿಗೆ ಹಿಡಿದ ಗ್ರಹಣವನ್ನು ಬಿಡಿಸಬೇಕು ಎಂಬ ಸತಚಿಂತನೆ ಮನೆ ಮಾಡಿತ್ತು. ಅಂತೆಯೇ ತಮ್ಮ ಊರಿನ ಮೊದಲ ಸ್ನಾತಕೋತ್ತರ ಪದವೀಧರನಾದ ಪೋಪಟ್ ರಾವ್ ಬಾಗೂಜಿ ಪವಾರ್ ಎಂಬ ವ್ಯಕ್ತಿಯನ್ನು ಆ ಗ್ರಾಮದ ಸರಪಂಚನಾಗಿ ಕಾರ್ಯನಿರ್ವಹಿಸುವ ಮೂಲಕ ಅವರ ಬದುಕಿನಲ್ಲಿ ಬದಲಾವಣೆಯ ಹೊಸ ಪರ್ವವನ್ನು ತರಲಿ ಎಂದು ಒತ್ತಾಯಿಸಿದರು.

ಈಗಾಗಲೇ ರಣಜಿ ಕ್ರಿಕೆಟ್ ನಲ್ಲಿ ಒಂದು ಹಂತದ ಸ್ಥಾನವನ್ನು ಗಳಿಸಿದ್ದ ಪೋಪಟ್ ರಾವ್ ಅವರನ್ನು ಖುದ್ದು ಅವರ ತಂದೆಯೇ ಈ ಜಂಜಡದಲ್ಲಿ ಸಿಲುಕಿಕೊಳ್ಳದಿರುವಂತೆ ತಿಳಿ ಹೇಳಿದರು. ಆದರೆ ಅವರೆಲ್ಲರೂ ಆತನ ಮನೆಯ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವ ಮಟ್ಟಿಗೆ ಅವರ ಆಗ್ರಹ ಮುಂದುವರೆಯಿತು ಜನರ ಇಚ್ಚಾ ಶಕ್ತಿಯ ಮುಂದೆ ಬಗ್ಗಲೇಬೇಕಾಯಿತು.

ಪೋಪಟ್ ರಾವ್ ಮುಂದೆ ಆ ಊರಿನ ನಕ್ಷೆ ಭಾರತದ ಭೂಪಟದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಒಂದೊಮ್ಮೆ ಕಳ್ಳಭಟ್ಟಿ ಸಾರಾಯಿ ತಯಾರಿಕೆಗೆ ಕುಪ್ರಸಿದ್ಧವಾಗಿದ್ದ ಗ್ರಾಮ ಇದೀಗ ಬಿಲಿಯನೇರ್ ಗ್ರಾಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಒಂದೊಮ್ಮೆ ಬರಪೀಡಿತ ನಾಡು ಎಂದು ಹೆಸರಾಗಿದ್ದ ಆ ಗ್ರಾಮ ಇದೀಗ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದ ಗ್ರಾಮವಾಗಿದೆ. 1989ರಿಂದ ಪೋಪಟ ರಾವ್ ಅವರು ಆ ಗ್ರಾಮದ ಸರಪಂಚವಾಗಿ ಗ್ರಾಮದ ನಾಯಕತ್ವವನ್ನು ವಹಿಸಿ ಅಲ್ಲಿ ಮಾಡಿರುವ ಆಮೂಲಾಗ್ರ ಬದಲಾವಣೆಗಳು ಹಿವರೇ ಬಜಾರ್ ಗ್ರಾಮದ ದೆಸೆಯನ್ನು ಬದಲಾಯಿಸಿವೆ.

ಗ್ರಾಮದ ಸರಪಂಚನಾಗಿ ಅವರು ಮೊಟ್ಟ ಮೊದಲು ಮಾಡಿದ ಕೆಲಸ ಜಲ ಸಂರಕ್ಷಣೆ. ಪ್ರತಿಯೊಂದು ಹೊಲದ ಬದುವುಗಳಲ್ಲಿ ಕೂಡ ನೀರನ್ನು ಸಂರಕ್ಷಿಸಲು ಹೊಂಡಗಳನ್ನು ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿರುವ ಆ ಗ್ರಾಮದಲ್ಲಿ ಎಲೆಕ್ಟ್ರಿಕ್ ಪಂಪುಗಳ ಮೂಲಕ ನೀರೆತ್ತುವುದನ್ನು ನಿಷೇಧಿಸಿದ್ದಾರೆ. ಇದು ಗ್ರಾಮದಲ್ಲಿ ನೀರಿನ ಬರವನ್ನು ನೀಗಿಸಿದ್ದು ಮಾತ್ರವಲ್ಲ ಬೆಳೆ ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತು.

ಆದರೆ ಇಲ್ಲೂ ಕೂಡ ಪೋಪಟ್ ಅವರು ದೈನಂದಿನ ಬಳಕೆಯ ಹಣ್ಣು, ತರಕಾರಿಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಿದರು. ಹತ್ತಿರದ ಎಲ್ಲ ಜಿಲ್ಲೆಗಳಿಗೆ ತಮ್ಮಲ್ಲಿ ಬೆಳೆದ ತರಕಾರಿ ಹಣ್ಣು,ಹಂಪಲುಗಳು, ಹೂವುಗಳನ್ನು ಮಾರಾಟ ಮಾಡುವ ಮೂಲಕ ಗ್ರಾಮಸ್ಥರು ಆರ್ಥಿಕ ಸ್ಥಿರತೆಯನ್ನು ಗಳಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಗ್ರಾಮದ ಜನರು ನೀರನ್ನು ಪೋಲು ಮಾಡದಿರುವಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಮಳೆ ಕೊಯ್ಲು ಮಾಡುವ ಮೂಲಕ ಗ್ರಾಮದಲ್ಲಿ ಅಂತರ್ಜಲ ಮಟ್ಟವು ಹೆಚ್ಚುವಂತೆ ಜಲ ಸಂವರ್ಧನೆಯನ್ನು ಮಾಡಿದರು. ಒಂದೊಮ್ಮೆ ಹನಿ ನೀರಿಗಾಗಿ ತಹತಹಿಸುತ್ತಿದ್ದ ಗ್ರಾಮವನ್ನು ಸಂಪೂರ್ಣ ಜಲ ಸ್ವಾವಲಂಬಿ ಗ್ರಾಮವನ್ನಾಗಿಸಿದರು. ಹೆಚ್ಚು ನೀರನ್ನು ಬಳಸಲ್ಪಡುವ ಅಂತರ್ಜಲವನ್ನು ಬರಿದಾಗಿಸುವ ಭತ್ತ, ಕಬ್ಬು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ಅವರು ನಿಷೇಧಿಸಿದರು.

ಗಿಡಮರಗಳನ್ನು ಸಂರಕ್ಷಿಸುವ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಯಾರು ಕೊಡಲಿಗಳನ್ನು ಬಳಸದಿರುವಂತೆ ಜನರ ಮನ ಒಲಿಸಿ ಆ ನಿಟ್ಟಿನಲ್ಲಿ ಕೂಡ ಯಶಸ್ವಿಯಾದರು.
ಗ್ರಾಮದ ಜನರಿಗೆ ಮೂಲಭೂತ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವಿಯಾದ ನಂತರ ಅವರು ಹೆಚ್ಚಿನ ಆದಾಯ ತರುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಗೂ ಕನಿಷ್ಠ ಎರಡು ಮುರ್ರ ಜಾತಿಯ ಎಮ್ಮೆಗಳನ್ನು ಸಾಕಲು ಪ್ರೇರೇಪಿಸಿದರು. ಉತ್ಕೃಷ್ಟ ತಳಿಯ ಮುರ್ರಾ ಎಮ್ಮೆಯ ಹಾಲು ಮತ್ತಿತರ ಉತ್ಪನ್ನಗಳಿಗೆ ಹತ್ತಿರದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದ ಬೇಡಿಕೆಯನ್ನು ಪೂರೈಸುವ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಿಕೊಂಡರು.

ಶಿಕ್ಷಣವೇ ಶಕ್ತಿ ಎಂಬುದನ್ನು ಅರಿತು, ಶೈಕ್ಷಣಿಕವಾಗಿ ಮುಂದುವರೆದ ಮನುಷ್ಯ ಆರ್ಥಿಕ ಸಾಮಾಜಿಕ ಪ್ರಗತಿಗೆ ಕಾರಣವಾಗಬಲ್ಲುದು ಎಂಬ ಕಾರಣಕ್ಕಾಗಿ ಗ್ರಾಮದ ಪ್ರತಿ ಮನೆಯ ಮಕ್ಕಳು ಕಡ್ಡಾಯವಾಗಿ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸಿದರು. ಶಾಲೆಯಲ್ಲಿ ಗ್ರಾಮದ ಕಲಿತ ಮಕ್ಕಳನ್ನು ಶಿಕ್ಷಕರನ್ನಾಗಿಸಿ ಉತ್ತಮ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳಿಗೆ ನಾಂದಿ ಹಾಡಿದರು. ಕಿರಿಯರಿಗೆ ಮಾತ್ರವಲ್ಲದೆ ಹಿರಿಯರು ಕೂಡ ಸಾಕ್ಷರರಾಗುವಂತೆ ಪ್ರೇರೇಪಿಸಿ ಇಡೀ ಗ್ರಾಮ ಶೇಕಡ 99 ರಷ್ಟು ಶೈಕ್ಷಣಿಕ ಸಾಕ್ಷರರನ್ನು ಹೊಂದಿದ ಗ್ರಾಮವನ್ನಾಗಿ ರೂಪಿಸಿದರು.

ಆರೋಗ್ಯಕರ ಗ್ರಾಮೀಣ ಪರಿಸರವನ್ನು ಹೊಂದುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಗ್ರಾಮ ಪಂಚಾಯಿತಿಯ ವತಿಯಿಂದ ಕೈಗೊಂಡು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಇಡೀ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು. ಆರೋಗ್ಯದ ಕಾಳಜಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸುರಕ್ಷಿತ ತಾಯ್ತನ ಹಾಗೂ ಮಕ್ಕಳ ಬೆಳವಣಿಗೆಯ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ ಆರೋಗ್ಯ ಸೇವೆಗಳನ್ನು ಗ್ರಾಮದಲ್ಲಿ ಅನುಷ್ಠಾನಗೊಳಿಸಿದರು.

ಸಾಂಸಾರಿಕ ನೆಮ್ಮದಿಯಲ್ಲಿ ಸಮುದಾಯದ ಪ್ರಗತಿ ಇದೆ ಎಂಬ ಕಾರಣಕ್ಕೆ ಹಿವರೇ ಬಜಾರ್ ಗ್ರಾಮವನ್ನು ಸಂಪೂರ್ಣ ಚಟಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಆ ಗ್ರಾಮದಲ್ಲಿ ಕುಡಿತ, ಧೂಮಪಾನ ತಂಬಾಕು ಸೇವನೆಗಳನ್ನು ನಿಷೇಧಿಸಿದರು….. ಹಾಗೂ ಈ ನಿಷೇಧವು ಕಟ್ಟುನಿಟ್ಟಾಗಿ ಪಾಲಿಸಲ್ಪಡುವಂತೆ ಚಟುವಟಿಕೆಗಳನ್ನು ರೂಪಿಸಿದರು. ಸ್ವಚ್ಛತೆಯ ನಿಯಮಗಳನ್ನು ಸಂಪೂರ್ಣ ಅನುಷ್ಠಾನಗೊಳಿಸಿದ ಗ್ರಾಮವನ್ನಾಗಿಸಿದರು.

ಫೋಪಟ್ ಲಾಲ್ ಅವರು ಇಡೀ ಗ್ರಾಮದಲ್ಲಿ ಒಟ್ಟು ನಾಲ್ಕು ರೀತಿಯ ನಿಷೇಧಗಳನ್ನು ಹೇರಿದರು. ಗ್ರಾಮದ ಎಲ್ಲರೂ ಸ್ವಯಂಪ್ರೇರಿತರಾಗಿ ಈ ನಿಷೇಧಗಳನ್ನು ಒಪ್ಪಿಕೊಂಡು ಪಾಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಳಿಸಿದರು. ಕೊಡಲಿ ನಿಷೇಧ, ಕಳ್ಳತನ ನಿಷೇಧ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದದಂತೆ ನಿಷೇಧ ಹಾಗೂ ಚಟ ನಿಷೇಧ…. ಇವೆ ಆ ನಾಲ್ಕು ನಿಷೇಧಗಳು. ಇಡೀ ಊರಿನಲ್ಲಿ ಯಾರೂ ಕೂಡ ಎಲೆಕ್ಟ್ರಿಕ್ ಪಂಪುಗಳನ್ನು ಬಳಸಿ ಬೇಸಾಯ ಮಾಡುವುದನ್ನು ನಿಷೇಧಿಸಿದರು.

ಇಡೀ ಮಹಾರಾಷ್ಟ್ರದಲ್ಲಿಯೇ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆ ಹಿವರೇ ಬಜಾರ್ ನದ್ದು. ತಮ್ಮ ಊರಿನಲ್ಲಿ ಒಂದೇ ಒಂದು ಸೊಳ್ಳೆಯನ್ನು ತೋರಿಸಿ ಕೊಟ್ಟವರಿಗೆ ಒಂದು ಸೊಳ್ಳೆಗೆ 100 ರೂ ನಂತೆ ಕೊಡುತ್ತೇನೆ ಎಂದು ಒಂದು ಒಂದೊಮ್ಮೆ ಪೋಪಟ್ ಲಾಲ್ ಅವರು ಸವಾಲು ಹಾಕಿದ್ದರು ಎಂದರೆ ಅವರ ಕಾರ್ಯಕ್ಷಮತೆ ಎಷ್ಟಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು.

ಸುಮಾರು ಮೂರು ದಶಕಗಳ ಸತತ ಪ್ರಯತ್ನದ ಪರಿಣಾಮವಾಗಿ ಇದೀಗ ಹಿವರೇ ಬಜಾರ್ ಗ್ರಾಮವು ಸಂಪೂರ್ಣ ಸ್ವಾವಲಂಬನೆಯನ್ನು ಗಳಿಸಿರುವ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ವರಮಾನ ತೆರಿಗೆಯನ್ನು ಕಟ್ಟುವ ಬಿಲಿಯನಿಯರ್ ಗ್ರಾಮವಾಗಿದೆ. ಇದಕ್ಕೆಲ್ಲ ಕಾರಣವಾಗಿರುವ ಪೋಪಟ್ ಲಾಲ್ ಅವರಿಗೆ ಭಾರತ ಸರ್ಕಾರವು 2020ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.

ಪ್ರಸ್ತುತ ಮಹಾರಾಷ್ಟ್ರ ಸರ್ಕಾರದ ಮಾದರಿ ಗ್ರಾಮ ಪಂಚಾಯಿತಿ ಯೋಜನೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪೋಪಟ್ ಲಾಲ್ ಅವರು ಓರ್ವ ವ್ಯಕ್ತಿಯ ಶಕ್ತಿಯ ಸ್ವರೂಪವಾಗಿ ಹೊರಹೊಮ್ಮಿದ್ದಾರೆ. ಪ್ರತಿ ಗ್ರಾಮಕ್ಕೆ ಓರ್ವ ಪೋಪಟ್ ಲಾಲ್ ಇದ್ದರೆ ಗಾಂಧೀಜಿಯವರು ಕಂಡ ರಾಮ ರಾಜ್ಯದ ಕನಸು ನನಸಾದೀತು ಅಲ್ಲವೇ ಸ್ನೇಹಿತರೆ??


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW