ಸಾವಿಲ್ಲದ ಮನೆಯ ಸಾಸಿವೆ

ಸಾವಿಲ್ಲದ ಮನೆಯ ಸಾಸಿವೆ ಈ ಕತೆಗೆ ಎರಡು ಆಯಾಮಗಳಿವೆ. ಕತೆಯಲ್ಲಿ ಬುದ್ಧನ ತತ್ವದ ಎರಡು ಮುಖ್ಯ ಸಾರಾಂಶವನ್ನೇ ಒಳಗೊಂಡಿದೆ. ಶ್ರೀಪಾದ್ ಹೆಗಡೆ ಅವರು ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಬುದ್ಧನ ಬದುಕಿನಲ್ಲಿ ಸಂಭವಿಸಿದ್ದೆಂಬ ಈ ಘಟನೆ ಕತೆಯಾಗಿ ಬಹು ಜನಪ್ರಿಯವಾಗಿದೆ. ಬುದ್ಧನ ಬಹು ಮುಖ್ಯ ವಿಚಾರಗಳನ್ನು ಈ ಕತೆ ತನ್ನಲ್ಲಿ ಹುದುಗಿಸಿಕೊಂಡಿದೆ. ಚಿಕ್ಕಂದಿನಲ್ಲಿ ಮೊದಲ ಬಾರಿ ಈ ಕತೆ ಓದಿದಾಗ ನನಗೆ ನಿರಾಸೆಯೇ ಆಗಿತ್ತು. ಮಹಿಳೆಯೊಬ್ಬಳು ಸತ್ತ ತನ್ನ ಮಗುವನ್ನು ಬುದ್ಧನ ಮುಂದೆ ತಂದು ಮಲಗಿಸಿ, ದುಃಖಿಸುತ್ತಾ ಮಗನನ್ನು ಪುನಃ ಬದುಕಿಸಿ ಕೊಡುವಂತೆ ಬೇಡಿಕೊಳ್ಳುವ ಸನ್ನಿವೇಶವನ್ನು ಓದುತ್ತಿದ್ದಾಗ, ಮುಂದೆ ಪವಾಡವೊಂದು ಸಂಭವಿಸಿ ಮಗುವಿಗೆ ಪುನಃ ಜೀವ ಬಂದು ಬದುಕಿ ಬಿಡುತ್ತದೆ ಎಂದೇ ಎಣಿಸಿದ್ದೆ.

ನಮ್ಮ ಸನಾತನ ಧರ್ಮದ ಅನೇಕ ಯತಿಗಳ ಮತ್ತು ದೇವತಾ ಪುರುಷರ ಕತೆಯಲ್ಲಿ ಆದ ಹಾಗೆ ಯಾವುದೋ ಮಂತ್ರ ಪಠಿಸುವ ಮೂಲಕವೋ ಅಥವಾ ತೀರ್ಥವನ್ನು ಪ್ರೋಕ್ಷಣ್ಯ ಮಾಡುವ ಮೂಲಕವೋ ಅಥವಾ ಇಂತಹದ್ದೇ ಇನ್ನಾವುದೋ ತಂತ್ರದ ಮೂಲಕವೋ ಬುದ್ಧ ಮಗುವಿಗೆ ಜೀವ ತರಿಸಿ ಬಿಡುತ್ತಾನೆ ಮತ್ತು ಎಲ್ಲ ಕತೆಗಳಂತೆ ಇದೂ ಸಹ ಸುಖಾಂತ್ಯವಾಗುತ್ತದೆ ಎಂದೇ ನನ್ನ ನಿರೀಕ್ಷೆ ಇತ್ತು. ನನ್ನ ಆ ನಿರೀಕ್ಷೆ ಈಡೇರದೆ ನನಗೆ ಆಗ ತುಂಬ ನಿರಾಸೆಯಾದದ್ದಂತೂ ನಿಜ. ಇದೇ ಕಾರಣಕ್ಕಾಗಿಯೋ ಏನೊ ನಾನು ಪ್ರಬುದ್ಧನಾಗುವವರೆಗೆ ಬುದ್ಧ ನನ್ನನ್ನು ಆಕರ್ಷಿಸಲೇ ಇಲ್ಲ. ಪವಾಡ ಮಾಡುವ ಸಾಮರ್ಥ್ಯದಿಂದಲೇ ಮಹಾ ಪುರುಷರ ಮಹಿಮೆಯನ್ನು ಅಳೆವ ಕತೆಗಳ ಪರಂಪರೆಯೆ ನಮ್ಮಲ್ಲಿದ್ದುದರಿಂದ ಸತ್ತ ಮಗುವನ್ನು ಬದುಕಿಸಲಾಗದ ಬುದ್ಧ ಇಂಥವರೆಲ್ಲರೆದುರಿಗೆ ಸಪ್ಪೆಯಾಗಿ ಕಂಡು ಬಿಟ್ಟಿದ್ದ.

ಇಂಥ ಕತೆಗಳೆಲ್ಲ ನಿಜವಾಗಿ ಸಂಭವಿಸಲಿ ಅಥವಾ ಸಂಭಸದಿರಲಿ, ಅವು ಸಾಂಕೇತಿಕವಾಗಿ ಕೆಲವು ತತ್ವಗಳನ್ನು ಪ್ರತಿನಿಧಿಸುತ್ತವೆ. ಬುದ್ಧನ ತತ್ವ ಸಿದ್ದಾಂತವು ಅವಾಸ್ತವವನ್ನು ಬದಿಗಿರಿಸಿದ ಮತ್ತು ಪವಾಡದಂತಹ ಗಿಮಿಕ್‍ಗಳನ್ನು ಅವಲಂಬಿಸಿರದ ತತ್ವ ಸಿದ್ದಾಂತವಾಗಿದೆ ಎನ್ನುವ ಅರಿವನ್ನು ಈ ಕತೆ ನಮ್ಮಲ್ಲಿ ಮೂಡಿಸುತ್ತದೆ. ಈ ಕತೆಗೆ ಎರಡು ಆಯಾಮಗಳಿವೆ. ಸಾವಿಲ್ಲದ ಮನೆಯ ಸಾಸಿವೆಯನ್ನು ಹುಡುಕಿ ಹೊರಟ ಮಹಿಳೆ ಕಟು ವಾಸ್ತವ ಸತ್ಯವನ್ನು ಬೋಧನೆಯ ನೆಲೆಯಲ್ಲಲ್ಲದೆ ಅನುಭವವಾಗಿ ಅರಿಯುವುದು ಮತ್ತು ಆ ಮೂಲಕ ಸಮಾಧಾನ ತಾಳುವುದು ಒಂದಾದರೆ, ಇನ್ನೊಂದು ಸನಾತನ ಧರ್ಮ ಪರಂಪರೆಯ ಕತೆಗಳಲ್ಲಿ ಮಹಾತ್ಮನಾಗುವುದಕ್ಕೆ ಪವಾಡ ಮಾಡುವ ಸಾಮರ್ಥ್ಯವೇ ಮಾನದಂಡವಾಗಿದ್ದಾಗ ಅದನ್ನು ತಿರಸ್ಕರಿಸಿ ಮಹಾತ್ಮನಾಗುವುದಕ್ಕೆ ಬೇರೆಯದೇ ಆದ ವ್ಯಾಖ್ಯಾನವನ್ನು ಸೃಷ್ಟಿಸಿಕೊಳ್ಳುವುದು. ಆದ್ದರಿಂದ ಇದು ಈ ಕತೆಯ ಹಿಂದಿರುವ ಬಹು ದೊಡ್ಡ ಧರ್ಮಕಾರಣವೂ ಹೌದು. ಮೊದಲನೇಯದನ್ನು ಓದುವವರೆಲ್ಲರಿಗೂ ಈ ಕತೆ ನೇರವಾಗಿ ಮತ್ತು ಸುಲಭವಾಗಿ ದಾಟಿಸುತ್ತದೆ. ಆದರೆ ಎರಡನೇಯದು ಪರೋಕ್ಷವಾಗಿದ್ದು, ಈ ಕತೆಯ ಬಹು ಗಂಭೀರವಾದ ತಿರುಳಾಗಿದೆ. ಹೀಗೆ ಈ ಕತೆ ಬುದ್ಧ ತತ್ವದ ಎರಡು ಮುಖ್ಯ ಸಾರಾಂಶವನ್ನೇ ಒಳಗೊಂಡಿದೆ.

ಇಡೀ ವಿಶ್ವವನ್ನು ನಿಯಂತ್ರಿಸುವ ದೈವಿಕ ಶಕ್ತಿಯಲ್ಲಿ ಬುದ್ಧ ನಂಬಿಕೆ ಇರದವನಾಗಿದ್ದರಿಂದ ಸಾವು ಅವನ ಪ್ರಕಾರ ಬದಲಾಗುತ್ತಲೇ ಇರುವ ಈ ಜಗತ್ತಿನ ಒಂದು ವಿದ್ಯಮಾನವಾಗಿದ್ದು ಅದನ್ನು ಹಿಮ್ಮುಖ ಗೊಳಿಸಲು ಸಾಧ್ಯವಿಲ್ಲ ಅಥವಾ ಅದರಲ್ಲಿ ಹಸ್ತಕ್ಷೇಪ ಸಲ್ಲ ಎನ್ನುವ ತತ್ವವನ್ನೂ ಮತ್ತು ಸರಿಯಾದ ತಿಳುವಳಿಕೆಯಿಂದ ಮಾತ್ರ ದುಃಖ ಶಮನ ಸಾಧ್ಯ ಎನ್ನುವ ಇನ್ನೊಂದು ತತ್ವವನ್ನು ಬುದ್ಧ ಬೋಧನೆಯ ಮೂಲಕ ಮಾಡದೆ ಆ ಮಹಿಳೆಗೆ ಅನುಭವದ ಮೂಲಕ ಅರಿವು ಮೂಡುವ ಹಾಗೆ ಮಾಡುವುದು – ಹೀಗೆ ಎರಡು ಮಹತ್ವದ ಬುದ್ಧ ತತ್ವಗಳನ್ನು ಈ ಕತೆ ತನ್ನೊಳಗೆ ಹುದುಗಿಸಿ ಕೊಂಡಿದೆ.


  • ಶ್ರೀಪಾದ್ ಹೆಗಡೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading