ನಮಗೆ ಮಲೆನಾಡಿಗರಿಗೆ ಹುಣಸೆ ಉಪಯೋಗಿಸಿ ಗೊತ್ತೇ ಹೊರತು ಹುಣಸೆ ಬೆಳೆದು ಗೊತ್ತಿಲ್ಲ. ಗಾಣದಾಳು ಶ್ರೀಕಂಠ ಅವರ ಸಂಪಾದಕತ್ವದಲ್ಲಿ ‘ಹುಣಸೆ – ಬವಣೆಯಿಂದ ಭಾಗ್ಯದೆಡೆಗೆ’ ಕೃತಿ ಹೊರಬಂದಿದ್ದು, ಆ ಕೃತಿಯ ಕುರಿತು ಮಲೆನಾಡಿನ ನಾಗೇಂದ್ರ ಸಾಗರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಹುಣಸೆ: ಬವಣೆಯಿಂದ ಭಾಗ್ಯದೆಡೆಗೆ
ಸಂಪಾದಕರು : ಗಾಣದಾಳು ಶ್ರೀಕಂಠ
ಪ್ರಕಾಶನ : ನದಿ ಪ್ರಕಾಶನ
ನದಿ ಪ್ರಕಾಶನದವರು ಇತ್ತೀಚೆಗೆ ಪ್ರಕಟಿಸಿದ ಹುಣಸೆ ಬವಣೆಯಿಂದ ಭಾಗ್ಯದೆಡೆಗೆ ಎಂಬ ಅತ್ಯಮೂಲ್ಯ ಹೊತ್ತಿಗೆಯನ್ನು ನನ್ನ ಅವಗಾಹನೆಗೆಂದು ಇತ್ತೀಚೆಗೆ ಕಳುಹಿಸಿದ್ದರು. ಯಥಾಪ್ರಕಾರ ಕೆಲಸದೊತ್ತಡ, ಕಲಸೋಮೇಲೊಗರದ ಮನಸ್ಸು. ಬಿಡುವಿನಲ್ಲಿ ಓದಲೇ ಆಗಿರಲಿಲ್ಲ.

ಇಂದು ಬೆಳಗಾಗುವ ಮುನ್ನವೇ ಗುಡುಗಿನಬ್ಬರ. ಗಾಬರಿ ಬಿದ್ದು ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಕನೆಕ್ಷನ್ ತೆಗೆದದ್ದೊಂದೇ ಬಂತು, ಮಳೆಯಂತೂ ಸದ್ದಿಲ್ಲದೇ ಹೋಗಿತ್ತು. ನಿದ್ದೆಗೆಡಿಸಿದ ಗುಡುಗು ಮಿಂಚಿಗೆ ಹಿಡಿ ಶಾಪ ಹಾಕುತ್ತಿದ್ದವನಿಗೆ ಗಾಣದಾಳು ಶ್ರೀಕಂಠ ಅವರ ಸಂಪಾದಕತ್ವದ ಈ ಪುಸ್ತಕ ಕಣ್ಣಿಗೆ ಬಿತ್ತು. ಕೈಗೆತ್ತಿಕೊಂಡೆ. ತುಂಬಾ ಅಚ್ಚುಕಟ್ಟಾದ ಪುಸ್ತಕ. ಒಳಗೆ ವಿವಿಧ ಲೇಖಕರು ಬರೆದ ಅಮೂಲ್ಯವಾದ ಹತ್ತು ಲೇಖನಗಳು. ಮೊದಲ ಪುಟ ತೆರೆದವನು ಅಷ್ಟೂ ಲೇಖನಗಳನ್ನು ಓದಿಯೇ ಎದ್ದಿದ್ದು.
ನಮಗೆ ಮಲೆನಾಡಿಗರಿಗೆ ಹುಣಸೆ ಉಪಯೋಗಿಸಿ ಗೊತ್ತೇ ಹೊರತು ಹುಣಸೆ ಬೆಳೆದು ಗೊತ್ತಿಲ್ಲ. ಹಾಗಂತ ಅಲ್ಲೊಂದು ಇಲ್ಲೊಂದು ಗಿಡ ಕಾಣಲಿಕ್ಕಿಲ್ಲ ಎಂದಲ್ಲ. ಆದರೆ ಅದೇನು ಮುತುವರ್ಜಿಯಿಂದ ಬಿತ್ತಿದ್ದಲ್ಲ ಬೆಳೆದದ್ದೂ ಅಲ್ಲ. ಪೇಟೆಯಿಂದ ವರ್ಷಕ್ಕೆ ಆಗುವಷ್ಟು ಹುಣಸೆ ಹಣ್ಣನ್ನು ಮಳೆ ಹಿಡಿಯುವ ಮುನ್ನ ತಂದು ಒಣಗಿಸಿ ಕಾಪಿಟ್ಟುಕೊಂಡರೆ ಆಯಿತು. ಹೆಚ್ಚು ಕಡಿಮೆ ದಿನನಿತ್ಯ ನಾವು ಅಡುಗೆಯಲ್ಲಿ, ಖಾದ್ಯ ತಯಾರಿಯಲ್ಲಿ ಹುಣಸೆ ಬಳಸುವುದು ಹೌದು. ಆದರೆ ಅದರ ಬಗ್ಗೆ ಒಂಥರಾ ಉಪೇಕ್ಷೆ. ನಾವು ಅಂತಲ್ಲ ಅನಾಯಾಸವಾಗಿ ಕೃಷಿ ಮಾಡ ಬಹುದಾದ ಬಯಲು ನಾಡಲ್ಲೂ ಹುಣಸೆಯ ಬಗ್ಗೆ ತೀರಾ ಇತ್ತೀಚಿನವರೆಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ ಎಂದು ತಿಳಿದು ಆಶ್ಚರ್ಯವಾಯಿತು.
ಬಯಲುನಾಡಿನವರು ಹಲಸು ಮತ್ತು ಹುಣಸೆ ಬೆಳೆಯುವುದು ಸೊಗಸು ಎಂದು ಹುಣಸೆಯ ಧ್ಯಾನದಲ್ಲೇ ಇರುವ ಎಚ್.ಜೆ. ಪದ್ಮರಾಜು ಅವರಿಗೆ ಈ ಪುಸ್ತಕವನ್ನು ಅರ್ಪಿಸಿದ ಗಾಣಧಾಳು ಶ್ರೀಕಂಠ ಅವರ ಮನದೊಳಗಿನ ತಾತ್ಪರ್ಯ ಪುಸ್ತಕದೊಳಗಿನ ಹತ್ತು ಲೇಖನಗಳನ್ನು ಓದಿದಾಗ ವೇದ್ಯವಾಗುತ್ತದೆ.
ಬರದ ನೆಲದ ಭಾರತದ ಖರ್ಜೂರ ಎಂದು ಗಾಣಧಾಳು ಶ್ರೀಕಂಠ ತಮ್ಮ ಆರಂಭಿಕ ಲೇಖನದಲ್ಲಿ ಗಟ್ಟಿ ಮಾತಿನಲ್ಲಿ ಹೇಳಿದ್ದಾರೆ. ಇದರಲ್ಲಿ ಉತ್ಪ್ರೇಕ್ಷೆ ಇಲ್ಲವೇ ಇಲ್ಲ. ನಾವು ಕಂಡು ಕೇಳರಿಯದ ಆಫ್ರಿಕಾ ಮೂಲದ ಹುಣಸೆ ನಮ್ಮಲ್ಲಿಗೆ ಬಂದು ಹೀಗೆ ತಳವೂರಿ ಎಲ್ಲರ ಅಡುಗೆ ಮನೆಯಲ್ಲಿ ಗಟ್ಟಿಯಾಗಿ ನೆಲೆ ಕಂಡ ಈ ಬೆಳೆ ಹೆಚ್ಚು ಮಳೆ ಬೀಳದ ನಾಡಿನಲ್ಲಿ ಒಂಥರಾ ಹೇಳಿಕೆ ಕೇಳಿಕೆ ಇಲ್ಲದ ಬೆಳೆ. ಬದುಕಿಗಾಸರೆ ಆಗುತ್ತೆ ಎಂದು ಬೆಳೆದವರು ಬೆರಳೆಣಿಕೆಯಷ್ಟು. ಬೆಳೆದವನಿಗಿಂತ ಕೊಯ್ಲು ಮಾಡಿಸಿ ಹಸನು ಮಾಡಿಸಿ ಮಾರುಕಟ್ಟೆಗೆ ಮುಟ್ಟಿಸುವ ಗುತ್ತಿಗೆದಾರನಿಗೇ ಹುಣಸೆ ಲಾಭ ತಂದುಕೊಟ್ಟಿದೆ. ಅದನ್ನೇ ಗಾಣಧಾಳು ತಮ್ಮ ಲೇಖನದಲ್ಲಿ ವಿಸ್ತೃತವಾಗಿ ಬರೆದಿದ್ದಾರೆ.. ಎಲ್ಲರೂ ಮನಸ್ಸು ಮಾಡಿದರೆ ಹುಣಸೆ ಬೆಳೆಯ ದಿಕ್ಕು ದೆಸೆ ಬದಲಿಸಬಹುದು ಎಂದು ಹೇಳಿದ್ದಾರೆ. ಎಲ್ಲರೂ ಕೈ ಜೋಡಿಸಿದರೆ ಇದು ಅಸಾಧ್ಯವೇನೂ ಅಲ್ಲ.
ಹಾಗಾದರೆ ಯಾರು ಮನಸ್ಸು ಮಾಡಬೇಕು? ಮುಂದಿನ ಲೇಖನದಲ್ಲಿ ಹುಣಸೆಯಲ್ಲಿ ದೈವ ಬೆಳೆ ಕಂಡ ನಯನಾ ಆನಂದ್ ಅವರು ಮತ್ತು ಆರೈಕೆ ಮಾಡಿದ ಹಾಗೆ ಹುಣಸೆಯಲ್ಲಿ ಆದಾಯ ಕಾಣಬಹುದು ಎಂದ ಡಾ. ಕೆ. ಚಿತ್ತಯ್ಯ ಅವರ ಲೇಖನದಲ್ಲಿ ಹುಣಸೆ ಕಗಷಿಯ ಒಳಗು ಹೊರಗುಗಳನ್ನು ಕಾಣಬಹುದು. ದೇಶದ ಮೊದಲ ರೈತರ ತಳಿ ಲಕ್ಷ್ಮಣ ಹುಣಸೆಯ ಬಗ್ಗೆ ಡಿ.ಎಂ. ಘನಶ್ಯಾಮ ಬರೆದ ಲೇಖನ ನನಗೆ ತುಂಬಾ ಇಷ್ಟ ಆಯಿತು. ತುಮಕೂರು ಜಿಲ್ಲೆಯ ನಂದಿಹಳ್ಳಿ ಗ್ರಾಮದ ಲಕ್ಷ್ಮಣ ಎಂಬ ರೈತ ಬೆಳೆದ ಹುಣಸೆ ಇಳುವರಿಯಲ್ಲಿ ಮಾತ್ರವಲ್ಲದೆ ಅದರ ರುಚಿ, ಅದರಲ್ಲಿರುವ ಪೋಷಕಾಂಶಗಳು, ಸತ್ವ ಇತ್ಯಾದಿಗಳಿಂದ ಅದ್ವಿತೀಯ ಆಗಿದ್ದು ಗಮನಾರ್ಹ. ಇದನ್ನು ವಿಜ್ಞಾನಿಗಳು ಗುರುತಿಸಿ, ರೈತನನ್ನು ಆದರಿಸಿ ತಳಿ ಅಭಿವೃದ್ಧಿ ಮಾಡಿ ಮತ್ತು ಆ ತಳಿಗೆ ಅದೇ ರೈತನ ಹೆಸರು ಇರಿಸಿದ್ದು ಸ್ತುತ್ಯಾರ್ಹ. ಜೊತೆಗೆ ತಾನು ಅಭಿವೃದ್ಧಿ ಪಡಿಸಿ ಮಾರಾಟ ಮಾಡಿದ ಗಿಡದಲ್ಲಿ ಶೇಕಡಾ ಅರವತ್ತರಷ್ಟು ಲಾಭವನ್ನು ಅದೇ ರೈತನಿಗೆ ನೀಡುವ ಒಡಂಬಡಿಕೆ ಮಾಡಿಕೊಂಡಿದ್ದು ಗಮನಾರ್ಹ.
ಇದು ಹುಣಸೆ ಮಾತ್ರವಲ್ಲ ನಮ್ಮ ಮಲೆನಾಡಿನ ಮಿಡಿ ಮಾವಿನಿಂದ ಹಿಡಿದು ಎಲ್ಲಾ ಬಗೆಯ ತೋಟಗಾರಿಕೆ ಮತ್ತು ಕೃಷಿ ಬೆಳೆಗೂ ಅನ್ವಯ ಆಗಬೇಕು. ಆಗ ಮಾತ್ರ ರೈತನಿಗೊಂದು ಮರ್ಯಾದೆ ಸಿಕ್ಕ ಹಾಗೆ. ರಾಜ್ಯದ ತುಮಕೂರು ಮಾತ್ರವಲ್ಲದೆ ಇತರೆಡೆಗಳಲ್ಲಿ ಹುಣಸೆ ಬೆಳೆದ ಮತ್ತು ಬೆಳೆವ ಇನ್ನಿತರ ಆಯಾಮಗಳನ್ನು ಮುಂದಿನ ಲೇಖನಗಳಲ್ಲಿ ಡಿ.ಬಿ. ನಾಗರಾಜು ಮತ್ತು ಡಾ. ಬದರಿ ಪ್ರಸಾದ್ ಬರೆದಿದ್ದಾರೆ.. ಹುಣಸೆ ಬೆಳೆ ಮತ್ತು ಬೆಳವಣಿಗೆ ಅದರ ಮೇಲಿನ ಯಶೋಗಾಥೆಗಳು ಚೆನ್ನಾಗಿ ಪ್ರಸ್ತುತ ಆಗಿದೆ.

ಹಿರಿಯ ಮೌಲ್ಯವರ್ಧಿತ ಪತ್ರಕರ್ತ ಶ್ರೀ ಪಡ್ರೆ ಬರೆಯುವ ಲೇಖನಗಳಿಗೆ ಅದರದೇ ಆದ ವಿಶಿಷ್ಟ ಆಯಾಮ ಇರುತ್ತದೆ. ಈ ಬುಕ್ಕಿನಲ್ಲೂ ಅದಿದೆ.. ಹುಣಸೆಯ ಮೌಲ್ಯವರ್ಧನೆಗೆ ಅನಂತದಷ್ಟು ಅವಕಾಶವಿದೆ ಎನ್ನುವುದನ್ನು ಅವರು ಹಲವು ಯಶೋಗಾಥೆಗಳನ್ನು ಮುಂದಿಟ್ಟು ಸ್ಪೂರ್ತಿದಾಯಕವಾಗಿ ಬರೆದಿದ್ದಾರೆ.. ಹುಣಸೆಯನ್ನು ಧಾರಾಳವಾಗಿ ಬೆಳೆಯುವ ಪ್ರದೇಶದಲ್ಲಿ ಮಾತ್ರವಲ್ಲ, ಎಲ್ಲಿ ಬೇಕಾದರೂ ಮೌಲ್ಯವರ್ಧನೆ ಮಾಡಿ ಗೆಲ್ಲಬಹುದು ಎಂದು ಅವರು ಉದಾಹರಣೆ ಸಹಿತ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹುಲಿಕೆರೆಯ ಪ್ರಾಮಾಣಿಕ ಕೃಷಿಕ, ಅದರಲ್ಲೂ ಅರಣ್ಯ ಬೆಳೆ ಬೆಳೆಯುವಲ್ಲಿ ಗೆದ್ದ ವಿಶ್ವೇಶ್ವರ ಸಜ್ಜನ್ ನಾನು ಮೆಚ್ಚಿದ ವಿಶ್ವಾಸಾರ್ಹ ಮೌಲ್ಯವರ್ಧಕ… ಕೃಷಿಕ ಕೇವಲ ಬೆಳೆ ಬೆಳೆದರಾಗದು ಬೆಳೆಯ ಒಳ ಹೊರಗುಗಳನ್ನು ಅರಿತು ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿ ಗರಿಷ್ಠ ಲಾಭ ಪಡೆಯಬಹುದು ಎಂದು ತೋರಿದ ಸಾಧಕ.. ಹುಣಸೆಯ ಮೌಲ್ಯವರ್ಧನೆ ಮಾತ್ರವಲ್ಲ ಬಹು ವಿಧದ ಕಾಂಬಿನೇಷನ್ ಮೂಲಕ ಗ್ರಾಹಕರ ಮನಸೋಲಿಸಬಹುದು ಎಂದು ತೋರಿಸಿದ ಅವರ ಕುರಿತ ಲೇಖನವನ್ನು ಸ್ವರೂಪಾನಂದ ಕೊಟ್ಟೂರು ಚೆನ್ನಾಗಿ ಬರೆದಿದ್ದಾರೆ.
ಬಯಲು ಸೀಮೆಯ ರೈತರು ಹುಣಸೆಯನ್ನು ವ್ಯವಸ್ಥಿತವಾಗಿ ಬೆಳೆದರೆ ಬವಣೆಯ ಬದುಕಿನಿಂದ ಭಾಗ್ಯದ ಬಾಗಿಲು ತೆರೆವ ಸ್ಥಿತಿಗೆ ಬರಲು ಸಾಧ್ಯ ಎಂದು ಪಿ. ಆರ್. ಶೇಷಗಿರಿರಾವ್ ಅಕ್ಷರಶಃ ಸತ್ಯದ ಮಾತನ್ನು ಹೇಳಿದ್ದಾರೆ.. ಎಲ್ಲವೂ ವ್ಯವಸ್ಥಿತ ಹಳಿಯ ಮೇಲೆ ಬಂದರೆ ಹುಣಸೆಗೆ ಜೋಡಣೆಯಾದ ಎಲ್ಲರೂ ಗೆಲ್ಲುವ ಅವಕಾಶ ಇದೆ ಎಂದು ಅವರು ಹೇಳುತ್ತಾರೆ.. ಇದನ್ನೇ ಹೇಳ ಹೊರಟ ಪುಸ್ತಕ ಹೊರತಂದ ಭಾಗ್ಯವಂತರ ಆಶಯ ಖಂಡಿತಾ ಈಡೇರಲಿ.
ನಾನು ಉದ್ದೇಶ ಪೂರ್ವಕವಾಗಿ ಹುಣಸೆ.ಆಹಾರ ಸಂಸ್ಕ್ರತಿ ಯ ಮೌನ ವೈದ್ಯ ಎಂಬ ಬರಹದ ಬಗ್ಗೆ ಕೊನೆಯಲ್ಲಿ ಬರೆದಿದ್ದೇನೆ. ಆಯುರ್ವೇದ ವೈದ್ಯೆ ಡಾ. ವಸುಂಧರಾ ಭೂಪತಿ ಬರೆದ ಲೇಖನವಿದು. ಲಾಸ್ಟ ಬಟ್ ನಾಟ್ ಲೀಸ್ಟ್ ಎಂಬ ನುಡಿಗಟ್ಟಿನ ಪ್ರತಿರೂಪ. ಹುಣಸೆ ಹಣ್ಣಿನ ಪ್ರತಿ ಅಂಶವೂ ಆಯುರ್ವೇದದ ಪ್ರಕಾರ ಮನುಷ್ಯನಿಗೆ ಹೇಗೆ ಲಾಭದಾಯಕ ಎಂದು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಇದೇ ಲೇಖನದಲ್ಲಿ ಹುಣಸೆ ಚಿಗುರು ಎಲೆಯ ಬಳಕೆ ನಮಗೆ ಮಲೆನಾಡಿನವರಿಗೆ ಬಹಳವೇ ಹತ್ತಿರವಾದದ್ದು.. ಚಿಗುರೆಲೆಯ ಚಟ್ನಿ, ತಂಬುಳಿ, ಸೂಪು, ಸಾಸವೆ, ಅದೂ ಇದೂ ಖಾದ್ಯವಾಗಿ ಉದರಕ್ಕೆ ಸೇರಿ ನಮ್ಮ ದೇಹದ ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ಎನ್ನುವುದನ್ನು ಓದಿದ ಮೇಲೆ ನಮ್ಮ ಹಿತ್ತಿಲಿನಲ್ಲೂ ಒಂದು ಹುಣಸೆ ಮರವಿದ್ದರೆ ಚೆನ್ನ ಎಂದೆನ್ನಿಸುತ್ತದೆ.
ಬೆಳಿಗ್ಗೆ ನಾನು ಮಾಡಿದ್ದೂ ಅದನ್ನೇ ನಾನು ಉದಾಸೀನ ಮಾಡಿಯೂ ತನ್ನ ಪಾಡಿಗೆ ತಾನು ಸೊಂಪಾಗಿ ಬೆಳೆದು ನಿಂತಿದ್ದ ಹುಣಸೆ ಮರದ ಬಳಿಗೆ ಹೋಗಿ ಮರವನ್ನು ಹೆಮ್ಮೆಯಿಂದ ಸವರಿದೆ. ಮರದ ತುಂಬ ಚಿಗುರೆಲೆಯೇ ತುಂಬಿ ಮರ ಆಕರ್ಷಕವಾಗಿ ಕಾಣುತ್ತಿತ್ತು. ಬಹುಶಃ ಇನ್ನು ಕೆಲವೇ ದಿನಗಳಲ್ಲಿ ಮರದ ತುಂಬ ಹೂವರಳಿಸುತ್ತದೆ. ಆಗ ನನ್ನ ಜೇನು ದುಂಬಿಗಳು ಬಲು ಸಂಭ್ರಮದಿಂದ ಹೂವು ಕೊಯ್ಯುವುದನ್ನು ನೋಡುವುದೇ ಸೊಗಸು.
ನಂತರದ್ದು ಮಾತ್ರ ನನ್ನದು ಅಸಹಾಯಕ ನೋಟ. ಒಂದೇ ಒಂದು ಹುಣಸೆ ಕಾಯಿ ಕೂಡ ಕೈಗೆ ದಕ್ಕದಂತೆ ಮಂಗನ ಪಾಲು ಆಗುತ್ತದೆ.. ಒಂದು ಮರವಿದ್ದರೆ ಸಾಕು ಹತ್ತಾರು ಮನೆಯ ಹಿತ ಕಾಯುವಷ್ಟು ಹುಣಸೆ ಫಸಲು ಬರುತ್ತದೆ ಎಂಬ ಅಂಬೋಣ ಬಯಲು ನಾಡಿಗೆ ಸೊಗಸು.. ನನಗೆ ಬಲು ಇಷ್ಟದ ಹುಣಸೆ ಕಾಯಿಯ ತೊಕ್ಕು ಮಾಡಲು ಹೊರ ಊರ ಬೆಳೆಯನ್ನು ನೋಡ ಬೇಕಾದ ಪರಿಸ್ಥಿತಿ ಇದ್ದರೂ ಚಿಗುರೆಲೆಯ ಮೌಲ್ಯವರ್ಧನೆ ವಿಷಯ ತಿಳಿದ ಮೇಲೆ ನಮ್ಮ ಹಿತ್ತಲಿನ ಹುಣಸೆ ಮರ ಇಷ್ಟವೇ ಆಯಿತು.
- ನಾಗೇಂದ್ರ ಸಾಗರ್
