ನಾ ನೋಡಿದ ಸಿನಿಮಾ ‘ಮೈಕೆಲ್’

‘ಮೈಕೆಲ್’ ಸಿನಿಮಾ ಮೈಕೆಲ್ ಜಾಕ್ಸನ್ ರವರ ಕೇವಲ ಸಂಗೀತ ಮತ್ತು ನೃತ್ಯದ ಸಂಭ್ರಮವಲ್ಲ. ಅದು ಅವರ ಒಳಗಿನ ಒಂಟಿತನ ಮತ್ತು ಆತ್ಮದ ಹುಡುಕಾಟದ ಕಥೆಯನ್ನು ಸೂಚಿಸುತ್ತದೆ. ಲೇಖಕರಾದ ಎನ್.ವಿ.ರಘುರಾಂ ಅವರು ಮೈಕಲ್ ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಈ ವಾರ ಬಿಡುಗಡೆಯಾದ ಮೈಕೆಲ್ ಇಂಗ್ಲಿಷ್ ಸಿನಿಮಾ ಜಾಗತಿಕ ಸಂಗೀತದ ದಿಗ್ಗಜ ಮೈಕೆಲ್ ಜಾಕ್ಸನ್ ರವರ ಜೀವನ ಚರಿತ್ರೆಯ ಒಂದಿಷ್ಟು ಭಾಗಗಳನ್ನು ಸುಂದರವಾಗಿ ತೆರೆದಿಡುತ್ತದೆ. ಇದೊಂದು ಜೀವನ ಚರಿತ್ರೆಯನ್ನು ತೆಗೆದಿಡುವ ಸಿನಿಮಾ ಮಾತ್ರ ಆಗಿರದೆ, “ನೆವರ್‌ಲ್ಯಾಂಡ್” ಎಂಬ ತೋಟದ ಮನೆಯ ಸುತ್ತ ಹೆಣೆದಿರುವ ಒಂದು ಮಾನವೀಯ ಕಥೆಯಾಗಿದೆ.

ಏನಿದು “ನೆವರ್‌ಲ್ಯಾಂಡ್” ಎಂದು ಮೊದಲು ನೋಡಬೇಕು. ಜೆ.ಎಮ್ ಭರ್ರೀ (J. M. Barrie) ಬರೆದ ಕಾರ್ಟೂನಿನಲ್ಲಿ ಈ “ನೆವರ್‌ಲ್ಯಾಂಡ್” ಎಂಬುದು ಸಾಹಸ ಮತ್ತು ಕಲ್ಪನೆಗಳಿಂದ ತುಂಬಿದ ಮಾಯಾ ದ್ವೀಪ. ಮಕ್ಕಳು ಎಂದಿಗೂ ದೊಡ್ಡವರಾಗದೇ ಇರುವ ಕಲ್ಪನಾ ದ್ವೀಪ. ಇಲ್ಲಿ ಇರುವ ಮಕ್ಕಳು ಹಾರ ಬಲ್ಲರು, ದರೋಡೆಗಾರನೊಂದಿಗೆ ಹೋರಾಡ ಬಲ್ಲರು. ಇಲ್ಲಿ ಮಕ್ಕಳ ನಡುವೆ ಪೈಪೋಟಿ ಇದೆ. ಇದು ಬಾಲ್ಯದ ಸ್ವಾತಂತ್ರ್ಯ, ಕಲ್ಪನೆ ಮತ್ತು ಕನಸುಗಳ ಪ್ರತೀಕವಾಗಿ ಬಂದಿದೆ. ಎಲ್ಲಾದಕ್ಕೂ ಮಿಗಿಲಾಗಿ ತಾವು ಸಣ್ಣವರಾಗಿಯೇ ಇರುವುದಕ್ಕೆ ಇಚ್ಛೆಸುವ ಮನೋಭಾವ ಇದೆ.

ಸಣ್ಣ ವಯಸ್ಸಿನಲ್ಲೇ ಪ್ರಸಿದ್ಧನಾದ ಮೈಕೇಲ್, ತನ್ನ ವಯಸ್ಸಿನ ಇತರ ಮಕ್ಕಳ ಜೊತೆಗೆ ಬೆರೆಯಲಾಗಲಿಲ್ಲ. ತನ್ನ ಸಾಮಾನ್ಯ ಮಕ್ಕಳ ಜೀವನದಿಂದ ವಂಚಿತನಾದ ಮೈಕೇಲ್, ತನ್ನ ಕನಸಿನ ಲೋಕವನ್ನು “ನೆವರ್‌ಲ್ಯಾಂಡ್” ಎಂಬ ಕಾರ್ಟೂನ್ ಕಥೆಯ ಸುತ್ತ ಕಟ್ಟಿಕೊಳ್ಳಲು ಪ್ರಯತ್ನ ಪಡುತ್ತಾನೆ.

ತಂದೆ ಜೋ ಜಾಕ್ಸನ್ ಕೊಡುವ ಕಠಿಣ ರೀತಿಯ ನೃತ್ಯದ ತರಬೇತಿಯ ದೃಶ್ಯದಿಂದ ಪ್ರಾರಂಭವಾಗುವ ಸಿನಿಮಾ, ನಿಧಾನವಾಗಿ ಮೈಕೇಲ್ ನನ್ನು “ನೆವರ್‌ಲ್ಯಾಂಡ್” ಕಲ್ಪನೆಗೆ ದೂಡುತ್ತದೆ. ನಂತರ ಆತ ಹೇಗೆ ಆ ಕನಸಿನ “ನೆವರ್‌ಲ್ಯಾಂಡ್”ನಲ್ಲಿ ಜೀವನ ಕಟ್ಟಿಕೊಂಡ ಎನ್ನುವುದು ಸಿನಿಮಾದಲ್ಲಿ ಭಾವನಾತ್ಮಕವಾಗಿ ತೆರೆದುಕೊಂಡಿದೆ.

ಈ ಸಿನಿಮಾದ ಗಮನಾರ್ಹ ಅಂಶಗಳಲ್ಲಿ ದೃಶ್ಯ ವೈಭವವೂ ಸೇರಿದೆ. ಭರ್ಜರಿಯಾದ ವೇದಿಕೆಯ ಪ್ರದರ್ಶನಗಳ ಮೂಲಕ ಹೊರಜಗತ್ತಿಗೆ ಕಂಡಿರುವ ನಾಯಕ ಮತ್ತು ಆತನ ವೈಯಕ್ತಿಕ ಕ್ಷಣಗಳ ನಡುವಿನ ವ್ಯತ್ಯಾಸವನ್ನು ಸಿನಿಮಾದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಇವುಗಳು ಮೈಕೆಲ್ ಅವರ ಜೀವನದ ಎರಡು ಮುಖಗಳನ್ನು ತೋರಿಸುತ್ತವೆ. ನಾಯಕನಾಗಿ ನಟಿಸಿರುವ ಜಾಫರ್ ಜಾಕ್ಸನ್ (Jaafar Jackson) ಅವರ ಅಭಿನಯ, ಶೈಲಿ ಮತ್ತು ನೃತ್ಯ ಎಲ್ಲವೂ ಸೇರಿ ನಿಜವಾದ ಮೈಕೆಲ್ ಜಾಕ್ಸನ್ ನವರ ಜೀವನವನ್ನು ಮರು ಸೃಷ್ಟಿ ಮಾಡುವಲ್ಲಿ ಸಿನಿಮಾ ಸಾಕಷ್ಟು ಯಶಸ್ವಿಯಾಗಿದೆ.

ಈ ಸಿನಿಮಾ ಮೈಕೆಲ್ ಜಾಕ್ಸನ್ ರವರ ಕೇವಲ ಸಂಗೀತ ಮತ್ತು ನೃತ್ಯದ ಸಂಭ್ರಮವಲ್ಲ. ಅದು ಅವರ ಒಳಗಿನ ಒಂಟಿತನ ಮತ್ತು ಆತ್ಮದ ಹುಡುಕಾಟದ ಕಥೆಯನ್ನು ಸೂಚಿಸುತ್ತದೆ. ಜನರ ಮುಂದೆ ಮಾಡುವ ಚಮತ್ಕಾರ ಮತ್ತು ಒಳಗಿನ ನಿಶ್ಶಬ್ದ ನೋವಿನ ನಡುವಿನ ಸಂಘರ್ಷವೇ ಈ ಸಿನಿಮಾದಲ್ಲಿ ಮುಖ್ಯವಾಗಿದೆ.

ಮೈಕೆಲ್ ಜಾಕ್ಸನ್ ಅವರ ಹಾಡುಗಳು ಈ ಕಥೆಯ ಭಾವನೆಗಳನ್ನು ಮತ್ತಷ್ಟು ಗಾಢಗೊಳಿಸುತ್ತವೆ. “ಮ್ಯಾನ್ ಇನ್ ದಿ ಮಿರರ್…” (Man in the Mirror..) ಆತ್ಮಪರಿಶೀಲನೆಯ ಸಂಕೇತವಾಗಿದ್ದರೆ, “ಹೀಲ್ ದ ವರ್ಲ್ಡ್…”(Heal the World..) ಮಾನವೀಯತೆಯ ಸಂದೇಶವನ್ನು ನೀಡುತ್ತದೆ. “ಚೈಲ್ಡ್ ಹುಡ್….”(Childhood…) ಗೀತೆ ಕಳೆದುಹೋದ ಬಾಲ್ಯದ ಹಂಬಲವನ್ನು ವ್ಯಕ್ತಪಡಿಸುತ್ತದೆ. ಈ ಹಾಡುಗಳು ಕೇವಲ ಸಂಗೀತವಾಗಿ ಬಂದಿಲ್ಲದೆ, ಮೈಕೆಲ್ ಕಥೆಯ ಆತ್ಮವೇ ಆಗಿವೆ.

ಮೈಕೆಲ್ ರವರ ಬಾಲ್ಯದ ಜೀವನ ಅವರ ಮುಂದಿನ ಜೀವನವನ್ನು ಅರ್ಥಮಾಡಿಕೊಳ್ಳಲು ಮುಖ್ಯವಾದ ಕೀಲಿಕೈ. ಬಾಲ್ಯದಲ್ಲಿ ಅನುಭವಿಸಿದ ಒತ್ತಡಗಳು ಮತ್ತು ನಿರೀಕ್ಷೆಗಳು, ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ಬಾಲ್ಯದಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವ ಮೈಕೆಲ್ ತಂದೆಯ ಪಾತ್ರದಲ್ಲಿ ‘ಕೊಲ್ಮನ್ ಡೆಮಿಂಗೊ” (Colman Domingo), ತಾಯಿ ‘ಕ್ಯಾಥೆರಿನ್ ಜಾಕ್ಸನ್’ (Katherine Jackson) ಪಾತ್ರದಲ್ಲಿ ‘ನಿಯಾ ಲಾಂಗ್'(Nia Long) ಜೀವಿಸಿದ್ದಾರೆ. ಬಾಲಕ ಮೈಕೆಲ್ ಪಾತ್ರದಲ್ಲಿ ‘ರೇಯಾನ್ ಹಿಲ್’ (Rhyan Hill) ಪಾತ್ರಕ್ಕೆ ನ್ಯಾಯ ಒದಗಿಸಿ ಗಮನ ಸೆಳೆಯುತ್ತಾರೆ. ಆದರೆ ಬಾಲ್ಯದಲ್ಲಿದ್ದ ಒತ್ತಡದ ಹಿನ್ನೆಲೆಯಿಂದ ನೋಡಿದಾಗ, ಮುಂದೆ ಮೈಕೆಲ್ ನಿರ್ಮಿಸಿದ ನೆವರ್ ಲ್ಯಾಂಡ್ ಎನ್ನುವ ದೊಡ್ಡ ತೋಟದ ಮನೆ (Neverland Ranch) ಒಂದು ಕನಸಿನ ಲೋಕವನ್ನೇ ನಿಜ ಜೀವನದಲ್ಲಿ ನಿರ್ಮಿಸುವ ಪ್ರಯತ್ನವಾಗಿ ಕಾಣುತ್ತದೆ. ಇದರಲ್ಲಿ ನಿರ್ದೇಶಕ ‘ಆಂಟೋನಿ ಫುಕ್ವಾ’ (Antoine Fuqua) ಯಶಸ್ವಿಯಾಗಿದ್ದಾರೆ. ಹಾಗಾಗಿ ಈ ಚಿತ್ರವು ಕೇವಲ ಮಹತ್ವದ ಘಟನೆಗಳ ಸರಮಾಲೆಯಾಗದೆ, ಪ್ರೇಕ್ಷಕರಿಗೆ ಒಂದು ಅನುಭವವಾಗಿ ಮಾರ್ಪಾಡಾಗುತ್ತದೆ.

ಒಟ್ಟಾರೆ, ಮೈಕೆಲ್ ಚಿತ್ರ ಒಂದು ಗಾಢವಾದ ಮಾನವೀಯ ಕಥೆಯನ್ನು ಅನಾವರಣ ಮಾಡುತ್ತದೆ.‌ ಇದು ಖ್ಯಾತಿ, ನೋವು, ಸಂಗೀತ ಮತ್ತು ಕನಸುಗಳ ನಡುವಿನ ಸಂಘರ್ಷವನ್ನು ತೆರೆದಿಡುತ್ತದೆ. “ನೆವರ್‌ಲ್ಯಾಂಡ್‌” ಕಾರ್ಟೂನ್ ಕಥೆಯಂತೆ, ಈ ಚಿತ್ರವೂ ನಿಜ ಮತ್ತು ಕಲ್ಪನೆಯ ನಡುವಿನ ಒಂದು ಜಗತ್ತನ್ನು ತೋರಿಸುತ್ತದೆ. ಸಿನಿಮಾದಲ್ಲಿ ಕನಸುಗಳು ಹುಟ್ಟುವುದನ್ನು ನೋಡಬಹುದು ಮತ್ತು ಅದರ ಜೊತೆಗೆ ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಹೊರಟಾಗ ತೆರ ಬೇಕಾದ ಬೆಲೆ ಕೂಡ ಗೋಚರಿಸುತ್ತದೆ.

“ನನಗೆ ಸಂಗೀತವು ಲೋಕವನ್ನು ಬದಲಾಯಿಸಬಹುದು, ಪ್ರೀತಿ, ಸಂತೋಷ ಮತ್ತು ಶಾಂತಿಯನ್ನು ಹರಡಬಹುದು ಎಂದು ಅನಿಸುತ್ತದೆ. ಅದೇ ಲೋಕವು ಅದರ ಮಾಯೆಯನ್ನು ಅನುಭವಿಸಬೇಕು ಎಂಬುದು ನನ್ನ ಆಶೆ ” ಎಂದು ಮೈಕೆಲ್ ಹೇಳುವ ಮಾತುಗಳು ಸಿನಿಮಾ ಮುಗಿದ ಮೇಲೂ ಕಿವಿಯಲ್ಲಿ ರಿಂಗಣಿಸುತ್ತದೆ.

ಇದೊಂದು ಮೈಕೆಲ್ ಜೀವನದ ಧನಾತ್ಮಕ ವಿಷಯಗಳನ್ನು ಕೇಂದ್ರೀಕರಿಸಿ ಬರೆದ ಚಿತ್ರ ಕಥೆಯನ್ನು ಹೊಂದಿದೆ. ಹಾಗಾಗಿ ಎಲ್ಲರ ಮನ ಮುಟ್ಟುತ್ತದೆ. ಸಾಧ್ಯವಾದರೆ ಒಮ್ಮೆ ಚಲನಚಿತ್ರ ಮಂದಿರದಲ್ಲಿ ಚಿತ್ರ ನೋಡಿ.


  • ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading