ಶತಾವಧಾನಿ ಆರ್ ಗಣೇಶ್ ಅವರಿಗೆ ಭಾರತ ಸರ್ಕಾರ ಕೊಡ ಮಾಡುವ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದ್ದಲ್ಲದೆ ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ಹಾಗೂ ಬಾದರಾಯಣ ವ್ಯಾಸ ಪುರಸ್ಕಾರವೇ ಮೊದಲಾದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಸಾಧನೆಯ ಕುರಿತು ಲೇಖಕರಾದ ಚೇತನ ಭಾರ್ಗವ ಅವರು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಶತಾವಧಾನಿ ಆರ್ ಗಣೇಶ್ ರವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಅಪರೂಪದ ಪ್ರತಿಭೆ. ಅವಧಾನ ಎಂಬುದು ಸ್ಮರಣೆ, ತರ್ಕ, ಸೃಜನಶೀಲತೆ ಮತ್ತು ಆಶು ಕವನ ಕಾವ್ಯದ ಸಂಗಮ. ಈ ವಿಶಿಷ್ಟ ವಿದ್ಯೆಯಲ್ಲಿ ಶತಾವಧಾನ ಸಾಧನೆಗೈದ ಕೀರ್ತಿ ಆರ್ ಗಣೇಶ್ ಅವರದ್ದು. ಒಂದೇ ಸಮಯದಲ್ಲಿ ನೂರಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ ಛಂದಸ್ಸು ಅರ್ಥ ಅಲಂಕಾರಗಳೊಂದಿಗೆ ಕಾವ್ಯ ರಚಿಸುವುದು ಅವರ ಅಪೂರ್ವ ಸಾಮರ್ಥ್ಯ.
ಡಾಕ್ಟರ್ ಆರ್ ಗಣೇಶ್ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಎಂ ಎಸ್ಸಿ, ಎಮ್ಎ, ಡಿ ಲಿಟ್, ಸಂಸ್ಕೃತ, ಕನ್ನಡ, ತೆಲುಗು, ತಮಿಳು, ಹಿಂದಿ, ಪ್ರಾಕೃತ ಭಾಷೆಗಳಲ್ಲಿ ವಿಶಾರದರು. ಪಾಲಿ, ಗ್ರೀಕ್, ಲ್ಯಾಟಿನ್ ಭಾಷೆಗಳಲ್ಲೂ ಸಿದ್ಧ ಹಸ್ತರು. ಭಾರತೀಯ ಸಂಸ್ಕೃತಿ, ವಿಜ್ಞಾನ, ಆಧ್ಯಾತ್ಮ, ಕಲೆ, ಇತಿಹಾಸ ಹಾಗೆಯೇ ಸಾಹಿತ್ಯ ಪ್ರಕಾರಗಳಲ್ಲಿ ಅಲಂಕಾರ, ಛಂದಸ್ಸು, ವೇದ-ವೇದಾಂತ, ವ್ಯಾಕರಣ, ಧರ್ಮಶಾಸ್ತ್ರ, ನೃತ್ಯ-ನಾಟಕ ಯಕ್ಷಗಾನ, ಚಿತ್ರ, ಶಿಲ್ಪ ವಿಷಯ ಜ್ಞಾನದಲ್ಲಿ ಅಪರಿಮಿತ ಪ್ರಾವೀಣ್ಯತೆ ಹೊಂದಿದ್ದಾರೆ. ಭಾರತೀಯ ವಿಜ್ಞಾನ ತಂತ್ರಜ್ಞಾನ, ಇತಿಹಾಸ, ಸೌಂದರ್ಯ ಮೀಮಾಂಸೆ ಮತ್ತು ಮೌಲ್ಯ ಮೀಮಾಂಸೆಗಳಲ್ಲಿ ಪರಿಣಿತಿ ಹೊಂದಿರುವ ಆರ್ ಗಣೇಶ್ ಅವರ ಕಾಲಘಟ್ಟದಲ್ಲಿ ಇರುವ ನಾವು ಪುಣ್ಯವಂತರೆ ಸರಿ.

ಎಂಟು ಭಾಷೆಗಳಲ್ಲಿ ಸಾಹಿತ್ಯ ರಚಿಸಬಲ್ಲ ಗಣೇಶ್ ಅವರು ಆಶು ಕವಿತೆ, ಚಿತ್ರ ಕಾವ್ಯ, ಮುಂತಾದ ಪ್ರಯೋಗಶೀಲ ಕಾರ್ಯಕ್ರಮಗಳಿಂದಲೂ ಸುಪ್ರಸಿದ್ದರು. ಇವರು ಸಾವಿರದ ಮುನ್ನೂರಕ್ಕೂ ಹೆಚ್ಚಿನ ಅಷ್ಟಾವಧಾನ ಕಾರ್ಯಕ್ರಮಗಳನ್ನು ಐದು ಶತಾವಧಾನಗಳನ್ನು ನೆರವೇರಿಸಿದ್ದಾರೆ. 24 ಗಂಟೆಯ ಸತತವಾದ ಆಶು ಕವಿತಾ ರಚನೆಯ ವಿಶ್ವ ದಾಖಲೆ ಇವರ ಹೆಸರಲ್ಲಿದೆ. ಹಲವು ಹತ್ತು ವಿಭಿನ್ನ ವಿಷಯಗಳನ್ನು ಕುರಿತಂತೆ ಸಹಸ್ರಾರು ಪ್ರವಚನಗಳು, ಅರವತ್ತಕ್ಕೂ ಹೆಚ್ಚು ಗ್ರಂಥಗಳು ಶ್ರೀಯುತರಿಂದ ಮೂಡಿ ಬಂದಿವೆ. ಅಲ್ಲದೆ ನೂರಾರು ಸಂಶೋಧನಾ ಲೇಖನಗಳು ಇವರ ಲೇಖನಿಯಿಂದ ಹರಿದು ಬಂದಿವೆ.
ಇತ್ತೀಚೆಗಷ್ಟೇ ಭಾರತ ಸರ್ಕಾರ ಕೊಡ ಮಾಡುವ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಶ್ರೀಯುತರು ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ಹಾಗೂ ಬಾದರಾಯಣ ವ್ಯಾಸ ಪುರಸ್ಕಾರವೇ ಮೊದಲಾದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಲ್ಲಿ ಈ ಪ್ರಶಸ್ತಿಗಳು ಅವರಿಗೆ ದೊರಕಿ ತಮ್ಮ ಮೌಲ್ಯಗಳನ್ನು ಹೆಚ್ಚಿಸಿಕೊಂಡಿವೆ ಎಂದರೆ ಅತಿಶಯೋಕ್ತಿ ಆಗಲಾರದು. ಹಲವು ಧಾರ್ಮಿಕ ಸಾಂಸ್ಕೃತಿಕ ಸಂಸ್ಥೆಗಳ ಸನ್ಮಾನ ಸತ್ಕಾರಗಳು ಗಣೇಶ್ ಅವರನ್ನು ಅರಸಿಕೊಂಡು ಬಂದಿವೆ.
ಅಷ್ಟಾವಧಾನವಾಗಲಿ ಶತಾವಧಾನವಾಗಲಿ, ಸಾಮಾನ್ಯ ಕಲೆಯಲ್ಲ. ಸ್ಮರಣೆ, ಏಕಾಗ್ರತೆ ಸೃಜನಶೀಲತೆ ಹಾಗೂ ಬಗೆ ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ಪ್ರಾವೀಣ್ಯತೆ ಬೇಡುವ ಅಪರೂಪದ ವಿಶಿಷ್ಟವಾದ ಭಾರತೀಯ ಕಲೆಗಳಲ್ಲೊಂದು. ಕಾವ್ಯ ರಚನೆ, ಗಣಿತ, ತರ್ಕ, ಭಾಷಾ ಶುದ್ಧತೆ ಮತ್ತು ಛಂದಸ್ಸನ್ನು ಸಮರ್ಪಕವಾಗಿ ಉಪಯೋಗಿಸುತ್ತಾ ಒಂದೇ ಸಮಯದಲ್ಲಿ ಎಂಟು ಬಗೆಯ ಸವಾಲುಗಳಿಗೆ ಉತ್ತರಿಸುವ ಈ ವಿದ್ಯೆ ಸುಲಭವಾಗಿ ಸಾಮಾನ್ಯಮಾತ್ರರಿಗೆ ಒಲಿಯುವಂತದ್ದಲ್ಲ. ಅಸಾಧಾರಣ ಪಾಂಡಿತ್ಯ, ಸ್ಮರಣಶಕ್ತಿ, ಭಾಷಾ ಪ್ರಾವೀಣ್ಯತೆ ಛಂದೋಬದ್ಧತೆ ಹಾಗೂ ನೂರಾರು ಕೃತಿಗಳನ್ನು ಓದಿ ನೆನಪಿಟ್ಟುಕೊಂಡು ಸೂಕ್ತ ಸಮಯದಲ್ಲಿ ಮರುಬಳಕೆ ಮಾಡುವಂತಹ ಚಾತುರ್ಯ, ಒಟ್ಟಿನಲ್ಲಿ ಈಗಿನ ಮುಂದುವರೆದ ತಂತ್ರಜ್ಞಾನದ ಭಾಗವೆ ಆದ ಸೂಪರ್ ಕಂಪ್ಯೂಟರ್ ಮಾಡಬಹುದಾದಂತಹ ಕೆಲಸವನ್ನು ಲೀಲಾಜಾಲವಾಗಿ ನಿಭಾಯಿಸುವ ಈ ಕಲೆ, ಬಲು ಅಪರೂಪವಾದದ್ದು. ಇದನ್ನು ಸರಳವಾಗಿ ವಿನಯವಾಗಿ ಎಲ್ಲೂ ಚ್ಯುತಿ ಬಾರದಂತೆ ಅಳವಡಿಸಿಕೊಂಡು ಅಷ್ಟಾವಧಾನ ಶತಾವಧಾನ ನಡೆಸಿಕೊಡುವ ಕನ್ನಡದವರೇ ಆದ ಆರ್ ಗಣೇಶ್ ರವರು ಅವಧಾನ ಕಲೆಯನ್ನು ಕನ್ನಡಿಗರಿಗೆ ಪರಿಚಯಿಸಿ ಅದಕ್ಕೊಂದು ನೆಲೆ ಬೆಲೆಯನ್ನು ತಂದುಕೊಟ್ಟ ಆಧ್ಯರು.
ಅಷ್ಟಾವಧಾನದಲ್ಲಿ ಅವಧಾನಿಗಳಿಗೆ ವಿಭಿನ್ನವಾದ ಎಂಟು ಬಗೆಯ ವಿಷಯಗಳಲ್ಲಿ ಪಂಡಿತರು ಇಲ್ಲಿ ಪೃಚ್ಛಕರ ಪಾತ್ರ ವಹಿಸಿ ಸವಾಲುಗಳನ್ನು ನೀಡುತ್ತಾರೆ. ಇದು ನಿಷೇಧಾಕ್ಷರ, ದತ್ತಪದಿ, ಕಾವ್ಯವಾಚನ, ಅಪ್ರಸ್ತುತ ಪ್ರಸಂಗ, ನ್ಯಸ್ತಾಕ್ಷರಿ, ಆಶು ಕವಿತ್ವ, ಸಂಖ್ಯಾ ಬಂಧ, ಘಂಟಾವಾದನ, ಪುಷ್ಪಗಣನ,ಚಿತ್ರಬಂಧ ಹೀಗೆ ಛಂದಸ್ಸಿಗೆ ಅನುಗುಣವಾಗಿ ಕಾವ್ಯ ರಚಿಸುವುದು, ಗಣಿತ, ತರ್ಕ ಮುಂತಾದ ತೂಕವುಳ್ಳ ವಿಚಾರಗಳಲ್ಲದೆ ಲಘು ಹಾಸ್ಯದಾಟಿಯ ಉತ್ತರಗಳನ್ನು ಅಪ್ರಸ್ತುತ ಪ್ರಸಂಗಕ್ಕೆ ನೀಡುವುದು ಹೀಗೆ ಹಲವು ವಿಚಾರ, ವೈವಿಧ್ಯಗಳನ್ನು ಒಳಗೊಂಡಿದೆ. ಇದು ಒಬ್ಬ ವ್ಯಕ್ತಿಗೆ ಎಂಟು ಬಗೆಯ ದಾರದ ಉರುಳುಗಳನ್ನು ಹಾಕಿದಾಗ ಆತ ಅದನ್ನು ಚಾಕಚಕ್ಯತೆಯಿಂದ ಒಂದೊಂದಾಗಿ ಬಿಡಿಸಿಕೊಂಡು ಬರುವ ಬಗೆಗೆ ಹೋಲಿಸಬಹುದು. ಎಂಟೂ ಬಗೆಯ ಸಮಸ್ಯೆಗಳನ್ನು ಒಂದೇ ಸಮಯದಲ್ಲಿ ನಿಭಾಯಿಸುವುದು ಅಷ್ಟಾವಧಾನದ ವೈಶಿಷ್ಟ್ಯ. ಅಪಾರವಾದ ಜ್ಞಾನ, ಪಾಂಡಿತ್ಯ ಸ್ಮರಣಶಕ್ತಿ ಹಾಗೂ ಕಲೆಯ ಬಗ್ಗೆ ಗೌರವ ವಿನಯವಂತಿಕೆ ಇದ್ದರೆ ಮಾತ್ರ ಇದರಲ್ಲಿ ಪ್ರಾವೀಣ್ಯತೆ ಸಾಧ್ಯ. ಇದು ನಮ್ಮ ಸಾಹಿತ್ಯ ಹಾಗೂ ಕಲಾ ಶ್ರೀಮಂತಿಕೆಯನ್ನು ಪ್ರಚುರ ಪಡಿಸುತ್ತದೆ. ಈ ಅಪರೂಪದ ವಿದ್ಯೆಯಲ್ಲೇ 1300 ಕ್ಕಿಂತಲೂ ಹೆಚ್ಚಿನ ಅಷ್ಟಾವಧಾನಗಳನ್ನು ನಡೆಸಿರುವ ಆರ್ ಗಣೇಶ್ ಅವರ ಸಾಧನೆ ಅದ್ವಿತೀಯ. ತಮ್ಮ 19ನೇ ವಯಸ್ಸಿನಲ್ಲಿ ಮೊದಲ ಅಷ್ಟಾವಧಾನ ನಡೆಸಿದ್ದ ಗಣೇಶ್ ಸುಮಾರು ಎಂಟು ಗಂಟೆ ಅವಧಿಗೆ ನಡೆಯುವ ಅಷ್ಟಾವಧಾನವನ್ನು 1/2 ಗಂಟೆಯಲ್ಲಿಯೇ ಮುಗಿಸಿ , ಮೂರು ದಿವಸಗಳು ನಡೆಯುವ ಶತಾವಧಾನವನ್ನು ಒಂದೇ ದಿನದಲ್ಲಿ ಮುಗಿಸಿದ ಅಪರೂಪದ ದಾಖಲೆಯನ್ನು ತಮ್ಮ ಮುಡಿಗೆ ಏರಿಸಿಕೊಂಡಿರುತ್ತಾರೆ.

ಎರಡಕ್ಷರ ಹೆಚ್ಚಿಗೆ ಓದಿದೊಡನೆ ತಮ್ಮನ್ನು ಮೀರಿಸಿದವರಿಲ್ಲ ಎಂದು ಗತ್ತು ತೋರಿಸುವ ಈಗಿನ ಅರೆಬೆಂದ ಪಂಡಿತೋತ್ತಮರ ನಡುವೆ ಪುರುಷ ಸರಸ್ವತಿ ಎಂದೇ ಎಲ್ಲರಿಂದ ಗುರುತಿಸಿಕೊಳ್ಳುವ ಆರ್ ಗಣೇಶ್ ಅವರು ನಡೆದಾಡುವ ವಿಶ್ವಕೋಶಕ್ಕೆ ಸಮನಾಗಿದ್ದರೂ ವ್ಯಕ್ತಿತ್ವದಲ್ಲಿ ಬಹಳ ಸರಳ, ಸಜ್ಜನರು, ನಿಗರ್ವಿಗಳು ಹಾಗೂ ಸದಾ ಮುಗುಳ್ನಗೆಯ ಸ್ನೇಹ ಪರರು. ಇವರ ಸ್ನೇಹದ ಗುಣ ಎಲ್ಲರ ವಿಷಯದಲ್ಲೂ ವಿಸ್ತರಿಸಿದೆ.
ಹಲವು ಹತ್ತು ವಿಷಯಗಳನ್ನು ಬಲ್ಲವರಾಗಿದ್ದರೂ ಯಾರಲ್ಲಿಯೂ ಭೇದವೆಣಿಸದೆ ತಮ್ಮ ಮನೆಯ ಚರಂಡಿ ಸ್ವಚ್ಛ ಮಾಡುವವರಿಗೆ, ಇಂಟರ್ನೆಟ್ ವ್ಯವಸ್ಥೆ ಮಾಡುವವರಿಗೆ ಗಣೇಶ್ ತಾವು ಕುಡಿಯುವ ಲೋಟದಲ್ಲಿಯೇ ಟೀ ಮಾಡಿಕೊಡುತ್ತಾರೆ. ಸಕ್ಕರೆ ಸರಿಯಾಗಿ ಇದೆಯೇ, ಎಂದು ಕೇಳಿ ಬಿಸಿಯಾರುವ ಮುನ್ನ ಕುಡಿಯಿರಿ ಎಂದು ಉಪಚಾರಿಸುತ್ತಾರೆ. ಕಸ ಎತ್ತಲು ಬರುವವರಿಗೆ ಬೇರೆಯವರು ಕೊಡುವುದಕ್ಕಿಂತ ಹೆಚ್ಚು ಹಣವನ್ನು ಕೊಡುತ್ತಾರೆ ಹಾಗೆ ಕೊಡುವಾಗ ತೀಸ್ಕೋ ಎಂದು ಅವರ ಆಡು ಭಾಷೆಯಲ್ಲಿಯೇ ವ್ಯವಹರಿಸಿ ಕಷ್ಟ ಸುಖ ವಿಚಾರಿಸುತ್ತಾರೆ.
ಇನ್ನೊಂದು ಘಟನೆ ಅವರ ಸರಳತೆಗೆ ಸಣ್ಣ ಉದಾಹರಣೆಯಾಗಿದೆ ಒಮ್ಮೆ ಬೆಂಗಳೂರಿನ ಕುಮಾರವ್ಯಾಸ ಮಂಟಪದಲ್ಲಿ “ದುರ್ಗಾಸಪ್ತಶತಿಯನ್ನು” ಕುರಿತ ಅವರ ಭಾಷಣವನ್ನು ಒಬ್ಬ ವೃದ್ಧ ಭಿಕ್ಷುಕಿ ಹೊರಗೆ ನಿಂತು ಕೇಳಿದಳಂತೆ. ಭಾಷಣ ಮುಗಿದ ಬಳಿಕ ಕಣ್ಣಲ್ಲಿ ನೀರು ತುಂಬಿಕೊಂಡು ಬಂದು ಎಷ್ಟು ಪಸಂದಾಗಿ ಮಾತಾಡ್ದೆ ಮಗಾ… ದೇವಿನೇ ಕಣ್ಮುಂದೆ ಬಂದಂಗಾಯ್ತು ನಿಂಗೆ ಕೊಡುಕೆ ನಂತಾವ ಇರೋದು ಈ ನಾಕಾಣೆ ಮಾತ್ರ ಇಕ! ಎನ್ನುತ್ತಾ ಒಂದು ನಾಣ್ಯವನ್ನು ಕೈಗೆ ಇಟ್ಟಳಂತೆ. ಭಿಕ್ಷುಕಿ ಕೊಟ್ಟ ಕಾಸನ್ನು ಏನು ತೆಗೆದುಕೊಳ್ಳುವುದು ಎಂದು ತಾತ್ಸಾರ ಮಾಡದೆ ಗಣೇಶ್ ಅವರು ಕಣ್ಣುಗಳಿಗೆ ಒತ್ತಿಕೊಂಡು ಆಕೆಯ ಆಶೀರ್ವಾದ ಸ್ವೀಕರಿಸಿದರು. ಇಂದಿಗೂ ಅವರಲ್ಲಿ ಆ ನಾಣ್ಯ ಇರುವುದನ್ನು ಕಾಣಬಹುದು.
ಅವಧಾನ ಕಲೆ ಹಾಗೂ ಆರ್ ಗಣೇಶ್ ಅವರ ಬಗ್ಗೆ ಸುಮಾರು 35 ವರ್ಷಗಳ ಹಿಂದೆ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಪತಿಯ ತಂದೆಯವರಾದ ರಾಮಮೂರ್ತಿ ತೆಮೆಮನೆಯವರು ಬರೆದ ಲೇಖನವನ್ನು ಓದಿದಾಗ ಶ್ರೀಯುತರ ವಿಚಾರ ತಿಳಿದ ನನಗೆ ಬೆರಗು ಮೂಡಿತ್ತು. ಇಂಥ ಸರಳತೆ. ಸಜ್ಜನಿಕೆಯ ಸಾಕಾರ ರೂಪರಾದ ಗಣೇಶ್ ಅವರ ಕಾಲಮಾನದಲ್ಲಿಯೇ ನಾವಿದ್ದೇವೆ, ಅವರ ಪಾಂಡಿತ್ಯಕ್ಕೆ ವಾಕ್ಝರಿಗೆ ಅವರ ವಿಚಾರಧಾರೆ ಗಳಿಗೆ ಪ್ರತ್ಯಕ್ಷ ದರ್ಶಿಗಳಾಗಿದ್ದೇವೆ ಎಂಬುದೇ ನಮಗೆ ಹೆಮ್ಮೆ ತರುವ ವಿಷಯ. ಇವರ ಜ್ಞಾನ ಧಾರೆ ಹೀಗೆಯೇ ಹರಿಯುತ್ತಿರಲಿ ಹಾಗೂ ನಾಡಿನ ಜನಮಾನಸವನ್ನು ಬೆಳಗುತ್ತಿರಲಿ. ಶಾಲಾ ಪಠ್ಯ ಪುಸ್ತಕಗಳಲ್ಲಿ ಶ್ರೀಯುತರ ವಿಚಾರಗಳನ್ನು ಮಕ್ಕಳು ಅಭ್ಯಾಸ ಮಾಡು ವಂತಾಗಲಿ ಎಂಬುದೇ ಕಿರಿಯರಾದ ನಮ್ಮ ಆಶಯ.
- ಚೇತನ ಭಾರ್ಗವ – ಅರಮನೆತೋಟ
