“ಪಾಪದವರು” ಮತ್ತು “ಒಳ್ಳೆಯವರು” ಬಹುತೇಕ ಬೇರೆ ಶಬ್ಧಗಳು. ತೀರಾ ಪಾಪದವರಾಗಿರುವುದೂ ಸಹ ಒಳ್ಳೆಯದಲ್ಲ. ಹಾಗಿದ್ದರೆ ಒಳ್ಳೆಯವರಾಗಿರಲು ಹೇಗಿರಬೇಕು? ಪಶು ಪ್ರಾಧ್ಯಾಪಕರಾದ ಡಾ. ಎನ್ ಬಿ.ಶ್ರೀಧರ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ನಮ್ಮದೇ ಸಮೂಹದಲ್ಲಿ ಖಾಸಗಿಯಾಗಿ ಚರ್ಚೆಯೊಂದು ನಡೆಯುತ್ತಿತ್ತು. ಅದರ ವಿಷಯ ಇಷ್ಟೆ. ಯಾರಿಗೋ ಆತ ಅಥವಾ ಆಕೆ ” ಒಳ್ಳೆಯವನು/ಒಳ್ಳೆಯವಳು” ಎನ್ನಲು ಇರಬೇಕಾದ ಮಾನದಂಡಗಳು ಏನು? ನಾನು ಅಥವಾ ನೀವು ಅಂದರೆ ಈ ಲೇಖನ ಓದುವ ಎಲ್ಲರೂ ಒಳ್ಳೆಯವರು ಎನ್ನಿಸಿಕೊಳ್ಳಲು ಹೇಗಿರಬೇಕು ಎಂಬ ಬಗ್ಗೆ. ಮತ್ತೆ? ನಾನು ನೀವು ಒಳ್ಳೆಯವರಾಗಬೇಕಲ್ಲವೇ?. ಇದಕ್ಕೊಂದು ಮಾನದಂಡ ಬೇಕಲ್ಲ? ನಮ್ಮಲ್ಲಿ ಯಾರಿಗೆ “ಕೆಟ್ಟವನು/ಕೆಟ್ಟವಳು” ಎಂದು ಹೇಳಿಸಿಕೊಳ್ಳಲು ಇಷ್ಟ? ಅಪರಾಧ ಮಾಡಿ ಕೆಟ್ಟವರಾಗಿ ಜೈಲಿಗೆ ಹೋದ ಕೈದಿಗಳೇ “ಸನ್ನಡತೆ” ಅಥವಾ ಒಳ್ಳೆಯವರಾದಾಗ ಅವರನ್ನು ಬಿಡುಗಡೆ ಮಾಡುತ್ತಾರೆ. ಹಾಗಿದ್ರೆ ನಾವೂ ಸಹ ಒಳ್ಳೆಯವರಾಗಲು ಪ್ರಯತ್ನಿಸಬೇಕಲ್ಲ? ಒಳ್ಳೆಯವರಾಗಿರಲು ಹೇಗಿರಬೇಕು ಎಂಬ ಪ್ರಶ್ನೆ ಕೇಳಿದಾಗ ಬಂದ ಉತ್ತರಗಳು ಇಲ್ಲಿವೆ. ಇದಕ್ಕೆ ನೀವೂ ನಿಮ್ಮಲ್ಲಿನ ಸಲಹೆಯನ್ನು ಸೇರಿಸಬಹುದು.
• ಒಳ್ಳೆಯವರಾಗಲು ನಡೆ, ನುಡಿ, ಎಲ್ಲವೂ ಒಂದೇ ಇದ್ದು ಶುದ್ಧವಾಗಿರಬೇಕು.
• ಒಳ್ಳೆಯವರೆನ್ನಿಸಿಕೊಳ್ಳಲು ನಿಜವಾದ ಪ್ರಾಮಾಣಿಕತೆ ಬಹಳ ಮುಖ್ಯ.
• ಸದಾ ಸತ್ಯದಲ್ಲಿಯೇ ಇರುವವರು ಸಾಂದರ್ಭಿಕವಾಗಿಯೂ ಸಹ ಸುಳ್ಳು ನುಡಿಯದವರು ಒಳ್ಳೆಯವರು.
• ಸರ್ಕಾರಿ ನೌಕರಿಯಲ್ಲಿದ್ದು ಲಂಚ ಹೊಡೆಯಲು ಸಾಕಷ್ಟು ಅವಕಾಶಗಳಿದ್ದರೂ ಸಹ ಲಂಚ ಹೊಡೆಯದೇ ಸಾರ್ವಜನಿಕರ ಕೆಲಸ ಮಾಡಿಕೊಡುವವರು ಒಳ್ಳೆಯವರು.
• ಎಲ್ಲರಿಂದಲೂ ಹೊಗಳಿಸಿಕೊಳ್ಳುವವರು ಒಳ್ಳೆಯವರು.
• ಇತರರು ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ಒಳ್ಳೆಯವರು.
• ಸಿಟ್ಟು ಮಾಡಿಕೊಳ್ಳದೇ ಸದಾ ಶಾಂತರಾಗಿವವರು ಒಳ್ಳೆಯವರು.
• ಯಾರನ್ನೂ ತೆಗಳದೇ, ಕಾರಣಗಳನ್ನು ಹುಡುಕದೇ ಇರುವವರೆ ಒಳ್ಳೆಯವರು.
• ಇತರರು ಏನು ತಪ್ಪು ಮಾಡಿದರೂ ಸಹ ಅದನ್ನು ಕ್ಷಮಿಸುವವರು ಒಳ್ಳೆಯವರು.
• ಇದ್ದದ್ದನ್ನು ಇದ್ದ ಹಾಗೆ ಹೇಳುವವರು ಒಳ್ಳೆಯವರು.
• ಅವರ ಅಭಿಪ್ರಾಯವನ್ನು ಮುಖಕ್ಕೆ ಹೊಡೆದಂತೆ ಹೇಳದವರು ಒಳ್ಳೆಯವರು.
• ಸದಾ ಸಭ್ಯ ವರ್ತನೆಯನ್ನು ಹೊಂದಿವವರು ಒಳ್ಳೆಯವರು.
• ಬದಲಾವಣೆಗೆ ಸದಾ ತೆರೆದುಕೊಳ್ಳುವವರು ಒಳ್ಳೆಯವರು.
• ಚಿಕ್ಕವರನ್ನು ಮತ್ತು ಬಡವರನ್ನು ಗೌರವಿಸುವವರು ಒಳ್ಳೆಯವರು.
• ಯಾರೂ ಹೇಳದೇ ಇದ್ದರೂ ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ನಿರ್ವಹಿಸುವವರು ಒಳ್ಳೆಯವರು.
• ಅವರವರ ಕೆಲಸಗಳನ್ನು ಇತರರಿಗೆ ವಹಿಸದೇ ಸ್ವತ: ಅವರೇ ಮಾಡಿಕೊಳ್ಳುವವರೇ ಒಳ್ಳೆಯವರು.
• ಎಲ್ಲಾ ಜನರನ್ನು, ಪರಿಸರವನ್ನು ಅದು ಅಥವಾ ಅವರು ಹೇಗೆ ಇರುತ್ತಾರೋ ಹಾಗೆಯೇ ಸ್ವೀಕರಿಸುವವರು ಒಳ್ಳೆಯವರು.
• ಸಮಾಜದಲ್ಲಿ ರೂಢಿತವಾದ ಉತ್ತಮ “ಹವ್ಯಾಸ” ಹೊಂದಿರಬೇಕು ಮತ್ತು “ದುರಭ್ಯಾಸ”ಗಳನ್ನು ಹೊಂದಿರಬಹುದು.
• ಚೆನ್ನಾಗಿ ಜನರ ಜೊತೆ ಮಾತನಾಡಬೇಕು ಹಾಗೆಂದ ಮಾತ್ರಕ್ಕೆ ಚೆನ್ನಾಗಿ ಮಾತನಾಡುವವರೆಲ್ಲಾ ಒಳ್ಳೆಯವರಲ್ಲ.
• ಸದಾ ನೀರಸ ಪ್ರತಿಕ್ರಿಯೆ ನೀಡದೇ ಚೆನ್ನಾಗಿ ಅರಳುಮುಖದಿಂದ ಪ್ರತಿಕ್ರಿಯೆಯನ್ನು ನೀಡಬೇಕು.
• ಸದಾ ನಗುತ್ತಾ ಆರೋಗ್ಯದಿಂದ ಖುಷಿಯಾಗಿರುವವರು ಒಳ್ಳೆಯವರು.
• ಗಂಡನಾದರೆ ಹೆಂಡತಿಯ ಮತ್ತು ಹೆಂಡತಿಯಾದರೆ ಗಂಡನ ಮಾತನ್ನು ಸದಾ ಗೌರವಿಸಿ ನಡೆದರೆ ಅವರು ಒಳ್ಳೆಯವರು.
• ಮಕ್ಕಳು ತಂದೆ ತಾಯಿ, ಶಿಕ್ಷಕರು, ಹಿತಚಿಂತಕರು, ಬಂಧು, ಬಾಂಧವರ ಹಿತನುಡಿಗಳನ್ನು ಕೇಳಿ ಅನುಸರಿಸಿದರೆ ಅವರು ಒಳ್ಳೆಯವರು.
• ಸಮಾಜದಲ್ಲಿನ ವಿವಿಧ ಸಮಸ್ಯೆಗಳಿಗೆ ಸ್ಪಂಧಿಸಿ ಸಹಾಯಕ್ಕೆ ಹೋಗುವವರು ಒಳ್ಳೆಯವರು.
• ಸ್ವತ: ಅವರಿಗೆ ತೊಂದರೆ ಇದ್ದರೂ ಸಹ ತ್ಯಾಗ ಮನಸ್ಸಿನಿಂದ ಇತರರ ಸಹಾಯಕ್ಕೆ ಧಾವಿಸುವವರು ಒಳ್ಳೆಯರು.
• ತುಂಬಾ ಒಳ್ಳೆಯವರಾಗುವುದು ಅಥವಾ ಪಾಪದವರಾಗಿರುವುದು ಸಹ ಅಷ್ಟೊಂದು ಒಳ್ಳೆಯದಲ್ಲ.
• ತಪ್ಪು ಮಾಡಲು ಸಾಕಷ್ಟು ಅವಕಾಶವಿದ್ದರೂ ಸಹ ತಪ್ಪು ಮಾಡದೇ ಇರುವವರು ಒಳ್ಳೆಯವರು.
• “ಪಾಪದವರು” ಮತ್ತು “ಒಳ್ಳೆಯವರು” ಬಹುತೇಕ ಬೇರೆ ಶಬ್ಧಗಳು. ತೀರಾ ಪಾಪದವರಾಗಿರುವುದೂ ಸಹ ಒಳ್ಳೆಯದಲ್ಲ.
• ಪ್ರತಿಫಲಾಕಾಂಕ್ಷೆ ಇಲ್ಲದೇ ಕಾರ್ಯ ನಿರ್ವಹಿಸುವವರು ಒಳ್ಳೆಯವರು.
• “ಒಳ್ಳೆಯವರಂತೆ” ಫೋಸು ಕೊಡುವವರು ಒಳ್ಳೆಯವರಲ್ಲ.
• ಯಾರಿಗೂ ತೊಂದರೆ ಕೊಡದೇ ತಮ್ಮ ಪಾಡಿಗೆ ತಾವು ಇರುವವರು ಒಳ್ಳೆಯವರು.
• “ಒಳ್ಳೆಯಯವರು” ಎನ್ನುವುದು ಒಂದು ಪ್ರತಿಯೊಬ್ಬರ ಪ್ರತಿಕ್ರಿಯೆ ಮಾತ್ರ. ಯಾರೂ ಎಲ್ಲರಿಗೂ ಏಕಕಾಲದಲ್ಲಿ ಶೇ ೧೦೦ ರಷ್ಟು ಒಳ್ಳೆಯವರಾಗಿರಲು ಸಾಧ್ಯವಿಲ್ಲ.
• ಪ್ರತಿಯೊಬ್ಬರಿಗೂ ಸ್ವಯಂ ಅವರೇ ಒಳ್ಳೆಯವರು. ಆದರೆ ಸಮಾಜ ಅದನ್ನು ಗುರುತಿಸುತ್ತಿಲ್ಲ ಎಂಬ ಬಗ್ಗೆ ಬೇಸರವಿದೆ.
• ಕಟುವಾದ ಸತ್ಯವಾಗಿದ್ದರೂ ಇತರರ ಮನಸ್ಸಿಗೆ ಬೇಸರವಾಗದಂತೆ ಅದನ್ನು ಹಿತವಾಗಿ ನುಡಿಯುವವರು ಒಳ್ಳೆಯವರು.
• ಹೊರಗಿನಿಂದ ಮತ್ತು ಒಳಗಿನಿಂದ ಒಳ್ಳೆಯತನವನ್ನು ಹೊಂದಿರುವವರು ಒಳ್ಳೆಯವರು.
• ಪಕ್ಷಪಾತ (ಸ್ವಜನ ಪಕ್ಷಪಾತ, ಜಾತೀಯತೆ) ಮಾಡದೇ ಎಲ್ಲರನ್ನೂ ಸಮನಾಗಿ ನೋಡುವವರು ಒಳ್ಳೆಯವರು.
• ಪೂರ್ವಾಗ್ರಹ ಪೀಡೆಯಿಲ್ಲದೇ ನೇರವಾಗಿ ವರ್ತಿಸುವವರು ಒಳ್ಳೆಯವರು.
• ಮಾಡುವ ನೌಕರಿ, ಸೇರಿದ ಕಂಪನಿ, ಮಾಡುವ ಉದ್ಯೋಗ ಇವೆಲ್ಲವುಗಳಿಗೆ ನಿಷ್ಟರಾಗಿ ದುಡಿಯುವವರು ಒಳ್ಳೆಯವರು.
• ಮಾಡಿದ ಉಪಕಾರವನ್ನು ಸದಾ ನೆನಪಿಟ್ಟುಕೊಂಡು ಕೃತಜ್ಞರಾಗಿರುವವರು ಒಳ್ಳೆಯವರು.
• ಎದುರಿಗೆ ಇರುವವರು ಹೇಳುವುದನ್ನು ಸಮಾಧಾನದಿಂದ ಕೇಳಿಸಿಕೊಂಡು ಪ್ರತಿಕ್ರಿಯೆ ನೀಡುವವರು ಒಳ್ಳೆಯವರು.
• ಹೆಸರಿಗಾಗಿ, ರಾಜಕೀಯ ಲಾಭಕ್ಕಾಗಿ “ಒಳ್ಳೆಯ” ಕಾರ್ಯ ಮಾಡದೇ ಪ್ರಚಾರ ಪಡೆದಯರು ಒಳ್ಳೆಯರು.
• ಅರ್ಹತೆ ಇರುವವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವವರು ಒಳ್ಳೆಯವರು.
• ಕೀಟ, ಪಶು, ಪಕ್ಷಿ ಇತ್ಯಾದಿ ಸಕಲ ಜೀವಗಳ ಬಗ್ಗೆ ಕರುಣೆ ಹೊಂದಿ ಪ್ರಕೃತಿಯನ್ನು ಸ್ವಚ್ಚತೆಯಿಂದ ಕಾಪಾಡುವವರು ಒಳ್ಳೆಯವರು.
• ಸಮಾಜದಲ್ಲಿ ಎಲ್ಲರಿಗೂ ಒಳಿತನ್ನೇ ಬಯಸಿ ಯಾರಿಗೂ ಒಂದಿಷ್ಟೂ ತೊಂದರೆ ಕೊಡದಿರುವವರು ಒಳ್ಳೆಯವರು.
• ಉಪಕಾರ ಮಾಡಿದಾಗ ಅದಕ್ಕೆ ಪ್ರತಿಫಲಾಪೇಕ್ಷೆ ಅಥವಾ “ಥ್ಯಾಂಕ್ಸ್” ಬಯಸದೇ ಇರುವವರು ಒಳ್ಳೆಯವರು.
• ಗಿಡಮರಗಳನ್ನು ನೆಟ್ಟು ಪೋಷಿಸುವವರು ಒಳ್ಳೆಯವರು.
• ಕಾಡು ಹರಟೆ ಹೊಡೆಯದೇ, ಇತರರನ್ನು ಟೀಕಿಸದೇ, ಋಣಾತ್ಮಕ ಚಿಂತನೆ ಹೊಂದಿರದವರು ಒಳ್ಳೆಯವರು.
• ನಮ್ಮ ಮಾತನ್ನು ಚಾಚು ತಪ್ಪದೇ ಪರಿಪಾಲಿಸುವವರು ಒಳ್ಳೆಯವರು.
• ಪ್ರಚಾರ ಬಯಸದೇ ಇತರರ ಪ್ರೇರಣೆಗಾಗಿ ದಾನ ಧರ್ಮ ಮಾಡುವವರು ಒಳ್ಳೆಯವರು.
• ಒಳ್ಳೆಯತನದಲ್ಲಿಯೇ ಮೇಲ್ಕಾಣಿಸಿದ ಗುಣಗಳನ್ನು ಶೇ ೧೦, ೨೦, ೩೦, ೪೦,೫೦, ೬೦, ೭೦, ೭೫ ಒಳ್ಳೆಯವರಿದ್ದಾರೆ. ನೂರಕ್ಕೆ ನೂರರಷ್ಟು ಒಳ್ಳೆಯವರೆನಿಸಿಕೊಳ್ಳಲು
ಯಾರಿಂದಲೂ ಸಹ ಸಾಧ್ಯವಿಲ್ಲ.
• ಶೇಕಡಾ ೭೫ ರಷ್ಟು “ಒಳ್ಳೆಯ” ಗುಣಗಳನ್ನು ಹೊಂದಿದ್ದರೆ ಮಾತ್ರ ಒಳ್ಳೆಯವರೆಂದು ಕರೆಸಿಕೊಳ್ಳಲು ಅರ್ಹರು.
• ಒಳ್ಳೆಯವರಾಗುವುದು ಒಂದು ದಿನದ ಮಾತಲ್ಲ. ಜೀವನ ಪರ್ಯಂತ ಅನುಸರಿಸಿ ಕಟ್ಟಿಕೊಳ್ಳುವ ಪಟ್ಟ.
• ನಡೆದಂತೆ ನುಡಿಯುವವರು ಮತ್ತು ನುಡಿದಂತೆ ನಡೆಯುವವರು ಒಳ್ಳೆಯವರು.
ಇವು ಸಮಾಜದಲ್ಲಿ ಒಳ್ಳೆಯವಾಗಿ ಇರಬೇಕಾದರೆ ಹೊಂದಬೇಕಾದ ಸಮಾಜ ಬಯಸುವ ಗುಣಲಕ್ಷಣಗಳು. ಇವು ನಮ್ಮ ನಿಮ್ಮಂತ ಸಮಾಜದಲ್ಲಿನ ಜನ ಸಾಮಾನ್ಯರ ಅಭಿಪ್ರಾಯಗಳು ಮತ್ತು ನಿರೀಕ್ಷೆಗಳು. ಇನ್ನು ಒಳ್ಳೆಯವರಲ್ಲದವರ ಗುಣಗಳ ಪಟ್ಟಿ ದೊಡ್ಡದಿದೆ. ಸಮಾಜ ಒಳ್ಳೆಯವರನ್ನು ಜಾಸ್ತಿ ನಿರೀಕ್ಷಿಸುತ್ತದೆ. ಈ ಪಟ್ಟಿಯನ್ನು ಗಮನಿಸಿ ನೀವು ಅದೆಷ್ಟು ಒಳ್ಳೆಯವರು ಎಂದು ತೀರ್ಮಾನಿಸಿಕೊಳ್ಳಿ. ಕೆಟ್ಟವರೆನ್ನಿಸಿಕೊಳ್ಳಲು ಒಂದು ಸಣ್ಣ ತಪ್ಪು ಸಾಕು. ಎಲ್ಲರಿಂದ ಒಳ್ಳೆಯವರೆನ್ನಿಸಿಕೊಳ್ಳಲು ಒಂದಿಷ್ಟು ಕಷ್ಟಪಡಬೇಕಲ್ಲ. ನಾವೂ ಇವುಗಳನ್ನು ಅನುಸರಿಸಿ ಒಳ್ಳೆಯವರಾಗೋಣ. ಇನ್ನೂ ಜಾಸ್ತಿ ಒಳ್ಳೆಯವರಾಗಲು ಇರಬೇಕಾದ ಅರ್ಹತೆ ಅಥವಾ ಗುಣಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಬೇಕೇ ಬೇಕು.
- ಡಾ. ಎನ್ ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
