ಕಾಳೀ ಕಣಿವೆಯ ಕತೆ ಭಾಗ – ೧೪

ಶೂರ್ಪನಖಿ ಗುಹೆಯನ್ನುಬೋಳು ಗವಿ ಎಂದು ಕರೆಯುತ್ತಿದ್ದರು.ಆ ಬೋಳು ಗವಿಯ ಮುಂದೆ ಹಾದು ಬರುವುದಕ್ಕೆ ಜನ ಹೆದರುತ್ತಿದ್ದರು. ಸೂರ್ಯನ ಬಿಸಿಲು ತಣ್ಣಗಾಗುತ್ತ ಬಂದಂತೆ ಗವಿಯೊಳಗಿನ ಕತ್ತಲು ಹೆಪ್ಪುಗಟ್ಟುತ್ತಿತ್ತು.

ಬೆಳಕು ತಂದವರ ಕತ್ತಲ ಬದುಕಿನ ಕತೆಗಳು ೧೯೭೦, ಮಾರ್ಚ.


ದಾಮೋದರನ್‌ ನಂಬೂದರಿ ಹಾಟೆಲ್ಲು

ಆಗಲೇ ಮಧ್ಯಾನ ಒಂದೂವರೆ ಗಂಟೆಯಾಗಿತ್ತು. ನದಿಯ ಆಚೆ ದಂಡೆಯ ಕಡೆಗೆ ಕೆಲಸಕ್ಕೆ ಹೋದವರು ಶೆಡ್ಡಿನತ್ತ ಇಲ್ಲ. ತಮ್ಮ ಗುಡಿಸಿಲಿನತ್ತ ವಾಪಸಾಗುವ ಸಮಯ. ತೀರ ಬಿಸಿಲು ಕರಗಿದ ಮೇಲೆ ಬೋಳು ಮಡುವಿನ ದಂಡೆಗುಂಟ ಮತ್ತು ಬೋಳು ಗವಿಯ ಮುಂದೆ ಹಾದು ಬರುವುದಕ್ಕೆ ಜನ ಹೆದರುತ್ತಿದ್ದರು. ಕಾಡಿನ ಸೂರ್ಯನ ಬಿಸಿಲು ತಣ್ಣಗಾಗುತ್ತ ಬಂದಂತೆ ಗವಿಯೊಳಗಿನ ಕತ್ತಲು ಹೆಪ್ಪುಗಟ್ಟುತ್ತಿತ್ತು. ಅಷ್ಟೇ ಅಲ್ಲ. ಕತ್ತಲು ಆವರಿಸುತ್ತಿದ್ದಂತೆ ಗವಿಯೊಳಗೆ ಯಾವುದಾದರೂ ಕಾಡು ಪ್ರಾಣಿ ಬಂದು ಸೇರುವುದೂ ಇತ್ತು. ಜನ ಆ ಕಾರಣಕ್ಕೂ ಗವಿಯ ಮುಂದೆ ಹಾದು ಬರಲು ಹೆದರುತ್ತಿದ್ದರು.

ಮಧ್ಯಾನ ಎರಡು ಗಂಟೆಯಾಗುತ್ತ ಬಂದಿದ್ದರೂ ಏರಿದ ಬಿಸಿಲಿಗೆ ಅಂಥ ಕಾವಿರಲಿಲ್ಲ. ಕಾಡು ಹಸಿರು ಎಲೆಗಳು ದಟ್ಟವಾಗಿ ಬಿಗಿದುಕೊಂಡಿದ್ದರಿಂದ ಅಲ್ಲಿ ನೆಳಲಿನ ತಂಪು ಸೇರಿ ಆಯಾಸವಾಗುತ್ತಿರಲಿಲ್ಲ. ಏನಿದ್ದರೂ ಇಲ್ಲಿ ಬೇಸಿಗೆಯಲ್ಲಿ ಮಾತ್ರ ರಣ ಬಿಸಿಲು. ಯಾಕಂದರೆ ಬೇಸಿಗೆಯಲ್ಲಿ ಎಲೆಗಳೆಲ್ಲ ಉದುರಿ ಟೊಂಗೆಗಳು ಮಾತ್ರ ಕಾಣುತ್ತವೆ. ಇಡೀ ಕಾಡು ಆಗ ಅಸ್ತಿ ಪಂಜರವಾಗುತ್ತದೆ. ಆಗ ಬಿಸಿಲು ತಾಳಲಸಾಧ್ಯ.
‘’ಹ್ಹಿಹ್ಹಿಹ್ಹಿ…ಬರ್ರೆಪಾ ಇನ್ನ. ಸಾಹೇಬ ಮಂದಿ ಹೋಗಿ ಅರ್ಧಾ ತಾಸಾತು. ದಾಮೋದರನ್‌ ಕಾಯ್ತಿರತಾನು. ನಮಗೂ ಹೊಟ್ಟಿ ತಳಮಳಾ ಆಗೂದಕ್ಕ ಸುರೂ ಆತು. ಊಟಾ ಜಡದು ಬರೂನು ಬರ್ರಿ. ಹ್ಹಿಹ್ಹಿಹ್ಹಿ….ಬರ್ರಿ. ಹೊಟೆಲ್ಲಿಗೆ ಏರೀ ಹತ್ತಿ ಹೋಗಬೇಕು…’’

ಚಾಂದಗುಡೆಯವರು ಅವಸರ ಮಾಡಿದರು. ವಯಸ್ಸಾದವರು. ಹಸಿವು ತಡೆಯಲು ಆಗುವುದಿಲ್ಲ ಅನಿಸಿತು. ಕೂಡಲೇ ಅವರ ಹಿಂದೆ ಹೊರಟೆ. ಒಂದು ದಿನ್ನೆಯ ಮೇಲೆ ದಾಮೋದರನ್‌ ಹೊಟೆಲ್‌ ಇರುವುದು ದೂರದಿಂದಲೇ ಕಂಡಿತು.

supa6

ಸೂಪಾ ಆಣೆಕಟ್ಟು ನಿರ್ಮಾಣ ಸ್ಥಳ ೧೯೭೧, ಚಿತ್ರ ಸಂಗ್ರಹ : ಶ್ರೀ ವಿ.ಎಸ್.ಚಳಗೇರಿ

ಅದೇ ಅಪ್ಪಟ ಮಲಯಾಳೀ ಮೀಟರ್‌ ಟೀ ಶಾಪು
‘’ಚರಣು… ಚರಣು. ಚಾಂದಗೂಡಿ ಸಾಹೇಬ್ರು. ನಿಂಗಳ್‌ ಚೋರು ರೆಡಿ [ಊಟ] ಆಗಿ ಎರಡು ಗಂಡಾ ಆಯಿಪೋಚೀ. ಒಳಕ್ಕೆ ವಾ…ವಾ. ಮೊದ್ಲು ಟೀ ವೇಣೋ? ಚೋರ್‌ [ಊಟ] ವೇಣೋ…?’’.
ನಾವಿಬ್ಬರೂ ಇನ್ನೂ ಒಳಗೆ ಕಾಲಿಟ್ಟಿರಲಿಲ್ಲ. ಕಟ್ಟಿಗೆ ಒಲೆಯ ಮುಂದೆ ನಿಂತು ಅಲ್ಯುಮಿನಯಂ ಚಂಬೂ ಹಿಡಿದು ಒಂದು ಮೀಟರ್‌ ಉದ್ದಕ್ಕೂ ಮೇಲಕ್ಕೆ- ಕೆಳಕ್ಕೆ ಟೀ ಮಿಕ್ಸ ಮಾಡುತ್ತಿದ್ದ ದಾಮೋದರನ್‌ ಅಚ್ಚರಿಯಿಂದ ನನ್ನತ್ತ ನೋಡುತ್ತ ಕೇಳಿದ.

‘’ಎಂದಾ ಇದು ಹೊಸಾ ಪಾರ್ಟಿ? ನಿಂಗಳ್‌ ಗೆಸ್ಟಾ? ಪರವಾಯಿಲ್ಲೆ. ನಮಕ ಹೊಸಾ ಗಿರಾಕಿ’’ ಎಂದು ಹೇಳುತ್ತ ದಾಮೋದರನ್‌ ನಕ್ಕ. ಆತ ನಕ್ಕರೆ ಇವರು ನಗದಿರುತ್ತಾರೆಯೇ.

‘’ಹ್ಹಿಹ್ಹಿಹ್ಹಿ… ಗೆಸ್ಟು ಅಲ್ರೆಪಾ…ಇವ್ರು ಶೇಖರ್‌ ಅಂತ. ನಮ್ಮ ಸಬ್‌ ಡಿವಿಜನ್ನಿನಾಗನ ಇರತಾರ ಇನ್ನ ಮ್ಯಾಲ. ನಿಮಗ ಖಾಯಂ ಗಿರಾಕೀನ ತಗೋರಿ ಇನ್ನ. ನಮ್ಮ ಕಡೇ ಮಂದಿರೀಪಾ ಮತ್ತ. ಹುಳಿ-ಖಾರಾ ತಿನ್ನೂ ಮಂದಿ. ಮದಲ಼ಽ ಹೇಳಿರತೀನಿ ಮತ್ತ. ಛುಲೋ ಊಟಾ, ಛುಲೋ ನಾಷ್ಟಾ, ಛುಲೋ ಚಹಾ ಕೊಟ್ಟರ ನಿಮ್ಮನ್ನ ಮುಂದಿನ ಲೋಕದಾಗೂ ನೆನಸ್ತಾರ ನೋಡ್ರಿ ಇವ್ರು. ಹಾಂ…ಮತ್ತ. ಲಗೂ ಊಟಾ ಕೊಡ್ರೆಪಾ ನಮಗ… ವ್ಯಾಳೇ ಆತೂ..ಭೋಜನಕ್ಕ. ಹ್ಹಿಹ್ಹಿಹ್ಹಿ…’’ ಎಂದರು.

teashop

ಫೋಟೋ ಕೃಪೆ : Flickr

ಅಂತೂ ಆ ಮಲಯಾಳೀ ಬಾಯಲ್ಲಿ ನಾನು ಶೇಗರನ್‌… ನಂತರ ಶೇಗರಪ್ಪೋರು ಆದೆ ಮಲಯಾಳಿ ಮಿಶ್ರಿತ ಕನ್ನಡದಲ್ಲಿ ದಾಮೋದರನ್‌ ನನ್ನ ಹೆಸರನ್ನು ಮೂರು ಸಲ ಬಾಯಲ್ಲಿ ಹೇಳಿ ಅಭ್ಯಾಸ ಮಾಡಿಕೊಂಡ.

‘’ಶೇಗರನ್‌… ಶೇಗರನ್‌… ಶೇಗರನ್‌… ನಲ್ಲ ಉಂಡು ನಿಮ್ಮ ಹೆಸ್ರು. ಚಾಂದಗುಡೇ ಚಾರೂ. ನಾನು ಮಾತ್ರಂ ಶೇಗರಪ್ಪೋರೇ ಅಂತನೇ ಕರೀತೀನಿ. ಬನ್ನಿ ಶೇಗರಪ್ಪೋರೇ. ನಂಗಳ್‌ ಹೋಟೆಲ್ಲು ಊಟಾ ಮಾಡಿ ನಂತರಂ ಹೇಳಿ’’

ದಾಮೋದರನ್‌ ಇತ್ತ ನಗುತ್ತ ಹೇಳುತ್ತಿದ್ದರೆ ಅತ್ತ ಆತ ಹೇಳುವುದನ್ನೂ ಗಮನಿಸಿಕೊಳ್ಳದ ಚಾಂದಗುಡೆಯವರು ಒಲೆಯ ಹಿಂದಿದ್ದ ಹಿತ್ತಲ ಕಡೆಗೆ ದುಡುದುಡು ನಡೆದರು. ನನಗೂ ‘ಬರ್ರೆಪಾ.. ಕೈ ತೊಳಕೋ ಬರ್ರಿ’ ಅಂದರು.

ಹಿತ್ತಲಲ್ಲಿ ನೀರು ತುಂಬಿದ ಬಕೆಟ್ಟಿತ್ತು. ಅದರಲ್ಲಿ ಅರ್ಧ ಮುಳುಗಿದ ಅಲ್ಯುಮಿನಿಯಂ ಲೋಟಾವೊಂದು ತೇಲುತ್ತಿತ್ತು. ಚಾದಂಗುಡೆಯವರು ಅದೇ ಲೋಟದಿಂದ ನೀರು ಎತ್ತಿಕೊಂಡು ಕೈಗೆ ಸುರುವಿಕೊಂಡರು. ಅಲ್ಲಿಗೆ ಅವರ ಕೈ ತೊಳೆದ ಆಗಿರತೈತಿ. ಹೌದಂತೀರೋ… ಅಲ್ಲಂತೀರೋ ಮತ್ತ. ಹ್ಹಿಹ್ಹಿಹ್ಹಿ…. ಆದ್ರ ಒಂದಕ್ಕ ಮಾತ್ರ ಜನಾ ಬೇಕ಼ಽಬೇಕು ನೋಡ್ರಿ. ಏನಪಾಂದ್ರ…ತಳಗ ನದಿಯಿಂದ ನೀರು ತಂದು ಹಾಕೂದಕ್ಕ ಜನಾ ಬೇಕು. ಅದಕ್ಕಂತ ಒಂದ ಹುಡುಗೀ ಇಟ್ಟಾನ. ಇಲ್ಲೇ ಡ್ಯಾಮ ಸೈಟಿನಾಗ ಐತಪಾ ಅದೂ. ಹ್ಹಿಹ್ಹಿಹ್ಹಿ… ಲಮಾಣೀ ಹುಡುಗಿ. ಗೋಮ್ಲಿ ಅಂತ ಅಕೀ ಹೆಸ್ರು. ನಾನಂತೂ ಅಕೀಗೆ ಜಲದೇವಿ ಅಂತನ ಕರೀತೇನಿ ನೋಡ್ರಿ. ಹ್ಹಿಹ್ಹಿಹ್ಹಿ’’ ಶಾಸ್ತ್ರ ಮುಗಿಯಿತು.

‘’ನೋಡ್ರೆಪಾ… ಸುಳ್ಳು ಅನಬ್ಯಾಡ್ರಿ. ದಾಮೋದರನ್‌ ಅಂದ್ರ ಖರೇ ಕಾಯಕ ಯೋಗಿ. ಕೇರಳ ದೇಶಾ ಬಿಟ್ಟು ಇಲ್ಲೀಗೆ ಬಂದಾನು ಮನಿಶಾ. ಒಂದ್‌ ನರಪಿಳ್ಳೇನ್ನೂ ಕೆಲಸಕ್ಕ ಇಟಗೊಂಡಿಲ್ಲ. ಹೂಂ…ಎಲ್ಲಾನೂ ತಾನ಼ಽ ಮಾಡತೈತಿ.

ಹ್ಹಿಹ್ಹಿಹ್ಹಿ… ಸಫಾಯೀಗೂ ಅವನ. ಸಪ್ಲಾಯೀಗೂ ಅವನ. ಅತ್ಲಾಗ ಒಲೀಗೂ ಅವನ. ನಮ್ಮ ಕಡೇ ಮಂದಿ ಆಗಿದ್ರ ಹಿಂಗ ಮಾಡ್ಯಾರೇನು ಅವರಾಪ್ನ. ಕಾಲಿಗೊಂದು-ಕೈಗೊಂದು ಆಳು ಕೊಟ್ರನೂ ಮಕಾ ಅನ್ನೂದು ಹನುಮಪ್ಪನ ಮಸಡಿ ಎಷ್ಟೊಂದು ವಿಷಯ ಹೇಳಿದರು ಚಾಂದಗುಡೆ ನದಿಯ ನೀರಿನಿಂದ ಎದ್ದು ಬಂದ ಜಲದೇವಿ – ಲಂಬಾಣೀ ಹುಡುಗಿ ಗೋಮ್ಲಿ ‘’ಹೌದರೀ…? ಲಮಾಣೀ ಹುಡುಗೀನ…?’’ ನಾನು ಕುತೂಹಲದಿಂದ ಕೇಳಿದೆ. ‘’ಹ್ಹೇಹ್ಹೇಹ್ಹೇ! ಸುಮ್ನ… ನಿಮಗೂ ತಿಳಿದಿರಲೀ ಅಂತ ಹೇಳಿದ್ನಿ. ನೀವು ಏನರ ಅನ್ರಿ ಶೇಖರವರ… ಈ ತಮಿಳ್ರಂಗ, ಮಲಯಾಳೀಗೂಳಂಗ, ತೆಲುಗರಂಗ ದುಡಿಯಾಕ ನಮ್ಮ ಕನ್ನಡ ಮಂದಿ ಅಲ್ಲ ತಗೀರಿ’’ ತಮ್ಮ ಉದ್ದ ಮಾತಿನಲ್ಲಿ ಎಷ್ಟೊಂದು ವಿಷಯ ಹೇಳಿದರು ಚಾಂದಗುಡೆಯವರು. ಅವರು ನಗುತ್ತ ಆ ಮಾತು ಹೇಳಿದಾಗ ನಾನು ಯೋಚನೆಗೆ ಬಿದ್ದೆ. ಕನ್ನಡ ಜನ ಉಳಿದವರಂತೆ ಶ್ರಮ ಜೀವಿಗಳಲ್ಲ ಎಂಬ ಅವರ ಮಾತಿನ ಹಿಂದಿನ ಸತ್ಯ ಅತಿಶಯೋಕ್ತಿಯೇನೂ ಆಗಿರಲಿಲ್ಲ. ಅದನ್ನು ನಾನೂ ಹಲವು ಕಡೆ ಕಂಡಿದ್ದೆ.

ಇಬ್ಬರೂ ಬಿದಿರು-ಬಂಬೂದಿಂದ ಮಾಡಿದ್ದ ಬೆಂಚಿನ ಮೇಲೆ ಕುಳಿತೆವು. ನಮ್ಮ ಮುಂದೆ ಅದೇ ಬಂಬೂ ಸೀಳಿ ಮೊಳೆ ಹೊಡೆದು ಮಾಡಿದ್ದ ಗಾಂವಠೀ ಟೇಬಲ್ಲು ಇತ್ತು. ಅದೇ ನಮಗೆ ಈಗ ಊಟದ ಮೇಜು.
‘’ಹ್ಹಿಹ್ಹಿಹ್ಹಿ… ಇಲ್ಲಿ ಒಳಗ ಕಾಡಿನೊಳಗ ಕಾಲಿಟ್ರ ಸಾಕು. ಬಿದುರು, ಬಂಬೂ ಮಣಗಟ್ಲೆ ಸಿಗತಾವು. ಈ ಬಂಬೂನ ಸೀಳಿ ಹೊಂದಿಸಿ ಮೊಳೀ ಹೊಡದ್ರ ಮಂಚಾನೂ ಅಕೈತ್ರೆಪಾ. ಹೂಂ. ಇಲ್ಲಿ ಎಲ್ಲಾರ ಗುಡುಸಲದಾಗೂ ಇವಽ ಮಂಚ ಇರೂದು. ಹೂಂ’’ ಚಾಂದಗುಡೆಯವರ ಮಾತಿನ ಗಾಡಿ ಓಡುತ್ತಿತ್ತು. ನನಗೆ ಹಸಿವಿನ ತಳಮಳ. ಆದರೂ ಕುತೂಹಲದಿಂದ ಅವರ ಮಾತು ಕೇಳುತ್ತಿದ್ದೆ.

ಶೂರ್ಪನಖಿಯ ಕಾಡಿನಲ್ಲಿ ಅನ್ನಕ್ಕೆ ಕೊರತೆಯಿಲ್ಲ
ದಾಮೋದರನ್‌ ಬಾಯಲ್ಲಿ ಗಣೇಶ ಬೀಡಿ ಕಚ್ಚಿಕೊಂಡೇ ಎರಡೂ ಕೈಯಲ್ಲಿ ಒಂದೊಂದು ಅನ್ನ- ಸಾಂಬಾರದ ತಟ್ಟೆ ಹಿಡಿದು ಬಂದ. ತಟ್ಟೆಯಲ್ಲಿ ಕುಚಲಕ್ಕಿ ಅನ್ನ ಹೊಗೆಯಾಡುತ್ತಿತ್ತು. ಅವನೇ ಮಾಡಿದ್ದ ಬಟಾಟೆ ಸಾರು. ಕೋಸು ಪಲ್ಯಕ್ಕೆ ವಿಶೇಷ ಸುವಾಸನೆಯಿತ್ತು. ಅದರ ಜೊತೆಗೆ ಹಸೀ ಕೊಬ್ಬರಿ ತುರಿಯ ಚಟ್ನಿ. ಉಪ್ಪಿನ ಕಾಯಿ. ಎಲ್ಲ ಮಲಯಾಳೀ ಶೈಲಿಯ ಊಟ.

teashop.jpg1
ಫೋಟೋ ಕೃಪೆ : pinterest

‘’ಕಡ್ಲೇ ಬೇಳೆ ವಡಾ ಉಂಡು ಚಾರೂ. ಎರಡೆರಡು ಹಾಕ್ತೆನೆ’’

ನಾವು ಹೂಂ ಅನ್ನುವ ಮೊದಲೇ ಇಬ್ಬರ ತಟ್ಟೆಯಲ್ಲೂ ಎರಡೆರಡು ಬೇಳೆಯ ವಡೆಗಳು ಬಂದು ಬಿದ್ದವು. ಕರಿದ ಹಪ್ಪಳ ಬೇರೆ. ಹಾಗೆಯೇ ಕುಡಿಯೋದಕ್ಕೆ ಅಂತ ಒಂದು ದೊಡ್ಡ ಲೋಟದಲ್ಲಿ ಕುಚಲಕ್ಕಿ ಅನ್ನ ಬಸಿದ ಗಂಜೀ ವೆಳ್ಳಂ. ದಟ್ಟಡವಿಯಲ್ಲೂ ಎಂಥ ಸಮೃದ್ಧ ಊಟ.

ಶೂರ್ಪನಖಿ ಯಾವ ದೇವ ಕುಲದವಳೂ ಅಲ್ಲ. ಸನಾತನ ನಂಬಿಕೆಯಂತೆ ಅವಳು ರಾಕ್ಷಸಿ. ಆದರೂ ಆಕೆಯ ಕಾಡಿನಲ್ಲಿ ಅನ್ನಕ್ಕೆ ಕೊರತೆಯಿಲ್ಲ. ಆಗಲೇ ಊಟಕ್ಕೆಂದು ಬಂದಿದ್ದ ಕೆಲವರು ಕೈತೊಳೆದುಕೊಂಡು ಬಂದು ನಮ್ಮೆದುರಿನ ಬೆಂಚಿಗೆ ಕೂತರು. ನಮ್ಮತ್ತ ನೋಡಿ ಚಾಂದಗುಡೆಯವರಿಗೆ ನಮಸ್ಕಾರ ಹೇಳಿ ನನ್ನತ್ತ ದುರುದುರು ನೋಡಿದರು.

‘’ಹಾಂ ಕಮಲಾಕರ ಅವ್ರೇ… ಇವ್ರು ಶೇಖರವರು. ಇನ್ನಮ್ಯಾಲ ಇಲ್ಲೇ ಡ್ಯಾಮಿನೊಳಗ ಇವ್ರಿಗೂ ಕೆಲಸ. ನಮ್ಮ ನಾಯಕ ಸಾಹೇಬರ ಟೀಮು. ಹ್ಹಹ್ಹಹ್ಹ….’’

ಊಟ ಮಾಡುವಾಗಲೂ ಚಾಂದಗುಡೆಯವರು ಸುಮ್ಮನಿರಲಿಲ್ಲ. ಇವರೆಲ್ಲಾ ನಮ್ಮ ನರಸಿಂಹಯ್ಯ ಸಾಹೇಬರ ಮಂದಿ. ಬೋರು ಮಶೀನು ಕೆಲಸಕ್ಕೆ ಬಂದವರು. ಅವರೂ ಇಲ್ಲೇ ಡ್ಯಾಮ ಸೈಟಿನಲ್ಲಿಯೇ ಇರೋದು. ತಗಡಿನ ಸೆಡ್ಡಿನಲ್ಲಿ ವಾಸ್ತವ್ಯ. ಬೋರು ಮಶೀನು ಕೆಲಸಕ್ಕೆ ಬಂದವರಲ್ಲಿ ಕೆಲವರು ಸಂಸಾರ ಸಮೇತ ಬಂದಿದ್ದಾರೆ. ಅವರೆಲ್ಲ ಊಟಕ್ಕೆ ಮನೆಗೆ ಹೋಗುತ್ತಾರೆ. ಕೆಲವು ಒಂಟೆತ್ತುಗಳಿಗೆ ಇಲ್ಲಿ ದಾಮೋದರನೇ ಅನ್ನದಾತ ಎಂಬುದು ಗೊತ್ತಾಯಿತು.

ನೀರಿನ ಬಿಂದಿಗೆ ಹೊತ್ತು ಬಳಕುತ್ತ ಬಂದ ಬಾಲೆ
ನಾನು ತಲೆಯೆತ್ತಿ ಬಾಗಿಲ ಕಡೆಗೆ ನೋಡಿದಾಗ ಅಲ್ಲಿ ಲಂಬಾಣಿ ಹುಡುಗಿಯೊಂದು ಕಂಕುಳದಲ್ಲಿ ಬಿಂದಿಗೆ ಇಟ್ಟುಕೊಂಡು ನದಿಯ ಕಡೆಯಿಂದ ದಿಬ್ಬ ಹತ್ತಿ ಇತ್ತಲೇ ಬಂದಳು. ಸುಮಾರು ಹದಿನಾಲ್ಕು ವರ್ಷದ ಯುವ ಬಾಲಕಿ. ಆಕೆ ಹಾಗೇ ನಮ್ಮ ಮುಂದೆಯೇ ಹಾದು ಹೊಟೆಲ್ಲಿನ ಹಿತ್ತಲ ಕಡೆಗೆ ಹೋದಳು. ಚಾಂದಗುಡೆಯವರು ನೋಡಿ ನಗುತ್ತ –

women
ಫೋಟೋ ಕೃಪೆ : pinterest

‘’ಹ್ಹಿಹ್ಹಿಹ್ಹಿ… ಏನವಾ ಜಲಜಾದೇವಿ ಗೋಮ್ಲೀಬಾಯಿ. ನೀರು ಹೊರಾಕ ಹತ್ತೀಯೇನು. ಊಟಾ ಮಾಡೂನು ಬಾ…’’ ಅಂದರು. ಹುಡುಗಿ ಹೂ ನಗೆಯೊಂದಿಗೆ ತುಟಿಯ ಹಿಂದಿದ್ದ ಹಲ್ಲಿನ ಸಾಲು ತೋರಿಸಿ ತಲೆ ತಗ್ಗಸಿಕೊಂಡು ಆಕಡೆಗೆ ಹೋದಳು.

ಊಟ ಮಾಡುತ್ತಿದ್ದ ನಾನು ಕ್ಷಣ ಹೊತ್ತು ಆಕೆಯತ್ತ ನೋಡಿ ಕಾಡು ಕುಸುಮ ಅಂದುಕೊಂಡೆ. ಗೋಮ್ಲಿ ಅಂದರೆ ಇವಳೇ ಇರಬೇಕು. ನಾನು ಆ ಹುಡುಗಿಯತ್ತ ನೋಡುತ್ತಿದ್ದರೆ ಎದುರಿಗಿದ್ದವರು ಅದೇನು ತಿಳಿದು ಕೊಳ್ಳುತ್ತಾರೋ ಎಂದು ಮುಜುಗುರವೆನಿಸಿ ತಟ್ಟೆಯತ್ತ ತಲೆ ತಗ್ಗಿಸಿದೆ. ಆದರೆ ದಾಮೋದರನ್‌ ನನ್ನನ್ನು ಗಮನಿಸಿಯೇ ಬಿಟ್ಟ. ಕೂಡಲೇ ಪಲ್ಯದ ಬಟ್ಟಲು ಹಿಡಿದು ಎದುರು ಮೇಜಿನ ಮುಂದೆ ಬಂದು ಬಾಗಿ ತುಟಿಯಲ್ಲಿ ಕಚ್ಚಿ ಹಿಡಿದಿದ್ದ ಬೀಡಿಯನ್ನು ಕುಣಿಸುತ್ತ ಮೆಲ್ಲಗೆ ಹೇಳಿದ.

ಅರವತ್ತು ಪೈಸೆಗೆ ಒಂದು ರೈಸು ಪ್ಲೇಟು, ಐದು ಪೈಸೆಗೆ ಒಂದು ಕಡ್ಲೆ ಬೇಳೆ ವಡೆ
‘’ಅದು ಗೋಮ್ಲಿ… ಶೇಗರಪ್ಪೋರೇ. ನಂಗಳ್‌ ಹೊಟ್ಲುಕು ನದೀ ನೀರು ತಂದು ಹಾಕ್ತದೆ. ದಿನಕ್ಕೆ ಇಪ್ಪತ್ತು ಬಿಂದಿಗೆ. ಹಾಂ! ಚುಮ್ಮನೆ ಅಲ್ಲ. ದಿನಕ್ಕೆ ಐವತ್ತು ಪೈಸೆ ಚುಂಬಳಾ ಕೊಡ್ತೇನೆ. ಮೇಲೆ ಒಂದು ಪ್ಲೇಟು ಚೋರು [ಊಟ] ಫ್ರೀ ನಲ್ಲ ಪೆಣ್ಣು ಉಂಡು ಗೋಮ್ಲಿ’’

ಅದನ್ನು ಹೇಳುವಾಗ ಅವನು ಬಾಯಲ್ಲಿ ಕಚ್ಚಿ ಹಿಡಿದಿದ್ದ ಅರ್ಧ ಸುಟ್ಟ ಬೀಡಿಯ ಬೂದಿ ಅದೆಲ್ಲಿ ನನ್ನ ತಟ್ಟೆಯಲ್ಲಿ ಬಂದು ಬೀಳುತ್ತದೋ ಎಂದು ಗಾಬರಿಯೂ ಆಯಿತು. ದಾಮೋದರನ್‌ ನಕ್ಕು ರಿಯುತ್ತಿದ್ದ ಒಲೆಯ ಕಟ್ಟಿಗೆ ಸರಿಸಲು ಅತ್ತ ಹೋದ. ಚಾಂದಗುಡೆಯವರು ಹ್ಹಹ್ಹಹ್ಹ ಎಂದು ನಕ್ಕರು.

ಹಿತ್ತಲಲ್ಲಿದ್ದ ಡ್ರಮ್ಮಿಗೆ ನೀರು ಸುರುವಿ ಹೊರಗೆ ಬಂದ ಗೋಮ್ಲಿ ನನ್ನನ್ನು ಒಮ್ಮೆ ನೋಡಿ ಮುಗುಳು ನಗೆ ಬೀರಿದಳು. ಮತ್ತೆ ಅಲ್ಲಿ ನಿಲ್ಲದೆ ನದಿಯತ್ತ ಬಳಕುತ್ತ ಜಿಂಕೆಯಂತೆ ಓಡಿದಳು. ಹಾಗೇ ನದಿಗೆ ಇಳಿಯುವ ಮೆಟ್ಟಿಲಲ್ಲಿ ಪುಟಿಯುತ್ತ ಖಾಲೀ ಬಿಂದಿಗೆ ಹಿಡಿದುಬಿದಿರು ಮೆಳೆಯಲ್ಲಿ ಮರೆಯಾದಳು. ದಾಮೋದರನ್‌ ನಗುತ್ತ ವ್ಯಂಗ್ಯವಾಗಿ ಮೆಲ್ಲಗೆ ಹೇಳಿದ.

‘’ಶೇಗರಪ್ಪೋರು ಚೆರಿಕ್ಕದು. ಚೆರಿಕ್ಕು… ಚೆರಿಕ್ಕು.. [ನಗ್ತಾ ಇದಾರೆ. ನಗ್ರಿ…ನಗ್ರೀ…] ‘’ ಅದಕ್ಕೆ ನಾನು ಏನೂ ಮಾತಾಡಲಿಲ್ಲ.

ಇಲ್ಲಿ ಉದ್ರಿ ಊಟ ಸಿಗುತ್ತದೆ. ರೋಖಡೀ ಪರಂಪರೆ ಇಲ್ಲ.
ಇಬ್ಬರೂ ಊಟ ಮುಗಿಸಿ ಮೇಲೆದ್ದೆವು. ನಾನು ದುಡ್ಡು ಎಷ್ಟೆಂದು ಕೇಳಿದೆ. ಚಾಂದಗುಡೆಯವರು ಅಡ್ಡ ಕೈ ಹಿಡಿದು.

meal
ಫೋಟೋ ಕೃಪೆ : YouTube

‘’ಛೇಛೇ… ಇಲ್ಲಿ ರೋಕಡೀ ಅನ್ನೂದಽ ಇಲ್ಲ. ಎಲ್ಲಾ ಉದ್ರೀ ವ್ಯಾಪಾರ. ದಾಮೋದರಜೀ… ಇವತ್ನಿಂದ ಶೇಖರ ಹೆಸರೀಗಿ ನಿಮ್ಮ ಚೋಪಡೀಯೊಳಗ ಲೆಕ್ಕದ ಖಾತೆ ಸುರು ಮಾಡ್ರಿ. ಅರವತ್ತು ಪೈಸೆಗೆ ರೈಸು ಪ್ಲೇಟು ಊಟ. ಹತ್ತು ಪೈಸೆಗೆ ಎರಡು ವಡೆ. ಅಂದ್ರ… ಒಬ್ಬೊಬ್ಬರದು ಎಪ್ಪತ್ತು ಪೈಸೆ ಆತು. ಇವತ್ತು ಟೀ ನಾಷ್ಟಾ ಏನೂ ಇಲ್ಲ ತಗೊಂಡಿಲ್ಲ. ತಿಂಗಳ ಪಗಾರದ ದಿನ ಚುಕ್ತಾ. ಆತ? ಲೆಕ್ಕಾ ಬರಕೋರೆಪಾ ದಾಮೋದರಾ… ಹ್ಹಿಹ್ಹಿಹ್ಹಿ…’’ ಎಂದು ನಕ್ಕರು.

ದಾಮೋದರನ್‌ ಬೀಡಿಯ ದಮ್ಮು ಜೋರಾಗಿ ಎಳೆದು ‘ಆಚಿ… ಆಚಿ. ನೀ ಪೋಯಿಕೋ…’ ಎನ್ನುತ್ತ ಲೆಕ್ಕ ಬರೆದುಕೊಂಡ. ಇಂಥ ಅಪರಿಚಿತ ಕಾಡಿನಲ್ಲಿ ಉದ್ದರಿ ಊಟವೂ ಸಿಕ್ಕಿತು. ನಾಳೆಯಿಂದ ಬೆಳಗಿನ ತಿಂಡಿ ಚಹ ಎಲ್ಲವೂ ಇಲ್ಲಿಯೇ. ಅದನ್ನೂ ಉದ್ದರಿ ಬರೆದುಕೊಳ್ಳುತ್ತಾನೆ.

‘’ಯಾವೂರಾಗ ಸಿಗತೈತರೀ ಇಷ್ಟು ಅನುಕೂಲ. ಒಂದು ತಿಂಗಳು ನಿಶ್ಚಿಂತರಾಗಿ ಇರ್ರಿ. ದಾಮೋದರ ಎಲ್ಲಾರಿಗೂ ಹಿಂಗ ಉದ್ದರೀ ಕೊಡೂದಿಲ್ಲ. ನಾ ಸರಕಾರಿ ಮನಿಶಾ. ನೀವೂ ಅರೆ ಸರಕಾರಿ ಈಗ. ಅದಕ್ಕಂತನ ಉದ್ದರೀ ಕೊಡತಾನು.

ಉಳಿದಾವ್ರಿಗೆ ವಾರದ ಲೆಕ್ಕ. ಹೂಂ… ಹ್ಹಹ್ಹಹ್ಹ….’’

ನಗರಗಳಲ್ಲಿ ಕೈಯಲ್ಲಿ ಕಾಸಿದ್ದರೆ ಹೊಟ್ಟೆಗೆ ಅನ್ನ. ಆದರೆ ಇಂಥ ಕಾಡಿನಲ್ಲಿ ಕಾಸು ಇಲ್ಲದಿದ್ದರೂ ಹೊಟ್ಟೆಗೆ ಮೋಸವಿಲ್ಲ. ಆಗ ನನಗೆ ಮತ್ತೆ ಶೂರ್ಪನಖಿ ನೆನಪಾದಳು. ಶೂರ್ಪನಖಿಯ ಕಾಡಲ್ಲಿ ಅನ್ನಕ್ಕೆ ಬರ ಇಲ್ಲ.

ಕಾಳೀ ಯೋಜನೆಯ ಮಾಡೆಲ್‌ ತರಲು ಬೆಂಗಳೂರಿಗೆ ಹೋಗಿತ್ತು. ಫೋರ್ಡ ಲಾರಿ
ಮಲಯಾಳೀ ಗಂಡು. ಮರಾಠೀ ಹೆಣ್ಣು …
truck

ಫೋಟೋ ಕೃಪೆ : Piterest

ದಾಮೋದರನ್‌ ಹೊಟೆಲಿನಲ್ಲಿ ಊಟ ಮಾಡಿ ಬಂದ ನಾವು ಫೀಲ್ಡ ಆಫೀಸೀನಲ್ಲಿಯೇ ತುಸು ಹೊತ್ತು ಕಳೆದೆವು. ಅಲ್ಲಿದ್ದ ಹಾರೆಗಳು, ಪಿಕಾಸಿಗಳು, ಗುದ್ದಲಿಗಳು, ಕೊಯ್ತಗಳು, ಕಬ್ಬಿಣದ ಬುಟ್ಟಿಗಳು, ನೂರು ಅಡಿ ಉದ್ದದ ಬಟ್ಟೆಯ ಅಳತೆಯ ಟೇಪು ಎಲ್ಲವನ್ನೂ ಚಾಂದಗುಡೆ ಲೆಕ್ಕ ಹಾಕಿ ಹೇಳಿದರು. ಸರ್ವೇ ಲೆವೆಲ್‌ ಪೆಟ್ಟಿಗೆಗಳೂ ಅಲ್ಲಿದ್ದವು. ಸ್ಟೋರು ಕೀಪರ್‌ ಕಾಶೀನಾದನ್‌ ಪಿಳ್ಳೆ ಆಗಲೇ ಊಟ ಮಾಡಿ ಬಂದಿದ್ದ. ಮನೆಯಲ್ಲಿ ಅವನಿಗೆ ಹೆಂಡತಿ ಇರಬೇಕು ಅಂದುಕೊಂಡೆ. ಆದರೆ ಅದಕ್ಕೂ ವಿವರಣೆ ಕೊಟ್ಟರು ಚಾಂದಗುಡೆ.

ಕಾಶೀನಾದನ್‌ ಊರು ಎರ್ಣಾಕುಲಂ ಅಂತೆ. ಅಲ್ಲಿ ಅವನಿಗೆ ಹೆಂಡತಿ ಮಕ್ಕಳು ಇದ್ದಾರಂತೆ. ವರ್ಷಕ್ಕೊಂದು ಸಲ ಅಲ್ಲಿಗೆ ಹೋಗಿ ಮುಖ ನೋಡಿಕೊಂಡು ಬರುತ್ತಾನಂತೆ. ಇಲ್ಲಿ ಮರಾಠಿಯ ನಡುವಯಸ್ಸಿನ ತುಳಜಾಬಾಯಿಯನ್ನು ತಂದು ಇಟ್ಟಕೊಂಡಿದ್ದಾನೆ. ಇಬ್ಬರೂ ಡಿಪಾರ್ಟಮೆಂಟ ಶೆಡ್ಡಿನಲ್ಲಿದ್ದಾರೆ.

ತುಳಜಾಬಾಯಿಗೂ ಗಂಡನಿದ್ದನಂತೆ. ಲವ ಅಂತ ಅವನ ಹೆಸರು. ಮಹಾರಾಷ್ಟ್ರದ ರತ್ನಾಗಿರಿ ಕಡೆಯಿಂದ ದುಡಿಯಲು ಬಂದವರು. ಲವ ಒಂದಿನ ತುಳಜಾಬಾಯಿಯನ್ನು ಬಿಟ್ಟು ರಾತ್ರೋರಾತ್ರಿ ಡ್ಯಾಮ ಸೈಟಿನಿಂದ ಫರಾರಿಯಾದನಂತೆ. ಅಂದಿನಿಂದ ಆಕೆಗೆ ಈ ಕಾಶೀನಾದನ್‌ ಆಕೆಗೆ ಆಶ್ರಯ ಕೊಟ್ಟನಂತೆ. ಆಕೆಯೂ ನಮ್ಮ ಕಡೆಯೇ ದಿನಗೂಲಿ ಕೆಲಸಕ್ಕೆ ಬರುತ್ತಾಳೆ. ಜಂಗಲ್‌ ಕಟಿಂಗ್‌ ಟೀಮಿನಲ್ಲಿದ್ದಾಳೆ ಎಂಬ ಮಾಹಿತಿ ಕೊಟ್ಟು ಹ್ಹಹ್ಹಹ್ಹ… ಎಂದು ನಕ್ಕುಬಿಟ್ಟರು.

ನಾಳೆ ಮುಂಬೈಯಿಂದ ಆರ್‌.ಜೆ.ಶಾಹ್‌ ಕಂಪನಿಯವರು ಬರುತ್ತಾರೆ
ನಾಳೆಯಿಂದ ಕೆಲಸ ಹೆಚ್ಚು. ಮುಂಬೈಯಿಂದ ಆರ್‌.ಜೆ.ಶಾಹ್‌ ಕಂಪನಿಯವರು ಬರುತ್ತಾರೆ. ಅವರಿಗೆ ಡ್ರಿಫ್ಟ ಸುರಂಗ ಕೊರೆಯುವ ಕೆಲಸದ ಟೆಂಡರ್‌ ಸಿಕ್ಕಿದೆ. ದೊಡ್ಡ ರಕಮಿನ ಕೆಲಸ. ಎರಡು ಕೋಟಿಯ ಕೆಲಸವಂತೆ. ಕೋಟಿಯ ಲೆಕ್ಕ ಕೇಳಿಯೇ ನಮ್ಮ ತಲೆ ತಿರುಗಿತ್ತು. ಅವರೇನಾದರೂ ಬೇಗ ಇಲ್ಲಿಗೆ ಬಂದು ಕೆಲಸ ಸುರು ಮಾಡಿದರೆ ನಮಗೆ ದಿನವೂ ಬೆಟ್ಟ ಹತ್ತಿ ಇಳಿಯುವ ಕೆಲಸ ಇನ್ನೂ ಜೋರಾಗುತ್ತದೆ. ಚಿಂತಿತರಾದ ಚಾಂದಗುಡೆಯವರು ವಯಸ್ಸಿನ ಕಾರಣಕ್ಕೆ ಸವೆದು ಹೋದ ತಮ್ಮ ಮೊಣಕಾಲುಗಳನ್ನು ನೀವಿಕೊಂಡರು.

ನಾಳೆ ಬೆಂಗಳೂರಿನಿಂದ ಕಾಳೀ ನದಿ ಯೋಜನೆಯ ಮಾಡೆಲ್ಲು ಬರುತ್ತದೆ. ಇಳುವರಸನ್ ಅದನ್ನು ತರಲೆಂದೇ. ಫೋರ್ಡ್‌ ಲಾರಿ ತಗೆದುಕೊಂಡು ಬೆಂಗಳೂರಿಗೆ ಹೋಗಿದ್ದಾನೆ. ಮುಂಜಾನೆ ಎಂಟಕ್ಕೆ ಡ್ಯಾಮ ಸೈಟಿಗೆ ಲಾರಿ ಬರುತ್ತದೆ.

ಅದು ಬರುವ ಹೊತ್ತಿನಲ್ಲಿ ಎಲ್ಲರೂ ಇಲ್ಲಿಯೇ ಇರಬೇಕು. ಮಾಡೆಲ್‌ನ್ನು ಲಾರಿಯಿಂದ ಇಳಿಸುವುದಿದೆ ಎಂದು ನಾಯಕ ಸಾಹೇಬರು ಎಲ್ಲರಿಗೂ ಹೇಳಿದ್ದರು. ಹಾಗಾಗಿ ನಾಳೆ ಬೇಗ ಬರುವ ಕಾರಣಕ್ಕೆ ನಾನು ಮತ್ತು ಚಾಂದಗುಡೆ ಇಬ್ಬರೂ ಬೇಗ ಸೂಪಾ ಕಡೆಗೆ ಹೊರಟೆವು.

ಮತ್ತೆ ಸೂಪಾ ಕಡೆಗೆ …
ಇವತ್ತೇ ಆಫೀಸು ಖಾಲೀ ಮಾಡ್ರಿ ಶೇಖರ್‌… ರಾತ್ರಿ ಇಲ್ಲಿ ಮಲಗೋದು ಬೇಡ. ಸಾಹೇಬರಿಗೆ ಕೋಳೀ ಲೆಕ್ಕ ಕೊಡೋದು ನನಗೂ ಕಷ್ಟ ಆಗುತ್ತೆ ಸೂಪಾದಲ್ಲಿ ಸಂಜೆ ಹೊತ್ತು ನನಗೊಂದು ವೆಲ್‌ ಕಮ್‌ ಪಾರ್ಟಿ
ಮತ್ತೆ ಬೆಳಿಗ್ಗೆ ಬಂದ ದಾರಿಯಲ್ಲಿಯೇ ಇಬ್ಬರೂ ವಾಪಸು ನಡೆದುಕೊಂಡೇ ಸೂಪಾಕ್ಕೆ ಬಂದೆವು. ಇಳಿಹೊತ್ತಿನಲ್ಲಿ ಒಂದೂವರೆ ಮೈಲಿ ದೂರದ ಕಾಡು ಹಾದಿ. ನಡು ದಾರಿಯಲ್ಲಿ ಸಣ್ಣದಾಗಿ ಹರಿದು ನದಿಯತ್ತ ಹೋಗುತ್ತಿದ್ದ ಝರೀ. ಅದನ್ನು ದಾಟಿಕೊಂಡು ಮುಂದೆ ಬಂದರೆ ಪಿ.ಆರ್‌.ನಾಯಕ ಹೆಸರಿನ ಕಟ್ಟಿಗೆಯ ಅಡ್ಡೆ ಮತ್ತು ಚಾಳ. ಅದನ್ನು ದಾಟಿ ಮುಂದೆ ಬಂದರೆ ಫಾರೆಸ್ಟಿನವರ ಕೆಂಪು ಹೆಂಚಿನ ವಸತಿ ಕಟ್ಟಡಗಳು. ಇಬ್ಬರೂ ಲಕ್ಕೀ ಹೊಟೆಲ್ಲು ದಾಟಿಕೊಂಡೆ ಹೋಗಬೇಕು. ಚಾಂದಗುಡೆಯವರ ಚಾಳವೂ ಅಲ್ಲಿಯೇ. ನಾನಿದ್ದ ಆಫೀಸೂ ಅಲ್ಲಿಯೇ.

supa5
ಸೂಪಾ ೧೯೭೧, ಚಿತ್ರ ಸಂಗ್ರಹ : ಶ್ರೀ . ವಿ. ಎಸ್. ಚಳಗೇರಿ

‘’ಐದಕ್ಕ ಮನೀ ಹತ್ತರ ಬರ್ರಿ. ನಿಮಗ ಖೋಲೇ ತೊರಸ್ತೀನಿ. ಹೆಂಗೂ ಕೀಲೀಕೈ ನನ್ನ ಕಡೇನ ಐತಿ. ಓನರ್‌ ಹತ್ರ ಇಸ್ಕೊಂಡೀನಿ. ಎಲ್ಲಾ ಪಸಂದ ಆದ್ರ ಇವತ್ತಽ ಮನೀ ಹೊಕ್ಕು ಬಿಡ್ರಿ. ಹೆಂಗೂ ನಾವೂ ಅಲ್ಲೇ ಇರತೀವಲ್ಲ’’ ನಾನು ‘ಹೂಂ’ ಅಂದು ಹಾಲಿ ವಸ್ತಿ ಮಾಡಿದ್ದ ಆಫೀಸೀನ ಕಡೆಗೆ ಹೊರಳಿದೆ.
ಅದು ಇನ್ನೂ ಆಫೀಸಿನ ಸಮಯ. ಅಲ್ಲಿ ಇಂಜನಿಯರ ರಾಮಚಂದ್ರರಾವ ಮತ್ತು ಚಾಮರಾಜ ಅವರು ಏನೋ ಪ್ರಾಜೆಕ್ಟ ಮ್ಯಾಪಗಳನ್ನು ನೋಡುತ್ತ ಕೂತಿದ್ದರು. ಭೈರಾಚಾರಿಯವರು ತಮ್ಮ ಟೇಬಲ್‌ ಬಳಿ ಕೂತು ಲೆಕ್ಕ ಬರೆಯುತ್ತಿದ್ದರು. ನನ್ನನ್ನು ನೋಡಿದವರೇ-

‘’ಇವತ್ತು ಬಾಡಿಗೆ ಮನೆ ಫಿಕ್ಸ ಆಗುತ್ತೆ ಶೇಖರ್‌. ಬೇಕಾದ್ರೆ ರಾತ್ರೀನೆ ಅಲ್ಲಿಗೇ ಹೋಗಿ ಬಿಡಿ. ನಾಳೆ ಬೆಳಿಗ್ಗೆ ನಮ್ಮ ಸಾಹೇಬ್ರು ಬಂದ್ರೂ ಬರಬಹುದು. ಅವರು ಇಲ್ಲಿ ಬಂದಾಗ ನೀವು ಇಲ್ಲಿರೋದು ಸರಿಯಲ್ಲ’’ಎಂದು ನೇರವಾಗಿ ಹೇಳಿಬಿಟ್ಟರು. ನನಗೆ ಮುಜುಗುರವಾಗಿ ಸುಮ್ಮನೆ ನಿಂತೆ.

ಹೆಂಡತಿ ಕಣ್ಣಲ್ಲಿ ನಾನೊಬ್ಬ ಕತೆಗಾರ. ಗಂಡನ ಕಣ್ಣಲ್ಲಿ ನಾನೊಬ್ಬ ಕೋಳೀ ಕಳ್ಳ
ಬಹುಶಃ ಅವರಿಗೆ ರಾತ್ರಿ ಹೆಬ್ಬಾವು ಬಂದಿಲ್ಲ. ಕೋಳಿಯನ್ನೂ ನುಂಗಿಲ್ಲ. ಇವರೇ ಕತೆ ಕಟ್ಟಿ ಲಕ್ಕೀ ಹೊಟೆಲ್ಲಿನವನಿಗೆ ಕೋಳಿ ಮಾರಿಕೊಂಡಿದ್ದಾರೆ ಎಂಬ ಅನುಮಾನ ಇದ್ದಂತಿತ್ತು. ಅವರ ದೃಷ್ಟಿಯಲ್ಲಿ ನಾನು ಕೋಳೀ ಕಳ್ಳನಾಗಿದ್ದೆ. ಅವರ ಹೆಂಡತಿ ಕಣ್ಣಲ್ಲಿ ನಾನೊಬ್ಬ ಯುವ ಸಾಹಿತಿ. ಕತೆಗಾರ. ಗಂಡನ ಕಣ್ಣಲ್ಲಿ ನಾ.ನೊಬ್ಬ ಕೋಳೀ ಕಳ್ಳ ‘’ಗಾಬರಿಯಾಗಬೇಡಿ. ಹಾಗೆ ತೊಂದ್ರೆ ಕೊಡೋ ಉದ್ದೇಶ ನನಗಿಲ್ಲ. ನಾನು ಸಾಹೇಬರಿಗೆ ಬೇಕಾದ್ರೆ ಹೇಳ್ತೀನಿ ಬಿಡಿ. ಆದ್ರೆ ಬೆಳಿಗ್ಗೆ ನೀವು ಯಾವ ಕಾರಣಕ್ಕೂ ಇಲ್ಲಿರಬೇಡಿ’’ ಎಂದೂ ಹೇಳಿದರು. ಈ ಭೈರಾಚಾರಿಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದುಕೊಂಡೆ ಮನಸಿನಲ್ಲಿ. ನನಗೆ ಮಾತಾಡಲು ಶಬ್ದಗಳೇ ಇರಲಿಲ್ಲ. ತಲೆಯಾಡಿಸಿ ಮೂಲೆಯಲ್ಲಿಟ್ಟಿದ್ದ ನನ್ನ ಬಣ್ಣದ ಟ್ರಂಕಿನ ಕಡೆಗೆ ಹೋದೆ. ಹಾಗೆ ಹೋಗುವಾಗ ಕೋಳಿಗಳು ಇದ್ದ ರಿಕಾರ್ಡಿಂಗ್‌ ರೂಮಿನತ್ತ ನೋಡಿದೆ. ಕದ ಹಾಕಿ ಚಿಲಕ ಹಾಕಿದ್ದರು.

ಒಳಗೆ ಅವುಸದ್ದು ಮಾಡುತ್ತಿದ್ದವು. ಹಗಲು ಹೊತ್ತು ಹಾವು ಬರುವುದಿಲ್ಲ ಎಂಬ ಖಾತ್ರಿ ನನಗಿತ್ತು. ಭೈರಾಚಾರಿಯವರು ನನ್ನಿಂದಲೇ ಅವುಗಳಿಗೆ ಕಾಳು ನೀರು ಹಾಕಿಸಿದರು. ಅವುಗಳ ಹಿಕ್ಕೆ ಗುಡಿಸಲು ಹೇಳಿದರು. ಸಹಿಸಿಕೊಂಡು ಮಾಡಿದೆ. ಚಾಂದಗುಡೆಯವರ ಮನೆಗೆ ಹೋಗುವ ಮುನ್ನ ಪರಿಮಳಾ ಅವರು ಹೇಳಿದ್ದು ನೆನಪಾಯಿತು. ಇತ್ತೀಚೆಗೆ ಯಾವ ಕತೆ ಬರೆದಿದ್ದೀರಿ ತಂದು ಕೊಡಿ. ಓದ್ತೀನಿ ಅಂದಿದ್ದರು. ಕತೆ ಬರೆಯುವವನಿಗೆ ಇಷ್ಟೊಂದು ಸಲೀಸಾಗಿ ಓದುಗರೊಬ್ಬರು ಸಿಗುತ್ತಾರೆ ಅಂದರೆ ಅದು ಸಾಮಾನ್ಯ ಮಾತಲ್ಲ.

ನನ್ನ ಮೊದಲ ಕತೆ ‘ಭೋಲೋ…! ಮಾತಾಕೀ !’
ಬಣ್ಣದ ಟ್ರಂಕಿನಲ್ಲಿ ಬರೆದಿಟ್ಟಿದ್ದ ಹಸ್ತಪ್ರತಿಗಳನ್ನು ಹುಡುಕಿದೆ. ಅದರಲ್ಲಿ ನಾನು ಬೆಲಗಾವಿಯಲ್ಲಿ ಓದುತ್ತಿದ್ದಾಗ ಬರೆದಿಟ್ಟಿದ್ದ ಡೈರಿ, ಲೇಖನಗಳು, ಐದಾರು ಕತೆಗಳು ಇದ್ದವು. ಅದರಲ್ಲಿ ಬೋಲೋ! ಮಾತಾಕೀ!… ಎಂಬ ಕತೆ ಮೇಲೆಯೇ ಇತ್ತು. ಅದನ್ನೇ ಎತ್ತಿ ಬದಿಗಿಟ್ಟೆ. ಅದನ್ನೇ ಪರಿಮಳಾ ಅವರಿಗೆ ಓದಲು ಕೊಡಬೇಕು ಎಂದು ತಗೆದಿಟ್ಟುಕೊಂಡೆ.

Hoolishekhar

ಸೂಪಾ ೧೯೭೧, ಹೂಲಿಶೇಖರ್

ಚಾಂದಗುಡೆಯವರ ಮನೆಗೆ ಹೋಗುವ ಮುಂಚೆ ಟೀ ಕುಡಿಯುವ ಬಯಕೆಯಾಯಿತು. ಲಕ್ಕೀ ಹೋಟೆಲ್ಲಿನ ಕಡೆಗೆ ನಡೆದೆ. ಪಾನ್‌ ಶಾಪಿನ ಹುಡುಗಿ ಅಲ್ಲೇ ಒಳಗೆ ಕೂತು ನನ್ನತ್ತ ನೋಡಿದಳು. ನಾನು ಅವಳ ಗಿರಾಕಿ ಅಲ್ಲ ಎಂದು ಆಕೆಗೆ ನಿನ್ನೆಯೇ ಗೊತ್ತಾಗಿತ್ತು. ಆದರೂ ನನ್ನ ನೋಡಿ ಮುಗುಳ್ನಕ್ಕಳು. ಬಯಲು ಸೀಮೆಯ ಕಡೆ ಹೀಗೆ ಹುಡುಗಿಯೊಂದು ನೋಡಿ ನಕ್ಕರೆ ಅದಕ್ಕೆ ಬೇರೆ ಅರ್ಥವನ್ನೇ ಜನ ಕಲ್ಪಿಸುತ್ತಾರೆ. ನಾನು ಸೀದಾ ಕಾಕಾನ ಹೊಟೆಲ್ಲಿನೊಳಗೆ ಹೋದೆ. ಜನ ಅಷ್ಟಿರಲಿಲ್ಲ. ಬೆಂಚಿನ ಮೇಲೆ ಕೂತು ಒಂದು ಟೀ. ಒಂದು ಪ್ಲೇಟು ಶಂಕರ ಪಾಳಿಗೆ ಆರ್ಡರ್‌ ಮಾಡಿದೆ. ಮೂಸಾ ಕಾಕಾನೇ ತಂದು ಕೊಟ್ಟ. ಚಹ ಹೊಟ್ಟೆಗೆ ಇಳಿದ ಮೇಲೆ ಸಮಾಧಾನವಾಯಿತು. ಬಾಡಿಗೆ ಮನೆಯ ತೀರ್ಮಾನ ಇಂದೇ ಮಾಡಬೇಕು. ಹೇಗೂ ಭೈರಾಚಾರಿಯವರು, ಚಾಂದಗುಡೇಯವರು ಸಂಸಾರ ಸಮೇತ ಅಲ್ಲೇ ಇರುತ್ತಾರೆ. ಯಾವುದಕ್ಕೂ ಚಿಂತೆಯಿರುವುದಿಲ್ಲ. ಹಾಗೆಂದು ನಿರ್ಧರಿಸಿಕೊಂಡೇ ಚಾಂದಗುಡೇಯವರ ಮನೆಯತ್ತ ನಡೆದೆ.


[ಮುಂದಿನ ಶನಿವಾರ ಮತ್ತೆ ನಿಮ್ಮ ಮುಂದೆ. ಮುಂದಿನ ವಾರ ಇನ್ನಷ್ಟು ರೋಚಕ ಕತೆ. ತಪ್ಪದೇ ಓದಿರಿ – ಕಾಳೀ ಕಣಿವೆಯ ಕತೆಗಳು ಇದು ಬೆಳಕು ತಂದವರ ಕತ್ತಲ ಕತೆ]


  • ಹೂಲಿಶೇಖರ್
    (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

bf2fb3_58479f997cba4852bd3d7a65d4c785a4~mv2.png

 

5 1 vote
Article Rating

Leave a Reply

6 Comments
Inline Feedbacks
View all comments
Aravind Kulkarni

ಅನುಭವ ಕುತೂಲಕಾರಿಯಾಗಿದೆ

ಲಕ್ಷ್ಮಿ G N

ತುಂಬಾ ಸೊಗಸಾದ ಬರಹ. ಸಲೀಸಾಗಿ ಓದಿಸಿಕೊಂಡು ಹೋಗುತ್ತಿದೆ. ಮುಂದಿನ ಸಂಚಿಕೆ ಯಾವಾಗ ಬರುತ್ತೋ ಎಂದು ಕಾಯುವಂತಾಗಿದೆ. ಬಯಲು ಸೀಮೆಯವರು ಕಂಡರಿಯದ ಪರಿಸರ. ಕಾಡು ನದಿಯ ಸಾಮಿಪ್ಯ ಇಷ್ಟು ಚೆಂದ ಎಂದು ತಿಳಿಯದವರು ನಾವು. ಆದರೂ ನೀವೆಲ್ಲ ಪಟ್ಟ ಶ್ರಮ ಕಣ್ಣಿಗೆ ಕಟ್ಟಿದಂತೆ ಬರೆದಿದ್ದೀರಿ

ಲಕ್ಷ್ಮೀ ನಾಡಗೌಡ

ಮೂಲ ಛಾಯಾಚಿತ್ರಗಳು ಈ ಸಂಚಿಕೆಯಲ್ಲಿ ಗಮನ ಸೆಳೆದವು…

Pandurang V Asalankar

ಕಾಳೀ ನದಿಯ ಸವಿ ನೆನಪುಗಳನ್ನು ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು. I still remember u sir when u were practicing the play in KHEP High school Ambikanagar. we used to watch those practice session from window, Priceless memories 🙏🙏🙏🙏🙏

prabhakar.y.s.

Dear,Shekar
Swarasyakara anubhavagalannu inchinchagi henedu,
nanagantu
chitragalannu bidisi kottidderi.
nanna anubhavagalannu nenesi kondu khushi paduttini.
Dhanyavadagalu.
Prabhakar.y.s.

Home
News
Search
All Articles
Videos
About
6
0
Would love your thoughts, please comment.x
()
x
%d
Aakruti Kannada

FREE
VIEW