‘ಕಾಗೆ ಮುಟ್ಟಿದ ನೀರು’ ಪುಸ್ತಕ ಪರಿಚಯ

ಬಂಟಮಲೆ ಎನ್ನುವ ಕುಗ್ರಾಮದಲ್ಲಿ ಹುಟ್ಟಿ ಬಡತನವನ್ನೇ ಹಾಸು ಹೊದ್ದ ಕುಟುಂಬವೊಂದರಲ್ಲಿ ಜನಿಸಿದ ವ್ಯಕ್ತಿ ಮುಂದೆ ಅಮೇರಿಕಾ, ಜಪಾನ್, ಇಸ್ರೇಲ್ ತಲುಪಿದ ಕತೆಯೇ ಡಾ.ಪುರುಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟಿದ ನೀರು’. ಈ ಪುಸ್ತಕದ ಕುರಿತು ರಾಜೇಶ್ ಕುಮಾರ್ ಕಲ್ಯಾ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ: ಕಾಗೆ ಮುಟ್ಟಿದ ನೀರು ( ಚದುರಿ ಬಿದ್ದ ಆತ್ಮದ ತುಣುಕುಗಳು)
ವಿಭಾಗ: ಆತ್ಮಕಥೆ
ಲೇಖಕರು: ಡಾ.ಪುರುಷೋತ್ತಮ ಬಿಳಿಮಲೆ
ಬೆಲೆ: 310 ರೂ.
ಪ್ರಕಾಶಕರು: ಅಹರ್ನಿಶಿ ಪ್ರಕಾಶನ ಶಿವಮೊಗ್ಗ ( 9449174662)

ಒಂದೇ ಮಾತಿನಲ್ಲಿ ಹೇಳುವುದಾದರೆ ನಾನು ಓದಿದ ಅತ್ಯುತ್ತಮ ಪುಸ್ತಕಗಳ ಸಾಲಿನಲ್ಲಿ ಈ ಆತ್ಮಕಥೆ ಸೇರುತ್ತದೆ. ಪೂರ್ತಿಯಾಗಿ ಓದಿದಾಗ ಎಂತವರಿಗಾದರೂ ಸ್ಪೂರ್ತಿದಾಯಕವೆನಿಸುವುದರಲ್ಲಿ ಅನುಮಾನವಿಲ್ಲ. ಬಡತನವನ್ನೇ ಹಾಸು ಹೊದ್ದ ಕುಟುಂಬವೊಂದರಲ್ಲಿ ಜನಿಸಿ , ಜೀವನವಿಡೀ ಸಾವಿನ ಹೊಸ್ತಿಲಲ್ಲಿ ನಿಂತು ಸಾಧನೆಗೈಯುವುದೆಂದರೆ ಸುಲಭದ ಮಾತಲ್ಲ. ಈ ಪುಸ್ತಕವನ್ನು ಒಮ್ಮೆಗೇ ಓದಬಾರದು ಕನಿಷ್ಟ ವಾರವಾದರೂ ತೆಗೆದುಕೊಂಡು ನಿಧಾನವಾಗಿ ಅನುಭವಿಸಿ ಓದಿದರೆ ಉತ್ತಮ.

ಬಂಟಮಲೆ ಎನ್ನುವ ಕುಗ್ರಾಮದಿಂದ ಹೊರಟ ಅವರ ಪಯಣ ಅಮೇರಿಕಾ ಜಪಾನ್ ಇಸ್ರೇಲ್ ತಲುಪಿದ ಕತೆ ಎಂತವರನ್ನೂ ವಿಸ್ಮಿತರಾಗಿಸುತ್ತದೆ.. ಅದೂ ಹತ್ತಾರು ಖಾಯಿಲೆಗಳೊಂದಿಗೆ..! ಕರ್ರಗೆ ಕುರೂಪಿಯಾಗಿ ಜನಿಸಿದ ಮಗುವೊಂದನ್ನು ಮನೆಗೆ ಬಂದವರು ಅಲಕ್ಷಿಸಿ ದಾಟಿಕೊಂಡು ಹೋಗುವುದನ್ನು ಕಂಡು ನೊಂದು ಬೆಂದ ತಾಯಿ ಹೃದಯ..
ಈತ ವಿದ್ಯಾಹೀನನಾಗಿ ಬದುಕುತ್ತಾನೆ ಎನ್ನುತ್ತದೆ ಜ್ಯೋತಿಷ್ಯ!.

ಮುಂದೊಂದು ದಿನ ಇವೆಲ್ಲವನ್ನೂ ಮೀರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಬಾಲಕ.. ಭಾರತದ ಕಲೆ ಸಂಸ್ಕೃತಿಯನ್ನು ಜಗತ್ತಿನ ಪ್ರಮುಖ ದೇಶಗಳಲ್ಲಿ ಸಾರುವ ಅದೇ ಹುಡುಗ..! ರೋಯ್ತಾ ಎಂಬ ಹಳ್ಳಿಗ ಪುರುಷೋತ್ತಮನಾಗಿ ಬೆಳೆದ ಕತೆ. ಈ ಆತ್ಮಕಥೆಯ ಮೊದಲರ್ಧ ಭಾಗ ಪೇಟೆಯ ಜನರಿಗೆ ಹಳ್ಳಿಜೀವನದ ಕಷ್ಟಕಟ್ಟಲೆಗಳನ್ನು ಹೇಳಿದರೆ, ಹಳ್ಳಿಗರಿಗೆ ತಮ್ಮ ಜೀವನದ ಅನುಭವಗಳನ್ನು ಉದ್ದೀಪನಗೊಳಿಸುವ ಕೆಲಸ ಮಾಡುತ್ತದೆ.. ಇನ್ನರ್ಧ ಭಾಗ ಕಷ್ಟಗಳನ್ನು ಹೇಗೆ ಮೆಟ್ಟಿ ನಿಂತು ಸಾಧಿಸಿದರು ಎಂಬುದನ್ನು ತೋರಿಸುತ್ತದೆ..
ಬಾಲ್ಯದಲ್ಲಿ ತಾಯಿ ಬಡ್ಡಾದ ಕತ್ತರಿಯಲ್ಲಿ ಕೂದಲು ಕತ್ತರಿಸಿದ ನೋವಿನಿಂದ ಮುಂದೆ ಸೆಲೂನಿನನಲ್ಲಿ ಹೇರ್ ಕಟ್ ಮಾಡುವವನ ಕಂಡು ನಾನೂ ಕ್ಷೌರಿಕನಾಗಬೇಕು ಎಂಬ ಕನಸು , ಬಸ್ ಡ್ರೈವರನ್ನು ಕಂಡು ತಾನೂ ಡ್ರೈವರಾಗಬೇಕು ಎಂಬ‌ ಕನಸು.. ಇವೆಲ್ಲಾ ಪುಸ್ತಕವನ್ನು ಕೆಳಗಿಡಲು ಬಿಡುವುದೇ ಇಲ್ಲ.

ನನಗೆ ಇದರಲ್ಲಿ ಮನಸ್ಸಿಗೆ ನಾಟಿದ ಪ್ರಸಂಗಗಳೆಂದರೆ :

  • ಶಾಲೆಗೆ ಸೇರುವ ಒಂದೆರಡು ದಿನ‌ ಮೊದಲೇ ಪಂಜದಿಂದ ಹೊಸ ಅಂಗಿ ಚಡ್ಡಿ ಬಂತು . ಆ ದರ್ಜಿ ಅದೇನು ಅಷ್ಟು ಹೊತ್ತು ಅಳತೆ ತೆಗೆದು ಬರೆದುಕೊಂಡಿದ್ದನೋ ಏನೋ ಅವನಿಗೇ ಗೊತ್ತು. ಅಂಗಿ ಮೊಣಕಾಲಿನವರೆಗೂ ಚಾಚಿಕೊಂಡು ನನ್ನ ಹೊಸ ಚಡ್ಡಿಯನ್ನು ಮುಚ್ಚಿ ಹಾಕಿತ್ತು. ಆಗ ತಾನೇ ಹೊಲಿಸಿದ ಹೊಸ ಚಡ್ಡಿ ಹೊರ ಜಗತ್ತಿಗೆ ಕಾಣದಿದ್ದರೆ ಹಾಕಿ ಪ್ರಯೋಜನವೇನು? ನನಗೆ ತುಂಬಾ ಬೇಜಾರಾಗಿ ಹೊಸ ಅಂಗಿ ಚಡ್ಡಿಗಳ ಸುಖವೇ ಇಲ್ಲದಂತಾಯಿತು. ಅಪ್ಪ ಹೇಳಿದಂತೆ ದರ್ಜಿಯು ಅಂಗಿಯ ಭುಜದ ಭಾಗಕ್ಕೆ ಒಂದೆರಡು ಪಟ್ಟಿಗಳನ್ನು ಹೆಚ್ಚಿಗೇ ಸೇರಿಸಿದ್ದ. ಹಾಗಾಗಿ ಅದು ದಪ್ಪವಾಗಿ ಕಿವಿಯವರೆಗೆ ಬಂದು ನಿಂತಿತ್ತು. ಇಷ್ಟೆಲ್ಲಾ ಮಾಡಿಯೂ ಆತ ಚಡ್ಡಿಗೆ ಇಸ್ತ್ರಿ ಹಾಕಿರಲಿಲ್ಲ.‌ ಕಾಡು ನೋಡಲು ಬರುತ್ತಿದ್ದ ಗಾರ್ಡನ ಚಡ್ಡಿ ಹೇಗೆ ನೆಟ್ಟಗೆ ನಿಲ್ಲುತ್ತಿತ್ತು? ನೋಡಿ ದುಃಖ ಉಮ್ಮಳಿಸಿತು.
  • ರಾತ್ರಿಯಿಡೀ ಮರದ ಬುಡದಲ್ಲಿ ಗೊರಬೆಯೊಳಗೆ ಮುದುರಿಕೊಂಡು ಬಿದ್ದಿದ್ದ ನನ್ನನ್ನು ಬೆಳಿಗ್ಗೆ ಯಾರೋ ಅಲ್ಲಾಡಿಸಿದಾಗಲಷ್ಟೇ ಎಚ್ಚರ. ಕಣ್ಣುಬಿಟ್ಟಾಗ ಬಾಚಿ ತಬ್ಬಿಕೊಂಡಿದ್ದ ಅಮ್ಮ ಕಂಡರು. ರಾತ್ರಿ ಕಾಣೆಯಾಗಿದ್ದ ಬೆಳಕು ಮರದೆಡೆಯಿಂದ ನೆಲಕ್ಕಿಳಿದು ಅಮ್ಮನ ಕಣ್ಣೀರನ್ನು ಕಿರುತೊರೆಗೆ ಜೋಡಿಸಿದಂತೆ ಭಾಸವಾಯಿತು. ಅಮ್ಮ ಮೆಲ್ಲಗೆ ಕೈ ಹಿಡಿದೆಬ್ಬಿಸಿ ತೊರೆ ದಾಟಿಸಿ ಮನೆ ಕಡೆ ನಡೆದರು. ಆಗ ನಾನು ಕೇಳಿದೆ “ನಿನ್ನೆ ರಾತ್ರಿ ಹೊಳೆ ದಾಟಿಸಲು ಯಾಕೆ ಬರಲಿಲ್ಲ?’ ಅಮ್ಮ ಹೇಳಿದರು ” ನಿನ್ನೆ ಸಾಯಂಕಾಲ ನನ್ನನ್ನು ಕಾಗೆ ಮುಟ್ಟಿತ್ತು, ಮುಟ್ಟಿನ‌ ರಕ್ತ ಮೈಮೇಲಿರುವಾಗ ಕಾಡಲ್ಲಿ ನಡೆದರೆ ಕರಿಮಲೆಯ ಕಾಲೆ ಪಿಶಾಚಿಗಳೆಲ್ಲಾ ಮೈಗೆ ಸೇರಿಕೊಂಡು ದೇಹದ ರಕ್ತವನ್ನೆಲ್ಲಾ ಹೀರಿ ಸಾಯಿಸಿಬಿಡುತ್ತವೆ, ಹಾಗೆ ಸತ್ತರೆ ನಿನಗೆ ಅಮ್ಮ ಇಲ್ವಲ್ಲಾ? ಹಾಗಾಗು ಬಾರದೇ ಹೋದೆ.. ನೀನು ಕೂತ್ಕುಂಜ ಮನೆಗೆ ಹಿಂದಿರುಗಿ ಹೋಗಿರುವೆಯೆಂದಯ ಭಾವಿಸಿದೆ”

    ಈ ಘಟನೆ ನಡೆದು ಆರು ದಶಕಗಳಾಗುತ್ತವೆ.‌ಈಗಲೂ ಊರಿಗೆ ಹೋದಾಗ ಬಿಡುವು ಮಾಡಿಕೊಂಡು ಕಿರುತೊರೆಯ ಸಮೀಪವಿರುವ ಆ ಮರವನ್ನೊಮ್ಮೆ ದಿಟ್ಟಿಸಿ ನೋಡಿ ಮುಟ್ಟಿ ಬರುತ್ತೇನೆ. ಕರಿಮಲೆಯ ದಟ್ಟಾರಣ್ಯದಲ್ಲಿ ಇರುಳು ಕಳೆದು ಬದುಕುಳಿದ ಬಗೆಗೆ ಸೋಜಿಗವೆನಿಸುತ್ತದೆ. ಹೊಳೆಯೊಳಗೆ ಕಾಲಿಡುವಾಗ ಗೊತ್ತಿಲ್ಲದೇ ಒಂದೆರಡು ಹನಿ ಕಣ್ಣೀರು ತೊರೆಯೊಳಗೆ ಸೇರಿಕೊಂಡು ಕಾಣದಂತೆ ಮುಂದೆ ಹರಿದುಬಿಡುತ್ತದೆ.

  •  1980 ರ ದಶಕದಲ್ಲಿ ಹೃದಯವನ್ನು ಕೊಟ್ಟವಳು ಈಗ ಕಿಡ್ನಿ ತೆಗೆದುಕೋ ಎನ್ನುತ್ತಿದ್ದಾಳೆ. ಅದೂ ಅತ್ಯಂತ ನಿರ್ಮಲ ಚಿತ್ತದಲ್ಲಿ. ಆತಂಕ ರಹಿತ ದನಿಯಲ್ಲಿ, ಆದರೆ ನಿರ್ಣಾಯಕ ವಾಣಿಯಲ್ಲಿ. ನಾನದಕ್ಕೆ ಸಿದ್ಧನಾಗಿರಲಿಲ್ಲ. ಅತ್ಯಂತ ಆರೋಗ್ಯವಂತಳಾಗಿರುವ ಅವಳ ಕಿಡ್ನಿ ತೆಗೆದುಕೊಳ್ಳುವ ಅಧಿಕಾರವನ್ನು ನನಗ್ಯಾರು ಕೊಟ್ಟಿದ್ದಾರೆ? ಮನಸು ಒಪ್ಪಲಿಲ್ಲ.
    ಕೊನೆಯದಾಗಿ.
  • ದೆಹಲಿಯಲ್ಲಿ ಸತ್ತರೆ ಹೆಣ ಹೊರುವವರು ಯಾರು ಅಂತ ಯೋಚಿಸಿದರೆ ಉತ್ತರ ದೊರೆಯಲಿಲ್ಲ. ದೇಹವನ್ನು ಅಖಿಲ ಭಾರತ ವೈದ್ಯಕೀಯ ಸಂಸ್ಥೆಗೆ ದಾನ ಮಾಡುವ ಎಂದು ಅರ್ಜಿ ಫಾರಂ ತುಂಬಿ ಕಳುಹಿಸಿದೆ. ಕೆಲ ದಿನದಲ್ಲಿ ಒಬ್ಬ ಬಂದು ಕೆಲವು ವಿವರಗಳನ್ನು ಕೇಳಿದ.. ಎಲ್ಲಾ ಭರ್ತಿಯಾಗುತ್ತಿದ್ದಂತೆ ಆತ ಕೇಳಿದ “ನಿಮಗೇನಾದರೂ ಖಾಯಿಲೆಗಳಿದ್ದರೆ ಹೇಳಿ” ಸರಿ ಬರ್ಕೋ ಎಂದು ಕಾಲಂಗಳ ಭರ್ತಿ ಮಾಡುವಂತೆ ತಿಳಿಸಿದೆ.

‘ಕಣ್ಣು ಸರಿಯಿಲ್ಲ ಎಡಗಣ್ಣು ಕಾಣೋದಿಲ್ಲ’
‘ಹೃದಯಕ್ಕೆ ಎರಡು ಸ್ಟಂಟ್ ಹಾಕಲಾಗಿದೆ’
’40 ವರ್ಷದಿಂದ ಡಯಾಬಿಟಿಕ್’
‘ಅಂಗಾಲು ಅಗಾಗ ಬಿಸಿ ಆಗ್ತದೆ , ನ್ಯೂರೋಪತಿ ‘
‘ಕಿಡ್ನಿ ಕಸಿ ಮಾಡಲಾಗಿದೆ ‘

ಅವನು ತಲೆಯೆತ್ತಿ ನನ್ನ ಕಡೆ ನೋಡಿದ. ಭರ್ತಿ ಮಾಡಿಕೊಳ್ಳಲು ಕಾಲಂಗಳೇ ಉಳಿದಿರಲಿಲ್ಲ. ನಾನು ನಿಧಾನವಾಗಿ ಹೇಳಿದೆ ‘ ನೀನು ಬರೆದುಕೊಳ್ಳಬೇಕಾದ ಮುಖ್ಯ ಟಿಪ್ಪಣಿಯೆಂದರೆ, ಇಷ್ಟೆಲ್ಲಾ ಖಾಯಿಲೆಗಳ ನಡುವೆ ಇವ ಇಷ್ಟು ವರ್ಷ ಹೇಗೆ ಬದುಕಿದ? ಅಂತ’. ಅವನು ಮುಗುಳ್ನಕ್ಕ. ದೇಹವನ್ನು ಕೊಂಡೊಯ್ಯುವ ವಾಹನ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಹಾಗಂತ ನಾನೇನೂ ಅದಕ್ಕೆ ಕಾದು ಕುಳಿತಿಲ್ಲ. ಮಾಡಬೇಕಾದ ಕೆಲಸಗಳು ಹಲವಿದೆ, ಬರೆಯಬೇಕಾದ ಪುಸ್ತಕಗಳು ಕೆಲವಿದೆ. ನಿಜವಾಗಿಯೂ ಇದೊಂದು inspirational biography. ಸೆಲ್ಯೂಟ್ ಯೂ ಸರ್…


  • ರಾಜೇಶ್ ಕುಮಾರ್ ಕಲ್ಯಾ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading