ಹೆಚ್. ಆರ್.ಲೀಲಾವತಿ ಅವರ ‘ಚಿತ್ತ ಬಿತ್ತಿಯ ಚಿತ್ರಗಳು’ ಪುಸ್ತಕದ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಪುಸ್ತಕ : ಚಿತ್ತ ಬಿತ್ತಿಯ ಚಿತ್ರಗಳು
ಲೇಖಕರು : ಹೆಚ್. ಆರ್.ಲೀಲಾವತಿ
ನವೋದಯ ಪರಂಪರೆಯ ಮಾನವೀಯ ಮೌಲ್ಯಗಳ ಶಬ್ದಚಿತ್ರಗಳ ಪ್ರತೀಕವಾಗಿ ಡಿ.ವಿ.ಜಿಯವರ ಜ್ಞಾಪಕ ಚಿತ್ರಶಾಲೆ, ಶಿವರಾಮ ಕಾರಂತರ ನಮ್ಮ ಹಳ್ಳಿಯ ಹತ್ತು ಸಮಸ್ತರು, ಮುಂತಾದ ಕೃತಿಗಳ ಸಾಲಿಗೆ ಸೇರಬಲ್ಲ ಇನ್ನೊಂದು ಪುಸ್ತಕ. ಖ್ಯಾತ ಗಾಯಕಿ ಹೆಚ್.ಆರ್.ಲೀಲಾವತಿ ಅವರನ್ನು ಗಾಯಕಿ ಎಂದು ಮಾತ್ರ ತಿಳಿದಿದ್ದ ನನ್ನ ತಪ್ಪು ತಿಳಿವಳಿಕೆ ಬದಲಾಗಿದ್ದು ಮೈಸೂರಿನಲ್ಲಿನ ಅವರ ಮನೆಗೆ ಹೋದಾಗ. ಪ್ರೀತಿಯಿಂದ ನನ್ನನ್ನು ನನ್ನ ಸಂಗಾತಿ ಗಿರಿಜಾಶಾಸ್ತ್ರಿಯವರನ್ನು ಬರಮಾಡಿಕೊಂಡದ್ದಲ್ಲದೆ, ಸೀರೆಯ ಉಡುಗೊರೆ ಜತೆಗೆ ಅವರು ಬರೆದಿದ್ದ ಪುಸ್ತಕಗಳನ್ನು ನಮ್ಮ ಕೈಗೆ ಕೊಟ್ಟಾಗ ,ಅವರು ಲೇಖಕಿ ಕೂಡ ಹೌದು ಎಂದು ತಿಳಿದಿದ್ದು. ಬರಿಯ ಲೇಖಕಿ ಮಾತ್ರವಲ್ಲ ಅಂತಃಕರಣದ ಅನುಭೂತಿಯನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಲ್ಲ ಬರಹಗಾರ್ತಿ ಎಂಬುದಕ್ಕೆ ಅವರ ಮೇಲಿನ ಶೀರ್ಷಿಕೆಯ ಹೊತ್ತಗೆಯೆ ಸಾಕ್ಷಿ.

ಇಲ್ಲಿ ಬರುವ ವ್ಯಕ್ತಿಗಳಲ್ಲಿ ಅನಾಮಿಕರಿಂದ ಹಿಡಿದು ಮಂತ್ರಿಗಳವರೆಗೆ ( ಕೆ.ವಿ.ಶಂಕರೇಗೌಡರು: ಅವರು ನಾಟಕಕಾರರು ಹೌದು ಎಂದು ತಿಳಿದದ್ದು ಇದನ್ನು ಓದಿದಾಗಲೆ) ಏಕಪ್ರಕಾರದ ಪ್ರೀತಿಯಿಂದ ಅವರ ಅಂತಃಕರಣವನ್ನು ಸೂರೆಗೊಂಡಿದ್ದಾರೆ.ಅನಾಮಿಕ ಅಂಗವಿಕಲ ವ್ಯಕ್ತಿಗೆ ಸಿಕ್ಕ ಪ್ರಾತಿನಿಧ್ಯವೆ ಒಬ್ಬ ಮೊಯಿದ್ದೀನ್ ಸಾಬಿಗೂ ದೊರೆತಿದೆ.ಅದರಂತೆ ಒಬ್ಬ ಪಣಿಯಮ್ಮನನ್ನು ಹೋಲುವ ವೆಂಕಟಲಕ್ಷ್ಮಮ್ಮ ಎಂಬ ಮಡಿ ಅಜ್ಜಿಗೂ (ಈ ಇಬ್ಬರ ನಡುವಿನ ಸಂಬಂಧ ಅಪೂರ್ವ- ಅವನ ಹೆಂಡತಿಗೆ ಇವರೆ ಹೆರಿಗೆ ಮಾಡಿಸುತ್ತಾರೆ ) ದೊರೆತಿದೆ ಎಂಬುದು ಅವರು ಕುವೆಂಪು ಅವರ ವಿಶ್ವಮಾನವ ತತ್ವವನ್ನು ಅಳವಡಿಸಿಕೊಂಡಿದ್ದರ ದ್ಯೋತಕವಾಗಿದೆ. ಮಾನವೀಯ ಮೌಲ್ಯಗಳ ಸಾಕಾರವೋ ಎನ್ನುವಂತೆ ಇದ್ದ ಶಿಷ್ಯೆ ಮಾಧವಿ ಅವರ ಅಪೂರ್ವ ಸಾಮಾಜಿಕ ಪ್ರಜ್ಞೆ, ಡೈರಿ ಕಾರ್ಮಿಕ ಹೆಣ್ಣು ಕಮಲಳ ಹೋರಾಟದ ಪ್ರವೃತ್ತಿ ,ಅನ್ಯರಿಗಾಗಿ ವ್ಯವಸ್ಥೆಯ ವಿರುದ್ದ ಎದ್ದುನಿಲ್ಲಬಲ್ಲ , ಅವರಿಗೆ ನ್ಯಾಯ ದೊರಕುವವರೆಗೆ ರಾಜಿ ಮಾಡಿಕೊಳ್ಳದ ಛಲಗಾತಿ. ಇವರೆಲ್ಲ ಅವರ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎನ್ನುವುದೆ ಲೇಖಕಿಯ ಅಂತಃಕರಣಕ್ಕೆ ನ್ಯಾಯಪ್ರಜ್ಞೆಗೆ ಸಾಕ್ಷಿ. ಇಂತಹ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಬಿ.ಎಂ.ಶ್ರೀ ಶಿಷ್ಯರಾದ ಬಾಪು ರಾಮಣ್ಣ ಮತ್ತು ಅಪೂರ್ವ ತಾಯಿ ಜಯಲಕ್ಷ್ಮಿ ಅವರು ಕಾರಣಕರ್ತರು. ಅವರ ವ್ಯಕ್ತಿತ್ವಗಳ ಅನನ್ಯತೆಯನ್ನು ಶಬ್ದಚಿತ್ರಗಳಲ್ಲಿ ಕಡೆದಿರಿಸಿದ್ದಾರೆ. ಶೀಘ್ರಗೋಪಿ ಸಂಗೀತ ಪ್ರಿಯತಂದೆ, ಕೇಡುಬಯಸಿದವರಿಗೂ ಕೇಡೆಣಿಸದ ತಾಯಿ.ಇವರ ಗರ್ಭಾಂಬುಧಿಯಲ್ಲಿ ಜನಿಸಿದ ಇವರು ಮತ್ತು ಇವರ ಸೋದರರು, ಚಿಕ್ಕಪ್ಪ ಚಿಕ್ಕಮ್ಮ ಅವರ ಮನೆಗೆ ಬಂದ ಅಪೂರ್ವ ಸೊಸೆ ಶಶಿಕಲಾ ರಮೇಶ ಇವರೆಲ್ಲರೂ ಪರರ ಏಳಿಗೆಗಾಗಿಯೆ ತಮ್ಮ ಜೀವ ತೇದವರು.ಅವರ ಅಭ್ಯುದಯದಲ್ಲೇ ತಮ್ಮ ಬದುಕಿನ ಸಾರ್ಥಕತೆ ಕಂಡವರು.ಸೋದರರು ಕೊಲ್ಕೊತ್ತಾ ಮತ್ತು ಈಶಾನ್ಯ ಭಾರತದಲ್ಲಿ ಕೆಲಸಮಾಡುತ್ತಿದ್ದಾಗ ಇವರನ್ನು ಕರೆಸಿಕೊಂಡದ್ದು ಮಾತ್ರವಲ್ಲ , ಇವರ ಯೋಗಕ್ಷೇಮ ನೋಡಿಕೊಳ್ಳುವುದರ ಜತೆಗೆ( ಅಲ್ಲಿಯೆ ಅವರ ಮಗನಿಗೆ ಜನ್ಮವಿತ್ತದ್ದು,) ಅಲ್ಲಿನ ಆಕಾಶವಾಣಿಯ ಅಲ್ಲಿಯ ಭಾಷೆಗಳಲ್ಲು ಇವರ ಕಂಠಸಿರಿಗೆ ಅವಕಾಶವನ್ನು ಒದಗಿಸಿಕೊಟ್ಟವರು.

ಇವರ ಪತಿ ರಘುರಾಂ (ಎಸ್.ಜಿ) ಅವರು ಕೂಡ ಆಕಾಶವಾಣಿಯವರೆ. ಇಬ್ಬರದು ಹಾಲು ಜೇನಿನ ಸಂಗಮದಂತೆ. ಅವರು ಕೂಡ ಅಂತಃಕರಣ ಜೀವಿ. ಅನ್ಯರಿಗಾಗಿ ಮಿಡಿಯುವಲ್ಲಿ ಸದಾ ಮುಂದು. ಅವರ ತಿಂಡಿಪೋತತನವನ್ನು ದಾಖಲಿಸಲು ಇವರು ಮರೆತಿಲ್ಲ. (ಅವರ ವ್ಯಕ್ತಿತ್ವ ಕುರಿತು ಕಾವ್ಯ ಕಾಣಿಕೆ ಕೂಡ ಇದೆ) ಈ ಎಲ್ಲರ ವ್ಯಕ್ತಿತ್ವಗಳನ್ನು ಚಿತ್ರಿಸುವಾಗ ಅವರೆಲ್ಲ ಇಂದು ಮಾಯವಾಗುತ್ತಿರುವ ಮಾನವೀಯ ಮೌಲ್ಯಗಳ ಪ್ರತೀಕವಾಗಿ ಇವರಿಗೆ ಕಂಡಿದ್ದಾರೆ ಎಂಬುದು ಮುಖ್ಯ.
ಎಲ್ಲಾ ಕ್ಷೇತ್ರಗಳಲ್ಲೂ ಇಂದು ಕಾಣುತ್ತಿರುವ ನೈತಿಕತೆಯ ಕುಸಿತದ ಕುರಿತ ಗಾಢವಾದ ವಿಷಾದ ಮತ್ತು ಕಾಳಜಿಗಳು ಇದರ ಹಿಂದೆ ಇದೆ ಎಂಬುದು ಗಮನಾರ್ಹ ಸಂಗತಿ ಇದರೊಂದಿಗೆ ಮೈಸೂರು ಮಲ್ಲಿಗೆ, ಮೊಗರುಬದನೆಯ ಕಾಯಿ, ಮನೆಗೆ ಬಂದು ಹಾಲು ಕರೆದುಕೊಡುತ್ತಿದ್ದ ವ್ಯಕ್ತಿಗಳು, ಜಾನಪದೀಯ ಕಲೆಗಳು, ಇವೆಲ್ಲ ಕಳೆದುಹೋದ ಒಂದು ಯುಗದ ಪಳೆಯುಳಿಕೆಗಳಾಗಿ ಭಾಸವಾದರೆ ಆಶ್ಚರ್ಯವಿಲ್ಲ. ಇವರಿಗೆ ಪ್ರಥಮವಾಗಿ ಸಂಗೀತದ ಓನಾಮ ಹಾಕಿದ ರಾಮಸ್ವಾಮಿಯವರ ಚಿತ್ರ.ಸಮಯ ಪ್ರಜ಼್ಞೆಗೆ ಒತ್ತುಕೊಡುವ ಮುಳಿಯ ರಾಘವಯ್ಯ, ಕೆ.ವಿ.ಮೂರ್ತಿ. ಮುಂತಾದ ಕಲಾಪೋಷಕರು ಈ ಸಾಲಿನಲ್ಲಿ ಸೇರುತ್ತಾರೆ. ಅವರ ಬಾಲ್ಯ, ಯೌವನ, ವಿವಾಹ,ಸಾಂಗತ್ಯದ ಸೊಗಸು, ತಾಯ್ತನ, ವೃತ್ತಿಜೀವನ, ಇವುಗಳಿಂದಾಗಿ ಇದಕ್ಕೆ ಆತ್ಮಚರಿತ್ರೆಯ ಸ್ಪರ್ಶವೂ ಒದಗಿದೆ.ಜತೆಗೆ ಒಂದು ಬಗೆಯ ಹಳೆಯ ಮೈಸೂರಿನ ಸಾಂಸ್ಕೃತಿಕ ಚರಿತ್ರೆಯ ದಾಖಲಾತಿಯಾಗಿ ಕೂಡಾ ಈ ಕೃತಿಗೆ ಐತಿಹಾಸಿಕ ಮಹತ್ವವಿದೆ. ಇಂತಹ ಒಂದು ಮಹತ್ವದ ಹೊತ್ತಗೆಯನ್ನು ನಮಗೆ ಕೈಯಾರೆ ಕೊಟ್ಟು ಆಶೀರ್ವದಿಸಿದ ಅವರ ನಿರ್ವ್ಯಾಜ ಅಂತಃಕರಣಕ್ಕೆ ಶರಣು ಎಂದರೆ ಸಾಕೆ,?
- ರಘುನಾಥ್ ಕೃಷ್ಣಮಾಚಾರ್
