‘ನಿನ್ನದ್ಯಾವುದು’ ಕವನ – ಹೇಮಂತ್ ಪಾರೇರಾ

ಆತ್ಮವೊಂದು ಶರೀರ ಬಿಟ್ಟು ಶೂನ್ಯವಾಯಿತು…ಯಾವ ದಾಹವಿಲ್ಲ ಹಸಿವಿಲ್ಲ ಕಾಡುವ ಚಿಂತೆಗಳಿಲ್ಲ… ನೋವಿಲ್ಲ, ಬಯಕೆ ಭಾವನೆ ಕಣ್ಣೀರು ಕಾಮನೆಗಳಿಲ್ಲ… ಕೊಡಗಿನ ಕವಿ ಹೇಮಂತ್ ಪಾರೇರಾ ಅವರ ಲೇಖನಿಯಲ್ಲಿ ಅರಳಿದ ಆತ್ಮಗಳ ಅವಲೋಕನವನ್ನು ತಪ್ಪದೆ ಮುಂದೆ ಓದಿ…

ಆತ್ಮವೊಂದು ಶರೀರ ಬಿಟ್ಟು ಶೂನ್ಯವಾಯಿತು
ತನ್ನದೆನ್ನುತಿದ್ದ ಸುಳ್ಳುಗಳ ಕಣ್ಣಪೊರೆ ಮುಚ್ಚಿತು
ನಿನ್ನ ದೇಹಕ್ಕೆ ನೀನಲ್ಲ ಮಾಲೀಕನು, ನಿನ್ನದೇನಿಲ್ಲ
ಯಾವ ದಾಹವಿಲ್ಲ ಹಸಿವಿಲ್ಲ ಕಾಡುವ ಚಿಂತೆಗಳಿಲ್ಲ
ನೋವಿಲ್ಲ, ಬಯಕೆ ಭಾವನೆ ಕಣ್ಣೀರು ಕಾಮನೆಗಳಿಲ್ಲ

ಸವೆದ ಬದುಕ ಕೊನೆಗೆ, ಮನಸ್ಸು ಮೆಲಕು ಹಾಕಿತು
ಯಾವುದರ ಒಡೆಯ ನೀನು, ಅಸ್ತಿತ್ವವೇ ಇಲ್ಲದವ
ಮೂಳೆಮಾಂಸ ತಳುಕುಬಣ್ಣ ಅನಾಥವಾಗಿದೆ ನೋಡು
ಗಳಿಸಿದ ಧನ ಕನಕ ಆಸ್ತಿ ಪರರ ಕೈಸೇರಿದೆ ನೋಡು
ಯಾವುದು ನಿನ್ನದಿಲ್ಲಿ, ಯಾವುದು ನೀನಿಲ್ಲದ ಮೇಲೆ ಇಲ್ಲಿ

ಸರಸದ ಬಯಕೆಗೆ ಉನ್ಮಾದ ಹೆಚ್ಚಾಗಿ ರಮಿಸಲು ಆಗದು
ಈಗ ಮಿಲನಕ್ಕೆ ಯಾವ ಅಂಗ ಲಿಂಗವು ಆತ್ಮದಲ್ಲಿಲ್ಲ
ಬಲಿಷ್ಠ ಬಾಹುಗಳಲ್ಲಿ ಮಿಸುಕಾಟವಿಲ್ಲ ತುಡಿತವಿಲ್ಲ
ಕೋಮಲ ಮೈಕಟ್ಟು ಇನ್ನೇನು ಸುಟ್ಟುಬಿಡುವರಲ್ಲ
ಎಲ್ಲಿದೆ ನಿನ್ನ ಆಕರ್ಷಣೆ, ಹೆಸರಿಲ್ಲ ಪಾರ್ಥಿವ ಶರೀರ

ಹೊಗಳಿದವರು ಸಣ್ಣ ಗಾಯಕ್ಕೆ ಗೋಳಾಡಿ ಅತ್ತವರು
ಸುತ್ತ ನಿಂತು ಮೌನವಾಗಿ ನಿನ್ನ ಮಣ್ಣು ಮಾಡಿದರು
ಪರಮ ಸತ್ಯ, ದಾನ ಪಡೆದ ಕೆಲವರು ಬಿಕ್ಕುವ ಕಣ್ಣೀರು
ಸತ್ತ ನಿನ್ನ ದೇಹಕ್ಕೆ ದೊಡ್ಡ ಹೂಮಾಲೆ ಮೆರವಣಿಗೆ
ನಾಳೆಗೆ ಮುಂದೂಡಿಕೆ ಮತ್ತೊಂದು ಆತ್ಮ ಶೂನ್ಯದತ್ತ


  • ಹೇಮಂತ್ ಪಾರೇರಾ – ಯಡವನಾಡು, ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading