ಹೂಲಿಶೇಖರ್ ನಾಟಕ-ಕಿರುತೆರೆಗೆ ಸುರಿಸಿದ ಬೆವರ ಹನಿಗಳ ಸಂಖ್ಯೆಗಳೆಷ್ಟು?

ಅಪ್ಪ ಹೂಲಿಶೇಖರ ಅವರ ಬಗ್ಗೆ ಹೇಳಬೇಕೆಂದರೆ ಸಾಕಷ್ಟು ವಿಷಯಗಳಿವೆ. ಅವುಗಳನ್ನು ಒಂದೇ ಸಾಲಿನಲ್ಲಿ,ಒಂದೇ ಲೇಖನದಲ್ಲಿ ಹೇಳಿ ಮುಗಿಸುವಷ್ಟು ಸುಲಭದ ವ್ಯಕ್ತಿ ಅವರಲ್ಲ. ವ್ಯಕ್ತಿ ಒಬ್ಬರಾದರು ಅವರಲ್ಲಿನ ಪ್ರತಿಭೆಗಳು ಹಲವಾರಿದೆ. ಎಷ್ಟೋ ಜನರಿಗೆ ಹೂಲಿಶೇಖರ್ ಒಬ್ಬ ನಾಟಕಕಾರ ಅಥವಾ ಚಿತ್ರ ಸಂಭಾಷಣಕಾರ ಎಂದಷ್ಟೇ ಚಿರಪರಿಚಿತ. ಆದರೆ ಅವರಲ್ಲೊಬ್ಬ ಕಲಾವಿದನಿದ್ದಾನೆ,ನಿರ್ದೇಶಕನಿದ್ದಾನೆ,ರಂಗ ಸಂಘಟನಾಕಾರನಿದ್ದಾನೆ,ಕಾದಂಬರಿಕಾರನಿದ್ದಾನೆ,

ಕತೆಗಾರನಿದ್ದಾನೆ ಎನ್ನುವ ವಿಷಯಗಳು ಗೊತ್ತಿರುವುದು ಬೆರಳ ಎಣಿಕೆ ಜನರಿಗಷ್ಟೇ. ಅವರು ತೆರೆಯ ಮುಂದೆ ತಾವಾಗಿಯೇ ಎಂದು ಬಂದವರಲ್ಲ. ಅವರೊಬ್ಬ ತೆರೆಯ ಮರೆಯ ಪ್ರತಿಭಾವಂತ ಕಾಯಿ. ಮೊದಲು ನಾಟಕಕಾರನಾಗಿ ಅನಂತರ ದಿನಗಳಲ್ಲಿ ಚಿತ್ರ ಸಂಭಾಷಣಕಾರನಾಗಿ ಬಡ್ತಿ ಪಡೆದವರು. ಅವರ ಪ್ರತಿಭೆಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಲೇಖನದ ಮೂಲಕ ನಿಮ್ಮ ಮುಂದೆ ಬಿಚ್ಚಿಡುತ್ತೇನೆ.

(ಜೋಕುಮಾರ ಸ್ವಾಮಿ ಕಲಾ ಬಳಗ ತಂಡದವರೊಂದಿಗೆ ಕೂತವರಲ್ಲಿ ಎಡಗಡೆಯಿಂದ ಮೂರನೇಯವರು)

 

(ನಟರಾಗಿ ಹೂಲಿಶೇಖರ)

 

(ಮೇಕಪ್ ಮ್ಯಾನ್ ಆಗಿ ಹೂಲಿಶೇಖರ್)

 

(ಧಾರವಾಡದಲ್ಲಿ ನಡೆದ ಕಾದಂಬರಿ ಕಮ್ಮಟದಲ್ಲಿ ಕಮ್ಮಟದ ಅಧ್ಯಕ್ಷರಾಗಿದ್ದ ಡಾ. ಶಿವರಾಮ ಕಾರಂತ ಅವರ ಜೊತೆ ಹೂಲಿಶೇಖರ.ಕೊನೆಯಲ್ಲಿ ಬಲಗಡೆಯಿಂದ ಎರಡನೇಯವರು)

 

 

(ಹೂಲಿಶೇಖರ ಅವರ ಮೊದಲ ಕಾದಂಬರಿ ‘ಕದಡಿದ ಕೆರೆ’ಯನ್ನು ಡಾ ಬೆಟಗೇರಿ ಕೃಷ್ಣಶರ್ಮ ರವರು ಅವರ ಮನೆಯಲ್ಲಿ ಬಿಡುಗಡೆ ಮಾಡಿದ ಸಂದರ್ಭ)

 

(ಹೂಲಿಶೇಖರ್ ಅವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವರಕವಿ ದ.ರಾ.ಬೇಂದ್ರೆ ಆಗಮಿಸಿದಂತಹ ಕ್ಷಣ)

 

ನಾವು ದಾಂಡೇಲಿಯಲ್ಲಿದ್ದಾಗ ಅಪ್ಪ ತಮ್ಮ ಸಹದ್ಯೋಗಿಗಳನ್ನು ಕಟ್ಟಿಕೊಂಡು ಜೋಕುಮಾರ ಸ್ವಾಮಿ ಕಲಾ ಬಳಗ ಎನ್ನುವ ಹವ್ಯಾಸಿ ತಂಡವನ್ನು ಕಟ್ಟಿದ್ದರು.ಆ ತಂಡಗಳ ಮುಖಾಂತರವೇ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು. ಅವರು ಕೇವಲ ನಾಟಕ ರಚನಾಕಾರನಾ ಗಿರಲಿಲ್ಲ. ನಿರ್ದೇಶಕನಾಗಿ, ನಟನಾಗಿ, ಮೇಕಪ್ ಮ್ಯಾನ ಕೈ ಕೊಟ್ಟಾಗ ಕಲಾವಿದರಿಗೆ ಬಣ್ಣ ಹಚ್ಚುವ ಮೇಕಪ್ ಮ್ಯಾನ್ ಆಗಿ, ನಾಟಕಕ್ಕೆ ಬೇಕಾಗುವ ಬಟ್ಟೆಗಳು ತಕ್ಷಣಕ್ಕೆ ಸಿಗದಿದ್ದಾಗ ಹೊಲಿಗೆ ಮಿಷನ್ ನಲ್ಲಿ ತಾವೇ ಕೂತು ಕಲಾವಿದರಿಗೆ ಬಟ್ಟೆ ಹೊಲೆಯು ದರ್ಜಿಯಾಗಿ ಕೆಲಸವನ್ನು ಮಾಡಿದವರು.

(ಹೂಲಿಶೇಖರ್ ಕುಂಚದಲ್ಲಿ ಮೂಡಿದ ತೈಲ ವರ್ಣ ಚಿತ್ರ)

 

ಅಷ್ಟೇ ಅಲ್ಲ ನಾಟಕಕ್ಕೆ ಬೇಕಾದಂತಹ ಚಿತ್ರಗಳನ್ನು ಅವರೇ ಬಿಡಿಸುತ್ತಿದ್ದರು. ಲೇಖನಿಯೊಂದಿಗೆ ಕುಂಚವನ್ನು ಹಿಡಿದು ಹಲವಾರು ಜಲವರ್ಣ ಮತ್ತು ತೈಲ ವರ್ಣದಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಅದರಲ್ಲಿ ೪೦ ವರ್ಷಗಳ ಹಿಂದೆ ಅಂಬಿಕಾನಗರದ ಸೈಕ್ಸ್ ಪಾಯಿಂಟ್ ಎಂಬ ಸ್ಥಳದಲ್ಲಿ ಗೋಡೆ ಯೊಂದರ ಮೇಲೆ ತೈಲ ವರ್ಣ ಚಿತ್ರವನ್ನು ಬಿಡಿಸಿದ್ದಾರೆ.ಅದನ್ನು ಈಗಲೂ ಆ ಸ್ಥಳದಲ್ಲಿ ನೋಡಬಹುದು.ಈ ಚಿತ್ರವು ಕಾಳಿ ನದಿ ಜಲ ವಿದ್ಯುತ್ ಯೋಜನೆಯ ಸಮಗ್ರ ಪಕ್ಷಿ ನೋಟವನ್ನು ಒಳಗೊಂಡಿದೆ. ಇದರಲ್ಲಿ ಸೂಪಾ, ಬೊಮ್ಮನಹಳ್ಳಿ,ತಟ್ಟಿ ಹಳ್ಳ, ಕುಂಬಾರವಾಡ, ಕೊಡಸಳ್ಳಿ ಹಾಗು ಕದ್ರಾ ಅಣೆಕಟ್ಟುಗಳನ್ನು ನೋಡಬಹುದು. ಅವರಲ್ಲಿನ ಅಪ್ರತಿಮವಾದ ಪ್ರತಿಭೆಗಳು ಅವರನ್ನು ಸುಮ್ಮನೆ ಕೂಡಲು ಬಿಡುತ್ತಿರಲಿಲ್ಲ.ನಾಟಕದ ಬಿಡುವಿನಲ್ಲಿ ಅಡುಗೆ ಮಾಡುವುದರ ಲ್ಲೂ ಎತ್ತಿದ ಕೈ. ಅಮ್ಮನ ಅಡುಗೆ ರುಚಿ ಕೊಡುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಅಪ್ಪನ ಅಡುಗೆ ಸೊಸೆಯಿಂದ ಮೊಮ್ಮಕ್ಕಳವರೆಗೂ ಅಚ್ಚುಮೆಚ್ಚಾಗಿದೆ. ಅವರಲ್ಲಿನ ಪ್ರತಿಭೆ ಅವರ ಕೈಯಲ್ಲಿ ಎಲ್ಲ ಕೆಲಸವನ್ನು ಮಾಡಿಸುತ್ತಿತ್ತು. ಅವರು ಸಹ ಯಾವ ಕೆಲಸವನ್ನು ಹೆಚ್ಚು-ಕಮ್ಮಿ ಎನ್ನದೆ ಎಲ್ಲ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಾರೆ.

 

(ಹೂಲಿಶೇಖರ್ ಅವರಿಗೆ ಸಂದ ರಂಗಚೇತನ ರತ್ನ ಪ್ರಶಸ್ತಿ )

 

ಅಪ್ಪ ರಚಿಸಿದ ನಾಟಕಗಳ ಅಂಕಿಗಳ ಬಗ್ಗೆ ಹೇಳಬೇಕೆಂದರೆ ಬಹುಮಾನಿತ ನಾಟಕಗಳು ೩೫, ಬೀದಿ ನಾಟಕಗಳು ೧೦, ಮಕ್ಕಳ ನಾಟಕಗಳು ೮, ಆಕಾಶವಾಣಿಗಾಗಿ ಬರೆದಂತಹ ನಾಟಕಗಳು ೧೧. ಹೀಗೆ ಶುರುವಾಗುವ ನಾಟಕಗಳು ಕರ್ಮವೀರ,ಸುಧಾ,ಮಲ್ಲಿಗೆ, ಪ್ರಜಾವಾಣಿ ಕಥಾಸ್ಪರ್ಧೆಗಳಲ್ಲಿ ಬಹುಮಾನಗಳು ಪಡೆದಿವೆ. ಹತ್ತಕ್ಕೂ ಹೆಚ್ಚು ಕತೆಗಳು ತೆಲುಗು ಭಾಷೆಗೆ ಅನುವಾದಗೊಂಡಿದೆ. ಸುಧಾ,ಮಲ್ಲಿಗೆ ಪತ್ರಿಕೆಗಳಲ್ಲಿ ಕಾದಂಬರಿಗಳು ಪ್ರಕಟವಾಗಿವೆ. ದಫನ್ ನಾಟಕವನ್ನು ತಮಿಳಿಗೆ, ಅರಗಿನ ಬೆಟ್ಟ ನಾಟಕವನ್ನು ತುಳು, ಮರಾಠಿ ಹಾಗು ಹಿಂದಿಗೆ ಭಾಷಾಂತರಗೊಂಡಿದೆ. ಹಿಂದಿ ಆವೃತ್ತಿಯನ್ನು ಶಶಿ ಕಪೂರ್ ಮಗಳಾದ ಸಂಜನಾ ಕಪೂರ್ ಅವರು ಮುಂಬೈಯಲ್ಲಿ ಬಿಡುಗಡೆ ಮಾಡಿದ್ದರು. ಹೀಗೆ ಅವರ ಬರವಣಿಗೆಯ ಪಟ್ಟಿಗಳು ಹನುಮಂತನ ಬಾಲದಂತೆ ಈಗಲೂ ಬೆಳೆಯುತ್ತಲೇ ಇದೆ. ಅವರು ಬರೆದ ಬಹುತೇಕ ನಾಟಕಗಳನ್ನು ಅವರೇ ನಿರ್ದೇಶಿಸಿ, ಅವರೇ ನಟಿಸಿದ್ದಾರೆ. ನಾಟಕ ಅವರ ಜೀವ.ನಾಟಕವು ಅವರಿಗೆ ರಕ್ತಗತವಾಗಿ ಅವರ ಅಪ್ಪ ಅಂದರೆ ನನ್ನ ಅಜ್ಜನಿಂದಲೇ ಬಂದಿದ್ದು. ನನ್ನ ಅಜ್ಜನು ಅನೇಕ ನಾಟಕಗಳಿಗೆ ಬಣ್ಣ ಹಚ್ಚಿದವರು.

ನಾನು ಅಪ್ಪನ ಮುದ್ದಿನ ಮಗಳಾದ್ದರಿಂದ ಅಪ್ಪನ ನಾಟಕದ ಚಲನವಲನಗಳನ್ನು ಹತ್ತಿರದಿಂದಕಂಡವಳು. ಅಪ್ಪ ಆಕಾಶವಾಣಿ ರೆಕಾರ್ಡಿಂಗ್ ಗೆ ಹೋಗಲಿ ಅಥವಾ ನಾಟಕದ ತಾಲೀಮು ನಡೆಸಲಿ ಅಲ್ಲಿ ತಪ್ಪದೆ ನಾನು ಅವರ ಜೊತೆಗೆ ಹೋಗುತ್ತಿದ್ದೆ. ನಾಟಕದ ತಾಲೀಮು ನಡೆಸುವಾಗ ನಾನು ಅಲ್ಲಿನ ಸೂಕ್ಶ್ಮ ವಿಷಯಗಳನ್ನು ಗಮನಿಸುತ್ತಿದ್ದೆ. ನನ್ನ ಸೂಕ್ಷ್ಮತೆಯ ಗ್ರಹಿಕೆ ಎಷ್ಟರ ಮಟ್ಟಿಗೆಯಿತ್ತೆಂದರೆ ನನ್ನ ಏಳನೇ ವಯಸ್ಸಿನಲ್ಲಿ ಕುಡುಕರನ್ನು ಪತ್ತೆ ಹಚ್ಚುತ್ತಿದ್ದೆ.ಅದು ಅಪ್ಪನ ತಂಡಕ್ಕೆ ಮುಳುವಾಗಿದಂತೂ ನಿಜ. ಏಕೆಂದರೆ ನಾಟಕಕ್ಕೆ ಬರುವ ಕಲಾವಿದರಲ್ಲಿ ಕಾಲು ಭಾಗ ಕುಡುಕರೇ ಇದ್ದರು.ಕೆಲವು ಸಂದರ್ಭಗಳಲ್ಲಿ ನಾಟಕ ತಾಲೀಮಿಗೂ ಕುಡಿದೇ ಬರುತ್ತಿದ್ದರು. ಅವರೆಲ್ಲ ಈಗಿನವರ ಥರ ಬ್ರಾಂಡೆಡ್ ಬಾಟಲಿ ಎತ್ತುವವರಲ್ಲ.ಲೋಕಲ್ ಮೇಡ್ ಬಾಟಲ್ ಕುಡಿದು ತೂರಾಡಿಕೊಂಡೇ ಬರುತ್ತಿದ್ದರು. ಅವರಿಗೆಲ್ಲ ನಾಟಕದ ತಾಲೀಮು ಕೊಡುವಷ್ಟರಲ್ಲಿ ಅಪ್ಪನ ಹವಾ ಹೋಗಿ ಬಿಡುತ್ತಿತ್ತು. ಕೆಲವೊಮ್ಮೆ ಕುಡಿದ ಅಮಲಿನಲ್ಲಿ ಅವರವರೇ ಹೊಡೆದಾಟಕ್ಕೂನಿಂತು ಬಿಡುತ್ತಿದ್ದರು.ಕುಡಿದವರ ಮನೆಯಲ್ಲಿ ಎಲ್ಲಿ ರಾಮಾಯಣವಾಗುತ್ತೋ,ಇನ್ನು ನಾಟಕವು ಎಲ್ಲಿ ನಿಂತು ಬಿಡುತ್ತದೆಯೋ…? ಎನ್ನುವ ಭಯಕ್ಕೆ ಅಪ್ಪ ಅವರೆಲ್ಲರು ಸಮಾಧಾನವಾಗುವರೆಗೂ ತಾಲೀಮಿನ ಜಾಗದಲ್ಲಿಯೇ ಇರಿಸಿಕೊಳ್ಳುತ್ತಿದ್ದರು. ಅವರೆಲ್ಲ ಸಮಾಧಾನವಾದ ಮೇಲೆ ಅವರವರ ಮನೆಗೆ ಅಪ್ಪನೇ ಹೋಗಿ ಬಿಟ್ಟು ಬರುತ್ತಿದ್ದರು. ಇದು

ತಾಲೀಮಿನಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಸಾಮಾನ್ಯ ದೃಶ್ಯವೆನ್ನಬಹುದು. ಕುಡುಕರ ಮನೆಯಲ್ಲಿ ರಾಮಾಯಣ ನಡೆಯುತ್ತಿತ್ತೋ, ಇಲ್ಲವೋ ಗೊತ್ತಿಲ್ಲ. ನನ್ನ ಬಾಯಲ್ಲಿ ಆ ಸುದ್ದಿ ಕೇಳಿ ಅಮ್ಮ ರಾಮಾಯಣ ಮಾಡೇ ಮಾಡುತ್ತಿದ್ದಳು. ‘ಈ ಕುಡುಕರನ ಕಟ್ಟಿಕೊಂಡು ನಾಟಕ-ಗಿಟಕ ಹೋಗೋದು ಬೇಡ. ನಾಳೆ ಏನಾದ್ರು ತೊಂದ್ರೆ ಆದ್ರೆ ಕಷ್ಟ.ಆದಷ್ಟು ದೂರಾನೇ ಇರಿ. ಬರೆದ ನಾಟಕವನ್ನು ಪುಸ್ತಕ ಪ್ರಿಂಟ್ ಮಾಡಿ ಮನೇಲ್ಲಿ ತಣ್ಣಗೆ ಇರಿ.ಬೇರೆ ಯಾರಾದ್ರೂ ನಿಮ್ಮ ನಾಟಕ ಮಾಡ್ಕೋತ್ತಾರೆ’ ಅಂತ ಮಂತ್ರ ಪಠಣ ಮಾಡುತ್ತಿದ್ದರೇ, ಅಪ್ಪ ಕಿವಿಗೆ ಹಾಕಿ ಕೊಳ್ಳುತ್ತಿರಲಿಲ್ಲ. ಅಪ್ಪನೇ ಹೇಳುವ ಹಾಗೆ ನಾಟಕದವರೆಂದರೆ ಕಾಲಿಗೆ ನಾಯಿ ಗೆರೆ ಇರೋರು. ಒಂದು ಕಡೆ ಕೂರುವ ಜಾತಿಯವರಲ್ಲ.

ಅಂದಿನಿಂದ ಅಪ್ಪನು ಹುಷಾರಾದರು. ತಾಲೀಮಿನಲ್ಲಿ ಕುಡುಕರ ಗಲಾಟೆ ಮಾಡಿದಾಗಲೆಲ್ಲಾ

ಮನೆಯಲ್ಲಿ ಈ ಸುದ್ದಿಯನ್ನು ಹೇಳದಂತೆ ನನಗೆ ಅಂಗಡಿಯಲ್ಲಿ ಕೇಳಿದ್ದನ್ನೆಲ್ಲ ಕೊಡಿಸಿಸುತ್ತಿದ್ದರು ಹೀಗೆ ನನ್ನ ಬಾಯಿಗೆ ಬೀಗ ಬೀಳುತ್ತಿತ್ತು.ಅಮ್ಮನಿಗೂ ತಾಲೀಮಿನ ಸುದ್ದಿ ಹೋಗುವುದು ಅಂದಿನಿಂದ ನಿಂತಿತು. ಹೀಗೆ ನಮ್ಮಿಬ್ಬರ ನಡುವೆ ಕೆಲವು ರಹಸ್ಯಗಳು ಆಗಾಗ ನಡೆಯುತ್ತಿದ್ದವು. ಇಂತಹ ಕುಡುಕರ ಸಂಘವನ್ನು ಕಟ್ಟಿಕೊಂಡೆ ಅಪ್ಪ ಸುಮಾರು ನಾಟಕಗಳನ್ನು ಊರೂರು ಹೋಗಿ ಪ್ರದರ್ಶಿಸಿದರು. ಕೆಲವು ನಾಟಕಗಳಿಗೆ ಬಹುಮಾನಗಳು ಕೂಡಾ ಬಂದವು.

 

ಅಪ್ಪನ ನಾಟಕದ ಸೇವೆಗಾಗಿ ಯಾವುದೇ ಲಾಭಿಗಳಿಲ್ಲದೆ ಬಂದಂತಹ ಪ್ರಶಸ್ತಿಗಳು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಎರಡು ಬಾರಿ ಸಿರಿಗನ್ನಡ ಪ್ರಶಸ್ತಿ, ರಂಗಚೇತನ ರತ್ನ ಪ್ರಶಸ್ತಿ, ಜೋಳನರಾಶಿ ದೊಡ್ಡನಗೌಡ ಪ್ರತಿಷ್ಠಾನದ ಮೊದಲ ವರ್ಷದ ಜೋಳನರಾಶಿ ದೊಡ್ಡನಗೌಡ ಪ್ರಶಸ್ತಿ. ಹೀಗೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ.

(ಹೂಲಿಶೇಖರ ಅವರ ಪ್ರಶಸ್ತಿ ಸಂಗ್ರಹ)

 

(ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಂದ ಕ್ಷಣ)

 

 

ಮುಂದೆ ನಮ್ಮ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ನೆಲೆ ಬದಲಾದರು ಪ್ರತಿಭೆಗೆ ಸೀಮೆಯಲ್ಲಿರುತ್ತದೆ ಹೇಳಿ. ಅಪ್ಪನ ಪ್ರತಿಭೆ ಆ ಊರಿಗಷ್ಟೇ ಸೀಮಿತವಾಗಲಿಲ್ಲ. ಶ್ರೀ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಅಪ್ಪ ಅವರಿಗೆ ಸಂವಹನ ಅಧಿಕಾರಿ ಘಟಕದಲ್ಲಿ ಸೇವೆ ಸಲ್ಲಿಸಿದ್ದರು.ಆ ಸಂದರ್ಭದಲ್ಲಿ ಸರಕಾರ ಇಲಾಖೆಗಳ ಬಗ್ಗೆ ಮಾಹಿತಿ ಪೂರ್ಣ ಲೇಖನಗಳನ್ನು ಬರೆಯುತ್ತಿದ್ದರು. ಕೆ.ಪಿ.ಟಿ.ಸಿ.ಎಲ್ ಸಾರ್ವಜನಿಕರ ಮಾಹಿತಿಗಾಗಿ ಸುಮಾರು ೫೦೦ ಬೀದಿ ನಾಟಕಗಳನ್ನು ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದರು. ಬಹುಶಃ ಇದು ಕೂಡಾ ಎಷ್ಟೋ ಜನರಿಗೆ ಗೊತ್ತಿರದ ವಿಷಯ.

ಮುಂದೆ ಅಪ್ಪನಿಗೆ ಚಿತ್ರಕತೆ-ಸಂಭಾಷಣೆ ಬರೆಯುವ ಅವಕಾಶಗಳು ಬರತೊಡಗಿದವು. ಟಿ.ಎಸ್. ನಾಗಾಭರಣ ನಿರ್ದೇಶನದ ‘ಗೆಳತಿ’ ಅವರು ಬರೆದಂತಹ ಮೊದಲ ಧಾರವಾಹಿ. ನಾಗಾಭರಣ ಅವರು ನನ್ನ ಅಚ್ಚುಮೆಚ್ಚಿನ ನಿರ್ದೇಶಕರಾಗಿದ್ದರು. ನಾಗಾಭರಣರವರ ನಿರ್ದೇಶನದ ‘ನಾಗಮಂಡಲ’, ‘ಜನುಮದ ಜೋಡಿ’ ಸಿನಿಮಾಗಳು ಯಶಸ್ಸಾದಂತಹ ಸಮಯವದು. ಅದೇ ಸಮಯದಲ್ಲಿ ಅವರ ನಿರ್ದೇಶನದ ಧಾರಾವಾಹಿಗೆ ನನ್ನ ಅಪ್ಪನಿಗೆ ಸಂಭಾಷಣೆ ಬರೆಯುವ ಅವಕಾಶ ಸಿಕ್ಕಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ.ಅಲ್ಲಿಯೂ ಕೂಡ ನಾನು ಅಪ್ಪನ ಹಿಂದೆಯೇ

ಹೋಗುತ್ತಿದ್ದೆ.

( ಮೂಡಲ ಮನೆ ಕಲಾವಿದರೊಂದಿಗೆ ಹೂಲಿಶೇಖರ )

 

ಹೀಗೆ ಅಪ್ಪನ ಕಿರುತೆರೆಯ ಪಯಣ ಶುರುವಾಯಿತು. ನಂತರ ಅವರಿಗೆ ಹೆಸರು ತಂದುಕೊಟ್ಟಂತಹ ಧಾರವಾಹಿ ಮೂಡಲ ಮನೆ. ಕೆಲವು ಸಿನಿಮಾಗಳಲ್ಲಿ ಉತ್ತರ ಕನ್ನಡ ಭಾಷೆಯನ್ನು

ಅಸಭ್ಯವಾದ ಹಾಸ್ಯಕ್ಕೆ ಬಳಸಿಕೊಂಡಿದ್ದರು. ಜನರ ತಲೆಯಲ್ಲಿ ಉತ್ತರಕನ್ನಡ ಭಾಷೆಯೆಂದರೆ ಅಸಭ್ಯವಾದ ಹಾಸ್ಯ,ಕೀಳು ಮಟ್ಟದ ಭಾಷೆ ಎನ್ನುವಷ್ಟು ಕೇವಲವಾಗಿತ್ತು.ಆದರೆ ಮೂಡಲ ಮನೆ ಧಾರಾವಾಹಿಯ ಮೂಲಕ ಉತ್ತರ ಕನ್ನಡ ಭಾಷೆಯಲ್ಲಿಯೂ ಸೊಗಡಿದೆ. ಅದರದೇ ಆದ ಸೌಂದರ್ಯವಿದೆ ಎಂದು ಅಪ್ಪ ತಮ್ಮ ಚಿತ್ರಕತೆ-ಸಂಭಾಷಣೆಯಲ್ಲಿ ನಿರೂಪಿಸಿದರು. ಅವರ ಶ್ರಮದ ಫಲವಾಗಿ ಮೂಡಲ ಮನೆಯ ಅತ್ಯುತ್ತಮ ಚಿತ್ರಕತೆ-ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿಯು ಬಂದಿತು. ಅನಂತರದ ದಿನಗಳಲ್ಲಿ ಉತ್ತರಕನ್ನಡ ಭಾಷೆಯ ಹಲವಾರು ಧಾರಾವಾಹಿಗಳಿಗೆ ಕತೆ-ಚಿತ್ರಕತೆ-ಸಂಭಾಷಣೆಯನ್ನು ಬರೆದರು. ಮಹಾನವಮಿ, ಕಿನ್ನರಿ, ಕಿಚ್ಚು, ಕುಂತಿ ಧಾರಾವಾಹಿಗಳು ಸೇರಿದಂತೆ ೨೦ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕತೆ -ಚಿತ್ರಕತೆ-ಸಂಭಾಷಣೆ ಬರೆದರು.

( ಸೌಭಾಗ್ಯವತಿ ಕಿರುತೆರೆ ಕಲಾವಿದರೊಂದಿಗೆ ಹೂಲಿಶೇಖರ)

 

(‘ಗಂಗಾ’ ಕಿರುತೆರೆಯ ಕಲಾವಿದರೊಂದಿಗೆ ಹೂಲಿಶೇಖರ)

 

(ಗಂಗಾ ಧಾರಾವಾಹಿಯ ನಿರ್ದೇಶಕಿ ಸ್ವಪ್ನ ಕೃಷ್ಣ ಅವರೊಂದಿಗೆ ಹೂಲಿಶೇಖರ ದಂಪತಿ)

 

ಅವರು ಬರೆದಂತಹ ಗಂಗಾ ಧಾರಾವಾಹಿಯ ವಿಶೇಷತೆ ಏನೆಂದರೆ ಇದರಲ್ಲಿ ಶಿರಸಿಯ ಹವ್ಯಕ ಭಾಷೆಯನ್ನು ಸುಲಲಿತವಾಗಿ ಬಳಸಿಕೊಂಡಿದ್ದರು. ಉತ್ತರ ಕನ್ನಡದ ಲೇಖಕನೊಬ್ಬ ಹವ್ಯಕ ಭಾಷೆಯನ್ನು ಬರೆಯುತ್ತಿದ್ದಾನೆ ಎನ್ನುವ ಸತ್ಯ ಎಷ್ಟೋ ಜನರಿಗೆ ಗೊತ್ತೇ ಇರಲಿಲ್ಲ. ಆ ಭಾಷೆಯಲ್ಲಿ ಅಷ್ಟು ಪಕ್ವತೆ ಇತ್ತು.ಅಪ್ಪ ಇರುವುದೇ ಹಾಗೆ. ಅವರಿಗೆ ಯಾವ ಸೀಮೆಯ ಭಾಷೆಯನ್ನು ಕೊಟ್ಟರು ಅವರು ಸರಾಗವಾಗಿ ಅಲ್ಲಿಯ ಭಾಷೆಯನ್ನು ತಮ್ಮ ಲೇಖನಿಯಲ್ಲಿ ಇಳಿಸಿಬಿಡುತ್ತಾರೆ. ಇದಕ್ಕೆ ಬಹುಶಃ ಅವರ ಕಾಲಿನಲ್ಲಿದ್ದ ನಾಯಿ ರೇಖೆಯೇ ಕಾರಣವಿರಬೇಕು.

ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತ, ದ.ರಾ.ಬೇಂದ್ರೆ, ಡಾ.ಚಂದ್ರಶೇಖರ ಕಂಬಾರ ಅವರೊಂದಿಗೆ ಅಮೂಲ್ಯ ಕ್ಷಣಗಳನ್ನುಅಪ್ಪ ಕಳೆದಿದ್ದಾರೆ. ಅದರಲ್ಲಿಯು ಡಾ.ಚಂದ್ರಶೇಖರ ಅವರು ಅಪ್ಪನ ಸಮಗ್ರ ನಾಟಕಗಳ ಪುಸ್ತಕವನ್ನುಇತ್ತೀಚೆಗಷ್ಟೇ ಬಿಡುಗಡೆ ಮಾಡಿದರು.ಇವೆಲ್ಲವು ಅಪ್ಪನಿಗೆ ಒಲಿದು ಬಂದಂತಹ ಸೌಭಾಗ್ಯವೆನ್ನಬೇಕು.

ಮುಂಬೈ ವಿಶ್ವವಿದ್ಯಾಲಯದಲ್ಲಿ ಪ್ರಭು ಅಂಗಡಿಯವರು ಮತ್ತು ಕರ್ನಾಟಕ ವಿಶ್ವವಿದ್ಯಾಲದಲ್ಲಿ ಸಯ್ಯದ್ ಮುಕ್ತಾರ್ ಅವರು ಅಪ್ಪನ ನಾಟಕಗಳ ಕುರಿತಾಗಿ ಎಂ.ಫಿಲ್ ನ್ನು ಮಾಡಿದ್ದಾರೆ.

 

ಅಪ್ಪನ ಸಾಹಿತ್ಯ ಸೇವೆಗಾಗಿ ಉಪ್ಪಿನ ಗಂಗಾಧರಪ್ಪ ಪ್ರತಿಷ್ಠಾನದವರು ಅಕ್ಷರ ಬ್ರಹ್ಮ, ಹಂದಿಗನೂರಿನ ಜೈ ಕರ್ನಾಟಕ ಸಂಸ್ಥೆಯವರು ಅಕ್ಷರ ಹುಲಿ ಎನ್ನುವ ಬಿರುದ್ದನ್ನು ನೀಡಿ ಗೌರವಿಸಿದರು.

ಅಪ್ಪನ ಕಾರ್ಯ ವೈಖರಿಯ ಬಗ್ಗೆ ಹೇಳಲೇಬೇಕು. ಅಪ್ಪ ಬರೆದಂತಹ ಧಾರಾವಾಹಿಯ ಚಿತ್ರಕತೆ-ಸಂಭಾಷಣೆಯಲ್ಲಿ ಯಾರು ಸಹ ಬರಹಗಾರರಿಲ್ಲದೆ ಒಬ್ಬರೇ ನಿರ್ವಹಿಸಿದ್ದು ಇನ್ನೊಂದು ವಿಶೇಷ. ಅಪ್ಪ ಯಾವುದೇ ಧಾರಾವಾಹಿಗಳನ್ನು ಒಪ್ಪಿಕೊಳ್ಳಲಿ ಅವರು ಒಬ್ಬರೇ ಬರೆಯುತ್ತಿದ್ದರೂ ಅದನ್ನು ಸರಿಯಾದ ಸಮಯದಲ್ಲಿ ಕೊಡುವ ಒಬ್ಬ ಶಿಸ್ತಿನ ಸಿಪಾಯಿ. ಚಿತ್ರಕತೆಯ ಸೀನ್ ಬರೆಯಲು ಬೆಳಗ್ಗೆ ೬ ಗಂಟೆಗೆ ಕೂತರೆ ಮುಗಿಯಿತು, ಋಷಿಮುನಿ ತಪಸ್ಸಿಗೆ ಕೂತ ಹಾಗೆಯೇ ರಾತ್ರಿ ೧೦ ಗಂಟೆಯಾದರೂ ಕೂತ ಜಾಗದಿಂದ ಕದಲುತ್ತಿರಲಿಲ್ಲ. ಅಪ್ಪ ಒಂದು ವೇಳೆ ಸೊಂಟ ನೋವು ಎಂದು ಒಂದು ಕ್ಷಣ ಎದ್ದು ನಿಂತರು. ಶೂಟಿಂಗ್ ಜಾಗದಿಂದ ಅರ್ಜೆಂಟ್ ಸೀನ್ ಬೇಕು ಎಂದು ಕರೆಗಳು ಬರುತ್ತಿದ್ದವು. ಅದಕ್ಕೆ ಅಪ್ಪನು ರಾಕ್ಷಸನೇ ಮೈ ಮೇಲೆ ಬಂದಂತೆ ಮತ್ತೆ ಕೂತು ಬರೆಯುತ್ತಿದ್ದರು. ಅಪ್ಪ ಕೂತಲ್ಲಿಯೇ ಚಾಯಿ, ಊಟ ತಗೆದುಕೊಂಡು ಅಮ್ಮ ಹೋಗುತ್ತಿದ್ದಳು. ಅಪ್ಪನ ರೂಮ್ ನಲ್ಲಿ ಸಣ್ಣ ಮಕ್ಕಳ್ಯಾರೂ ಕಾಲು ಇಡುವಂತಿರಲಿಲ್ಲ. ಅವರು ಬರೆದ ಸೀನ್ ಪೇಪರ್ ಗಳು ಮಂಚದ ತುಂಬಾ ಹರಡಿರುತ್ತಿತ್ತು. ಒಂದು ಪೇಪರ್ ಮಿಸ್ ಆದರೂ ಮನೆಯವರಿಗೆ ಮಾರಿ ಹಬ್ಬವೇ ನಡೆಯುತ್ತಿತ್ತು. ಹಾಗಾಗಿ ಅವರ ರೂಮ್ ಗೆ ಅಮ್ಮನ ಹೊರತಾಗಿ ಯಾರು ಹೋಗುತ್ತಿರಲಿಲ್ಲ.

ಕೆಲವೊಂದು ಸಾರಿ ಅಪ್ಪ ಕಾರ್ಯಕ್ರಮಗಳಿಗೆ ಹೋದಾಗ ಅಥವಾ ಹುಷಾರು ತಪ್ಪಿದಾಗ ಅರ್ಜೆಂಟ್ ಸೀನ್ ಪೇಪರ್ ಬೇಕು ಎಂದು ಫೋನ್ ಕರೆ ಬಂದರೆ ಸಾಕು. ಅಪ್ಪನ ಬಾಯಿಯಿಂದ

‘ಆಗುವುದಿಲ್ಲ’ ಎನ್ನುವ ಮಾತೇ ಬರುತ್ತಿರಲಿಲ್ಲ. ಫೋನ್ ನಲ್ಲೇ ಎಲ್ಲ ಸೀನ್, ಸಂಭಾಷಣೆಗಳನ್ನು ಹೇಳಿ ಬಿಡುತ್ತಿದ್ದರು. ಅದನ್ನು ಶೂಟಿಂಗ್ ಜಾಗದಲ್ಲಿ ಬರೆದುಕೊಂಡು ಶೂಟಿಂಗ್ ಮಾಡಿದ ಪ್ರಸಂಗಗಳೆಷ್ಟೋ ಇದೆ. ಒಬ್ಬರಿಗೆ ಒಂದು ಧಾರಾವಾಹಿಯನ್ನು ಬರೆಯುವುದೇ ಕಷ್ಟ. ಅದರಲ್ಲಿ ಅಪ್ಪ ಕೆಲವೊಮ್ಮೆ ಏಕ ಕಾಲಕ್ಕೆ ಒಬ್ಬರೇ ಎರೆಡೆರಡು ಧಾರಾವಾಹಿಗಳಿಗೆ ಚಿತ್ರಕತೆ-ಸಂಭಾಷಣೆ ಬರೆದಿದ್ದು ಇತಿಹಾಸವಿದೆ. ಅಪ್ಪನಿಗೆ ತಕ್ಷಣಕ್ಕೆ ಆಲೋಚನೆಗಳು ಹೇಗೆ ಬರುತ್ತಿದ್ದವೋ ಗೊತ್ತಿಲ್ಲ.

ಅವರು ಬರೆದಂತಹ ಸೀನ್ ಪೇಪರ್ ಗಳ ಸಂಖ್ಯೆ 2 ಲಕ್ಷಕ್ಕೂ ಹೆಚ್ಚು. ಆದರೆ ವಿಪರ್ಯಾಸವೆಂದರೆ ಅಷ್ಟೆಲ್ಲ ಬರೆದ ಸೀನ್ ಪೇಪರ್ ಗಳ ದಾಖಲೆಗಳು ಯಾವವು ಅವರ ಬಳಿ ಉಳಿಯಲಿಲ್ಲ.ಅಷ್ಟೆಲ್ಲ ಶ್ರಮ ಹಾಕಿ ಬರೆದ ಪೇಪರ್ ಗಳು ಶೂಟಿಂಗ್ ಮುಗಿಯುತ್ತಿದ್ದಂತೆ ಕ್ಷಣಾರ್ಧದಲ್ಲೇ ಕಸದ ಬುಟ್ಟಿಗೆ ಹೋಗಿ ಬಿಡುತ್ತಿದ್ದವು. ಪತ್ರಿಕಾಗೋಷ್ಠಿಯಲ್ಲೂ ಅಪ್ಪ ತೆರೆಯ ಮರೆಯಲ್ಲಿಯೇ ಉಳಿಯುತ್ತಿದ್ದ ರು. ಆದರೆ ನಾಟಕದಲ್ಲಿ ಹಾಗಲ್ಲ.ಅವರು ಬರೆದ ಪ್ರತಿಗಳೆಲ್ಲವೂ ಪುಸ್ತಕ ರೂಪದಲ್ಲಿ ಮುದ್ರಣ ವಾಗುತ್ತಿದ್ದವು ಮತ್ತು ಅವರ ನಾಟಕಗಳನ್ನು ಹಲವಾರು ತಂಡಗಳು ಪ್ರದರ್ಶನ ಮಾಡುತ್ತವೆ. ಅವರ ಪ್ರಶಂಸೆಯ ಹಕ್ಕು ಅವರಿಗೆಯೇ ಸಲ್ಲುತ್ತದೆ.

(ಹೂಲಿಶೇಖರ ಅವರ ಮನೆ ಗೃಹ ಪ್ರವೇಶದಲ್ಲಿ ಶುಭ ಕೊರಲು ಆಗಮಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರೊಂದಿಗೆ)

 

(ಹೂಲಿಶೇಖರ ಅವರ ಸಮಗ್ರ ನಾಟಕಗಳ ಪುಸ್ತಕ ಬಿಡುಗಡೆಯನ್ನು ಡಾ.ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡಿದಂತಹ ಕ್ಷಣ)

 

ನನ್ನ ದೃಷ್ಟಿಯಲ್ಲಿ ನಾಟಕ,ಚಿತ್ರಕತೆ, ಸಂಭಾಷಣೆಯಲ್ಲಿ ಉತ್ತರಕನ್ನಡ ಭಾಷೆಯ ಮೇಲಿನ ಹಿಡಿತವಿದ್ದರೆ ಅದು ನನ್ನ ಅಪ್ಪನಿಂದ ಮಾತ್ರ ಎಂದು ಹೆಮ್ಮೆಯಿಂದ ಮುಕ್ತವಾಗಿಯೇ ಹೇಳುತ್ತೇನೆ. ಉತ್ತರಕನ್ನಡ ಭಾಷೆ ಮತ್ತು ಪೌರಾಣಿಕ ಸಿನಿಮಾಗಳು ಬಂದಾಗ ಈ ಚಿತ್ರಕತೆ-ಸಂಭಾಷಣೆಯನ್ನು ಅಪ್ಪ ಬರೆದಿದ್ದರೆ ಚಿಂದಿ ಚಿತ್ರಾನ್ನವಾಗುತ್ತಿತ್ತು ಎಂದು ಎಷ್ಟೋ ಸಲ ನನ್ನ ಮನಸ್ಸಿಗೆ ಅನ್ನಿಸಿದ್ದು ಉಂಟು. ಆ ದಿನ ಸದ್ಯದಲ್ಲೇ ಬಂದರು ಬರಬಹುದು ಎನ್ನುವ ನಿರೀಕ್ಷೆಯಂತು ಇದ್ದೆ ಇದೆ.

 

ಈಗ ಸಧ್ಯ ನಾಟಕಗಳತ್ತ ಗಮನ ಹರಿಸಿದ್ದಾರೆ. ನಾಲ್ಕುಒಳ್ಳೆಒಳ್ಳೆಯ ನಾಟಕಗಳು ಸದ್ಯದಲ್ಲೇ ರಂಗಭೂಮಿಗೆ ಲೋಕಾರ್ಪಣೆಯಾಗಲಿದೆ. ಅವರ ನಾಟಕಗಳನ್ನು ಗೌರವಿಸಿ ರಂಗಮಂಚದ ಮೇಲೆ ಪ್ರದರ್ಶಿಸಿದ ಎಲ್ಲ ರಂಗ ತಂಡಗಳಿಗೆ ಮತ್ತುಕಿರುತೆರೆಯಲ್ಲಿ ಅವಕಾಶ ಕೊಟ್ಟ ಎಲ್ಲ ನಿರ್ದೇಶಕರಿಗೆ,ನಿರ್ಮಾಪಕರಿಗೆ ನನ್ನ ಪರವಾಗಿ, ನನ್ನ ಅಪ್ಪನ ಪರವಾಗಿ ಧನ್ಯವಾದಗಳು. ಹೀಗೆ ನಿಮ್ಮೆಲ್ಲರ ಪ್ರೀತಿ ಅಪ್ಪನಿಗೆ ಸಿಗಲಿ ಎಂದು ಹಾರೈಸುತ್ತೇನೆ.

ಈ ಸಂದರ್ಭದಲ್ಲಿ ನಾಗೇಂದ್ರ ಪ್ರಸಾದ ಅವರ ರಚನೆಯ ‘ಅಪ್ಪಾ…ಐ ಲವ್ ಯು ಪಾ…’ ಹಾಡು ನೆನಪಿಗೆ ಬರುತ್ತದೆ. ಈ ಅದ್ಬುತ ಸನ್ನಿವೇಶಕ್ಕೆ ಈ ಅದ್ಬುತ ಹಾಡನ್ನು ನಮ್ಮ ತಂದೆಗೆ ಸಮರ್ಪಿಸಿದರೆ ಸೂಕ್ತವಾಗಿರುತ್ತದೆ. ಭಾವನೆಗಳನ್ನು ಬೆಸೆಯುವ ಈ ಹಾಡಿನ ರಚನೆಗೆ ನಾಗೇಂದ್ರ ಪ್ರಸಾದ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು.

ನಾನು ಕಂಡ ಸಾಹಸ ಸಿಂಹ ವಿಷ್ಣುವರ್ಧನ…

ಅಂಬರೀಷ ಅವರೊಂದಿಗೆ ಕಳೆದ ಒಂದು ಕ್ಷಣ !

 

 

ಲೇಖನ : ಶಾಲಿನಿ ಪ್ರದೀಪ್

 

aakritikannada@gmail.com

 

 

 

 

 

 

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW