ನೇರ ಮಾತಿನ ಬಿ.ವಿ.ವೈಕುಂಠರಾಜು ವೇದಿಕೆಯಿಂದ ಇಳಿದು ಹೋದದ್ದೇಕೆ?

ನಾನು ಕಂಡಂತೆ ಮಹಾನುಭಾವರು -೩

ಸಮಾರೋಪ ಭಾಷಣ ಮಾಡಲು ಬಂದಿದ್ದ ನೇರ ಮಾತಿನ ಪತ್ರಕರ್ತ, ನಾಟಕಕಾರ ಶ್ರೀ ಬಿ.ವಿ.ವೈಕುಂಠರಾಜು ಅವರು ಇದ್ದಕ್ಕಿದ್ದಂತೆ ವೇದಿಕೆಯಿಂದ ಇಳಿದು ಹೋದದ್ದೇಕೆ?

ಒಂದು ಕಾಲಕ್ಕೆ ರಂಗಾಸಕ್ತರಿಗೆ ಪ್ರಜಾವಾಣಿ ಪತ್ರಿಕೆಯ ವಾರದ ಪುರವಣಿ ಪುಟವೆಂದರೆ ಬಳ್ಳಾರಿಯ ಗಿರಮಿಟ್ಟು ಆಗಿತ್ತು. ಕೆಲವರಿಗೆ ಖಾರ, ಕೆಲವರಿಗೆ ಉಪ್ಪು. ಕೆಲವರಿಗೆ ಗೋದೀ ಹುಗ್ಗಿ. ಇನ್ನು ಕೆಲವರಿಗೆ ನಾಲಿಗೆಗೆ ಹತ್ತಿದ ರುಚಿ ಆಗಿತ್ತು. ವಾರಕ್ಕೊಮ್ಮೆ ಅದರಲ್ಲಿ ಏನು ಬರುತ್ತದೋ ಎಂದು ಕಾಯುವವರೇ ಹೆಚ್ಚು. ನಾಟಕ ಪ್ರಯೋಗಗಳ ವಿಮರ್ಶೆಗಳು. ಹೊಸ ನಾಟಕ ಕೃತಿಗಳ ಬಗ್ಗೆ ವಿವರಗಳು. ರಂಗ ಕಲಾವಿದರು, ರಂಗ ನಿರ್ದೇಶಕರು, ನಾಟಕಕಾರರ ಬಗ್ಗೆ ಬರುವ ವಿವರಗಳನ್ನು ಓದಲು ಕಾಯುತ್ತಿದ್ದರು. ಅದಕ್ಕೆ ಕಾರಣ ಅವತ್ತು ಪುರಾವಣಿಯಲ್ಲಿ ರಂಗಭೂಮಿ ಕುರಿತು, ನಾಟಕ ಪ್ರದರ್ಶನಗಳ ಕುರಿತು ಲೇಖನಗಳು, ವಿಮರ್ಶೆಗಳು ಬರುತ್ತಿದ್ದವು. ಬೆಂಗಳೂರು ಅಲ್ಲದೆ ರಾಜ್ಯದ ಇತರ ಕಡೆ ಪ್ರದರ್ಶನವಾಗುತ್ತಿದ್ದ ರಂಗ ಚಟುವಟಿಕೆಗಳ ವಿವರಗಳನ್ನು ಪತ್ರಿಕೆ ಪ್ರಕಟಿಸುತ್ತಿತ್ತು. ಸಿನಿಮಾ ಪುಟ ಹೇಗೋ ಹಾಗೆಯೇ ರಂಗಪುಟಕ್ಕೆ ಪ್ರಜಾವಾಣಿ ತನ್ನಲ್ಲಿ ಜಾಗ ಮೀಸಲಿರಿಸಿಕೊಂಡಿತ್ತು. ಅದರ ಜನಪ್ರಿಯತೆಯನ್ನು ಕಂಡ ಇತರ ಪತ್ರಿಕೆಗಳೂ ರಂಗಭೂಮಿಗಾಗಿ ತಮ್ಮಲ್ಲೂ ಜಾಗವಿಟ್ಟುಕೊಂಡವು.

ಇದಕ್ಕೆ ಆಗ ಪ್ರಜಾವಾಣಿಯಲ್ಲಿ ಪುರವಣಿ ಸಂಪಾದಕರಾಗಿದ್ದ ಶ್ರೀ ಬಿ.ವಿ.ವೈಕುಂಠರಾಜು ಅವರೇ ಕಾರಣ ಅನ್ನಬಹುದು. ಅವರು ಸ್ವತಃ ನಾಟಕಕಾರರೂ ಆಗಿದ್ದರು. ರಂಗತಂಡಗಳೊಂದಿಗೆ ಅನುನಯ ಒಡನಾಟ ಇಟ್ಟುಕೊಂಡವರೂ ಆಗಿದ್ದರು. ಅವರ ರಂಗಪ್ರೀತಿಯಿಂದಾಗಿಯೇ ಪ್ರಜಾವಾಣಿಯಂಥ ಪತ್ರಿಕೆ ನೋಡಲು ರಂಗಾಸಕ್ತರು ಕಾಯುವಂತಾಗಿತ್ತು. ಇದರ ಸೋದರ ಪತ್ರಿಕೆ ಡೆಕ್ಕನ್‌ ಹೆರಾಲ್ಡ್ ಕೂಡ ರಂಗ ಸಂಬಂಧಿ ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲು ಶ್ರೀಯುತರೇ ಕಾರಣ.

ಶ್ರೀ ಬಿ.ವಿ.ವೈಕುಂಠರಾಜು ಅವರು ನೇರ ಮತ್ತು ಕರಾರುವಾಕ್ಕಿನ ಮಾತಿಗೆ ಹೆಸರಾದವರು. ತಮಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುತ್ತಿದ್ದರು. ಅದರಿಂದೇನೋ. ಅವರ ಮಾತಿಗೆ ತೂಕವಿರುತ್ತಿತ್ತು. ಬೆಂಗಳೂರಿನ ಹಲವು ತಂಡಗಳು ಅವರ ನಾಟಕಗಳನ್ನು ಪ್ರಯೋಗಕ್ಕೆ ತಗೆದುಕೊಂಡವು. ಶ್ರೀ ಆರ್‌.ನಾಗೇಶ್‌ ಅವರು ‘ಉದ್ಭವ’ ನಾಟಕವನ್ನು ಪ್ರಯೋಗಿಸಿ ದೊಡ್ಡ ಹೆಸರು ತಂದರು. ಅದರ ಯಶಸ್ಸು ಪತ್ರಿಕಾಕರ್ತರಾದ ರಾಜು ಅವರು ನಾಟಕಗಳನ್ನು ಬರೆಯಲು ಇನ್ನಷ್ಟು ಪ್ರೇರಣೆಯನ್ನೂ ನೀಡಿತು.

ಇದು ವೈಕುಂಠರಾಜು ಅವರು ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಹೊತ್ತಿನಲ್ಲಿ ಶಿರಸಿಯಲ್ಲಿ ನಡೆದ ಒಂದು ಘಟನೆ. ಇದು ವೈಕುಂಠರಾಜು ಅವರು ಎಷ್ಟೊಂದು ಸ್ವಾಭಿಮಾನಿಯಾಗಿದ್ದರು ಎಂದು ತೋರಿಸುತ್ತದೆ. ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಒಂದು ನಾಟಕೋತ್ಸವದ ಕೊನೆಯ ದಿನ ಸಂಜೆ ವೈಕುಂಠರಾಜು ಅವರು ಸಮಾರೋಪ ಭಾಷಣ ಮಾಡಲು ಆಹ್ವಾನಿತರಾಗಿದ್ದರು. ಆಗ ಅಂಬಿಕಾನಗರ[ಉ.ಕ.]ದಲ್ಲಿದ್ದ ನನಗೆ ಬೆಂಗಳೂರಿಂದ ಫೋನು ಮಾಡಿ ತಾವು ಶಿರಸಿಗೆ ಬರುತ್ತಿದ್ದು ನೀವೂ ಅಲ್ಲಿಗೇ ಬನ್ನಿ. ನಿಮ್ಮ ಜೊತೆ ಮಾತಾಡಬೇಕು ಎಂದು ಹೇಳಿದರು.

ಕೂಡಲೇ ನನಗೆ ಹೊಸ ಯೋಚನೆಯೊಂದು ಬಂತು. ಅದೇ ಸಂದರ್ಭದಲ್ಲಿ ನನ್ನ ‘ಬೆಕುವ’ ಅನ್ನುವ ನಾಟಕವನ್ನು ಮಂಗಳೂರಿನ ‘ಅಭಿವ್ಯಕ್ತ’ ತಂಡ ಪ್ರಕಟಿಸಿತ್ತು. ಅದರ ಬಿಡುಗಡೆ ಆಗಬೇಕಿತ್ತು. ಈಗ ಹೇಗೂ ನಾಟಕ ಅಕಾಡೆಮಿಯ ಅಧ್ಯಕ್ಷರು ಉ.ಕ.ಜಿಲ್ಲೆಗೆ ಬರುತ್ತಿದ್ದಾರೆ.ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಯೋಚಿಸಿದೆ. ಮತ್ತು ಅವರಿಗೆ ಕೂಡಲೇ ಫೋನು ಮಾಡಿ ವಿನಂತಿಸಿದೆ. ‘ಹೇಗೂ ಜಿಲ್ಲೆಗೆ ಬರುತ್ತಿದ್ದೀರಿ. ಮುಂಚಿತವಾಗಿ ನೇರವಾಗಿ ದಾಂಡೇಲಿಗೆ ಬಂದು ಬಿಡಿ ಸಾರ್‌. ಬೆಳಿಗ್ಗೆ ದಾಂಡೇಲಿಯಲ್ಲಿ ನನ್ನ ಹೊಸ ನಾಟಕದ ಬಿಡುಗಡೆ ಇಟ್ಟುಕೊಳ್ಳುತ್ತೇವೆ. ಅದನ್ನು ನೀವೇ ಬಿಡುಗಡೆ ಮಾಡಬೇಕು. ಶಿರಸಿಯಲ್ಲಿ ಹೇಗೂ ಕಾರ್ಯಕ್ರಮ ಸಂಜೆ ಆರು ಗಂಟೆಗೆ. ದಾಂಡೇಲಿಯಿಂದ ಶಿರಸಿ ಕಾರಿನಲ್ಲಿ ಎರಡು ತಾಸಿನ ಹಾದಿ. ಊಟ ಮಾಡಿ ಎರಡು ಗಂಟೆಗೆ ಬಿಟ್ಟರೂ ಸಂಜೆ ನಾಲ್ಕೆಂದರೆ ಅಲ್ಲಿರಬಹುದು’ ಅಂದಾಗ ಅವರು ಒಪ್ಪಿಯೇ ಬಿಟ್ಟರು. ನಾನು ಅಂಬಿಕಾನಗರದ ನಮ್ಮ ಜೋಕುಮಾರಸ್ವಾಮಿ ಕಲಾ ಬಳಗದ ಗೆಳೆಯರ ಸಹಕಾರದಿಂದ ದಾಂಡೇಲಿಯಲ್ಲಿ ಪುಸ್ತಕ ಬಿಡುಗಡೆ ಇಟ್ಟುಕೊಂಡುಬಿಟ್ಟೆ.

ಕೊಟ್ಟ ಮಾತಿನಂತೆ ವೈಕುಂಠರಾಜು ಅವರು ದಾಂಡೇಲಿಗೆ ಬಂದರು. ನನ್ನ ನಾಟಕ ಕೃತಿ ‘ಬೆಕುವ’ ನನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮ ಯಶಸ್ವಿಯಾಯಿತು. ಊಟಕ್ಕೆ ಕೂತಾಗ ವೈಕುಂಠರಾಜು ಅವರು ಹೇಳಿದರು. ‘ಶೇಖರ್‌ … ನೀವೂ ನನ್ನ ಜೊತೆ ಕಾರಿನಲ್ಲಿ ಶಿರಸಿಗೆ ಬಂದುಬಿಡಿ. ನಾನು ಶಿರಸಿ ಕಾರ್ಯಕ್ರಮ ಮುಗಿಸಿ ಹುಬ್ಬಳ್ಳಿಗೆ ಹೊರಡುತ್ತೇನೆ. ನನ್ನ ಜೊತೆ ಹುಬ್ಬಳ್ಳಿಯವರೆಗೆ ಬನ್ನಿ’ ಅಂದರು. ನನಗೆ ಇಲ್ಲ ಅನ್ನಲಾಗಲಿಲ್ಲ. ನನಗೂ ಶಿರಸಿಯಲ್ಲಿ ಹಲವು ರಂಗ ಮಿತ್ರರಿದ್ದರು. ಅನಾಯಾಸವಾಗಿ ಭೇಟಿ ಆಗುತ್ತಾರೆ ಎಂದು ಹೂಂ ಅಂದುಬಿಟ್ಟೆ. ನಾಟಕದವರ ಕಾಲಲ್ಲಿ ನಾಯೀ ಗೆರೆ ಇರುತ್ತಂತೆ. ಓಡಾಡುತ್ತಲೇ ಇರಬೇಕು ನೋಡಿ.

ಸರಿಯಾಗಿ ಎರಡು ಗಂಟೆಗೆ ದಾಂಡೇಲಿ ಬಿಟ್ಟೆವು. ಸರಿಯಾಗಿ ನಾಲ್ಕೂ ಕಾಲು ಅಂದರೆ ಶಿರಸಿಯ ಮಾರಿಕಾಂಬೆಯ ಗುಡಿಯಲ್ಲಿದ್ದೆವು. ಸಂಘಟಕರಿಗೆ ತಾವು ಬಂದಿರುವ ವಿಷಯವನ್ನು ಅವರೇ ತಿಳಿಸಿದರು. ಒಂದಿಬ್ಬರು ಬಂದು ಅಲ್ಲಿಯೇ ಇದ್ದ ದೇವಸ್ಥಾನದ ಎದುರಿಗೇ ಇದ್ದ ಅತಿಥಿಭವನಕ್ಕೆ ಕರೆದೊಯ್ದರು. ಇಲ್ಲಿ ವಿಶ್ರಾಂತಿ ತಗೊಳ್ಳಿ. ಕಾರ್ಯಕ್ರಮ ಸರಿಯಾಗಿ ಆರು ಗಂಟೆಗೆ ಸುರುವಾಗು ತ್ತದೆ. ಹತ್ತು ನಿಮಿಷ ಮುಂಚೆ ನಾವು ಯಾರಾದರೂ ಕರೀಲಿಕ್ಕೆ ಬರ್ತೀವಿ. ವಿಶ್ರಾಂತಿ ತಗೊಳ್ಳಿ ಅಂದವರೇ ಹೋದರು. ಕಾರ್ಯಕ್ರಮ ಸುರುವಾಗಲು ಇನ್ನೂ ಒಂದು ಗಂಟೆ ಇದೆ. ಗಂಟಲಿಗೆ ಚಹಾನೋ, ಕಾಫೀನೋ ಬೇಕು ಅಂದರು ಅಧ್ಯಕ್ಷರು. ಯಾರಿಗಾದರೂ ಹೇಳೋಣವೆಂದರೆ ಅಲ್ಲಿ ಯಾರೂ ಇರಲಿಲ್ಲ. ಅದನ್ನರಿತ ರಾಜು ಅವರು ‘ಇರಲಿ ಬಿಡಿ. ನಾವೇ ಕೆಳಗಿಳಿದು ಹತ್ತಿರ ಯಾವುದಾದರೂ ಹೊಟೆಲ್ಲಿನಲ್ಲಿ ಕುಡಿದು ಬೇಗ ಬರೋಣ’ ಎಂದರು. ಇಬ್ಬರೂ ಅಲ್ಲಿಯೇ ಹತ್ತಿರದಲ್ಲಿದ್ದ ಒಂದು ಚಿಕ್ಕ ಅಂಗಡಿಯಲ್ಲಿ ಚಹ ಕುಡಿದದ್ದೂ ಆಯಿತು. ನನಗೆ ಒಳಗೇ ಮನಸ್ಸು ಕದಡಿತು. ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಲು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷರು ಬಂದಿದ್ದಾರೆ. ಸಂಘಟಕರೇ ಆವರನ್ನು ಆಹ್ವಾನಿಸಿದ್ದಾರೆ. ಸೌಜನ್ಯಕ್ಕಾದರೂ ಆತಿಥ್ಯ ವ್ಯವಸ್ಥೆ ಬೇಡವೆ ಅಂದುಕೊಂಡೆ. ವೈಕುಂಠರಾಜು ಅವರಿಗೂ ಹಾಗೇ ಅನಿಸಿರಬೇಕು. ಆದರೆ ಎಲ್ಲವನ್ನೂ ಒಳಗೇ ನುಂಗಿಕೊಂಡದ್ದು ನನ್ನ ಅರಿವಿಗೆ ಬಂತು. ಕಾರ್ಯಕ್ರಮ ಮುಗಿಯುತ್ತಲೂ ಹುಬ್ಬಳ್ಳಿಗೆ ಹೊರಟು ಬೇಡೋಣ ಅಂದರು.

ರೂಮಿನಲ್ಲಿ ತಯಾರಾಗಿ ಕೂತರು. ಯಾರು ಬಂದು ಕರೆದರೂ ಸರಿ. ಹೋಗೋಣ. ಬಂದ ಕೆಲಸ ಮುಗಿದರೆ ಸಾಕು ಅಂದರು. ನಾನು ನನ್ನ ಗೆಳೆಯರಿಗೆ ಪೋನು ಮಾಡೋಣ ಅಂದುಕೊಂಡೆ. ಅವರೇ ತಡೆದರು. ‘ಬೇಡ… ಅವರೆಲ್ಲ ಬರೋದು. ಮಾತಿನಲ್ಲಿ ಇಲ್ಲೇ ಸಮಯ ವ್ಯರ್ಥ ಆಗೋದು ಬೇಡ. ಬಂದ ಕೆಲಸ ಮುಗಿದರೆ ಸಾಕು’ ಅಂದರು.

ಐದೂ ಮುಕ್ಕಾಲು ಆಯಿತು. ಆರಾಯಿತು. ಯಾರೂ ಬರಲಿಲ್ಲ. ಅಷ್ಟರಲ್ಲಿ ಕಾರಿನ ಡ್ರೈವರ ವೇದಿಕೆ ಬಳಿ ಹೋಗಿ ನೋಡಿಕೊಂಡು ಬಂದಿದ್ದ. ‘ಜನ ಸೇರತಾ ಇದಾರೆ ಸಾರ್‌. ಖುರ್ಚಿ ಭರ್ತಿ ಆಗಿವೆ ‘ ಅಂದ. ವೈಕುಂಠರಾಜು ಕೂಡಲೇ ಸಂಘಟಕರಿಗೆ ಪೋನುಮಾಡಿದರು. ‘ನಾವು ರೆಡಿಯಾಗಿ ಕೂತಿದ್ದೀವಿ ಕಣ್ರೀ…’ ಅಂದರು. ಆ ಕಡೆಯಿಂದ ‘ಬರ್ತೀವಿ ಸಾರ್‌. ಈಗ್ಲೇ ಬಂದ್ವಿ’ ಅಂದದ್ದು ಕೇಳಿತು. ಮತ್ತೆ ಕಾದದ್ದಾಯಿತು. ಸಭಾಗೃಹಕ್ಕೆ ಕರೆಯಲು ಯಾರೂ ಬರಲೇ ಇಲ್ಲ. ಅಷ್ಟರಾಗಲೇ ಮೈಕಿನಲ್ಲಿ ಅಲ್ಲಿ ಸ್ವಾಗತ ಗೀತೆ ಹಾಡುವುದು ಕೇಳಿತು. ನಮಗೆ ವಿಚಿತ್ರ ಅಚ್ಚರಿ ಅನಿಸಿತು. ಪರಸ್ಪರ ಮುಖ ನೋಡಿಕೊಂಡೆವು.

‘ಇಲ್ಲ. ಅವ್ರು ಕಾರ್ಯಕ್ರಮ ಸುರು ಮಾಡೀದಾರೆ. ನನ್ನನ್ನ ಸಮಾರೋಪಕ್ಕೆಂದು ಕರೆದೀದಾರೆ. ನಾನು ಬಂದೂ ಆಗಿದೆ. ಇಲ್ಲಿ ಅತಿಥಿ ಗೃಹದಲ್ಲಿ ಅವರು ನಮ್ಮನ್ನು ಕೂರಿಸಿಯೂ ಆಗಿದೆ. ಸಂಘಟಕರು ಯಾರಾದರೂ ಬಂದು ಕರೆಯದೆ ನಾವು ಸಭಾಭವನಕ್ಕೆ ಹೋಗುವುದು ಉಚಿತವೆ?’

ವೈಕುಂಠರಾಜು ಅವರು ನನ್ನತ್ತ ನೋಡಿ ಹೇಳಿದರು. ನನಗೆ ಏನೂ ಹೇಳಲಾಗಲಿಲ್ಲ. ಇದು ಕಾರ್ಯಕ್ರಮ ಆಯೋಜಿಸಿದವರ ಸಭ್ಯತನವೂ ಅಲ್ಲ ಎಂಬುದು ಅನಿಸಿತು. ‘ನಾನೇ ಹೋಗಿ ಯಾರನ್ನಾದರೂ ಕರೆತರುತ್ತೇನೆ’ ಅಂದೆ. ‘ಬೇಡ’ ಅಂದರು. ‘ನನ್ನಿಂದ ಸಮಾರೋಪ ಭಾಷಣ ಮಾಡಿಸುವ ಇಚ್ಛೆ ಅವರಿಗಿದ್ದರೆ ಬಂದು ಕರೆದುಕೊಂಡು ಹೋಗುತ್ತಾರೆ ಬಿಡಿ’ ಅಂದರು. ಅಷ್ಟರಲ್ಲಿ ಅಲ್ಲಿ ನಿರೂಪಕರ ಮಾತು ಸುರುವಾಗಿತ್ತು. ವೇದಿಕೆಯಲ್ಲಿ ಇತರ ಅತಿಥಿ [ಸ್ಥಳೀಯ] ಅತಿಥಿಗಳನ್ನು ಕೂಡಿಸಿರಬಹುದು. ಯಾಕೆ ಹೀಗೆ ಮಾಡಿದರು ಎಂದು ಯೋಚಿಸಿದೆ. ಅಷ್ಟರಲ್ಲಿ ‘ಡ್ರೈವರ್‌ ಓಡಿ ಬಂದವನೇ ಸಾರ್‌. ಅವ್ರು ಕಾರ್ಯಕ್ರಮ ಸುರು ಮಾಡಿದ್ರು. ನಿಮ್ಮನ್ನು ಕರೆಯೋಕೂ ಬರಲಿಲ್ಲವಲ್ಲ ಸಾರ್‌ ಅವ್ರು. ಏನ್‌ ಮಾಡೋದು ಈಗ?’ ಅಂದ.

ವೈಕುಂಠರಾಜು ಅವರಿಗೆ ಕೋಪ ಬಂದದ್ದು ಅವರ ಮುಖ ನೋಡಿದಾಗಲೇ ಗೊತ್ತಾಯಿತು. ‘ನಾನೂ ಇಂಥ ಸಂದರ್ಭವನ್ನು ಎಲ್ಲಿಯೂ ನೋಡಿರಲಿಲ್ಲ. ನಾನು ಆಯೋಜಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ದೇವರೆಂದೇ ಕಂಡವನು’. ನಾನೂ ಬೇಸರಗೊಂಡೆ.

ಕೂಡಲೇ ಮೇಲೆದ್ದ ಅವರು ‘ಶೇಖರ್‌, ನಡೀರಿ. ಹೇಗೂ ಮಾರೀ ಗುಡೀಗೆ ಬಂದಿದ್ದೀವಿ. ಇನ್ನೊಮ್ಮೆ ದೇವಿ ದರ್ಶನ ಮಾಡಿಕೊಂಡು ಹುಬ್ಬಳ್ಳೀ ಕಡೆ ಹೊರಡೋಣ’ ಅಂದರು. ನಾನು ಮಾತಾಡಲಿಲ್ಲ. ಇಬ್ಬರೂ ಗುಡಿಯೊಳಗೆ ಹೋದೆವು. ಅಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಭಾಭವನ ದಾಟಿಕೊಂಡೇ ಗರ್ಭಗುಡಿಯತ್ತ ಹೋಗಬೇಕು. ನಾವು ಒಳಗೆ ಹೋಗುತ್ತಿದ್ದಂತೆ ವೇದಿಕೆಯಲ್ಲಿ ಖುರ್ಚಿಗಳು ಭರ್ತಿಯಾಗಿದ್ದವು. ಅಕಾಡೆಮಿಯ ಅಧ್ಯಕ್ಷರಿಗೆಂದು ಯಾವ ಖುರ್ಚಿಯನ್ನೂ ಇಲ್ಲಿ ಮೀಸಲಿಟ್ಟಿರಲಿಲ್ಲ. ಒಬ್ಬರು ಸ್ವಾಗತ ಭಾಷಣ ಮಾಡುತ್ತಿದ್ದರು. ಬೆಂಗಳೂರಿಂದ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಬಿ.ವಿ.ವೈಕುಂಠರಾಜು ಅವರು ಬಂದಿದ್ದಾರೆ. ಅವರಿಗೂ ಸ್ವಾಗತ ಅಂದರು. ಅಷ್ಟರಲ್ಲಿ ಸಭಿಕರಲ್ಲಿ ಕೆಲವರು ರಾಜು ಅವರನ್ನು ಗುರುತು ಹಿಡಿದು ಎದ್ದು ನಿಂತರು. ಸಂಘಟಕರಲ್ಲಿ ಒಬ್ಬರು ಇವರ ಹತ್ತಿರ ಬಂದು ಬನ್ನಿ. ವೇದಿಕೆಗೆ ಬನ್ನಿ ಅಂದರು. ಅಷ್ಟರಾಗಲೇ ವೈಕುಂಠರಾಜು ಅವರ ಸಹನೆಯ ಕಟ್ಟೆ ತುಂಬಿ ಹೋಗಿತ್ತು.

ಕೂಡಲೇ ಅವರು ಸರಸರ ವೇದಿಕೆ ಏರಿದರು. ಯಾರೋ ಖುರ್ಚಿಯೊಂದನ್ನು ತಂದಿಟ್ಟರು. ನಿರೂಪಕ ಮತ್ತೆ ಸ್ವಾಗತ ಭಾಷಣವನನ್ನು ಪುನರುಚ್ಛರಿಸಿದ. ”ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಶ್ರೀ ಬಿ.ವಿ.ವೈಕುಂಠರಾಜು ಅವರು ಇದೀಗ ವೇದಿಕೆಗೆ ಆಗಮಿಸಿದ್ದಾರೆ. ಅವರಿಗೆ ಮತ್ತೊಮ್ಮೆ ಸ್ವಾಗತ” ಅಂದ. ರಾಜು ಅವರಿಗೆ ಕೋಪ ತಡೆಯಲಾಗಲಿಲ್ಲವೇನೋ. ನಿರೂಪಕನ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡರು.

”ನಾನು ಈ ಕಾರ್ಯಕ್ರಮಕ್ಕೆ ಒಂದು ಗಂಟೆ ಮುಂಚೇನೇ ಆಗಮಿಸಿದ್ದೇನೆ. ಸಂಘಟಕರು ಅಲ್ಲಿ ಒಂದು ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಿದ್ದರು. ನಾನಾಗಲೇ ಎದ್ದು ಬರದಿದ್ದರೆ ನಿಮ್ಮನ್ನೆಲ್ಲ ನೋಡುವ ಭಾಗ್ಯ ನನಗೆ ಸಿಗುತ್ತಿರಲಿಲ್ಲವೇನೋ. ಸೌಜನ್ಯಕ್ಕಾಗಿಯಾದರೂ ಸಂಘಟಕರು ನನ್ನನ್ನು ವೇದಿಕೆಗೆ ಬನ್ನಿ ಅಂತ ಕರೀಬಹುದಿತ್ತು. ಯಾರೂ ಬರಲಿಲ್ಲ. ಬದಲಾಗಿ ನನ್ನನ್ನು ಅಲ್ಲಿ ಕೂಡಿ ಹಾಕಿ ಇಲ್ಲಿ ಕಾರ್ಯಕ್ರಮ ಸುರು ಮಾಡಿದ್ದಾರೆ. ತಡೆಯಲಾರದೆ ನಾನು ಎದ್ದು ಇಲ್ಲಿಗೆ ಬಂದೆ. ಇಲ್ಲಿಗೆ ನನ್ನನ್ನು ಆಮಂತ್ರಿಸಿದ್ದಾರೆ. ಆಮಂತ್ರಿಸಿದ ಮೇಲೆ ಸೌಜನ್ಯ ತೋರಿಸಬೇಕು. ನಾನು ವೈಕುಂಠರಾಜು ಆಗಿ ಬಂದಿಲ್ಲ. ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷನಾಗಿ ಬಂದಿದ್ದೇನೆ. ಆ ಸ್ಥಾನದ ಗೌರವ ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಸಮಾರೋಪ ಭಾಷಣ ಮಾಡಲು ನಾನು ಇಲ್ಲಿ ಬಂದಿದ್ದೇನೆಯೇ ಹೊರತು ಮಂಗಳಾರತಿ ಮಾಡಿಸಿಕೊಳ್ಳಲು ಅಲ್ಲ. ನಾನು ಹೆಚ್ಚು ಬುದ್ಧಿವಂತನಲ್ಲ. ಇಷ್ಟು ಹೇಳಿ ನನ್ನ ಸಮಾರೋಪ ಭಾಷಣ ಮುಗಿಸುತ್ತೇನೆ. ಕ್ಷಮಿಸಿ’ ಅಂದವರೇ ವೇದಿಕೆಯಿಂದ ಇಳಿದೇ ಬಿಟ್ಟರು. ಅವರು ತಂದಿಟ್ಟ ಖುರ್ಚಿಯ ಮೇಲೆ ತಪ್ಪಿಯೂ ಕೂಡಲಿಲ್ಲ. ಸಭಿಕರು ಅಚ್ಚರಿಗೊಂಡರು. ಯಾರ್ಯಾರಿಗೆ ಏನು ಅನಿಸಿತೋ. ಇಡೀ ಸಭೆ ಮೌನವಾಗಿತ್ತು. ಇವರನ್ನು ಕಾರ್ಯಕ್ರಮಕ್ಕೆ ಕರೆದವರು ಇಂಗು ತಿಂದವರಂತೆ ಕೂತಿದ್ದರು. ವೇದಿಕೆ ಮೇಲೆ ಕುಳಿತ ಸ್ಥಳೀಯ ಗಣ್ಯರು ಒಂದೂ ಅರ್ಥ ಆಗದವರ ಥರ ಪರಸ್ಪರ ಮುಖ ನೋಡಿದರು. ಏನಾಯಿತು ಅನ್ನುವುದರೊಳಗೆ ವೈಕುಂಠ ರಾಜು ಅವರು ನನ್ನ ಕೈ ಹಿಡಿದು ”ಬನ್ನಿ ಶೇಖರ್‌” ಎಂದು ಹೊರಗೆಳೆದುಕೊಂಡು ನಡದೇಬಿಟ್ಟರು. ಎಲ್ಲವೂ ಅನಿರೀಕ್ಷಿತ ಎಂಬಂತೆ ನಡೆದುಹೋಯಿತು. ಆದರೆ ಇವರಿಗೆ ಆಮಂತ್ರಣ ಕೊಟ್ಟವರು ಮಾತ್ರ ಕೈಕಟ್ಟಿ ಕೂತದ್ದು ನನಗೆ ಕಂಡಿತು. ಡ್ರೈವರ್‌ ಕಾರು ತಂದ. ಇಬ್ಬರೂ ಹತ್ತಿದೆವು. ಅಷ್ಟೇ. ”ಇದು ಸ್ವಾಭಿಮಾನದ ಪ್ರಶ್ನೆ. ನಾವಿರುವ ಸ್ಥಾನಕ್ಕಾಗಲೀ ನಮಗಾಗಲೀ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಯಾಕೆ ಸುಮ್ಮನಿರಬೇಕು”. ಅಂದರು. ಕಾರು ಹುಬ್ಬಳ್ಳಿಯ ಕಡೆಗೆ ಓಡಿತು.

ಲೇಖನ : ಹೂಲಿಶೇಖರ (ಖ್ಯಾತ ನಾಟಕಕಾರ, ಚಿತ್ರಸಂಭಾಷಣಾಕಾರ)

aakritkannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW