ಮನೆಯ ಒಂದು ಕೆಲಸಕ್ಕೂ ನಂದೀಶ್ ಕೈ ಜೋಡಿಸುತ್ತಿರಲಿಲ್ಲ. ಅದಿತಿ ಮನೆಯೆಲ್ಲ ಜವಾಬ್ದಾರಿಯ ಜೊತೆಗೆ ನಂದೀಶ್ ನ ಇಷ್ಟಕಷ್ಟಗಳನ್ನು ಮೊದಲೇ ತಿಳಿದು ವ್ಯವಸ್ಥಿತವಾಗಿ ಜೀವನ ನಡೆಸುತ್ತಿದ್ದಳು. ಆದರೆ ನಂದೀಶ್ ಮಾತ್ರ ಹೆಂಡತಿ ಮೇಲೆ ಆಗಾಗ ಕೆಂಡ ಕಾರುತ್ತಿದ್ದ, ಮುಂದೇನಾಯಿತು ಶೋಭಾ ನಾರಾಯಣ ಹೆಗಡೆ ಅವರ ರಚನೆಯ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
‘ಅದಿತಿ, ನಿನಗೆ ಅದೆಷ್ಟು ಸಲ ಹೇಳಬೇಕು? ನನ್ನ ವಸ್ತುಗಳನ್ನು ಸರಿಯಾಗಿ, ಸರಿಯಾದ ಜಾಗದಲ್ಲಿ ಇಡು ಅಂತ. ಎಷ್ಟು ಸಲ ಹೇಳಿದರೂ ಅಷ್ಟೇ ನಿನಗೆ. ನನಗೆ ಬೇಕು ಅಂದಾಗ ತಡಕಾಡಬೇಕು’ ಸಿಟ್ಟಿನಿಂದ ನುಡಿದ ಗಂಡನನ್ನು ನೋಡಿ, ಈ ವ್ಯಕ್ತಿಯನ್ನು ಚೇಂಜ್ ಮಾಡಲು, ತಿದ್ದಲು ಖಂಡಿತ ನನ್ನಿಂದ ಸಾಧ್ಯವಿಲ್ಲ ಎನ್ನುವ ನೋವು ಅದಿತಿಯನ್ನು ಒಮ್ಮೆ ಕಾಡಿ, ಕಣ್ಣೀರಿನ ಹರಿವಿನ ರೂಪದಲ್ಲಿ ಆ ನೋವು ಕರಗಿ ಹೊರ ಬರಹತ್ತಿತು.
“ಅಲ್ಲಾರೀ, ಯಾವಾಗಲೂ ಹೀಗೆ ಅಸಡ್ಡೆ ಮಾಡ್ತೀನಾ ನಾನು? ಎಲ್ಲಾ ಸಲವೂ ನಿಮ್ಮ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿರ್ತೀನಿ. ಇವತ್ತು ನನಗೆ ಆಗಲಿಲ್ಲ. ಅದಕ್ಕೂ ಕಾರಣ ಇದೆ ತಾನೆ? ಡೇಟ್ ಆಗಿದೆ, ತುಂಬಾ ಹೊಟ್ಟೆ ನೋವಿದೆ, ತಡೆಯಲು ಅಸಾಧ್ಯ. ಇಂತಹ ಸಮಯದಲ್ಲೂ ಕೂಡ ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಲು ಆಗೋದಿಲ್ವಾ?” ರೋಷದಿಂದ ಮೊಟ್ಟ ಮೊದಲ ಬಾರಿಗೆ ಗಂಡನ ಎದುರಾಗಿ ಒದರಿದಳು.
“ಅಷ್ಟೆ ಸಾಕು, ಸಾಕಾಯಿತು ನಿನಗೆ. ಆದರೆ ಮಾಡು, ಇಲ್ಲ ಅಂದ್ರೆ ಸುಮ್ಮನೆ ಇದ್ದು ಬಿಡು. ತಿರುಗಿ ಮಾತಾಡೋದು ನನಗೆ ಇಷ್ಟ ಆಗಲ್ಲ ಎನ್ನುವುದು ನಿನಗೂ ಗೊತ್ತು.” ಎಂದು ಮುಖ ದುಮ್ಮಿಸುತ್ತಾ ಹೊರಟೇ ಹೋದ ನಂದೀಶ್.
ಒತ್ತರಿಸಿ ಬಂದ ದುಃಖ ಗಂಟಲಲ್ಲೇ ಬಿಕ್ಕಿ, ತಲೆ ಭಾರ ಎನಿಸಿತು ಅದಿತಿಗೆ. ಗಂಡನ ಬೇಕು-ಬೇಡಗಳನ್ನು ಅದೆಷ್ಟೇ ಚೆನ್ನಾಗಿ ಗಮನಿಸಿ, ಅವನು ಬೇಕು ಹೇಳುವ ಮುನ್ನವೇ ತಾನು ಅಚ್ಚುಕಟ್ಟಾಗಿ ಮಾಡಿಡುತ್ತಾ ಬಂದಿರುವುದು ಮೊದಲಿನಿಂದಲೂ ಬಂದ ರೂಢಿ.
ಆಗೇನೋ ದೈಹಿಕವಾಗಿ ಶಕ್ತಿ ಹೊಂದಿದ್ದೆ. ಆದರೆ ಈಗ ನನಗೂ ವಯಸ್ಸು ಆಯಿತು. ನಲವತ್ತೈದು ಈಗ. ಅದರಲ್ಲೂ ಇತ್ತೀಚೆಗೆ ಮೆನೋಪಾಸ್ ಕಿರಿಕಿರಿ ಬಹಳೇ ಆಗಿದೆ. ಸುಸ್ತು, ಸಂಕಟ, ಮೂಡ್ ಕಿರಿಕಿರಿ ಅಂತ ಮಾನಸಿಕ, ದೈಹಿಕವಾಗಿ ತುಂಬಾ ಜರ್ಜರಿತವಾಗಿ ಹೋಗಿದ್ದೇನೆ. ಆದರೆ ಇದು ನನ್ನ ಗಂಡನಿಗೆ ಚೂರೂ ಅರ್ಥ ಆಗ್ತಿಲ್ಲ. ನನ್ನ ಅಮ್ಮ, ಅಜ್ಜಿಯರಿಗೆ ಇಲ್ಲದ ನೋವು ನಿನಗೆ ಬಂದಿದ್ದಾ ಕೇಳ್ತಾರೆ. ಏನು ಹೇಳಲಿ ಇದಕ್ಕೆ?
ಆವಾಗ ತುಂಬು ಕುಟುಂಬ. ಮನೆಯಲ್ಲಿ ಸಿಕ್ಕಾಪಟ್ಟೆ ಜನ. ನೆಂಟರು, ಇಷ್ಟರು, ಆಳು, ದನ, ಕರು… ಹೀಗೆ ಬೆಳಿಗ್ಗೆಯಿಂದ ರಾತ್ರಿ ತನಕ ದುಡಿಯೋದೇ ಹೆಂಗಸರ ದಿನಚರಿ. ವರ್ಷಕ್ಕೊಮ್ಮೆ ಮಕ್ಕಳ ಹೆರಿಗೆ. ಸಾಲು ಸಾಲಾಗಿ ಹುಟ್ಟುವ ಮಕ್ಕಳ ಪೋಷಣೆ ಹೆಗಲ ಮೇಲೆ.
ಇದಕ್ಕೂ ಮೀರಿ ಏನಾದರೂ ಆದರೆ ಒಬ್ಬರಿಗೊಬ್ಬರು ಉಪಚರಿಸಿ, ಮನೆಮದ್ದು ಮಾಡಿ, ಅದರಲ್ಲೇ ಖಾಯಿಲೆ ಗುಣಪಡಿಸುವ ಖಾತರಿ. ಇನ್ನೂ ಉಲ್ಬಣ ಹೊಂದಿದರೆ ಮಾತ್ರ ಆಸ್ಪತ್ರೆಗೆ ದಾಖಲು. ಆಯಸ್ಸು ಗಟ್ಟಿಯಾಗಿ ಇದ್ದರೆ ಬದುಕು. ಇಲ್ಲ ಎಂದರೆ ಚಿತೆಯ ಹಾಸಿಗೆ. ಈಗ ಕಾಲ ಬದಲಾದಂತೆ ಕೌಟುಂಬಿಕ ವಾತಾವರಣ ಕೂಡ ಬದಲಾಗಿದೆ. ಆಹಾರ ಪದ್ಧತಿ ಕೂಡ ಬದಲಾವಣೆ ಹೊಂದಿದೆ.
ತಿಂಗಳು ತಿಂಗಳು ಮೂರು ದಿನ ಕೂಡ ರೆಸ್ಟ್ ಸಿಗದಂತಹ ಧಾವಂತ ಬದುಕು. ಎಲ್ಲಿಗೂ ಹೋಗಲಾಗದೇ ಸದಾ ಮನೆ, ಮನೆ ಎಂದು ಇರುವ ಒಂದೆರಡು ಮಕ್ಕಳ ಲಾಲನೆ, ಪಾಲನೆ, ಶಾಲೆ, ಕಾಲೇಜು ಅಂತ ಅವರನ್ನು ಒಂದು ಹಂತಕ್ಕೆ ತಂದು ನಿಲ್ಲಿಸುವುದು ಕೂಡ ಬದುಕಿನ ಒಂದು ಚಾಲೆಂಜಿಂಗ್ ಆಗಿದೆ. ಗಂಡನ ಬೇಕು-ಬೇಡಗಳನ್ನು ಗಮನಿಸುವುದರ ಜೊತೆಗೆ ಕೆಲಸದ ಒತ್ತಡ, ದೈಹಿಕ ಸುಸ್ತು, ಸರಿಯಾದ ಆರೈಕೆ ಇಲ್ಲದೇ ಧಾವಂತದ ಬದುಕಿನಲ್ಲಿ ಓಡುವ ಓಟ… ಇವೆಲ್ಲವುಗಳಿಂದ ಮಾನಸಿಕವಾಗಿ ಕೂಡ ಕುಗ್ಗುವ ಹಾಗೆ ಆಗುತ್ತದೆ.
ಇವೆಲ್ಲ ಗಂಡಸಿಗೆ ಹೇಗೆ ಅರ್ಥ ಆಗಬೇಕು? ಅದರಲ್ಲೂ ಮನೆಯ ಪ್ರತೀ ಆಗು ಹೋಗುಗಳನ್ನು ನಾನೇ ನೋಡಿಕೊಂಡು, ಮನೆಯ ಒಂದು ಕೆಲಸಕ್ಕೂ ಗಂಡನ ಸಹಾಯ ಪಡೆಯದ ನನ್ನಂತಹ ಹೆಂಗಳೆಯರ ಪರಿಸ್ಥಿತಿ ಸಾಮಾನ್ಯ ಹೀಗೆಯೇ.
ಪಾಪ, ಹೊರಗೆ ದುಡೀತಾರೆ. ಮನೆಯ ಟೆನ್ಷನ್ ಯಾಕೆ ಅವರಿಗೆ? ಎನ್ನುವುದು ಉತ್ತಮ ಆಲೋಚನೆ ಎನಿಸಿದರೂ ಕೂಡ ಮನೆಯನ್ನು, ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭದಲ್ಲಿ ಇಲ್ಲ ಎನ್ನುವುದು ಗಂಡಸರಿಗೆ ಹೇಗೆ ಅರ್ಥ ಆಗಬೇಕು?
ನನ್ನ ಹಣೆಬರಹ. ಅನುಭವಿಸಬೇಕು. ಎಂದು ಅದಿತಿ ಅಡುಗೆಮನೆ ಕಡೆಗೆ ನಡೆದಳು. ಮುಸುರೆ ಪಾತ್ರೆ, ಗಲೀಜು ಆದ ಅಡುಗೆಮನೆ ನೋಡಿ ಒಮ್ಮೆ ತಲೆ ಗಿರ್ ಎಂದಿತು. ಎಲ್ಲವನ್ನೂ ಅದೇ ನೋವಿನಲ್ಲೇ ಕಣ್ಣೀರು ಹಾಕುತ್ತಲೇ ಸ್ವಚ್ಛಗೊಳಿಸಿದಳು. ಇದ್ದದ್ದು ಏನೋ ತಿಂದು ಹಾಗೇ ಬಂದು ಮಲಗಿಬಿಟ್ಟಳು.
ಹಾಗೂ ಹೀಗೂ ಒಂದು ದಿನ ಕಳೆದು ಹೋಯಿತು. ಮನೆಯಲ್ಲಿ ನೀರವ ಮೌನ. ಇವಳೇನೋ ಯಾಂತ್ರಿಕವಾಗಿ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಳು. ಯಾವಾಗಲೂ ಜಗಳ, ಮುನಿಸು ಆದಾಗ ಅದಿತಿಯೇ ಮೌನ ಮುರಿದು ಸೋಲೊಪ್ಪಿ ನಡೆಯುವುದು ರೂಢಿಯಾಗಿ ಹೋಗಿತ್ತು. ಅದಿತಿಗೆ ಸಂಸಾರ ಒಡೆಯುವಿಕೆ ಬೇಕಿರಲಿಲ್ಲ. ತನ್ನ ಗಂಡನ ಸ್ವಭಾವ ಅರಿತ ಅವಳು, ಅವನನ್ನು ತಿದ್ದುವಲ್ಲಿ ತುಂಬಾ ಸೋತು ಸುಣ್ಣ ಆಗಿ ಹೋಗಿದ್ದ ಕಾರಣ ಸಹಜವಾಗಿ ಅವನ ಗುಣವನ್ನು ಒಪ್ಪಿಕೊಂಡು ನಡೆಯುವ ಅಭ್ಯಾಸ ಬೆಳೆಸಿಕೊಂಡಿದ್ದಳು.
ಆದರೆ ಈಗಿನ ಕ್ಷಣ ಸಹಜವಾಗಿ ಒಪ್ಪಿ ನಡೆಯಲು ಅವಳಿಗೆ ಸಾಧ್ಯವಾಗಲಿಲ್ಲ. ಮೌನವನ್ನು ಅಪ್ಪಿಕೊಂಡು ಬಿಟ್ಟಳು. ಮಾತಿಲ್ಲ, ಕತೆಯಿಲ್ಲ. ಆದರೆ ತನ್ನ ಕರ್ತವ್ಯಕ್ಕೆ ಚ್ಯುತಿ ಆಗದಂತೆ ನಡೆದುಕೊಂಡಳು. ನಂದೀಶ್ ಕೂಡ ರಾಜಿಯಾಗಲಿಲ್ಲ ಹೆಂಡತಿ ಬಳಿಯಲ್ಲಿ. ಮುಖ ದಪ್ಪಗೆ ಮಾಡಿಕೊಂಡೇ ಓಡಾಡುತ್ತಿದ್ದ. ಮಕ್ಕಳು ದೊಡ್ಡವರಾಗಿದ್ದ ಕಾರಣ ಓದಲು ಬೇರೆ ಊರಿನಲ್ಲಿ ಇದ್ದರು. ಹಾಗಾಗಿ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ.
ಅವಳೇ ಸೋಲಲಿ ಎನ್ನುವ ಅಹಂಕಾರ ಅವನಿಗೆ. ಆದರೆ ಇವಳ ತಿಂಗಳ ನೋವು ಬದುಕೇ ಅಸಹನೀಯ ಎನ್ನುವ ಹಂತಕ್ಕೆ ಅವಳನ್ನು ನಿಲ್ಲಿಸಿ ಬಿಟ್ಟಿತ್ತು. ದೈಹಿಕ, ಮಾನಸಿಕವಾಗಿ ಕುಗ್ಗಿ ಹೋಗಿದ್ದಳು ಅದಿತಿ. ತಿಳುವಳಿಕೆ ಹೇಗೆ ಬೇಕಾದರೂ ಮೂಡಬಹುದು, ಅರಿಯುವ ಶಕ್ತಿ ಇರುವವರಿಗೆ. ಆವತ್ತು ಆಗಿದ್ದೂ ಹಾಗೇ.
ಆಫೀಸ್‌ನಲ್ಲಿ ಆ ಒಂದು ಘಟನೆ ನಂದೀಶ್‌ನ ಅಹಂಕಾರದ ಮೊಟ್ಟೆಯನ್ನು ಒಡೆಯುವ ಹಾಗೆ ಮಾಡಿತ್ತು. ಅವನ ಸಹದ್ಯೋಗಿ ಮಹಂತೇಶ್ ಮ್ಯಾನೇಜರ್ ಬಳಿಯಲ್ಲಿ ಮೂರು ದಿನ ರಜಾ ಕೇಳಿದ್ದ. ಆದರೆ ಒಟ್ಟಿಗೆ ಮೂರು ದಿನ ರಜಾ ಕೊಡಲಾಗುವುದಿಲ್ಲ ಎಂದು ಮ್ಯಾನೇಜರ್ ಖಡಾಖಂಡಿತವಾಗಿ ಹೇಳಿದಾಗ, ಅವ ನುಡಿದ ಮಾತು ನಂದೀಶ್‌ನ ಕಿವಿಗೆ ಕಾದ ಎಣ್ಣೆ ಹೊಯ್ದಂತೆ ಆಗಿತ್ತು.
“ಸರ್, ನನಗೆ ಮೂರು ದಿನ ರಜಾ ಬೇಕೇ ಬೇಕು.” ಎಂದು ಖಾರವಾಗಿ ಮಹಂತೇಶ್ ನುಡಿದಾಗ,
“ಅಲ್ಲಾರೀ, ಮಹಂತೇಶ್! ಪ್ರತೀ ತಿಂಗಳು ಮೂರು ದಿನ ರಜಾ ಕೇಳ್ತಾ ಇದೀರಾ? ಹೇಗೆ ಕೊಡೋಕೆ ಸಾಧ್ಯ, ಹೇಳಿ?” ಎಂದು ಕೇಳಿದರು ಮ್ಯಾನೇಜರ್ ಸ್ವಲ್ಪ ಬೇಸರದಿಂದ.
“ನೋಡಿ ಸರ್, ನನ್ನ ಕೆಲಸ ಯಾವುದೂ ಪೆಂಡಿಂಗ್ ಇಲ್ಲ. ಎಲ್ಲಾ ಅಚ್ಚುಕಟ್ಟಾಗಿ ಮಾಡಿದ್ದೀನಿ. ನನ್ನ ವೈಫ್ ಈಗ ಮೆನೋಪಾಸ್ ಹಂತದಲ್ಲಿ ಇದ್ದಾರೆ. ಪ್ರತೀ ತಿಂಗಳು ಮೂರು ದಿನದ ಮಟ್ಟಿಗೆ ಅವರಿಗೆ ಚೆನ್ನಾಗಿ ಆರೈಕೆ ಮಾಡಲು ವೈದ್ಯರು ತಿಳಿಸಿದ್ದಾರೆ. ಮನೆಯಲ್ಲಿ ಬೇರೆ ಯಾರೂ ಇಲ್ಲ, ಅವರನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಹಾಗಾಗಿ ರಜಾ ಬೇಕು ಸರ್. ರಜಾ ಕೊಡಲ್ಲ ಅಂದರೆ ಕೆಲಸ ಬೇಕಾದರೂ ಬಿಡ್ತೀನಿ.” ಅಂದಾಗ ಮ್ಯಾನೇಜರ್ ಕೂಡ ಅವಕ್ಕಾಗಿ ಒಮ್ಮೆ ಮಹಂತೇಶ್‌ನನ್ನು ನೋಡಿ, “ಅಷ್ಟು ಬೇಸರ ಪಡಬೇಡಿ. ಕರ್ತವ್ಯನಿಷ್ಠೆ ಉಳ್ಳ ನಿಮ್ಮನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ. ಖಂಡಿತ ರಜಾ ಕೊಡುವೆ. ನಿಮ್ಮ ವೈಫ್‌ನನ್ನು ಚೆನ್ನಾಗಿ ನೋಡಿಕೊಳ್ಳಿ.” ಎಂದು ಮ್ಯಾನೇಜರ್ ರಜಾ ಸ್ಯಾಂಕ್ಷನ್ ಮಾಡಿದರು.
ಇದನ್ನೆಲ್ಲಾ ನೋಡಿದ ನಂದೀಶ್‌ಗೆ ತನ್ನ ತಪ್ಪಿನ ಅರಿವಾಗಿತ್ತು. ತೇವವಾದ ಕಣ್ಣನ್ನು ಒರೆಸಿಕೊಂಡು ಮನದಲ್ಲಿ ಗಟ್ಟಿಯಾದ ನಿರ್ಧಾರ ಮಾಡಿಕೊಂಡ. ಸಂಜೆ ಆಫೀಸ್‌ನಿಂದ ಮರಳಿ ಮನೆಗೆ ಬರುವಾಗ ಅದಿತಿಗೆ ಇಷ್ಟವಾದ ಸ್ವೀಟ್ ತಂದಿದ್ದ. ಕಾಲಿಂಗ್ ಬೆಲ್ ಒತ್ತಿದ. ಅದಿತಿ ಎಂದಿನಂತೆ ಬಾಗಿಲು ತೆರೆಯಲಿಲ್ಲ. ಬದಲಿಗೆ ಬಾಗಿಲು ತಾನಾಗೇ ತೆರೆದುಕೊಂಡಿತು.
ಇದರಿಂದ ನಂದೀಶ್‌ಗೆ ಗಾಬರಿಯಾಗಿ ಸೀದಾ ರೂಮ್‌ಗೆ ಓಡಿದ. ಅಲ್ಲಿ ಅದಿತಿ ಆಯಾಸದಿಂದ ನಿದ್ದೆ ಹೋಗಿದ್ದಳು. ಸ್ವಲ್ಪ ಸಮಾಧಾನ ಎನಿಸಿತು. ನಿದ್ದೆ ಮಾಡಲಿ ಎಂದು ಸುಮ್ಮನೆ ಹೊರಗೆ ಬಂದವನಿಗೆ ಅಡುಗೆಮನೆಯ ಅವ್ಯವಸ್ಥೆ ಕಣ್ಣಿಗೆ ರಾಚಿತು.
ಬಟ್ಟೆ ಬದಲಾಯಿಸಿ ಸೀದಾ ಅಡುಗೆಮನೆ ಹೊಕ್ಕಿದವನೇ ಶುಚಿ ಕಾರ್ಯವನ್ನು ಕೈಗೆತ್ತಿಕೊಂಡ. ಹಾಗೇ ಯೂಟ್ಯೂಬ್ ನೋಡುತ್ತಾ ತಿಳಿದಂತೆ ಅಡುಗೆ ಕೂಡ ಮಾಡಿಟ್ಟ. ಅಡುಗೆಮನೆಯಲ್ಲಿ ಏನೋ ಬಿದ್ದ ಶಬ್ದಕ್ಕೆ ಅದಿತಿಗೆ ತಟ್ಟನೆ ಎಚ್ಚರ ಆಯಿತು. ಅಯ್ಯೋ ಶಿವ! ಅದೆಷ್ಟು ಹೊತ್ತು ಮಲಗಿ ಬಿಟ್ಟೆ. ಇವರು ಮನೆಗೆ ಬರುವ ವೇಳೆ ಆಯಿತು. ಇನ್ನೂ ಏನೂ ಮಾಡಿಲ್ಲ. ಅಡುಗೆಮನೆಗೆ ಬಾಗಿಲು ಹಾಕಿದ್ದೆನೋ ಇಲ್ಲವೋ, ಬೆಕ್ಕು ಬಂದಿದೆಯೋ ಏನೋ… ಎಂದು ಚಿಂತಿಸುತ್ತಾ ಅವಸರವಸರದಲ್ಲಿ ಎದ್ದು ಬಂದ ಅದಿತಿಗೆ, ನಂದೀಶ್ ಅಡುಗೆಮನೆಯಲ್ಲಿ ಇರುವುದು ನೋಡಿ ಒಮ್ಮೆ ಬೆಚ್ಚಿದಳು. ಇವತ್ತು ನನ್ನ ಕಥೆ ಮುಗೀತು ಎಂದು ಪೆಚ್ಚು ಮೋರೆ ಮಾಡಿ ಹಣೆ ಚಚ್ಚಿಕೊಂಡಳು.
ಅಡುಗೆ ಮನೆಗೆ ಬಂದ ಅದಿತಿಯನ್ನು ನೋಡಿ ನಂದೀಶ್ ಬಿಸಿ ಬಿಸಿ ಕಾಫಿ ಕೊಟ್ಟು,
“ಈಗ ಹೇಗಿದೆ ನೋವು?” ಎಂದು ಕಕ್ಕುಲತೆಯಿಂದ ವಿಚಾರಿಸಿದ. ಹಣೆ ಮುಟ್ಟಿ ನೋಡಿದ. ಗಂಡನ ಮಮತೆ ನೋಡಿ ಅದಿತಿಗೆ ಅಚ್ಚರಿಯ ಜೊತೆಗೆ ದುಃಖ ಒತ್ತರಿಸಿ ಬಂತು. ಬಿಕ್ಕ ತೊಡಗಿದಳು.
“ಯಾಕೆ ಅಳೋದು ಅದಿತಿ? ಮೊದಲಿನಂತಿಲ್ಲ ನಿನ್ನ ಗಂಡ.” ಎಂದು ನಕ್ಕ.
“ನಿನ್ನ ಮೌನ ನೀಡುವ ನೋವನ್ನು ನನಗೆ ಸಹಿಸಲು ಅಸಾಧ್ಯ. ಮಧ್ಯವಯಸ್ಸಿನ ಹೆಂಗಳೆಯರ ಕಷ್ಟದ ಅರಿವನ್ನು ನನ್ನ ಸಹದ್ಯೋಗಿ ಮಹಂತೇಶ್ ಪರಿಚಯಿಸಿದ. ನನಗೆ ನಿನ್ನ ಕಷ್ಟದ ಅರಿವು ಆಗಿದೆ. ಕುಗ್ಗಬೇಡ ಅದಿತಿ. ನಿನ್ನ ಜೊತೆಗೆ ನಾನಿದ್ದೀನಿ.” ಎಂದು ತನ್ನ ಎದೆಗಾನಿಸಿಕೊಂಡು ಪತ್ನಿಯನ್ನು ಸಂತೈಸಿದ.
ಗಂಡನ ಈ ಹೊಸ ಅವತಾರಕ್ಕೆ ಕಾರಣನಾದ ಆ ಸಹದ್ಯೋಗಿ ಮಹಂತೇಶ್‌ನನ್ನು ನೆನೆದು, “ಚೆನ್ನಾಗಿ ಇರಿ ಸಹೋದರ. ನನ್ನ ಗಂಡನ ಕಣ್ಣು ತೆರೆಸಿದ ದೇವರು’ ಎಂದು ಸಂತಸದಿಂದ ಒಳಿತನ್ನು ಹರಸುತ್ತಾ ನೆಮ್ಮದಿಯಿಂದ ಗಂಡನೆದೆಗೆ ಒರಗಿದಳು ಅದಿತಿ.
- ಶೋಭಾ ನಾರಾಯಣ ಹೆಗಡೆ – ಉದ್ಯಮಿ, ಕತೆಗಾರ್ತಿ, ಬೆಂಗಳೂರು.
