ಧರ್ಮದೀಕ್ಷೆಯೆಂದರೆ ಮನುಷ್ಯ ತನ್ನ ಜೀವನದಲ್ಲಿ ಆಧ್ಯಾತ್ಮಿಕವಾಗಿ ಪರಿವರ್ತನೆಗೊಳ್ಳಲು ಯಾವುದೇ ಜ್ಞಾನಿ ಸಾಧುಸಂತರು ಅಥವಾ ಹಿರಿಯರಿಂದ ತೆಗೆದುಕೊಂಡ ಪ್ರತಿಜ್ಞೆ ಅಂದರ್ಥ. ಇಲ್ಲಿ ಆತ ಜೀವನದಲ್ಲಿ ಸಕಾರಾತ್ಮಕವಾದ ಬದಲಾವಣೆ, ಸತ್ಯದ ಮಾರ್ಗದಲ್ಲಿ ನಡೆದು ಹಳೆಯ ದುರ್ಗುಣಗಳನ್ನು ತ್ಯಜಿಸಿ ನ್ಯಾಯ – ನೈತಿಕ ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಣೆ ಪಡೆಯುತ್ತಾನೆ.
- ಇಲ್ಲಿ ಧರ್ಮದೀಕ್ಷಕರು ಅಂದರೆ ಸಾಧುಗಳು ಸಂತರು, ಸ್ವಾಮಿಗಳು, ಸನ್ಯಾಸಿಗಳೇ ಆಗಬೇಕಂತೇನಿಲ್ಲ.
- ನಮ್ಮ ಜೀವನದ ಪಥವನ್ನೇ ಬದಲಿಸಿದವರು ಯಾರೇ ಆಗಿದ್ರೂ ಅವರನ್ನು ಧರ್ಮಧೀಕ್ಷಕರು ಅನ್ನಬಹುದು.
ಹುಟ್ಟಿದ ಕೂಸಲ್ಲಿ ಸಂಸ್ಕಾರ, ಶಿಸ್ತು, ಸಂಯಮ,ಅಚ್ಚುಕಟ್ಟುತನ, ಜವಾಬ್ದಾರಿ ಹಾಗೂ ಒಳ್ಳೆಯ ನಡತೆಯನ್ನು ತುಂಬಿ ಆದರ್ಶ ಮಕ್ಕಳು / ನಾಗರೀಕನನ್ನಾಗಿ ಮಾಡಲು ಸಹಕರಿಸಿದ ತಂದೆ ತಾಯಿ ಕೂಡ ಧರ್ಮದೀಕ್ಷರೇ.
- ಮಗುವಿಗೆ ವಿದ್ಯಾದಾನ ಮಾಡುವ ಗುರುಗಳು ತನ್ನಲ್ಲಿನ ಉತ್ತಮದಲ್ಲಿ ಅತ್ಯುತ್ತಮವಾದುದನ್ನು ತನ್ನ ಶಿಷ್ಯನಲ್ಲಿ ಧಾರೆಯೆರೆದು ತನ್ಮೂಲಕ ಸಾಕಾರಪಡೆದುಕೊಳ್ಳುವ ಗುರುವೂ ಕೂಡ ಧರ್ಮದೀಕ್ಷಕರೇ.
ಮಗು ಬೆಳೆಯುತ್ತಾ ತನ್ನ ಸುತ್ತಲಿನ ಪರಿಸರದಿಂದ ಅನೇಕ ಧನಾತ್ಮಕ ಹಾಗೂ ಸಕಾರಾತ್ಮಕ ನೀತಿಯನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಂಡಾಗ ಪರಿಸರವೂ ಆಗ ಧರ್ಮದೀಕ್ಷಕನಂತೆ ಕಾರ್ಯನಿರ್ವಹಿಸಿದಂತೆ.
- ಜೊತೆಗಿನ ಮಿತ್ರವೃಂದ ಕಾರ್ಯನಿರ್ಹಹಿಸುವಲ್ಲಿನ ಸಹಪಾಠಿಗಳು ಹೀಗೆ ಹತ್ತು ಹಲವರಿಂದ ಜೀವನಕ್ಕೆ ಬೇಕಾದ ಪಾಠಕಲಿತಾಗ, ನಾವು ನೇರವಾಗಿ ಅಥವಾ ಅವರಿಂದ ಪ್ರಭಾವಿತಗೊಂಡು ಏನನ್ನು ಕಲಿಯುತ್ತೆವೆಯೋ ಅವೆಲ್ಲ ದೀಕ್ಷೆ (ಪ್ರತಿಜ್ಞೆ) ತೆಗೆದುಕೊಂಡ ಹಾಗೆಯೇ.
- ನನ್ನ ಬದುಕಲ್ಲಿ ನಾನು ನನ್ನಮ್ಮನಿಂದ ಕಲಿತ ಪಾಠವೇ ಇಂದು ಈಸ್ಥಿತಿಯಲ್ಲಿರಲು ಕಾರಣ.
- ಚಿಕ್ಕವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡ ನಮಗೆ ಅಪ್ಪನಾಗಿ ಮನೆಯ ಯಜಮಾನಿಯಾಗಿ ನಮ್ಮೆಲ್ಲರನ್ನು ಸಾಕಿ ಸಲಹುವ ಜೊತೆಗೆ ಶಿಸ್ತು ಸಂಸ್ಕಾರವನ್ನು ನೀಡಿದ ದೇವತೆ ನನ್ನಮ್ಮ. ನಮಗೆ ಆ ಭಗವಂತನ ಕೃಪೆಯಿಂದ ಯಾವತ್ತೂ ಹಣಕಾಸಿನ ಅಭಾವ ಉಂಟಾದಿದ್ದಿಲ್ಲ. ಆದರೆ ಚಿಕ್ಕವಯಸ್ಸು ಇನ್ನೂ ಪ್ರಾಯ ಇರುವ ಅಮ್ಮನನ್ನು ನೆನೆಸಿಕೊಂಡಾಗಲೆಲ್ಲಾ ಕರುಳು ಚುರುಕ್ ಅನ್ನೋದು. ಅವಳೋ ಆಗಲೇ ವೈರಾಗಿಯ ಜೀವನ ಪ್ರಾರಂಭಿಸಿದ್ದಳು. ಮೊದಲೇ ದೇವರಲ್ಲಿ ಭಯಭಕ್ತಿ ಹೊಂದಿದಾಕೆ ಮನೆಯ ಕೆಲಸ ನಮ್ಮನ್ನು ನೋಡಿಕೊಂಡು ಯಾರ ಉಸಾಬರಿಗೂ ಹೋಗದೇ ತಾನಾಯ್ತು ತನ್ನ ಕೆಲಸ ಉಳಿದ ಸಮಯದಲ್ಲಿ ಅವಳ ಹವ್ಯಾಸವಾದ ಹೊಲಿಗೆ, ಪೇಂಟಿಂಗ್, ಹಾಗೂ ಬಗೆಬಗೆಯ ತಿಂಡಿಗಳನ್ನು ಮಾಡಿ ನಮಗೆ ತಿನ್ನಿಸೋದು.
- ಮನೆಲ್ಲಿ ಗಂಡಸಿಲ್ಲದಿರುವಿಕೆಯನ್ನು ಅದೆಷ್ಟು ನಾಜೂಕಾಗಿ, ಮನಸ್ಸಲ್ಲಿ ಬೆಟ್ಟದಷ್ಟು ನೋವಿದ್ದರೂ ನಗುನಗುತ್ತ, ನಮ್ಮನ್ನು ಹುರಿದುಂಬಿಸುತ್ತಾ, ನಾವು ಅದೇನೇ ಸರಿಯಾದ್ದನ್ನ ಕೇಳಿದರೂ ಶಕ್ತಿಮೀರಿ ಕೊಡಲು ಪ್ರಯತ್ನಿಸುತ್ತಿದ್ದ ಹೃದಯವೈಶಾಲ್ಯತೆ ಮರೆದವಳು ನಮ್ಮಮ್ಮ.
- ನಮ್ಮ ಪಪ್ಪ ಹೋದ ಮೇಲೆ ನಮಗೆ ಮೊದಲು ಆಕೆ ಕಲಿಸಿದ ಪಾಠ ಅಂದ್ರೆ ‘ ಅದೆಷ್ಟೇ ಹಣ ನಮ್ಮಲ್ಲಿದ್ರೂ ಅದರ ಒಂದೊಂದು ಪೈಸೆಗೂ ಬೆಲೆಯಿದೆ. ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ಖಂಡಿತವಾಗಿ ಧಾರಾಳ ಖರ್ಚು ಮಾಡಿ. ಆದರೆ ಅದರ ಲೆಕ್ಕ ಬರೆದಿಡಿ. ಅನ್ನುವ ಅವಳ ಮಾತುಗಳು ಇಂದಿಗೂ ಕಿವಿಯಲ್ಲಿ ಗುಯ್… ಗುಡುತ್ತವೆ. ನಾನಾಗಲೀ ನನ್ನ ತಂಗಿ ತಮ್ಮ ಇಂದಿಗೂ ಅದೆನೇ ಇರಲಿ, ಎಲ್ಲವನ್ನು ಅಚ್ಚುಕಟ್ಟಾಗಿ ಲೆಕ್ಕ ಬರೆದಿಡುವದನ್ನು ಪಾಲಿಸಿಕೊಂಡು ಬಂದಿದೀವಿ.
- ಅಮ್ಮನದು ಸೌಮ್ಯ ಸ್ವಭಾವ, ಯಾರು ಏನೇ ಅಂದರೂ ಅದಕ್ಕುತ್ತರವೆಂಬಂತೆ ಒಂದು ಮಂದಹಾಸ ಬೀರಿ ಬರುವುದು ಅವಳ ಸ್ವಭಾವ. ಇದರಿಂದ ಅದೆಷ್ಟೋ ಕಲಹ, ಜಗಳ ವೈಮನಸ್ಸು ಆಗೋದು ತಪ್ಪಿದೆ. ಎಲ್ಲದಕ್ಕೂ ಟೈಮ್ ಕೊಡಿ ತನ್ನಿಂದತಾನೇ ಹದಗೆಟ್ಟ ಪರಿಸ್ಥಿತಿ ತಿಳಿಯಾಗುತ್ತೆ ಅನ್ನುವ ಅವಳ ಮಾತು ಅದರಂತೆ ನಡೆದು ತೋರಿಸಿದ ಅವಳತಾಳ್ಮೆ ಇಂದು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಅದರ ಸನಿಹ ನಡೆಯುವ ಪ್ರಯತ್ನ ನಮ್ಮಲ್ಲಿ ಜಾರಿಯಲ್ಲಿದೆ.
- ಬಹುಮುಖ್ಯ ಮತ್ತೊಂದು ಪಾಠವೆಂದರೆ… ಯಾವತ್ತೂ ತನ್ನ ಹತ್ರ ಅದಿಲ್ಲ ಇದಿಲ್ಲ ಅಂತ ಕೊರಗಬೇಡ, ಇದ್ದುರದರಲ್ಲಿಯೇ ಏನಾದ್ರೂ ಹೊಸತನ ಕಂಡುಕೋ ಇಲ್ಲದಿದ್ರೆ ನೀನೇ ಏನಾದ್ರೂ ಹೊಸತಾಗಿ ಮಾಡು ಅನ್ನುವ ಅವಳ ನುಡಿ. ಹಾಗೆಯೇ ಅವಳು ಅದನ್ನು ಮಾಡಿ ತೋರಿಸಿದ ಬಗೆ. ಇನ್ನೂ ನಮ್ಮನ್ನು ಊರಲ್ಲಿ ನನ್ನ ಗೆಳತಿಯರು ಸಂಭಂದಿಕರು ನೆನೆಸಿಕೊಳ್ಳುವಂತಾಗಿದೆ.
- ನನಗೆ ಬಿ.ಎಡ್ (Bachelor of education) ಆದ ೧ ತಿಂಗಳೊಳಗೆ ಸರಕಾರಿ ನೌಕರಿ ಉತ್ತರಕನ್ನಡದ ಸಿದ್ಧಾಪುರ ತಾಲ್ಲೂಕಿನಲ್ಲಿ ಅಂದಾಗ ನಾನು ಸಂಭ್ರಮಿಸುವ ಬದಲು ಅತ್ತಿದ್ದೆ. ಇನ್ನೂ ಸರಿಯಾಗಿ ರಜೆಯನ್ನು ಕಳೆದಿಲ್ಲ ಆಗಲೇ ನೌಕರಿಯಾ? ಅಂತ.. ಆಗ ಅವಳೇ ನನಗೆ ಸಮಾಧಾನ ಹೇಳಿ “ ಅಯ್ಯೋ ಮಳ್ಳಿ ನೀನು ಚನ್ನಾಗಿ ಅಂಕ ತೆಗೆದು ನಿನ್ನ ಸ್ವಂತ ಶ್ರಮದಿಂದ ನಿನ್ನ ಕಾಲಮೇಲೆ ನಿಂತಿದ್ಯಾ ನಿನ್ನ ಪಪ್ಪ ಇದ್ರೆ ನಿನ್ನ ಮೇಲೆ ಗರ್ವ ಪಟ್ಟಿರೋರು. ನಾನೇ ನಿನ್ನ ಅಲ್ಲಿಗೆ ಬಿಟ್ಟುಬರ್ತೀನಿ.” ಅಂದಾಗ ನನಗೆ ಒಂದು ಕ್ಷಣ ಇದೇನಪ್ಪಾ ಅಮ್ಮನಿಗೆ ನಾ ದೂರ ಹೋಗತಿದೀನಿ ಅನ್ನೋ ಬೇಜಾರು ಒಂಚೂರು ಇಲ್ವಾ? ಅಂತ ಆಸಮಯದಲ್ಲಿ ಅನಿಸಿತ್ತು. ಆದ್ರೆ ಕ್ರಮೇಣ ನಾನು ಕೆಲಸದಲ್ಲಿ ತೊಡಗಿಕೊಂಡಾಗ ನನಗೆ ನನ್ನ ಮೇಲೆ ಹತೋಟಿ, ಭರವಸೆ, ಏನಾದ್ರೂ ಮಾಡಬಲ್ಲೆ ಅನ್ನೋ ಅರಿವು ಮೂಡಿದಾಗ ನನ್ನಮ್ಮನನ್ನು ನೆನೆಸಿ ಅದೆಷ್ಟು ಖುಷಿಪಟ್ಟಕ್ಷಣಗಳಿಲ್ಲ.
- ಯಾರೂ ಎಲ್ಲರಲ್ಲಿಯೂ ಸಮನಾಗಿ ಹೊಂದಿಕೊಂಡು ಹೋಗಬೇಕು ಅಂದ್ರೆ ಅದು ಆಗದ ಮಾತು. ಹಾಗಂತ ಜೀವನದಲ್ಲಿ ಅವರನ್ನು ತೆಗೆದು ಬಿಸಾಡುವಂತೆಯೂ ಆಗದ ಪರಿಸ್ಥಿತಿಯಿದ್ದಾಗ ಅಮ್ಮ ನನಗೆ ಹೇಳಿದ ಒಂದೇ ಮಾತು… ಜಾಸ್ತಿ ಅವರನ್ನು “ಮನಸ್ಸಿಗೆ ಹತ್ತಿರ ತೊಗೋಬೇಡ ಅವರಿಗೆ ಮರ್ಯಾದೆ ಕೊಡು ಏನಾದ್ರೂ ನಿನ್ನ ಜೊತೆ ಅವರಿರುವ ಪ್ರಸಂಗ ಬಂದ್ರೆ ನಿನ್ನ ಮನೇಲ್ಲಿ ೪ ದಿನ ಇರೋ ನೆಂಟರು ಅಂತ ತಿಳಿ.” ಅವರಾಡಿದ ಮಾತು ಇಂದಿಗೂ ಕೆಲವರಲ್ಲಿ ಕೆಲ ಪರಿಸ್ಥಿತಿಗೆ ನಾನು ಅಳವಡಿಸಿಕೊಂಡದೀನಿ ನೆಮ್ಮದಿಯಾಗಿದೀನಿ.
ಕೊನೆಯ ಮಾತು
ನಾನಿಲ್ಲಿ ಯಾಕೆ ನನ್ನಮ್ಮನ ವಿಷಯ ಉಲ್ಲೇಖಮಾಡತಿದೀನಿ ಅಂದ್ರೆ ಬದುಕಲ್ಲಿ, ಓದಿರತೀವಿ, ಇನ್ನೊಬ್ಬರ ಅನುಭವ ಕೇಳಿತೀವಿ, ಹಾಗೇಯೇ ಕೆಲವೊಂದು ನೈಜ ಘಟನೆಗಳನ್ನು ಕಣ್ಣಾರೆ ಕಂಡಿರತೀವಿ. ಆದರೆ ಇಂದು ನಾನೇನಿದೀನಿ ಹೇಗಿದೀನಿ ಅನ್ನುವದು ಅದು ಕೇವಲ ನನ್ನಮ್ಮನ ಉಪದೇಶ ಅವಳ ಜೊತೆಗಿನ ಒಡನಾಟ. ಅವಳು ಇದ್ಯಾವುದೂ ಸುಖಾಸುಮ್ಮನೆ ಆಡಿದ ಮಾತುಗಳಾಗಿರದೇ ಸ್ವಂತ ಅನುಭವಿಸಿ ನಮಗೆ ತಿಳಿಹೇಳಿದ ನುಡಿಮುತ್ತುಗಳು.
ನನ್ನಮ್ಮ ಅದೆಷ್ಟು ಸ್ವಾಭಿಮಾನಿ, ಧೈರ್ಯವಂತ ಹೆಣ್ಣು ಅಂದ್ರೆ ತನ್ನ ಕೊನೆಯ ಉಸಿರಿರುವರೆಗೂ ಒಬ್ಬಳೇ ಇದ್ದು, ಪಪ್ಪ ಹೋದ ಮೇಲೆ ಜಾಗ ಖರೀದಿಸಿ ತಾನೇ ನಿಂತು ಕಟ್ಟಿಸಿದ ಮನೆಯಲ್ಲಿ ಉಳಿದು( ಅವಳಿಗೆ B.P, Diabetes.. ಇದ್ರೂ) ಮಕ್ಕಳ ಮನೆಗೆ ನೆಂಟತಿಯಂತೆ ಹೋಗಿ ಬರೋಳು. ಅಕ್ಕಪಕ್ಕದವರು ಆಡಿಕೊಳ್ಳುವುದು ಅವಳಿಗೆ ಗೊತ್ತಿದ್ರೂ ಏನೂ ಆಗಿಲ್ಲವೆಂಬಂತೆ ಅವರ ಜೊತೆ ಚನ್ನಾಗಿ ಮಾತಾಡಿಕೊಂಡು ತನ್ನ ಕೊನೆಯಗಳಿಗೆ ಸಾಯುವ ಒಂದು ವಾರ ಮುಂಚೆ ನನ್ನ ತಮ್ಮ ಗೋವಾದಲ್ಲಿರುವ ಅವನ ಮನೆಗೆ ಹೋಗಿ ನಗತಾ ಇದ್ದು ಅವನ ಮಡಿಲಲ್ಲಿ ಕೊನೆಯ ಉಸಿರೆಳೆದ ಅಮ್ಮ ನನ್ನಮ್ಮ. ನಾನು ಯಾಕೆ ಇದನ್ನು ಹೇಳ್ತಾ ಇದ್ದೀನಂದ್ರೆ ಅಕ್ಕಪಕ್ಕದವರು ಆಡಿಕೊಂಡಿದ್ದು ಇದೇ ವಿಷಯವಾಗಿ ಮದುವೆಯಾಗಿ ಸೊಸೆ ಬಂದ್ರೂ ಯಾಕೆ ಇವರು ಅವರಜೊತೆ ಇರದೇ ಒಬ್ರೇ ಇರುವರಲ್ಲ ಅಂತ. ಅದಕ್ಕೆ ತಕ್ಕನಾಗಿ ಕೊನೆಯವರೆಗೂ ಸ್ವಾಭಿಮಾನಿಯಾಗಿ ಯಾರ ಹಂಗಿಲ್ಲದೇ ಒಬ್ಬಳೇ ಇದ್ದು, ಹಾಗಂತ ಎಲ್ಲರ ಜೊತೆ ಚನ್ನಾಗಿಯೇ ವ್ಯವಹರಿಸಿ ಕೊನೆಯಲ್ಲಿ ಮಗನ ಜೊತೆ ಅವನ ಮಡಿಲಲ್ಲಿ ಅಂತ್ಯ ಹಾಡಿದ ನನ್ನಮ್ಮ ಯಾವ ಮಹಾನ್ ವ್ಯಕ್ತಿಗಳಿಗೂ ಕಡಿಮೆಯಿಲ್ಲ ಇದು ನಾ ನಂಬಿದ ಸತ್ಯ.
ಅವಳು ನಡೆದು ತೋರಿಸಿದ ಒಂದೊಂದು ಹೆಜ್ಜೆಯೂ ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡ ಅವಳ ಆಶೀರ್ವಾದ. ಅವಳೇ ನನಗೆ ಗುರು, ಗೆಳತಿ, ಅಪ್ಪ ಎಲ್ಲ. ಅವಳೇ ಬದುಕಿನ ಮರ್ಮದ ದೀಕ್ಷೆ ನೀಡಿದ ನನ್ನ ಜೀವನದ ದೇವತೆ ಯಾವತ್ತೂ ನಾನವಳಿಗೆ ಋುಣಿ.
- ಶೀತಲ್ ಹೆಗಡೆ
