ಜೋಗದ ಮೊದಲ ಸರ್ವೆ ಮತ್ತು ಬೆಂಕಿ ಪಟ್ಟಣ ಭಾರತಕ್ಕೆ ಬಂದ ರೋಚಕ ಕಥೆ…

(ಜೋಗದ ಕುರಿತ ಐತಿಹಾಸಿಕ ಸಂಗತಿಗಳನ್ನು ಆಧರಿಸಿ ಜೊತೆಗೆ ಮುಳುಗಡೆಯ ವಾಸ್ತವ ಸಂಗತಿಗಳನ್ನು ಹೆಣೆದು ಪರಿಕಲ್ಪಿಸಿದ ಕಾದಂಬರಿ ‘ಪುನರ್ವಸು’. ಜೋಗದಂತಹ ಯೋಜನಾ ಪ್ರದೇಶ ಮತ್ತು ಮಾನವೀಯ ಸಂಗತಿಗಳ ಕುರಿತು ನೈಜ ಕಾಳಜಿ ಹೊಂದಿರುವ ಸಹೃದಯದವರ ನ್ನು ಕಾಡುವ ಕಾದಂಬರಿಯ ಬಿಡುಗಡೆ.ಇದು ಗಜಾನನ ಶರ್ಮ ಅವರ ಕಾದಂಬರಿಯನ್ನು ಜನವರಿ ೨೭,೨೦೧೯ ಬಿಡುಗಡೆ ಮಾಡಲಿದ್ದಾರೆ. ಸ್ಥಳ : ವಾಡಿಯಾ ಸಂಭಾಗಣ,ಬಸವನಗುಡಿ ಸಮಯ: ೧೦.೩೦)

೧೯೧೬ ರಲ್ಲಿ ಜೋಗಕ್ಕೆ ಭೇಟಿ ನೀಡಿದ ಅಂದಿನ ದಿವಾನರಾಗಿದ್ದ ನಾಡಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯನವರು ಎಲ್ಲರಂತೆ ಅದರ ಅದ್ಭುತ ಸೌಂದರ್ಯಕ್ಕೆ ಮಾತ್ರ ಮಾರುಹೋಗದೆ ಅಲ್ಲಿ ಸುರಿಯುತ್ತಿದ್ದ ಅಪಾರ ಪ್ರಮಾಣದ ನೀರಿನಿಂದ ವ್ಯರ್ಥವಾಗುತ್ತಿದ್ದ ಅನರ್ಘ್ಯ ಶಕ್ತಿಯನ್ನು ಕಂಡು, ಮರುಗಿ, “ ವಾಟ್ ಎ ವೇಸ್ಟ್” (ಎಂತಹ ಅದ್ಭುತ ವ್ಯರ್ಥ) ಎಂದು ಉದ್ಘರಿಸಿದ್ದು ಜನಜನಿತ. ಆದರೆ ಒಬ್ಬ ಸಾಮಾನ್ಯ ಆಡಳಿತಗಾರರಂತೆ ಉದ್ಘಾರವೊಂದನ್ನು ಹೊರಗೆಡವಿ ನಂತರ ಮೈ ಮರೆಯುವ ಸಾಧಾರಣ ಸ್ವಭಾವದವರಾಗಿರಲಿಲ್ಲ ಸರ್ ಎಂ ವಿ. ಅವರು ತಕ್ಷಣ ಕಾಮಗಾರಿ ಇಲಾಖೆಯ ಮುಖ್ಯ ಇಂಜಿನಿಯರಾಗಿದ್ದ ಎಸ್ ಕಡಾಂಬಿ ಮತ್ತು ವಿದ್ಯುತ್ ಇಲಾಖೆಯ ಮುಖ್ಯ ಇಂಜಿನಿಯರಾಗಿದ್ದ ಎಸ್ ಜಿ ಫೋರ್ಬ್ಸರನ್ನು ಕರೆದು ಜೋಗದ ಸರ್ವೆ ಮತ್ತು ಸಮೀಕ್ಷೆಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸುತ್ತಾರೆ. ಆ ಇಬ್ಬರೂ ಕರ್ತವ್ಯನಿಷ್ಠ ಅಧಿಕಾರಿಗಳು ದಿವಾನರ ಆದೇಶ ಪಾಲನೆಗೆ ಮುಂದಡಿ ಇಟ್ಟರಾದರೂ ಅಂದಿನ ಸಂಸ್ಥಾನದ ಮೇಲುಸ್ತುವಾರಿಗೆ ನೇಮಿಸಲ್ಪಟ್ಟಿದ್ದ ಬ್ರಿಟಿಷ್ ರೆಸಿಡೆಂಟರು ಅದಕ್ಕೆ ಆಸ್ಪದ ನೀಡುವುದಿಲ್ಲ. ಕಾರಣ ಅದು ಮೊದಲ ಮಹಾಯುದ್ದ ನಡೆದಿದ್ದ ಕಾಲ. ಕೇಂದ್ರದ ಬ್ರಿಟಿಷ್ ಸರ್ಕಾರ, ದೇಶದಲ್ಲಿ ಯಾವುದೇ ಹೊಸ ಯೋಜನೆಯನ್ನು ಕೈಗೊಳ್ಳದಂತೆ ದೇಶೀಯಸಂಸ್ಥಾನಗಳೂ ಸೇರಿದಂತೆ ಎಲ್ಲ ಪ್ರಾಂತೀಯ ಸರ್ಕಾರಗಳಿಗೂ ಸೂಚನೆ ನೀಡಿತ್ತು. ದೇಶದ ಎಲ್ಲ ಸಂಪನ್ಮೂಲ ಮತ್ತು ಕೌಶಲ ಮಹಾಯುದ್ದಕ್ಕೇ ಮೀಸಲಿರಬೇಕೆಂಬುದು ಭಾರತದ ಬ್ರಿಟಿಷ್ ಸರ್ಕಾರದ ನಿರ್ಣಯವಾಗಿತ್ತು. ಹಾಗಾಗಿ ಸರ್ ಎಂ ವಿಯಂತವರ ಮಾತು ಕೂಡ ಕೇವಲ ಮೌಖಿಕ ಆದೇಶವಾಯಿತೇ ಹೊರತು ಅನುಷ್ಟಾನಕ್ಕಿಳಿಯಲಿಲ್ಲ.

ಮುಂದೆ ಮೊದಲ ಮಹಾಯುದ್ದ ಮುಗಿಯುವ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ತನ್ನ ಹಿಡಿತವನ್ನು ಸಡಿಲಗೊಳಿಸಿತು. ಅದನ್ನೇ ಕಾಯುತ್ತಿದ್ದ ಜನಪ್ರಿಯ ಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಒಡೆತನದ ಮೈಸೂರು ಸಂಸ್ಥಾನ, ದಿನಾಂಕ ಎಂಟು, ನವೆಂಬರ್ ೧೯೧೮ ರಂದು ತನ್ನ ಆಜ್ಞೆ ಸಂಖ್ಯೆ ಸಿಪಿಎಸ್ ೨೮೪-೫ ದಿನಾಂಕ ೮-೧೧-೧೯೧೮ ರ ಮೂಲಕ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಕೈಗೊಳ್ಳಲು ಅಗತ್ಯ ಸರ್ವೆ ಮತ್ತು ಸಮೀಕ್ಷೆ ನಡೆಸಲು ಆದೇಶ ನೀಡಿತು.ಅದು ಸರ್ ಎಂ ವಿ ತಮ್ಮ ದಿವಾನಗಿರಿಗೆ ರಾಜಿನಾಮೆ ನೀಡುವ ಕೇವಲ ಒಂದು ತಿಂಗಳು ಮೊದಲು ನಡೆದ ಘಟನೆ. ದಿವಾನಗಿರಿ ಬಿಡುವ ಮೊದಲು ತಾವು ಉದ್ದೇಶಿಸಿದ ಯಾವುದೇ ಯೋಜನೆಯ ಆರಂಭಿಕ ಕಾರ್ಯಗಳು ಟೇಕ್ ಆಫ್ ಆಗದೇ ಇರಬಾರದೆಂದು ಸರ್ ಎಂ ವಿ, ತಕ್ಷಣ ಸಮೀಕ್ಷೆ ಆರಂಭಿಸಲು ಕಡಾಂಬಿ ಮತ್ತು ಎಸ್ ಜಿ ಫೋರ್ಬ್ಸರನ್ನು ಒತ್ತಾಯಿಸುತ್ತಾರೆ. ಅದರಂತೆ ಕಾಮಗಾರಿ ಇಲಾಖೆಯ ಮುಖ್ಯ ಇಂಜಿನಿಯರ್ ಎಸ್ ಕಡಾಂಬಿ, ಕೃಷ್ಣರಾವ್ ಎಂಬ ತರುಣ ಇಂಜಿನಿಯರೊಬ್ಬರ ನೇತೃತ್ವದಲ್ಲಿ ಸರ್ವೆ ತಂಡವೊಂದನ್ನು ಜೋಗಕ್ಕೆ ನಿಯೋಜಿಸುತ್ತಾರೆ.

೧೯೧೮ ರ ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ಬೆಂಗಳೂರಿನಿಂದ ಹೊರಟು ಶಿವಮೊಗ್ಗದ ತುಂಗಾನದಿಯ ಆಚೆಯ ದಡದವರೆಗೆ ರೈಲಿನಲ್ಲಿ ಬಂದಿಳಿದ ಏಳೆಂಟು ಜನರನ್ನೊಳಗೊಂಡ ಕೃಷ್ಣರಾವ್ ಸರ್ವೆ ತಂಡ ಅಲ್ಲಿಂದ ಕುದುರೆಯೇರಿ ಜೋಗಕ್ಕೆ ಬರುತ್ತದೆ. ಜೋಗಕ್ಕೆ ಬಂದು ಇಲ್ಲಿನ ಪರಿಸ್ಥಿತಿ ನೋಡಿದ ಸರ್ವೆ ತಂಡ ತಬ್ಬಿಬ್ಬಾಗುತ್ತದೆ! ಸುತ್ತಲೂ ಹಬ್ಬಿದ ಘೋರಾರಣ್ಯದ ಹೊರತಾಗಿ ಏನಿತ್ತು ಆಗ ಈ ಜೋಗವೆಂಬ ಜೋಗದಲ್ಲಿ? ಸದಾ ಎದುರಿಗಿರುವವರೂ ಕಾಣದಂತೆ ಮಗುಚಿ ಕೊಳ್ಳುತ್ತಿದ್ದ ಮಂಜಿನ ರಾಶಿಯ ಮಬ್ಬಿನ ಮಧ್ಯದಲ್ಲಿ, ಕಿವಿಗಡಚಿಕ್ಕುವ ಘೋರ ಘರ್ಜನೆ ಯೊಂದಿಗೆ ನಿತ್ಯ ನಿರಂತರವಾಗಿ ಸುರಿಯುವ ಜಲಪಾತದೆದುರು ಮುದುಡಿ ಕುಳಿತ, ೧೮೮೭ರಲ್ಲಿ ಮೈಸೂರು ಸಂಸ್ಥಾನದಿಂದ ನಿರ್ಮಾಣಗೊಂಡಿದ್ದ ಮೈಸೂರು ಬಂಗಲೆ ಮತ್ತು ಹೊಳೆಯಾಚೆ ೧೯೪೨ರಲ್ಲಿ ನಿರ್ಮಾಣಗೊಂಡಿದ್ದ ಬ್ರಿಟಿಷ್ ಬಂಗಲೆಯೆಂಬ ಎರಡು ಹೆಂಚಿನ ಕಟ್ಟಡಗಳು ಮಾತ್ರ ಕಾಣುತ್ತಿದ್ದವು. ಹೊಳೆಯ ಈ ಬದಿಯ ಮೈಸೂರು ಬಂಗಲೆಯಲ್ಲಿ ವೃಷಭಯ್ಯ ಎಂಬ ಮೇಟಿಯೊಬ್ಬನ ಪುಟ್ಟ ಕುಟುಂಬ ಬಿಟ್ಟರೆ ಹೊಳೆಯಾಚೆ ಬ್ರಿಟಿಷ್ ಬಂಗಲೆಯಲ್ಲಿ ಇನ್ನೊಂದು ಮೇಟಿ ಕುಟುಂಬ. ಈಗ ಸಿರೂರು ಕೆರೆ ಇರುವ ತಾಣದಲ್ಲಿ ಒಂದು ತೋಟ, ಒಂದಿಷ್ಟು ಗದ್ದೆ ಅದರ ಮೇಲ್ಭಾಗದಲ್ಲಿ ಕೆಮ್ಮಣ್ಣುಗಾರು ಎಂಬ ಒಂದೆರಡು ಮನೆಗಳ ಹಳ್ಳಿ. ಅಲ್ಲಿಂದ ತುಸು ದೂರದ ಮಾನಕ್ಕಿ ಎಂಬಲ್ಲಿ ಒಂದು ಈಶ್ವರ ದೇವಾಲಯ ಮತ್ತು ಒಂದು ಅರ್ಚಕ ಕುಟುಂಬ. ಈಗ ಜೋಗದ ಕಾಲೋನಿ ಇರುವ ಸ್ಥಳಗಳೆಲ್ಲ ಆಗ ಸೂರ್ಯನ ಬೆಳಕನ್ನೂ ಕೆಳಗೆ ಬಿಟ್ಟುಕೊಡದ ನಿಗೂಢ ನಿರ್ಜನ ಅಡವಿ.

ಜೋಗದ ಐಬಿಯ ಹಿಂದಿನ ಡಾರ್ಮೆಟ್ರಿಯಲ್ಲಿ ಉಳಿದುಕೊಂಡ ಸರ್ವೆ ತಂಡಕ್ಕೆ ಐಬಿಯ ಮೇಟಿ ವೃಷಭಯ್ಯನ ಕುಟುಂಬವೇ ಏಕಮಾತ್ರ ಆಶ್ರಯ. ಅವರನ್ನು ಬಿಟ್ಟರೆ ಇನ್ನೇನು ಬೇಕೆಂದರೂ ದೂರದ ವಟ್ಟಕ್ಕಿಯಿಂದ ಬರುತ್ತಿದ್ದ, ಜೋಗದ ಎರಡೂ ಐಬಿಗಳ ಉಸ್ತುವಾರಿಯ ಹೊಣೆ ಹೊತ್ತಿದ್ದ ಕೊತವಾಲ್ ಪದ್ಮಯ್ಯನವರನ್ನೇ ಕೇಳಬೇಕು. ೧೯೧೬ ರ ಹೊತ್ತಿಗೇ ಸಾಗರದಲ್ಲಿ ಕಾಮಗಾರಿ ಇಲಾಖೆಯ ಒಂದು ಸೆಕ್ಶನ್ ಆರಂಭವಾಗಿತ್ತಾದರೂ ಅದು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಾರಂಭಿಸಿರಲಿಲ್ಲ. ಹಾಗಾಗಿ ಇಲಾಖೆಯ ಸಹಾಯ ಬೇಕೆಂದರೆ ಅವರು ಕುದುರೆಯೇರಿ ಶಿವಮೊಗ್ಗಕ್ಕೇ ಹೋಗಬೇಕಿತ್ತು. ಸೀತಾಕಟ್ಟೆಯ ಬಳಿ ಸಾಹಸದಿಂದ ದೋಣಿ ದಾಟಿ, ಆಡುಕಟ್ಟೆ, ತಾಳಗುಪ್ಪ, ಸಾಗರಗಳ ಮೂಲಕ ಶಿವಮೊಗ್ಗಕ್ಕೆ ಹೋಗಬೇಕು. ಕೊನೆಗೆ ಸರ್ವೆ ತಂಡದವರು ಕೊತವಾಲ್ ಪದ್ಮಯ್ಯರ ನೆರವಿನಿಂದ ಕೆಲವು ಸ್ಥಳೀಯ ಕೆಲಸಗಾರರನ್ನು ಎರವಲು ಪಡೆಯುತ್ತಾರೆ. ಇಲ್ಲದಿದ್ದರೆ ಕತ್ತರಿಸಿ ಇಟ್ಟಂತಿದ್ದ ಆ ಭೀಕರ ಕಣಿವೆಯಾಳಕ್ಕೆ ಎಲ್ಲಿ, ಹೇಗೆ ಇಳಿಯಬೇಕು ಎಂಬುದನ್ನೂ ಕೃಷ್ಣರಾವ್ ಸರ್ವರ ತಂಡ ಅರಿಯದು. ಇಂತಿಪ್ಪ ಸಂದರ್ಭದಲ್ಲಿ ಅವರಿಗೆ ರಾತ್ರಿ ಸೀಮೆಎಣ್ಣೆ ಬುಡ್ಡಿ ಅಥವಾ ಲಾಟೀನಿನ ಬೆಳಕು, ವೃಷಭಯ್ಯನ ಕುಟುಂಬ ಬಡಿಸುವ ಊಟವೇ ಗತಿ.

ಒಂದು ದಿನ ಬೆಳಗಿನ ಝಾವ ಸರ್ವೆಯರ್ ಒಬ್ಬ ಮೂತ್ರವಿಸರ್ಜನೆಗಾಗಿ ಡಾರ್ಮೆಟ್ರಿಯ ಹಿಂದಿನ ಬಾಗಿಲು ತೆರೆದಾಗ ಕಂಡದ್ದು ಕಡುಗಪ್ಪಿನ ಕಾಡುಕೋಣವೊಂದನ್ನು. ಭಯದಲ್ಲಿ ಕೈಯ್ಯಲ್ಲಿದ್ದ ಬುಡ್ಡಿಯನ್ನು ಕೆಳಕ್ಕೆಸೆದು ಒಳಗೋಡಿ ಬಂದ ಆತ ಬದುಕಿದರೆ ಬೇಡಿ ತಿಂದೇನೆಂದು ಅದೇ ದಿನ ಕೆಲಸಬಿಟ್ಟು ಊರಿಗೆ ಪರಾರಿಯಾಗಿದ್ದ!

ಇಂತಹ ವಿಷಮ ಪರಿಸ್ಥಿತಿಯಲ್ಲಿ ಸರ್ವೆ ಆರಂಭಿಸಿದ ಕೃಷ್ಣರಾವ್ ತಂಡಕ್ಕೆ ಆಗ ಅತ್ಯಂತ ಅಮೂಲ್ಯ ವಸ್ತು ಎಂದರೆ ಬೆಂಕಿಪೊಟ್ಟಣ ಅಥವಾ ಮ್ಯಾಚ್ ಬಾಕ್ಸ್. ಅಡವಿಯ ನಡುವೆ ಅಥವಾ ಡಾರ್ಮೆಟ್ರಿಯಲ್ಲಿ ಒಬ್ಬರ ಬಳಿಯಲ್ಲಾದರೂ ಬೆಂಕಿಪೊಟ್ಟಣವೊಂದು ಇಲ್ಲವೆಂದರೆ ಅವರಾರೂ ನಿದ್ರಿಸುತ್ತಿರಲಿಲ್ಲ. ಆಗಿನ್ನೂ ಭಾರತದಲ್ಲ ಮ್ಯಾಚ್ ಬಾಕ್ಸ್ ಎಂಬುದು ಅತ್ಯಪರೂಪದ ವಸ್ತು.

( ಭಾರತಕ್ಕೆ ಬಂದ ಮೊದಲ ಬೆಂಕಿ ಪಟ್ಟಣ ಚಿತ್ರ )

೧೮೪೪ ರಷ್ಟು ಹಿಂದೆಯೇ ಸ್ವೀಡನ್ನಿನ ಗಸ್ಟಾಫ್ ಎರ್ರಿಕ್ ಪಾಶ್ಚ್ ಸೇಫ್ಟಿ ಮ್ಯಾಚಸ್ ಕಂಡು ಹಿಡಿದಿದ್ದನಾದರೂ ಅದರ ಉತ್ಪಾದನೆ ದೊಡ್ಡ ಪ್ರಮಾಣದಲ್ಕಿ ಆರಂಭವಾದದ್ದು ಹತ್ತೊಂಬತ್ತನೆಯ ಶತಮಾನದ ಅಂತ್ಯದ ದಶಕಗಳಲ್ಲಿ. ಹೆಚ್ಚು ಉತ್ಪಾದನೆ ಆಗುತ್ತಿದ್ದುದು ಸ್ವೀಡನ್ ಮತ್ತು ಜಪಾನುಗಳಲ್ಲಿ. ಭಾರತ ಸರ್ಕಾರ ೧೯೧೦ ರವರೆಗೂ ಸ್ವೀಡನ್ನಿನಿಂದ ಮ್ಯಾಚ್ ಬಾಕ್ಸ್ ಆಮದು ಮಾಡಿಕೊಳ್ಳುತ್ತಿತ್ತು. ೧೯೧೪ ರಿಂದ ಆರಂಭವಾದ ಮೊದಲ ಮಹಾಯುದ್ದ ಸ್ವೀಡನ್ನಿನಿಂದ ಬೆಂಕಿಪೊಟ್ಟಣದ ಆಮದನ್ನು ನಿರ್ಬಂಧಿಸಿತು. ನಂತರ ಭಾರತ ಜಪಾನಿನಿಂದ ಮ್ಯಾಚ್ ಬಾಕ್ಸ್ ಆಮದು ಮಾಡಿಕೊಳ್ಳತೊಡಗಿತು. ಯುದ್ದದ ಸಂದರ್ಭದಲ್ಲಿ ಆಮದು ಕಷ್ಟವಾದ ಕಾರಣ ಕಲ್ಕತ್ತದಲ್ಲಿದ್ದ ಕೆಲವು ಜಪಾನೀಯರು ಭಾರತದಲ್ಲಿಯೂ ಹ್ಯಾಂಡ್ಮೇಡ್ ಮ್ಯಾಚ್ ಬಾಕ್ಸ್ ತಯಾರಿಕೆಗೆ ಮುಂದಾದರು. ಅವರು ಬಳಿ ಕೆಲಸ ಕಲಿತ ಕೆಲವು ತಮಿಳು ಸಹಾಯಕರು ಅಲ್ಲಿಂದ ದಕ್ಷಿಣಕ್ಕೆ ಬಂದು ಶಿವಕಾಶಿ, ತಿರುಚಿ ಮುಂತಾದ ಕಡೆ ಬೆಂಕಿಪೊಟ್ಟಣದ ಉದ್ಯಮ ಆರಂಭಿಸಿದರು. ಮುಂದೆ ೧೯೩೦ ರ ದಶಕದ ಹೊತ್ತಿಗೆ ಭಾರತದಲ್ಲಿ ಬೆಂಕಿಪೊಟ್ಟಣದ ಬಳಕೆ ಮತ್ತು ಉತ್ಪಾದನೆ ವ್ಯಾಪಕವಾಗುತ್ತ ಬಂದಿದ್ದು ಚರಿತ್ರೆ.

ಆದರೆ ಅದಕ್ಕೂ ಮುಂಚೆ ಬೆಂಕಿಪೊಟ್ಟಣವೊಂದು ಅತ್ಯಮೂಲ್ಯ ಮತ್ತು ಅದ್ಭುತ ವಸ್ತು. ಜನಸಾಮಾನ್ಯರು ರಾತ್ರಿ ಹೊತ್ತಿಸಿದ ಬೆಂಕಿಯನ್ನು ಮರುದಿನದವರೆಗೂ ಆರದಂತೆ ನೋಡಿ ಕೊಂಡು ಮಾರನೆಯ ದಿನ ಬೆಂಕಿ ಹೊತ್ತಿಸಿಕೊಳ್ಳಬೇಕಿತ್ತೇ ಹೊರತು ಬಹುತೇಕ ಮಂದಿ ಬೆಂಕಿಪೊಟ್ಟಣ ನೋಡಿರಲೂ ಇಲ್ಲ. ಆಗ, ಸರ್ಕಾರ ಪ್ರಮುಖವಾಗಿ ಇಂತಹ ಸರ್ಕಾರದ ಕಾಮಗಾರಿ, ತಂಡಗಳಿಗೆಂದೇ ಆಮದು ಮಾಡಿಕೊಂಡ ಕೆಲವು ಮ್ಯಾಚ್ ಬಾಕ್ಸುಗಳನ್ನು ಮೀಸಲಿಟ್ಟು, ರೇಶನ್ ಹಂಚಿದಂತೆ ಹಂಚುತ್ತಿತ್ತು. ಹಾಗಿದ್ದೂ ಆರು ತಿಂಗಳು ಸುರಿಯುತ್ತಿದ್ದ ಆಗಿನ ಮಳೆಯ ಅಬ್ಬರಕ್ಕೆ ಸಿಕ್ಕು ಅವು ಮೆತ್ತಗಾಗಿ ಬೇಕೆಂದಾಗ ಉರಿಯದೆ ಪಜೀತಿಯಾಗುತ್ತಿತ್ತು….

ಇಂತಹ ಅನೇಕ ಸಂಗತಿಗಳನ್ನೊಳಗೊಂಡ ಆಗಿನ ಜೋಗದ ಸರ್ವೆಯ ಕತೆ ಒಂದು ರೋಚಕ ಅಧ್ಯಾಯ. ಆ ಕಾಲದಲ್ಲಿ ನಡೆದ ಹಿರೇಭಾಸ್ಕರ ಅಣೆಕಟ್ಟೆಯ ನಿರ್ಮಾಣ, ಜೋಗದ ಟ್ರಾಲಿ, ರಾಜಾಕಲ್ಲು, ಮಹಾತ್ಮಾಗಾಂಧಿ ವಿದ್ಯುದಾಗರದ ನಿರ್ಮಾಣ. ಹೀಗೆ ಜೋಗದ ಅನೇಕ ಸತ್ಯ ಘಟನೆಗಳ ಜೊತೆಗೆ ಶರಾವತಿ ಯೋಜನೆಯ ಬೆಳಕು ಕತ್ತಲೆಗಳನ್ನು ಒಳಗೊಂಡ “ ಪುನರ್ವಸು” ಎಂಬ ಕಾದಂಬರಿ ಇದೇ ಜನವರಿ ತಿಂಗಳ ಇಪ್ಪತ್ತೇಳನೇ ತಾರೀಖು ಬೆಳಿಗ್ಗೆ ಹತ್ತೂವರೆಗೆ ಬೆಂಗಳೂರಿನ ಬಸವನಗುಡಿಯ ಇನ್ಸಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಜೋಗದ ಕುರಿತು ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕಂಡ, ಓದಿದ, ಅನುಭವಿಸಿದ, ಸಂಗ್ರಹಿಸಿದ ಮಾಹಿತಿಗಳನ್ನು ಆಧರಿಸಿ ಪರಿಕಲ್ಪಿಸಿದ ಬೃಹತ್ ಕಾದಂಬರಿ ಯೊಂದು ಅಂದು ಬೆಳಕು ಕಾಣಲಿದೆ. ಬಂದು ಪ್ರೋತ್ಸಾಹಿಸಲು ತಮ್ಮನ್ನು ಈ ಮೂಲಕ ಆಹ್ವಾನಿಸುತ್ತಿದ್ದೇನೆ.

gajanana

ಲೇಖನ: ಗಜಾನನ ಶರ್ಮಾ

aakrikannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW