ಈ ಪ್ರತಿಭೆಗೆ ಬೇಕಿದೆ ಒಂದೇ ಒಂದು ಅದ್ಬುತ ಅವಕಾಶ! ಅದು ಸಿಗುವುದೋ,ಇಲ್ಲವೋ?

ತ್ರೇತಾಯುಗದಲ್ಲಿ ಶ್ರವಣಕುಮಾರ ಕುರುಡು ಅಪ್ಪ-ಅಮ್ಮನಿಗೆ ಕಣ್ಣಾಗಿದ್ದರೆ. ಕಲಿಯುಗದಲ್ಲಿ ಎರಡು ಕುರುಡು ಮಕ್ಕಳಿಗೆ ಈ ತಾಯಯೇ ಕಣ್ಣು. ದೇಶದ ಯಾವುದೇ ಮೂಲೆಯಲ್ಲಿ ಸಂಗೀತದ ಆಡಿಷನ್ ನಡೆಯಲ್ಲಿ ಬಲಗೈಯಲ್ಲಿ ಒಬ್ಬ, ಎಡಗೈಯಲ್ಲಿ ಒಬ್ಬನನ್ನು ಕಟ್ಟಿಕೊಂಡು ಯಾವ ಊರು ಕೇರಿಯೆನ್ನದೆ ಅಲ್ಲಿ ಸಮಯಕ್ಕೆ ಸರಿಯಾಗಿ, ಬಿಸಿಲೆನ್ನದೆ, ದೊಡ್ಡ ಕ್ಯೂ ಅನ್ನದೆ ನಿಲ್ಲುತ್ತಾಳೆ ಈ ತಾಯಿ. ತನ್ನ ಅಂಧ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಬೇಕು, ಅಂಧತ್ವವನ್ನು ಮೆಟ್ಟಿ ಅವರ ಕಾಲ ಮೇಲೆ ಅವರನ್ನು ನಿಲ್ಲುವಂತೆ ಮಾಡಬೇಕು ಎಂದು ಪಣತೊಟ್ಟ ಈ ತಾಯಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ತಾವೇ ಹೆತ್ತು ಹೊತ್ತ ಮಕ್ಕಳನ್ನು ಕೆಲಸದವರ ಕೈಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಇಂದಿನ ಕಾಲದ ತಾಯಂದಿರಿಗೆ ಈ ತಾಯಿ ಒಳ್ಳೆಯ ಮಾದರಿ ಎನ್ನಬಹುದು. ಸ್ನೇಹಲತಾ ಮತ್ತು ರಾಜನ್ ತುಂಬಾ ಅನುಕೂಲಸ್ಥ ಕುಟುಂಬದವರು. ಸ್ನೇಹಲತಾ ಅವರ ಕೈಯಲ್ಲಿ ಬ್ಯಾಂಕಿನ ಒಳ್ಳೆಯ ಕೆಲಸವಿತ್ತು. ಕೈ ತುಂಬಾ ಸಂಬಳವಿತ್ತು. ಗಂಡ ರಾಜನ್ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಅಧಿಕಾರಿಯಾಗಿದ್ದರು. ಮನೆಯಲ್ಲಿ ಆಳು-ಕಾಳುಗಳೆಲ್ಲಾ ಇದ್ದರು. ಆದರೆ ಈ ತಾಯಿಗೆ ಈ ಎಲ್ಲ ಸುಖಗಳು ಬೇಕಾಗಿರಲಿಲ್ಲ. ಅವರಿಗೆ ಬೇಕಿದ್ದದ್ದು ಒಂದೇ ಅದುವೇ ತಮ್ಮ ಮಕ್ಕಳಿಗೆ ಈ ಸಮಾಜದಲ್ಲಿ ಅವರದೇ ಆದ ಸ್ಥಾನಮಾನ ಕೊಡಿಸಬೇಕು ಎನ್ನುವ ಹಠ. ಆ ಹಠಕ್ಕಾಗಿ ತಮ್ಮ ಭವಿಷ್ಯವನ್ನೆಲ್ಲ ಬದಿಗೊತ್ತಿ ಮಕ್ಕಳ ಪ್ರತಿಭೆಗೆ ನೀರುಣಿಸುತ್ತಾ ಬಂದ ಈ ತಾಯಿಯ ತ್ಯಾಗಕ್ಕೆ ನಮೋ ನಮಃ.

(ಅಪ್ಪ -ಅಮ್ಮನ ಜೊತೆ ರೋಷನ್ -ಋತ್ವಿಕ್ )

ಇಷ್ಟೆಲ್ಲ ಪೀಠಿಕೆ ಹಾಕಿದ ಮೇಲೆ ಈ ತಾಯಿ ಯಾರು? ಈ ಅಂಧ ಮಕ್ಕಳ್ಯಾರೂ ಎನ್ನುವ ಕುತೂಹಲ ನಿಮಗೆ ಮೂಡಿರಬಹುದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಸರಿಗಮಪ ರಿಯಾಲಿಟಿ ಶೋ ನ ಸ್ಪರ್ಧಿಯಾಗಿರುವ ಋತ್ವಿಕನ ತಾಯಿ ಸ್ನೇಹಲತಾ ಆ ದಿಟ್ಟ ಹೆಣ್ಣುಮಗಳು. ಸ್ನೇಹಲತಾ ಮತ್ತು ರಾಜನ್ ದಂಪತಿಯ ಹಿರಿಯ ಪುತ್ರನೇ ರೋಷನ್. ಈ ಹಿರಿಯ ಮಗ ಹುಟ್ಟುತ್ತಲೇ ಅಂಧನಾಗಿ ಹುಟ್ಟಿದ.ಮಗನ ಅಂಧತ್ವವನ್ನು ಸ್ವೀಕರಿಸಿ ಜೀವನದಲ್ಲಿ ಮುನ್ನಡೆಯುತ್ತಿದ್ದಾಗ ಹತ್ತು ವರ್ಷದ ನಂತರ ಮತ್ತೊಂದು ದೊಡ್ಡ ಸಿಡಿಲು ಆ ದಂಪತಿಗೆ ಹೊಡೆಯಿತು.ಅವರಿಗೆ ಹುಟ್ಟಿದ ಇನ್ನೊಬ್ಬ ಮಗ ಋತ್ವಿಕ್ ಕೂಡಾ ಹುಟ್ಟು ಕುರುಡನಾದ.ಮೊದಲ ಮಗ ಕುರುಡನಾದ ಹೇಗೋ ಸರಿ,ಆದರೆ ಹುಟ್ಟಿದ ಎರಡನೇ ಮಗುವಿಗು ಅದೇ ಪರಿಸ್ಥಿತಿ ಅಂದರೆ ಹೆತ್ತವರಿಗೆ ಹೇಗಾಗಿರುವುದು ಬೇಡ. ಅದರಲ್ಲಿಯೂ ತಂದೆ ರಾಜನ್ ಅವರಂತೂ ಕಂಗಾಲಾಗಿಯೇ ಹೋಗಿದ್ದರು. ಆದರೆ ಸ್ನೇಹಲತಾ ಮಾತ್ರ ಬೇರೆ ಹೆಣ್ಣು ಮಕ್ಕಳಂತೆ ಅಳುತ್ತ ಮೂಲೆಯಲ್ಲಿ ಸುಮ್ಮನೆ ಕೂರಲಿಲ್ಲ.ತಮ್ಮ ಅಂಧ ಮಕ್ಕಳಿಗೆ ಭವಿಷ್ಯ ರೂಪಿಸೆಯೆ ರೂಪಿಸುತ್ತೇನೆ ಎಂದು ಪಣ ತೊಟ್ಟು ಮುಂದೆ ಹೊರಟರು.ಗಂಡ ರಾಜನ್ ಕೂಡಾ ಹೆಂಡತಿಯನ್ನು ನಡು ನೀರಿನಲ್ಲಿ ಕೈ ಬಿಡಲಿಲ್ಲ,ಬದಲಾಗಿ ಅವರ ಬೆನ್ನೆಲಬಾಗಿ ಅವರ ಹಿಂದೆ ನಿಂತರು.

ಹೀಗೆ ಅವರ ಸಂಸಾರದಲ್ಲಿ ಸರಿಗಮಪ ಶುರುವಾಯಿತು. ವೈಯಕ್ತಿಕವಾಗಿ ನಾನು ರೋಷನ್ ಮತ್ತು ಅವರ ಕುಟುಂಬದವರನ್ನು ಹತ್ತಿರದಿಂದ ಕಂಡವಳು. ಮಾನ್ಯ ಮಾಜಿ ರಾಷ್ಟಪತಿ ಎ.ಪಿ.ಜೆ ಅಬ್ದುಲ ಕಲಾಂ ಅವರು ರೋಷನ್-ಋತ್ವಿಕ್ ಮನೆಗೆ ಬಂದು ಹೋದ ಮೇಲೆ ಮಾಧ್ಯಮಗಳ ಕಣ್ಣಿಗೆ ಇತ್ತೀಚಿಗೆ ಇವರು ಹೆಚ್ಚಾಗಿ ಕಾಣಿಸುತ್ತಿರಬಹುದು.ಆದರೆ ರೋಷನ್ -ಋತ್ವಿಕ್ ನಿನ್ನೆ ಮೊನ್ನೆ ಹುಟ್ಟಿಕೊಂಡಂತಹ ಗಾಯಕರಲ್ಲ. ೨೫ ವರ್ಷಗಳ ಹಿಂದೆಯೇ ಧಾರವಾಡದಲ್ಲಿ ಇವರನ್ನು ಸೆಲೆಬ್ರೆಟಿ ರೂಪದಲ್ಲಿ ನೋಡುತ್ತಿದ್ದರು.ನಾನು ಬಿಎ ಪದವಿಗಾಗಿ ಧಾರವಾಡದ ಕರ್ನಾಟಕ ಕಾಲೇಜಿಗೆ ಸೇರಿಕೊಂಡಾಗ ರೋಷನ್ ಬಿಎ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ. ರೋಷನ್ ನನ್ನ ಸೀನಿಯರ್ ಅನ್ನುವುದಕ್ಕಿಂತ ಅವನು ನನ್ನ ಒಳ್ಳೆಯ ಸ್ನೇಹಿತ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ನನಗೆ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಧ್ವನಿ ರೋಷನ್ ನಲ್ಲಿ ಕಾಣುತ್ತಿದ್ದೆ. ಹಾಗಾಗಿ ರೋಷನ್ ನನ್ನು ನಾನು ಜೂನಿಯರ್ ಎಸ್.ಪಿ.ಬಿ ಎಂದೇ ಕರೆಯುತ್ತಿದ್ದೆ.

(ಇಪ್ಪತ್ತು ವರ್ಷದ ಹಿಂದೆ ಅಂಬಿಕಾನಗರದ ಕಾರ್ಯಕ್ರಮದಲ್ಲಿ ಹಾಡಿದಂತಹ ಕ್ಷಣ)

ಧಾರವಾಡ ಕರ್ನಾಟಕ ಕಾಲೇಜಿನ ಯಾವ ಮೂಲೆಯಲ್ಲಿಯೇ ಕಾರ್ಯಕ್ರಮ ನಡೆಯಲಿ ಅಲ್ಲಿ ರೋಷನ್ ನ ಹಾಡು ಕೇಳುತ್ತಿತ್ತು. ಅದೇ ರೀತಿ ಧಾರವಾಡದ ಯಾವ ಮೂಲೆಯಲ್ಲಿ ಕಾರ್ಯಕ್ರಮ ನಡೆಯಲಿ ಅಲ್ಲಿ ರೋಷನ್ -ಋತ್ವಿಕ್ ಇಬ್ಬರ ಹಾಡು ಇರುತ್ತಿತ್ತು.ಧಾರವಾಡ ಕೇವಲ ಕವಿಗಳ ಬಿಡಷ್ಟೇ ಅಲ್ಲ, ಗಾಯಕರ ತವರು ಮನೆಯು ಹೌದು. ಅದರಲ್ಲಿ ರೋಷನ್-ಋತ್ವಿಕ್ ನಂತಹ ಗಾಯಕರು ಓದಿದ್ದು, ಕಲಿದ್ದು ಭಾಗಶಃ ಆ ಪುಣ್ಯಭೂಮಿ ಧಾರವಾಡದಲ್ಲಿ ಎಂದು ಹೇಳಲು ಹೆಮ್ಮೆಯಾಗುತ್ತದೆ.

ಎಷ್ಟೋ ಸಾರಿ ರೋಷನ್-ಋತ್ವಿಕ್ ನ ಜೊತೆ ಕಾಲ ಕಳೆಯುವಾಗ ನಾನು ಕುರುಡೀಯೋ ಅಥವಾ ರೋಷನ್-ಋತ್ವಿಕ್ ಕುರುಡರೋ ಅನ್ನುವಂತಹ ಕಕ್ಕಾಬಿಕ್ಕಿಯಾದ ಪ್ರಸಂಗಗಳು ಬಂದಿವೆ. ರೋಷನ್ ಮನೆಯಲ್ಲಿ ಸಾವಿರಕ್ಕೂ ಹೆಚ್ಚು ಹಾಡಿನ ಸಿಡಿಗಳಿದ್ದವು. ಅವುಗಳಲ್ಲಿ ನನಗೆ ಬೇಕಾದ ಸಿಡಿಯನ್ನು ಹುಡುಕಲು ಕಣ್ಣಿದ್ದು ನಾನು ಹರಸಾಹಸ ಪಡುತ್ತಿದ್ದೆ. ಆದರೆ ರೋಷನ್ ನಗುತ್ತ ಆ ಸಾವಿರ ಸಿಡಿಗಳಿಂದ ನನಗೆ ಬೇಕಾದ ಸಿಡಿಯನ್ನು ತಕ್ಷಣ ಹುಡುಕಿ ನನ್ನ ಕೈಗೆ ಇಡುತ್ತಿದ್ದ. ಇನ್ನು ಕೆಲವೊಮ್ಮೆ ಅವರ ಅಮ್ಮನ ಕಿವಿ ಓಲೆಯ ತಿರುಪು ಕೈ ಜಾರಿ ಕೆಳಗೆ ಬಿದ್ದರೆ ರೋಷನ್ ಅದನ್ನು ಹುಡುಕಿ ಕೊಡುತ್ತಿದ್ದ. ರೋಷನ್ ಎಲ್ಲರಂತೆ ಸಹಜವಾಗಿಯೇ ಓಡಾಡುತ್ತಿದ್ದ, ಮೊಬೈಲ್ ಫೋನ್ ಉಪಯೋಗಿಸುತ್ತಿದ್ದ.ಕಾಲೇಜಿನಲ್ಲಿ ಬ್ರೇಲ್ ಲಿಪಿಯ ಮೂಲಕ ಓದುತ್ತಿದ್ದ. ಪರೀಕ್ಷೆಯಲ್ಲಿ ಬರುವ ಪ್ರಶ್ನೆ ಪತ್ರಿಕೆಗಳಿಗೆ ರೋಷನ್ ಬಾಯಿಂದ ಉತ್ತರವನ್ನು ಹೇಳುತ್ತಿದ್ದ, ಅವನ ಉತ್ತರಕ್ಕೆ ಇನ್ನೊಬ್ಬ ಲೇಖನಿ ಹಿಡಿಯುತ್ತಿದ್ದ. ಓದಿನಲ್ಲೂ ರೋಷನ್ ಮುಂದೆಯಿದ್ದ.ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದ. ಜಾಲಿಯಾಗಿ ಎಲ್ಲರನ್ನು ನಗಿಸುತ್ತಿದ್ದ, ಕಾಲು ಎಳೆಯುತ್ತಿದ್ದ. ಋತ್ವಿಕ್ ಕೂಡಾ ಎಷ್ಟೋ ಸಾರಿ ಸಂಗೀತದ ಟ್ಯೂನ್ ಶುರುವಾಗುತ್ತಿದ್ದಂತೆ ಯಾವ ಹಾಡು,ಯಾವ ರಾಗ ಎಂದು ತಟ್ಟಂತ ಹೇಳಿ ಬಿಡುತ್ತಿದ್ದ.ಅವರಲ್ಲಿನ ಕುರುಡುತ್ವವನ್ನು ಎಲ್ಲರಂತೆನಾನು ಹುಡುಕುತ್ತಿದ್ದೆ.ಆದರೆ ಎಂದು ಅವರು ಕುರುಡರ ರೀತಿ ನನ್ನ ಕಣ್ಣಿಗೆ ಬಿಳಲೇ ಇಲ್ಲ.ಅವರುಯಾರ ಮೇಲೆಯೂ ಅವಲಂಬಿತರಾಗಿರಲಿಲ್ಲ.ಅವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಿದ್ದರು.

ರೋಷನ್ ಮನೆಗೆ ಹೋದಾಗಲೆಲ್ಲ ಋತ್ವಿಕ್ ಮನೆಯ ಒಳಗೆ ಇದ್ದವನು ಶಾಲಿನಿ ದೀದಿ… ಎಂದುಕೂಗುತ್ತ ನನ್ನ ಪಕ್ಕದಲ್ಲಿಯೇ ಬಂದು ಕೂಡುತ್ತಿದ್ದ.ಅವನ ಮಾತೇ ಸಂಗೀತ, ಅವನ ತಲೆಯೇ ಸಂಗೀತದ ವಾದ್ಯಗಳಾಗಿದ್ದವು. ನನ್ನ ಪ್ರಶ್ನೆಗಳಿಗೆ ಅವನು ಸಂಗೀತದಲ್ಲೇ ಉತ್ತರಿಸುತ್ತಿದ್ದ. ಸಂಗೀತ ಅವನ ನರನಾಡಿಯಲ್ಲಿ ಬೆರೆತು ಹೋಗಿತ್ತು. ಅವನ ಗ್ರಹಿಕಾ ಶಕ್ತಿ ಅದ್ಭುತವಾಗಿತ್ತು. ಯಾವ ಕ್ಷಣದಲ್ಲಿಯ ಯಾವ ವಿಷಯಗಳೇ ಆಗಲಿ, ಎಲ್ಲಿ ನಡೆದಿತ್ತೋ ಎಲ್ಲವನ್ನು ವರದಿಯ ರೂಪದಲ್ಲಿ ನಾನು ಮನೆಗೆ ಹೋದಾಗ ನನಗೆ ಒಪ್ಪಿಸಿ ಬಿಡುತ್ತಿದ್ದ. ಅವನಲ್ಲಿದ್ದ ಮುಗ್ಧತೆ ನೋಡಿ ಎಷ್ಟೋ ಸರಿ ಮನಸ್ಸಿನೊಳಗೆ ಕಣ್ಣಿರಿಟ್ಟಿದ್ದೇನೆ.

(ರೋಷನ್-ಋತ್ವಿಕ್ ಅವರ ಸಾಕ್ಷ್ಯಚಿತ್ರ ಶೂಟಿಂಗ್ ನಲ್ಲಿ ನಿರ್ದೇಶಕ ಹೂಲಿಶೇಖರ್ ಅವರ ಜೊತೆ)

ಈ ಸಹೋದರರಿಗೆ ತೆರೆಯ ಮುಂದೆ ಬರಲು ಸಾಕಷ್ಟು ಅವಕಾಶಗಳು ಸಿಕ್ಕಿದ್ದವು.ಇಪ್ಪತ್ತು ವರ್ಷದಹಿಂದೆ ದೂರದರ್ಶನ ವಾಹಿನಿಗಾಗಿ ರೋಷನ್-ರಿತ್ವಿಕ್ ಕುರಿತು ಸಾಕ್ಷ್ಯ ಚಿತ್ರವನ್ನು ಮಾಡಲಾಗಿತ್ತು. ಆ ಸಾಕ್ಷ್ಯ ಚಿತ್ರವನ್ನು ನನ್ನ ತಂದೆ ಹೂಲಿಶೇಖರ್ ನಿರ್ದೇಶನ ಮಾಡಿದ್ದರು.ಇನ್ನೊಂದು ವಾಹಿನಿ ಯೊಂದಕ್ಕೆ ಪಂಚಾಕ್ಷರಿ ಗವಾಹಿಗಳ ಕುರಿತು ಧಾರವಾಹಿ ಮಾಡಲು ನಮ್ಮ ತಂದೆ ನಿರ್ಧರಿಸಿದ್ದರು. ಆಗ ಪಂಚಾಕ್ಷರಿ ಗವಾಹಿಗಳ ಪಾತ್ರಕ್ಕೆ ರೋಷನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ರೋಷನ್ ಆಗತಾನೆ ಒಳ್ಳೆಯ ಕೆಲಸಕ್ಕೆ ಸೇರಿದ್ದರಿಂದ ರಜೆಯ ಕೊರತೆಯಿರುವುದಾಗಿ ಅಪ್ಪನ ಹತ್ತಿರ ಹೇಳಿಕೊಂಡಿದ್ದ. ಒಂದು ವೇಳೆ ಆ ಪಾತ್ರದಲ್ಲಿ ರೋಷನ್ ನಟಿಸಿದ್ದರೇ ಪಂಚಾಕ್ಷರಿ ಗವಾಹಿ ಗಳಾಗಿ ಈ ಹಿಂದೆಯೇ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ. ಆದರೆ ಅವನಲ್ಲಿ ನಟನಾಗುವ ಆಸೆ ಕ್ಕಿಂತ ಹಿನ್ನೆಲೆ ಗಾಯಕನಾಗ ಬೇಕೆನ್ನುವ ಕನಸ್ಸುಗಳಿದ್ದವು. ಅದಕ್ಕಾಗಿ ಅವನು ಸಾಕಷ್ಟು ತಯಾರಿಯು ಕೂಡಾ ಮಾಡಿಕೊಂಡಿದ್ದ.

ಅದರಂತೆ ಅವರ ತಾಯಿಯು ಆ ಮಕ್ಕಳನ್ನು ಕಟ್ಟಿಕೊಂಡು ಓಡಾಡಿದ ಆಡಿಷನ್ ಸಂಖ್ಯೆಗಳಿಗೆ ಲೆಕ್ಕವಿಲ್ಲ.ಆಡಿಷನ್ ನಲ್ಲಿ ಆಗುವ ತೊಂದರೆಗಳು,ಕಷ್ಟಗಳು ಬಹುಶಃ ಆಡಿಷನ್ ಕೊಟ್ಟವರಿಗೆ ಅಲ್ಲಿಯ ಪರಿಸ್ಥಿತಿಯ ಅರಿವಿರುತ್ತದೆ. ಸರಿಯಾದ ಕ್ಯೂ ವ್ಯವಸ್ಥೆ ಇರುವುದಿಲ್ಲ. ಸರಿಯಾದ ಸಮಯದಲ್ಲಿಅವರ ಸರಧಿ ಬರುವುದಿಲ್ಲ. ಬಿಸಿಲಿನಲ್ಲಿ ನಿಲ್ಲಬೇಕು.ಅಷ್ಟೆಲ್ಲ ಕಷ್ಟ ಪಟ್ಟ ಮೇಲೆ ಆಯ್ಕೆ ಲಕ್ಕಿ ಡ್ರಾ ರೀತಿಯಲ್ಲಿಯೇ ನಡೆಯುತ್ತದೆ. ಆಯ್ಕೆಯಾದರು ಕೆಲವು ಹಂತದವರೆಗೂ ಹೋಗಿ ವಾಪಸ್ಸಾದಂತಹ ಘಟನೆಗಳು ರೋಷನ್ – ಋತ್ವಿಕ್ ತಾಯಿಗೂ ಆಗಿವೆ. ಆದರೆ ಅವರು ಎಂದು

ಧೃತಿಗೆಡಲಿಲ್ಲ.ತಮ್ಮ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸಲಿಲ್ಲ.ಯಾವುದೇ ಊರಿನಲ್ಲಿ ಯಾವುದೇ ಭಾಷೆಯ ಆಡಿಷನ್ ನಡೆಯಲ್ಲಿ ಅಲ್ಲಿಗೆ ತಪ್ಪದೆ ಈ ತಾಯಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ತಾಯಿಗೆ ತಕ್ಕ ಮಕ್ಕಳಾಗಿದ್ದ ರೋಷನ್-ಋತ್ವಿಕ್ ಕೂಡಾ ತಮ್ಮ ತಾಯಿ ಶ್ರಮವನ್ನು ವ್ಯರ್ಥ ಮಾಡದೇ ಎಲ್ಲ ಭಾಷೆಯಲ್ಲಿಯೂ ಹಾಡುವುದನ್ನು ಕಲಿತಿದ್ದರು. ಹೀಗೆ ಆಡಿಷನ್ ಬೆನ್ನತ್ತಿ ಓಡಾಡುತ್ತಿದ್ದ ಈ ಅಣ್ಣ-ತಮ್ಮ ಬಾಲಿವುಡ್ ಸಂಗೀತ ನಿರ್ದೇಶಕ ಬಪ್ಪಿಲಹರಿ ಹಿಂದಿ ಸಂಗೀತದ ಆಡಿಷನ್ ನಲ್ಲಿ ರೋಷನ್ ನನ್ನು ಆಯ್ಕೆ ಮಾಡಿದ್ದರು. ಕೆಲವು ಹಂತಗಳವರೆಗೂ ರೋಷನ್ ತನ್ನ ಗಾನ ಸುಧೆಯನ್ನು ತೋರಿಸಿ ಸೈ ಎನ್ನಿಸಿಕೊಂಡಿದ್ದ. ಎಲ್ಲಾ ಭಾಷೆಯ ರಿಯಾಲಿಟಿ ಶೋ ಗಳಲ್ಲಿ ದೊಡ್ಡ ದೊಡ್ಡ ಸಂಗೀತ ದಿಗ್ಗಜರ ಮುಂದೆ ಈ ಸಹೋದರರು ಹಾಡಿದ್ದಾರೆ.ಎಲ್ಲರೂ ಕೂಡಾ ಈ ಸಹೋದರರ ಬೆನ್ನು ತಟ್ಟಿ ಭೇಷ್ ಅಂದಿದ್ದಾರೆ. ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಆದರೆ ಇವರೆಗೂ ಸಿನಿಮಾರಂಗದಲ್ಲಿ ಯಾವುದೇ ಬುಲಾವುಗಳು ಬರಲಿಲ್ಲ. ಸಂಗೀತವನ್ನೇ ಅರೆದು ಕುಡಿದ ಈ ಸಹೋದರರಿಗೆ ಸಿನಿಮಾದಲ್ಲಿ ಹಾಡಲು ಒಂದು ಅವಕಾಶ ಕೊಟ್ಟಿದ್ದರೇ ಈಗ ಅವರು ಎಲ್ಲಿಯೋ ಇರುತ್ತಿದ್ದರು.

ಬೇಸತ್ತ ರೋಷನ್ ಹಾಡನ್ನು ಕೊನೆಗೆ ವೃತ್ತಿಯಾಗಿ ತಗೆದು ಕೊಳ್ಳದೆ ಹವ್ಯಾಸವಾಗಿ ತಗೆದುಕೊಂಡ. ಬದುಕಿನ ಬಂಡಿ ಓಡಿಸಲು ಬೇರೆ ಕೆಲಸಕ್ಕೆ ಸೇರಿದ. ತನ್ನ ತಾಯಿ ನಿರೀಕ್ಷಿಸಿದಂತೆ ತನ್ನ ಕಾಲ ಮೇಲೆ ತಾನೇ ನಿಂತ. ಅವನಿಗೆ ಮದುವೆಯು ಆಯಿತು. ಮಗಳು ಮನೆಗೆ ಬಂದಳು. ಸುಖ ಉಣ್ಣುವ ದಿನಗಳು ಬಂದವು ಎನ್ನುವಷ್ಟರಲ್ಲಿ ಮತ್ತೆ ದೊಡ್ಡ ಆಘಾತ ಈ ಕುಟುಂಬಕ್ಕೆ ಬಂದು ಬಡಿಯಿತು. ಎದೆಯೆತ್ತರಕ್ಕೆ ಬೆಳೆದ ಮಗ ರೋಷನ್ ಇಹಲೋಕ ಸೇರಿಕೊಂಡ.ಸ್ನೇಹಲತಾ ಅವರ ಬಲಗೈ ಬರಿದಾಯಿತು. ಮತ್ತದೇ ಕತ್ತಲು ಕವಿಯಿತು. ರೋಷನ್ ನಮ್ಮನೆಲ್ಲ ಆಗಲಿ ವರ್ಷಗಳು ಕಳೆದವು. ಆದರೆ ರೋಷನ್ ನ್ನ ನೆನಪುಗಳು ನನ್ನ ಮನಸ್ಸಿನಲ್ಲಿ ಇನ್ನು ಹಸಿರಾಗಿದೆ. ರೋಷನ್ ನನ್ನು ಕೊನೆಯ ಸಾರಿ ನಾನು ಭೇಟಿಯಾಗಿದ್ದು ನನ್ನ ಮದುವೆ ಆಮಂತ್ರಣ ಕೊಡಲು ಅವರ ಮನೆಗೆ ಹೋಗಿದ್ದೆ.ಆಗ ಅವನ ಮದುವೆ ದಿನ ಕೂಡಾ ನಿಗಧಿಯಾಗಿತ್ತು. ನನ್ನ ಮದುವೆಗೂ, ರೋಷನ್ ಮದುವೆಗೂ ಕೇವಲ ಒಂದೇ ತಿಂಗಳು ಅಂತರವಿತ್ತು. ಅವನು ನನ್ನ ಮದುವೆಗೆ ಬರಲಿಲ್ಲ ಎನ್ನುವ ಹುಸಿ ಮುನಿಸು ಅವನ ಮೇಲಿತ್ತು. ಆದರೆ ಒಂದು ದಿನ ಸುಮಲತಾ ಆಂಟಿ ಕರೆ ಮಾಡಿ ನಿನ್ನ ಗೆಳೆಯ ರೋಷನ್ ಇನ್ನಿಲ್ಲ ಎಂದಾಗ ನನ್ನ ಬಾಯಿಂದ ಮಾತುಗಳೇ ಹೊರಡಲಿಲ್ಲ.ಕಣ್ಣುಗಳೆಲ್ಲ ತೇವವಾದವು. ರೋಷನ್ ಕಂಡ ಕನಸ್ಸು ಕನಸ್ಸಾಗೆ ಹೋಯಿತಲ್ಲ ಎನ್ನುವ ದುಃಖ ಕಡಲೊಡೆಯಿತು.

ಸ್ನೇಹಲತಾ ಅವರು ಜೀವನದಲ್ಲಿ ಸೊಲ್ಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಂಡವರಲ್ಲ.ರೋಷನ್ ನ ಕನಸ್ಸನ್ನು ಈಡೇರಿಸಲು ಋತ್ವಿಕ್ ನ ಮೂಲಕ ಮತ್ತೆ ಸಜ್ಜಾಗಿ ನಿಂತಿದ್ದಾರೆ. ಒಡಲಿನಲ್ಲಿ ಸಾಕಷ್ಟು ದುಃಖಗಳು ತುಂಬಿದ್ದರು, ಋತ್ವಿಕ್ ಗಾಗಿ ಅದೇ ಹುರುಪು, ಅದೇ ಉತ್ಸಾಹ ಅವರಲ್ಲಿ ತುಂಬಿಕೊಂಡಿದ್ದಾರೆ.ಈಗಲಾದರೂ ಋತ್ವಿಕ್ ಗೆ ಸಿನಿಮಾದಲ್ಲಿ ಹಾಡುವ ಅವಕಾಶ ಚಿತ್ರರಂಗ ದವರು ಕೊಟ್ಟರೆ ಒಳ್ಳೆಯ ಹಿನ್ನೆಲೆ ಗಾಯಕನಾಗುತ್ತಾನೆ. ಮತ್ತು ನೂರಾರು ಅಂಧರಿಗೆ ಮಾದರಿ ಯಾಗಿ ನಿಲ್ಲುತ್ತಾನೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಅಂಧರಿಗೂ ಸ್ಪರ್ಧಿಸುವ ತಾಕತ್ತು ಇದೆ ಎಂದು ನಿರೂಪಿಸಿ ತೋರಿಸುತ್ತಾನೆ. ಆದರೆ ಅವನಿಗೆ ಬೇಕಾಗಿರುವುದು ಒಂದೇ ಒಂದು ಉತ್ತಮ ಅವಕಾಶವಷ್ಟೇ. ಆ ಅವಕಾಶ ಸಿಕ್ಕರೆ ಮೇಲಿರುವ ರೋಷನ್ ಆತ್ಮಕ್ಕೂ ಶಾಂತಿ ಸಿಗುತ್ತದೆ.

(ಮಾಜಿ ರಾಷ್ಟಪತಿ ಎ.ಪಿ.ಜೆ ಅಬ್ದುಲ ಕಲಾಂ ಅವರು ರೋಷನ್-ಋತ್ವಿಕ್ ಮನೆಗೆ ಬಂದ ಕ್ಷಣ)

ರೋಷನ್ -ಋತ್ವಿಕ್ ತಮ್ಮ ಪ್ರತಿಭೆಯಿಂದ ಎಷ್ಟೋ ಅಭಿಮಾನಿಗಳನ್ನು ಗಳಿಸಿದ್ದಾರೆ. ಹಿರಿಯ ಅಭಿಮಾನಿಗಳು ತಮ್ಮ ಕಣ್ಣುಗಳನ್ನು ಇವರಿಗೆ ದಾನ ಮಾಡಲು ಮುಂದಾಗಿದ್ದಾರೆ ಎಂದರೆ ಅವರ ಹಾಡಿನ ಮೋಡಿ ಹೇಗಿರಬಹುದು ಎಂದು ಇದರಲ್ಲಿಯೇ ಊಹಿಸಿ ನೋಡಿ.ರಾಜನ್-ಸ್ನೇಹಲತಾ ದಂಪತಿಗೆ ಕುರುಡು ಮಕ್ಕಳು ಹುಟ್ಟಿದರು ಎಂದು ಕೊರಗುವ ಕಾಲ ಎಷ್ಟೋ ವರ್ಷಗಳ ಹಿಂದೆಯೇ ಈ ಮಕ್ಕಳು ದೂರ ಮಾಡಿದ್ದಾರೆ. ರೋಷನ್ -ಋತ್ವಿಕ್ ಪ್ರತಿಭೆಯನ್ನು ಹುಡುಕಿಕೊಂಡು ಮಾನ್ಯ ಮಾಜಿ ರಾಷ್ಟಪತಿ ಎ.ಪಿ.ಜೆ ಅಬ್ದುಲ ಕಲಾಂ ಅವರೇ ಅವರ ಮನೆಗೆ ಹೋಗಿದ್ದಲ್ಲದೆ, ಋತ್ವಿಕ್ ನನ್ನು ‘ಅಮೂಲ್ಯ ರತ್ನ’ ಎಂದು ಕರೆದಿದ್ದರು.ಈ ಭಾಗ್ಯ ಯಾವ ಅಪ್ಪ-ಅಮ್ಮನಿಗೆ ಸಿಗುತ್ತದೆ ಹೇಳಿ. ಎಲ್ಲ ಮಕ್ಕಳು ತಮ್ಮ ಅಪ್ಪ-ಅಮ್ಮನಿಂದ ಸಮಾಜಕ್ಕೆ ಪರಿಚಿತರಾದರೆ, ರೋಷನ್- ಋತ್ವಿಕ್ ನ ಅಪ್ಪ-ಅಮ್ಮ ತಮ್ಮ ಮಕ್ಕಳಿಂದಲೇ ಸಮಾಜಕ್ಕೆ ಚಿರಪರಿಚಿತರಾದರು ಎಂದು ಹೇಳಿದರೆ ತಪ್ಪಾಗಲಾರದು.

ಎಷ್ಟೋ ಜನರಿಗೆ ಸ್ನೇಹಲತಾ ಮತ್ತು ರಾಜನ್ ಅವರ ಹಿನ್ನೆಲೆ ಗೊತ್ತಿಲ್ಲ. ಮೇಲವರ್ಗದ ಕುಟುಂಬದವರಾದರು ಅವರು ಯಾವ ವೇದಿಕೆಯಲ್ಲಿಯು ತಮ್ಮ ಹಿನ್ನೆಲೆಯನ್ನು ತೋರ್ಪಡಿಸುತ್ತಿರಲಿಲ್ಲ.ತಮ್ಮ ಮಕ್ಕಳಿಗೆ ಅವಕಾಶ ಕೊಟ್ಟನಂತಹ ಸಣ್ಣವೇದಿಕೆಯಾಗಿರಬಹುದು ಅಥವಾ ದೊಡ್ಡ ವೇದಿಕೆಯಾಗಿರಬಹುದು ಅವಕಾಶ ಕೊಟ್ಟವರಿಗೆ ಧನ್ಯವಾದ ಹೇಳಲು ಎಂದು ಮರೆಯುತ್ತಿರಲಿಲ್ಲ.ಕೆಲವು ಸಂದರ್ಭದಲ್ಲಿ ಅವಕಾಶ ಕೊಟ್ಟಂತಹ ಸಂಘಟಕರ ಕಾಲಿಗೆ ಸ್ನೇಹಲತಾ ನಮಸ್ತರಿಸಿದ್ದನ್ನು ನಾನು ನೋಡಿದ್ದೇನೆ. ಅತ್ಯಂತ ಸರಳ ವ್ಯಕ್ತಿತ್ವ ಈ ದಂಪತಿಗಳಲ್ಲಿ ಮನೆ ಮಾಡಿತ್ತು.

ಈಗ ಋತ್ವಿಕ್ ಒಂಟಿಯಾಗಿದ್ದಾನೆ.ಎಲ್ಲ ವೇದಿಕೆಯಲ್ಲಿ ಋತ್ವಿಕ್ ಗೆ ಹೆಗಲಾಗಿ ರೋಷನ್ ಅವನ ಪಕ್ಕದಲ್ಲಿ ನಿಲ್ಲುತ್ತಿದ್ದ.ಆದರೆ ಇಂದು ಎಲ್ಲ ವೇದಿಕೆಯಲ್ಲಿ ಋತ್ವಿಕ್ ಒಬ್ಬನೇ ಹಾಡಬೇಕಿದೆ. ಸರಿಗಮಪದಲ್ಲಿ ಋತ್ವಿಕ್ ಒಬ್ಬನೇ ಹಾಡುತ್ತಿರುವಾಗ ಪಕ್ಕದಲ್ಲಿ ರೋಷನ್ ಇಲ್ಲದಿರುವಿಕೆ ನನಗೆ ದುಃಖ ತರಿಸುತ್ತದೆ.ಈ ಕಾರಣಕ್ಕಾಗಿಯೇ ನಾನು ಸರಿಗಮಪ ದ ಈ ಸರಣಿಯನ್ನು ನೋಡಲು ಧೈರ್ಯವಾಗುತ್ತಿಲ್ಲ.ಸ್ನೇಹಲತಾ ಅವರ ಬರಿದಾದ ಬಲಗೈಯನ್ನು ಋತ್ವಿಕ್ ಯೇ ತುಂಬ ಬೇಕಿದೆ. ಋತ್ವಿಕ್ ಈ ಸರಣಿಯ ಸರಿಗಮಪ ರಿಯಾಲಿಟಿ ಶೋ ನ ವಿಜೇತನಾಗಲಿ, ಸಿನಿಮಾಗಳಲ್ಲಿ ಹಾಡುವ ಅವಕಾಶಗಳು ಇವನನ್ನು ಹುಡುಕಿಕೊಂಡು ಬರಲಿ, ರೋಷನ್ ಕಂಡ ಕನಸ್ಸುಗಳೆಲ್ಲ ತನ್ನ ತಮ್ಮ ಋತ್ವಿಕ್ ನಿಂದ ನನಸ್ಸಾಗಲಿ, ಈ ಕುಟುಂಬಕ್ಕೆ ಇನ್ನು ಯಾವ ಕಷ್ಟಗಳು ಬಾರದೆ ಇರಲಿ ಎಂದು ಆ ಭಗವಂತನಲ್ಲಿ ಪ್ರಾಥಿಸುತ್ತೇನೆ..

ಕೊನೆಯದಾಗಿ ನನ್ನ ಸಹೋದರ ಋತ್ವಿಕ್ ಗೆ ಶುಭವಾಗಲಿ,ಆಲ್ ದಿ ಬೆಸ್ಟ್ ….

ಲೇಖನ : ಶಾಲಿನಿ ಪ್ರದೀಪ್

aakritikannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW