ಅನಂತ ದಾಂಪತ್ಯಗೀತೆ : ಭಾರತಿ ಹೆಗಡೆ

ಅನಂತನಾಗ್ ಜತೆ ಸಂದರ್ಶನಕ್ಕೆಂದು ಪತ್ರಕರ್ತರಾದ ಭಾರತಿ ಹೆಗಡೆ ಅವರು, ಡಿ.ಸಿ.ನಾಗೇಶ್ ಅವರು ಜೊತೆಗೆ  ಕುಳಿತಾಗ 3 ತಾಸುಗಳಿಗೂ ಮಿಗಿಲು ಮಾತನಾಡಿದ್ದು ಅವರು ಮರೆಯಲಾಗದ ಸಂಗತಿ. ತಮ್ಮ ದಾಂಪತ್ಯ ಜೀವನವಷ್ಟೇ ಅಲ್ಲ, ವೃತ್ತಿ ಬದುಕಿನ ಸಾಕಷ್ಟು ಪುಟಗಳನ್ನು ಅಂದು ತೆರೆದಿಟ್ಟಿದ್ದರು.  ಅವರ ಸಹಯಾನ ಅಂಕಣಕ್ಕೆ ಅವರ ದಾಂಪತ್ಯ ಜೀವನದ ಸಂಗತಿಗಳನ್ನು ಮಾತ್ರ ತೆರೆದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

ಸುಖ ಸಂಸಾರಕ್ಕೆ ಅದೆಷ್ಟು ಸೂತ್ರಗಳು…

ಇಂಟ್ರೋ – ಕನ್ನಡದ ಪ್ರತಿಭಾವಂತ ನಟ ಎಂದೇ ಗುರುತಿಸಿಕೊಂಡಿರುವ ಅನಂತನಾಗ್ ಜೊತೆ ಮಾತನಾಡುವುದೆಂದರೆ ಅದೊಂದು ಬೌದ್ಧಿಕ ಕಸರತ್ತು. ರಂಗಭೂಮಿ, ಸಾಹಿತ್ಯ, ಸಿನಿಮಾ, ರಾಜಕೀಯ ಹೀಗೆ ಎಲ್ಲವೂ ಮಾತುಕತೆಯಲ್ಲಿ ಹಾದುಹೋಗುತ್ತವೆ. ವಿಭಿನ್ನ ಪಾತ್ರಗಳ ಮೂಲಕ ಜನಮನವನ್ನು ಗೆದ್ದ ಅನಂತ್ನಾಗ್, ಒಂದು ಕಾಲದ ಕನ್ನಡ ಚಿತ್ರರಂಗದ ಚಾಕ್ಲೇಟ್ ಹೀರೋ. ಅದೆಷ್ಟೋ ಹೆಂಗಳೆಯರ ಮನ ಕದ್ದವರು. ತಾನು ಮದುವೆಯಾಗುವ ಹುಡುಗ ಅನಂತನಾಗ್ ಥರ ಇರಬೇಕು ಎಂದು ಬಯಸಿದ ಸಾಕಷ್ಟು ಹುಡುಗಿಯರಿದ್ದರು. ಹೀಗೆ ಚಿತ್ರರಸಿಕರ ಮನಕದ್ದವರು ಇವರಾದರೆ, ಆಟೋರಾಜ ಸಿನಿಮಾದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಿತರಾದವರು ಗಾಯತ್ರಿ. ಇಬ್ಬರೂ ಸಿನಿಮಾದಲ್ಲಿ ಮಹತ್ತರ ಛಾಪನ್ನು ಮೂಡಿಸಿದವರು. ಈಗಲೂ ವೈವಿದ್ಯಮಯ ಪಾತ್ರವನ್ನು ಮಾಡುತ್ತಿರುವ ಅನಂತ್ನಾಗ್ಗೆ ಈಗ ವಯಸ್ಸು 67, ಗಾಯಿತ್ರಿಗೆ 52. ಒಬ್ಬ ಮಗಳು ಅದಿತಿ. ಇವರಿಬ್ಬರ ದಾಂಪತ್ಯಕ್ಕೀಗ 30ರ ಹರೆಯ. ಅವರ ದಾಂಪತ್ಯ ಜೀವನದ ಸಹಯಾನವಿದು.

ಫೋಟೋ ಕೃಪೆ : ಭಾರತಿ ಹೆಗಡೆ

ಮನೆಯನು ಬೆಳಗಿದವಳು

ಅನಂತನಾಗ್- ನಾನೂ ಸಿನಿಮಾದಲ್ಲಿದ್ದೆ, ಅವಳೂ ಸಿನಿಮಾದಲ್ಲಿದ್ದಳು. ಅದು 1979-80ರ ಸಮಯ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ನಾರದ ವಿಜಯ’ ಸಿನಿಮಾ ಚಿತ್ರೀಕರಣ. ಅದರಲ್ಲಿ ನಾರದನ ಪಾತ್ರ ಮಾಡುತ್ತಿದ್ದೆ. ಆಗ ಅವಳು ಶಂಕರ್ ಜೊತೆ ‘ಆಟೋರಾಜ’ ಸಿನಿಮಾ ಮಾಡುತ್ತಿದ್ದಳು. ಶಂಕರ್ ಗಾಯತ್ರಿಯನ್ನು ಪರಿಚಯ ಮಾಡಿಸಿದ್ದ. ಆಗ ನಮಗೆ ಮದುವೆಯಾಗುವ ಯಾವ ಭಾವನೆಯೂ ಇರಲಿಲ್ಲ.

ನಾನು ಆನಂದಾಶ್ರಮದಲ್ಲಿ ಬೆಳೆದವನು. ಹಾಗಾಗಿ ಶಿಸ್ತು ಬದ್ಧ ಜೀವನ ನನ್ನದು. ಮನೆಯನ್ನು ಕೂಡ ನೀಟಾಗಿ, ಚೆನ್ನಾಗಿಟ್ಟುಕೊಂಡಿರಬೇಕು. ಎಲ್ಲವೂ ಕ್ರಮಬದ್ಧವಾಗಿರಬೇಕು ನನಗೆ. ಆಗಲೇ ಗಾಯತ್ರಿ ಬೆಂಗಳೂರಿನಲ್ಲಿ ಮನೆ ಮಾಡಿದ್ದಳು. ಒಮ್ಮೆ ಅವರ ಮನೆಗೆ ಹೋದಾಗ ಅವಳು ಮನೆಯನ್ನು ತುಂಬ ನೀಟಾಗಿ ಇಟ್ಟುಕೊಂಡದ್ದು ನೋಡಿದ್ದೆ. ಆಗಲೇ ಮನಸ್ಸಿನಲ್ಲಿ ಒಂದು ಭಾವ ಹೊಕ್ಕಿತ್ತು. ಅಷ್ಟರೊಳಗೆ ನನ್ನ ತಮ್ಮನ ಮದುವೆ ಆಗಿತ್ತು. ಅವನು ನನಗಿಂತ 6 ವರ್ಷ ಚಿಕ್ಕವನು. ಇದರಿಂದ ನಮ್ಮನೆಯಲ್ಲಿ ನನಗೆ ಮದುವೆಯಾಗು ಎಂಬ ಒತ್ತಡ ಬಂತು. ಆಗಲೇ ನನಗೆ 38 ವರ್ಷ ಆಗಿತ್ತು. ಹಾಗಾಗಿ ನಾನು ಮದುವೆ ಕುರಿತು ನಿರ್ಧರಿಸಲೇ ಬೇಕಿತ್ತು. ನನ್ನ ಜೀವನದ ಸಂಗಾತಿ ಸಿನಿಮಾದವರೇ ಆಗಿರಬೇಕು ಎಂದುಕೊಂಡಿದ್ದೆ. ಯಾಕೆಂದರೆ ನಮ್ಮದು ವಿಭಿನ್ನವಾದ ವೃತ್ತಿ. ಹೊರಗಿನವರಿಗೆ ನಮ್ಮ ಜೀವನ ಶೈಲಿ, ಕ್ರಮದ ಕುರಿತು ಅಂದಾಜಿರುವುದಿಲ್ಲ. ಹಾಗಾಗಿ ಗಾಯತ್ರಿಯನ್ನು ಪ್ರಪೋಸ್ ಮಾಡಿದೆ. ಅದಕ್ಕೆ ಅವಳೂ ಒಪ್ಪಿದಳು. ಬಹಳ ಸರಳವಾಗಿ ಮದುವೆ ಆದೆವು. 1985ರಲ್ಲಿ ನಮ್ಮ ಎಂಗೇಜ್ಮೆಂಟ್ ಆಯ್ತು. 1987ರಲ್ಲಿ ಮದುವೆಯಾಯಿತು. ಮದುವೆ ಆದಮೇಲೆ ಸಿನಿಮಾದಲ್ಲಿ ಮುಂದೆ ನಟಿಸುವುದಿಲ್ಲ ಎಂದು ಅವಳೇ ಹೇಳಿದಳು. ನನ್ನ ಮನಸ್ಸಿನಲ್ಲಿಯೂ ಅದೇ ಇತ್ತು. ಆದರೆ ಬಾಯಿಬಿಟ್ಟು ಹೇಳಿರಲಿಲ್ಲ.

ಫೋಟೋ ಕೃಪೆ : ಭಾರತಿ ಹೆಗಡೆ

ಹೀಗೆ ಅಗ್ನಿಸಾಕ್ಷಿಯಾದ ಮೇಲೆ ನನ್ನ ಜೀವನದಲ್ಲಿ ಕೆಲವು ಅಗ್ನಿ ಪರೀಕ್ಷೆಗಳು ನಡೆದವು. ನನ್ನ ತಂದೆಯವರು ತೀರಿಕೊಂಡರು. ಆಮೇಲೆ ಶಂಕರ್ ತೀರಿಕೊಂಡ. ಅಷ್ಟೊತ್ತಿಗಾಗಲೇ ನಾನು ಶಂಕರ್ ಸೇರಿ ತುಂಬ ಪ್ರಾಜೆಕ್ಟ್  ಗಳಿಗೆ ಕೈ ಹಾಕಿದ್ದೆವು. ಹೀಗಾಗಬಹುದು ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರದೇ ಇದ್ದದ್ದರಿಂದ ಸಾಲದ ಹೊರೆ ನನ್ನ ಮೇಲೆ ಬಂತು. ಅದೇ ಸಮಯದಲ್ಲಿ ನಾನು ರಾಜಕೀಯಕ್ಕೂ ಬಂದೆ. 1994ರಲ್ಲಿ ನಾನು ಮಂತ್ರಿ ಆದಮೇಲೆ ಸಿನಿಮಾ ನಿಲ್ಲಿಸಬೇಕಾಯ್ತು. ಮೂರೂವರೆ ವರ್ಷ ಅದನ್ನೂ ನಿಲ್ಲಿಸಿದೆ. ಆ ಸಮಯದಲ್ಲಿ ಮನೆಯನ್ನು ಪೂರ್ತಿ ಅವಳು ನಡೆಸಿದಳು. ಆಗ ನನಗೆ ಅರ್ಥವಾಗ್ತಾ ಹೋಯ್ತು. ಇವಳು ಎಲ್ಲವನ್ನೂ ನಿಭಾಯಿಸಬಲ್ಲಳು ಎಂದು.

1985ರಲ್ಲಿ ನಾನು ಶಂಕರ್ ಸೇರಿ ಸಂಕೇತ್ ಸ್ಟುಡಿಯೋ ಶುರುಮಾಡಿದ್ವಿ. 1995ರಲ್ಲಿ ಅವನು ಹೋದಮೇಲೆ ಅದರ ಸಂಪೂರ್ಣ ಜವಾಬ್ದಾರಿ ನನ್ನ ತಲೆಗೆ ಬಂತು. ಅಷ್ಟರಲ್ಲಿ ನಾನು ಮಂತ್ರಿಯೂ ಆಗಿದ್ದೆ. ಹಾಗಾಗಿ ಎಲ್ಲವನ್ನೂ ನಿಭಾಯಿಸಲು ಕಷ್ಟವಾಗುತ್ತಿತ್ತು. ಆಗ ಈ ಸ್ಟುಡಿಯೋವನ್ನು ಗಾಯತ್ರಿಯೇ ನೋಡಿಕೊಂಡಳು. ಒಂದು ಕಡೆ ಮನೆ, ಮಗಳು ಅದಿತಿ ಆಗಿನ್ನೂ ಚಿಕ್ಕವಳು, ಅವಳನ್ನೂ ನೋಡಿಕೊಂಡು, ಸ್ಟುಡಿಯೋವನ್ನೂ ಚೆನ್ನಾಗಿ ನಿಭಾಯಿಸಿದಳು.

ಹಂತಹಂತವಾಗಿ ಜವಾಬ್ದಾರಿಗಳು ಹೆಚ್ಚಾಗ್ತಾ ಇದ್ದಹಾಗೆ ಅವಳು ಎಲ್ಲವನ್ನೂ ನಿಭಾಯಿಸಲು ಶಕ್ತಳು ಎಂಬುದನ್ನು ಕಂಡುಕೊಂಡೆ. ಹಣಕಾಸಿನ ವಿಚಾರ, ಇನ್ಕಮ್ ಟ್ಯಾಕ್ಸ್ , ಹೀಗೆ ಪ್ರತಿಯೊಂದನ್ನೂ ಅವಳು ನೋಡಿಕೊಂಡಳು. ಇದರಿಂದ ನನಗೆ ಸಲೀಸಾಗುತ್ತ ಹೋಯಿತು. ನಮ್ಮ ಸರ್ಕಾರದ ಅವಧಿ ಮುಗಿದ ಮೇಲೆ ನಾನು ನಟನೆಯಲ್ಲೇ ತೊಡಗಿಕೊಂಡೆ. ಹಣಕಾಸಿನ ಜವಾಬ್ದಾರಿಯನ್ನು ಅವಳು ನೋಡಿಕೊಂಡಿದ್ದಕ್ಕಾಗಿ ಮೊಟ್ಟಮೊದಲ ಸಲ ನಾನು ನನ್ನ ವೃತ್ತಿಯಾದ ನಟನೆಗೆ ಸಂಪೂರ್ಣವಾಗಿ ಗಮನ ಕೊಡಲು ಸಾಧ್ಯವಾಯಿತು. ಇದು ಕಳೆದ 15 ವರ್ಷಗಳ ಸತ್ಯ. ಹೀಗೆ ಅವಳು ಎಲ್ಲ ರೀತಿಯಲ್ಲಿ ನನಗೆ ಬೆಂಬಲವಾಗಿ ನಿಂತಳು.

ಮನವನು ಗೆದ್ದವನು

ಗಾಯತ್ರಿ- ಮದುವೆಗೆ ಅನಂತ್ ಪ್ರಪೋಸ್ ಮಾಡಿದಾಗ ಏನೂ ಅನಿಸಲಿಲ್ಲ. ತುಂಬ ಯೋಚಿಸಿ, ವಿಮರ್ಶಿಸಿ ತೆಗೆದುಕೊಂಡ  ನಿರ್ಧಾರವಲ್ಲ ಇದು. ಹಾಗೆ ನೋಡಿದ್ರೆ ನಾನು ಅವರನ್ನು ಹೀರೋ ಆಗಿ ನೋಡ್ಲೇ ಇಲ್ಲ. ಚೆನ್ನಾಗಿದ್ದರು ನೋಡೋಕೆ ಅದರ ಬಗ್ಗೆ ಪ್ರಶ್ನೆ ಇಲ್ಲ. ಅವರ ಬಣ್ಣ, ಕೆಂಚು ಕೂದಲು, ಪರ್ಸನಾಲಿಟಿ ಎಲ್ಲ ತುಂಬ ಇಷ್ಟ ನನಗೆ. ಆದರೆ ಅವರನ್ನು ಹೀರೋ ಆಗಿ ನಾನು ನೋಡ್ಲಿಲ್ಲ. ನಾನು ಸಿನಿಮಾ ನೋಡೋದು ಬಹಳ ಅಪರೂಪ. ನನಗೆ ಸಿನಿಮಾ ಹುಚ್ಚೇ ಇಲ್ಲ. ಹಾಗಾಗಿ ಸಿನಿಮಾ ಬಿಡ್ಬೇಕಾದ್ರೆ ನನಗೆ ಕಷ್ಟವೂ ಆಗ್ಲಿಲ್ಲ. ಆದರೆ ನಾನು ಏನನ್ನು ಅಂದುಕೊಂಡಿದ್ದೆನೋ ಅವೆಲ್ಲವುಗಳಿಗೂ ಅವರು ನನ್ನ ಜೊತೆಯಾಗಿ ನಿಂತರು.

ಅವರಲ್ಲಿ ತುಂಬ ಅಪರೂಪದ ಗುಣಗಳಿವೆ. ನನ್ನನ್ನು ಪ್ರಪೋಸ್ ಮಾಡುವ ಹೊತ್ತಿಗೇ ಅವರು ದೊಡ್ಡ ನಟನಾಗಿ ಹೆಸರು ಮಾಡಿದ್ದರು. ಅಷ್ಟು ಹೆಸರು ಮಾಡಿ, ಎಂ.ಎಲ್ಎ, ಆಗಿ, ನಂತರ ಮಂತ್ರಿ ಆಗಿದ್ದರೂ ಅವರು ಯಾವತ್ತೂ ಮಟಿರೀಯಲಿಸ್ಟಿಕ್ ಆಗಿರ್ಲಿಲ್ಲ. ಅಂತಸ್ತು, ಐಶ್ವರ್ಯದ ಹಿಂದೆ ಹೋದವರಲ್ಲ. ದುಡ್ಡಿಗಾಗಿಯೇ ಬದುಕುವ ಮನುಷ್ಯ ಅವರಾಗಿರಲಿಲ್ಲ. ಅದು ತುಂಬ ಭಿನ್ನವಾದ ಗುಣ ಅಂತ ಅನಿಸ್ತು ನನಗೆ.

ಅವರು ಎಂದೂ ಏನನ್ನೂ ಕೇಳಿದವರಲ್ಲ. ಅಡುಗೆ ಚೆನ್ನಾಗಿ ಮಾಡಿದಾಗ ಸಂತೋಷವಾಗಿ ಊಟ ಮಾಡ್ತಾರೆ. ಆದರೆ ನೀನ್ಯಾಕೆ ಮಾಡ್ಲಿಲ್ಲ, ಎಲ್ಲಿ ಹೋಗಿದ್ದೆ ಎಂದು ಯಾವತ್ತೂ ಕೇಳಿದವರಲ್ಲ. ನಾನು ಏನನ್ನೇ ಕೇಳಲಿ, ಅದು ಇಲ್ಲ ಅಂತ ಹೇಳ್ಲಿಲ್ಲ. ಅದೊಂದು ದಾಖಲೆ. ಜಗತ್ತಿನಲ್ಲಿಯೇ ಅತಿ ಅದೃಷ್ಟವಂತ ಮಹಿಳೆ ನೀನು ಎಂದು ನನ್ನ ಮಗಳು ಹೇಳುತ್ತಾಳೆ. ಮದುವೆಯಾದ ಈ 30 ವರ್ಷದಲ್ಲಿ ಅವರು ಎಂದಿಗೂ ಏನನ್ನೂ ಕೇಳಲಿಲ್ಲ.

ಫೋಟೋ ಕೃಪೆ : ಭಾರತಿ ಹೆಗಡೆ

ಸಿಟ್ಟಿನ ವ್ಯಕ್ತಿಯಾ?

ಗಾಯತ್ರಿ – ಯಾವತ್ತೂ ಬೇಸರ ಮಾಡಿಕೊಂಡವರಲ್ಲ ಅವರು. ಆದರೆ ಸಿಟ್ಟು ಬರತ್ತೆ . ನಾವಿಬ್ಬರೂ ಜೊತೆಯಾದ ಈ 30 ವರ್ಷಗಳಲ್ಲಿ ಅವರಿಗೆ ಬೇಜಾರಾಗಿದ್ದೆಂದರೆ ಅವರ ತಾಯಿ ಹೋಗಿದ್ದಾಗ. ಅದು ಬಹುಶಃ ಅವರಿಗೆ ತುಂಬ ನೋವಾಗಿದೆ. ಶಂಕರ್ ಸಾವು ತುಂಬ ಶಾಕ್ ಆಯ್ತು. ಆದರೆ ಅವರ ತಾಯಿ ಹೋಗಿದ್ದು ಭಾಳ ಬೇಸರ ಆಗಿತ್ತು ಅವರಿಗೆ. ತಾಯಿಯನ್ನು ತುಂಬ ಹಚ್ಚಿಕೊಂಡಿದ್ದರು. ತಾಯಿ ಹೆಸರು ಆನಂದಿ ಸದಾನಂದ ನಾಗರಕಟ್ಟೆ. ಬಾಳ ಸುಂದರವಾಗಿದ್ದರು ಅವರ ಅಮ್ಮ. ಅವರ ಪ್ರತಿರೂಪವೇ ಇವರು. ಅವರೇನೂ ಕೇಳಿದವರಲ್ಲ.

ಅನಂತ್ – ಮೊದ್ಲಿಂದ ತಂದೆ ತಾಯಿ, ಮಟೀರಿಯಲಿಸ್ಟಿಕ್ ಆಗಿರ್ಲಿಲ್ಲ. ಆಶ್ರಮದಲ್ಲಿ, ಮಠದಲ್ಲಿ ಅವರ ಯೌವ್ವನವನ್ನು ಕಳೆದರು. ಅಲ್ಲಿಯೇ ನಾವೂ ಬೆಳೆದ್ವಿ. ಹಾಗಾಗಿಯೇ ನಮಗೆ ಒಳ್ಳೆ ಸಂಸ್ಕಾರಗಳು ಬಂದ್ವು. ನನ್ನ ತಾಯಿ ಹತ್ರ ಏನೂ ಇರ್ಲಿಲ್ಲ. ಒಂದು ಸಿಲ್ಕಿನ ಬನಾರಸ್ ಸೀರೆ, ಒಂದು ಜೊತೆ ಮುತ್ತಿನ ಕುಡುಕು, ಮೂಗುತಿ , ಅಷ್ಟೇ ಅವರಿಗಿದ್ದದ್ದು. ಅದರಾಚೆ ಅವರು ಏನೂ ಬಯಸಿರಲಿಲ್ಲ. ಆದರೆ ನಮ್ಮನ್ನು ಚೆಂದವಾಗಿ ನೋಡ್ಕೊಂಡರು.

ಗಾಯತ್ರಿ – ಮಕ್ಕಳು ದೊಡ್ಡವರಾದ ಮೇಲೂ, ಅನಂತ್ ಅವರೆಷ್ಟೇ ರಾತ್ರಿಗೆ ಬರಲಿ, ಅಷ್ಟೊತ್ತಿಗೇ ಎದ್ದು ಬಿಸಿಬಿಸಿ ಚಪಾತಿ ಮಾಡಿ ಬಡಿಸುತ್ತಿದ್ದರು. ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದರು ಅವರ ಅಮ್ಮ. ಹಾಗಾಗಿ ಅಮ್ಮ ತೀರಿಕೊಂಡಾಗ ಆ ಬೇಸರದಿಂದ ಹೊರಬರಲು ಅನಂತ್ ಗೆ ಸಾಕಷ್ಟು ಸಮಯ ಬೇಕಾಯಿತು. ಈಗಲೂ ‘ಭಗವದ್ಗೀತೆ ಪುಸ್ತಕದಲ್ಲಿ ಅಮ್ಮನ ಫೋಟೋ ಇಟ್ಕೊಂಡು ಇರ್ತಾರೆ. ಬೆಳಗ್ಗೆ ಎದ್ದ ತಕ್ಷಣ ಅಮ್ಮ ಹಾಗೂ ಬಾಬಾ ಪೋಟೋ ನೋಡಿಯೇ ಅವರು ಏಳುತ್ತಾರೆ. ಅವರ ತಾಯಿ 78 ನೇ ವಯಸ್ಸಲ್ಲಿ ಹೋದ್ರು. ಆಗ ಅನಂತ್ ಗೆ 50 ವರ್ಷವಾಗಿತ್ತು. ತುಂಬ ತಾಳ್ಮೆಯಿಂದ, ಯಾವತ್ತೂ ಪ್ರಶ್ನೆ ಕೇಳದೇ, ಏನನ್ನೂ ಬಯಸದೇ ಬದುಕಿದವರು ಅವರ ತಾಯಿ. ಅನ್ಕಂಡೀಷನಲ್ ಲವ್ ಅಂತ ಹೇಳ್ತಾರಲ್ಲ. ಆ ರೀತಿ ಇದ್ದರು ತಾಯಿ. ಅನಂತ್ ಯಾವತ್ತೂ ಯಾರಹತ್ರವೂ ಏನನ್ನೂ ಹಂಚಿಕೊಳ್ಳುವವರಲ್ಲ. ಅವರನ್ನು ನೋಡಿ ಅರ್ಥ ಮಾಡ್ಕೋಳ್ಳೋವರಿಗೆ ಅರ್ಥವಾಗ್ಬೇಕು ಅಷ್ಟೇ. ನಾನು ಅವರ ಮೂಡ್ ನೋಡಿ ಅರ್ಥ ಮಾಡಿಕೊಳ್ಳುತ್ತಿದ್ದೆ. ಇವರಿಗೆ ಬೇಸರವಾಗಿದೆ ಎಂದು.

ಅನಂತ್ – ನಾನು ಮಂಗಳೂರಿನ ಆನಂದಾಶ್ರಮದಲ್ಲಿ 6 ವರ್ಷ ಬೆಳೆದೆ. ನಂತರ ಶಿರಾಲಿ ಮಠದಲ್ಲಿ ಬೆಳೆದೆ. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನನ್ನ ತಂದೆ ನನ್ನನ್ನು ಮುಂಬೈಗೆ ಕಳುಹಿಸಿದರು. ಮಗ ಲಾಯರೋ, ಡಾಕ್ಟ್ರೋ, ಇಂಜಿನಿಯರೋ ಆಗ್ಲಿ ಎಂಬ ಬಯಕೆ ಅವರದ್ದು. ಆದರೆ ನನ್ನಲ್ಲಾದ ಬದಲಾವಣೆ ಅವರಿಗೆ ಗೊತ್ತಿರ್ಲಿಲ್ಲ. ಇಷ್ಟಕ್ಕೂ ನನಗೇ ಗೊತ್ತಿರ್ಲಿಲ್ಲ ನನ್ನಲ್ಲಾಗಿದ್ದ ಬದಲಾವಣೆ. ನಾನು ಏನನ್ನೋ ಆಗಬೇಕು ಅಂದುಕೊಂಡವನೇ ಅಲ್ಲ. ಆದರೆ ನಟನಾದೆ, ರಾಜಕಾರಣಿಯೂ ಆದೆ. ಇದ್ಯಾವುದನ್ನೂ ನಾನು ಬಯಸಿ ಆಗಿದ್ದಲ್ಲ. ಹಾಗಾಗಿ ನನಗೆ ನಿರೀಕ್ಷೆ ಎಂಬುದಿರಲಿಲ್ಲ.

ಗಂಡನೆಂಬ ಅಹಮಿಕೆ ಅವರಲ್ಲಿಲ್ಲ

ಗಾಯತ್ರಿ – ನಾನು ಮೊದಲೇ ಹೇಳಿದ ಹಾಗೆ ಅನಂತ್ ತುಂಬ ಭಿನ್ನ ವ್ಯಕ್ತಿ. ಅಷ್ಟು ಬೇಡಿಕೆಯ ನಟನಾದರೂ ಎಂದಿಗೂ ಮನೆ, ಕಾರು ಬೇಕು, ತುಂಬ ಆಸ್ತಿ ಮಾಡಬೇಕು ಎಂದು ಅಂದುಕೊಂಡವರಲ್ಲ. ಅದರ ಬದಲು ಆ ಪುಸ್ತಕ ಬೇಕು. ನಾಟಕ ನೋಡಬೇಕು ಎಂದು ಹೇಳುತ್ತಾರೆ. ಪ್ರತಿದಿನ ನ್ಯೂಸ್ ಪೇಪರ್ ಓದ್ತಾರೆ. ಸ್ಪೋರ್ಟ್ಸ್ಗೆ ಸಂಬಂಧಿಸಿದ ಪುಸ್ತಕಗಳು, ನೈಪಾಲ್, ಗ್ರಾಹಂ ಗ್ರೀನ್ ಮುಂತಾದ ಉತ್ತಮ ವ್ಯಕ್ತಿಗಳ ಜೀವನಚರಿತ್ರೆ, ವಿವಿ‘ ದೇಶಗಳ ಇತಿಹಾಸಗಳ ಬಗ್ಗೆ, ಅದರ ಅರ್ಥವ್ಯವಸ್ಥೆ ಬಗ್ಗೆ , ಇಂಥ ಪುಸ್ತಕಗಳನ್ನು ಓದುವುದರಲ್ಲಿ ಅವರಿಗೆ ತುಂಬ ಆಸಕ್ತಿ. ‘ಜನ್, ಹಾರ್ಮೋನಿಯಂ, ಸಂಗೀತ, ನಾಟಕ ಹೀಗೆ ಅವರ ಆಸಕ್ತಿಗಳಿಗೆ ತುಂಬ ವಿಸ್ತಾರವಿದೆ. ನಾನು ನಿನ್ನ ಗಂಡ, ಅಪ್ಪ, ಅಣ್ಣ, ಹೀಗೆ ಮಾಡು ಹಾಗೇ ಮಾಡು ಅಂತ ಹೇಳಿದವರಲ್ಲ. ಅಂದರೆ ಗಂಡೆಂಬ ಅಹಮಿಕೆ ಅವರನ್ನು ಯಾವತ್ತೂ ಕಾಡಲಿಲ್ಲ. ಪಕ್ಕಾ ಸಸ್ಯಾಹಾರಿ ಅವರು. ನಾನು ಮಾಡಿದ ಅಡುಗೆ ತುಂಬ ಇಷ್ಟ ಅವರಿಗೆ. ಹೋಟೆಲ್ನಲ್ಲಿ ಕೂಡ ಏನನ್ನೂ ತಿಂದವರಲ್ಲ. ಆದರೆ ಇಂಥದ್ದೇ ಬೇಕು ಎಂದೂ ಅಂದವರಲ್ಲ. ನೋ ಕಂಡೀಷನ್, ನೋ ಡಿಮ್ಯಾಂಡ್.

ಅನಂತ್ – ಸಿನಿಮಾ ರಂಗದಲ್ಲಿರುವವರಿಗೆ ಓದುವ ಹವ್ಯಾಸ ತುಂಬ ಮುಖ್ಯ. ಆದರೆ ಎಲ್ಲರಿಗೂ ಇರುವುದಿಲ್ಲ. ಅದೇ ದುರಂತ. ಕ್ರಿಯೇಟಿವ್ ಫೀಲ್ಡ್ನಲ್ಲಿರುವರು ತುಂಬ ಓದಬೇಕು. ಅವರ ಜ್ಞಾನ  ವರ್ಜನೆಯಾಗ್ಬೇಕು. ಆಗ ಇತರರನ್ನು ಕಾಪಿ ಹೊಡೆಯೋದು ತಪ್ಪತ್ತೆ.

ಫೋಟೋ ಕೃಪೆ : ಭಾರತಿ ಹೆಗಡೆ

ಈಗಲೂ ಅವರು ಡಿರಂಟ್

ಅನಂತ್ ಯಾಕೆ ಡಿಫರೆಂಟ್ ಅಂದ್ರೆ, ನೋಡಿ, ನನಗೆ ವಯಸ್ಸಾಯ್ತು ನಾನಿನ್ನು ಹೀರೋ ಪಾತ್ರ ಮಾಡಲ್ಲ ಅಂತ ಒಂದು ದಿನ ನಿರ್ಮಾಪಕರನ್ನೆಲ್ಲ ಕರೆದು ಅಂದುಬಿಟ್ರು. ಬಿಳಿ ಕೂದಲಾದ್ರೆ ಆಗ್ಲಿ, ನಾನು ಕೂದಲಿಗೂ ಡೈ ಮಾಡಲ್ಲ ಅಂತ ಅಂದ್ರು. ಎಷ್ಟು ನಟರು ಹೀಗೆ ಹೇಳುತ್ತಾರೆ ಹೇಳಿ?

ಅನಂತ್ – ವಯಸ್ಸಾಗುತ್ತಿದ್ದಂತೆ ಪ್ರೌಢತೆ ಬರಬೇಕು. ಮುಖ್ಯವಾಗಿ ನನಗೆ ವಯಸ್ಸಾಗಿದೆ ಎಂಬುದನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ನಾನು ಹೀಗಂದುಕೊಳ್ಳಲು ಮುಖ್ಯ ಕಾರಣ ರಂಗ‘ೂಮಿ. ಅಲ್ಲಿ 5 ವರ್ಷದಲ್ಲಿ ವಿವಿ‘ ಪಾರ್ಟುಗಳನ್ನು ಮಾಡಿದ್ದೇನೆ. ಹಾಗಾಗಿ ನಾನು ಸದಾ ಚಾಕ್ಲೆಟಿ ಆಗಿಯೇ ಕಾಣಿಸ್ಕೋಬೇಕು ಅಂತ ಅಂದುಕೊಳ್ಳಲಿಲ್ಲ. ಒಂದು ವಯಸ್ಸಿನ ನಂತರ ಹೀರೋ ಪಾತ್ರ ಮಾಡ್ಬಾರ್ದು ಅಂತ ನಿ‘ರ್ರಿಸಿದೆ. ಹೀರೋ ಪಾತ್ರ ಮಾಡಲ್ಲ, ಸಪೋರ್ಟಿಂಗ್ ಪಾತ್ರ ಕೊಟ್ರೆ ಮಾಡ್ತೀನಿ ಅಂತ ಉದ್ಯಮದವರಿಗೂ ಹೇಳ್ಬಿಟ್ಟೆ. ‘ನಾನೇನು ಮಾಡ್ಲಿಲ್ಲ’ ಸಿನಿಮಾದಲ್ಲಿ ಸುಧಾರಾಣಿ ಜತೆ ಮಾಡಿದ್ದೇ ಕಡೆ ಸಿನಿಮಾ. ಅದರಲ್ಲೇ ಇಷ್ಟು ಚಿಕ್ಕ ಹುಡುಗಿ ಜೊತೆ ನಟಿಸ್ಬೇಕಾ ಅಂತ ಅನಿಸಿಬಿಡ್ತು. ನಂತರ ಮಾಡಿದ ಪಾತ್ರಗಳೆಲ್ಲ ಪೋಷಕ ಪಾತ್ರಗಳು. ಮುಂಗಾರು ಮಳೆಯ ನಂತರ ಇನ್ನೂ ಹೆಚ್ಚಿನ ವೈವಿಧ್ಯಮಯವಾದ ಪಾತ್ರಗಳು ಸಿಕ್ಕವು.

ಗಾಯತ್ರಿ – ನಾನು ಕೂಡ ನಟಿಯಾಗಿದ್ದವಳು. ಆಟೋರಾಜ ಸಿನಿಮಾದ ನಂತರ ಮತ್ತೆ ನನಗೆ ಹಿಂದಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ರಾಜಕುಮಾರ್ ಜೊತೆ, ವಿಷ್ಣು ಸರ್, ಅನಂತ್, ಶಂಕರ್ ಹೀಗೆ ಎಲ್ಲರ ಜೊತೆ ನಟಿಸಿದೆ. ನಂತರ ಒಬ್ಬ ಸ್ಫುರದ್ರೂಪಿ, ಒಳ್ಳೆಯ ಸಂಸ್ಕಾರವಂತ ನಟನ ಕೈ ಹಿಡಿದೆ. ಇಂದು ನಾನೇನೇನು ಪಡೆದಿದ್ದೇನೆ ಅದೆಲ್ಲವೂ ಸಿಕ್ಕಿದ್ದು ಬಣ್ಣದ ಬದುಕಿನಿಂದಲೇ. ಹಾಗಾಗಿ ಈ ಬದುಕಿಗೆ ನಾನು ಕೃತಜ್ಞಳಾಗಿದ್ದೇನೆ.

ದಾಂಪತ್ಯ ಕುರಿತು

ದಾಂಪತ್ಯದ ಕುರಿತು ನಾವ್ಯಾರು ಹೇಳೋದಿಕ್ಕೆ. ಇಂದಿನ ಯುವ ಜನತೆ ಕೇಳುವ ಹಾಗಿದ್ದಾರಾ? ನಾವು ಹೀಗೆ ನಡ್ಕೊಂಡು ಬಂದ್ವಿ. ನಮ್ಮ ದಾಂಪತ್ಯ, ನಮ್ಮ ಬದುಕು ನಿಮಗೆ ಸರಿ ಅನಿಸಿದ್ರೆ ದಯವಿಟ್ಟು ಹಾಗೇ ಇರೋದಿಕ್ಕೆ ಪ್ರಯತ್ನ ಮಾಡಿ. ಇಷ್ಟು ಮಾತ್ರ ಹೇಳಬಲ್ಲೆವು.

ಗಾಯಿತ್ರಿ – ಅಭಿಪ್ರಾಯ ಭೇದ, ಜಗಳ ಎಲ್ಲವೂ ಎಲ್ಲರ ಬದುಕಲ್ಲೂ ಇದ್ದೇ ಇರುತ್ತದೆ. ಆದರೆ ಅವೆಲ್ಲವನ್ನೂ ಮೀರಿ ನಿಂತು ಬದುಕನ್ನು ಕಟ್ಟಿಕೊಳ್ಳಬೇಕು. ತ್ಯಾಗ, ಪರಸ್ಪರರ ಹೊಂದಾಣಿಕೆ ಈ ಬದುಕಲ್ಲಿ ತುಂಬ ಮುಖ್ಯ.

ಬಾಕ್ಸ್
ಅವಳಿಲ್ಲದೇ ಹೋದ್ರೆ ಮನೆ ಹೇಗುಳಿದೀತು?

ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯಲ್ಲಿ ಒಂದು ಸಂಭಾಷಣೆ ಬರುತ್ತದೆ. ಅದು ನಂತ್ರ ಸಿನಿಮಾ ಕೂಡ ಆಯ್ತು. ಅದರಲ್ಲಿ ನಾನೂ ಪಾತ್ರ ಮಾಡಿದ್ದೇನೆ. ಗಂಡ ಹೆಂಡತಿ ಜಗಳ ಆಡಿರ್ತಾರೆ. ಎಲ್ಲ ತಣ್ಣಗಾದ ಮೇಲೆ ಗಂಡ ಹೆಂಡತಿಗೆ ಕೇಳ್ತಾನೆ. ಯಾಕಿಷ್ಟು ಸಿಟ್ಟು ಮಾಡ್ತೀಯೇ? ಗಂಡಸಿಗೆ ಆಕಾಶದಲ್ಲಿ ಹಾರಾಡುವ ಕೆಲ್ಸ. ಹೆಣ್ಣಿಗೆ ಗೂಡು ಕಟ್ಟುವ ಕೆಲ್ಸ. ನೀನೇ ಗೂಡು ಬಿಟ್ಟು ಹೋದ್ರೆ ನಾನೆಲ್ಲಿಗೇ ಹೋಗ್ಲಿ? ಇದು ನಿಜ ತಾನೆ. ಅವಳಿಲ್ಲದೇ ಹೋದ್ರೆ ಮನೆ ಹೇಗುಳಿದೀತು ಹೇಳಿ?

ನಾಯಕಿಯೆಂದರೆ ಗ್ಲಾಮರ್ ಮಾತ್ರವೇ?

ಅನಂತ್ – ಇದು ಗ್ಲಾಮರ್ನ್ನೇ ಬೇಡುವ ಉದ್ಯಮ. ಇಲ್ಲಿ ಮಹಿಳೆಯರಿಗೆ ಆಯಸ್ಸು ತುಂಬ ಕಡಿಮೆ. ಒಂದು ವಯಸ್ಸಿನ ನಂತರ ಅವರು ಪೋಷಕ ಪಾತ್ರ ಮಾಡುತ್ತಾರೆ. ಆದರೆ ಈ ದೂರು ಜಗತ್ತಿನಾದ್ಯಂತ ಇದೆ. 30 ವರ್ಷದ ನಂತರ ನಮಗೆ ಇಲ್ಲಿ ಜೀವನವಿಲ್ಲ, ಉತ್ತಮ ಪಾತ್ರ ಸಿಗಲ್ಲ ಎಂದು ಅಮೆರಿಕದ ನಟಿಯರು, ಮಾಡೆಲಿಂಗ್ನಲ್ಲಿರುವವರು ಕೂಡ ಹೇಳುತ್ತಿರುತ್ತಾರೆ.
ಹಾಗೆ ನೋಡಿದ್ರೆ ವಾಸ್ತವವಾಗಿ ಇರುವುದು ಯಾರಿಗೂ ಬೇಡ. ಟಿವಿ, ಸಿನಿಮಾ ಮಾಡೋವ್ರಿಗೂ ಬೇಡ. ಸ್ವತಃ ನಟಿಗೂ ಬೇಡವಾಗಿದೆ. ಸ್ವತಃ ನಟಿಗೆ ಅದು ಅನಿಸಬೇಕು. ನಾನು ಗ್ಲಾಮರ್ಗಾಗಿ ಇರುವವಳಲ್ಲ, ನನ್ನ ಸಾಮರ್ಥ್ಯ ಮಾತ್ರ ಗಣನೆಗೆ ಬರಬೇಕು ಎಂದು. ಆಗ ಅವಳು ಇನ್ಸಿಸ್ಟ್ ಮಾಡಲು ಸಾಧ್ಯ. ತಾನು ಇದಕ್ಕೇ ಸೀಮಿತಳಲ್ಲ ಎಂಬುದು ಆ ನಟಿಗೆ ಅನಿಸಿದಂತೂ ಈ ಧೋರಣೆ ಹೋಗಲ್ಲ.

ಅನಂತ್ ಕಾಡುವ ಕೊರಗು

ತಾಯಿ ಅಂದ್ರೆ ನನಗೆ ಎಲ್ಲವೂ. ಆಶ್ರಮದಲ್ಲಿ ಭಕ್ತಿ, ಜ್ಞಾನ, ವೈರಾಗ್ಯ ಈ ಕಾಂಬಿನೇಷನ್ನಲ್ಲಿ ಬೆಳೆದವಳು ಅವಳು. ನನ್ನನ್ನು ಮುಂಬೈಗೆ ಕಳಿಸಿದಾಗ ಅಲ್ಲಿ ನನ್ನ ನಿರೀಕ್ಷೆ ಬೇರೆನೇ ಇತ್ತು. ಪ್ರಾಪಂಚಿಕವಾದ ಜೀವನವೇ ಜೀವನ ಅಂತ ಅಂದುಕೊಂಡ ದಿನಗಳವು. ಕೈತುಂಬ ಸಂಪಾದಿಸುವಾಗ ಅವರಿಗೆ ಏನಾದ್ರೂ ಕೊಡ್ಬೇಕು ಅಂದ್ರೆ ಅವರಿಗದರ ಮೋಹವೇ ಇರಲಿಲ್ಲ. ಇದ್ದೂ ಬೇಡ ಎನ್ನುವವರು. ಗೂಡು ಕಟ್ಟಿ, ಮರಿ ಹಾಕಿ, ಮರಿಗಳು ದೊಡ್ಡವಾದ ಮೇಲೆ ಹಾರಿ ಹೋಗುತ್ತವೆ. ಆದರೆ ತಂದೆತಾಯಿಗಳು ಅಲ್ಲೇ ಇರುತ್ತಾರೆ. ಹಾಗೆ ನಮ್ಮ ಜೀವನ ಅಂತ ಹೇಳ್ತಿದ್ದರು. ಹಾಗಾದ್ವಿ ನಾನು ಶಂಕರ. ಬಂಗ್ಲೆ ತಗೋಳೋಣ್ವಾ, ಕಾರು ತಗಳೋಣ್ವಾ, ಹೇಗೆ ತೃಪ್ತಿ ಪಡಿಸೋದು ಇವರನ್ನು ಅಂತ ಅಂದುಕೊಳ್ಳುತ್ತಿದ್ದೆವು. ಆದರೆ ಅಂಥವಕ್ಕೆಲ್ಲ ಅವರು ಆಸೆಪಡಲೇ ಇಲ್ಲ. ಜೀವನದಲ್ಲಿ ತುಂಬ ಕಷ್ಟಪಟ್ಟರು ಅವರು. ಯಾವ ಸೌಕರ್ಯವಿಲ್ಲದೆ ನಮ್ಮನ್ನು ಬೆಳೆಸಿದ ತಾಯಿ, ಹಾಗೇ ಹೋದ್ರಲ್ಲ, ಅವರಿಗೆ ಕೊಡೋಕೆ ಏನೂ ಆಗ್ಲಿಲ್ಲವಲ್ಲ ಎಂಬ ಕೊರಗು ಸದಾ ನನಗಿದೆ.

ಫೋಟೋ ಕೃಪೆ : ಭಾರತಿ ಹೆಗಡೆ

ಇಂದಿಗೂ ದೇವರನ್ನು ಕ್ಷಮಿಸಿಲ್ಲ-

ಇನ್ನು ನನ್ನ ತಮ್ಮ ಶಂಕರ. ಸಾಕು ತಂದೆಯಾಗಿದ್ದೆ ಅವನಿಗೆ. 35 ನೇ ವರ್ಷಕ್ಕೆ ಅವನಿಗೆ ಸಾವು ಬಂದು ಬಿಡ್ತು. ನನಗಿಂತ 6 ವರ್ಷ ಚಿಕ್ಕವನಿದ್ದ. ಸಾಯ್ಬೇಕೂಂತ ಅಂದುಕೊಂಡಿರೋರು ಬೇಕಾದಷ್ಟು ಜನರಿದ್ದರು. ಅಂಥದ್ದರಲ್ಲಿ ನನ್ನ ತಮ್ಮನೇ ಬೇಕಾಗಿತ್ತ ಆ ದೇವರಿಗೆ. ಆಗ ನನಗೆ ಬೇಸರಕ್ಕಿಂತ ಸಿಟ್ಟು ಬಂತು. ಅವನ ಸಾವು ಇಂದಿಗೂ ಅರ್ಥವಾಗದ್ದು ನನಗೆ. ಅವನನ್ನು ತಗೊಂಡು ಹೋಗಿದ್ದಕ್ಕೆ ಇಂದಿಗೂ ನಾನು ಆ ದೇವರನ್ನು ಕ್ಷಮಿಸಿಲ್ಲ.

ಆ ದಿನ ಇನ್ನೂ ನನಗೆ ನೆನಪಿದೆ. ಶಂಕರ್ ಹೋದ ದಿವಸ ನಾನು ಶೂಟಿಂಗ್ ಗೆಂದು ಹೈದ್ರಾಬಾದ್ನಲ್ಲಿದ್ದೆ. ವಿಷಯ ತಿಳಿಯಿತು. ಮೊದಲು ಗಾಯಿತ್ರಿಗೆ ಫೋನ್ ಮಾಡಿದೆ. ಆದರೆ ಏನನ್ನೂ ಹೇಳಲಾಗಲಿಲ್ಲ. ಗುಡ್ನೈಟ್ ಎಂದು ಫೋನ್ ಇಟ್ಟುಬಿಟ್ಟೆ. ಆದರೆ ಅವಳಿಗೆ ಎಲ್ಲವೂ ಸರಿಯಿಲ್ಲ ಎಂದು ಅನಿಸಿರಬೇಕು. ತಕ್ಷಣ ಮತ್ತೆ ಫೋನ್ ಮಾಡಿದಳು. ಆಗ ನಾನು ಸಂಪೂರ್ಣ ಕುಸಿದು ಹೋದೆ. ಎಲ್ಲವನ್ನೂ ತೋಡಿಕೊಂಡೆ. ಆ ಇಡೀ ರಾತ್ರಿ ಅವಳು ನನ್ನೊಡನೆ ಮಾತನಾಡುತ್ತಲೇ ಇದ್ದಳು. ಶಾಂತನಾಗು ಶಾಂತನಾಗು ಎಂದು ಹೇಳುತ್ತಲೇ ಇದ್ದಳು. ಅಂಥ ಸಮಯದಲ್ಲಿ ನನಗೆ ಜೊತೆಯಾದಳು ಅವಳು.

ಫೋಟೋ ಕೃಪೆ : ಭಾರತಿ ಹೆಗಡೆ

ಪ್ರೇಮದಲ್ಲಿ ಸ್ಯಾಡಿಸಮ್ಮಾ

ನಾನು ಸಾಕಷ್ಟು ಪ್ರೀತಿ ಪ್ರೇಮ ವಿಷಯಗಳ ಕುರಿತು ಸಿನಿಮಾ ಮಾಡಿದ್ದೇನೆ. ಆದರೆ ಅದಕ್ಕೊಂದು ಜವಾಬ್ದಾರಿ ಬೇಕಾಗುತ್ತದೆ. ನಾನು, ಗಾಯಿತ್ರಿ ಜತೆಯಲ್ಲಿ ಮಾಡಿದ ಸಿನಿಮಾ ‘ಸುಖಸಂಸಾರಕ್ಕೆ ಸೂತ್ರಗಳು’ ‘ಒಲವೆ ಬದುಕು’, ‘ಶ್ವೇತ ಗುಲಾಬಿ’ ಸಿನಿಮಾಗಳು ಹಿಟ್ ಆದವು. ಮೂಲ ಭೂತವಾಗಿ ಉತ್ತಮ ಕಥೆಯ ಆ‘ಾರದ ಮೇಲೆ ಸಿನಿಮಾ ತಯಾರಾಗಬೇಕು. ಆದರೆ ಇತ್ತೀಚೆಗೆ ಪ್ರೀತಿ, ಪ್ರೇಮವೆಂದರೆ ಅಲ್ಲೊಂದು ಸ್ಯಾಡಿಸಂ ಇರುತ್ತದೆ. ಪ್ರೀತಿಯಲ್ಲಿ ಹೇರಿಕೆ ತುಂಬ ಆಗ್ತಾ ಇದೆ. ಹೆಣ್ಣಿಗೆ ಪ್ರೀತಿಸುವ ಹಕ್ಕೇ ಇಲ್ಲದಂತೆ, ಅದನ್ನೇ ರೋಮಾಂಟಿಸೈಸ್ ಮಾಡಲಾಗುತ್ತಿದೆ. ವೈ‘ವೀಕರಣ ಮಾಡಲಾಗುತ್ತಿದೆ. ಅದೊಂಥರದಲ್ಲಿ ಬಲವಂತದ ಪ್ರೀತಿಯಾಗುತ್ತದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ.

ಫೋಟೋ ಕೃಪೆ : ಭಾರತಿ ಹೆಗಡೆ

ಗಾಯತ್ರಿ – ಅಂದರೆ ಈಗ ಯಾವುದಕ್ಕೂ ಜವಾಬ್ದಾರಿ ಇಲ್ಲ. ಯಾರೂ ಯಾರನ್ನೂ ಪ್ರಶ್ನಿಸಲೇ ಬಾರದು. ಆ ಥರ ಪರಿಸ್ಥಿತಿ ಬಂದಿದೆ. ‘ಜವಾಬ್ದಾರಿಯುತ ವಿದ್ಯಾವಂತ ಭಾರತದ ನಾಗರಿಕ’ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಇದು ನಮ್ಮ ಜೀವನ. ಹೇಗೆ ಬೇಕೋ ಹಾಗಿರ್ತೇವೆ ಅಂತ ಇರುತ್ತಾರೆ. ಅವರನ್ನು ಪ್ರಶ್ನಿಸೋಕೆ ಹೋದ್ರೆ, ನಮಗೆ ಸ್ವಾತಂತ್ರೃ ಇಲ್ವಾ ಅಂತ ಒಂದಷ್ಟು ಜನ ಬಾವುಟ ಹಿಡ್ಕೊಂಡು ಬಂದು ಬಿಡುತ್ತಾರೆ. ಎಲವಕ್ಕೂ ಒಂದು ಸೀಮೆ ಇರಬೇಕು. ಅಭಿವ್ಯಕ್ತಿ ಸ್ವಾತಂತ್ರೃ ಹೇಳ್ತಾರೆ. ಹಾಗಂತ ಏನು ಬೇಕಾದ್ರೂ ಮಾತನಾಡೋ ಹಾಗಿಲ್ಲ. ಅಲ್ಲಿಯೂ ಜವಾಬ್ದಾರಿ ಬೇಕಾಗುತ್ತದೆ.

ಅನಂತ್ – ಇದು ನಿಜ. ಪ್ರತಿಯೊಂದಕ್ಕೂ ಜವಾಬ್ದಾರಿ ಬೇಕು. ಈಗೆಲ್ಲವೂ ಪಾಶ್ಚಾತ್ಯೀಕರಣವಾಗುತ್ತಿದೆ. ಬಾಯ್ಸ್ಗೆ ಗಯ್ಸ್ ಅಂತೀವಿ. ಗರ್ಲ್ಗೆ ಗಯ್ ಅಂತ ಬಂತು. ಹುಡುಗಿಯರಿಗೂ ಹಾಯ್ ಗಾಯ್ಸ್ ಅಂತ ಕರೀತಾರೆ. ಇಲ್ಲೂ ಹಾಯ್ ಗಯ್ಸ್ ಅಂತ ಬಂದಿದೆ. ಅಂದರೆ ಹುಡುಗಿಯರು ಕೂಡ ಸ್ತ್ರೀಲಿಂಗವನ್ನೇ ಮರೆತು ಪುರುಷಲಿಂಗೀಯನ್ನಾಗಿಸಿಕೊಳ್ಳುವುದರ ಬಗ್ಗೆ ನನಗೆ ಕೌತುಕ ಎನಿಸುತ್ತಿದೆ. ಹಾಗಾಗಿಯೇ ಇಂದು ತಕ್ಷಣಕ್ಕೆ ಮದುವೆ ಹಾಗೂ ತಕ್ಷಣಕ್ಕೆ ಬೇರೆ ಆಗ್ತಾರೆ. ತಾಳ್ಮೆ ಎಂಬುದು ಯಾರಲ್ಲಿಯೂ ಉಳಿದಿಲ್ಲ.


  • ಭಾರತಿ ಹೆಗಡೆ – ಪತ್ರಕರ್ತರು, ಲೇಖಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW