ಮದುವೆಯೆನ್ನುವುದು ಒಮ್ಮೇಲೆ ಅಸ್ತಿತ್ವವನ್ನು ಕಸಿಯುುವ ಹಾಗಿರಬಾರದು. ಮದುವೆ ಅನ್ನೋದು ಹೆಣ್ಣಾದವಳ ಕನಸಿಗೆ ಪುಷ್ಠಿ ಕೊಡುವಂತಿರಬೇಕೇ ಹೊರತು ಆಸೆಗೆ ತಣ್ಣೀರೆರೆಚುವಂತಿರಬಾರದು. ಹೆಣ್ಣಿನ ಜೀವನದಲ್ಲಿನ ಮಹತ್ವದ ಘಟ್ಟ ಮದುವೆ. ಇದರ ಕುರಿತು ಶೀತಲ್ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
“ಮದುವೆ “ ಅಂತ ಶಬ್ಧ ಹೆಣ್ಣುಮಕ್ಕಳ ಬಾಯಲ್ಲಿ ಬಂದಾಗ ಕಣ್ಣಲ್ಲಿ ಹೊಳಪು, ಕೆನ್ನೆ ಕೆಂಪು ಮೊಗದಲ್ಲಿ ನಾಚಿಕೆ ತಾನಾಗಿಯೇ ಮೂಡುವದು. ಇದಕ್ಕೆ ಅಂತ ಯಾರ ಹತ್ತರಾನೂ ಟ್ರೈನಿಂಗ್ ಪಡೆಯೋ ಅವಶ್ಯಕತೆ ಇರೋಲ್ಲ. ಇದು ಅಂತರಾಳದಿಂದ ಬಂದ ಸಹಜ ಅಭಿವ್ಯಕ್ತಿಯಾಗಿರುತ್ತದೆ. ಮನಸ್ಸಲ್ಲಿ ಆಸೆಯ ಗೂಡ ಕಟ್ಟಿ ಅದರಲ್ಲಿ ಬಯಕೆಯ ಮರಿಗಳನ್ನ ಸಲುಹಿ ಅದು ಯಾವ ರೀತಿಯ ಫಲ ಕೊಡುವದೋ ಎಂಬುದನ್ನು ತಾವಾಗಿಯೇ ನಿರ್ಧರಿಸಿ ಫಲದ ಸ್ವೀಕೃತಿಗಾಗಿ ಎದುರು ನೋಡುವ ತವಕವೇ ಮದುವೆ ಎಂಬ ಭಾವನೆಯೊಂದಿಗೆ ಪುಳಕಿತವಾಗಿರುವದು.
ಮದುವೆಯಲ್ಲಿ ವಧು ನಾಚಿಕೆಯಿಂದಲೋ ತವರನ್ನ ತೊರೆದು ಪರಿಚಯವಿಲ್ಲದ ಹೊಸವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಪರಿಸ್ಥಿತಿಯನ್ನ ನೆನೆದೋ ಕಣ್ಣಲ್ಲಿ ನೀರನ್ನ ತುಂಬಿ ಮೊಗದಲ್ಲಿ ತೋರ್ಪಡಿಸದಂತೆ ಮಂದಹಾಸ ಬೀರುತ್ತಾ ಸದಾ ಕತ್ತನ್ನ ಬಗ್ಗಿಸಿ ಗೌರವದ ದ್ಯೋತಕವಾಗಿ ಇರಬೇಕು ಅನ್ನೋದು ರೂಢಿಗತವಾಗಿ ಬಂದಿರೋದು.

ಮದುವೆಯಿಂದ ಒಮ್ಮೇಲೆ ಬದಲಾವಣೆಗೆ ಮಾರ್ಪಡುವದು ಹೆಚ್ಚಿನದಾಗಿ ಹೆಣ್ಣು . ಹೆತ್ತವರನ್ನ ಬಂಧು ಭಾಂದವರನ್ನ ಗೆಳೆತಿಯರನ್ನ ಬಿಟ್ಟು ಹೊಸ ಜಾಗ ಹೊಸ ಜನರ ಮಧ್ಯೆ ತನ್ನತನವನ್ನ ಕಾಪಾಡಿಕೊಂಡು ಎಲ್ಲರನ್ನೂ ಅನುಸರಿಸಿಕೊಂಡು ಎಲ್ಲವನ್ನೂ ತಿಳಿದುಕೊಂಡು ಹೋಗಬೇಕು. ಬರೀ ಗಂಡನ ಬೇಕು ಬೇಡಗಳ ಜೊತೆಗೆ ಅವಿಭಕ್ತ ಕುಟುಂಬವಾಗಿದ್ದರೆ ಮನೆಯಲ್ಲಿದ್ದವರ ಬಗ್ಗೆ ಅರಿವಿರಬೇಕು. ಹೆಣ್ಣು ಕೊಡುವಾಗ ಮನೆತನ ನೋಡಿ ಕೊಡಬೇಕೆಂದಾಗ ಅದನ್ನ ಉಳಿಸಿ ಬೆಳೆಸಿಕೊಂಡು ಹೋಗುವದು ಇವಳ ಕರ್ತವ್ಯ ಧರ್ಮವೇ ಅಲ್ವಾ??
೧೦ ಜನ ಮದುವೆಯಾದ ಹೆಣ್ಣುಮಕ್ಕಳನ್ನ ತೆಗೆದುಕೊಂಡು ಮಾತನಾಡಿಸಿದಾಗ ಕಂಡು ಬಂದದ್ದೇನೆಂದರೆ ಮದುವೆ ಎನ್ನುವದು ಅವರ ಬಾಳಲ್ಲಿ ಇಲ್ಲಿಯವರೆಗಿನ ಅವರೇನು? ಎನನ್ನಾ ಸಾಧಿಸಿದ್ದರು ? ಅವರ ಮುಂದಿನ ಇಷ್ಟ ಗುರಿ ಎನಾಗಬೇಕಿತ್ತು?? ಎನ್ನುವದನ್ನು ಮೂಟೆ ಕಟ್ಟಿ ಅಮ್ಮನ ಮನೆಯಲ್ಲಿ ಬಿಟ್ಟು ಬಂದವರೇ ಜಾಸ್ತಿ. ಹಾಗಾದರೆ ಮದುವೆ ಎನ್ನೋದು ಜೀವನದಲ್ಲಿ ಕನಸಿನ ಲೋಕದಿಂದ ವಾಸ್ತವಿಕ ಜಗತ್ತಿನ ಲೋಕದ ಪರಿಚಯ ಮಾಡುವ ವಿಧಾನವಾದರೆ ಅದು ಭಯಾನಕವಾಗಿರದೇ ಕನಸಿನ ಮುಂದುವರೆದ ಭಾಗವಾಗಿ ವಾಸ್ತವಿಕತೆಯ ಪರಿಚಯ ಹಂತ ಹಂತವಾಗಿ ನೀಡುವಂತಹದ್ದಿರಬೇಕೇ ವಿನಃ ಒಮ್ಮೇಲೆ ನಮ್ಮ ಅಸ್ತಿತ್ವವನ್ನು ಕಸಿಯುುವ ಹಾಗಿರಬಾರದು. ಯಾರೋ ನ್ಯಾಷನೆಲ್ ಲೆವಲ್ ಆಟಗಾರ್ತಿಯಾಗಿ ಮದುವೆಯ ನಂತರ ಅಭ್ಯಾಸವನ್ನೆ ಬಿಡುವಂತಹ ಪರಿಸ್ಥಿತಿ. ಡ್ಯಾನ್ಸ ಮಾಡುವ ಹೆಣ್ಣುಮಗಳನ್ನ ಕೇಳಿದಾಗ ಅವಳದ್ದೂ ಅದೇ ಉತ್ತರ, ಟ್ಯೂಷನ್ ಪಾಠ ಮಾಡುತ್ತಿದ್ದವಳ ಉತ್ತರವೂ ಅದೇ ಮದುವೆ ಆಯ್ತಲ್ಲ ಇನ್ನೆಲ್ಲಿ ಅನ್ನೋ ಭಾವ ! ಯಾಕೀಗೆ ಎಂಬ ಪ್ರಶ್ನೆಗೆ ಉತ್ತರ ಮದುವೆ ಅನ್ನೋದಾ ??
ಮದುವೆ ಅನ್ನೋದು ಹೆಣ್ಣಾದವಳ ಕನಸಿಗೆ ಪುಷ್ಠಿ ಕೊಡುವಂತಿರಬೇಕೇ ಹೊರತು ಆಸೆಗೆ ತಣ್ಣೀರೆರೆಚುವಂತಿರಬಾರದು. ಹೆಣ್ಣು ಒಂದು ಜೀವ ಅದಕೂ ಆಸೆಗಳಿವೆ ಎಂಬುದನ್ನ ಗಂಡು ಮರೆಯಬಾರದು ಅದಕೆ ಪೂರಕವಾಗಿ ಹೆಣ್ಣು ತನ್ನಾಸೆಯನ್ನ ಒತ್ತೆಯಿಟ್ಟು ತಾನೇ ಸಂತೋಷದಿಂದಿರದಿದ್ದರೆ ತನ್ನ ಸುತ್ತಲಿನ ಪರಿಸರವನ್ನ ಹೇಗೆ ಸಂತೋಷದಿಂದಿಟ್ಟಾಳು ?? ಯಾವಾಗ ಒಂದನ್ನ ಪಡೆಯಲು ಇನ್ನೊಂದನ್ನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರತಾ ಇದೆ ಅಂದರೆ ಕಳೆದುಕೊಂಡು ಇಟ್ಟುಕೊಂಡಿರುವದು ಶಾಶ್ವತವಲ್ಲ ಅದನ್ನು ಮತ್ತೇನನ್ನೋ ಪಡೆಯಲು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವದು ಖಂಡಿತ. ಹಾಗಾದಾಗ ಖುಷಿ ಸಂತೋಷ ಇವುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುವ ಸಾಮಾನುಗಳಂತಾದರೆ ಮನುಷ್ಯನ ಭಾವನೆಗಳಿಗೆ ಬೆಲೆಕಟ್ಟಿ ತೂಕಮಾಡಿ ನಿರ್ಧರಿಸಲಾಗುವದು ಎಂದರ್ಥ ವಲ್ಲವಾ??

ಈಗಿನ ಸ್ಥಿತಿ ಮೊದಲಿಗಿಂತಲೂ ಕೊಂಚ ಭಿನ್ನ. ಶಿಕ್ಷಣ ಇದು ರಾಮಬಾಣದ ಹಾಗೆ ಇದ್ದು ಯಾರೂ ಕಸಿದುಕೊಳ್ಳಲಾರದ ಮಾರಾಟ ಮಾಡಲು ಸಾಧ್ಯವಾಗದ ಬೆಲೆ ಕಟ್ಟಲಾಗದ ವಸ್ತು. ಹೀಗಾಗಿ ಶಿಕ್ಷಣ ಹೆಣ್ಣು ಮಕ್ಕಳ ಪಾಲಿಗೆ ವರದಾನವಾಗಿದೆ ಅಂದರೆ ತಪ್ಪಾಗಲಾರದು. ಹೇಗೆ ಒಂಟಿ ಮಹಿಳೆ ಸ್ವಾವವಲಂಬಿಯಾಗಿ ಯಾರಿಗೂ ಭಾರವಾಗದ ರೀತಿಯಲ್ಲಿ ನಿಂತು ತನ್ನತನವನ್ನ ಉಳಿಸುಕೊಳ್ಳುವುದರ ಜೊತೆ ಇಡೀ ಕುಟುಂಬವನ್ನ ನೋಡಿಕೊಳ್ಳುವಂತೆ ಆಗಿದೆ. ಜೊತೆ ಜೊತೆಗೆ ತನ್ನೆಲ್ಲ ಆಸೆಯನ್ನು ಇಡೇರಿಸಿಕೊಳ್ಳಲು ಸನ್ಮಾರ್ಗವಾಗಿದೆ.
ಪ್ರತಿಯೊಂದೂ ಹೆಣ್ಣು ಶಿಕ್ಷಣ ಪಡೆದು ಅಂದರೆ ಎಲ್ಲರಿಗೂ ಐಎಎಸ್, ಐಪಿಎಸ್ ಮಾಡಿಸಿ ಅಂತ ಅರ್ಥವಲ್ಲ ಕನಿಷ್ಠಮಟ್ಟದ ೧೦ ನೇ ತರಗತಿಯವರೆಗಾದರೂ ಕಲಿತದ್ದೆೇ ಆದರೆ ಮುುಂದೆ ಯಾವುದೇ ಕಷ್ಟದ ಪರಿಸ್ಥಿತಿಗೆ ತನ್ನನ್ನು ತಾನು ತಯಾರಿಮಾಡಿಕೊಳ್ಳುವ ಹಂತಕ್ಕಾದರೂ ಕಲಿತ ವಿದ್ಯೆ ಸಹಕಾರಿಯಾಗುವದು. ಮೊದಲು ತಾನು ಸಮಾಧಾನ ಸಂತೋಷ ಹೊಂದಿದರೆ ಮಾತ್ರ ತನ್ನ ಸುತ್ತಮುುತ್ತಲಿನ ಪರಿಸರವನ್ನ ಪ್ರಸನ್ನ ವಾಗಿಟ್ಟುಕೊಳ್ಳುವಲ್ಲಿ ಸಂಶಯವೇ ಇಲ್ಲ. ಮದುವೆ ಇದು ಸಮಾಜದಲ್ಲಿ ಗಂಡು-ಹೆಣ್ಣು ಮರ್ಯಾದೆಯ ಚೌಕಟ್ಟಿನಲ್ಲಿ ತನ್ನೆಲ್ಲ ಬೇಕು-ಬೇಡಗಳನ್ನ ಇಷ್ಟಾರ್ಥಗಳನ್ನ ಪೂರೈಸಿಕೊಳ್ಳಲು ತನ್ಮೂಲಕ ವಂಶಾಭಿವೃದ್ಧಿಯಿಂದ ಸಮಾಜದಲ್ಲಿ ಉತ್ತಮ ನಾಗರೀಕರರನ್ನು ಸೃಷ್ಟಿ ಮಾಡುವಲ್ಲಿ ಸಹಕಾರಿ ಎಂದೆನಿಸುವದಾದರೆ ಯಾವುದೇ ಹೆಣ್ಣಿಗೆ ಮದುವೆ ಖಂಡಿತಾ ಉರುಳಾಗದೇ ಹೊಸತನಕ್ಕೆ ಹೊಸಬಾಳಿಗೆ ಹೊಸ ಏಳ್ಗೇಗೆ ಸಹಕಾರಿಯಾಗುವುದರಲ್ಲಿ ಬೇರೆ ಮಾತಿಲ್ಲ.
- ಶೀತಲ್ ಹೆಗಡೆ
