ಶಿಕ್ಷಕರ ದಿನಾಚರಣೆಯ ದಿನ ನಮ್ಮೆಲ್ಲರಿಗೂ ನಮ್ಮ ಗುರುಗಳನ್ನು ನೆನೆಯುತ್ತ ಕೃತಜ್ಞತೆ ಸಲ್ಲಿಸುವ ಸುದಿನ. ಜಗವನು ಪರಿಚಯಿಸುವುದು ತಾಯಿಯಾದರೆ ಅರ್ಥೈಸುವುದು ಗುರು.
ಶೂನ್ಯವಿದ್ದವನನ್ನು ಮಾನ್ಯನಾಗಿ ರೂಪಿಸುವ ಏಕೈಕ ದೇವರ ಪ್ರತಿರೂಪಿ. ಶಿಕ್ಷಕರ ದಿನದ ವಿಶೇಷತೆಯ ಕುರಿತು ಅವಿನಾಶ ಸೆರೆಮನಿ ಅವರ ಲೇಖನಿಯಲ್ಲಿ ಮೂಡಿದ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…
ಅಕ್ಷರಗಳನು ಕಲಿಸುತ ಜ್ಞಾನದ ಲೋಕವನ್ನು ಪರಿಚಯಿಸುವ ಜ್ಞಾನದ ಮೇರು. ತಪ್ಪಿದಾಗ ಬೆತ್ತದ ರುಚಿ ತೋರಿಸಿ ತಿದ್ದಿ ತೀಡಿ ಸನ್ಮಾರ್ಗದ ದಾರಿಯತ್ತ ಮುನ್ನಡೆಸಿ ತನ್ನೆಲ್ಲ ಜ್ಞಾನವನ್ನು ಪಾಠದ ಮೂಲಕ ಧಾರೆಯೆರೆದು ತನ್ನ ಮಕ್ಕಳಂತೆ ಸಲಹುವ ನಿಷ್ಕಲ್ಮಶ ಜೀವಿ.ರೀತಿ ನೀತಿ ಶಿಸ್ತು ಸಂಯಮ ಬೆಳೆಸುವ ಶಿಸ್ತಿನ ಸಿಪಾಯಿ, ಬದುಕಿಗೆ ದಾರಿದೀಪವಾಗುತ ಭವಿಷ್ಯ ರೂಪಿಸುವ ಭಗವಂತನ ಪ್ರತೀಕ.ಅರಿವಿನ ಕಣ್ಣು ತೆರೆಯುತ ವಿವಿಧ ವಿಷಯಗಳ ಮೂಲಕ ಜ್ಞಾನದ ಬೀಜವನ್ನು ಅಂಕುರಿಸುತ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ ದೈಹಿಕವಾಗಿ ಮಾನಸಿಕವಾಗಿ ಗಂಧದಂತೆ ಜೀವ ತೇಯ್ದು ವಿದ್ಯಾರ್ಥಿಗಳ ಏಳಿಗೆಯಲ್ಲೇ ಜೀವನ ಸಾರ್ಥಕಗೊಳಿಸುಕೊಳ್ಳುವ ಮಹಾ ಚೇತನರು. ಸಮಯದ ಅರಿವು ಮೂಡಿಸಿ ದಿನದ ಮಹತ್ವ ಅರುಹಿ ಕ್ಷಣ ಕ್ಷಣವೂ ಬದುಕಿನತ್ತ ಮನಸನು ಕರೆದೋಯ್ದು ಕನಸುಗಳ ಗರಿ ಮೂಡಿಸುವ ಭವಿಷ್ಯದ ಬೆಳಕು ಗುರುಗಳು.
ಕೆಲವರು ನಮ್ಮ ಬದುಕಿಗೆ ಬರುತ್ತಾರೆ
ಕೆಲವರು ನಮ್ಮ ಬದುಕನ್ನೇ ಬದಲಿಸುತ್ತಾರೆ.
ಅಂತಹ ಬದಲಾವಣೆಯ ಹಿಂದಿರುವ ಮಹತ್ತರ ಶಕ್ತಿಯೆ ಗುರು.
ಈ ಸಾಲುಗಳು ಗುರುವಿನ ಮಹತ್ವ ಸಾರುತ್ತವೆ. ಪುಸ್ತಕದ ಪುಟಗಳಲ್ಲಿರುವ ಜ್ಞಾನ ಮತ್ತು ಜೀವನದ ಪುಟಗಳ ನಡುವೆ ಸೇತುವೆಯ ಬೆಸೆಯುತ ಉತ್ತಮ ಮನುಷ್ಯನನ್ನಾಗಿ ರೂಪಿಸುತ ಸರ್ವ ರೀತಿಯಲ್ಲೂ ವಿದ್ಯಾರ್ಥಿಗಳಿಗೆ ಬೆನ್ನ ಹಿಂದಿನ ಬೆಳಕಾಗಿ ಪ್ರತಿಭೆಯನ್ನು ಗುರುತಿಸಿ ಮಾರ್ಗದರ್ಶನ ನೀಡುತ್ತಾರೆ. ಗೆದ್ದಾಗ ಬೆನ್ನು ತಟ್ಟಿ ಸೋತಾಗ ಗೆಲುವಿನ ಸನಿಹ ಪರಿಚಯಿಸಿ ಆತ್ಮವಿಶ್ವಾಸ ತುಂಬುತ ಧೈರ್ಯವ ತುಂಬುತ್ತಾರೆ.
ಗುರುವಿನ ಜ್ಞಾನದ ಮಹತ್ವವನ್ನು ಕೆಲವು ಉದಾಹರಣೆಗಳ ಮೂಲಕ ತಿಳಿಯಬಹುದು. ಏಕಲವ್ಯ ಮತ್ತು ದ್ರೋಣಾಚಾರ್ಯರ ಕಥೆ. ಏಕಲವ್ಯನಿಗೆ ಧನುರ್ವಿದ್ಯೆ ಕಲಿಯುವ ಅಪಾರ ಆಸೆ ಇತ್ತು. ದ್ರೋಣಾಚಾರ್ಯರನ್ನು ತನ್ನ ಗುರುವೆಂದು ಮನಸ್ಸಿನಲ್ಲಿ ಸ್ವೀಕರಿಸಿ, ಅವರ ಪ್ರತಿಮೆಯ ಮುಂದೆ ಅಭ್ಯಾಸ ಮಾಡುತ್ತಾ ತನ್ನ ಪ್ರತಿಭೆಯನ್ನು ಬೆಳೆಸಿಕೊಂಡನು.ಇನ್ನೊಂದು ಉದಾಹರಣೆ.

ಸ್ವಾಮಿವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರಿಗೆ ಸಂಬಂಧಿಸಿದ್ದು ಯುವ ನರೇಂದ್ರನಾಥರಲ್ಲಿದ್ದ ಅಪಾರ ಪ್ರತಿಭೆ ಮತ್ತು ಜಿಜ್ಞಾಸೆಗೆ ರಾಮಕೃಷ್ಣ ಪರಮಹಂಸರು ಸರಿಯಾದ ದಿಕ್ಕು ತೋರಿಸಿದರು. ಅವರ ಮಾರ್ಗದರ್ಶನದಿಂದ ನರೇಂದ್ರನಾಥರು ಮುಂದೆ ಸ್ವಾಮಿ ವಿವೇಕಾನಂದರಾಗಿ ಜಗತ್ತಿಗೆ ಭಾರತೀಯ ಸಂಸ್ಕೃತಿ, ಮಾನವೀಯತೆ ಮತ್ತು ಆತ್ಮವಿಶ್ವಾಸದ ಸಂದೇಶವನ್ನು ಸಾರಿದರು. ಹೀಗಾಗಿ, ಗುರುವಿನ ಜ್ಞಾನವು ವಿದ್ಯಾರ್ಥಿಯಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅದಕ್ಕೆ ಸರಿಯಾದ ದಿಕ್ಕು ನೀಡುವ ದಾರಿದೀಪವಾಗಿದೆ.
ಈ ಎರಡು ಉದಾಹರಣೆಗಳನ್ನು ಗಮನಿಸಿದಾಗ ಎಷ್ಟೇ ಬುದ್ದಿವಂತನಿದ್ದರೂ ಗುರುವಿನ ಜ್ಞಾನ, ಮಾರ್ಗದರ್ಶನ ಅವಶ್ಯ ಎಂಬುದು ಸಾರುತ್ತದೆ.ಏಕಲವ್ಯನ ಪರಿಶ್ರಮವಾಗಲಿ, ಸ್ವಾಮಿ ವಿವೇಕಾನಂದರ ಯಶಸ್ಸಾಗಲಿ . ಗುರು ಕೇವಲ ಪಾಠ ಕಲಿಸುವವರಲ್ಲ ವಿದ್ಯಾರ್ಥಿಯೊಳಗಿನ ಸಾಮರ್ಥ್ಯವನ್ನು ಅರಿತು, ಅದಕ್ಕೆ ಸೂಕ್ತ ದಿಕ್ಕು ತೋರಿಸುವ ದಾರಿದೀಪ ಎಂಬುದು ಸ್ಪಷ್ಟವಾಗುತ್ತದೆ.
ಇಂದಿನ ತಂತ್ರ ಜ್ಞಾನದ ಕಾಲಘಟ್ಟದಲ್ಲಿ ಗುರುವಿನ ಪಾತ್ರವೂ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಹಿಂದೆ ಗುರು ಎಂದರೆ ಪಾಠಪುಸ್ತಕದ ಜ್ಞಾನ ನೀಡುವ ವ್ಯಕ್ತಿ ಎಂಬ ಕಲ್ಪನೆಯಿತ್ತು. ಆದರೆ ಇಂದು ಗುರು ವಿದ್ಯಾರ್ಥಿಯ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತಲೂ, ಪ್ರಶ್ನಿಸುವ ಮನಸ್ಸನ್ನು ಬೆಳೆಸುವ ಮಾರ್ಗದರ್ಶಿಯಾಗಿದ್ದಾನೆ. ಮಾಹಿತಿ ಬೆರಳ ತುದಿಯಲ್ಲಿ ದೊರೆಯುವ ಈ ತಂತ್ರಜ್ಞಾನ ಯುಗದಲ್ಲಿ ಸರಿಯಾದ ಮಾಹಿತಿಯನ್ನು ಗುರುತಿಸುವ ವಿವೇಕ, ಸತ್ಯಾಸತ್ಯತೆಯನ್ನು ಅರಿಯುವ ದೃಷ್ಟಿ ಮತ್ತು ಜ್ಞಾನವನ್ನು ಬದುಕಿನಲ್ಲಿ ಬಳಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಗುರುವಿನ ಮಹತ್ತರ ಜವಾಬ್ದಾರಿ.
ಒಂದು ಸಣ್ಣ ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗೆ ಓದಿನಲ್ಲಿ ಅಪಾರ ಆಸಕ್ತಿ ಇತ್ತು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಅವನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿತ್ತು. ಶಾಲೆಗೆ ಬರಲು ಪುಸ್ತಕಗಳಿರಲಿಲ್ಲ, ಪರೀಕ್ಷೆಯ ಶುಲ್ಕ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಶಿಕ್ಷಕರು ಆ ಮಗುವಿನ ಪ್ರತಿಭೆಯನ್ನು ಕೈಬಿಡಲಿಲ್ಲ. ತಮ್ಮಿಂದಾದ ಸಹಾಯ ಮಾಡಿ, ಅಗತ್ಯ ಪುಸ್ತಕಗಳನ್ನು ಒದಗಿಸಿ, ಶಾಲೆಯ ನಂತರವೂ ಅವನಿಗೆ ಪಾಠ ಹೇಳುತ್ತಿದ್ದರು. ವರ್ಷಗಳ ನಂತರ ಆ ವಿದ್ಯಾರ್ಥಿ ಉತ್ತಮ ಸಾಧನೆ ಮಾಡಿ ತನ್ನ ಕಾಲ ಮೇಲೆ ನಿಂತಾಗ, ಶಿಕ್ಷಕರನ್ನು ಭೇಟಿಯಾಗಿ, ನನ್ನ ಬದುಕಿನಲ್ಲಿ ನಾನು ಕಂಡ ಮೊದಲ ಬೆಳಕು ನೀವೇ ಗುರುಗಳೇ ಎಂದನು.

ಇದು ಮೇಲಿನ ಉದಾಹರಣೆ ಗುರುವಿನ ತ್ಯಾಗವನ್ನು ವ್ಯಕ್ತಪಡಿಸುತ್ತದೆ. ಅನೇಕ ಶಿಕ್ಷಕರ ಬದುಕಿನಲ್ಲಿ ಪ್ರತಿದಿನ ನಡೆಯುವ ನಿಸ್ವಾರ್ಥ ಸೇವೆಯ ಪ್ರತಿಫಲ. ವಿದ್ಯಾರ್ಥಿಯ ಕಣ್ಣಿನಲ್ಲಿ ಭವಿಷ್ಯದ ಕನಸನ್ನು ಕಂಡು, ಆ ಕನಸು ನನಸಾಗುವವರೆಗೂ ಬೆಂಬಲವಾಗಿ ನಿಲ್ಲುವ ಗುರುವಿನ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಅವರು ತಮ್ಮ ಯಶಸ್ಸನ್ನು ಹುಡುಕುವುದಿಲ್ಲ ತಮ್ಮ ವಿದ್ಯಾರ್ಥಿಗಳ ಯಶಸ್ಸಿನಲ್ಲೇ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಾರೆ.
ಗುರುಗಳು ತಮ್ಮ ಬದುಕನ್ನು ಮೇಣದಂತೆ ಕರಗಿಸಿಕೊಂಡು, ನಮ್ಮ ಭವಿಷ್ಯವನ್ನು ಬೆಳಗಿಸುತ್ತಾರೆ. ತಾವು ಬೆಳಕಿನಲ್ಲಿ ನಿಂತು ಕತ್ತಲನ್ನು ದೂರ ಮಾಡುವುದಿಲ್ಲ ತಾವೇ ಬೆಳಕಾಗಿ, ನಮ್ಮಅಜ್ಞಾನ ಕತ್ತಲೆ ದೂರ ಮಾಡಿ ಸನ್ಮಾರ್ಗದ ದಾರಿಯನ್ನು ಬೆಳಗಿಸುತ್ತಾರೆ. ಅವರು ಬಿತ್ತಿದ ಒಂದು ಜ್ಞಾನದ ಬೀಜ, ಒಂದು ದಿನ ಸಾವಿರಾರು ಕನಸುಗಳಿಗೆ ಹೆಮ್ಮರವಾಗಬಹುದು. ಅವರು ಹೇಳಿದ ಒಂದು ಪ್ರೋತ್ಸಾಹದ ಮಾತು, ಕುಗ್ಗಿದ ಮನಸ್ಸಿಗೆ ಹೊಸ ಬದುಕಿನ ಭರವಸೆಯಾಗಿ ಸುಂದರ ಭವಿಷ್ಯಕ್ಕೆ ಮುನ್ನುಡಿಯಾಗುತ್ತದೆ.
ಗುರುಗಳೇ, ನೀವು ನನಗೆ ಅಂದು ಕೇವಲ ಅಕ್ಷರಗಳನ್ನು ಕಲಿಸಲಿಲ್ಲಅಕ್ಷರಗಳಾಚೆಗಿನ ಬದುಕನ್ನು ಕಲಿಸಿದ್ದೀರಿ. ನೀವು ಕೇವಲ ಪಾಠಗಳನ್ನು ಹೇಳಲಿಲ್ಲ ಜೀವನದ ಪಾಠಗಳನ್ನು ಕಲಿಸಿದ್ದೀರಿ. ನಾನು ಎಡವಿದಾಗ ಎದ್ದು ನಿಲ್ಲಲು, ಸೋತಾಗ ಮತ್ತೆ ಪ್ರಯತ್ನಿಸಲು, ಗೆದ್ದಾಗ ವಿನಯದಿಂದಿರಲು ಕಲಿಸಿದ್ದೀರಿ. ನನ್ನಲ್ಲಿದ್ದ ಚಿಕ್ಕ ಕನಸುಗಳಿಗೆ ನಿಮ್ಮ ಪ್ರೋತ್ಸಾಹದಿಂದ ರೆಕ್ಕೆ ಬಂದವು. ನನ್ನ ಮೇಲೆ ನನಗೆ ನಂಬಿಕೆ ಮೂಡಲು ನಿಮ್ಮ ಒಂದು ಮಾತೇ ಸಾಕಾಯಿತು. ತಂದೆ ತಾಯಿಯ ಋಣದಂತೆ ನಿಮ್ಮ ಋಣವನ್ನು ತೀರಿಸಲಾಗುವುದಿಲ್ಲ.
ನಾನು ಇಂದು ಎಷ್ಟೇ ಬೆಳೆದರೂ, ನನ್ನ ಮೊದಲ ಹೆಜ್ಜೆಯನ್ನು ಹಿಡಿದು ನಡೆಸಿದ ನಿಮ್ಮ ಕೈಗಳನ್ನು ಮರೆಯುವುದಿಲ್ಲ. ನನ್ನ ಹೆಸರಿನೊಂದಿಗೆ ಎಷ್ಟೇ ಸಾಧನೆಗಳು ಸೇರಿಕೊಂಡರೂ ಆ ಸಾಧನೆಯ ಹಿಂದೆ ನಿಮ್ಮ ಪರಿಶ್ರಮವಿದೆ ಎಂಬ ಸತ್ಯವನ್ನು ಎಂದಿಗೂ ಮರೆಯಲಾರೆ. ನೀವು ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆಯುತ್ತಿರುವೆ.ನಿತ್ಯ ಒಂದು ತುತ್ತು ಅನ್ನ ತಿನ್ನುವಾಗಲೂ ನಿಮ್ಮ ನೆನೆಯುವೆ.
ನೀವು ಕಲಿಸಿದ ಅಕ್ಷರಗಳು ಇಂದು ನನ್ನ ಬದುಕಿಗೆ ಬುನಾಡಿಯಾಗಿವೆ.ನೀವಿತ್ತ ಪ್ರೋತ್ಸಾಹ ನನ್ನ ಕನಸುಗಳಿಗೆ ರೆಕ್ಕೆ.ಒಳ್ಳೆಯ ಬದುಕು ನಡೆಸುವುದೇ ನಿಮಗೆ ಸಲ್ಲಿಸುವ ನನ್ನ ನಿಜವಾದ ಗುರುವಂದನೆ.ನನ್ನ ಬದುಕನ್ನು ರೂಪಿಸಿದ ಎಲ್ಲ ಗುರುಗಳಿಗೆ ಹೃದಯಪೂರ್ವಕ ಕೃತಜ್ಞತೆಯೊಂದಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ ಚರಣಗಳಿಗೆ ಎರಗುತ್ತಾ ಶತ ಶತ ನಮನಗಳನು ಸಲ್ಲಿಸುವೆ.
- ಅವಿನಾಶ ಸೆರೆಮನಿ – ಬೈಲಹೊಂಗಲ.
