ಕಲಭಾಗ್ ಮಾಷ್ಟ್ರು ಎಂದೂ ಯಾರಿಗೂ ಹೊಡೆದದ್ದು ನನಗೆ ನೆನಪಿಲ್ಲ. ಎಲ್ಲವನ್ನೂ ನಗುತ್ತಲೇ ನಿಭಾಯಿಸುತ್ತಿದ್ದರು. ಲೇಖಕರಾದ ಕಿರಣ ಭಟ್ ಅವರ ನೆನಪಿನಂಗಳದಲ್ಲಿ ಅವರ ಮೇಷ್ಟ್ರು, ತಪ್ಪದೆ ಮುಂದೆ ಓದಿ…
ಒಂದು ದೊಗಳೆ ಪ್ಯಾಂಟು, ಮೇಲೊಂದು ಅಷ್ಟೇ ದೊಗಳೆ ತಿಳಿ ಬಣ್ಣದ ಅಂಗಿ, ದಪ್ಪ ಕನ್ನಡಕ. ಸದಾ ತೆಳು ನಗು. ಕೈಲೊಂದು ಚಾಕ್ ಪೀಸ್. ಇಷ್ಟು ಹೇಳಿದರೆ ಹೊನ್ನಾವರದ ʼಸೇಂಟ್ ಥಾಮಸ್ ಹೈಸ್ಕೂಲಿʼನಲ್ಲಿ ಕಲಿತ ನಮ್ಮ ಓರಗೆಯ ಎಲ್ಲರೂ ತಕ್ಷಣ ʼಕಲಭಾಗ್ ಮಾಷ್ಟ್ರುʼ ಅಂತ ಸುಲಭವಾಗಿ ಹೇಳಿಬಿಡಬಹುದು.
ಹೌದು. ನಮಗೆಲ್ಲ ವಿಜ್ಞಾನ ಕಲಿಸುತ್ತಿದ್ದ ಕಲಭಾಗ್ ಮಾಷ್ಟ್ರು ಇದ್ದದ್ದು ಹಾಗೆ. ತುಂಬಾ ಸರಳ. ಜೊತೆಗೆ ಅವರ ಹಾಸ್ಯ ಪ್ರವೃತ್ತಿ ಅವರನ್ನು ಮಕ್ಕಳ ನಡುವೆ ಮೆಚ್ಚಿನವರನ್ನಾಗಿಸಿತ್ತು.
ಅವರಷ್ಟೇ ಸರಳವಾಗಿ ವಿಜ್ಞಾನ ಪಾಠ ಮಾಡುತ್ತಿದ್ದರು. ಎಲ್ಲರ ʼತಲೆಗೂ ಹತ್ತುವಂತೆʼ. ಅವರ ಕ್ಲಾಸಿನ ಮಧ್ಯೆ ಅಲ್ಲಲ್ಲಿ ಜೋಕುಗಳೂ ಇರುತ್ತಿದ್ದವು. ನಮ್ಮದು ಸ್ವಲ್ಪ ತುಂಟರ ಕ್ಲಾಸು. ತಡವಾಗಿ ಬಂದು ಸುಳ್ಳು ಹೇಳುವದು, ಹೋಂ ವರ್ಕ್ ಮಾಡದೆ ಮಾಡಿದ್ದೇನೆ ಅಂತ ಹೇಳುವದು ಸಾಮಾನ್ಯವಾಗಿದ್ದವು. ಅವುಗಳನ್ನು ಕಂಡು ಹಿಡಿದು ಅವರು ಹೇಳುತ್ತಿದ್ದ ಉಕ್ತಿಯೊಂದು ತುಂಬ ಜನಪ್ರಿಯವಾಗಿತ್ತು.

ಸುಳ್ಳು ಎಂದಾದರೂ ಹೊರಗೆ ಬಂದೇ ಬರುತ್ತದೆ ಎನ್ನುವದಕ್ಕೆ ಅವರು ಹೇಳುತ್ತಿದ್ದ ಮಾತು ‘ಎಂತದೂ ಮುಚ್ಚಡ್ಲಿಕ್ಕಾಗೂದಿಲ್ಲ : ನೀರಲ್ಲಿ ಹೇತ್ ಹಾಕಿದ್ರೆ ಮೇಲ್ ಬರ್ತದೆʼ. ಇದು ಮತ್ತೆ ಮತ್ತೆ ರಿಪೀಟ್ ಆಗ್ತಿತ್ತು. ನಾವೆಲ್ಲ ಶಕ್ತಿ ಮೀರಿ ನಗುತ್ತಿದ್ದೆವು.
ಕಲಭಾಗ್ ಮಾಷ್ಟ್ರು ಎಂದೂ ಯಾರಿಗೂ ಹೊಡೆದದ್ದು ನನಗೆ ನೆನಪಿಲ್ಲ. ಎಲ್ಲವನ್ನೂ ನಗುತ್ತಲೇ ನಿಭಾಯಿಸುತ್ತಿದ್ದರು. ಇವರು ಇದ್ದ ಕಾಲದಲ್ಲಿ ಇನ್ನೊಬ್ಬ ಮಕ್ಕಳ ನೆಚ್ಚಿನ ʼಅಬ್ರಹಾಂ ಮಾಷ್ಟ್ರುʼ ಶಾಲೆಯ ಪ್ರಿನ್ಸಿಪಾಲ್ ಆಗಿದ್ದರು.
ಇವರ ಜೋಡಿಯ ಹೆಸರು ಸೇರಿಸಿ ʼ ಅಬ್ ರಾಮ್- ಕಲ್ ಭಾಗ್ʼ : ʼಈಗ ರಾಮ- ನಾಳೆ ತೋಟʼ ಎಂದು ಯಾರೋ ʼಮರಿ ಅನುವಾದ ಶಾಸ್ತ್ರಜ್ಞʼ ರು ಕಂಡು ಹಿಡಿದಿದ್ದರು.
ಕಲಭಾಗ್ ಮಾಷ್ಟ್ರು ಮನೆಯಲ್ಲಿ ಕೆಲವು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಹೊನ್ನಾವರದ ರಥಬೀದಿಯ ಅವರ ಮನೆಗೆ ಹಿಂಡುಗಟ್ಟಿ ಮಕ್ಕಳು ಹೋಗುತ್ತಿದ್ದರು. ಅವರಲ್ಲಿ ಫೀಸ್ ಕೊಟ್ಟವರೆಷ್ಟೋ ಬಿಟ್ಟವರೆಷ್ಟೋ. ಅವರೆಂದೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಅಂಥ ಮಾನವೀಯ ಮನಸ್ಸುಗಳವು. ಪಾಠದ ಜೊತೆಗೆ ಮಾನವೀಯತೆಯನ್ನೂ ಚಿಗುರಿಸಿದ ಅಂಥ ವ್ಯಕ್ತಿತ್ವಗಳಿಗೆ ಶರಣು.
- ಕಿರಣ ಭಟ್, ಹೊನ್ನಾವರ.
