ಬದುಕಿಗೊಂದು ಸೆಲೆ (ಭಾಗ- ೭೪)

ಎಷ್ಟೋ ಬಾರಿ ಕೇವಲ ಒಬ್ಬರೇ ವ್ಯಕ್ತಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಾಗ ಅವರ ಆರೋಗ್ಯ ಕೈ ಕೊಟ್ಟರೆ ಬದುಕು ಅತ್ಯಂತ ದುರ್ಬರವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಡಾಕ್ಟರ್ ಬಿಂದು ಅವರಂತವರ ಕಾರ್ಯಗಳು ಸಂಜೀವಿನಿಯಂತೆ ತೋರುತ್ತವೆ ಅಲ್ಲವೇ?. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಡಾ.ಬಿಂದು ಮೆನನ್’ ತಪ್ಪದೆ ಮುಂದೆ ಓದಿ…

ಗ್ರಾಮೀಣ ಭಾರತದ ಆಶಾ ದೀಪ…

ಹಲವಾರು ವರ್ಷಗಳಿಂದ ದಣಿವರಿಯದೆ ಕಾರ್ಯನಿರ್ವಹಿಸುತ್ತಿರುವ ಡಾಕ್ಟರ್ ಬಿಂದು ಮೇಡಂ ಓರ್ವ ನರರೋಗ ಶಾಸ್ತ್ರಜ್ಞರು. ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ಭಾಗದ ಜನರಿಗೆ ಹಾಗೂ ಅತ್ಯಂತ ಕುಗ್ರಾಮಗಳಲ್ಲಿ, ಬುಡಕಟ್ಟುಗಳಲ್ಲಿ ವಾಸಿಸುತ್ತಿರುವ ಜನರಿಗೆ ಉಚಿತವಾಗಿ ಆರೋಗ್ಯ ಚಿಕಿತ್ಸೆಯನ್ನು ನೀಡುತ್ತಿರುವ ಡಾಕ್ಟರ್ ಬಿಂದು ಕಾರ್ಯ ಸ್ತುತ್ಯಾರ್ಹ.

ಭಾರತ ದೇಶದಾದ್ಯಂತ ಗ್ರಾಮೀಣ ಭಾಗಗಳಲ್ಲಿ ಹಾಗೂ ಅತ್ಯಂತ ಹಿಂದುಳಿದ ಗ್ರಾಮಗಳಲ್ಲಿ ಆರೋಗ್ಯ ಸೇವೆಯನ್ನು ಅವರ ಮನೆ ಬಾಗಿಲಿಗೆ ತರುತ್ತಿರುವ ಡಾ.ಬಿಂದು ಅವರು ವೈದ್ಯಕೀಯ ಕ್ಯಾಂಪುಗಳನ್ನು ಅಲ್ಲಲ್ಲಿ ಆಯೋಜಿಸುತ್ತಾ ವಿಶೇಷ ಅಗತ್ಯತೆಯುಳ್ಳ ಜನರಿಗೆ ಚಿಕಿತ್ಸೆ ಮತ್ತು ಔಷಧೋಪಚಾರಗಳನ್ನು ಒದಗಿಸುತ್ತಿದ್ದಾರೆ.


ಮಹಾನಗರದ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಡಾಕ್ಟರ್ ಬಿಂದು ಅವರು ಮಹಾನಗರಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಇರುವ ವೈದ್ಯಕೀಯ ಸೌಕರ್ಯ ಹಾಗೂ ಚಿಕಿತ್ಸೆಯಲ್ಲಿರುವ ಗಮನಾರ್ಹ ಅಂತರವನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದರು. ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ಹಾಗೂ ಕಾಳಜಿಯ ಮೂಲಕ ಗ್ರಾಮೀಣ ಜನರು ತಮ್ಮ ತೊಂದರೆಗಳಿಂದ ಮುಕ್ತರಾಗಲು ಸಾಧ್ಯ ಎಂಬ ತಿಳುವಳಿಕೆಯನ್ನು ಅವರಿಗೆ ನೀಡುವ ಜೊತೆಗೆ ನರರೋಗ ಸಂಬಂಧಿ ತೊಂದರೆಗಳಲ್ಲಿ ಕೇವಲ ಒಂದೆರಡು ಅಲಕ್ಷ್ಯದ ಘಟನೆಗಳು ಮಾರಣಾಂತಿಕವಾಗಬಲ್ಲದು ಅಥವಾ ದೀರ್ಘಕಾಲದ ಚಿಕಿತ್ಸೆಯ ಅವಶ್ಯಕತೆಗೆ ಒಳಗಾಗುವ ಕುರಿತು ಆಕೆ ಸದಾ ಚಿಂತನೆ ನಡೆಸುತ್ತಿದ್ದರು.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಯಾವ ತೊಂದರೆಗೆ ಯಾವ ವೈದ್ಯರ ಬಳಿ ಚಿಕಿತ್ಸೆಗೆ ಹೋಗಬೇಕು ಎಂಬುದರ ಅರಿವೇ ಇಲ್ಲದ ಕಾರಣ ಸೂಕ್ತ ಸಮಯದಲ್ಲಿ ತಪಾಸಣೆ ದೊರೆಯದ, ಚಿಕಿತ್ಸೆ ದೊರೆಯದ ಹಾಗೂ ಮೂಲಭೂತ ಅರಿವು ಇರದ ಕಾರಣ ತೊಂದರೆ ಮತ್ತಷ್ಟು ಗಂಭೀರ ಸ್ವರೂಪವನ್ನು ತಾಳುತ್ತದೆ ಎಂಬುದ ಅವರ ಗಮನಕ್ಕೆ ಬಂತು. ಪರಿಣಾಮವಾಗಿ ಡಾ.ಬಿಂದು ಅವರು ತಮ್ಮದೇ ಒಂದು ವೈದ್ಯಕೀಯ ಸಹಾಯಕರ ತಂಡವನ್ನು ಕಟ್ಟಿಕೊಂಡು ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಾ ಅಲ್ಲಿನ ಜನರಿಗೆ ಆರೋಗ್ಯದ ಮೂಲಭೂತ ತಿಳುವಳಿಕೆಗಳು, ಆಹಾರ, ಸ್ವಚ್ಛತೆ, ದೈಹಿಕ ಹಾಗೂ ಮಾನಸಿಕ ತೊಂದರೆಗಳ ಅರಿವನ್ನು ಮೂಡಿಸುತ್ತಾ ಸಾಗಿದರು. ಅದರಲ್ಲೂ ವಿಶೇಷವಾಗಿ ನರ ರೋಗಕ್ಕೆ ಸಂಬಂಧಪಟ್ಟಂತೆ ಮೂರ್ಛೆರೋಗ, ಪಾರ್ಶ್ವವಾಯು, ಅರೆ ತಲೆನೋವು ಹಾಗೂ ಪಾರ್ಕಿನ್ ಸನ್ ತೊಂದರೆಗಳ ಕುರಿತು ಜನರಲ್ಲಿ ವಿಶೇಷ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರು. ಬಹಳಷ್ಟು ಬಾರಿ ನರಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುರುತಿಸದೇ ಹೋಗುವ ಕಾರಣದಿಂದಾಗಿ ಸರಿಯಾದ ಮಾಹಿತಿಯ ಕೊರತೆಯಿಂದ ಉಂಟಾಗಬಹುದಾದ ಗಂಭೀರ ಸ್ವರೂಪದ ತೊಂದರೆಗಳ ಕುರಿತು ಜನರಲ್ಲಿ ಕ್ಯಾಂಪುಗಳ ಮೂಲಕ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ. ಈ ಕ್ಯಾಂಪುಗಳಲ್ಲಿ ರೋಗಿಗಳಿಗೆ ಸರಿಯಾದ ಸಮಯದಲ್ಲಿ ವೈದ್ಯಕೀಯ ತಪಾಸಣೆ, ಸೂಕ್ತ ಸಲಹೆ-ಸೂಚನೆಗಳು ಹಾಗೂ ಉಚಿತವಾಗಿ ಔಷಧಿಯು ದೊರೆಯುವ ಕಾರಣ ಅವರಿಗೆ ಆರ್ಥಿಕ ಹೊರೆಯನ್ನು ತಪ್ಪಿದ್ದು ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣವಾಗಿದೆ.

ವೈದ್ಯಕೀಯ ಚಿಕಿತ್ಸೆಯಷ್ಟೇ ಕಾಯಿಲೆಯ ಕುರಿತಾದ ಅರಿವು ಕೂಡ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಡಾ. ಬಿಂದು ಮೆನನ್ ಅಭಿಪ್ರಾಯ ಪಡುತ್ತಾರೆ. ರೋಗಿಯ ಕುಟುಂಬದ ಸದಸ್ಯರಿಗೆ ಆಕೆ ನರಗಳಿಗೆ ಸಂಬಂಧಿಸಿದಂತೆ ಉಂಟಾಗುವ ತೊಂದರೆಗಳು ಹಾಗೂ ಕಾಯಿಲೆಗಳು ತಲೆದೋರುವ ಮುನ್ಸೂಚನೆಗಳ ಕುರಿತು ಅರಿವನ್ನು ಮೂಡಿಸುತ್ತಾರೆ
ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ತಪ್ಪಿಸಬಹುದಾದ ತೊಂದರೆಗಳ ಕುರಿತು ತಿಳಿ ಹೇಳುತ್ತಾರೆ. ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅರಿವನ್ನು ಮೂಡಿಸಲಾಗುತ್ತಿದೆ.

ಆರೋಗ್ಯ ಸೇವೆಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಲು ಡಾ.ಬಿಂದು ಮೆನನ್ ಅವರು ಒಂದು ಆ್ಯಪನ್ನು ಸಿದ್ಧಪಡಿಸಿದ್ದು ಇದರ ಜೊತೆಗೆ ಆರೋಗ್ಯ ಸಹಾಯವಾಣಿಯನ್ನು ಕೂಡ
ಅಭಿವೃದ್ಧಿಪಡಿಸಿದ್ದಾರೆ. ಈ ಆರೋಗ್ಯ ಸಹಾಯವಾಣಿಯ ಮೂಲಕ ಅತ್ಯಂತ ದೂರದ ಸ್ಥಳಗಳಲ್ಲಿ ಇರುವವರು ಕೂಡ ಸೂಕ್ತ ಸಮಯದಲ್ಲಿ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪಡೆದು ತ್ವರಿತ ಚಿಕಿತ್ಸೆಗೆ ಒಳಗಾಗಬಹುದು. ಅತ್ಯಂತ ಸರಳವಾದರೂ ಪರಿಣಾಮಕಾರಿಯಾಗಿರುವ ಡಾ.ಬಿಂದು ಮೆನನ್ ಅವರ ಈ ಕಾರ್ಯವು ನಂಬಿಕೆಯ ಬಲದ ಮೇಲೆ ನಿಂತಿದೆ. ಉತ್ತಮ ಗುಣಮಟ್ಟದ ಆರೋಗ್ಯ ಕಾಳಜಿಯು ಜನರು ವಾಸಸುತ್ತಿರುವ ಊರು, ಸ್ಥಳ ಹಾಗೂ ಅವರ ಆರ್ಥಿಕ ಸ್ಥಿತಿಯ ಮೇಲೆ ಅವಲಂಬಿತವಾಗಬಾರದು ಎಂಬುದು ಡಾ.ಬಿಂದು ಅವರ ಕಾಳಜಿ
ಡಾ.ಬಿಂದು ಅವರ ಈ ಕಾರ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅರಿತ ಲಕ್ಷಾಂತರ ಜನರು ಅವರನ್ನು ಪ್ರಶಂಸಿಸಿದ್ದು ಅವರ ಶ್ರದ್ಧೆ, ಕಾರ್ಯತತ್ಪರತೆ, ಸಹಾನುಭೂತಿ ಹಾಗೂ ಸೇವಾ ಮನೋಭಾವವನ್ನು ಕೊಂಡಾಡಿದ್ದಾರೆ. ಓರ್ವ ವ್ಯಕ್ತಿಯ ಸಂಕಲ್ಪ ಶಕ್ತಿಯು ಯಾವ ರೀತಿ ಒಂದು ಇಡೀ ಸಮುದಾಯದ ಆರೋಗ್ಯ ಸೇವೆಯಲ್ಲಿ ಗಮನಾರ್ಹ ಬದಲಾವಣೆ ತರಲು
ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿ ಡಾ.ಬಿಂದು ಅವರು ನಮ್ಮ ಮುಂದಿದ್ದಾರೆ.

ನೋಡಿದಿರಾ ಸ್ನೇಹಿತರೆ!! ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರ, ಬಟ್ಟೆ, ವಸತಿಗಳ ಜೊತೆಗೆ ಉತ್ತಮ ಆರೋಗ್ಯ ಕೂಡ ಒಂದು. ಏನೆಲ್ಲಾ ಇದ್ದು ಆರೋಗ್ಯವೇ ಸರಿಯಿಲ್ಲದೇ ಹೋದಾಗ ವ್ಯಕ್ತಿಯು ಕೇವಲ ತನ್ನ ಆರೋಗ್ಯದ ಕುರಿತು ಚಿಂತಿಸುತ್ತಾನೆ. ಆರೋಗ್ಯ ಚೆನ್ನಾಗಿ ಇದ್ದು ಉಳಿದೆಲ್ಲ ಭೌತಿಕ ಸುಖಗಳು ಇಲ್ಲದೆ ಹೋದರೂ ಅವುಗಳನ್ನು ಸಂಪಾದಿಸಲು ಸಾಧ್ಯ. ಎಷ್ಟೋ ಬಾರಿ ಕೇವಲ ಒಬ್ಬರೇ ವ್ಯಕ್ತಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಾಗ ಅವರ ಆರೋಗ್ಯ ಕೈ ಕೊಟ್ಟರೆ ಬದುಕು ಅತ್ಯಂತ ದುರ್ಬರವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಡಾಕ್ಟರ್ ಬಿಂದು ಅವರಂತವರ ಕಾರ್ಯಗಳು ಸಂಜೀವಿನಿಯಂತೆ ತೋರುತ್ತವೆ ಅಲ್ಲವೇ?.

ಇದನ್ನು ಕೇವಲ ಡಾ. ಬಿಂದು ಅವರು ಮಾತ್ರ ಮಾಡಿದರೆ ಸಾಲದು. ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಂಡಿರುವ ಸಂಘ ಸಂಸ್ಥೆಗಳು, ಸಮಾಜ ಸೇವಕರು, ಸ್ವ ಘೋಷಿತ ನಾಯಕರು ಹಾಗೂ ಅವರ ಹಿಂಬಾಲಕರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು…. ಆ ಮೂಲಕ ಸ್ವಸ್ಥ ಮತ್ತು ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಕಾರಣೀಭೂತ ರಾಗಬೇಕು.
ಇಂದಿಗೂ ಕೂಡ ಆರೋಗ್ಯ ಸೇವೆಯು ಗ್ರಾಮೀಣ ಭಾಗದಲ್ಲಿ ದುಸ್ತರವಾಗಿರುವ ಕಾರಣ ಬಿಂದು ಮೆಲ್ಲನವರ ಈ ಮಾನವೀಯ ಕಾರ್ಯ ವು ಜನರಿಗೆ ವರದಾನವಾಗಿದ್ದು ಮಾನವೀಯತೆ, ಸಹಾನುಭೂತಿ , ದಯಾ ಗುಣ ಹಾಗೂ ಸೇವೆಯ ಮೂಲಕ ಸಮುದಾಯದ ಸೇವೆಯನ್ನು ಕೈಗೊಳ್ಳುವ ಜನರಿಗೆ ಮಾದರಿಯಾಗಿದೆ ಎಂದರೆ ತಪ್ಪಿಲ್ಲ ಬಿಂದು ಅವರಂತಹ ವೈದ್ಯರ ಸಂತತಿ ನೂರು ಸಾವಿರವಾಗಲಿ ಎಂದು ಹಾರೈಸುವ


  • ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading