ಸರ್ವಮಂಗಳ ಜಯರಾಂ ಅವರ ‘ಪಿಸು ಮಾತು’ ಕೃತಿಯಲ್ಲಿನ ಲಲಿತ ಪ್ರಬಂಧಗಳನ್ನು ಒಂದು ರೀತಿಯಲ್ಲಿ ಆತ್ಮಚರಿತ್ರೆಯ ಒಂದು ಭಾಗ ಎಂದೇ ಹೇಳಬಹುದು. ಲೇಖಕರು ಸುಮಾ ರಮೇಶ್ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪಿಸು ಮಾತು
ಲೇಖಕರು : ಸರ್ವಮಂಗಳ ಜಯರಾಂ
ಜಗತ್ತಿನ ಯಾವುದೇ ಸಾಹಿತ್ಯವು ಯುಗ ಧರ್ಮದ ಮೂಸೆಯಿಂದ ಹೊರ ಬಂದು ತನಗೆ ತಕ್ಕ ಆಕಾರವನ್ನು ಪಡೆಯುತ್ತದೆ. ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಎಂಬ ಸಾಹಿತ್ಯ ಪ್ರಕಾರ ಇಪ್ಪತ್ತನೆಯ ಶತಮಾನದ ಮೊದಲಲ್ಲಿ ಹುಟ್ಟಿಕೊಂಡಿತು. ಇದಕ್ಕೆ ಇಂಗ್ಲೀಷ್ ಭಾಷೆಯ ಪ್ರಬಂಧಗಳೇ ಮೂಲ ಪ್ರೇರಣೆ. ಓದುಗರೊಂದಿಗೆ ಸಲುಗೆಯಿಂದ ಆತ್ಮೀಯವಾಗಿ ತನ್ನ ಮನಸ್ಸನ್ನು ಬಿಚ್ಚಿಡುವ ರೀತಿ ಪ್ರಬಂಧದ ಪ್ರಮುಖ ಲಕ್ಷಣವಾಗಿದೆ. ಪ್ರಬಂಧಗಳಲ್ಲಿ ವೈಜ್ಞಾನಿಕ ಪ್ರಬಂಧಗಳು, ವೈಚಾರಿಕ ಪ್ರಬಂಧಗಳು, ವೈಯಕ್ತಿಕ ಅನುಭವಗಳನ್ನು ಆಧರಿಸಿದ ಪ್ರಬಂಧಗಳು ಹಾಗೂ ಲಲಿತ ಪ್ರಬಂಧಗಳು ಎಂಬ ಅನೇಕ ಪ್ರಭೇದಗಳಿವೆಯಾದರೂ ಲಲಿತ ಪ್ರಬಂಧಕ್ಕೆ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನಮಾನಗಳು ಪ್ರಾಪ್ತವಾಗಿವೆ. ಲಲಿತ ಪ್ರಬಂಧಗಳನ್ನು ಒಂದು ರೀತಿಯಲ್ಲಿ ಆತ್ಮಚರಿತ್ರೆಯ ಒಂದು ಭಾಗ ಎಂದೇ ಹೇಳಬಹುದು. ಬಹುಪಾಲು ಪ್ರಬಂಧಗಳು ಸ್ವಾನುಭವವೇ ಆಗಿರುತ್ತವೆ. ಈ ಪ್ರಕಾರದಲ್ಲಿ ಲಾಲಿತ್ಯ ಮಿಳಿತವಾಗಿರುವುದರಿಂದ ಹಾಸ್ಯಕ್ಕೆ ಸಾಕಷ್ಟು ಪ್ರಾಧಾನ್ಯ ಇದೆ.
ಸಾಮಾನ್ಯವಾಗಿ ಪ್ರಬಂಧದಲ್ಲಿ ವಿಚಾರದ ಏಕತೆ, ವಿಷಯ ಸಂಗ್ರಹ, ಕ್ರಮಬದ್ಧತೆ, ವಿಷಯ ವಿಸ್ತಾರ, ವೈವಿಧ್ಯತೆ, ಸರಳ ಶೈಲಿ, ಸಂಕ್ಷಿಪ್ತತೆ, ವೈಯಕ್ತಿಕತೆ, ಸೂಕ್ತ ವಿಷಯ ನಿರೂಪಣೆ, ಸುಸಂಬದ್ಧತೆ, ಸಮತೋಲನದ ವಿಷಯದ ತಾರ್ಕಿಕ ಜೋಡಣೆ ಹಾಗೂ ಪರಿಣಾಮಕಾರಿಯಾದ ಶುದ್ಧ ಸುಲಭ ಶೈಲಿ ಇರಬೇಕು. ಇವೇ ಉತ್ತಮ ಪ್ರಬಂಧದ ಲಕ್ಷಣಗಳು. ಪ್ರಬಂಧ ಎನ್ನುವುದು ಕೇವಲ ಶಬ್ದಗಳ ಶ್ರೀಮಂತಿಕೆಯಿಂದ ಕೂಡಿದ ಸಾಲುಗಳಷ್ಟೇ ಅಲ್ಲದೆ ಓದುಗರ ಭಾವನಾತರಂಗಗಳನ್ನು ಆವರಿಸುವ ಕಲೆ. ಲಲಿತ ಪ್ರಬಂಧಕ್ಕೆ ಅದರದ್ದೇ ಆದ ಒನಪು, ಹೊಳಪು ಪ್ರಾಪ್ತವಾಗುವುದು ಪ್ರಬಂಧಕಾರನ ಅಧ್ಯಯನ, ಜೀವನಾನುಭವ ಹಾಗೂ ಸ್ವಾರಸ್ಯಕರವಾಗಿ ಹರಟುವ ಮನೋಭೂಮಿಕೆಗಳು ಗಟ್ಟಿಯಾಗಿದ್ದಾಗ ಮಾತ್ರ. ಅಂತಹ ಪ್ರಬಂಧ ಮಾಧ್ಯಮವನ್ನು ಆರಿಸಿಕೊಂಡು ಲೇಖಕಿ ಸರ್ವಮಂಗಳ ಜಯರಾಂ ಅವರು ತಮ್ಮ ಬದುಕಿನ ಸುತ್ತಮುತ್ತ ನಡೆಯುವ ಅನೇಕ ವಿಚಾರಗಳನ್ನು ಸುಲಲಿತವಾಗಿ, ನವಿರಾಗಿ ತೆರೆದಿಡುತ್ತಾ ಓದುಗರಿಗೆ ಆಪ್ತವಾಗುತ್ತಾ ಹೋಗುತ್ತಾರೆ.
ಈಗಾಗಲೇ ಕತೆ, ಕವನ, ಗಜಲ್, ಕಾದಂಬರಿ, ಅಂಕಣ ಬರಹ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಸರ್ವ ಮಂಗಳ ಅವರು ಇಲ್ಲಿ ‘ ಪಿಸುಮಾತು ‘ ಎಂಬ ಶೀರ್ಷಿಕೆಯಲ್ಲಿ ತಮ್ಮ ಅನುಭವಗಳ ರಸಪಾಕವನ್ನು ಓದುಗರಿಗೆ ಉಣಬಡಿಸಿದ್ದಾರೆ.
ಇಲ್ಲಿರುವ ಸುಮಾರು ನಲವತ್ತನಾಲ್ಕು ಪ್ರಬಂಧಗಳನ್ನು ಲೇಖಕಿ ಬಹಳ ಸರಳವಾದ ಭಾಷೆಯಲ್ಲಿ ಆಸಕ್ತಿದಾಯಕವಾಗಿ ಲವಲವಿಕೆಯಿಂದ ನಿರೂಪಿಸುತ್ತಾ ಹೋಗಿರುವರು. ಯಾವುದೇ ಆಡಂಬರದ ಕೈಚಳಕಗಳಿಲ್ಲದೆ ಇಲ್ಲಿನ ಪ್ರಬಂಧಗಳು ತಮ್ಮ ಸಹಜ ನಡಿಗೆಯಿಂದ ಆಕರ್ಷಿಸುತ್ತವೆ. ತಮ್ಮ ಶಾಲಾದಿನಗಳ ಮುಗ್ಧತೆ, ಕಾಲೇಜು ವಿದ್ಯಾಭ್ಯಾಸದ ಮೋಜಿನ ಪ್ರಸಂಗಗಳು, ಹಾಸ್ಟೆಲ್ ಜೀವನದ ತುಂಟಾಟಗಳು, ಶಿಕ್ಷಕಿಯಾಗಿ ವಿದ್ಯಾರ್ಥಿಗಳೊಂದಿಗಿನ ಒಡನಾಟ, ಕೌಟುಂಬಿಕ ಜವಾಬ್ದಾರಿಗಳೊಂದಿಗೆ ವೃತ್ತಿ ಜೀವನವನ್ನು ತೂಗಿಸಿಕೊಂಡು ಹೋಗುವಾಗಿನ ತಲ್ಲಣಗಳು ಹಾಗು ಸವಾಲುಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ತೆರೆದಿಡುತ್ತಾ ಹೋಗುವರು.

ಬಾಲ್ಯ ಕಾಲದಲ್ಲಿ ಸಮೃದ್ಧವಾಗಿ ದೊರೆಯುತ್ತಿದ್ದ ಹಣ್ಣು ಹಂಪಲು, ತಿಂಡಿ ತಿನಿಸುಗಳನ್ನು ಕೂಡು ಕುಟುಂಬದ ಸದಸ್ಯರೊಡನೆ ಹಂಚಿ ತಿನ್ನುತ್ತಿದ್ದುದು… ಮಾವಿನಹಣ್ಣಿನ ಕಾಲದಲ್ಲಿ ಬುಟ್ಟಿಗಟ್ಟಲೆ ಪರಿಮಳ ಭರಿತ ಹಣ್ಣುಗಳನ್ನು ತಂದಾಗ ತೊಳೆದು ಕತ್ತರಿಸಿದ ಹೋಳುಗಳನ್ನು ಬಿಟ್ಟು ಅದರ ಓಟೆಗಾಗಿ ಎಲ್ಲರೂ ಕಿತ್ತಾಡುತ್ತಿದ್ದುದನ್ನು ಬಹಳ ರಂಜನೀಯವಾಗಿ ಚಿತ್ರಿಸಿದ್ದಾರೆ. ಓಟೆಗೆ ಮೆತ್ತಿಕೊಂಡ ಹಣ್ಣನ್ನು ತಿಂದು ಓಟೆಯನ್ನು ಬಿಳಿಯಾಗಿಸಿದ ನಂತರ ಅದನ್ನೇ ಚೆಂಡು ಮಾಡಿಕೊಂಡು ಎಲ್ಲರ ಬೆನ್ನಿಗೂ ಬೀಸಿ ಒಗೆಯುತ್ತಾ ಆಡುತ್ತಿದ್ದ ವಾಟೆಯಾಟೆದ ನೆನಪು ಒಂದು ಸುಂದರ ಪ್ರಬಂಧವಾಗಿದೆ.
ಪ್ರೌಢರಾಗುತ್ತಾ ಹೋದಂತೆ ಸಹಜವಾಗಿ ಆಗುವ ದೈಹಿಕ ಬದಲಾವಣೆಗಳ ಬಗೆಗಿದ್ದ ಬಾಲ್ಯ ಸಹಜ ಕುತೂಹಲಗಳಿಗೆ ಸೂಕ್ತ ಉತ್ತರ ಪಡೆಯಲು ಅಂದು ಇಂದಿನಂತೆ ಗೂಗಲ್ ನ ಸಹಾಯವಿರಲಿಲ್ಲ. ದೂರದರ್ಶನದಲ್ಲಿ ಬರುತ್ತಿದ್ದ ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆ ತಿಳಿಯಲು ನಿಘಂಟನ್ನು ಶೋಧಿಸಿ ಆ ಬಗ್ಗೆ ಅಕ್ಕಂದಿರ ಪಿಸುಮಾತನ್ನು ಆಲಿಸುತ್ತಲೇ ತಮ್ಮ ಅಮಾಯಕತೆಗೆ ತೆರೆ ಎಳೆಯುವಂಥ ಪ್ರಸಂಗ ಎದುರಾದದ್ದು ಇಲ್ಲಿ ಪಿಸುಮಾತಾಗದೆ ಈ ಸಂಕಲನದ ಶೀರ್ಷಿಕೆ ಬರಹವಾಗಿ, ಗಟ್ಟಿ ದನಿಯಾಗಿ ಹೊರಹೊಮ್ಮಿದೆ.
ಶಿಕ್ಷಕ ವೃತ್ತಿಯ ಒತ್ತಡ, ಜವಾಬ್ದಾರಿಗಳು, ಮಕ್ಕಳಿಗೆ ಕಲಿಸುವ ಶ್ರಮದ ಜೊತೆ ಜೊತೆಗೇ ಎಳೆಯರ ಸಖ್ಯ ಕೊಡುವ ಆನಂದ, ಕೆಲವೊಮ್ಮೆ ಕೋಪ ತರಿಸುವ, ಕಂಗೆಡಿಸುವ, ಅನಾಹುತಕ್ಕೆಡೆಮಾಡುವ ಅವರ ತುಂಟಾಟಗಳನ್ನು ಬಹಳ ಮಾರ್ಮಿಕವಾಗಿ ತೆರೆದಿಟ್ಟಿದ್ದಾರೆ.
ಚಿಕ್ಕಂದಿನಿಂದಲೇ ಉತ್ತಮ ಓದುಗರಾಗಿದ್ದ ಲೇಖಕಿ ತಮ್ಮ ಪ್ರೈಮರಿ ಶಾಲಾದಿನಗಳಲ್ಲಿ ತಾನೂ ಲೇಖಕಿಯಾಗುವ ಕನಸಿನೊಂದಿಗೆ ಸುಧಾ ವಾರಪತ್ರಿಕೆಗೆ ಒಂದು ಹೊಸ ರುಚಿಯನ್ನು ಬರೆದು ಕಳಿಸಲು ಮುಂದಾಗುತ್ತಾರೆ. ಹದಿನೈದು ಪೈಸೆಯ ಪುಟ್ಟ ಪೋಸ್ಟ್ ಕಾರ್ಡಿನಲ್ಲಿ ಪಕೋಡ ರೆಸಿಪಿ ಬರೆದು ಅದರ ಕೆಳಗೆ ಶ್ರೀಮತಿ ಸರ್ವಮಂಗಳ ಎಂದು ಬರೆದು ಮನೆಯವರೆಲ್ಲರ ಪರಿಹಾಸ್ಯಕ್ಕೂಳಗಾಗುತ್ತಾರೆ.
ಹೊಸಕೆರೆ ಗ್ರಾಮದ ಶಂಕರ ಟಾಕೀಸ್ ನಲ್ಲಿ ಬಾಲ್ಯಕಾಲದಲ್ಲಿ ಸಿನಿಮಾ ನೋಡುತ್ತಿದ್ದ ಬೆಚ್ಚಗಿನ ನೆನಪನ್ನು ಹಂಚಿಕೊಳ್ಳುತ್ತಾ ಓದುಗರಿಗೆ ವಿಭಿನ್ನ ಲೋಕವನ್ನೇ ತೆರೆದಿಡುತ್ತಾರೆ. ತಮ್ಮ ಮನೆಯಿಂದ ಕೂಗಳೆತೆಯ ದೂರದಲ್ಲಿದ್ದ ಚಿತ್ರ ಮಂದಿರದಿಂದ ಶುಕ್ಲಾಂಬರಧರಂ ಹಾಡಿನೊಂದಿಗೆ ಪ್ರಾರಂಭವಾಗುತ್ತಿದ್ದ ಚಲನಚಿತ್ರ ನಮೋ ವೆಂಕಟೇಶ ಹಾಡಿನೊಂದಿಗೆ ಮುಕ್ತಾಯವಾಗುವ ನಡುವಿನ ಸಮಯದೊಳಗೆ ಗೆಳೆಯರೊಂದಿಗೆ ಥಿಯೇಟರ್ ತಲುಪಿ ಉಚಿತ ಪ್ರವೇಶ ಪಡೆದು ಚಿತ್ರವನ್ನು ನೋಡಿ ಆನಂದಿಸುತ್ತಿದ್ದ ನೆನಪುಗಳನ್ನು ಆಕರ್ಷಕ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಮೇಲೂರಿನಿಂದ ಚಿಕ್ಕಬಳ್ಳಾಪುರದ ಕಾಲೇಜಿಗೆ ಪ್ರತಿದಿನ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಲು ಬಳಸುತ್ತಿದ್ದ ಬಸ್ ಪಾಸ್ ನಲ್ಲಿ ಯಾವ ಮಾರ್ಗ ಎಂದು ಸೂಚಿಸುವ ‘ ರೂಟ್ ‘ ಎಂಬ ಕಾಲಂ ಅನ್ನು ಖಾಲಿ ಬಿಟ್ಟಿದ್ದರಿಂದ ಲಭ್ಯವಿದ್ದ ಮೂರು ರೂಟ್ ಗಳಲ್ಲೂ ಉಚಿತವಾಗಿ ಪ್ರಯಾಣಿಸಿ ಕೊನೆಗೆ ನಿರ್ವಾಹಕರ ಬಳಿ ಸಿಕ್ಕಿಕೊಂಡು ಅನುಭವಿಸುವ ಪಡಿಪಾಟಲು ‘
ಅನುಭವವೇ ಶಿಕ್ಷಕ ‘ ಎಂಬ ಪ್ರಬಂಧದಲ್ಲಿ ಸಶಕ್ತವಾಗಿ ಮೂಡಿಬಂದಿದೆ.
ಟಿಸಿಹೆಚ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ ತಮಿಳುನಾಡಿನ ಕಡೆಗೆ ಶೈಕ್ಷಣಿಕ ಪ್ರವಾಸ ಹೋದಾಗ ಮಧುರೆ ಮೀನಾಕ್ಷಿ ದೇವಾಲಯದಲ್ಲಿ ತನ್ನಿಬ್ಬರು ಸಹಪಾಠಿಗಳು ಕಾಣದಾದಾಗ ಶಿಕ್ಷಕರು ಅನುಭವಿಸುವ ಆತಂಕ ನಂತರ ಅವರು ಪತ್ತೆಯಾದಾಗ ಮೂಡುವ ನಿರಾಳತೆಯನ್ನು ‘ ಮಧುರೆ ಪಾರ್ವತಿ ‘ ಎಂಬ ಪ್ರಬಂಧದಲ್ಲಿ ಕಟ್ಟಿಕೊಟ್ಟಿದ್ದಾರೆ. ಅಪರಿಚಿತ ಸ್ಥಳದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಹಾಗು ಪ್ರವಾಸ ಕಾಲದಲ್ಲಿ ಶಿಕ್ಷಕರ ಜವಾಬ್ದಾರಿಯ ಬಗ್ಗೆ ಈ ಲೇಖನ ಬೆಳಕು ಚೆಲ್ಲುವುದು.

ಮದುವೆ, ಹಬ್ಬ ಹರಿದಿನಗಳಲ್ಲಷ್ಟೇ ಹೊಸಬಟ್ಟೆ ಕೊಳ್ಳುವ, ಉಟ್ಟು ತೊಟ್ಟು ಸಂಭ್ರಮಿಸುತ್ತಿದ್ದ ದಿನಗಳು ಕಣ್ಮರೆಯಾಗಿವೆ. ಇಂದು ಬೇಕೆಂದಾಗ ಹತ್ತಾರು ಬಟ್ಟೆಗಳನ್ನು ಕೊಂಡು ತಂದು ಬೀರುವಿನಲ್ಲಿ ತುಂಬಿಕೊಂಡರೂ ಯಾವುದೇ ಸಮಾರಂಭಕ್ಕೆ ಹೊರಟಾಗ ಉಡಲು ಬಟ್ಟೆಯೇ ಇಲ್ಲವೆಂದು ಗೊಣಗುವುದು ಸರ್ವೇಸಾಮಾನ್ಯ. ತೊಟ್ಟ ಬಾಣ ಮತ್ತೆ ತೊಡೆನು ಎಂದು ಕುಂತಿಗೆ ಮಾತು ಕೊಟ್ಟ ಕರ್ಣನಂತೆ ಇಂದಿನವರೆಲ್ಲಾ ಒಮ್ಮೆ ಉಟ್ಟ ಬಟ್ಟೆಯನ್ನು ಮತ್ತೆ ಉಡೆನು ಎಂದು ಶಪತಗೈದವರಂತೆ ಬೀರೆಲ್ಲಾ ತಡಕಾಡುವುದನ್ನು ‘ ಉಡೋಕೆ ಬಟ್ಟೆ ಇಲ್ಲ…’ ಎಂಬ ಶೀರ್ಷಿಕೆಯಲ್ಲಿ ಬಹಳ ಚೆನ್ನಾಗಿ ವಿಡಂಬಿಸಿದ್ದಾರೆ.
ಒಗ್ಗರಣೆ ಡಬ್ಬಿಯಲ್ಲಿ ಓರಣವಾಗಿ ಜೋಡಿಸಿಟ್ಟ ಮಸಾಲೆ ಪದಾರ್ಥಗಳು ಲೇಖಕಿ ಎಡವಿ ಬಿದ್ದಾಗ ಡಬ್ಬದೊಳಗೇ ಬೆರಕೆಯಾಗುವುದು. ಹೀಗೆ ಕ್ಷಣಾರ್ಧದಲ್ಲಿ ಆಗುವ ಅನಾಹುತದಿಂದ ಕಲಬೆರಕೆಯಾದ ಪದಾರ್ಥಗಳನ್ನು ಒಪ್ಪವಾಗಿಸುವ ಸಾಹಸವನ್ನು ತಿಳಿಸುತ್ತಲೇ ಅಡುಗೆಯಲ್ಲಿ ಒಗ್ಗರಣೆಯ ಮಹತ್ವವನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಹೀಗೆ ಸಾಗುವ ಸರ್ವಮಂಗಳ ಅವರ ನೆನಪಿನ ಬುತ್ತಿಯೊಂದಿಗಿನ ಲಲಿತ ಪ್ರಬಂಧಗಳ ಓಘ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಸಾಂಸಾರಿಕ ಚೌಕಟ್ಟಿನೊಳಗೆ ನಡೆಯುವ ರಂಜನೀಯ ಪ್ರಸಂಗಗಳು ಕೆಲವಾದರೆ, ಔದ್ಯೋಗಿಕ ವಲಯದ ರಸಪ್ರಸಂಗಗಳು ಹಲವು. ಬಾಲ್ಯ ಕಾಲದಲ್ಲಿ ತಾನು ವಿದ್ಯಾರ್ಥಿಯಾಗಿದ್ದಾಗ ಮಾಡಿದ ತುಂಟಾಟಗಳನ್ನು ತಿಳಿಸುತ್ತಲೇ ಶಿಕ್ಷಕಿಯಾಗಿ ಮಕ್ಕಳೊಂದಿಗೆ ಅನುಭವಿಸುವ ಆತಂಕ ತಳಮಳ ಪಡಿಪಾಟಲುಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿ ಹದವಾಗಿ ಕಟ್ಟಿಕೊಟ್ಟಿದ್ದಾರೆ. ಭಾವದ ಜೊತೆಗೆ ಭಾವನೆಗಳು ಸೇರಿ ಅನುಭವಗಳು ಅನುಭಾವವಾಗಿ ಹಾಸ್ಯದೊಳಹೊಕ್ಕು ಅಕ್ಷರರೂಪಕ್ಕಿಳಿದಾಗ ಮೂಡುವ ಬರಹಗಳು ಅಪ್ಯಾಯಮಾನ. ಮನುಷ್ಯನ ನೋವು ನಲಿವು, ದೌರ್ಬಲ್ಯ ಹತಾಶೆ, ಅಸಹಾಯಕತೆ ಎಲ್ಲವನ್ನೂ ವಿಡಂಬನಾ ದೃಷ್ಟಿಕೋನದಲ್ಲಿ ಪರಾಂಬರಿಸುತ್ತ ಸಾಗುವ ಲೇಖನಗಳು ಚಿಂತನೆಗೂ ಒಳಪಡಿಸುತ್ತವೆ.
ಸರ್ವಮಂಗಳ ಅವರ ಮನೋಭೂಮಿಕೆಯಿಂದ ಇನ್ನಷ್ಟು ಸತ್ವಭರಿತ ಕೃತಿಗಳು ಮೂಡಿ ಬರಲಿ. ಕನ್ನಡದ ಶ್ರೇಷ್ಠ ಹಾಸ್ಯ ಬರಹಗಾರರ ಕೃತಿಗಳನ್ನು ಓದುವುದರ ಮೂಲಕ ತಮ್ಮ ಬರಹದಲ್ಲಿ ಇನ್ನಷ್ಟು ಸಾಹಿತ್ಯಿಕ ಪುಷ್ಠಿಯನ್ನು ಹೊಂದುವಂತಾಗಲಿ ಎಂದು ಮನಸಾ ಹಾರೈಸುತ್ತೇನೆ.
- ಸುಮಾ ರಮೇಶ್, ಹಾಸನ.
