ವಚನದಿಂದ ವ್ಯಕ್ತಿತ್ವ ವಿಕಸನ

ಈ ಸಮಾಜ ಸರಿಯಿಲ್ಲವೆಂದರೆ ನಾವು ಸರಿಯಿಲ್ಲ. ಬಸವಣ್ಣನವರ ಕೆಲವು ವಚನಗಳನ್ನು ನಾವು ತಿಳಿದುಕೊಳ್ಳಬೇಕು. ಲೇಖಕಿ, ಚಿಂತಕಿ ಡಿ.ಶಬ್ರಿನಾ ಮಹಮದ್ ಅಲಿ ಅವರು ಬಸವ ಜಯಂತಿಯ ಪ್ರಯುತ್ತ ಬರೆದ ಈ ಲೇಖನವನ್ನು ಪೂರ್ತಿ ಓದಿ…

ಕುಣಿಯಲಾರದವರು ನೆಲ ಡೊಂಕು ಎನ್ನುವಂತೆ. ಇಂದು ನಾವು ನಮ್ಮನ್ನು ಬಿಟ್ಟು ಉಳಿದದ್ದೆಲ್ಲ ಅಂದರೆ ಇಡೀ ಸಮಾಜವನ್ನೆ ಜರಿ ಜರಿದು, ದೂಷಿಸಿ ಮೂಗು ಮುರಿಯುತ್ತಾ ಆತ್ಮವಲೋಕನದಿಂದ ದೂರ ಉಳಿಯುತಿದ್ದೇವೆ. ಈ ಸಮಾಜ ಸರಿಯಿಲ್ಲ ಅನ್ನುವುದೊಂದೆ ನಮ್ಮ ವಿತಂಡವಾದ. ಹೌದು, ಈ ಸಮಾಜ ಯಾರಿಂದ ಆಗಿದೆ ಒಮ್ಮೆ ಯೋಚಿಸಿ ನೋಡಿ, ನಮ್ಮಿಂದಲೇ ಅಲ್ಲವೇ? ಹಾಗಾದರೆ ಈ ಸಮಾಜ ಸರಿಯಿಲ್ಲವೆಂದರೆ ನಾವು ಸರಿಯಿಲ್ಲ ಎಂದು ಆಗುವುದಿಲ್ಲವೇ? ಅದಕಾಗಿಯೆ ಮಹಾ ಮಾನವತವಾದಿ ಬಸವಣ್ಣನವರು ‘ವ್ಯಕ್ತಿಶುದ್ದಿ’ ಯಿಂದ ‘ಸಮಾಜಶುದ್ಧಿ’ ಸಾಧ್ಯ ಎಂಬುದನ್ನ ಅರಿತು ಅದರಂತೆ ಬದುಕಿ, ಮುಂದಿನ ಪೀಳಿಗೆಗೆ ಅದರ ಸಾರವನ್ನು ತಮ್ಮ ವಚನಗಳಲ್ಲಿ ಅರುಹಿದ್ದಾರೆ. ಈಗ ನಾವು ಆ ವಚನಗಳತ್ತ ಚಿತ್ತ ಹರಿಸೋಣಾ.

ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದರೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ?
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,
ಕೂಡಲಸಂಗಮದೇವಾ.

ಬಸವಣ್ಙವರ ಈ ವಚನ, ಒಂದು ಮಗುವಿನ ವ್ಯಕ್ತಿತ್ವವಿಕಸನ ಸಕರಾತ್ಮಕವಾಗಿ ರೂಪುಗೊಳ್ಳುವಲ್ಲಿ ಯಾವುದು ಮೂಲ ಆಗಿರಬೇಕು ಎಂಬುದನ್ನ ತಿಳಿಸುತ್ತದೆ. ಇಂದು ಸಮಾಜದಲ್ಲಿ ಜಾತಿ ತಾರತಮ್ಯ, ಧರ್ಮ ದ್ವೇಷ ಕೇಕೆ ಹಾಕಿ ಬದುಕಿನ ನೆಮ್ಮದಿಯನ್ನೆ ಇಲ್ಲದಂತಾಗಿಸುತ್ತಿದೆ. ಇದಕ್ಜೆಲ್ಲಾ ಕಾರಣ ನಮ್ಮಲ್ಲಿರುವ ಅಜ್ಞಾನ! ನಮ್ಮೊಳಗಿನ ಅಜ್ಞಾನದಿಂದ ವ್ಯಕ್ತಿತ್ವ ನಿರ್ಮಾಣಗೊಳ್ಳುವಲ್ಲಿ ಏನೆಲ್ಲಾ ತೊಂದರೆ ಆಗುತ್ತದೆ. ಎಂಬುದನ್ನ ಮನ ಮುಟ್ಟುವಂತೆ ಹೋಲಿಕೆ ನೀಡಿದ್ದಾರೆ. ಬೇವಿನ ಬೀಜ ಹಾಕಿ ಅದರ ಸುತ್ತ ಸಿಹಿಯಾದ ಬೆಲ್ಲದ ಕಟ್ಟೆ ಕಟ್ಟಿ, ಪೌಷ್ಠಿಕ ಆಕಳ ಹಾಲು ಬಿಟ್ಟು, ಸಿಹಿಯಾದ ಜೇನುತುಪ್ಪ ಹೊಯ್ದರೆ ಆ ಬೇವಿನ ಬೀಜದ ಕಹಿ ಸಿಹಿಯಾಗಲು ಸಾಧ್ಯವೇ? ಖಂಡಿತಾ ಇಲ್ಲ! ಹಾಗೆಯೇ ನಾವು ನಮ್ಮ ಮಕ್ಕಳಿಗೆ ಸನ್ನಡತೆಯ ಅಭ್ಯಾಸಗಳನ್ನ ಮಾಡಿಸಿ ಸತ್ ಚಿಂತನೆಗಳ ಪರಿಚಯ ಮಾಡಿಕೊಡಬೇಕು. ಮಾನವನ ಬದುಕಿಗೆ ಅಗತ್ಯವಾದ ಮಾನವೀಯತೆ, ಸಮಾನತೆ, ಸೌಹಾರ್ದತೆ,ಸಹೋದರತೆ , ಪ್ರೀತಿ ಕರುಣೆ, ವಾತ್ಸಲ್ಯ ಇವುಗಳ ಅರಿವು ಮೂಡಿಸಬೇಕು. ಆಗ ಮಾತ್ರ ನಮ್ಮ ಮಕ್ಕಳು ಉತ್ತಮ ಸಮಾಜದ ಒಂದು ಭಾಗವಾಗಲು ಸಾಧ್ಯ ಎಂದು ಬಸವಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ‌.

ಈ ಮೇಲಿನ ವಚನ ವ್ಯಕ್ತಿಶುದ್ಧಿ ಎಂಬ ಸಸಿಗೆ ಬೀಜವಾದರೆ, ಆ ಸಸಿಯ ಪಾಲನೆ ಪೋಷಣೆಗೆ ಮುಂದಿನ ವಚನಗಳು ನೀರು ಗೊಬ್ಬರವಿದ್ದಂತೆ. ಈ ಭೂಮಿ ಮೇಲಿನ ಎಲ್ಲಾ ಮನುಷ್ಯರು ಒಂದೇಯಾಗಿದ್ದಾರೆ. ಜಾತಿ ಲಿಂಗ ವರ್ಗ ವರ್ಣದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ಬಸವ್ಣನವರು ಸಾರಿ ಸಾರಿ ಹೇಳಿದ್ದಾರೆ. ಎಲ್ಲರನ್ನು ಸಮಾನವಾಗಿ ಏಕೆ ಕಾಣಬೇಕು ಎಂಬುದಕೆ ವಚನದಲ್ಲಿ ಹೀಗೆ ಹೇಳ್ತಾರೆ.

ಹೊಲೆಗಂಡಲ್ಲದೆ ಪಿಂಡದ ಬೆಲಗಾಶ್ರಯವಿಲ್ಲ
ಜಲಬಿಂದುವಿನ ವ್ಯವಹಾರವೊಂದೆ
ಆಸೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲಾ ಒಂದೆ
ಏನನೋದಿ ಏನ ಕೇಳಿ ಏನು ಫಲ
ಕುಲಜನೆಂಬುದಕ್ಕಾವುದು ದೃಷ್ಟ ಸಪ್ತಧಾತು ಸಮಂ
ಪಿಂಡಂ ಸಮಯೋನಿ ಉದ್ಭವಂ.

ಅಂದರೆ ಒಬ್ಬ ತಾಯಿಯ ಋತುಸ್ರಾವ ನಿಂತಾಗಲೆ ಪಿಂಡಕ್ಕೆ ಆಶ್ರಯ ಸಿಗುವುದು. ಮೇಲು ಕೀಳು ಎಂದು ನೀವು ಬೇರೆಯಾಗಿ ನೋಡುವವರೆಲ್ಲರ ಹುಟ್ಟು ಕೂಡ ಹೀಗೆ ಆಗಿದೆ. ಹೀಗೆ ಹುಟ್ಟು ಪಡೆದವರೆಲ್ಲರಲ್ಲಿ ಇರುವ ಭಾವನೆಗಳು ಒಂದೇಯಾಗಿವೆ. ಅಷ್ಟೇಯಲ್ಲ, ನಮ್ಮೆಲ್ಲರ ದೇಹ ಏಳು ಧಾತುಗಳಿಂದಾಗಿದ್ದು. ನಾವೆಲ್ಲರೂ ನಮ್ಮ ತಾಯಿಯ ಯೋನಿಯಿಂದಲೆ ಜನಿಸಿದ್ದೇವೆ. ಆದ್ದರಿಂದ ಇಲ್ಲಿ ನಾನು ಮೇಲು ನೀನು ಕೀಳು ಅಂತ ಯಾವ ಆಧಾರದ ಮೇಲೆ ಹೇಳ್ತಿರಾ ಅಂತಾ ಬಸವಣ್ಣನವರು ಪ್ರಶ್ನೆ ಮಾಡುವ ಮೂಲಕ ಮಾನವನ ಹುಟ್ಟಿನಲಿ ಸಮಾನತೆ ಇದೆ ಎಂದು ತಿಳಿಸಿದ್ದಾರೆ. ಇದನ್ನ ನಾವು ಅರ್ಥಮಾಡಿಕೊಂಡು ನಮ್ಮ ಮಕ್ಕಳಿಗೆ ಅರ್ಥಮಾಡಿಸಿ ಮನುಷ್ಯರನ್ನ ಮನುಷ್ಯರಂತೆ ಕಾಣುವ ಮನೋಭಾವ ಬೆಳೆಸಬೇಕು. ಆಗ ವ್ಯಕ್ತಿ ಶುದ್ಧಿಯಿಂದ ಸಮಾಜ ಶುದ್ಧಿ ಆಗುತ್ತದೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ
ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ಸಪ್ತಶೀಲಗಳು ಎಂದೇ ಪ್ರಸಿದ್ದವಾದ ಈ ವಚನ ವ್ಯಕ್ತಿಯನ್ನು ಶುದ್ಧಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂತರಂಗ ಬಹಿರಂಗಶುದ್ಧಿಯ ಸಪ್ತಸೂತ್ರಗಳನ್ನು ವ್ಯಾಪಕವಾದ ರೀತಿಯಲ್ಲಿ ಹಿಡಿದಿಟ್ಟಿದೆ. ಕಾಯ, ಮಾತು, ಮನಸ್ಸು ಈ ಮೂರರ ಶುದ್ಧಿಯೂ ಅವಶ್ಯವಾಗಿ ಆಗಬೇಕು. ಜಾರಿ,ಲಿಂಗ ವರ್ಗ ವರ್ಣಗಳ ಹೆಸರಲಿ ಮತ್ತೊಬ್ಬರಿಗೆ ನೋವು ಉಂಟುಮಾಡುವಂತಹ ನಕರಾತ್ಮಕ ಭಾವಗಳಿಂದ ನಾವು ದೂರ ಇರಬೇಕು. ಕಳವು,ಲಂಚ ಕೊಲೆ ಇವು ಕಾಯದೋಷಗಳು ; ಅಂದರೆ ದೇಹದಿಂದ ಘಟಿಸುವಂತಹವು. ‘ಹುಸಿ,’ ಕೋಪಿಸಿಕೊಳ್ಳು ವುದು – ಮಾತಿನ ದೋಷಗಳು. ಇನ್ನುಳಿದ ಮೂರು ಮನಸ್ಸಿನ ದೋಷಗಳು. ‘ಅನ್ಯರಿಗೆ ಅಸಹ್ಯಪಡಬೇಡ’ ಎಂಬ ಮಾತನ್ನು ಮುಖ್ಯವಾಗಿ ಗಮನಿಸಬೇಕು. ‘ತನ್ನ ಬಣ್ಣಿಸುವುದು’, ‘ಇದಿರ ಹಳಿಯುವುದು’ ಅಹಂಕಾರದ ಪರಮಾವಧಿಯಾಗಿದೆ. ತನಗೆ ಸೇರಿಕೆಯಲ್ಲದಿರುವುದನ್ನು ಕಂಡಾಗ ಸಹಿಸದೇ ಇರುವುದು, ಅಸಹ್ಯಪಟ್ಟುಕೊಳ್ಳುವುದನ್ನ ಮೊದಲು ಬಿಡಬೇಕು. ಎಲ್ಲವನ್ನು ಔದಾರ್ಯದಿಂದ ನೋಡುವಂತಹ ಶುದ್ಧಮನಸ್ಸಿನವರು ನಾವಾಗಬೇಕು ಎಂದು ಬಸವಣ್ಣನವರು ಈ ವಚನದಲ್ಲಿ ಹೇಳುವ ಮೂಲಕ ವ್ಯಕ್ತಿಶುದ್ಧಿಯ ಸುಲಭ ಮಾರ್ಗವನ್ನ ನಮಗೆ ದಯಪಾಲಿಸಿದ್ದಾರೆ.

ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು ನುಡಿಯೊಳಗಗಾಗಿ ನಡೆಯದಿದ್ದರೆ ಕೂಡಲ ಸಂಗಮ ದೇವನೆಂತೊಲಿವನಯ್ಯ

ಮನುಷ್ಯನ ಬಂಧನಗಳು ನಿಂತಿರುವುದೇ ಆಡುವ ಮಾತುಗಳ ಮೇಲೆ! ಮಾತಿನಲ್ಲಿ ನಯ ವಿನಯ,ಪ್ರೀತಿ, ವಿಶ್ವಾಸ,ಕರುಣೆ,ಮಮತೆ ಕಾಳಜಿ ಈ ಎಲ್ಲವೂ ತುಂಬಿದ್ದರೆ ನಮ್ಮೊಟ್ಟಿಗಿರುವವರೊಂದಿಗೆ ನಮ್ಮ ಬಂಧ ಬಿಗಿಯಾಗಿರುತ್ತದೆ. ಅವುಗಳ ಹೊರತಾಗಿ ಆಡಿದ ಮಾತಿನಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದಲೆ ಬಸವಣ್ಣನವರು ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಹೇಳಿದ್ದಾರೆ. ಪ್ರತ್ಯೇಕವಾಗಿ ಕಂಡರೂ ಪ್ರಮಾಣಿಸು ನೋಡು ಎನ್ನುವಂತೆ ಸತ್ಯವನ್ನಷ್ಟೇ ನುಡಿಯಬೇಕು. ಊಹಾಪೋಹಾಗಳಿಗೆ ಅವಕಾಶ ಮಾಡಿಕೊಡಬಾರದು, ನಾವಾಡಿದ ಮಾತು ದೇವರೇ ಮೆಚ್ಚಿಕೊಳ್ಳಬೇಕು ಅಂದರೆ ಸತ್ಯದಿಂದ ಕೂಡಿರಬೇಕು ಎಂದು ಬಸವಣ್ಣನವರು ಮಾತಿಗೆ ಹೆಚ್ಚು ಒತ್ತುಕೊಟ್ಟಿದ್ದಾರೆ.

ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದದೇವಾ

ಬಸವಣ್ಣನವರ ಆಲೋಚನೆಗಳೆ ಬೆಳಕಿನಂತೆ. ಅವರು ಇನ್ನೊಬ್ಬರನ್ನು ತಿದ್ದಲು ಹೋಗುವ ಮುನ್ನ ತನ್ನನ್ನು ತಾನು ತಿದ್ದಿಕೊಳ್ಳಬೇಕು ಎಂಬ ಆತ್ಮಾವಲೋಕನದ ಸಂದೇಶ ನೀಡಿದ್ದಾರೆ‌. ಅನ್ಯರ ತಪ್ಪುಗಳನ್ನು ಹುಡುಕುವುದಕ್ಕಿಂತ ಮೊದಲು ಸ್ವಂತ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ತನು-ಮನದ ಶುದ್ಧಿ: ನಮ್ಮ ತನುವನ್ನು ಮತ್ತು ಮನಸ್ಸನ್ನು ಸಾತ್ವಿಕವಾಗಿ ಇಟ್ಟುಕೊಳ್ಳುವುದು ಮುಖ್ಯ.

ನಮಗೆ ನಾವೇ ಸರಿ ಇಲ್ಲದಿರುವಾಗ, ಇನ್ನೊಬ್ಬರ ದೋಷಗಳಿಗಾಗಿ ಎತ್ತಿಹಿಡಿಯುವವರನ್ನು ಕೂಡಲಸಂಗಮದೇವ ಮೆಚ್ಚುವುದಿಲ್ಲ ಎಂದು ಹೇಳುತ್ತಾ ಲೋಕವು ಡೊಂಕಾಗಿದ್ದರೆ, ಅದು ನಮ್ಮದೇ ಡೊಂಕಿನ ಪ್ರತಿಬಿಂಬವಾಗಿರುತ್ತದೆ,ಆದ್ದರಿಂದ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಬಸವಣ್ಣನವರ ಈ ಕೆಲ ವಚನಗಳನ್ನಾದರೂ ನಾವು ತಿಳಿದುಕೊಂಡು, ಮಾನವ ಹುಟ್ಟಿನಲಿ ಸಮಾನತೆ ಇದೆ, ನಾವು ಉಸಿರಾಡುವ ಗಾಳಿ ನಡೆದಾಡುವ ನೆಲ,ಕುಡಿಯುವ ನೀರು ಒಂದೇಯಾಗಿದ್ದು ಪ್ರಕೃತಿಯಲ್ಲಿಯೂ ಸಮಾನತೆ ಇದೆ ಎಂದು ಅರ್ಥಮಾಡಿಕೊಂಡು, ನಡೆ ನುಡಿ ಒಂದಾಗಿ ಅದರಂತೆ ನಾವು ಬದುಕಿದರೆ ಸಾಕು ನಮ್ಮ ನಮ್ಮ ಶುದ್ಧಿಯಿಂದ ಇಡೀ ಸಮಾಜ ಶುದ್ಧಿಯಾಗುತ್ತದೆ.


  • ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ.

.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW