ಅನುಭವ ಮಂಟಪದಿಂದ ಆಧುನಿಕ ಪ್ರಜಾಪ್ರಭುತ್ವದವರೆಗೆ

ಬಸವಣ್ಣನವರ ವಚನಗಳು ಸರಳವಾದ ಭಾಷೆಯಲ್ಲಿ ಆಳವಾದ ತತ್ವಗಳನ್ನು ಸಾರುತ್ತವೆ.ಅವರು ಕೇವಲ ತತ್ವಗಳನ್ನು ಪರಿಚಯಿಸಲಿಲ್ಲ, ವಚನಗಳನ್ನು ಬರೆಯಲಿಲ್ಲ, ಬರೆದಂತೆ ಬದುಕಿ, ನುಡಿದಂತೆ ನೆಡೆದು, ನಡೆ ನುಡಿಗಳೊಂದಾಗಿ ಬಾಳಿ,ಬದುಕಿನ ಮೌಲ್ಯವನ್ನು ಜಗತ್ತಿಗೆ ತೋರಿದ ಅಪರೂಪ ವ್ಯಕ್ತಿತ್ವದ ಶರಣ. ಕೊಡಗಿನ ಗೀತಾಂಜಲಿ ಎನ್ ಎಮ್ ಅವರ ಲೇಖನವನ್ನು ಪೂರ್ತಿಯಾಗಿ ಓದಿ…

ಕಳಬೇಡ, ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ,
ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ,
ಇದೇ ಬಹಿರಂಗಶುದ್ಧಿ.
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ!

ಭಾರತ ಇಂದು ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ರಾಷ್ಟ್ರವಾಗಿ ಉತ್ತುಂಗದಲ್ಲಿದೆ. ಆದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ಕೊಟ್ಟವರು 12 ಶತಮಾನದಲ್ಲೇ ಹಲವು ಕ್ರಾಂತಿಗಳನ್ನು ಮಾಡಿದ ‘ಕ್ರಾಂತಿಯೋಗಿ’ ಶಿವಶರಣ ಕರ್ನಾಟಕದ ಇಂದಿನ ಸಾಂಸ್ಕೃತಿಕ ನಾಯಕ, ‘ವಿಶ್ವಗುರು’ ಎಂದೇ ಖ್ಯಾತರಾದ ‘ಜಗದ ಜ್ಯೋತಿ’ ಬಸವಣ್ಣನವರು ಎಂಬುದು ಎಷ್ಟೋ ಜನರಿಗೆ ತಿಳಿದೇ ಇಲ್ಲ.

ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಚಿಂತನೆಗಳ ಇತಿಹಾಸದಲ್ಲಿ ಬಸವಣ್ಣನವರ ಸ್ಥಾನ ಅಪ್ರತಿಮವಾಗಿದೆ. 12ನೇ ಶತಮಾನದಲ್ಲಿ ಅವರು ಸ್ಥಾಪಿಸಿದ ಅನುಭವ ಮಂಟಪವು ಕೇವಲ ಧಾರ್ಮಿಕ ವೇದಿಕೆಯಷ್ಟೇ ಅಲ್ಲ, ಅದು ಸಮಾನತೆ, ಸ್ವಾತಂತ್ರ್ಯ ಮತ್ತು ವಿಚಾರ ವಿನಿಮಯದ ಆಧಾರಭೂತ ತತ್ವಗಳನ್ನು ಪ್ರತಿಪಾದಿಸಿದ ಪ್ರಜಾಪ್ರಭುತ್ವದ ಮೂಲ ರೂಪವಾಗಿತ್ತು. ಇಂದಿನ ಆಧುನಿಕ ಪ್ರಜಾಪ್ರಭುತ್ವದ ತತ್ತ್ವಗಳಿಗೂ ಬಸವಣ್ಣನವರ ಅನುಭವ ಮಂಟಪಕ್ಕೂ ಆಳವಾದ ಸಾಮ್ಯತೆ ಇದೆ.

ಇಂದಿನ ಪ್ರಜಾಪ್ರಭುತ್ವವು ಸಂವಿಧಾನ, ಚುನಾವಣೆ ಮತ್ತು ಪ್ರತಿನಿಧಿತ್ವದ ವ್ಯವಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಆದರೆ ಅದರ ಮೂಲದಲ್ಲಿ ಇರುವ ಸಂವಾದ, ಸಮಾನತೆ ಮತ್ತು ನ್ಯಾಯದ ತತ್ವಗಳು ಅನುಭವ ಮಂಟಪದ ಮೂಲ ಚಿಂತನೆಗಳೇ ಆಗಿವೆ. ಈ ದೃಷ್ಟಿಯಿಂದ, ಬಸವಣ್ಣರ ಚಿಂತನೆಗಳು ಕಾಲಾತೀತವಾಗಿವೆ. ತಾವು ಕಟ್ಟಿದ ಅನುಭವ ಮಂಟಪದ ಮೂಲಕ ಜಗತ್ತಿಗೆ ಒಂದು ಕಾಲಾತೀತ ಸಂದೇಶ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಭುನಾದಿ ಹಾಕಿದ ‘ಪ್ರಜಾಪ್ರಭುತ್ವದ ಪಿತಾಮಹ’ ಬಸವಣ್ಣನವರ ಅನುಭವ ಮಂಟಪವು ಅಂದೇ ಎಲ್ಲಾ ವರ್ಗದ ಜನರಿಗೆ ಮುಕ್ತವಾದ ವೇದಿಕೆಯಾಗಿತ್ತು. ಜಾತಿ, ಲಿಂಗ, ಆರ್ಥಿಕ ಸ್ಥಿತಿ ಇತ್ಯಾದಿಗಳ ಬೇಧವಿಲ್ಲದೆ ಎಲ್ಲರೂ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಪಡೆದಿದ್ದರು.

ಈ ವೇದಿಕೆಯಲ್ಲಿ ಶರಣರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಇದು ಸಮಾನ ಹಕ್ಕುಗಳ ಮೇಲೆ ಆಧಾರಿತ ಸಮುದಾಯ ನಿರ್ಮಾಣದ ಪ್ರಯತ್ನವಾಗಿತ್ತು. ಪ್ರಜಾಪ್ರಭುತ್ವದ ಮುಖ್ಯ ಅಂಶಗಳಾದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಾದ ಮತ್ತು ಸಹಿಷ್ಣುತೆ, ಇವುಗಳನ್ನು ಅನುಭವ ಮಂಟಪದಲ್ಲಿ ಸ್ಪಷ್ಟವಾಗಿ ಕಾಣಬಹುದು. ಇಲ್ಲಿ ಪ್ರತಿಯೊಬ್ಬರಿಗೂ ಮಾತಿನ ಹಕ್ಕು ಇತ್ತು, ಮತ್ತು ತತ್ವಾಧಾರಿತ ಚರ್ಚೆಗಳು ಸಹ ಅಲ್ಲಿನಡೆಯುತ್ತಿದವು. ಈ ರೀತಿಯ ಮುಕ್ತ ಸಂವಾದವೇ ಆಧುನಿಕ ಪ್ರಜಾಪ್ರಭುತ್ವದ ಆತ್ಮ ಎಂಬುದು ಇಲ್ಲಿ ಗಮನಾರ್ಹ.

ಅಂದೇ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿದ್ದ ಬಸವಣ್ಣನವರು ಸಮಾಜದಲ್ಲಿ ಅಸಮಾನತೆಯನ್ನು ನಿವಾರಿಸಲು ಅನುಭವ ಮಂಟಪವನ್ನು ಸಾಧನವಾಗಿ ಬಳಸಿದರು. ವರ್ಣ ವ್ಯವಸ್ಥೆಯನ್ನು ಪ್ರಶ್ನಿಸಿ, ಶ್ರಮದ ಗೌರವವನ್ನು ಪ್ರತಿಪಾದಿಸಿದರು. ದಯವೇ ಧರ್ಮದ ಮೂಲ’, ‘ಕಾಯಕವೇ ಕೈಲಾಸ’ ಎಂಬುದೇ ಬಸವ ತತ್ವದ ಮೂಲ ಮಹಿಮೆ. ಇದಕ್ಕೆ ಪೂರಕವಾಗಿ ಶ್ರಮಿಸಿದ ಕೈಗಳೇ ಪವಿತ್ರ, ಕಾಯಕವಿಲ್ಲದೆ ಭಕ್ತಿ ವ್ಯರ್ಥವೆಂದು ಕೈಯಲ್ಲಿ ಕೆಲಸ, ಮನದಲ್ಲಿ ಶಿವ ಅದೇ ನಿಜವಾದ ಕೈಲಾಸವೆಂದು ಸಾರುತ್ತ ಹಾಗೆಯೇ ಜೀವಿಸಿದರು.“ಕಾಯಕವೇ ಕೈಲಾಸ” ಎಂಬ ತತ್ವವು ವ್ಯಕ್ತಿಯ ಕೆಲಸಕ್ಕೆ ಗೌರವ ನೀಡುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದ ಅವರು ಕಾಯಕ ಮಾಡುವವರನ್ನು ಬಳವಾಗಿ ಗೌರವಿಸಿದರು.

ಇನ್ನು ಅಂದು ಭಾರತದ ಸಾಮಾಜಿಕ ಇತಿಹಾಸದಲ್ಲಿ ಜಾತಿ ಪದ್ಧತಿ ಒಂದು ಗಾಢವಾದ ಅನ್ಯಾಯದ ವ್ಯವಸ್ಥೆಯಾಗಿ ರೂಪುಗೊಂಡಿತ್ತು, ಈ ವ್ಯವಸ್ಥೆ ಮಾನವರನ್ನು ವರ್ಗೀಕರಿಸಿ, ಅವರ ಮಾನವೀಯ ಮೌಲ್ಯಗಳನ್ನು ಕಡಿಮೆ ಮಾಡಿತು ಆ ಕಾಲ ಘಟ್ಟದಲ್ಲಿ ಜಾತಿ ಗೋಡೆಗಳನ್ನು ಒಡೆದ ಮಹಾನ್ ಚಿಂತಕ ಬಸವಣ್ಣನವರು 12ನೇ ಶತಮಾನದಲ್ಲೇ ಜಾತಿ ಪದ್ಧತಿಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ, ಸಮಾನತೆಯ ಸಮಾಜವನ್ನು ನಿರ್ಮಿಸಲು ಮಹತ್ವದ ಚಳವಳಿಯನ್ನು ಆರಂಭಿಸಿದರು. ಜನಾಂಗೀಯ, ವರ್ಣೀಯ ಮತ್ತು ಲಿಂಗಭೇದವನ್ನು ತೀವ್ರವಾಗಿ ವಿರೋಧಿಸಿ ಮಾನವೀಯತೆಯ ಪರ, ಜಾತಿಯ ವಿರುದ್ಧ ಹೋರಾಡಿದ ಮಹಾನ್ ಚಿಂತಕರಾಗಿ ಹೊರಹೊಮ್ಮಿದರು.

ಇಂದು ಬರೀ ಮಾತುಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಪರರಿಗೆ ಉಪದೇಶಿಸುತ್ತ ತಾವು ಮಾತ್ರ ಹೇಗೆಂದರೆ ಹಾಗೆ ಜೀವಿಸುತ್ತಾ ಕಾಲಹರಣ ಮಾಡುವ ಜನರಿಗೆ ಬಸವಣ್ಣನವರ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನ ಹಾಗೂ ಅವರ ಜೀವನದ ತತ್ವಗಳು ತಕ್ಕದಾದ ಉತ್ತರ ಕೊಡುತ್ತವೆ. ಇವರ ವಚನಗಳು ಮನುಕುಲ ಇರುವವರೆಗೂ ಉನ್ನತ ಮೌಲ್ಯವನ್ನು ಹೊಂದಿರುವಂತವು. ಅವರ ವಚನಗಳು ಸರಳವಾದ ಭಾಷೆಯಲ್ಲಿ ಆಳವಾದ ತತ್ವಗಳನ್ನು ಸಾರುತ್ತವೆ. ಅವರು ವಿಶೇಷತೆ ಎಂದರೆ ಅವರು ಕೇವಲ ತತ್ವಗಳನ್ನು ಪರಿಚಯಿಸಲಿಲ್ಲ, ವಚನಗಳನ್ನು ಬರೆಯಲಿಲ್ಲ, ಬರೆದಂತೆ ಬದುಕಿ, ನುಡಿದಂತೆ ನೆಡೆದು, ನಡೆ ನುಡಿಗಳೊಂದಾಗಿ ಬಾಳಿ, ಬದುಕಿನ ಮೌಲ್ಯವನ್ನು ಜಗತ್ತಿಗೆ ತೋರಿದ ಅಪರೂಪ ವ್ಯಕ್ತಿತ್ವದ ಶರಣ. ಅವರ ಚಿಂತನೆಗಳಲ್ಲಿ ಶ್ರಮಕ್ಕೆ ಗೌರವ, ಸಮಾನ ಹಕ್ಕು ಮತ್ತು ಧಾರ್ಮಿಕ ಸಹಿಷ್ಣುತೆ ಮುಖ್ಯವಾಗಿದ್ದವು.

ವಿಶೇಷವಾಗಿ ಮಹಿಳೆಯರ ಅಳಲಿಗೆ ದ್ವನಿಯಾಗಿ ಸ್ತ್ರೀ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದು ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾದದ್ದು. ಭಾರತೀಯ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನವು ಇತಿಹಾಸದ ಹಲವು ಹಂತಗಳಲ್ಲಿ ಸವಾಲುಗಳನ್ನು ಎದುರಿಸಿದೆ. ಅಸಮಾನತೆ, ನಿರ್ಬಂಧಗಳು ಮತ್ತು ಹಿಂದುಳಿತ ಸ್ಥಿತಿಗಳ ನಡುವೆಯೂ 12ನೇ ಶತಮಾನದಲ್ಲಿ ಬಸವಣ್ಣ ಅವರು ಹೆಣ್ಣಿನ ಸಮಾನತೆಯ ಪರವಾಗಿ ನಿಂತು, ಸಮಾಜದಲ್ಲಿ ಕ್ರಾಂತಿಕಾರಿ ಚಿಂತನೆಗೆ ಚಾಲನೆ ನೀಡಿದರು. ಅವರ ದೃಷ್ಟಿಯಲ್ಲಿ ಮಹಿಳೆ ಕೇವಲ ಕುಟುಂಬದ ಭಾಗವಲ್ಲ, ಅವಳು ಸಮಾನ ಹಕ್ಕುಗಳಿರುವ ಸ್ವತಂತ್ರ ವ್ಯಕ್ತಿ ಎಂದು ಮಹಿಳೆಯನ್ನು ಪುರುಷನಿಗಿಂತ ಹೀನವಾಗಿ ಕಾಣುವ ಮನೋಭಾವವನ್ನು ತಿರಸ್ಕರಿಸಿದರು. ಅವರ ಚಿಂತನೆಗಳಲ್ಲಿ ಹೆಣ್ಣು-ಗಂಡ ಎಂಬ ಬೇಧವಿಲ್ಲ, ಮಾನವೀಯತೆ ಮುಖ್ಯವಾಗಿತ್ತು, ಮಹಿಳೆಯೂ ಸಮಾಜ ನಿರ್ಮಾಣದಲ್ಲಿ ಸಮಾನ ಪಾತ್ರವಹಿಸಬೇಕು ಎಂಬುದು ಅವರ ತತ್ವವಾಗಿತ್ತು, ಸ್ತ್ರೀ ಸಮಾನತೆಯ ಹರಿಕಾರ ಬಸವಣ್ಣನವರ ಕಾಲದಲ್ಲಿ ಮಹಿಳೆಯರಿಗೆ ಸಿಗದಿದ್ದ ಸಾಮಾಜಿಕ ಸ್ಥಾನಮಾನವನ್ನು ಅವರು ಬದಲಾಯಿಸಲು ಪ್ರಯತ್ನಿಸಿದರು. ಅವರ ಚಳವಳಿಯಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ, ಅಕ್ಕಮಹಾದೇವಿ ಮೊದಲಾದ ಶರಣೆಯರು ತಮ್ಮ ಚಿಂತನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು. ಇದು ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ದೊಡ್ಡ ಸವಾಲಾಗಿತ್ತು.

ಬಸವಣ್ಣ ಅವರ ಚಿಂತನೆಗಳು ಕೇವಲ ಸಾಮಾಜಿಕ ಸುಧಾರಣೆಯಲ್ಲದೆ, ತಾತ್ವಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನೂ ಒಳಗೊಂಡಿವೆ. “ಇಷ್ಟಲಿಂಗ” ಎಂಬ ಆಧ್ಯಾತ್ಮಿಕ ಸಂಕೇತದ ಮೂಲಕ ಅವರು ವ್ಯಕ್ತಿಯೊಳಗಿನ ದೈವತ್ವವನ್ನು ಅರಿತುಕೊಳ್ಳುವ ಮಾರ್ಗವನ್ನು ಸೂಚಿಸಿದರು. ಇದು ದೇವರನ್ನು ದೇವಸ್ಥಾನಗಳ ಸೀಮಿತ ವಲಯದಿಂದ ಹೊರಗೆಳೆದು, ‘ದೇಹವೇ ದೇಗುಲ, ಶಿರವೇ ಹೊನ್ನ ಕಳಸವೆಂದು’ ಪ್ರತಿಪಾಡಿಸಿದರು. ಇದು ಪ್ರತಿಯೊಬ್ಬನ ಹೃದಯದಲ್ಲೇ ದೇವರ ಅಸ್ತಿತ್ವವಿದೆ ಎಂಬ ನಂಬಿಕೆಯನ್ನು ಬಲಪಡಿಸಿತು. ಈ ಮೂಲಕ ಬಸವಣ್ಣರು ಭಕ್ತಿಯನ್ನು ವೈಯಕ್ತಿಕ ಅನುಭವವಾಗಿ ಪರಿವರ್ತಿಸಿದರು.

ಇನ್ನು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ವಚನ ಸಾಹಿತ್ಯವು ವಿಶಿಷ್ಟ ಸ್ಥಾನವನ್ನು ಹೊಂದಿದೆ. 12ನೇ ಶತಮಾನದಲ್ಲಿ ಉದಯಿಸಿದ ಈ ಸಾಹಿತ್ಯ ಪ್ರಕಾರವು ಕೇವಲ ಕಾವ್ಯವಲ್ಲ ಅವು ತಲತಲಾಂತರದವರೆಗೂ ನಿತ್ಯ ಸತ್ಯ ಬೆಳಗುವ ದಾರಿ ದೀಪಗಳು. ಹಾಗಾಗಿ, ಬಸವಣ್ಣರು ರಚಿಸಿದ ವಚನಗಳು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಸರಳ, ನೇರ ಮತ್ತು ಅರ್ಥಗರ್ಭಿತ ಶೈಲಿಯಲ್ಲಿ ಅವರು ಸಮಾಜದ ದೋಷಗಳನ್ನು ತೀವ್ರವಾಗಿ ವಿಮರ್ಶಿಸುತ್ತಾ, ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ಎಂದಿರುವ ಒಂದು ವಚನ ಸಾಕಲ್ಲವೇ ನಮ್ಮನ್ನು ನಾವು ತಿದ್ದಿಕೊಳ್ಳಲು, ಅವರ ವಚನಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ, ಮಾನವೀಯ ಮೌಲ್ಯಗಳ ಘೋಷಣೆಯಾಗಿ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಳವಳಿಯ ಅಭಿವ್ಯಕ್ತಿಯಾಗಿದೆ. “ಉಳ್ಳವರು ಶಿವಾಲಯ ಮಾಡಿದರು, ನಾನು ಮನದೊಳಗೆ ಶಿವನನ್ನು ಕಟ್ಟಿದ್ದೇನೆ” ಎಂಬ ರೀತಿಯ ವಚನಗಳು ಆಂತರಿಕ ಶುದ್ಧತೆಯ ಮಹತ್ವವನ್ನು ಒತ್ತಿ ಹೇಳುತ್ತವೆ.

ಬಸವಣ್ಣರು ಕೇವಲ ಧಾರ್ಮಿಕ ಅಥವಾ ಸಾಮಾಜಿಕ ಚಿಂತಕರಲ್ಲ, ಅವರು ಉತ್ತಮ ಆಡಳಿತಗಾರರೂ ಆಗಿದ್ದರು. ಸಮಾಜದ ಆರ್ಥಿಕ ವ್ಯವಸ್ಥೆಯಲ್ಲಿ ಶ್ರಮಕ್ಕೆ ಗೌರವ ನೀಡಬೇಕು ಎಂಬುದನ್ನು ಅವರು ಒತ್ತಿ ಹೇಳಿದರು. ಅನ್ಯಾಯದ ಮೂಲಕ ಸಂಪಾದಿಸಿದ ಸಂಪತ್ತಿಗೆ ಅವರು ವಿರೋಧ ವ್ಯಕ್ತಪಡಿಸಿದರು. “ದಾಸೋಹ” ಎಂಬ ತತ್ವದ ಮೂಲಕ ಸಂಪತ್ತನ್ನು ಹಂಚಿಕೊಳ್ಳುವ ಸಂಸ್ಕೃತಿಯನ್ನು ಬೆಳೆಸಿದರು.

ಅನುಭವ ಮಂಟಪವು ಕೇವಲ ಒಂದು ಐತಿಹಾಸಿಕ ಸಂಸ್ಥೆಯಲ್ಲ, ಅದು ಪ್ರಜಾಪ್ರಭುತ್ವದ ಜೀವಂತ ತತ್ವಗಳ ಪ್ರತೀಕವಾಗಿ ಇಂದಿನ ಸಮಾಜಕ್ಕೂ ದಾರಿದೀಪವಾಗಿದೆ. ಅನುಭವ ಮಂಟಪದಿಂದ ಆಧುನಿಕ ಪ್ರಜಾಪ್ರಭುತ್ವದವರೆಗೆ ಸಾಗಿದ ಈ ಚಿಂತನೆಯ ಪಯಣ, ಸಮಾನತೆ ಮತ್ತು ನ್ಯಾಯದ ಮಾನವೀಯ ಮೌಲ್ಯಗಳನ್ನು ಸದಾ ಜೀವಂತವಿರಿಸುತ್ತದೆ. ಈ ನಿಟ್ಟಿನಲ್ಲಿ ಅವರು ಸ್ಥಾಪಿಸಿದ ಅನುಭವ ಮಂಟಪ ಎಂಬ ಸಂಸ್ಥೆಯನ್ನು ಇಂದೂ ಕೂಡ ವಿಶ್ವದ ಮೊದಲ ಪ್ರಜಾಪ್ರಭುತ್ವ ವೇದಿಕೆಯನ್ನಾಗಿ ಪರಿಗಣಿಸಲಾಗುತ್ತದೆ.

ಇಂದಿನ ಯುವಜನತೆಗೆ ಕಲಾತೀತವಾದ ಬಸವಣ್ಣರ ತತ್ವಗಳು ದಿಕ್ಕುತೋರುವ ನಿರ್ದೇಶಕವಾಗಿವೆ.ಈ ಸ್ಪರ್ಧಾತ್ಮಕ ಯುಗದಲ್ಲಿ ಮಾನವೀಯತೆ, ಪ್ರಾಮಾಣಿಕತೆ ಮತ್ತು ಶ್ರಮದ ಗೌರವವನ್ನು ಕಾಪಾಡಿಕೊಳ್ಳುವುದು ಎಷ್ಟು ಅತ್ಯಗತ್ಯ ಎಂಬುದನ್ನು ಇವರ ತತ್ವಗಳು ಪ್ರತಿಪಾದಿಸುತ್ರವೆ. ಬಸವ ಜಯಂತಿ ನಮಗೆ ಆಚರಣೆಗಿಂತ ಹೆಚ್ಚು ಅದು ಜೀವನದ ಮಾರ್ಗದರ್ಶಕ. ಅವರ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸಮಾನತೆ, ನ್ಯಾಯ ಮತ್ತು ಶಾಂತಿಯ ಸಮಾಜವನ್ನು ನಿರ್ಮಿಸಲು ಸಾಧ್ಯ.

ಕಾಲಲಿ ಕಟ್ಟಿದ ಗುಂಡು
ಕೊರಳಲಿ ಕಟ್ಟಿದ ಬೆಂಡು
ತೇಲಲೀಯದು ಗುಂಡು
ಮುಳುಗಲೀಯದು ಬೆಂಡು
ಇಂತಪ್ಪ
ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೆ ಕಾಯೋ
ಕೂಡಲಸಂಗಯ್ಯಾ.


  • ಗೀತಾಂಜಲಿ ಎನ್ ಎಮ್ – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW