ಲೇಖನ : ಮಾಲತಿ ಗಣೇಶ ಭಟ್
ಪರಿಚಯ : ಓದಿದ್ದು ಎಂಎಸ್ಸಿ ಫಿಸಿಕ್ಸ್. ಹೊನ್ನಾವರ ಎಸ್ . ಡಿ.ಎಂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಗೃಹಿಣಿಯಾಗಿದ್ದಾರೆ. ಓದುವುದು, ಬರೆಯುವುದು ಅವರ ಹವ್ಯಾಸಗಳಲ್ಲಿ ಒಂದು.
ಇದು ತ್ಯಾಗನಾ? Sacrifice ಅನ್ನೋದು ಬಹು ದೊಡ್ಡ ವಿಷಯ. ಹದಿನೈದು ವರ್ಷಗಳೇ ಕಳೆಯಿತು. ಕೈಯಲ್ಲಿ ಹಿಡಿದ appointment letter ತಿರಸ್ಕರಿಸಿ. ಒಡಲಲ್ಲಿ ಮೂಡಿದ ಚಿಗುರನ್ನು ಬೆಳೆಸಲು ನಾನು ಕೆಲಸಕ್ಕೆ ಹೋಗಲ್ಲ ಅಂದೆ. ಅದು ನನ್ನ ಕರ್ತವ್ಯ ಅಂತ ತಿಳಿದು ಆ ನಿರ್ಧಾರಕ್ಕೆ ಬಂದದ್ದು. ಯಾಕೆಂದರೆ ನಮಗೆ ಕೊಟ್ಟ ಸಂಸ್ಕಾರನೇ ಅಂಥದ್ದು. ಸ್ನಾತಕೋತ್ತರ ಪದವಿ, ಅದರಲ್ಲೂ ಭೌತಶಾಸ್ತ್ರ ದಂಥ ವಿಷಯವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ಓದಿ, ನಾನು ಗೃಹಿಣಿ ಆಗ್ತೇನೆ, ಸಂಪೂರ್ಣವಾಗಿ ನನ್ನನ್ನು ನಾನು ಕೌಟುಂಬಿಕ ಜೀವನಕ್ಕೆ ಮೀಸಲಿಡ್ತೇನೆ ಅಂತ ಬಹುಶಃ ನಾನೇ ಯೋಚಿಸಿರಲಿಲ್ಲ.
ಸ್ನಾತಕೋತ್ತರ ಪದವಿ ಯ ಮೊದಲ ವರ್ಷ ಮುಗಿಸಿದಾಗ, ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಬೇಸಿಗೆ ಶಿಬಿರಕ್ಕೆ ನಮ್ಮ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಯ್ಕೆಯಾದೆ. ಏನೋ ಒಂದು ಡಿಗ್ರಿಗಾಗಿ ಈ ಪದವಿ ಮಾಡಬೇಕು ಅನ್ನೋ ಆಲೋಚನೆಯನ್ನು ಬದಲಿಸಿ ಭೌತಶಾಸ್ತ್ರದ ಬಗ್ಗೆ, ಖಗೋಳ ವಿಜ್ಞಾನದ ಬಗ್ಗೆ ಹೆಚ್ಚಿನದನ್ನು ತಿಳಿಯಬೇಕು, ಏನನ್ನಾದರೂ ಸಾಧಿಸಬಹುದು ಅನ್ನುವ ಹಂಬಲವನ್ನು ಹುಟ್ಟು ಹಾಕಿದ್ದು ಈ ಬೇಸಿಗೆ ಶಿಬಿರ. ಅದಕ್ಕೆ ತಕ್ಕಂತೆ ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳ ಪ್ರೋತ್ಸಾಹ ಕೂಡ ದೊರೆತು ಟಾಟಾ ಇನ್‌ಸ್ಟಿಟ್ಯೂಟ್, ಮುಂಬೈ ಗೆ ಒಂದು ಸಣ್ಣ ಪ್ರಾಜೆಕ್ಟ್ ಗೆ ಆಯ್ಕೆ ಕೂಡ ಆದೆ.
ಆದರೆ ಹೆಣ್ಣು ಮಗಳು ಅದರಲ್ಲೂ ಮನೆಯ ಹಿರಿ ಮಗಳು.. ತ್ಯಾಗ ಮಾಡಿದ್ದು ಆವಾಗ…. ಮುಂಬೈ ಅಂತ ಪರ ಊರಿಗೆ ಹೋಗಲು ತಂದೆಯವರ ಅನುಮತಿ ಸಿಗಲೇ ಇಲ್ಲ. ನೋವೇನೋ ಬಹಳವಾಯಿತು. ಆದರೆ ಅದನ್ನೇ ನೆನೆದು ಕಣ್ಣೀರು ಹಾಕುತ್ತಾ ಕುಳಿತುಕೊಳ್ಳುವ ಜಾಯಮಾನದವಳಲ್ಲ ನಾನು. ಪದವಿ ಪೂರೈಸಿ ಊರಿನ ಕಾಲೇಜಿಗೆ lecturer ಆಗಿ ಸೇರಿಕೊಂಡೆ. ಮದುವೆ ನಿಶ್ಚಯವಾಯಿತು. ನಾನು job ಮಾಡಬೇಕು ಅನ್ನುವ ಆಸೆ ನನ್ನ ಪತಿಯವರಿಗೂ ಬಹಳವಾಗಿತ್ತು.
ಚಿತ್ರಕಲೆ : ಚೈತನ್ಯ ಭಟ್
ಮದುವೆಯಾಗಿ ಹೊರಟು ನಿಂತ ಮಗಳಿಗೆ ತಾಯಿಯ ಕಿವಿಮಾತು”..ತಂಗೀ ಅತಿಯಾಗಿ ಅವಶ್ಯಕತೆ ಇದೆ ಅಂದರೆ ಮಾತ್ರ ಕೆಲಸಕ್ಕೆ ಹೋಗು. ಇಲ್ಲವಾದಲ್ಲಿ ಕೌಟುಂಬಿಕ ಜೀವನವನ್ನೇ ಸರಿಯಾಗಿ ಸಂತೋಷದಿಂದ ಸ್ವೀಕರಿಸು. ನಿನ್ನ ಡಿಗ್ರಿ, ಓದು, ಕೆಲಸ ಯಾವುದೇ ಕಾರಣಕ್ಕೂ ನಿನ್ನ ವೈವಾಹಿಕ ಜೀವನಕ್ಕೆ ತೊಡಕಾಗದ ಹಾಗೆ ಬದುಕು”. ಹೌದು ನನಗೂ ಅದೇ ಬೇಕಾಗಿತ್ತು. ಅದೇನೋ ನನಗೆ ನೌಕರಿ ಮಾಡಲು ಮನಸ್ಸೇ ಇರಲಿಲ್ಲ, ಆದರೂ ನನ್ನ ಪತಿ ನನ್ನನ್ನು ಹುರಿದುಂಬಿಸಿ ಜೀವನದಲ್ಲಿ ಎರಡನ್ನೂ ನಿಭಾಯಿಸೋಣ ಅಂತ ತಿಳಿ ಹೇಳಿ ಒಂದು ಕೆಲಸವೂ ಸಿಗುವ ಹೊತ್ತಿಗೆ ಒಡಲಲ್ಲಿ ಚಿಗುರೊಡೆದಾಗಿತ್ತು.
ಅಷ್ಟೇ ನಾನು ಅದರ ನಂತರ ಕೆಲಸದ ಆಲೋಚನೆಯನ್ನೇ ಬಿಟ್ಟೆ, ಬಹುಶಃ ನನ್ನ ಪತಿಯಂತೆ ಪ್ರೋತ್ಸಾಹಿಸುವ ಮನಸ್ಥಿತಿ ತಾಯಿಯ ಮನೆಯಲ್ಲಿ ಸಿಕ್ಕಿದ್ದರೆ ಏನನ್ನೋ ಸಾಧಿಸುರುತ್ತಿದ್ದೆ, ಈಗ ಇಬ್ಬರು ಮಕ್ಕಳ ತಾಯಿ, ದೊಡ್ಡವನು ಹತ್ತನೇ ತರಗತಿ, ಇಲ್ಲಿಯವರೆಗೂ ಅವರ ಪ್ರತಿಯೊಂದು ಸಣ್ಣ ಸಣ್ಣ ಜವಾಬ್ದಾರಿಗಳನ್ನು ನಾನು ನನ್ನ ಪತಿ ನಿಭಾಯಿಸುತ್ತಾ ಬಂದಿದ್ದೇವೆ, ಇಷ್ಟು ವರ್ಷಗಳ ಜೀವನ ಪ್ರಯಾಣದಲ್ಲಿ ತೀರಾ ಒಂದೋ ಎರಡೋ ಸಲ ಮನಸ್ಸಿನ ಮೂಲೆಯಲ್ಲಿ ನಾನು ಕೆಲಸ ಮಾಡಬೇಕಿತ್ತು ಅಂತ ಬಂದಿದ್ದು ಬಿಟ್ಟರೆ, sacrificed my life ಅನ್ನೋ ಯೋಚನೆ ಯಾವತ್ತೂ ಬಂದಿಲ್ಲ, ಏನೇ ಬಂದರೂ ಇಬ್ಬರೂ ಯಶಸ್ವಿಯಾಗಿ ನಿಭಾಯಿಸಿದ್ದೀವಿ. ನನ್ನ ಬಲ ಸಂಗಾತಿಯ ಸಹಕಾರ ಇದರಲ್ಲಿ ಬಹಳ ದೊಡ್ಡದಿದೆ.Best life partner can change your life. Yes, I proudly say, I am lucky enough.
ತ್ಯಾಗ ಅನ್ನೋದು ಬಹು ದೊಡ್ಡ ಶಬ್ದ ಸಂಸಾರದಲ್ಲಿ ತ್ಯಾಗ ಅನ್ನೋ ವಿಚಾರ ಬಂದರೆ ಅಲ್ಲಿ ego, ಹಠ ಎಲ್ಲಾ ಸೇರಿಕೊಳ್ಳುತ್ತೆ. ಅರಿತು ಬಾಳಬೇಕು. ತಾಯಿ ಅನ್ನೋದು ತ್ಯಾಗದ ಫಲ ಅಲ್ಲವೇ ಅಲ್ಲ. ಅದು ಪ್ರೇಮದ ಫಲ. ನನ್ನದೆಲ್ಲವನ್ನೂ ಕಳೆದುಕೊಂಡು ನಾನು ತಾಯಿಯಾಗಲಿಕ್ಕೆ ಸಾಧ್ಯವೇ ಇಲ್ಲ. ಮಮತೆಯ ಮಡಿಲಲ್ಲಿ ಮಕ್ಕಳನ್ನು ಸಾಕಿ ಸಲಹಿ ಪೋಷಿಸಿ ಬೆಳೆಸುವುದು ಹೆಮ್ಮೆಯೇ ಹೊರತು ತ್ಯಾಗದ ಸಂಕೇತವಲ್ಲ.
*****
(ನಿಮ್ಮ ಅಭಿಪ್ರಾಯಗಳನ್ನುಮೇಲಿನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಮತ್ತು ನಿಮ್ಮ ಲೇಖನವನ್ನು aakrutikannada@gmail.com ಕಳುಹಿಸಿ.)