ವೃದ್ಧಾಶ್ರಮ ನೆಮ್ಮದಿಯ ನೆಲೆಯೇ?

ವೃದ್ಧಾಶ್ರಮದಲ್ಲಿ ಒಬ್ಬೊಬ್ಬರು ಸಂತೋಷ ಕಂಡುಕೊಳ್ಳುತ್ತಾರೆ, ಇನ್ನು ಕೆಲವರಿಗೆ ಎಲ್ಲಿಯೂ ಸಂತೋಷ ಕಾಣುವುದಿಲ್ಲ. ಹಾಗಾಗಿ ವೃದ್ಧಾಶ್ರಮ ಎನ್ನುವುದು ಅವರವರ ಆಯ್ಕೆ, ಅವರವರ ಸಂತೋಷ. ಹರಿಹರ ಬಿ ಆರ್ ಅವರ ಈ ಲೇಖನವನ್ನು ತಪ್ಪದೆ ಓದಿ…

ನೆಮ್ಮದಿಯ ವಿಷಯದಲ್ಲಿ ಕಾಲಾಯ ತಸ್ಯೈ ನಮಃ ಎಂದು ಕಾಲವನ್ನು ಸ್ಮರಿಸುವಂತಾಗಿದೆ. ನಮ್ಮ ತಾತನ ಕಾಲದಲ್ಲಿ ಪ್ರತಿಯೊಬ್ಬರೂ ಕಷ್ಟ ಪಡುತ್ತಿದ್ದುದರಿಂದ ಮೈಕೈ ನೋವುಗಳು ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅಪರೂಪಕ್ಕೊಬ್ಬರಿಗೆ ನೋವುಗಳು ಕಾಣಿಸಿಕೊಳ್ಳುತ್ತಿದ್ದುದು ಸಹಜ.

ಇವರಲ್ಲಿ ನಮ್ಮ ಅಜ್ಜಿ -ತಾತರು ಸೇರಿದ್ದರು. ಅವರುಗಳು ಕಾಲವಾಗುವ ತನಕ ಬೆನ್ನು ನೋವು, ಕಾಲು ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತಿದ್ದುದರಿಂದ ನಾವು ಚಿಕ್ಕವರಿದ್ದುದರಿಂದಲೋ ಏನೋ ನಾವು ಭಾರ ಕಡಿಮೆ ಎಂದು ನೋವಿನ ಭಾಗದಲ್ಲಿ ನನ್ನನ್ನು ನಿಲ್ಲಿಸಿ ತಮ್ಮ ಕೈಯಾಸರೆ ಕೊಟ್ಟು ತುಳಿಸಿಕೊಳ್ಳುತ್ತಿದ್ದರು. ನನಗೆ ಮೊದ ಮೊದಲು ದೊಡ್ಡವರಿಗೆ ಕಾಲು ತೋರಿಸಿ ಮಲಗಬಾರದು, ನಮ್ಮ ಕಾಲು ತಗುಲಿದರೆ ಅವರನ್ನು ಮುಟ್ಟಿ ನಮಿಸಬೇಕು, ಈ ಎಲ್ಲ ವಿಷಯಗಳನ್ನು ಅವರಿಗೆ ತಿಳಿಸಿದಾಗ ಅವರುಗಳು ‘ನಾನೇ ಹೇಳಿದ್ದು ತಾನೇ? ತುಳಿ’ ಎಂದು ಹೇಳುತ್ತಿದ್ದರು. ನನ್ನಂತೆ ಸುಮಾರು ಜನರನ್ನು ನೋಡಿದ್ದರಿಂದ ನಾನೂ ಖುಷಿಯಾಗಿಯೇ ತುಳಿತ ಸೇವೆ ಮಾಡುತ್ತಿದ್ದೆ.

ಮುಂದೆ ನಮ್ಮ ತಂದೆ ತಾಯಿಯರಿಗೆ ಇದೇ ರೀತಿ ಆದಾಗ ನಮ್ಮ ಮಕ್ಕಳನ್ನು ಕರೆದರೆ ವಿದ್ಯಾಶಾಲೆಗಳ ಮನೆಗೆಲಸ ಹೆಚ್ಚು. ಹೌದು ಒಮ್ಮೊಮ್ಮೆ ಮಕ್ಕಳಿಗೆ ನಾವೂ ಬರೆದುಕೊಟ್ಟಿದ್ದುಂಟು. ಆದರೆ ಆಟವಾಡುವ ಸಮಯ ಮೊಟಕಾಗುತ್ತಿರಲಿಲ್ಲ. ಅಸಹಾಯಕರಾದ ನಾವುಗಳು ಕೆಲಸವಿದ್ದರೂ ನಮ್ಮ ಕೈಗಳಿಂದಲೇ ಪರಸ್ಪರ ನೀವುವುದನ್ನು ನಾವೇ ಮಾಡಿಕೊಳ್ಳುತ್ತಿದ್ದೆವು.

ನಮ್ಮ ಸಮಕಾಲೀನರೆಲ್ಲರ ಅವಸ್ಥೆಗಳು ಇದೇ ಆಗಿದ್ದು, ಮುಂದೆ ಸಮಕಾಲೀನರಿಗೇನಾದರೂ ನೋವಾದರೆ ವೈದ್ಯರಿದ್ದಾರೆ ಅಥವಾ ಆಸ್ಪತ್ರೆಗಳಿವೆ ಎಂದು ಕಳಿಸುವಂತೆ, ವೃದ್ಧಾಶ್ರಮಕ್ಕೂ ಕಳುಹಿಸುವಷ್ಟು ಕಾಲ ಬದಲಾಗಿದೆ.

ಫೋಟೋ ಕೃಪೆ : ಅಂತರ್ಜಾಲ

ಇಲ್ಲಿ ನೋವಿನ ವಿಷಯ ಬರೆದದ್ದು ನೆಪ ಮಾತ್ರವಷ್ಟೇ. ಪರಸ್ಪರ ಪ್ರೀತಿ ಇದ್ದರೆ ನೆಮ್ಮದಿಯಾಗಿ ಇರಲು ಸಾಧ್ಯವೆಂದು ತಿಳಿಸುವ ಪ್ರಯತ್ನ. ಆಗ ಮುಖ್ಯವಾಗಿ ಮನೆಯಲ್ಲಿದ್ದ ಪ್ರತಿಯೊಬ್ಬ ಸದಸ್ಯರೂ ಪರಸ್ಪರ ಪ್ರೀತಿಸುತ್ತಿದ್ದರು, ಹಾರೈಸುತ್ತಿದ್ದರು, ಇನ್ನೊಬ್ಬರಿಗೆ ನೋವಾಗದಂತೆ ನಡೆದುಕೊಳ್ಳುತ್ತಿದ್ದರು, ಹುಷಾರಿಲ್ಲದಿದ್ದರೆ ಹರಕೆ ಹೊರುತ್ತಿದ್ದರು, ಹೀಗಿದ್ದುದರಿಂದ ಎಲ್ಲರಿಗೂ ನೆಮ್ಮದಿ ಸಿಗುತ್ತಿತ್ತು.

ಇದು ಕ್ರಮೇಣ ಭುವಿಯಲ್ಲಿನ ವ್ಯವಹಾರಗಳು ಅಧಿಕವಾಗುತ್ತ, ಅರಿಷಡ್ವರ್ಗಗಳ ಅಡಿಯಿರಿಸಿ ಪ್ರೀತಿಗಳು ಕಡಿಮೆಯಾಗುತ್ತ ನೆಮ್ಮದಿ ಎನ್ನುವುದು ನೆಲಕಚ್ಚುತ್ತಿದೆ ಅಥವಾ ಇಲ್ಲವಾಗಿದೆ.

ವಾಸ್ತವದ ಈ ಲೋಕದಲ್ಲಿ ನಾವೆಷ್ಟೇ ಪ್ರೀತಿಸಿದರೂ ಅರ್ಥ ಮಾಡಿಕೊಳ್ಳುವ ಮಂದಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುವರು. ಪ್ರೀತಿಗಳೇ ಇಲ್ಲದ ಮೇಲೆ ನೆಮ್ಮದಿಯು ಹೇಗೆ ಸಾಧ್ಯ. ಇವು ಎಲ್ಲಿದ್ದರೂ ಅಷ್ಟೇ.

ಈಗಲೂ ಕೆಲವರು ನೆಮ್ಮದಿಯಾಗಿ ಬದುಕುತ್ತಿರುವುದನ್ನು ಕಾಣುತ್ತಿರುತ್ತೇವೆ. ಇವರೆಲ್ಲರೂ ಎಲ್ಲರ (ಮಕ್ಕಳ ಸೇವೆಯೂ) ಸೇವೆ ಮಾಡಿ ಸಂತೃಪ್ತರಾದವರು. ಅಥವಾ ಮುಂದಾಗುವ ಖರ್ಚುಗಳನ್ನು ಊಹಿಸಿ ಮುಂಜಾಗರೂಕತೆಗೆ ಸ್ವಹಿತಕ್ಕಾಗಿ ನ್ಯಾಯ ರೀತಿಯಿಂದಲೇ ಕೂಡಿಟ್ಟು ಸ್ಥಿತಿವಂತರಾದವರು ಆಳುಗಳನ್ನು ಇಟ್ಟುಕೊಂಡು ನೆಮ್ಮದಿಯಾಗಿ ಬದುಕಿದವರಿದ್ದಾರೆ.

ಇನ್ನು ಕೆಲವರು ಬೆಟ್ಟದಷ್ಟು ಕಷ್ಟಗಳನ್ನು ಲೀಲಾಜಾಲವಾಗಿ ಎದುರಿಸಿದರವರಿಗೆ, ದಾನ ಧರ್ಮಾಧಿಗಳನ್ನು ಮಾಡಿಕೊಂಡಿದ್ದವರಿಗೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡವರೆಂದು ಹೇಳಬಹುದು. ಅಂತಹವರ ಜೊತೆ ಜೊತೆಯಲ್ಲೇ ನೆಮ್ಮದಿ ತಾನಾಗಿಯೇ ನೆಲೆಸಿರುತ್ತದೆ. ಇಂತಹವರ ಬಾಳು ದೋಣಿಯ ಮೇಲಿದ್ದಂತೆಯೇ ಸರಿ. ಪರಿಸರಕ್ಕೆ ಹೊಂದಿಕೊಳ್ಳುವ ಮನೋಭಾವ, ಮಾನಸಿಕ ಪೂರ್ವ ಸಿದ್ಧತೆಗಳು ಇದ್ದರೆ ಅಂತಹವರು ಎಲ್ಲಿಯೇ ಸಾಗಿದರೂ ಸುಖ ಕಂಡುಕೊಳ್ಳುವರು.

ಫೋಟೋ ಕೃಪೆ : ಅಂತರ್ಜಾಲ

ಇಂತಹವರನ್ನೂ ಕೂಡ ಸಂಪತ್ತಿಲ್ಲವೆಂದು ಅಥವಾ ಮುಂದೆ ಉಪಯೋಗವಿಲ್ಲವೆಂದು ಈಗಿನ ಕೆಲವು ಪೀಳಿಗೆಯ ಜೋಡಿಗಳು ಇಬ್ಬರೇ ಇರಲು ಬಯಸಿ ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ಕಳಿಸಿದವರುಂಟು.

ಒಮ್ಮೊಮ್ಮೆ ಮಗ, ಸೊಸೆ, ಮೊಮ್ಮಕ್ಕಳು ಪ್ರವಾಸ ಹೋಗಿ ಮರಳಿ ಬಾರದಿದ್ದರೆ ಮನೆಯಲ್ಲಿದ್ದ ವೃದ್ಧರು ಸ್ವಯಂ ಆಗಿ ವೃದ್ಧಾಶ್ರಮ ಸೇರುವಂತಾಗುತ್ತದೆ. ಇನ್ನೂ ಅನೇಕ ರೀತಿಯಿಂದಲೂ, ಅನೇಕ ಕಾರಣಗಳಿಂದಲೂ ವೃದ್ಧಾಶ್ರಮ ಸೇರಿದವರಾಗಿದ್ದಾರೆ.

ನೆಮ್ಮದಿಯ ವಿಷಯ ಅವರವರ ವ್ಯಕ್ತಿತ್ವಕ್ಕೆ ತಕ್ಕಂತೆ ಅಥವಾ ಸಹವಾಸಗಳಿಗೆ ತಕ್ಕಂತೆ ಬಾಳು ನಡೆಸಿದವರಾಗಿದ್ದರೆ ಅಥವಾ ಹಲವು ಯೋಚನೆಗಳಲ್ಲಿ ಮುಳುಗಿದ್ದವರಿಗೆ ಅಂತಹವರಿಗೆ ವೃದ್ದಾಶ್ರಮವಷ್ಟೇ ಅಲ್ಲ, ಅವರಿಗೆ ಎಲ್ಲಿದ್ದರೂ ನೆಮ್ಮದಿ ಎನ್ನುವುದು ಸಿಗುವುದಿಲ್ಲ. ವೃದ್ಧಾಶ್ರಮದೊಳಗಿನ ಸಿಬ್ಬಂಧಿಗಳ ಸೇವೆಗೆ ಎರಡು ಮಾತಿಲ್ಲ.

ಒಟ್ಟಾರೆ ವೃದ್ಧಾಶ್ರಮ ನೆಮ್ಮದಿಯ ನೆಲೆಯೇ ಎನ್ನುವುದು ಅವರವರ ಯೋಚನಾಲಹರಿಯಂತೆ, ಅವರವರಿಗೆ ಬಿಟ್ಟಿದ್ದು, ಅಂದರೆ ‘ಅವರವರ ಭಾವಕ್ಕ’ ಎಂದು ಹೇಳಬಹುದಷ್ಟೇ.


  •  ಹರಿಹರ ಬಿ ಆರ್ – ಅಕ್ಷಂತಲ ಬರಹ, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW