“ಸಂಹಿತೆ” ಈ ಮೂರು ಅಕ್ಷರಗಳಲ್ಲಿ ಕಣ್ಣಿಗೆ ಕಾಣದಿದ್ದರೂ ಪರಮಾತ್ಮನ ತತ್ವವು ತುಂಬಿಕೊಂಡಿರುವ ಒಂದು ಶಬ್ದ. ಎಲ್ಲರಿಗೂ ಹಿತವನ್ನು ಬಯಸುವ ಸಂಬಂಧವನ್ನು ಸೂಚಿಸುವದಕ್ಕೆ “ಸಂಹಿತೆ”ಎನ್ನುವರು. ಲೇಖಕರಾದ ಸಂಧ್ಯಾ ಟಿ ಅವರ “ಸಂಹಿತೆ” ಕುರಿತು ಒಂದು ವಿಚಾರ ತಪ್ಪದೆ ಓದಿ….
ಸಂಹಿತೆ
ಬೀಜ ವೃಕ್ಷದೊಳಾಯ್ತು ವೃಕ್ಷಕೆ
ಬೀಜವಾರಿಂದಾಯ್ತು ಲೋಕದಿ
ಬೀಜ ವೃಕ್ಷನ್ಯಾಯವಿದ ಭೇದಿಸುವರಾರಿನ್ನು
ಸೋಜಿಗವ ನೀ ಬಲ್ಲೆ ನಿನ್ನೊಳು
ರಾಜಿಸುತ ಮೊಳೆದೋರುವುದು ಸುರ
ರಾಜನಂದನ ನಮಿತ ರಕ್ಷಿಸು ನಮ್ಮನನವರತ
ಇದು ಕನಕದಾಸರ ಹರಿ ಭಕ್ತಿಸಾರ ಎನ್ನುವ ಕೃತಿಯಲ್ಲಿ ತಿಳಿಸಿದ್ದಾರೆ. ಬೀಜ ಮೊದಲೊ, ವೃಕ್ಷ ಮೊದಲೊ? ಬೀಜ ಇಲ್ಲದೆ ವೃಕ್ಷ ಇಲ್ಲ, ವೃಕ್ಷ ಇಲ್ಲದೆ ಬೀಜ ಇಲ್ಲ. ಇದನ್ನು ನಮಗೆ ನಿರ್ಣಯಿಸಲು ಅಸಾಧ್ಯವಾದರೂ ದೇವರಿಗೆ ಸಾಧ್ಯ.ಇದು ಆಶ್ಚರ್ಯ ಅಲ್ವಾ.ಕೊನೆಗೆ ಇಂದ್ರನ ಮಗ ಅರ್ಜುನನಿಂದ ವಂದಿತನಾದ ಶ್ರೀ ಕೃಷ್ಣನೇ ಅನವರತ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.

“ಸಂಹಿತೆ” ಈ ಮೂರು ಅಕ್ಷರಗಳಲ್ಲಿ ಕಣ್ಣಿಗೆ ಕಾಣದಿದ್ದರೂ ಪರಮಾತ್ಮನ ತತ್ವವು ತುಂಬಿಕೊಂಡಿರುವ ಒಂದು ಶಬ್ದ. ಎಲ್ಲರಿಗೂ ಹಿತವನ್ನು ಬಯಸುವ ಸಂಬಂಧವನ್ನು ಸೂಚಿಸುವದಕ್ಕೆ “ಸಂಹಿತೆ” ಎನ್ನುವರು. ಇದರಿಂದ ಒಂದೇ ಅಲ್ಲಾ ಒಂದರಿಂದ ಎಲ್ಲಾ ಅನ್ನುವುದು ಖಚಿತ ಅಲ್ವಾ? ಪರಮಾತ್ಮ ಒಬ್ಬನೇ ಅವನೇ ಸರ್ವೋತ್ತಮ. ಅವನಿಂದಲೆ ಎಲ್ಲ ದೇವತೆಗಳು, ಕಿಂಕರರು, ಯಕ್ಷರು ಮನುಷ್ಯರಾದಿ ಜೀವಿಗಳು. ಪರಮಾತ್ಮನು ಬಿಂಬ. ನಾವೆಲ್ಲ ಪ್ರತಿಬಿಂಬರು. ಅನೇಕ ಪಾತ್ರೆಗಳಲ್ಲಿ ನೀರನ್ನು ತುಂಬಿ ಸೂರ್ಯನ ಪ್ರಕಾಶದಲ್ಲಿ ಇಟ್ಟರೆ ಆ ಪಾತ್ರೆಗಳಲ್ಲಿ ಸಮನಾಗಿ ಸೂರ್ಯನ ಬಿಂಬವು ಪ್ರತಿಬಿಂಬ ಕಾಣಿಸುವುದು.ಅದರಂತೆ ಪರಮಾತ್ಮನು ಬಿಂಬರೂಪಿಯಾಗಿ ಎಲ್ಲರಲ್ಲಿಯೂ ಸಮನಾಗಿ ನೆಲೆಸಿರುವನು.ನೀರು ಕದಡಿದರೆ ಬಿಂಬ ಸರಿಯಾಗಿ ಕಾಣುವುದಿಲ್ಲ. ಕಾರಣ ಮನಸ್ಸನ್ನು ಏಕಾಗ್ರಗೊಳಿಸಲು ಆದಷ್ಟು ಕೋಪವನ್ನು ನಿಗ್ರಹ ಮಾಡಿ ಶ್ರದ್ಧಾ ಪೂರ್ವಕ ಬಿಂಬನನ್ನು ಕಾಣಲು ತವಕಗೊಳ್ಳಬೇಕು.ಆಗ ವಾಸುದೇವನ ಅನುಗ್ರಹ ಆಗುವುದು. ಬ್ರಹ್ಮಾಂಡವು ಬ್ರಹ್ಮಾಂಡದೊಳಗಿನ ಎಲ್ಲ ಜೀವಿಗಳು ಪಂಚಭೂತಗಳಿಂದ ಸೃಷ್ಟಿಯಾಗಿವೆ. ಪಂಚಜ್ಞಾನೇಂದ್ರಿಯಗಳು, ಪಂಚತನ್ಮಾತ್ರಗಳು ಪಂಚಭೂತಾದಿಗಳಲ್ಲಿ ದೋಷ ವರ್ಜಿತನಾದ, ಸ್ವತಂತ್ರನಾದ ಪರಮಾತ್ಮನು ನೆಲೆಸಿದ್ದಾನೆ. ಪಂಚಕರ್ಮೇಂದ್ರಿಯಗಳಲ್ಲಿ ಇಂದ್ರಿಯಾಭಿನಿಗಳ ಅಂತರಾತ್ಮಕನಾಗಿ ಕರ್ಮಗಳನ್ನು ಮಾಡಿಸುವನೆಂದು ಜ್ಞಾನಿಗಳು ಅನುಭವಿಸಿ ಹೇಳಿರುವ ನುಡಿಗಳು.ಇದು ಪರಮಾತ್ಮನ, ದೇವತೆಗಳ ಹಾಗೂ ಜೀವಿಗಳ ಸಂಹಿತೆಯು.ಈ ಸಂಹಿತೆಯು ಬಲಗೊಳ್ಳಲು ಅಧ್ಯಾತ್ಮಿಕ ಚಿಂತನೆ ಬೇಕು.
ಪರಮಾತ್ಮನು ತನ್ನ ಸ್ವಾತಂತ್ರ್ಯೀಯ ಗುಣಗಳಲ್ಲಿ ಒಂದು ಭಾಗವನ್ನು ಕೊಟ್ಟು ಉಪಯೋಗಿಸಲು ಬುದ್ಧಿ, ಸ್ಮೃತಿ, ಚಿಂತನಾದಿಗಳನ್ನು ಕೊಟ್ಟು ಜೊತೆಗೆ ತಾನು ನೆಲೆಸಿರುವನು. ಇದು ಆತ್ಮ ಪರಮಾತ್ಮನ ಸಂಹಿತೆ. ಸಂಹಿತೆಯ ಸಂಬಂಧವನ್ನು ಅಕ್ಷರಗಳಲ್ಲಿ ಹಿತವಾಗಿ ತುಂಬಿಕೊಂಡು ಶಬ್ದವನ್ನಾಗಿ ಮಾಡಿ ಯಾವುದೇ ಮಂತ್ರ ಪಠಣವಾಗಲಿ, ಜಪವಾಗಲಿ, ಮಾತಾಗಲಿ ಸಾತ್ವಿಕ ಸಂಹಿತೆಯಾಗುವುದು. ಈ ಎಲ್ಲ ಕ್ರಿಯೆಗಳನ್ನು ನಿತ್ಯ ಪರಮಾತ್ಮನಿಗೆ ಸಮರ್ಪಿಸಿದರೆ ಅದು ಯಜ್ಞ ಆಗುವುದು. ಅದಕ್ಕೆ
“ಕಾಯೇನ ವಾಚ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾವಾ ಪ್ರಕೃತೇ: ಸ್ವಭಾವಾತ್/
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ//”
ಈ ಮಂತ್ರ ಇರುವುದು. ಇದು ಪರಮಾತ್ಮ ಮತ್ತು ಭಕ್ತರ ಸಂಹಿತೆ. ಹೀಗೆ ಎಲ್ಲರಿಗೂ ಸಂಹಿತೆ ಇರುವುದು ಗುರು – ಶಿಷ್ಯ , ಹಿರಿಯರು – ಕಿರಿಯರು ಈ ರೀತಿ ಎಲ್ಲದಕ್ಕೂ ಒಂದು ಸಂಹಿತೆ ಇರುವುದು ಇದು ಸಾತ್ವಿಕ. ಆದರೆ ಮೋಕ್ಷಾನಂದದ ಮಾರ್ಗ ಸಿಗುವುದು. ಅದನ್ನು ಮರೆತರೆ ಎಲ್ಲವು ದುರ್ಮಾರ್ಗಕ್ಕೆ ದಾರಿ ಸಾಗುವುದು. ವಿಜ್ಞಾನಿಗಳು ಹಗಲು ರಾತ್ರಿ ಕಷ್ಟಪಟ್ಟು ತಯಾರಿಸಿದ ತಂತ್ರಜ್ಞಾನ ವಿಜ್ಞಾನದ ವಸ್ತುಗಳೆಲ್ಲವು ದುರ್ಮಾರ್ಗಕ್ಕೆ ಉಪಯೋಗವಾಗುತ್ತಿವೆ. ವಿಜ್ಞಾನವು ಜಗತ್ತಿನ ವಿಕಾಸಕ್ಕೆ ಉಪಯೋಗವಾದರೆ ವಿಜ್ಞಾನಿಗಳಿಗೂ ಮತ್ತು ಪ್ರಕೃತಿಗೂ ಸಹಾಯ ಸಂತೋಷವಾಗುವುದು. ಸಂಹಿತೆಯ ಮೂಲತತ್ವವನ್ನು ಮರೆತು ಸಂಘರ್ಷದ ಮಟ್ಟವು ಸ್ವಾರ್ಥಕ್ಕೆ ಹಕ್ಕುಗಳು ಬಂಧನ ಆಗಿವೆ.
ಪರಮಾತ್ಮ ಜೀವಾತ್ಮ, ಗುರು ಶಿಷ್ಯ, ರಾಜಾ ಪ್ರಜೆ, ದೈತ್ಯರಲ್ಲಿ ಹುಟ್ಟಿದರೂ ಪ್ರಲ್ಹಾದ, ಬಲಿ, ಸಂಹಿತೆ ಮರೆಯಲಿಲ್ಲ.
“ಬಲಿಯಂತೆ ದಾನವ ಕೊಡಲು ಅರಿಯೆ,
ಲಲಿತವನರಿಯೆ ಅರ್ಜುನನಂತೆ ಸಖನಾಗಿ
ಭಕ್ತಿಸಲರಿಯೆ ಪ್ರಲ್ಹಾದನಂತೆ
ಸಲಹೋ ದೇವರದೇವ ಪುರಂದರ ವಿಠಲ
ಕರುಣಿಸೋ ರಂಗ ಕರುಣಿಸೋ “
ಇದು ಸಂಹಿತೆ. ಪರಮಾತ್ಮನಲ್ಲಿ ಸಂಹಿತೆಯ ಪ್ರಾರ್ಥನೆ “ಅನಾಯಾಸೇನ ಮರಣಂ ವಿನಾ ದೈನೇನ ಜೀವನಂ ಅಂತಕಾಲೇ ತವ ಸಾನಿಧ್ಯಂ ಶ್ರೀ ಕೃಷ್ಣ ಅಂತ ಕಾಲೇ ತವ ಸಾನಿಧ್ಯಂ”. ಹರಿ ಸರ್ವೋತ್ತಮ, ವಾಯು ಜೀವೋತ್ತಮ, ಹರೇ ಶ್ರೀನಿವಾಸ. ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥಂ ಶ್ರೀ ಕೃಷ್ಣಾರ್ಪಣ ಮಸ್ತು.
ಜ್ಞಾನ ಮಾರ್ಗಕೆ ಗುರು – ಶಿಷ್ಯ ಸಂಹಿತೆ
ವಿಜ್ಞಾನಕೆ ಭಕ್ತಿ – ವಿನಯ ಸಂಹಿತೆ
ಬದುಕಿಗೆ ಬೇಕು ಗುರು – ಶಿಷ್ಯ ಸಂಹಿತೆ
ಪಂಚ ಭೂತ – ಪಂಚ ತನ್ಮಾತ್ರ ಸಂಹಿತೆ
ಪಂಚಾಗ್ನಿ – ಪಂಚ ತತ್ಪಗಳ ಸಂಹಿತೆ
ಬದುಕಿಗೆ ಬೇಕು ಗುರು – ಶಿಷ್ಯ ಸಂಹಿತೆ
ಆತ್ಮ ಪರಮಾತ್ಮಕೆ ಶ್ರದ್ಧಾ – ಪವಿತ್ರ ಸಂಹಿತೆ
ಸತ್ಯಾತ್ಮಕೆ ಅಕ್ಷರ – ಸ್ವರ್ಣಾಕ್ಷರ ಸಂಹಿತೆ
ಬದುಕು ಸಾಗಲಿ ತ್ರಿಮೂರ್ತಿಯ ಕರುಣಾ ಸಂಹಿತೆಯಲಿ.
(ಪಂಚ ಭೂತ=ಭೂಮಿ, ಜಲ, ಅಗ್ನಿ, ವಾಯು ಆಕಾಶ)
(ಪಂಚ ತನ್ಮಾತ್ರ = ಗಂಧ, ರಸ, ರೂಪ, ಸ್ಪರ್ಶ ,ಶಬ್ದ)
(ಪಂಚಾಗ್ನಿ=ಜನನಿ, ಜನಕ, ಭೂ, ವಾರಿದ (ಮೋಡ), ಆಕಾಶ)
(ಪಂಚ ತತ್ವ=ಜೀವ -ಜೀವಭೇದ, ಜಡ -ಜಡ ಭೇದ, ಜೀವ -ಜಡ ಭೇದ,ಜಡ_ಈಶಭೇದ,ಜೀವ _ಈಶಭೇದ,)ಈ ಸಂಹಿತೆಯ ಕರುಣೆಯು ಎಲ್ಲರಿಗೂ ಸಿಗಲಿ.
“ಶುಭ ಮಸ್ತು ಸರ್ವೇ ಜನಾ: ಸುಖಿನೋ ಭವಂತು.”
- ಸಂಧ್ಯಾ ಟಿ – ಲೇಖಕರು, ಬೆಂಗಳೂರು.
