ನನಗೆ ಪ್ರಿಯವಾದ ಮಾಂಟೋ ಕಥೆಗಳನ್ನು ಕನ್ನಡದ್ದೇ ಎನಿಸುವಂತೆ ಯಕ್ ಕೃತಿಯನ್ನು ಯಶಸ್ವಿಯಾಗಿ ತಂದ ಪ್ರಿಯ ಲೇಖಕಿ ಬಿ.ವಿ.ಭಾರತಿ ಅವರಿಗೂ ಮತ್ತು ಅದನ್ನು ಪ್ರಕಟಿಸಿದ ಬಹುರೂಪಿ ಪ್ರಕಾಶನದ ಜಿ ಎನ್ ಮೋಹನ್ ಅವರಿಗೆ ಅಭಿನಂದನೆಗಳು. ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ಯಕ್ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಯಕ್
ಲೇಖಕರು : ಬಿ.ವಿ.ಭಾರತಿ
ಪ್ರಕಾಶನ : ಬಹುರೂಪಿ
ಬೆಲೆ : ೩೦೦.೦೦
ಸಾಸಿವೆ ತಂದ ಧೀರೆ ಭಾರತೀಯ ಮೂಲಕ ಅರಳಿದ ಸದತ್ ಹಸನ್ ಮಾಂಟೋ. ಈ ಅನುವಾದದ ಮೂಲಕ ಪ್ರಸಿದ್ಧ ಉರ್ದು ಲೇಖಕರಾದ ಮಾಂಟೋ ಕತೆಗಳನ್ನು ಕನ್ನಡಕ್ಕೆ ತಂದು ಕನ್ನಡ ಕಥಾಲೋಕವನ್ನು ವಿಸ್ತರಿಸಿದ ಶ್ರೇಯಸ್ಸು, ಭಾರತಿಯವರಿಗೆ ಸಲ್ಲಬೇಕು.
ಪ್ರಗತಿಶೀಲ ಲೇಖಕರ ಸಂದರ್ಭದಲ್ಲಿ ವೇಶ್ಯಾಲೋಕ ಕನ್ನಡಕ್ಕೆ ಬಂದಿದ್ದರು. ಅವು ವಾಸ್ತವಕ್ಕೆ ದೂರ. ಹಾಗೆ ನೋಡಿದರೆ ನಿರಂಜನರ ‘ಕೊನೆಯ ಗಿರಾಕಿ ‘ ಕತೆ ಮಾತ್ರ ಇದಕ್ಕೆ ಅಪವಾದ. ಅವರ ಸಮಕಾಲೀನರಾದ ಈ ಲೇಖಕರು, ನಿರಂಜನರು ಕಟ್ಟಿ ಕೊಟ್ಟ ಆ ವೇಶ್ಯಾಲೋಕವನ್ನು , ವಿಸ್ತರಿಸಿ ಇಲ್ಲಿನ ಕತೆಗಳಿಗೆ ವಾಸ್ತವದ ರಕ್ತದಾನ ಮಾಡಿದ್ದಾರೆ. ಆದ್ದರಿಂದಲೇ ಇಲ್ಲಿನ ಕತೆಗಳಲ್ಲಿ ಬರುವ ವೇಶ್ಯಾ ಪ್ರಪಂಚ ಸಂಕೀರ್ಣ. ಒಂದರಂತೆ ಇನ್ನೊಂದು ಇಲ್ಲ. ವೇಶ್ಯೆಯರು ಅವರ ಬಳಿಗೆ ವಿಟರನ್ನು ಕರೆದುಕೊಂಡು ಹೋಗುವ ತಲೆಹಿಡುಕರು .ಅವರು ಎದುರಿಸುವ ಸವಾಲುಗಳು , ಒಂದರೊಳಗೆ ಒಂದು ಹಾಸುಹೊಕ್ಕಾಗಿದೆ. ಅವರ ಸಂಕಟ, ನೋವು ಅವಮಾನ ಹತಾಶೆಗಳು ಇಲ್ಲಿನ ಕತೆಗಳಲ್ಲಿ ಮೈದಾಳಿವೆ. ಅದಕ್ಕೇ ತಕ್ಕ ಭಾಷಾ ಬಳಕೆ ಅಧಿಕೃತತೆಯನ್ನು ಉಂಟು ಮಾಡುತ್ತದೆ. ಕಳೆದ ವರ್ಷ ತಾನೇ ನನ್ನ ಸಂಗಾತಿ ಗಿರಿಜಾ ಶಾಸ್ತ್ರಿ, ಅವರು ಕನ್ನಡ ವಿಶ್ವವಿದ್ಯಾಲಯಕ್ಕಾಗಿ ನಡೆಸಿದ ಮುಂಬಯಿಯ ವೇಶ್ಯೆಯರ ಕುರಿತ ಸಂಶೋಧನೆಯಲ್ಲಿ ಪಾಲ್ಗೊಂಡ ನೆನಪು ದಟ್ಟವಾಗಿ ಇದನ್ನು ಓದಿದಾಗ ಮರುಕಳಿಸಿತು. ಆರು ದಶಕಗಳ ಹಿಂದೆ ಅವರನ್ನು ಕುರಿತು ಬರೆದ ಕತೆಗಳು ಜೀವಂತವಾಗಿ ಮೈದಳೆದಿರುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.

ಹದಿನೈದರ ಹರೆಯದ ಹುಡುಗಾಟದ ವಯಸ್ಸಿನ ಮುಗ್ಧ ಬಾಲೆಯಿಂದ ತೊಡಗಿ ಸರಿತಾ ಎಂಬ ಮಾಯೆ , ಪ್ರಬುದ್ಧ ಪಣ್ಯಾಂಗನೆಯರ ಲೋಕದ ಪಡಿಪಾಟಲುಗಳನ್ನು ಇದು ಚಿತ್ರಿಸುತ್ತದೆ. ಅದರಲ್ಲಿ ಒಂದು ನರಬಲಿಯ ಬೀಭತ್ಸ ಕತೆ ಕೂಡಾ ಸೇರಿದೆ ( ಯಕ್, ಪಾಪಾಸುಕಳ್ಳಿ) ಇದಕ್ಕಿಂತ ಭಿನ್ನವಾಗಿರುವ ವಸ್ತುಗಳನ್ನು ಒಳಗೊಂಡ, ನಾಲ್ಕು ಬಗೆಯ ಕತೆಗಳು, ಈ ಸಂಕಲನದಲ್ಲಿ ಇವೆ. ಅವು: ಭಾರತ ಪಾಕಿಸ್ತಾನದ ನಡುವಿನ ಯುಧ್ಧ. ಅದರಲ್ಲಿನ ವಿಪರ್ಯಾಸ ಎಂದರೆ ಸ್ವಾತಂತ್ರ್ಯ ಪಡೆಯುವವರೆಗೆ ಜೊತೆ ಜೊತೆಗೆ ಇದ್ದ ಸೈನಿಕ ಮಿತ್ರರು, ಈಗ ಶತ್ರುಗಳಾಗಿ ಒಬ್ಬರ ಜೊತೆಗೆ ಇನ್ನೊಬ್ಬರು ಕಾದಾಡಬೇಕಾಗಿ ಬಂದಿರುವುದು. ಇಲ್ಲಿ ಬರುವ ನವಾಬ್ ಮತ್ತು ರಾಮಸಿಂಗರು ಈ ಯುದ್ಧದ ಬಲಿಪಶುಗಳಾಗಿದ್ದಾರೆ. ಒಂದೇ ಊರಿಗೆ ಸೇರಿ
ಒಟ್ಟಿಗೆ ಬೆಳೆದು ಒಟ್ಟಿಗೆ ಸೈನ್ಯಕ್ಕೆ ಸೇರಿದ ಅವರು, ಇಂದು ದೇಶ ವಿಭಜನೆಯ ಕಾರಣಕ್ಕೆ, ಅವರು ಶತ್ರುಗಳಾಗಿ ಪರಿಣಮಿಸಿದ್ದಾರೆ.ಯುಧ್ಧದ ಘೋರ ದುರಂತವನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಚಿತ್ರಿಸಲು ಸಾಧ್ಯವಿಲ್ಲ. ( ಯುಧ್ಧ ಎಂಬುದನ್ನೇ ಮರೆತವರು) ಎರಡನೆಯದು ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ವಹಿಸಿದ ಪಾತ್ರವನ್ನು ಗುಲಾಮ ಆಲಿ ಎನ್ನುವ ಪಾತ್ರದ ಮೂಲಕ ಅನಾವರಣ ಮಾಡಿದ್ದಾರೆ. ಅವನು ರಾಜಕೀಯದಲ್ಲಿ ಪ್ರವೇಶ ಮಾಡಿ, ಸೆರೆಮನೆಯಿಂದ ಬಂದ ಮೇಲೆ ಅದರ ನಿರರ್ಥಕತೆಯನ್ನು ಮನಗಂಡು , ವ್ಯಾಪಾರದಲ್ಲಿ ತೊಡಗಿಸಿಕೊಂಡು ಸ್ವತಂತ್ರವಾಗಿ ಬದುಕಲಾರಂಭಿಸಿದ. ನಾಯಕರ ಬೆನ್ನು ಹತ್ತಿ ಜೈಲಿಗೆ ಹೋದ ಸಾಮಾನ್ಯರ ಬದುಕಿನ ಭ್ರಮನಿರಸನವನ್ನು ಈ ಕತೆ ಕಟ್ಟಿ ಕೊಡುತ್ತದೆ. ( ಸ್ವಾತಂತ್ರ್ಯದ ಕಿಮ್ಮತ್ತು) ಸ್ವಾತಂತ್ರ್ಯದ ಅಂತರಂವನ್ನು ಬಯಲಾಗಿಸುತ್ತದೆ).
ಮೂರನೆಯ ಬಗೆಯ ಕತೆ ಹಿಂದು ಮುಸ್ಲಿಂ ಧರ್ಮಗಳಿಗೆ ಸೇರಿದ ಗಂಡು ಹೆಣ್ಣು ನಡುವಿನ ಪ್ರಣಯ.ಅದು ವಿವಾಹದಲ್ಲಿ ಪರ್ಯವಸಾನಗೊಳ್ಳ ಬೇಕಾದುದು , ಮುಖ್ತರ್ ಅವಳನ್ನು ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಳ್ಳಬೇಕು, ಅದೇ ಶ್ರೇಷ್ಠ ಧರ್ಮ ಎಂದಾಗ ಶಾರದಾ ಅದನ್ನು ನಿರಾಕರಿಸಿ ‘ನೀನೇ ಹಿಂದೂ ಆಗು’ ಎನ್ನತ್ತಾಳೆ. ಧರ್ಮ ಎನ್ನುವುದು ಹೀಗೆ, ಮನುಷ್ಯರನ್ನು ಕೂಡಿಸುವ ಬದಲು ಒಡೆಯುವ ಸಾಧನವಾಗುವುದು ಒಂದು ವಿಪರ್ಯಾಸವೇ. ಇದಕ್ಕೆ ಅಪವಾದಗಳು ಇರುವುದು ನಿಜವಾದರೂ, ಕತೆ ನಗ್ನ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತದೆ.( ಪ್ರೀತಿ ವಿಭಜನೆ)

ನಾಲ್ಕನೆಯ ಬಗೆಯ ಕತೆ ಸಿನಿಮಾಗಳ ಅಂತರಂಗವನ್ನು ಅಲ್ಲಿ ಪಾತ್ರ ವಹಿಸುವವರ ಮುಖೇನ ಬಹಿರಂಗಗೊಳಿಸುವುದು. ( ನನ್ನ ಹೆಸರು ರಾಧಾ) ಇದಲ್ಲದೆ ದೇಶವಿಭಜನೆಯಿಂದ ಉಂಟಾದ ಕೋಮುವಾದದ ಜನರನ್ನು ಒಡೆಯುವುದಕ್ಕೆವಾಗಿ ಇಲ್ಲಿ ಬರುವ ಒಬ್ಬ ನಿಷ್ಠಾವಂತ ಹಿಂದೂ ರಾಮ್ ಖಿಲಾವನ್ ಎಂಬ ಧೋಬಿ ಮತ್ತು ಅವನು ಬಟ್ಟೆ ಒಗೆದುಕೊಡುತ್ತಿದ್ದ ಸಾಬ್ ರ ನಡುವಿನ ಆತ್ಮೀಯ ಸಂಬಂಧ ಹೃದಯ ಸ್ಪರ್ಶಿಯಾಗಿದೆ. (ಅವರನ್ನು ಕೊಲ್ಲಿ) ಇಂತಹ ಕತೆಗಳನ್ನು ಕನ್ನಡಕ್ಕೆ ತರುವಾಗ ಲೇಖಕಿ ತೋರಿಸುವ ಕಲೆಗಾರಿಕೆ ಇಲ್ಲಿ ಮುಖ್ಯವಾಗಿದೆ. ಅದನ್ನು ಸಂಕರ ಭಾಷಾ ಬಳಕೆಯಿಂದ, ಮೂಲ ಕತೆಗಳ ಸತ್ವವನ್ನು ಉಳಿಸಿಕೊಳ್ಳಲು, ಕೆಲವು ಕಡೆ ಹಿಂದಿಯ ಸಂಭಾಷಣೆಗಳನ್ನು ಹಾಗೆಯೇ ಬಳಸಿದ್ದಾರೆ. ಅಲ್ಲದೆ ಸಂಸ್ಕೃತದ ಮತ್ತು ಕನ್ನಡದ ವಿವಿಧ ಲಯಗಳನ್ನು ಔಚಿತ್ಯ ಪೂರ್ಣವಾಗಿ ತಂದಿದ್ದಾರೆ. ‘ಮರಿಗೆ’ ಯಂತಹ ಜಾನಪದ ಯಾದೃಚ್ಛಿಕ ‘ ಮುಂತಾದ ಸಂಸ್ಕೃತ ಶಬ್ಧಗಳು ಇದಕ್ಕೆ ನಿದರ್ಶನಗಳಾಗಿವೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
