ವಿರೂಪಾಕ್ಷನನ್ನು ಬಿಟ್ಟು ಬೇರೆ ಯಾರನ್ನೂ ಹೊಗಳಿ ಕಾವ್ಯ ರಚನೆ ಮಾಡುವವನಲ್ಲ ಲೇಖಕರಾದ ರವೀಂದ್ರ ಕುಮಾರ್ ಎಲ್ವಿ ಅವರು ಬರೆಯುತ್ತಿರುವ ‘ಹರಿಶ್ಚಂದ್ರ ಕಾವ್ಯ ಸಂಗ್ರಹದ’ ಕೃತಿಯ ಕುರಿತು ಬರೆಯುತ್ತಿರುವ ಅಂಕಣವನ್ನು ತಪ್ಪದೆ ಓದಿ…
ಎನಿತು ಸಿರಿ ಸಾರ್ವಡಂ ಮಾಣ್ಬಡಂ ನಿತ್ಯತ್ವ
ವನುವಪ್ಪಡಂ ಸಾವಡಂ ಮತ್ತೆ ಹಂಪೆಯರ
ಸನ ಪೊಗಳ್ವ ನಾಲಗೆಯೊಳನ್ಯದೈವವ ಭವಿಗಳಂ
ಕೀರ್ತಿಸಿದೆನಾದಡೆ l
ಮನಸಿ ಜಾರಿಯ ಭಕ್ತನಲ್ಲ ತಾನೆನಿಪ ಬಿರು
ದಿನ ಕವಿಯೆನಿಪ್ಪ ಹಂಪೆಯ ರಾಘವಾಂಕನೊ
ಯ್ಯನೆ ಪೇಳ್ದನೆಂದಾಗಳೀ ಕೃತಿಯನಾವ ಸ
ಜ್ಜನರು ಕೊಂಡಾಡದಿಹರು
ಎನಿತು ಸಿರಿ ಸಾರ್ವಡಂ ಮಾಣ್ಬಡಂ,
ಎನಿತು = ಎಷ್ಟೋ, ಸಿರಿ = ಸಂಪತ್ತು, ಐಶ್ವರ್ಯ
ಸಾರ್ವಡಂ – ಸಾರಿ ಬರಲಿ,
ಮಾಣ್ಬಡಂ – ಬರದೇ ಇರಲಿ,
ನಿತ್ಯತ್ವವನುವಪ್ಪಡಂ :
ನಿತ್ಯತ್ಯವ್ +ಅನುವಪ್ಪಡಂ
ನಿತ್ಯತ್ವ – ಅಮರತ್ವ
ಅನುವಪ್ಪಡಂ – ಅನುಸರಿಸಿ ಬರಲಿ,
ಸಾವಡಂ – ಸಾವು ಬರಲಿ,
ಹಂಪೆಯರಸನ – ಹಂಪೆಯ ರಾಜನ
ಪೊಗಳ್ವ = ಹೊಗಳುವ
ನಾಲಗೆಯೊಳ್ = ನಾಲಾಗೆಯಲ್ಲಿ, ಅನ್ಯ ದೈವವ, ಬೇರೆ ದೇವರುಗಳನ್ನು,
ಭವಿಗಳಂ – ಸಾಮಾನ್ಯ ಮನುಷ್ಯರು, ಶಿವಭಕ್ತರಲ್ಲದವರುಗಳನ್ನು,
ಕೀರ್ತಿಸಿದೆನ್ + ಆದೊಡೆ
ಕೀರ್ತಿಸು – ಹೊಗಳು, ಭಜಿಸು, ಕೊಂಡಾಡು
ಕೀರ್ತಿಸಿದೆನಾದೊಡೆ = ಕೀರ್ತಿಸಿದ್ದೇ ಆದರೆ, ಹೊಗಳಿದೆನಾದರೆ, ಭಜಿಸಿದೆನಾದರೆ, ಕೊಂಡಾಡಿದೆನಾದರೆ,
‘ಮನಸಿಜಾರಿಯ ಭಕ್ತನಲ್ಲ ತಾಂ’
ತಾನು ಮನಸಿಜ – ಮನಸ್ಸಿನಲ್ಲಿ ಜನಿಸುವವ = ಕಾಮ, ಮನಸಿಜಾರಿ
ಕಾಮನ ಅರಿ – ಶತ್ರು = ಕಾಮಾರಿ = ಕಾಮನ ಶತ್ರು = ಶಿವ.
ಶಿವನು ಕಾಮನ ಮೇಲೆ ಕೋಪಗೊಂಡು ತನ್ನ ಮೂರನೆಯ ಕಣ್ಣನ್ನು ತೆರೆದು ಅವನನ್ನು ಸುಟ್ಟು ಹಾಕಿದ ಕಥೆ ಎಲ್ಲರಿಗೂ ತಿಳಿದಿದೆ.
ತಾನು ಶಿವಭಕ್ತನೇ ಅಲ್ಲ ಎಂದು ಬಿರುದಿನ ಕವಿಯೆನಿಪ್ಪ, ಬಿರುದಿನ ಕವಿ ಎಂದರೆ ಬಿರುದುಗಳನ್ನು ಹೊಂದಿದ್ದ ಕವಿಯಾದ ರಾಘವಾಂಕನಿಗೆ ಉಭಯ ಕವಿ, ಕಮಲ ರವಿ, ಅದಟಕವಿ, ಚೌದಂತ ಎಂಬ ಬಿರುದುಗಳಿದ್ದವು. ಹೀಗೆ ಬಿರುದುಗಳನ್ನು ಗಳಿಸಿದ ಹಂಪೆಯ ರಾಘವಾಂಕನು ಒಯ್ಯನೇ ಪೇಳ್ದನ್ + ಎಂದಾಗಲ್, ರಾಘವಾಂಕನು ನೇರವಾಗಿ ಹೇಳಿದನು ಎಂದಾಗ ಈ ಕೃತಿಯನಾವ ಸಜ್ಜನರು ಕೊಂಡಾಡದಿಹರು. ಈ ಕೃತಿಯನ್ನು ಯಾವ ಸಜ್ಜನರು ಕೊಂಡಾಡದೇ ಇರುತ್ತಾರೆ.
ತನಗೆ ಎಷ್ಟೇ ಸಂಪತ್ತು ಬರಲಿ, ಬಾರದೇ ಇರಲಿ, ತಾನು ನಿತ್ಯತ್ವ ಅಥವಾ ಅಮರತ್ವವನ್ನು ಪಡೆಯಲಿ, ಪಡೆಯದೇ ಇರಲಿ, ತಾನು ಮೆಚ್ಚಿ, ಪೂಜಿಸಿ, ಭಜಿಸಿದ ಹಂಪೆಯ ಒಡೆಯನಾದ ವಿರೂಪಾಕ್ಷನನ್ನು ಹೊಗಳುವ ನಾಲಗೆಯಲ್ಲಿ, ಅನ್ಯ ದೇವರನ್ನು, ಶಿವ ಭಕ್ತರಲ್ಲದವರನ್ನು ಕೀರ್ತಿಸಿ, ಹೊಗಳಿ ಕೊಂಡಾಡಿದೆನಾದರೆ ತಾನು ಶಿವಭಕ್ತನಲ್ಲ ಎಂದು ಬಿರುದಿನ ಕವಿಯಾದ ಹಂಪೆಯ ರಾಘವಾಂಕನು ಪ್ರೀತಿಯಿಂದ ಹೇಳಿದ್ದಾನೆಂದರೆ ಈ ಕೃತಿಯನ್ನು ಕೊಂಡಾಡದಿರಲು ಯಾವ ಸಜ್ಜನರಿಗೆ ಸಾಧ್ಯ??.
ತಾನು ವಿರೂಪಾಕ್ಷನನ್ನು ಬಿಟ್ಟು ಬೇರೆ ಯಾರನ್ನೂ ಹೊಗಳಿ ಕಾವ್ಯ ರಚನೆ ಮಾಡುವವನಲ್ಲವಾದ್ದರಿಂದ ಎಲ್ಲ ಸಜ್ಜನರೂ ಈ ಕೃತಿಯನ್ನು ಮೆಚ್ಚಿ ಕೊಳ್ಳುತ್ತಾರೆ ಎಂಬ ವಿಶ್ವಾಸ ಭರಿತ ಭಾವ.
ಹಿಂದಿನ ಸಂಚಿಕೆಗಳು :
- ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೧)
- ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೨)
- ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೩)
- ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೪)
- ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೫)
ಮುಂದುವರೆಯುವುದು.
- ರವೀಂದ್ರ ಕುಮಾರ್ ಎಲ್ ವಿ – ಮೈಸೂರು.
