ಅಳಲೆಕಾಯಿಯ ಮಹತ್ವ : ಸುಮನಾ ಮಳಲಗದ್ದೆ 

ಅಳಲೆಕಾಯಿ, ಹರಿತಕಿ ಎಂದು ಕರೆಯುವ ಈ ಕಾಯಿಯ ಮಹತ್ವದ ಕುರಿತು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ವೈಜ್ಞಾನಿಕ ಹೆಸರು : ಟರ್ಮಿನಾಲಿಯಾ ಚೆಬುಲ (Terminalia chebula).
ಕನ್ನಡದ ಹೆಸರು: ಅಳಲೆಕಾಯಿ, ಹರಿತಕಿ
ಮನೆ ಮದ್ದು: ಹಲವು ರೋಗ ನಿವಾರಿಸುವ ಅಳಲೆಕಾಯಿ.

ಸುಮಾರು ಹತ್ತಿಪ್ಪತ್ತು ವರ್ಷದವರೆಗೂ ಅಳಲೆ ಕಾಯಿ ಪಾಂಡಿತ್ಯ ಎಂದು ಮೂಗು ಮುರಿಯುತ್ತಿದ್ದ ಜನರ ಅಭಿಪ್ರಾಯ ಬದಲಾಗಿದೆ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಠ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ. ತ್ರಿಫಲಾದಲ್ಲಿ ಇದೂ ಒಂದು ಮೂಲಿಕೆ.

ಫೋಟೋ ಕೃಪೆ : ಅಂತರ್ಜಾಲ

  • ಮಲಬದ್ಧತೆ ಇದ್ದರೆ ಅಳಲೆಕಾಯಿಯನ್ನು ಹಸುವಿನ ತುಪ್ಪದಲ್ಲಿ ಹುರಿದು ನಂತರ ಉಪ್ಪನ್ನು ಸೇರಿಸಿ ಪುಡಿ ಮಾಡಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಚಿಟಿಕೆ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಕುಡಿದರೆ ಬೆಳಗ್ಗೆ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.
  • ಚರ್ಮದ ಅಲರ್ಜಿಯಾಗಿ ತುರಿಕೆ, ನೋವು, ಊತ ಇದ್ದರೆ ಅಳಲೆಕಾಯಿಯನ್ನು ಬಿಸಿ ನೀರಲ್ಲಿ ತೇದು ಚರ್ಮಕ್ಕೆ ಹಚ್ಚಿದರೆ ಪ್ರಯೋಜನವಿದೆ.
  • ಫಂಗಲ್‌ ಇನ್‌ಫೆಕ್ಷನ್‌ ಇದ್ದ ಜಾಗಕ್ಕೆ ಅಳಲೆಕಾಯಿಯನ್ನು ವಿನಿಗರ್‌ನಲ್ಲಿ ತೇದು ಹಚ್ಚಿದರೆ ಇನ್‌ಫೆಕ್ಷನ್‌ ಕಡಿಮೆಯಾಗುತ್ತದೆ.
  • ಅಳಲೆಕಾಯಿ ಮತ್ತು ನೀರು ಸೇರಿಸಿ ತಯಾರಿಸಿದ ಕಷಾಯದಿಂದ ಪ್ರತಿ ದಿನ ಬಾಯಿ ಮುಕ್ಕಳಿಸಿದರೆ ಬಾಯಿ ಮತ್ತು ಗಂಟಲು ಸಮಸ್ಯೆ ಗುಣವಾಗುತ್ತದೆ.
  • ಅಜೀರ್ಣ ಸಮಸ್ಯೆ ಇದ್ದರೆ ಅಳಲೆಕಾಯಿ ಪುಡಿಗೆ ಶುಂಠಿ ಪುಡಿಯನ್ನು ಸಮಪ್ರಮಾಣದಲ್ಲಿ ಸೇರಿಸಿ ಅದಕ್ಕೆ ಬೆಲ್ಲ ಬೆರೆಸಿ ಸೇವಿಸಿಬೇಕು.
  • ಕೂದಲು ಉದುರುತ್ತಿದ್ದು, ಹೊಟ್ಟು , ಹೇನುಗಳು ಇದ್ದರೆ ಒಂದು ಕಪ್‌ ಕೊಬ್ಬರಿ ಎಣ್ಣೆಗೆ 3 ರಿಂದ 5 ಅಳಲೆಕಾಯಿ ಹಾಕಿ ಕಾಯಿ ಒಡೆಯುವ ತನಕ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ಡಬ್ಬಿಗೆ ಹಾಕಿ. ಪ್ರತಿ ದಿನ ಈ ಎಣ್ಣೆಯನ್ನು ತಲೆಗೆ ಹಚ್ಚಿದರೆ ಹೊಟ್ಟು , ಹೇನು ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.
  • ಅಳಲೆಕಾಯಿ ಕಷಾಯದಿಂದ ಕಣ್ಣುಗಳನ್ನು ತೊಳೆದರೆ ಕಣ್ಣು ನೋವು ಶಮನವಾಗುತ್ತದೆ.
  • ಕಫ ಹೆಚ್ಚಾಗಿ ದೇಹದಲ್ಲಿ ಊತವಿದ್ದರೆ ಅಳಲೆಕಾಯಿಯನ್ನು ಗೋ ಮೂತ್ರದ ಜತೆ ನಿಯಮಿತವಾಗಿ ಸೇವಿಸಿದರೆ ಕಫ ಕಡಿಮೆಯಾಗಿ ಊತ ನಿವಾರಣೆಯಾಗುತ್ತದೆ.
  • ಅಳಲೆಕಾಯಿ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ದೇಹದ ತೂಕ ಬೇಗ ಕಡಿಮೆಯಾಗುತ್ತದೆ.
  • ದನಕರುಗಳಿಗೆ ಹಲವು ಕಾಯಿಲೆ ಗುಣಪಡಿಸಲು ಒಳ್ಳೆಯ ಔಷಧಿ.

ಇದನ್ನು “ಅಮೃತಫಲ” ಎಂದು ಕೂಡ ಕರೆಯುತ್ತಾರೆ. ವಿಶೇಷವಾಗಿ ಋತುಾನುಸಾರವಾಗಿ ಬೇರೆ ಬೇರೆ ಅನುಪಾನ (ಸಹಪಾನ)ಗಳೊಂದಿಗೆ ತೆಗೆದುಕೊಳ್ಳುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿ ಇದೆ. ಇದನ್ನು “ಋತು ಹರೀತಕಿ ಸೇವನ ವಿಧಾನ” ಎಂದು ಕರೆಯುತ್ತಾರೆ.

ಇದರಿಂದ ದೋಷ ಸಮತೋಲನ (ವಾತ, ಪಿತ್ತ, ಕಫ) ಸಾಧನೆಯಾಗಿ ವರ್ಷಪೂರ್ತಿ ಆರೋಗ್ಯ ಕಾಪಾಡಲು ಸಹಾಯವಾಗುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಋತುಾನುಸಾರ ಅಳಲೆಕಾಯಿ ಸೇವನೆ :

  • ವಸಂತ ಋತು (ಚೈತ್ರ – ವೈಶಾಖ)
    ಅನುಪಾನ: ಜೇನುತುಪ್ಪ
    ಕಾರಣ: ಈ ಸಮಯದಲ್ಲಿ ಕಫ ಹೆಚ್ಚಾಗಿರುತ್ತದೆ
    ಲಾಭ: ಕಫ ಶಮನ, ಜೀರ್ಣಶಕ್ತಿ ವೃದ್ಧಿ
  • ಗ್ರೀಷ್ಮ ಋತು (ಜ್ಯೇಷ್ಠ – ಆಶಾಢ)
    ಅನುಪಾನ: ಬೆಲ್ಲ
    ಕಾರಣ: ದೇಹದಲ್ಲಿ ದೌರ್ಬಲ್ಯ, ನೀರಿನ ಕೊರತೆ
    ಲಾಭ: ಶಕ್ತಿ ವೃದ್ಧಿ, ದೇಹದ ತಾಪ ನಿಯಂತ್ರಣ
  • ವರ್ಷಾ ಋತು (ಶ್ರಾವಣ – ಭಾದ್ರಪದ)
    ಅನುಪಾನ: ಸೈಂಧವ ಉಪ್ಪು
    ಕಾರಣ: ಜಠರಾಗ್ನಿ ದುರ್ಬಲವಾಗಿರುತ್ತದೆ
    ಲಾಭ: ಜೀರ್ಣಕ್ರಿಯೆ ಸುಧಾರಣೆ, ವಾತ ನಿಯಂತ್ರಣ
  • ಶರದ ಋತು (ಆಶ್ವಯುಜ – ಕಾರ್ತಿಕ)
    ಅನುಪಾನ: ಸಕ್ಕರೆ
    ಕಾರಣ: ಪಿತ್ತ ಪ್ರಾಬಲ್ಯ
    ಲಾಭ: ಪಿತ್ತ ಶಮನ, ದೇಹದ ಉಷ್ಣತೆ ಕಡಿತ
  • ಹೇಮಂತ ಋತು (ಮಾರ್ಗಶಿರ – ಪುಷ್ಯ)
    ಅನುಪಾನ: ಶುಂಠಿ (ಒಣ ಶುಂಠಿ)
    ಕಾರಣ: ಜೀರ್ಣಶಕ್ತಿ ಬಲವಾಗಿರುತ್ತದೆ ಆದರೆ ಕಫ ಕೂಡ ಸೇರುತ್ತದೆ
    ಲಾಭ: ಜೀರ್ಣಶಕ್ತಿ ಹೆಚ್ಚಳ, ಕಫ ಶಮನ
  • ಶಿಶಿರ ಋತು (ಮಾಘ – ಫಾಲ್ಗುನ)
    ಅನುಪಾನ: ಪಿಪ್ಪಲಿ (ಅಥವಾ ಮೆಣಸು)
    ಕಾರಣ: ತೀವ್ರ ಚಳಿ, ಕಫ-ವಾತ ಹೆಚ್ಚಳ
    ಲಾಭ: ಉಷ್ಣತೆ, ರೋಗನಿರೋಧಕ ಶಕ್ತಿ ವೃದ್ಧಿ
  • ಸೇವನೆ ವಿಧಾನ :

    ರಾತ್ರಿ ಮಲಗುವ ಮುನ್ನ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಳಲೆ ಕಾಯಿ ಪುಡಿ (ಸುಮಾರು 3–5 ಗ್ರಾಂ) ಆಯಾ ಋತುವಿನ ಅನುಪಾನ ಜೊತೆಗೆ. ಹೆಚ್ಚಾದರೆ ಅಮೃತವು ವಿಷ ನೆನಪಿರಲಿ.

    ತಾತ್ವಿಕ ಅರ್ಥ :

    ಅಳಲೆ ಕಾಯಿ ಸ್ವಭಾವತಃ ತ್ರಿದೋಷಘ್ನ (ವಾತ, ಪಿತ್ತ, ಕಫ ಸಮತೋಲನ) ಆದರೆ ಋತು ಪ್ರಭಾವದಿಂದ ಯಾವ ದೋಷ ಹೆಚ್ಚಾಗುತ್ತದೆಯೋ, ಅದಕ್ಕೆ ತಕ್ಕ ಅನುಪಾನವನ್ನು ಸೇರಿಸಿ ಪರಿಣಾಮವನ್ನು ಹೆಚ್ಚಿಸುವುದು ನಮ್ಮ ಋಷಿಗಳ ಜ್ಞಾನ.


  •  ಸುಮನಾ ಮಳಲಗದ್ದೆ  – ಪಾರಂಪರಿಕ ವೈದ್ಯರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading