ಬರಡಾದ ಭೂಮಿಗೆ ನೀರುಣಿಸಲು ಮೊದಲ ಮಳೆ ಬಂದಾಗ ಆದ ಸಂತೋಷವನ್ನು ಸಣ್ಣಕತೆಯಲ್ಲಿ ಹಿಡಿದಿಟ್ಟಿದ್ದಾರೆ ಕತೆಗಾರ್ತಿ ವೀಣಾ ವೈಷ್ಣವಿ ಅವರ ಈ ಕತೆಯನ್ನು ಪೂರ್ತಿಯಾಗಿ ಓದಿ…
“ಈ ಕಿತ ಆದ್ರೂ ಮಳೆ ಆಗ್ತದೆ ಅಂದ್ರೆ ಒಂದು ಮೋಡನು ಸುಳಿನಿಲ್ಲ. ಸರಿಯಾಗಿ ಆರು ವರ್ಸ ಆತು, ಭೂಮಿಗೆ ಒಂದ್ ಹನಿ ಮಳೆ ಬೀಳ್ದೆ. ಭೂತಾಯಿ ಮೈಯೆಲ್ಲಾ ಚಕ್ಕಳ ಎದ್ದು ಬಿರುಕು ಬಿಟ್ಟೋಗದೆ. ಏಟು ಸೊಂಪಾಗಿ ಕಳೆ ಕಳೆಯಾಗಿದ್ದ ಜಮೀನೆಲ್ಲ ಮಳೆ ಇಲ್ದೆ ಬಂಜರು ಬಿದ್ದೋಯ್ತು. ಹುಟ್ಟಿದಾಗಿನಿಂದ ಎಂದೂ ಬರ ಕಂಡೊನಲ್ಲ ನಾನು , ಒಂದ್ ಕಿತ ಮಳೆ ಶುರು ಆದ್ರೆ ಸಾಕು ಮೂರು ತಿಂಗಳು ಹೊರ ಬಾರದ ಹಾಗೆ ರಯ್ಯೋ ಅಂತ ರಣ ಮಳೆ ಸುರ್ಯೋದು.ಈಗ ನಾಡು ಹೋಗು, ಕಾಡು ಬಾ ಅನ್ನೋ ವಯಸ್ಸಲ್ಲಿ ಈ ಬರ ನೋಡ್ ಬೇಕಾಯ್ತಲ. ಬರದ ಸುಳಿಗೆ ಸಿಕ್ಕಿ ಬರೇ ಎರಡು ವರ್ಸಕ್ಕೆ ಊರ ಜನರ ಜೀವ್ನ ನೇ ಅಲ್ಲೋಲ ಕಲ್ಲೋಲ ಆಗೋಯ್ತು. ಬ್ಯಾಸಯ ಮಾಡ್ಕಂಡು ಮನೆ ಮುಂದೆ ಇದ್ಕೊಂಡು ಮನೆ ಮಠ ನೋಡ್ಕೊತಿದ್ದ ಮಕ್ಲೆಲ್ಲಾ ದುಡಿಮೆ ಹುಡುಕಿ ದೂರದ ಪ್ಯಾಟೆ ಸೇರಿ ಆಗಿತ್ತು.ಬರಿ ವಯಸ್ಸಾದವರು ಆಟೇ ಈಗ ಊರಲ್ಲಿ. ಆ ದ್ಯಾವ್ರು ನಮ್ ಮೇಲೆ ಯಾವಾಗ ಕರುಣೆ ತೊರ್ತನೋ, ಯಾವಾಗ ಮಳೆ ಸುರಿದು ಈ ಬವಣೆ ಎಲ್ಲಾ ನಿಗ್ತಾದೋ ಒಂದು ಕಾಣೆ..”
ಬೆಳಕು ಹರಿಯೋ ಒತ್ಗೆ ಎದ್ದು ಬಂದು ತನ್ನ ಜಮೀನಿನ ತುಂಬೆಲ್ಲ ಓಡಾಡ್ತಾ ಕಣ್ಣಗಲಿಸಿ ಒಮ್ಮೆ ಆಕಾಶನೂ, ಒಮ್ಮೆ ಭೂಮಿನೂ ನೋಡ್ತಾ ಇವತ್ತಾದ್ರು ಮಳೆ ಸುರಿತಾದೇನೋ ಅಂತ ಕಾಯ್ತಾ ಬೀರಲಿಂಗಜ್ಜ ತನಗೆ ತಾನೆ ಮಾತಾಡ್ಕೊತಿದ್ದ.
“ಹೊತ್ತಾರೆ ಆದ್ರೆ ಸಾಕು ಇದೇ ಕೆಮೆ ಆಗೋಯ್ತು ನಿಂಗೆ , ಆ ಸುಡುಗಾಡು ಮಳೆ ಬರನಿಲ್ಲ, ನೀನು ಈ ಬಂಜರು ನೋಡ್ಕಂಡು ಮಾತಾಡೋದು ಬಿಡಾಕಿಲ್ಲ. ಸೂರ್ಯ ಆಗ್ಲೇ ನೆತ್ತಿ ಮೇಲೆ ಹೊಂಟಾನ, ರಾಗಿ ಅಂಬಲಿ ಕಾಯ್ಸಿವ್ನಿ, ಕುಡ್ಯಂತೆ ನಡಿ…” ಬೋರಿ ಬಂದು ಎಚ್ಚರಿಸಿದಾಗ, ಬೀರಲಿಂಗಜ್ಜ ಬೋರಿನ ಹಿಂಬಾಲಿಸಿದ.
‘ಅಲ್ಲಯ್ಯ, ಆಷಾಢ ಕಳಿತಿದ್ದಂಗೆ ಬಿಟ್ಟು ಬಿಡದೆ ಸುರಿತ ಇದ್ದ ಮಳೆ ಇದ್ದಕಿದ್ದಂತೆ ಎತ್ಕಡೆ ಹೋಯ್ತು ಅಂತೀನಿ. ಒಂದ್ ಹನಿ ಹನಿನಿಲ್ಲ, ಇಂಗೆ ಆದ್ರೆ ಮುಂದೆ ಈ ಹಳ್ಳಿನೆ ಇರಕಿಲ್ಲ ಬಿಡು, ಈಗ್ಲೇ ಸ್ಮಾಸಾನ ಆಗೋಗದೆ, ನೀರಿಲ್ದೆ ಇರೋ ದೆಸೆಯಿಂದ ಮಕ್ಳು ಮರಿ ಯಾರು ಇತ್ಕಡೆ ಸುಳಿಯದಿಲ್ಲ.ಇನ್ನು ನಮ್ ಕಥೇನೂ ಮುಗ್ದಂತೆ ತಗ…” ಕಾಲಿಗೆ ಒತ್ತುತ್ತಿದ್ದ ಮಣ್ಣಿನ ಹೆಂಟೆಗಳನ್ನು ದಾಟುತ್ತ ಬೋರಿ ಮಾತಾಡಿದಳು.
“ಈ ಹಳ್ಳಿ ಜನಕ್ಕೆ ನಾನು ಏಟು ಬಡ್ಕೊಂಡೇ, ನಮ್ ಊರಿನ ಪಕ್ಕ ಕಾರ್ಖಾನೆ ಹಾಕೋಕೆ ಮಂಜೂರಿ ಕೊಡ್ಬೇಡಿ ಅಂತ, ನನ್ ಮಾತು ಯಾರು ಕೇಳ್ನಿಲ್ಲ, ಎಲ್ಕರಿಗೂ ಮನೆ ಮುಂದೇನೆ ಕೆಲ್ಸ ಸಿಗ್ತದೆ ಕೈ ತುಂಬಾ ದೊಡ್ದು ಮಾಡಬೋದು ಅಂತ ಜನರಿಗೆ ಆಸೆ ತೋರ್ಸಿ ಕಾರ್ಖಾನೆ ಹಾಕೇ ಬಿಟ್ರು, ಅಟೊಂದು ದೊಡ್ಡ ಕಾರ್ಖಾನೆ ಹಾಕ್ಬೇಕಾದ್ರೆ ಇಡೀ ಕಾಡೆ ಕಡಿದು ನಾಶ ಮಾಡ್ಬಿಟ್ರು, ಜೊತೆಗೆ ಎಲ್ಲಾ ನೀರಿನ ಸೆಲೆನೂ ತಮ್ಮ ಕಾರ್ಖಾನೆ ಕಡೆ ತಿರುಗಿಸ್ಕೊಂಡ್ರು, ಈಗ ಇಡೀ ಊರೇ ನರಳ್ತದೆ ನೋಡು, ಇದ್ದಕಿದ್ದಂತೆ ಮಳೆ ನಿಂತೋಯ್ತು, ಭೂಮಿಲಿ ನೀರಿನ ಪಸೆನೂ ಕಡಿಮೆ ಆಗೋಯ್ತ. ಊರಿಗೆ ಬರ ವಕ್ಕರಿಸ್ತು…. ಅತ್ಕಡೆ ಕಾರ್ಖಾನೆ ಕೆಲ್ಸನೂ ನಿಂತೋಯ್ತು. ಈಗ ಇಡೀ ದಿನ ಆಕಾಶ ನೋಡೋದೇ ಜೀವ್ನ ಆಗಿಬಿಟ್ಟದಲ್ಲ ಬೋರ, ಅ ದ್ಯಾವ್ರು ನನ್ ಜೀವ ತಗೊಂಡು ಮಳೆನಾರ ಬರ್ಸಿದ್ರೆ ಈ ಊರ ಆದ್ರೂ ಉಳಿತಿತ್ತು…” ಸಮೃದ್ಧ ಮಳೆ, ಬೆಳೆ ನೋಡುತ್ತಾ ಜೀವನ ಸವೆಸಿದ್ದ ಬೀರಲಿಂಗಜ್ಜ ನೋವಿನಲ್ಲಿ ನುಡಿದ.
ಬೆಳಗ್ಗೆ ನಾಲ್ಕರ ಮುಂಜಾವು. ಠಪ್ ಠಪ್….ಕಿಟಕಿ ಬಡಿಯುವ ಸದ್ದಿಗೆ ಬೋರಿಗೆ ಎಚ್ಚರವಾಗಿ ” ಈ ಹೊತ್ನಲ್ಲಿ ಇದೆಂತ ಗಾಳಿ” ಅಂದುಕೊಳ್ಳುತ್ತಾ ಕಿಟಕಿಯ ಕೊಂಡಿ ಎಳೆದು ಮುಚ್ಚಿದಳು. ಮಲಗಲು ಮಂಚದ ಕಡೆ ತಿರುಗುತ್ತಿದ್ದಂತೆ ಹಂಚಿನ ಮೇಲೆ ಸಣ್ಣ ಕಲ್ಲುಗಳು ಸುರಿದಂತೆ ಠಣ ಠಣ ಸದ್ದು.
ಅರೇ ನಾ ಕನಸು ಕಾಣ್ತಿವ್ನ ಇಲ್ಲಾ ದಿಟನ….ಹೊರಗೆ ಮಳೆ ಬರ್ತದಾ….. ನೋಡೇ ಬಿಡುವ ಅಂದುಕೊಂಡು ಬಾಗಿಲು ತೆರೆದರೆ ಮುಂದಿನ ಅಂಗಳದಲ್ಲಿ ಮಳೆ ಹನಿಯುತಿತ್ತು. ಬೋರಿ ನಿದ್ದೆಗಣ್ಣು ಅಗಲಿಸಿ ನೋಡುತಿದ್ದಂತೆ ಮಳೆ ಜೋರಾಗಿ ಆರ್ಭಟಿಸಲಾರಂಬಿಸಿತು.
ಯ್ಯೋ… ಅಯ್ಯ… ನೋಡಯ್ಯ ಇಲ್ಲಿ ನೀನು ಕಾಯ್ತಿದ್ದ ಹಾಗೆ ಮಳೆ ಬಂದೆ ಬಿಡ್ತು, ಏಳಯ್ಯ ನೋಡು… ಬೋರಿ ಕೂಗು ಹಾಕುತ್ತ ಬೀರಲಿಂಗಜ್ಜನ ಏಳಿಸಲು ಕೈ ಹಿಡಿದಳು. ಬೀರಲಿಂಗಜ್ಜನ ಕೈ ತಣ್ಣಗಾಗಿ ಹೋಗಿತ್ತು. ಬೀರಲಿಂಗಜ್ಜ ಮಳೆ ಬರಿಸಲು ತನ್ನ ಜೀವ ಕೊಟ್ಟು ನುಡಿದಂತೆ ನಡೆದಿದ್ದರು…
- ವೀಣಾ ವೈಷ್ಣವಿ
