ವೇಶ್ಯೆ ಬರೆದ ಕೃತಿ, ಆದರೆ ಇಲ್ಲಿ ಅಶ್ಲೀಲತೆ ಇಲ್ಲ. ಹಾಗಾಗಿ ಆ ನಿರೀಕ್ಷೆಯಿಂದ ಕೃತಿಯನ್ನು ಓದುವುದು ಅಥವಾ ಓದದೆ ಇರುವುದು ಬೇಡ. ಮಾನದಾ ದೇವಿ ಪ್ರಣೀತ ಅವರ ಬಂಗಾಳಿ ಮೂಲದ ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಯನ್ನು ಕನ್ನಡಕ್ಕೆ ತಂದಿರುವ ಡಾ. ನಾಗ ಎಚ್. ಹುಬ್ಳಿ ಅವರ ಈ ಪುಸ್ತಕದ ಕುರಿತು ಲೇಖಕಿ ಡಾ. ಸುವರ್ಣಿನಿ ಕೊಣಲೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ವಿದ್ಯಾವಂತ ವೇಶ್ಯೆಯ ಆತ್ಮಕಥೆ (ಅನುವಾದ)
ಬಂಗಾಳಿ ಮೂಲ : ಶಿಖಿತಾ ಪತಿತಾರ್ ಆತ್ಮಚರಿತ್
ಲೇಖಕರು: ಮಾನದಾ ದೇವಿ
ಕನ್ನಡ ಅನುವಾದ: ಡಾ. ನಾಗ ಎಚ್ ಹುಬ್ಳಿ
ಪ್ರಕಾಶನ (ಕನ್ನಡಾನುವಾದ) : ಛಂದ ಪುಸ್ತಕ Vasudhendra
ಬೆಲೆ : 240/-
ಪ್ರಕಾಶನ : ಛಂದ ಪುಸ್ತಕ
ಮೊಬೈಲ್ ಸಂಖ್ಯೆ : 9844422782
ಇನ್ನೊಂದು ದಡದಿಂದ ಸಮಾಜವನ್ನು ನೋಡುವ ಕೃತಿಯಿದು. ತ.ರಾ.ಸು. ಅವರ ಮಸಣದ ಹೂವು, ತ್ರಿವೇಣಿಯವರ ಹೂವುಹಣ್ಣು ಕಾದಂಬರಿಗಳು, ನಾಗರಹಾವು ಚಿತ್ರದ ಅಲಮೇಲು ಪಾತ್ರ ಮುಂತಾದವನ್ನು ನೋಡಿದ್ದೇವೆ. ಇವೆಲ್ಲವೂ ಕಾಲ್ಪನಿಕ, ಅಥವಾ ಇನ್ನೊಬ್ಬರ ಕಥೆ ಕೇಳಿ ಬರೆದಂಥದ್ದಾಗಿರಬಹುದು.
ಒಬ್ಬ ವೇಶ್ಯೆಯ ಮನಸ್ಸು ಏನು ಹೇಳುತ್ತದೆ, ಅವಳು ಬದುಕು ಹೇಗಿರುತ್ತದೆ ಎನ್ನುವುದು ಎಲ್ಲಿ ದಾಖಲಾಗುತ್ತದೆ? ಆಕೆಯ ನೋವು ನಲಿವು ನಮಗೆ ತಿಳಿಯುವುದೇ ಇಲ್ಲವಲ್ಲ. ಅವಳೂ ಮನುಷ್ಯಳು. ಅವಳಿಗೂ ಮನಸ್ಸಿದೆ. ಅವಳಿಗೂ ಸಂತೋಷವಾಗುತ್ತದೆ. ಅವಳಿಗೂ ನೋವಾಗುತ್ತದೆ. ಅವಳಿಗೂ ಸಿಟ್ಟು ಬರುತ್ತದೆ. ಅವಳಿಗೂ ಬೇಸರವೆನಿಸುತ್ತದೆ. ನಮಗಾಗುವ ಎಲ್ಲವೂ ಅವಳಿಗೂ ಆಗುತ್ತದೆ. ಆದರೆ ಅದು ನಮ್ಮ ಕಿವಿ ತಲುಪುವುದಿಲ್ಲ. ಆ ಕಾರಣದಿಂದಲೇ ಅವಳು ಕಾಣುವ ಸಮಾಜದ ನೋಟ ನಾವು ನೋಡುವುದೇ ಇಲ್ಲ. ಅವರೂ ನಾವೂ ಒಂದೇ ಜಗತ್ತಿನಲ್ಲಿದ್ದೇವೆ. ಆದರೂ ನಮ್ಮ ಜಗತ್ತು ಭಿನ್ನ.

೧೯೦೦ ರಲ್ಲಿ ಜನಿಸಿದ ಮಾನದಾ ದೇವಿ ಸುಶಿಕ್ಷಿತ, ಸಿರಿವಂತ ಕುಟುಂಬಕ್ಕೆ ಸೇರಿದವರು. ಆ ಕಾಲಕ್ಕೆ ಆಕೆ ಕಲಿತಷ್ಟು (ಶಾಲೆಯಲ್ಲಿ) ಕಲಿಯುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯೇ. ಮನೆಬಿಟ್ಟು ಬಂದ ಮೇಲೆ ನರ್ಸಿಂಗ್ ತರಬೇತಿಯನ್ನೂ ಪಡೆದಿದ್ದಾರೆ. ಆದರೂ ಈ ವೃತ್ತಿಯಲ್ಲಿ ಬದುಕು ಸವೆಸಬೇಕಾಯಿತು. ಅದೇಕೆ ಹಾಗಾಯಿತು ಎನ್ನುವುದನ್ನು ಆಕೆ ಬರೆಯುತ್ತಾರೆ.
ಇಲ್ಲಿ ಹೆಚ್ಚು ಮುಖ್ಯ ವಿಷಯ ಎಂದರೆ, ವಿದ್ಯಾವಂತೆಯಾದ, ಉತ್ತಮ ಕುಟುಂಬದ ಆಕೆ ಏಕೆ ಈ ಹಾದಿ ತುಳಿದರು? ಬದುಕಿನ ಅನಿವಾರ್ಯತೆ ಎನ್ನುವುದು ಸರಿ ಉತ್ತರವೇ ಆದರೂ ಕೂಡ ಅಂತಹ ಅನಿವಾರ್ಯತೆಯೊಂದು ಸೃಷ್ಟಿಯಾಗಲು ಕಾರಣವೇನು?. ಅದಕ್ಕೆ ಅವರೇ ಆತ್ಮಾವಲೋಕನದಿಂದ, ಜೀವನಾನುಭವದಿಂದ ಕಂಡುಕೊಂಡ ಉತ್ತರ – ನನಗೆ ಶಾಲೆಯ ವಿದ್ಯೆ ಸಿಕ್ಕಿತ್ತು, ಸಾಹಿತ್ಯ-ಕಲೆಗಳನ್ನು ಕಲಿಯುವ ಮತ್ತು ಅವುಗಳ ಜೊತೆಯೇ ಬದುಕುವುದಕ್ಕೂ ಅವಕಾಶವಿತ್ತು. ಆದರೆ ಕೊರತೆಯಿದ್ದದ್ದು ಬದುಕಿನ ಮುಖ್ಯ ಅಂಶವಾದ ಮೌಲ್ಯ ಶಿಕ್ಷಣದ್ದು. ಮೌಲ್ಯದ ಅಡಿಪಾಯವಿಲ್ಲದೇ ಆಧುನಿಕ ಸಾಹಿತ್ಯದ, ನಾಟಕಗಳ ಲೋಕಕ್ಕೆ ಮುಕ್ತ ಪ್ರವೇಶ ಸಿಕ್ಕಾಗ, ಜೊತೆಗೆ ಸ್ವಾತಂತ್ರ್ಯವೂ ಇದ್ದಾಗ ಮನಸ್ಸು ಸೂತ್ರವಿಲ್ಲದ ಗಾಳಿಪಟವಾಗಲು ಹೆಚ್ಚು ಕಾಲ ಬೇಡ ಎನ್ನುವ ಅಭಿಪ್ರಾಯ ಆಕೆಯ ಅನುಭವದಿಂದ ಕಂಡುಕೊಂಡ ಸತ್ಯ.
ಆಧುನಿಕ ಸಾಹಿತ್ಯ ಅಥವಾ ನಾಟಕಗಳು (ಇಂದಿನ ಕಾಲಕ್ಕೆ ಸಿನೆಮಾ ಮುಂತಾದವನ್ನೂ ಸೇರಿಸಿಕೊಳ್ಳಬೇಕು) ತಪ್ಪಲ್ಲ, ಆದರೆ ಅವು ಮನಸ್ಸಿನಲ್ಲಿ ಭಾವಗಳನ್ನು ಜಾಗೃತಗೊಳಿಸುತ್ತದೆ. ಉತ್ತೇಜಿಸುತ್ತವೆ. ಅದರಿಂದಾಗಿ ಮನಸ್ಸು ಏನೇನನ್ನೋ ಬಯಸುತ್ತದೆ. ಅದು ಸರಿಯೋ ತಪ್ಪೋ ಎಂದು ತಿಳಿಯುವ, ನಿರ್ಧರಿಸುವ ಮೌಲ್ಯಶಿಕ್ಷಣದ ಅಡಿಪಾಯ, ವಿವೇಕದಿಂದ ನಿರ್ಧರಿಸುವ ಸಾಮರ್ಥ್ಯವನ್ನು ಇಲ್ಲದಾಗ ಬದುಕು ಭಾವಗಳ ಜೊತೆಗೆ ಹರಿದು ಹೋಗುತ್ತದೆ. ಮನಸ್ಸು ನಿಯಂತ್ರಣ ತಪ್ಪುತ್ತದೆ. ಬಯಸಿದ್ದನ್ನು ಪಡೆಯಲು ಯಾವ ದಾರಿಯಲ್ಲಿ ಬೇಕಾದರೂ ಹಿಡಿಯುವ ಸ್ಥಿತಿಗೆ ಎತ್ತಿ ತಲುಪುತ್ತಾನೆ/ಳೆ.
ಒಮ್ಮೆ ಹಳಿ ತಪ್ಪಿದ ರೈಲು ಮತ್ತೆ ಸರಿದಾರಿಯನ್ನು ಹಿಡಿಯುವುದು ಸಾಧ್ಯವೇ? ಸುಲಭವೇ? ಆ ಜೀವನ ಮೌಲ್ಯದ ಪಾಠ, ಸರಿ ತಪ್ಪುಗಳನ್ನು ತಿಳಿಯುವ ವಿವೇಚನೆ ಮನೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ನೀಡುವ ಸಂಸ್ಕಾರಗಳು, ಕಲಿಸುವ ಶಿಸ್ತಿನಿಂದ ಬರುತ್ತದೆ. ಇದು ಇಂದಿಗೂ ಹೊಂದುವ ವಿಚಾರ. ಇಂದು ನಾವು ಮಕ್ಕಳನ್ನು ಬೆಳೆಸುವಾಗ ಯಾವ ತಪ್ಪು ಮಾಡಬಾರದು ಎನ್ನುವುದು ಇಲ್ಲಿದೆ.
ತನ್ನ ಬದುಕಿನಲ್ಲಿ ಹೀಗಾಗಲು ಕಾರಣವೇನು ಎನ್ನುವುದನ್ನು ಅವರು ಚಿಂತನೆ ಮಾಡುತ್ತಾರೆ. ಆಕೆಗೆ 10 ವರ್ಷವಿದ್ದಾಗ ತಾಯಿ ತೀರಿ ಹೋಗುತ್ತಾರೆ ಅಲ್ಪ ಕಾಲದಲ್ಲಿಯೇ ತಂದೆ ಚಿಕ್ಕ ವಯಸ್ಸಿನ ಹೆಣ್ಣುಮಗಳೊಂದಿಗೆ ಎರಡನೆಯ ವಿವಾಹವಾಗುತ್ತಾರೆ. ಮಾನದಾರ ತಾಯಿಯನ್ನು ತಂದೆ ಮರೆತೇಬಿಡುತ್ತಾರೆ. ಮಗಳಿಗೆ ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಯಾವುದೇ ಕೊರತೆ ಅಥವಾ ದಿಗ್ಬಂಧನ ಇಲ್ಲ, ಆಕೆ ಸರ್ವಸ್ವತಂತ್ರಳಾಗಿ ಬೆಳೆಯುತ್ತಾಳೆ. ಆದರೆ ಅಮ್ಮನ ಮಡಿಲು, ಬೆನ್ನಿಗೆ ನಿಲ್ಲುವ ತಂದೆ ಇಲ್ಲದ ಕೊರಗು ಆಕೆಯನ್ನು ಸದಾ ಕಾಡುತ್ತದೆ. ಜೊತೆಗೆ ಯಾವುದೇ ಸರಿ ತಪ್ಪುಗಳ ಅರಿವು ಮೂಡುವ ವಯಸ್ಸೂ ಅದಲ್ಲ. ಇಂತಹ ಸಂದರ್ಭದಲ್ಲಿ ಮಾರ್ಗದರ್ಶನ ನೀಡಲು ತಂದೆಯು ತಾಯಿಯು ಯಾರೂ ಇರಬೇಕು. ಮಾನದ ದೇವಿಯ ಬದುಕಿನಲ್ಲಿ ಆ ಸ್ಥಾನ ಖಾಲಿಯೇ ಇರುತ್ತದೆ.
ಆಕೆ ಪ್ರೇಮಿಸುತ್ತಾಳೆ. ಇನ್ನೂ ಹದಿನೈದು ತುಂಬುವ ಮೊದಲೇ. ತನ್ನನ್ನು ಪ್ರೀತಿಸುವ ಒಂದು ಜೀವವನ್ನು ಅಂತಹ ಹಿನ್ನೆಲೆಯಿಂದ ಬಂದ ಹೆಣ್ಣು ಮಗಳು ಅರಸುವುದು ಸಹಜ. ಆದರೆ ದುರದೃಷ್ಟಕರ ವಿಷಯ ಎಂದರೆ ಅದನ್ನು ದುರ್ಬಳಕೆ ಮಾಡುವವರೇ ಹೆಚ್ಚು. ಹಾಗೆ ಮನೆ ಬಿಟ್ಟು ಹೊರಟ ಮಾನದಾ ಅಲ್ಲೆಲ್ಲೋ ಸತ್ ಪಥದ ಮಾರ್ಗದರ್ಶನ ಸಿಕ್ಕಿದರೂ ಕೂಡ ಮತ್ತೆ ತಪ್ಪು ಹಾದಿ ಹಿಡಿಯುತ್ತಾರೆ. ಮತ್ತು ಈ ಬದುಕಿಗೆ ಸ್ವೇಚ್ಛೆಯಿಂದ ಆದರೆ ಅನಿವಾರ್ಯವಾಗಿ ಸೇರಿಕೊಳ್ಳುತ್ತಾರೆ.
ಅಲ್ಲಿ ಆಕೆ ಅನುಭವಿಸುವ ಕಷ್ಟ ನಷ್ಟಗಳು, ಆ ಜಗತ್ತಿನ ರೀತಿ ನೀತಿಗಳು, ಒಮ್ಮೆ ಒಳಹೊಕ್ಕರೆ ಹೊರಬರಲು ಕಷ್ಟವೆನಿಸುವ ಚಕ್ರವ್ಯೂಹ ಹೇಗಿರುತ್ತವೆ ಎನ್ನುವುದು ಈ ಕೃತಿಯನ್ನು ಓದುತ್ತಾ ಅರ್ಥವಾಗುತ್ತದೆ. ಇದು 97 ವರ್ಷ ಹಿಂದೆ (1929) ಪ್ರಕಟವಾದ ಪುಸ್ತಕ. ಪ್ರಕಾಶನಗೊಂಡ ವರ್ಷದಲ್ಲೇ ಮತ್ತೆ ನಾಲ್ಕು ಮರು ಮುದ್ರಣಗಳನ್ನು ಕಂಡಿದೆ. ಜೊತೆಗೆ ಇದನ್ನು ನಿಷೇಧಿಸಬೇಕು ಎನ್ನುವ ಹೋರಾಟವನ್ನೂ ನಿಷೇಧವೇಕೆ? ಇಲ್ಲಿ ಮಾನದಾ ಯಾವ ದೊಡ್ಡ ಮನುಷ್ಯರ ಹೆಸರನ್ನೂ ಹೇಳಿಲ್ಲ ಆದರೆ ಆ ಕಾಲದಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ತಪ್ಪುಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ನಮೂದಿಸಿದ್ದಾರೆ. ಅಲ್ಲದೆ ಹೆಣ್ಣುಮಗಳು ಒಬ್ಬಳು ಸಮಾಜದ ಹೆಚ್ಚಿನ ಎಲ್ಲರ ಮನೆಯ ದೋಸೆಯಲ್ಲೂ ತೂತಿದೆ ಎನ್ನುವುದನ್ನು ಕನ್ನಡಿ ಹಿಡಿದು ತೋರಿಸುವುದು ಹಲವರಿಂದ ಸ್ವೀಕರಿಸಲು, ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಈ ವೃತ್ತಿಯಲ್ಲಿರುವ ಹೆಣ್ಣುಮಕ್ಕಳು ಅತ್ಯಂತ ನಿಕೃಷ್ಟ ಜೀವಿ ಎಂದು ಪರಿಗಣಿಸಲ್ಪಡುತ್ತಾರೆ. ಅಂಥವರಿಗೆ ಸಮಾಜದಲ್ಲಿ ಮಾತನಾಡಲು ಅವಕಾಶವಿರುವುದಿಲ್ಲ. ಈ ಪುಸ್ತಕದ ಮೂಲಕ ಮಾನದಾದೇವಿ ಅದನ್ನು ಮಾಡಿರುವುದು ಹಲವರಿಗೆ ಅಹಿತ ಅನುಭವ ಕೊಟ್ಟಿರುತ್ತದೆ.

ವೇಶ್ಯೆ ಬರೆದ ಕೃತಿ, ಆದರೆ ಇಲ್ಲಿ ಅಶ್ಲೀಲತೆ ಇಲ್ಲ. ಹಾಗಾಗಿ ಆ ನಿರೀಕ್ಷೆಯಿಂದ ಕೃತಿಯನ್ನು ಓದುವುದು ಅಥವಾ ಓದದೆ ಇರುವುದು ಬೇಡ. ಆ ಕಾಲದಲ್ಲಿ ಸಮಾಜದಲ್ಲಿ ಸಂಚಲನ ಮೂಡಿಸಿದ್ದ, ಸ್ರೀವಾದಿ ಪುಸ್ತಕ ಎಂಬ ಹಣೆಪಟ್ಟಿ ಹೊಂದಿದ್ದ ಪುಸ್ತಕವಿದು. ಆದರೆ ಇದು ಒಬ್ಬ ಹೆಣ್ಣು ಮಗಳ ಆತ್ಮಕಥೆ. ತಾನು ಆಯ್ದುಕೊಂಡ ಜೀವನದಲ್ಲಿ ಅನುಭವಿಸಿದ, ನೋಡಿದ, ಮಥಿಸಿದ ವಿಚಾರಗಳನ್ನು ಆಕೆ ನಮೂದಿಸಿದ್ದಾರೆ. ಆಕೆಯ ಜೀವನವನ್ನು ವಿಮರ್ಶೆ ಮಾಡುವುದು ನಮ್ಮ ಓದಿನ ಉದ್ದೇಶವಾಗದಿರಲಿ.
ನೂರು ವರ್ಷದ ಹಿಂದಿನ ಜೀವನ ಹೇಗಿತ್ತು? ಸ್ವಾತಂತ್ರ್ಯ ಚಳುವಳಿ ಹೇಗೆ ನಡೆದಿತ್ತು? ಒಂದು ಹೆಣ್ಣಿನ ಜೀವನ ಅ೦ದು ಹೇಗಿತ್ತು? ಅಂದಿಗೂ ಇಂದಿಗೂ ವ್ಯತ್ಯಾಸವಿದೆಯೇ? ಸಭ್ಯತೆಯ ಮುಖವಾಡ ಹಾಕುವ ಜನ ಅಂದೂ ಇದ್ದರೇ? ರೀಡಿಂಗ್ ಬಿಟ್ವೀನ್ ದ ಲೈನ್ಸ್ ಎನ್ನುತ್ತಾರಲ್ಲ ಹಾಗೆ ಇಲ್ಲಿ ಹೇಳದೆಯೇ ಹೇಳಿದ ಹಲವು ಅಂಶಗಳಿವೆ. ನಮಗೆ ಬದುಕನ್ನು, ಸಮಾಜವನ್ನು, ಮತ್ತು ನಮ್ಮನ್ನು ಅರ್ಥ ಮಾಡಿಕೊಳ್ಳಲು ಬೇಕಾದ ವಿಚಾರಗಳನ್ನು ಕೊಡುತ್ತವೆ ಅವು.
ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಡಾ. ನಾಗ ಎಚ್. ಹುಬ್ಳಿ ಅವರಿಗೆ ಧನ್ಯವಾದಗಳು. ನಿರ್ಭಯವಾ
ಗಿ ತನ್ನ ಬದುಕಿನ ವಿಚಾರಗಳನ್ನು ದಾಖಲಿಸಿದ ಮಾನದಾದೇವಿಗೆ ಕೃತಜ್ಞತೆ.
- ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಪುಸ್ತಕ ಪರಿಚಯ – ಹೆಚ್. ವಿ.ಮೀನ
- ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಕೃತಿ ಪರಿಚಯ – ಅರಣಕುಮಾರ ಹಬ್ಬು
- ಡಾ. ಸುವರ್ಣಿನಿ ಕೊಣಲೆ
