ಕಾಶಿ ಯಾತ್ರೆ ಮಾಡ ಬೇಕೆಂದರೆ ರಾಮೇಶ್ವರ ಯಾತ್ರೆ ಇಲ್ಲದೆ ಕಾಶಿಯಾತ್ರೆ ಪೂರ್ಣಗೊಳ್ಳುವುದಿಲ್ಲವೆಂದು ಆದಿ ಕಾಲದಿಂದಲೂ ಬಂದ ಸೂಕ್ಷ್ಮ ಭಕ್ತಿಯ ನುಡಿ. ರಾಮೇಶ್ವರಂ ಯಾತ್ರೆಯಲ್ಲಿ ಭಕ್ತಿಯ ರಹಸ್ಯ ತಿಳಿಯುವುದು. ಈ ಯಾತ್ರೆಯ ವಿಶೇಷೆತೆಯೇನು ಸಂಪೂರ್ಣವಾಗಿ ಮಾಹಿತಿಯನ್ನು ಲೇಖಕರಾದ ಸಂಧ್ಯಾ ಟಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ/
ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ//
//ಶ್ರೀ ರಾಮನಾಮ ವರಾನನ ಓಂ ನಮ ಇತಿ//
ಕಾಶಿ ಯಾತ್ರೆ ಮಾಡ ಬೇಕೆಂದರೆ ರಾಮೇಶ್ವರ ಯಾತ್ರೆ ಇಲ್ಲದೆ ಕಾಶಿಯಾತ್ರೆ ಪೂರ್ಣಗೊಳ್ಳುವುದಿಲ್ಲವೆಂದು ಆದಿ ಕಾಲದಿಂದಲೂ ಬಂದ ಸೂಕ್ಷ್ಮ ಭಕ್ತಿಯ ನುಡಿ. ಏಕೆಂದರೆ ಹರಿಯ ಬಿಟ್ಟು ಹರನಿಲ್ಲ, ಹರನ ಬಿಟ್ಟು ಹರಿ ಇಲ್ಲ. ಇದು ಜ್ಞಾನಿಗಳ ಅನುಭವಕ್ಕೆ ಬಂದ ಸರಳ ನುಡಿ. ಸರ್ವತ್ರವ್ಯಾಪ್ತನಾದ, ಸರ್ವದೋಷರಹಿತನಾದ, ಸರ್ವಗುಣ ಪರಿಪೂರ್ಣನಾದ ಬ್ರಹ್ಮಾಂಡವನ್ನು ದದರದಲ್ಲಿ ಧರಿಸಿದ ಶ್ರೀಹರಿಯು ನಮಗೆ ಕೊಟ್ಟ ಈ ಸಾಧನ ಶರೀರಕ್ಕೆ ವಿಶಿಷ್ಟವಾದ ಮನಸ್ಸೆಂಬ ಇಂದ್ರಿಯನ್ನೆ ಹರನಿಗೆ ಒಪ್ಪಿಸಿದ. ತಾಪಹರ, ಪಾಪಹರ, ಜ್ವರಹರ ಮೊದಲಾದ ತಾಪತ್ರಯಗಳನ್ನು ದೂರಮಾಡುವವನು ಹರ. ಅದಕ್ಕಾಗಿ ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಕಾರಣ ಶ್ರೀ ಹರಿ ಹರ ಇಬ್ಬರ ಅನುಗ್ರಹ ಬೇಕು. ಈ ಸೂಕ್ಷ್ಮ ಭಕ್ತಿಯ ರಹಸ್ಯ ತಿಳಿಸುವದು ರಾಮೇಶ್ವರಂ ಯಾತ್ರೆ. ಇಲ್ಲಿ ಬಂಗಾಳ ಕೊಲ್ಲಿ ಹಾಗೂ ಹಿಂದು ಮಹಾಸಾಗರ ಸಂಗಮಸ್ಥಾನವಾಗಿದೆ. ಇಲ್ಲಿಯ ಉಸುಕನ್ನು ತೆಗೆದುಕೊಂಡು ಹೋಗಿ ಕಾಶಿಯಲ್ಲಿಯ ಗಂಗಾದಲ್ಲಿ ಹಾಕಿ ಆ ಗಂಗಾ ನೀರನ್ನು ತೆಗೆದುಕೊಂಡು ಬಂದು ರಾಮೇಶ್ವರ ಲಿಂಗಕ್ಕೆ ಅಭಿಷೇಕ ಮಾಡಿದರೆ ಪೂರ್ಣ ಕಾಶಿಯಾತ್ರೆ ಆಗುವುದು.

ಶ್ರೀ ರಾಮಚಂದ್ರನಿಗೆ ಯಾವ ಆಶೆಯಿರಲಿಲ್ಲ. ಸ್ವತಃ ತಾನೆ ತೃಪ್ತಿ ಜ್ಞಾನಾನಂದಮಯ ದೇಹವುಳ್ಳವನು. ಭಕ್ತರನ್ನು ಉದ್ಧಾರ ಮಾಡಲು “ನಾನು” ಎಂಬ ರಾವಣನ ಅಹಂಕಾರ ಸಂಹರಿಸಿ ಜಯ ಎಂಬ ಸ್ವರೂಪಕ್ಕೆ ಮೋಕ್ಷಾನಂದವನ್ನು ನೀಡಲು ಭೂಮಿಗೆ ಬಂದನು ಶ್ರೀ ರಾಮನು. ಅದರಂತೆ ರಾವಣನ ಸಂಹಾರ ಮಾಡಿದ ನಂತರ ಬ್ರಹ್ಮ ಹತ್ಯಾ ದೋಷವನ್ನು ಪರಿಹಾರ ಮಾಡಿಕೊಂಡು ಅಯೋಧ್ಯೆಗೆ ಹೋಗಲು ನಿಶ್ಚಯಿಸಿ ಅಗಸ್ತ್ಯ ಮುನಿಗಳ ಆದೇಶದಂತೆ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿರುವ ಸ್ಥಳ.

ಹನುಮಂತ ದೇವರಿಗೆ ಕಾಶಿಯಿಂದ ಲಿಂಗವನ್ನು ತರಲು ಮುಹೂರ್ತ ಮೀರುವದರೊಳಗೆ ಬರಲು ಹೇಳಿ ಕಳಿಸಿದನು ಶ್ರೀ ರಾಮನು.ಇಲ್ಲಿ ಸೀತಾಮಾತೆಯು ಸಮುದ್ರದ ಉಸುಕಿನಿಂದ ಲಿಂಗವನ್ನು ತಯಾರಿಸಿದಳು. ಮುಹೂರ್ತ ಮೀರುವ ಹೊತ್ತಾಯಿತು. ಹನುಮಂತದೇವರು ಬರಲಿಲ್ಲವೆಂದು ಸೀತಾಮಾತೆಯು ತಯಾರಿಸಿದ ಲಿಂಗವನ್ನೆ ಶ್ರೀ ರಾಮನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಆಗ ಹನುಮಂತ ದೇವರು ಲಿಂಗವನ್ನು ತಂದರು. ಆ ಲಿಂಗವನ್ನು ಕೂಡ ರಾಮದೇವರು ಈ ಲಿಂಗದ ಪಕ್ಕದಲ್ಲಿಯೇ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಸೀತಾ ಮಾತೆ ತಯಾರಿಸಿದ ಲಿಂಗವನ್ನು ರಾಮನಾಥಲಿಂಗ ಎಂದು ಹನುಮಂತ ದೇವರು ತಂದ ಲಿಂಗಕ್ಕೆ ವಿಶ್ವನಾಥ ಎಂದು ಕರೆಯುತ್ತಾರೆ. ಇದರ ತಾತ್ಪರ್ಯ ಏನೆಂದರೆ ಹನುಮಂತ ದೇವರು ರುದ್ರಾಂಶ ಮತ್ತು ವಾಯುದೇವರ ಸನ್ನಿಧಾನವು ಅವರಲ್ಲಿ ಹೆಚ್ಚು. ಪರಮಾತ್ಮನ ಪರಮ ಆಪ್ತನೆನಿಸಿದ ಮುಖ್ಯಪ್ರಾಣ ಎನಿಸಿರುವನು. ವಿಶ್ವಕ್ಕೆ ಪ್ರಾಣನಾಗಿರುವವನು. ಅದಕ್ಕೆ ವಿಶ್ವನಾಥ ಲಿಂಗವನ್ನು ಸ್ಥಾಪಿಸಿದನು ಶ್ರೀರಾಮಚಂದ್ರನು. ಒಂದು ಕ್ಷಣವು ಬಿಡದೆ ಹರಿಯ ಸೇವೆ ಮಾಡುತ್ತ ನಿಯತ ಪತ್ನಿ ಎನಿಸಿದ ಜ್ಞಾನ ಸಂಪತ್ತಿಗೆ ಒಡೆಯಳಾದ ಮಹಾಲಕ್ಷ್ಮೀ ಹಸ್ತದಿಂದ ಉದ್ಭವವಾದ ಆತ್ಮಲಿಂಗ ಇರಬೇಕೆಂದು ರಾಮನು ರಾಮನಾಥ ಲಿಂಗವು ಸ್ಥಾಪನೆ ಯಾಯಿತು. ಈ ಎಲ್ಲ ಸೃಷ್ಟಿ, ಪುರಾಣ ದೇವತೆಗಳ ಸನ್ನಿಧಾನ ಹೆಚ್ಚು ಇರುವ ದೇಶವೆಂದರೆ ಭರತನಾಳಿದ ಭಾರತ ದೇಶ.
ರಾಮೇಶ್ವರಂ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಾಂಬನ್ ದ್ವೀಪದಲ್ಲಿದೆ.ಇದು ನಾಲ್ಕು ಪ್ರಮುಖ ತೀರ್ಥ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಅಲ್ಲದೆ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯದ ಪ್ರತಿಯೊಂದು ಅಂಶವು ಶೈವ ಮತ್ತು ವೈಷ್ಣವ ಧರ್ಮದ ಏಕತೆಯನ್ನು ಸಾರುತ್ತದೆ. ಈ ದೇವಾಲಯವು ಸುಮಾರು ಹದಿನೈದು ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿದೆ. ಮೂರು ವಿವಿಧ ರೀತಿಯ ವಿಶಾಲವಾದ ಪ್ರವೇಶಾಂಗಣಗಳು ಇವೆ.ಮೊದಲನೆಯ ಪ್ರವೇಶಾಂಗಣವು ಅತ್ಯಂತ ಹಳೆಯದೆನಿಸುತ್ತದೆ.

ಎರಡನೆಯದು ಸುಮಾರು ಹನ್ನೆರಡನೇ ಯ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳುವರು.ಇದು ಒಂದನೂರಾಎಂಟು ಶಿವಲಿಂಗಗಳನ್ನು ಮತ್ತು ಒಂದು ಗಣಪತಿಯ ಪ್ರತಿಮೆಯನ್ನು ಹೊಂದಿದೆ. ಮೂರನೇಯ ಪ್ರವೇಶಾಂಗಣವು ಅಗಾಧವಾದ ಒಂದು ಸಾವಿರದಾಹನ್ನೆರಡು ಸ್ತಂಭಗಳನ್ನು ಹೊಂದಿದ್ದು ಪ್ರತಿಯೊಂದು ಸ್ತಂಭವು ಏಕಶಿಲೆಯದ್ದಾಗಿದೆ. ಎಲ್ಲ ಕಡೆಗೂ ಮಹಾಭಾರತದ, ರಾಮಾಯಣದ ಪ್ರಸಂಗಗಳನ್ನು ಕೆತ್ತನೆಯಲ್ಲಿ ತಿಳಿಸಿದ್ದಾರೆ.
ದೇವಾಲಯದ ಒಳ ಆವರಣದಲ್ಲಿ ಮಹಾಲಕ್ಷ್ಮೀ ತೀರ್ಥಂ, ಸಾವಿತ್ರಿ ತೀರ್ಥಂ, ಗಾಯತ್ರಿ ತೀರ್ಥಂ, ಸರಸ್ವತಿ ತೀರ್ಥಂ, ಸೇತು ಮಾಧವ ತೀರ್ಥಂ, ಗಂಧಮಾದನ ತೀರ್ಥಂ,ಕವಚ ತೀರ್ಥಂ, ಗವಯ ತೀರ್ಥಂ, ನಳ ತೀರ್ಥಂ, ನೀಲ ತೀರ್ಥಂ, ಶಂಖ ತೀರ್ಥಂ, ಚಕ್ರ ತೀರ್ಥಂ, ಬ್ರಹ್ಮ ಹತ್ಯ ವಿಮೋಚನ ತೀರ್ಥಂ,ಸೂರ್ಯ, ಚಂದ್ರ ತೀರ್ಥಂ, ಗಂಗಾ ತೀರ್ಥಂ, ಯಮುನಾ ತೀರ್ಥಂ, ಗಯಾ ತೀರ್ಥಂ, ಶಿವ ತೀರ್ಥಂ, ಸತ್ಯಾಮೃತ ತೀರ್ಥಂ, ಸರ್ವ ತೀರ್ಥಂ, ಕೋಟಿ ತೀರ್ಥಂ ಹೀಗೆ ಇಪ್ಪತ್ತೆರಡು ತೀರ್ಥಗಳಿವೆ. ಮೊದಲು ಒಮ್ಮೆ ಧೂಳಿ ದರ್ಶನ ಪಡೆದು ನಂತರ ಇಪ್ಪತ್ತೆರಡು ಭಾವಿಗಳ ತೀರ್ಥ ಸ್ನಾನ ಮಾಡಿ ಗರುಡ ಗಂಭ,ನಂದಿದರ್ಶನ ಮಾಡಿ ನಂತರ ವಿಶ್ವನಾಥ ಲಿಂಗದ ದರ್ಶನಮಾಡಿ ರಾಮೇಶ್ವರ ಲಿಂಗದ ದರ್ಶನ ಅರ್ಚನೆ ಮುಂತಾದವುಗಳನ್ನು ಮಾಡಿಸಬೇಕು. ಇದು ದ್ರಾವಿಡ ಶೈಲಿಯ ಕಲೆಯನ್ನು ಒಳಗೊಂಡಿದೆ.

ರಾಮೇಶ್ವರ ದೇವಾಲಯದಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಪಂಚಮುಖಿ ಆಂಜನೇಯ ಮೂರ್ತಿ ಇದೆ. ಹನುಮಂತ ದೇವರು ತಮ್ಮಲ್ಲಿರುವ ಐದು ಮಹಾಶಕ್ತಿಯನ್ನು ಇಲ್ಲಿಯೇ ಪ್ರಕಟಿಸಿದ್ದು ಎಂದು ಹೇಳುತ್ತಾರೆ. ಇನ್ನು ನೀರಿನಲ್ಲಿ ತೇಲುವ ಕಲ್ಲುಗಳನ್ನು ನೋಡಲು ಆಕರ್ಷಕ ಹಾಗೂ ಆಶ್ಚರ್ಯವಾಗುತ್ತದೆ. ಮತ್ತು ಇಪ್ಪತ್ತೆರಡು ಭಾವಿಯ ಪಕ್ಕ ಪಕ್ಕದಲ್ಲೇ ಇದ್ದರೂ ನೀರಿನ ರುಚಿ ಬೇರೆ ಬೇರೆ ಇವೆ.
ಸಮುದ್ರದ ಆವರಣದಲ್ಲಿ ರಾಮನು ಬಾಣದಿಂದ ನೀರನ್ನು ಕುಡಿಯಲೆಂದು ಸೃಷ್ಟಿಸಿದ್ದು ನೀರು ತುಂಬಾ ಸಿಹಿ ಇದೆ. ಹೀಗೆ ಎಲ್ಲವೂ ಪ್ರಕೃತಿಯ ಮಡಿಲಲ್ಲಿ ಎಷ್ಟು ವಿಸ್ಮಯ ತುಂಬಿದೆ ಅಲ್ವಾ, ಒಂದೇ ಒಂದು ಅಗೋಚರ ಶಕ್ತಿಯಿಂದ ಎಷ್ಟೊಂದು ಸೃಷ್ಟಿ, ಒಂದೇ ಒಂದು ಗಾಳಿಯಿಂದ ಎಷ್ಟು ಜೀವಿಗಳ ಬದುಕು. ಬ್ರಹ್ಮಾಂಡದ ಪ್ರಾರಂಭ ಅಂತ್ಯ ಯಾವದೂ ಅಳೆಯಲು ಸಾಧ್ಯವಿಲ್ಲ. ಇದು ಅಪರಿಮಿತ ಹಾಗೂ ಅಪ್ರತಿಮ. ಅದರಂತೆ ಜ್ಞಾನ, ವಿಜ್ಞಾನ ಸುಜ್ಞಾನ ಮೂರು ಜೀವಂತ ಸಾಕ್ಷಿ ಆಗವೆ. ಅದರಂತೆ ಮಂದ, ನಿಂದೆ, ಅಜ್ಞಾನ ಇವು ಕೂಡ ಜೀವಂತವಾಗಿವೆ. ವಿಚಾರಿಸಿ ನೋಡಿದರೆ ಭಾರತ ಜ್ಞಾನಕ್ಕೆ ಸಾಕ್ಷಿ.
ನಮಃ ಶಿವಾಯ ಶಾಂತಾಯ ಹರಾಯ ಪರಮಾತ್ಮನೇ/
ಪ್ರಣತ:ಕ್ಲೇಶನಾಶಾಯ ಯೋಗಿನಾಂ ಪತಯೇ ನಮಃ//

ಭಾರತ
ವಿಶ್ವದೊಳಗೆ ಭಾರತ ಚೆಂದ
ಐಶ್ವರ್ಯದೊಳಗೆ ಅಧ್ಯಾತ್ಮಿಕ ಅಂದ
ಅಯೋಧ್ಯೆ ರಾಮನ ಸತ್ ಚಿತ್ ಮೂರ್ತಿ
ಅಹೋಬಲ ನರಸಿಂಹನ ಕರುಣಾ ಕೀರ್ತಿ
ಕಂಚಿವರದನ ಕಣ್ಣೋಟ ಸುಖಾರ್ತಿ
ಚೆಲುವ ನಾರಾಯಣನ ಚಿನ್ಮಯ ಮೂರ್ತಿ
ಬದರಿನಾಥನ ಭವ್ಯತೆ ಬೃಂದಾವನದ ಧನ್ಯತೆ
ಕನ್ಯಾಕುಮಾರಿ ಶಾರದೇ ಜ್ಞಾನಾನದತೇ
ಕೊಲ್ಹಾಪುರ ತುಳಜಾಪುರ ಅವತಾರಯುತೆ
ಪಂಡರಿನಾಥ ಪ್ರಯಾಗ ಪ್ರಸ್ಥಾನ ವಿವಿಧತೆ
ಶ್ರೀಶೈಲ ಹಂಪೆಯ ಶಿಲೆಯ ಮಂಗಳಮಯ
ರಾಮೇಶ್ವರ ಧರ್ಮಸ್ಥಳ ಸತ್ಯಮಯ
ಇದುವೆ ಯಂತ್ರೋಧಾರಕನ ತೇಜೋಮಯ
ಉಡುಪಿ ದ್ವಾರಕಾನಾಥನ ಪ್ರತಿಯುಂಟೆ
ವೆಂಕಟಾದ್ರಿಯ ಕರುಣೆ ಎಲ್ಲಾದರುಂಟೆ
ಪ್ರಲ್ಹಾದ ಗೋಕರ್ಣ ಮಹಿಮಾಪರಿವುಂಟೆ
ಜಗನ್ನಾಥ ಮಥುರಾನಾಥನ ಸಖ್ಯಪ್ರಸಾದುಂಟೆ
ನಂಜನಗೂಡು ಸುಬ್ರಹ್ಮಣ್ಯನ ರೀತಿ ಸಂಹಿತೆ
ಗಯಾ ಪ್ರಭೆ ಕಾಶಿ ವಿಶ್ವೇಶ್ವರ ಮನೋ ದಕ್ಷತೆ
ಹರಿದ್ವಾರ ಹೃಷಿಕೇಶ ಗಂಗೆಯ ವಿಶಾಲತೆ
ಹಿಮಾಲಯ ವಿಂದ್ಯ ಶೃತಶೃಂಗ ವಿಶಾಲ ಭದ್ರತೆ
ವ್ಯಾಸ ದಾಸ ವಚನ ಸಾಹಿತ್ಯ ಸಂಸ್ಕೃತಿ ಮೋಕ್ಷಾನಂದ
ದೇವ ಋಷಿ ಮುನಿಗಳ ಜನ್ಮಾನಂದ
ಭಾರತ ದೇಶ ಭಾರತೀರಮಣನಶಕ್ತಾನಂದ
ಭಾರತ ಹೃದಯವೇ ಯಜ್ಞಾನಂದ
- ಸಂಧ್ಯಾ ಟಿ – ಲೇಖಕರು, ಬೆಂಗಳೂರು.
