‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಪುಸ್ತಕ ಪರಿಚಯ

ಮಾನದಾ ದೇವಿ ಪ್ರಣೀತ ಅವರ ಬಂಗಾಳಿ ಮೂಲದ ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಯನ್ನು ಕನ್ನಡಕ್ಕೆ ತಂದಿರುವ ಡಾ. ನಾಗ ಎಚ್. ಹುಬ್ಳಿ ಅವರ ಈ ಪುಸ್ತಕದ ಕುರಿತು ಲೇಖಕಿ ಹೆಚ್. ವಿ.ಮೀನ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

‘ವಿದ್ಯಾವಂತ ವೇಶ್ಯೆಯ ಆತ್ಮಕಥೆ”
ಬಂಗಾಳಿ ಮೂಲ : ಕುಮಾರಿ/ಶ್ರೀಮತಿ ಮಾನದಾ ದೇವಿ ಪ್ರಣೀತ
ಬಂಗಾಳಿಯಿಂದ ನೇರ ಕನ್ನಡಕ್ಕೆ : ಶ್ರೀ ಡಾ. ನಾಗ ಎಚ್. ಹುಬ್ಳಿ
ಬೆಲೆ : 240/-
ಪ್ರಕಾಶನ : ಛಂದ ಪುಸ್ತಕ
ಮೊಬೈಲ್ ಸಂಖ್ಯೆ : 9844422782
ಮಾನದಾ ದೇವಿ ಪ್ರಣೀತ ” ಎಷ್ಟು ಅರ್ಥ ಗರ್ಭಿತವಾದ ಹೆಸರು.

ಬಂಗಾಳಿ ಭಾಷೆಯಲ್ಲಿ “ಮಾನದಾ” ಎಂದರೆ “ಗೌರವಾನ್ವಿತ”

“ಪ್ರಣೀತ” ಎಂದರೆ “ನುರಿತ” ಎಂದರ್ಥ.

ಲೇಖಕಿ ಮಾನದಾ ದೇವಿ ಪ್ರಣೀತ ಅವರು “ನಂಬಿಕೆಯುಕ್ತ ಪ್ರೀತಿ” ಎಂಬ ಗೌರವ ಭಾವನೆಉಳ್ಳ ನಡೆಯನ್ನು ತಮ್ಮ ತಂದೆಯವರಿಂದ ಅಪೇಕ್ಷಿಸುತ್ತಿದ್ದರು. ತಾಯಿ ಇಲ್ಲದ ಹೆಣ್ಣು ಮಗಳಿಗೆ ತಂದೆಯೇ ಸರ್ವಸ್ವವಾಗಿದ್ದಾಗ ಅವರ ಜೀವನದಲ್ಲಿ ಆದದ್ದಾದರೂ ಏನು ???

ಒಮ್ಮೆ ಹೀಗೆ ಫೇಸ್ಬುಕ್ ಸ್ನೇಹಿತರ ಪೋಸ್ಟ್ ಗಳನ್ನು ನೋಡುತ್ತಿದ್ದಾಗ “ಮಾನದಾ ದೇವಿ ಪ್ರಣೀತ” ಎಂಬ ಹೆಸರು ನನ್ನನ್ನು ಆಕರ್ಷಿಸಿತು. ನಾನು ಕುತೂಹಲದಿಂದ ಆ ಪುಸ್ತಕದ ಮುಖ ಪುಟದ ಮೇಲೆ ಮುದ್ರಿತಗೊಂಡಿದ್ದ ಅಕ್ಷರಗಳನ್ನು ಗಮನಿಸಿ ಓದಿದಾಗ ತಿಳಿದದ್ದು…..ಡಾ ನಾಗ ಎಚ್. ಹುಬ್ಳಿ ಅವರು ಮೂಲತಃ ಹುಬ್ಬಳ್ಳಿಯವರು. ಇವರು ವೃತ್ತಿಯಲ್ಲಿ ರಾಂಚಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು ಹಲವಾರು ಪತ್ರಿಕೆಗಳಲ್ಲಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ ಹಾಗೂ ಅನೇಕ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂತಹ ಅನೇಕ ಕನ್ನಡ ಭಾಷೆಗೆ ಅನುವಾದಿಸಿದ ಕೃತಿಗಳಲ್ಲಿ ಬಂಗಾಳಿ ಭಾಷೆಯ “ವಿದ್ಯಾವಂತ ವೇಶ್ಯೆಯ ಆತ್ಮಕತೆಯು” ಕೂಡ ಒಂದಾಗಿದೆ.

ಡಾ. ನಾಗ ಎಚ್. ಹುಬ್ಳಿ

ಕುಮಾರಿ / ಶ್ರೀಮತಿ ಮಾನದಾ ದೇವಿ ಪ್ರಣೀತ ಅವರ ಈ ಆತ್ಮಕಥೆಯನ್ನು ಓದಬೇಕೆಂಬ ಇಚ್ಛೆಯನ್ನು ಡಾ ನಾಗ ಹುಬ್ಳಿ ಅವರಲ್ಲಿ ವ್ಯಕ್ತಪಡಿಸಿದೆ. ಒಂದೆರಡು ದಿನಗಳಲ್ಲಿ ಈ ಪುಸ್ತಕವು ನನ್ನ ಕೈ ಸೇರಿತು. ಪುಸ್ತಕವನ್ನು ಓದಿದ ನಾನು ನಿಮ್ಮೆಲ್ಲರ ಮುಂದೆ ಒಂದು ಗಂಭೀರವಾದ ಪ್ರಶ್ನೆಯನ್ನು ಇಡಲು ಇಚ್ಚಿಸುತ್ತೇನೆ ….

ಮಹಿಳೆಗೆ “ವೇಶ್ಯೆ”ಎಂಬ ಬಿರುದು ಲೋಕದ ಎಲ್ಲಾ ಭಾಷೆಯ ಶಬ್ಧಕೋಶದಲ್ಲಿ ಅಚ್ಚಾಗಿ ಉಳಿದುಬಿಟ್ಟಿದೆ…ಆದರೇ..ಪುರುಷನಿಗೆ!!! ಎಷ್ಟು ಹುಡುಕಿದರೂ ಯಾವ ಶಬ್ಧಕೋಶದಲ್ಲೂ ಸೂಕ್ತವಾದ ಬಿರುದು ಸಿಗಲೇ ಇಲ್ಲ …. ? ಇದು ಪುರುಷ ಪ್ರಧಾನ ಸಮಾಜದ ಗೊಜಲು.

ಲೇಖಕಿ ಮಾನದಾ ದೇವಿ ಅವರು ತಮ್ಮ ಆತ್ಮಕಥೆಯನ್ನು ತಮ್ಮ ಪುಸ್ತಕದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅವರ ಈ ಧೈರ್ಯಕ್ಕೆ ನಮಿಸುತ್ತಾ, ಶ್ರೀ ಡಾ. ನಾಗ ಹೆಚ್ ಹುಬ್ಳಿ ಅವರು ಕನ್ನಡಕ್ಕೆ ಅನುವಾದಿಸಿರುವ ಮಾನದಾ ದೇವಿ ಅವರ ಆತ್ಮಕಥೆಯ ಪುಸ್ತಕವನ್ನು ಸೂಕ್ಷ್ಮವಾಗಿ ನಿಮಗೆ ಪರಿಚಯಿಸುತ್ತಿದ್ದೇನೆ.

ಸುಮಾರು 1900 ಇಸವಿಯ ಸಮಯ ಅದಾಗಿತ್ತು. ಕಲ್ಕತ್ತಾದ ಒಬ್ಬ ಗೌರವಾನ್ವಿತ ಬ್ರಾಹ್ಮಣ ಕುಟುಂಬದ ಪ್ರಥಮ ಸಂತಾನ ಲೇಖಕಿ ಮಾನದಾ ದೇವಿ ಪ್ರಣೀತ ಅವರು. ಕೆಳಮಧ್ಯಮ ವರ್ಗದವರಾಗಿದ್ದ ಇವರ ತಂದೆಯವರು ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿದ್ದು ಒಳ್ಳೆಯ ಹೆಸರನ್ನು ಗಳಿಸಿದ್ದರು. ಹೆಣ್ಣು ಮಗಳೆಂದು ಯಾವುದೇ ತಾರತಮ್ಯಕ್ಕೆ ಒಳಗಾಗದೆ ಬಾಲ್ಯವನ್ನು ಕಳೆದ ಮಾನದಾ ದೇವಿಯವರಿಗೆ ಅನಾರೋಗ್ಯವು ಕಾಡುತ್ತಿತ್ತು. ಅಜ್ಜನ ಅಪಾರ ಕಾಳಜಿಯಿಂದ ಆರೋಗ್ಯದಲ್ಲಿ ಚೇತರಿಸಿಕೊಂಡ ಮಾನದಾ ದೇವಿಯವರು ಸ್ವಲ್ಪ ವರುಷಗಳಲ್ಲಿ ತಮ್ಮ ಅಜ್ಜನನ್ನು ಕಳೆದುಕೊಂಡರು. ನಂತರ ಮಾನದಾ ದೇವಿಯವರ ತಾಯಿಯವರು ತಮ್ಮ ಎರಡನೇ ಹೆರಿಗೆಯ ಸಮಯದಲ್ಲಿ ನಿಧನರಾದರು. ಆಗ ಮಾನದಾ ದೇವಿಯವರ ವಯಸ್ಸು ಸುಮಾರು 6 ವರ್ಷ. ತಾಯಿಯವರನ್ನು ಕಳೆದುಕೊಂಡ ನೋವು ಅವರನ್ನು ತೀವ್ರವಾಗಿ ಬಾಧಿಸಿತ್ತು. ತಂದೆಯವರು ಎಷ್ಟೇ ಪ್ರಯತ್ನಿಸಿದರೂ ಕೂಡ ಮಾನದಾ ದೇವಿಯವರು ದುಃಖದಿಂದ ಹೊರಬರಲಾಗಲಿಲ್ಲ. ಪತ್ನಿಯನ್ನು ಕಳೆದುಕೊಂಡ ಅವರ ತಂದೆಯವರು ಕೂಡ ಆ ನೋವಿನಿಂದ ತತ್ತರಿಸಿಹೋಗಿದ್ದರು. ಸ್ವಲ್ಪ ದಿನಗಳ ಕಾಲ ಊಟವನ್ನು ಕೂಡ ತ್ಯಜಿಸಿದರು. ಪತ್ನಿಯ ವರ್ಣರಂಜಿತ ಭಾವಚಿತ್ರವನ್ನು ತಮ್ಮ ಕೋಣೆಯಲ್ಲಿ ತೂಗು  ಹಾಕಿದರು. ಪ್ರತೀ ನಿತ್ಯ ಆ ಭಾವ ಚಿತ್ರಕ್ಕೆ ಹೂವಿನ ಹಾರವನ್ನು ಅರ್ಪಿಸುತ್ತಿದ್ದರು.
ಮಗಳ 7 ನೇ ವರುಷದ ಜನ್ಮದಿನದಂದು ತಮ್ಮ ಪತ್ನಿಯ ಆ ಭಾವಚಿತ್ರವನ್ನು ಮಗಳಿಗೆ ಉಡುಗೊರೆಯಾಗಿ ನೀಡಿದರು. ನಂತರದ ದಿನಗಳಲ್ಲಿ ಮಗಳನ್ನು ನಗರದ ಪ್ರತಿಷ್ಠಿತ ಶಾಲೆಗೆ ಸೇರಿಸಿದರು. ಮಗಳಿಗೆ ಓದುವುದರಲ್ಲಿ ಯಾವುದೇ ತೊಂದರೆ ಆಗಬಾರದೆಂದು ನಂದಣ್ಣನೆಂಬ ಖಾಸಗಿ ಶಿಕ್ಷಕನನ್ನು ನೇಮಿಸಿದರು.

ದಿನಗಳು ಉರುಳಿದವು….ಹೆಂಡತಿಯ ನೆನಪು ಹಳಸಿತು……

ಮಗಳು ಯೌವನಕ್ಕೆ ಕಾಲಿಡುತ್ತಿದ್ದಾಗ ತಂದೆಯಾದವನು ಮರು ಮದುವೆ ಆದಾಗ ಅವನ ಮಗಳ ಮನದಲ್ಲಿ ಉಂಟಾಗುವ ಭಾವನೆಗಳ ಪ್ರವಾಹವನ್ನು ಊಹಿಸಲು ಅಸಾಧ್ಯ. ಮಾನದಾ ದೇವಿಯವರ ಜೀವನದಲ್ಲೂ ಹೀಗೆ ಆಯಿತು. ಮಾನದಾ ದೇವಿಯವರ ತಂದೆಯವರು ಮರು ಮದುವೆಯಾದರು. ಅವರ ಎರಡನೇ ಪತ್ನಿಯ ವಯಸ್ಸು ಮಾನದಾ ದೇವಿಗಿಂತ ಕೇವಲ ಎರಡೇ ಎರಡು ವರುಷ ಹೆಚ್ಚಿನದಾಗಿತ್ತು. ಮಗಳ ವಯಸ್ಕಳಾದ ಹೆಂಡತಿಯೊಂದಿಗೆ ಅವರ ಸಮಯ ಸೀಮಿತವಾಗಿದ್ದ ಕಾರಣ ಅವರು ಮಗಳೊಂದಿಗೆ ಸಮಯವನ್ನು ಕಳೆಯುವುದು ಕೂಡ ನಿಂತುಹೋಯಿತು. ಕ್ರಮೇಣ ಮಗಳು ದೂರವಾಗುತ್ತಾ ಹೋದಳು. ತಂದೆಯವರಿಗೆ ಇದರ ಪರಿಯೇ ಇಲ್ಲವಾಯಿತು.

ತಾತ, ತಾಯಿ, ತಂದೆಯ ಪ್ರೀತಿಯಿಂದ ಒಂದೊಂದಾಗಿ ವಂಚಿತಳಾದ ಮಾನದಾ ದೇವಿಯ ಮನಸ್ಸು ಪ್ರೀತಿಗಾಗಿ ಹಾತೊರೆಯಿತು. ತಂದೆಯು ತನ್ನ ಮಗಳು ಪ್ರಾಯಕ್ಕೆ ಬಂದಾಗ ಅವಳಿಗೆ ಎಲ್ಲಾ ರೀತಿಯ ಸ್ವಾತಂತ್ರವನ್ನು ಕೊಟ್ಟು ಸಣ್ಣ ಕಥೆಗಳು, ಕವನಗಳನ್ನು ಬರೆದು ಪತ್ರಿಕೆಯಲ್ಲಿ ಪ್ರಕಟಿಸುವುದು ಮತ್ತು ರಂಗ ಪ್ರಯೋಗಗಳಲ್ಲಿ ಭಾಗವಹಿಸುವುದಕ್ಕೆ ಅಡ್ಡಿ ಮಾಡಿರಲಿಲ್ಲ. ತನ್ನ ಇಬ್ಬರು ಸ್ನೇಹಿತರಾದ ರಮೇಶ್ ಹಾಗೂ ಮುಕುಲ್ ಅವರೊಂದಿಗೆ ಅವಳ ಸ್ನೇಹ ಗಾಢವಾಗಿ ಬೆಳೆಯಿತು. ಮಗಳಿಗೆ ಸ್ವಾತಂತ್ರವನ್ನು ಕೊಟ್ಟ ತಂದೆಯು ಮಗಳ ಮದುವೆಯ ಬಗ್ಗೆ ಚಿಂತಿಸಲಿಲ್ಲ. ತನ್ನ ಮಗಳನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ತನ್ನ ಹೆಂಡತಿಯೊಂದಿಗೆ ಪ್ರವಾಸಗಳಲ್ಲಿ ಸಮಯವನ್ನು ಕಳೆಯುತ್ತಿದ್ದನು. ತಂದೆಯ ಈ ಬೇಜವಾಬ್ದಾರಿ ನಡೆ ಮತ್ತು ಸ್ವಾರ್ಥತೆ ಅವಳಲ್ಲಿ ತಂದೆಯ ಮೇಲೆ ದ್ವೇಷ ಹುಟ್ಟುವಂತೆ ಮಾಡಿತು. ತಂದೆ ತನ್ನ ಸ್ವಾರ್ಥಕ್ಕಾಗಿ ಮಗಳ ಸಮಸ್ಯೆಗಳನ್ನು ಅರಿಯಲು ವಿಫಲನಾದನು.

ಒಂಟಿಯಾದ ಮಾನದಾ ದೇವಿ ಅವರು ತನ್ನ ಆತ್ಮ ಸ್ನೇಹಿತನ “ನಂಬಿಕೆ” ಮತ್ತು “ಪ್ರೀತಿ” ಎಂಬ ಭಾವನೆಗೆ ಬಲಿಯಾದಳು . ತಾನು ಪ್ರೀತಿಸಿದ ವ್ಯಕ್ತಿಯ “ಪ್ರೀತಿಯು” ಮಿಥ್ಯ ಎಂದು ತಿಳಿದ ಲೇಖಕಿಯು ಸ್ವತಃ ತನ್ನ ಪ್ರಿಯಕರನ ಭೋಗಕ್ಕೆ ಸಿಲುಕಿ ಬಸಿರಾದಳು. ನಂತರ ತನ್ನ ಪ್ರಿಯಕರ ಅವಳನ್ನು ಮದುವೆಯಾಗಲು ನಿರಾಕರಿಸಿ ಕೊನೆಗೆ ಅವಳ ಕೈ ಬಿಟ್ಟನು. ಈ ಅಘಾತದಿಂದ ಚೇತರಿಕೊಳ್ಳಲಾಗದ ಮಾನದಾ ನಿಸ್ಸಹಾಯಕಳಾದಳು. ಹೊಟ್ಟೆಯಲ್ಲಿದ್ದ ಮಗು ಸತ್ತು ಜನುಮ ನೀಡಿತು. ಇಂತಹ ಸಮಯದಲ್ಲಿ ಅವಳ ತಂದೆಯೂ ಕೂಡ ಅವಳಿಗೆ ಸಹಾಯ ಮಾಡಲು ನಿರಾಕರಿಸಿದನು. ಕಾಮದ ತುಡಿತಕ್ಕೆ ಆಕರ್ಷಿತಳಾಗಿದ್ದ ಅವಳು ಸಮಾಜ ಘಾತುಕರಿಂದ ಅನುಭವಿಸಿದ ವೇದನೆ, ಸಂಕಟ ಮತ್ತು ಸಮಾಜದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಬಿಡಿ ಬಿಡಿಯಾಗಿ ಅನಾವರಣಗೊಂಡಿರುವ ಈ ಆತ್ಮಕಥೆಯನ್ನು ಎಲ್ಲರೂ ಓದಲೇ ಬೇಕು ಎಂಬುದು ನನ್ನ ಅಭಿಪ್ರಾಯ.

ಪೋಷಕರ ಪ್ರೀತಿ ಮತ್ತು ಕಾಳಜಿಯಿಂದ ವಂಚಿತಗೊಂಡ ಹದಿ ಹರೆಯದ ಹೆಣ್ಣು ಮಗಳು ತನ್ನ ದೇಹದಲ್ಲಾದ ಸಹಜ ಬದಲಾವಣೆಗಳಿಂದ ಅವಳಲ್ಲಿ ಉಂಟಾದ ದೈಹಿಕ ಪ್ರಚೋದನೆಗಳ ಬಗ್ಗೆ ಅವಳು ಯಾರಲ್ಲೂ ಹೇಳಿ ಕೊಳ್ಳಲಾಗದೆ ಒಂಟಿಯಾದಾಗ ತಾನು ಪ್ರೀತಿಸಿದವನು ಕೂಡ ಮದುವೆ ಆಗದೆ ದ್ರೋಹ ಮಾಡಿದಾಗ ಅವಳು ಆರಿಸಿಕೊಂಡ ಮಾರ್ಗ ಅವಳನ್ನು ಯಾವ ಕೂಪಕ್ಕೆ ತಳ್ಳಿತು ಎಂಬುದರ ಬಗ್ಗೆ ಎಲ್ಲಾ ಪೋಷಕರು ಓದಿ ತಿಳಿಯಬೇಕಾಗಿದೆ.

1920 ನೇ ಇಸವಿಯಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಭಾರತದಲ್ಲಿ ಆಸಹಕಾರ ಚಳುವಳಿ ಆರಂಭವಾಯಿತು. ಈ ಚಳುವಳಿಯಲ್ಲಿ ಮಹಿಳೆಯರು ಕೂಡ ಸಕ್ರಿಯವಾಗಿ ಪಾಲ್ಗೊಂಡರು. ಕೊಲ್ಕತ್ತಾದ ಹೆಸರಾಂತ ದೇಶ ಬಂಧು ಚಿತ್ತರಂಜನ ದಾಸರು ಮಹಿಳಾ ತಂಡವೊಂದನ್ನು ಸ್ಥಾಪಿಸಿದರು. ಈ ಚಳುವಳಿಯಲ್ಲಿ ಅಸ್ಪೃಶ್ಯ ವೈಶ್ಯೆಯರೊಂದಿಗೆ ಪವಿತ್ರ ಕುಲದ ಗಣ್ಯ ವ್ಯಕ್ತಿಗಳು ಕೂಡ ಯಾವುದೇ ಸಂಕೋಚವಿಲ್ಲದೆ ಹೆಜ್ಜೆ ಹಾಕಿದರು. ಈ ಚಳುವಳಿಯಲ್ಲಿ ಮಾನದಾ ದೇವಿಯವರು ಕೂಡ ಚಿತ್ತ ರಂಜನ ದಾಸ ಅವರೊಂದಿಗೆ ಹೋರಾಟದಲ್ಲಿ ಪಾಲ್ಗೊಂಡರು. ದೇಶ ಸೇವೆಯ ಮಹಾ ಯಜ್ಞದಲ್ಲಿ ಭಾಗವಹಿಸಿದರೆ ವೈಶ್ಯೆಯರ ಪಾಪಗಳು ಭಸ್ಮವಾಗಿ ಹೋಗುತ್ತದೆ ಎಂದು ಭಾವಿಸಿದ್ದವರಲ್ಲಿ ಮಾನದಾ ದೇವಿಯವರು ಕೂಡ ಒಬ್ಬರಾಗಿದ್ದರು. ಇಂತಹ ಮಹಾನ್ ದೇಶ ಪ್ರೇಮಿಗಳ ಒಡನಾಟವಿದ್ದ ಮಾನದಾ ದೇವಿಯವರ ಮನ ಪರಿವರ್ತನೆಗೊಂಡು ಅವರ ಜೀವನ ಬದಲಾಯಿತೇ!…ಅಂದಿನ ದಿನಗಳಲ್ಲಿಯು ಕೂಡ ಮಾನದಾ ದೇವಿಯವರಂತಹ ಅಸ್ಸಹಾಯಕ ಮಹಿಳೆಯರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ತಿಳಿದು ಮನ ಮಿಡಿಯಿತು. ಪ್ರೀತಿ ಇಂದ ವಂಚಿತಳಾದ ಮಾನದಾ ದೇವಿಯವರು ತಮ್ಮ ದೈಹಿಕ ಚಟದಿಂದ ತಮ್ಮ ಮನದಲ್ಲಿ ವಿಚಿತ್ರ ಚಿಂತನೆಗಳನ್ನು ಅಳವಡಿಸಿಕೊಂಡರು. ಇದರಿಂದಾಗಿ ಸಮಾಜದ ಮತ್ತೊಂದು ಕರಾಳ ಜೀವನವನ್ನು ತಮ್ಮದಾಗಿಸಿಕೊಂಡರು.

ಇದೊಂದು ಕೇವಲ ಕಥೆ ಪುಸ್ತಕವಲ್ಲ. ಇದು ಒಂದು ಸಮಾಜದ ದರ್ಪಣವಾಗಿದೆ. ಹೆಣ್ಣು ಮಕ್ಕಳ ರಕ್ಷಣೆ ಪೋಷಕರ ಜವಾಬ್ದಾರಿ ಎಂದು ಅರಿತು ಮಕ್ಕಳಿಗೆ ಪ್ರಾಯದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳ ಬಗ್ಗೆ ಅರಿವನ್ನು ಮೂಡಿಸಿ ಅವರಲ್ಲಿ ಎಚ್ಚರಿಕೆಯ ನಡೆ ಹಾಗೂ ಒಳ್ಳೆಯ ಮಾರ್ಗದ ತಿಳುವಳಿಕೆಯನ್ನು ನೀಡಿ,ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಕೂಡ ಪ್ರೀತಿ ಎಂಬ ಸುಳ್ಳಿನ ಜಾಲದಲ್ಲಿ ಬೀಳದಂತೆ ತಮ್ಮ ಆಸೆಗಳನ್ನು ಹಿಡಿತದಲ್ಲಿಡಲು ಎಚ್ಚರಿಕೆಯನ್ನು ವಹಿಸಬೇಕಾಗಿದೆ.

ಎಲ್ಲರ ಕಣ್ಣು ತೆರೆಸುವ ಈ ಆತ್ಮಕಥೆಯನ್ನು ಸುಂದರವಾದ ಕನ್ನಡ ಅಕ್ಷರದಲ್ಲಿ ಪೋಣಿಸಿ “ವಿದ್ಯಾವಂತ ವೇಶ್ಯೆಯ ಆತ್ಮ ಕಥೆ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಓದುಗ ಪ್ರಿಯರಿಗೆ ಓದಲು ಲಭ್ಯಗೊಳಿಸಿದ ಡಾ. ನಾಗ ಹೆಚ್ ಹುಬ್ಳಿ ಅವರಿಗೆ ಅಭಿನಂದನೆಗಳು ಹಾಗೂ ಶ್ರೀ ವಸುಧೇoದ್ರ ಅವರಿಗೂ ಹಾಗೂ ಛಂದ ಪುಸ್ತಕದ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.


  • ಹೆಚ್. ವಿ.ಮೀನ – ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW