‘ಬರ್ಡ್ಸ್ ಆಫ್ ಪ್ಯಾರಡೈಸ್ ಫಾರ್ಮ್’ ಪ್ರಪಂಚ

ಮುಟ್ಟಲು ಅಸಾಧ್ಯವೆನ್ನುವ ಎಷ್ಟೋ ಪ್ರಾಣಿಗಳನ್ನು ಹತ್ತಿರದಿಂದ ನೋಡುವುದಷ್ಟೇ ಅಲ್ಲ, ಅವುಗಳನ್ನು ಮುಟ್ಟಬಹುದು ಅದುವೇ ಈ ಸ್ಥಳ. ಅದು ಯಾವ ಸ್ಥಳ? ಎಲ್ಲಿದೆ ? ಅಲ್ಲಿಗೆ ಹೋದಾಗ ನಮ್ಮ ಅನುಭವ ಹೇಗಿತ್ತು ಎನ್ನುವುದನ್ನು ತಪ್ಪದೆ ಈ ಲೇಖನವನ್ನು ಓದಿ…

ನನ್ನ ಸ್ನೇಹಿತೆಯ ಕುಟುಂಬ ಸಿಂಗಾಪೂರ ಜಾಲಿ ಟ್ರಿಪ್ ಮುಗಿಸಿಕೊಂಡು ತಮ್ಮ ಟ್ರಿಪ್ ಕತೆಯನ್ನು ಹೇಳಲು ನನ್ನ ಮನೆಗೆ ಬಂದಿದ್ದರು. ನಾನು ಅವಳ ಏಳು ವರ್ಷದ ಮಗನಿಗೆ ಕೇಳಿದೆ ‘ಸಿಂಗಾಪೂರಲ್ಲಿ ತುಂಬಾ ಇಷ್ಟಾವಾಗಿದ್ದು ಏನು?’…

ಆ ಪುಟ್ಟು ಹುಡುಗ ಸಂತೋಷದಿಂದ ಆತುರ ಆತುರವಾಗಿ ” ಆಂಟಿ, ಅಲ್ಲಿ ಮೇಕಾವ್ ಪಕ್ಷಿ ನನ್ನ ಕೈ ಮೇಲೆ ಬಂದು ಕೂತಿತ್ತು. ಅಲ್ಲಿ ಮೊಲ ದೊಡ್ಡ ಗಾತ್ರದ್ದು ಇತ್ತು , ಮುಟ್ಟಿದ್ರೆ ವುಲನ್ ತರ ಸಾಫ್ಟ್ ಆಗಿತ್ತು. ಅದನ್ನ ಎತ್ತಕೊಂಡು ಮುದ್ದು ಮಾಡಿದೆ. ಹಾವು ಕೂಡಾ  ಇತ್ತು. ಯಪ್ಪಾ… ಅದನ್ನ ನೋಡಿ ಭಯಾನೇ ಆಯ್ತು’.

‘ಅದನ್ನ ಕೈಯಲ್ಲಿ ಹಿಡಿದ್ಯಾ?’… ಅಂತ ನಾನು ಕೇಳಿದೆ. ಅದಕ್ಕೆ ಅವನು ‘ಭಯ ಆಯ್ತು ಆಂಟಿ… ಅಪ್ಪ ಅದನ್ನ ಕುತ್ತಿಗೆಗೆ ಸುತ್ತಿಸಿಕೊಂಡರು’… ಎಲ್ಲವನ್ನು ಆಶ್ಚರ್ಯದಿಂದ ಮುದ್ದು ಮುದ್ದಾಗಿಯೇ ಉತ್ತರ ಕೊಟ್ಟ.

ನಮ್ಮ ದೇಶದಲ್ಲಿಯೂ ಆ ತರ ಪ್ರಾಣಿಗಳನ್ನ ಮುಟ್ಟುವ ಹಾಗಿದ್ರೆ ಮಕ್ಕಳಿಗೆ ಕಲಿಕೆಯಲ್ಲಿ ಏನೋ ಆಸಕ್ತಿ ಮೂಡುತ್ತಿತ್ತಲ್ಲವೇ?. ಪ್ರಾಣಿಗಳನ್ನು ಮುಟ್ಟಬೇಕು ಎಂದರೆ ಹೊರ ದೇಶಕ್ಕೆ ಹೋಗಬೇಕಾ?. ಎಲ್ಲರಿಗೂ ಹೊರದೇಶಕ್ಕೆ ಹೋಗೋಕೆ ಆಗುತ್ತಾ?….ಎಂದು ಮನಸ್ಸಿನಲ್ಲಿಯೇ ಪ್ರಶ್ನೆಗಳನ್ನು ಹಾಕಿಕೊಂಡೆ.

ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯ ಅಗರದಲ್ಲಿ ಪ್ರಾಣಿಗಳನ್ನು ಮುಟ್ಟಿ ಆನಂದಿಸುವ ಅವಕಾಶ ನನ್ನ ಕುಟುಂಬಕ್ಕೆ ಸಿಕ್ಕಿತು.

ಆ ಜಾಗಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿದ್ದೆವು. ಹೊರಗಿನಿಂದ ಬೋರ್ಡ್ ನೋಡಿದಾಗ ಒಳಗೆ ಹೋಗೋದೋ… ಬೇಡವೋ… ಅನ್ನುವ ಗೊಂದಲವಿತ್ತು. ಕಾರಣ ಪ್ರವೇಶ ಶುಲ್ಕ ಒಬ್ಬರಿಗೆ 200 ರೂಪಾಯಿ. ಶುಲ್ಕವನ್ನು ನೋಡಿ  ಮನಸ್ಸು, ಕಾಲುಗಳು ಹಿಂದೇಟು ಹಾಕಿದವು. ಅಷ್ಟೊಂದು ದುಡ್ಡು ಕೊಟ್ಟು ಹೋಗಿ ಅಲ್ಲಿ ಏನು ಇಲ್ಲವೆಂದರೆ ಮೋಸ ಹೋಗುತ್ತೇವೆ ಅನ್ನುವ ಭಯ. ಹೊರಗಿನಿಂದ ಆ ಜಾಗವನ್ನು ನೋಡಿದರೆ ಆ ಉರಿ ಬಿಸಿಲಿನಲ್ಲಿ ಖಾಲಿ ಖಾಲಿಯಾಗಿ ಕಾಣಿಸಿತು. ಸ್ವಲ್ಪ ಹೊತ್ತು ನಾನು , ಮಕ್ಕಳು ಹಿಂದೇಟು ಹಾಕಿ ಕೊನೆಗೆ ಆಗಿದ್ದು ಆಗಲಿ ಎಂದು ಧೈರ್ಯ ಮಾಡಿ ನಾಲ್ಕು ಜನಕ್ಕೆ 800 ರೂಪಾಯಿ ಕೊಟ್ಟು ಪದ್ದಣ್ಣ ಟಿಕೆಟ್ ಪಡೆದ. ಟಿಕೆಟ್ ಪಡೆದು ಒಳಗೆ ಹೋಗುತ್ತಿದ್ದಂತೆ ಕೈಗೆ ಹಸಿರು ಬ್ಯಾಡ್ ಕಟ್ಟಿದರು. ಹಳದಿ, ಹಸಿರು ಬಣ್ಣದ ಮೇಲೆ ಗುಂಪುಗಳನ್ನಾಗಿ ಮಾಡಿ ಒಳಕ್ಕೆ ಬಿಟ್ಟರು.

ಒಳಗೆ ಹೋಗ್ತಿದ್ದ ಹಾಗೆ ಹಸಿರು ಗುಂಪಿನವರಿಗೆ ಒಂದು ತರಗತಿ ಶುರುವಾಯಿತು. ಅದು ಸಾಮಾನ್ಯ ತರಗತಿಯಾಗಿರಲಿಲ್ಲ. ಪ್ರಾಣಿ, ಪಕ್ಷಿಗಳ ಕುರಿತು ಅಲ್ಲಿನ ಗೈಡ್ ಮಾಹಿತಿ ನೀಡುವ ಕ್ಲಾಸ್. ಅತಿ ಶ್ರದ್ದೆಯಿಂದ ನಾವು ಕೂತಿದ್ದೆವು. ಒಂದೊಂದೆ ಪ್ರಾಣಿಗಳನ್ನು ಅವರು ಕೈಯಲ್ಲಿ ಹಿಡಿದು ಇದು ಗಿನ್ನಿಪಿಗ್, ಇದು ಮೊಲ, ಇದು ಪೋರ್ಕ್ಯುಪೈನ ಇವುಗಳ ವಿಶೇಷತೆ ಏನು, ಆದರ ಆಯಸ್ಸು, ಆದರ ಕಷ್ಟ ಸುಖವನ್ನು ಗೈಡ್ ಚನ್ನಾಗಿಯೇ ವಿವರಿಸಿದರು.

ಆ ತರಗತಿ ಮುಗಿಸಿಕೊಂಡು ಹೊರಗೆ ಬಂದರೆ ಮತ್ತೊಂದು ತರಗತಿ. ಅದು ಉಷ್ಟ್ರ ಪಕ್ಷಿ, ಎಮು ಪಕ್ಷಿಯ ತರಗತಿ. ಆದರ ವಿಶೇಷತೆಯನ್ನು ಹೇಳಿದರು. ಎಮು ಮರಿಗಳನ್ನ ಮುದ್ದು ಮಾಡುವಾಗ ತಲೆ ಸವರದೇ ಕುತ್ತಿಗೆ ಸವರಬೇಕು ಎಂದು ಪಾಠದ ಹೈ ಲೈಟ್ ಆಗಿತ್ತು. ಅದರಂತೆ ಅದರ ಕುತ್ತಿಗೆ ಸವರುತ್ತಿದ್ದಾಗ ಒಂದು ಎಮು ಇದ್ದಕ್ಕಿದಂತೆ ಲಾಂಗ್ ಜಪ್ ಮಾಡಿದಾಗ ನಾನು ನನ್ನ ಮಕ್ಕಳು ಭಯ ಬಿದ್ದೆವು. ಆಮೇಲೆ ಅದರ ಮೊಟ್ಟೆಯತ್ತ ನಮ್ಮ ಗಮನ ಹರಿಯಿತು. ಎಮು ಮೊಟ್ಟೆ ನೀಲಿ ಬಣ್ಣದಾಗಿತ್ತು ಹಾಗೂ ಉಷ್ಟ್ರಪಕ್ಷಿ ಮೊಟ್ಟೆ ದೊಡ್ಡ ಗಾತ್ರ ಬಿಳಿ ಬಣ್ಣದಾಗಿತ್ತು. ಎರಡು ಮೊಟ್ಟೆಯ ಕವಚಗಳು ಗಟ್ಟಿಯಾಗಿದ್ದವು. ಜೀವಂತ ಎಮು ಮೊಟ್ಟೆಯನ್ನು ಕೈಯಲ್ಲಿ ಹಿಡಿದಾಗ ಭಾರವಾಗಿತ್ತು. ಆ ಮೊಟ್ಟೆಯನ್ನು ಮನುಷ್ಯರು ತಿನ್ನುತ್ತಾರೆ… ಒಂದು ಮೊಟ್ಟೆಯಲ್ಲಿ ಎರಡು ಆಮೇಟ್ ಮಾಡಬಹುದು ಎಂದು ಗೈಡ್ ಹೇಳಿದಾಗ, ಮನುಷ್ಯರು ಇದನ್ನು ಕೂಡಾ ಬಿಡೋಲ್ವಾ ಎಂದೇ. ಅದಕ್ಕೆ ಅವರ ನಗುವೇ ಉತ್ತರವಾಗಿತ್ತು.

This slideshow requires JavaScript.

ಅದು ಮುಗಿದ ಮೇಲೆ ಮತ್ತೊಂದು ಸೂಪರ್, ಫೆಂಟಾಸ್ಟಿಕ್ ತರಗತಿ ಒಂದಿತ್ತು. ಆ ಪ್ರಾಣಿಗೆ ಇಂಗ್ಲಿಷ್ ನಲ್ಲಿ ಏನೇನೋ ಬೇರೆ ಬೇರೆ ಹೆಸರಿದ್ದರೂ ನಾನು ಮಾತ್ರ ನನ್ನ ಭಾಷೆಯಲ್ಲಿ ಬಣ್ಣ ಬಣ್ಣದ ಉಸರವಳ್ಳಿ ಅಂತಲೇ ಕರದೆ. ನೋಡೋಕೆ ದೊಡ್ಡ ಗಾತ್ರದಲ್ಲಿ ಇತ್ತು. ಮುಟ್ಟೋಕೆ ಕೈ ಬೇಡಾ ಬೇಡಾ ಅನ್ನುತ್ತಿದ್ದರಿಂದ ನಾನು ಊಸರವಳ್ಳಿಯನ್ನು ಮುಟ್ಟಲಿಲ್ಲ. ದೂರದಿಂದಲೇ ನೋಡಿ ಆನಂದಿಸಿದೆ. ಅದನ್ನು ಅದರ ಗೂಡಿನೊಳಗೆ ಹಾಕಿದ ಮೇಲೆ ಗೈಡ್ ಕೈಗೆ ಬಂದದ್ದು ಬುಸ್ ಬುಸ್ ನಾಗಪ್ಪಾ…. ಅದು ಅಪರೂಪದ ಬಿಳಿ ಬಣ್ಣದ ಹಾವು. ಅದರ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ ಅದನ್ನು ಹಿಡಿಯಲು ಕೈಗೆ ಕೊಟ್ಟರು. ನನ್ನ ಅಕ್ಕರೆ (ನನ್ನ ಮಗ ) ಹಾವನ್ನು ಧೈರ್ಯದಿಂದ ಕೈಯಲ್ಲಿ ಹಿಡಿದು ನೋಡಿದ. ನನಗೆ ಧೈರ್ಯ ಸಾಲದ ಕಾರಣಕ್ಕೆ ನಾನು ಮಗನ ಹಿಂದೆ ನಿಂತು ಪಟ ತಗೆಸಿಕೊಂಡೆ..

ಎಲ್ಲ ತರಗತಿ ಮುಗಿದಮೇಲೆ ರಿಲ್ಯಾಕ್ಸ ಆಗಲು ಮೀನು ಹಿಡಿಯುವುದು, ಕುದುರೆ ಸವಾರಿ, ಬರ್ಮ ಬ್ರಿಡ್ಜ್ ಗಳಿದ್ದವು . ನಾನು ಬರ್ಮ್ ಬಿಡ್ಜ್ ಮೇಲೆ ನಡೆಯಲು ಪ್ರಯತ್ನ ಪಟ್ಟೆ. ಅಲ್ಲಿದ್ದವರೆಲ್ಲ ನನ್ನ ಸಾಹಸವನ್ನು ಎದ್ದೆದ್ದು ನಿಂತು ನೋಡುತ್ತಿದ್ದರು. ಆದರೆ ಕಾಲಿಟ್ಟು ಸ್ವಲ್ಪ ದೂರ ಹೋಗುತ್ತಿದ್ದಂತೆ ಬ್ರಿಡ್ಜ್ ಓಲಾಡಲು ಶುರು ಮಾಡಿತು. ಅಲ್ಲಿಂದ ಕೆಳಗೆ ಬಿದ್ದರೆ 1000 ಮೀನುಗಳಿಗೆ  ಒಳ್ಳೆ ಊಟವಾಗೋದು ಗ್ಯಾರಂಟಿ ಅನ್ನೋ ಭಯದಲ್ಲಿ ಕಾಲು ನಡುಗೋಕೆ ಶುರು ಮಾಡಿದವು. ನನ್ನನ್ನು ನಿಂತು ನೋಡುತ್ತಿದ್ದವರಿಗೆಲ್ಲ ನಕ್ಕರು ಪರವಾಗಿಲ್ಲ ನಾನು ವಾಪಾಸ್ ಹೋಗುವುದೇ ಲೇಸ್ ಎಂದು ನಿರ್ಧಾರ ಮಾಡಿ ವಾಪಾಸ್ ಬಂದೆ.  ಅಲ್ಲಿದ್ದವರೆಲ್ಲ ನನ್ನನ್ನೇ ನೋಡುತ್ತಿದ್ದರು. ನಾನು ತಲೆ ಕೆಡೆಸಿಕೊಳ್ಳದೆ ಮುಂದೆ ಹೋದೆ.

ಎಲ್ಲ ಮುಗಿಸಿ ವಾಪಾಸ್ ಕಾರ್ ನತ್ತ ಬರುವಾಗ ಆ ಪ್ರಾಣಿ ಹಾಗೂ ಜಾಗದ ಮಾಲೀಕ ಕಾರ್ತಿಕ್ ಪ್ರಭು ಅವರ ಪರಿಚಯವಾಯಿತು. ಅವರದೊಂದಿಗೆ ಪ್ರಾಣಿಗಳ ಖರ್ಚು ವೆಚ್ಚದ ಕುರಿತು ವಿಚಾರಿಸಿದೆ. ನಾಲ್ಕು ಎಕರೆ ಜಾಗದಲ್ಲಿ ಹೊರ ದೇಶದ ಪ್ರಾಣಿಗಳನ್ನು ಸಾಕಿದ್ದು. ತಿಂಗಳಿಗೆ ಅದರ ಖರ್ಚು ವೆಚ್ಚ ಕನಿಷ್ಠವೆಂದರೂ 4 ಲಕ್ಷ ರೂಪಾಯಿ ಬರುತ್ತದೆ ಎಂದು ಅವರಿಂದ ಕೇಳಿದಾಗ ಅವರನ್ನು ಮತ್ತೊಮ್ಮೆ ಮೇಲಿಂದ ಕೆಳಗೆ ನೋಡಿದೆ. ಸುಮಾರು 25 ವರ್ಷದ ಆಸುಪಾಸಿನ ಹುಡುಗ ಒಂದು ಜಾಗದಲ್ಲಿ ಸುಮಾರು ಪ್ರಾಣಿಗಳನ್ನು ಸಾಕುವುದಷ್ಟೇ ಅಲ್ಲ, ಅವುಗಳಿಗೆ ಊಟದ ವ್ಯವಸ್ಥೆ , ಆರೋಗ್ಯ ತಪ್ಪಿದಾಗ ಚಿಕಿತ್ಸೆ ಕೊಡಿಸುವ ವ್ಯವಸ್ಥೆ, ಗೈಡ್ ಗಳಿಗೆ ಸಂಬಳ ಕೊಡುವ ಜವಾಬ್ದಾರಿ ಎಲ್ಲವನ್ನು ಸಶಕ್ತವಾಗಿ ನಿಭಾಯಿಸುವುದನ್ನು ನೋಡಿ ಆ ಹುಡುಗನ ಶ್ರದ್ದೆಯನ್ನು ಮೆಚ್ಚಿದೆ.

ಬರುವಾಗ ಕೊನೆಯದಾಗಿ ‘ನಿಮ್ಮಲ್ಲಿ ಇಷ್ಟೆಲ್ಲ ಜಾಗವಿದೆ. ಸಾಧ್ಯವಾದರೆ ದೇಸಿ ನಾಯಿಗಳ ವಿಶೇಷತೆ ಬಗ್ಗೆ ಜನರಿಗೆ ಮಾಹಿತಿ ಕೊಡಿ, ವಿದೇಶಿ ತಳಿಗಳ ವ್ಯಾಮೋಹ ಕಮ್ಮಿಯಾಗಿ ದೇಸಿ ನಾಯಿಗಳಿಗೆ ಆಶ್ರಯ ಸಿಗಬಹುದು. ಮತ್ತು ಇದರಿಂದ  ಬೀದಿನಾಯಿಗಳ ಸಂಖ್ಯೆ ಕಮ್ಮಿಯಾಗಬಹುದು ಎಂದು ನಮ್ಮ ಸಲಹೆಯನ್ನು ಕೊಟ್ಟಾಗ  ಕಾರ್ತೀಕ ಅವರು ಅದನ್ನು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ. ಅದರ ಬಗ್ಗೆ ಯೋಚಿಸುವುದಕ್ಕೆ ಭರವಸೆ ನೀಡಿ ಬಿಳ್ಕೊಟ್ಟರು.

ಇಷ್ಟೆಲ್ಲ ಕತೆ ಹೇಳಿದಮೇಲೆ ಆ ಜಾಗ ಯಾವುದು ಎನ್ನುವ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿರಬಹುದು, ಆ ಜಾಗದ ಹೆಸರು Birds Of Paradise Farm. ಕನಕಪುರ ರಸ್ತೆಯ ಆಗರ ಗ್ರಾಮಕ್ಕೆ ಹತ್ತಿರವಾಗಿದೆ. ಪ್ರಾಣಿಗಳ ಬಗ್ಗೆ ಪುಸ್ತಕದಲ್ಲಿ ಓದುವುದಕ್ಕಿಂತ Birds Of Paradise Farm ಗೆ ಹೋಗಿ ಅಲ್ಲಿ ಪ್ರಾಣಿಗಳನ್ನು ಹತ್ತಿರದಿಂದ ನೋಡಬಹುದು ಮತ್ತು ಮುಟ್ಟಬಹುದು. ಇದು ಮಕ್ಕಳ ಕಲಿಕೆಗೆ ಸಹಾಯವಾಗುವುದು. ಅಲ್ಲಿ ೨ ತಾಸು ಹೇಗೆ ಕಳೆಯಿತು ಎನ್ನುವುದೇ ಗೊತ್ತಾಗುವುದಿಲ್ಲ. ಪ್ರಾಣಿಗಳ ಪ್ರಪಂಚದಲ್ಲಿ ತಲ್ಲೀನವಾಗಿ ಹೋಗುತ್ತೇವೆ.

ಕಾರ್ತಿಕ ಅವರ ಮೊಬೈಲ್ ಸಂಖ್ಯೆ : 7019666135


  • ಶಾಲಿನಿ ಹೂಲಿ ಪ್ರದೀಪ್ – WWW.AAKRUTIKANNADA.COM  ಆಕೃತಿಕನ್ನಡ ಸಂಪಾದಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW