ರಾತ್ರಿಯೆಲ್ಲಾ ಸೊಳ್ಳೆಗಳಿಂದ ನಿದ್ರೆಯಾಗಿರಲಿಲ್ಲ. ಸುಯ್ಯನೆ ಬೀಸುವ ಚಳಿಗಾಳಿಗೆ ಬೆಳಗಿನ ಐದು ಗಂಟೆಗೆ ಎಚ್ಚರವಾಯಿತು. ಸ್ಲೀಪಿಂಗ್ ಬ್ಯಾಗಿನಿಂದ ಆಮೆಯಂತೆ ಗೋಣು ಹೊರಗಾಕಿ ಕಣ್ಣು ತೆರೆದು ನೋಡಿದರೆ.. ಬೆಳದಿಂಗಳ ಬೆಳಕು ಆಶ್ರಮದ ಅಂಗಳದಲ್ಲಿ ಚೆಲ್ಲಿತ್ತು. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಶೂಲಪಾಣಿ ಬೆಟ್ಟಗಳ ತೊಪ್ಪಲು ಪ್ರದೇಶದ, ಕಾಡಿನ ಆರಂಭದಲ್ಲಿರುವ “ಮನಮೋಹಕ ಚಿಕ್ಕ ಆಶ್ರಮ” ಗಿರಿನಾರ ಆಶ್ರಮ. ಈ ಪುಟ್ಟ ಆಶ್ರಮದ ಸನ್ಯಾಸಿ ಓರ್ವ ಯುವಕ, ಇಬ್ಬರು ಕೆಲಸಗಾರರು. “ನರ್ಮದೇ ಹರ್!!” ಅಂತ ಆಶ್ರಮದ ಅಂಗಳಕ್ಕೆ ನಡೆದರೆ ಸಾಕು, ಚಹಾ, ಊಟ, ವಸತಿ ಜೊತೆ ಆದರ ಮತ್ತು ವಿಶೇಷ ಆತಿಥ್ಯ.
ರಾತ್ರಿಯೆಲ್ಲಾ ಕಚ್ಚಿದ ಪಹಾಡಿಯ ರಾಕ್ಷಸಿ ಸೊಳ್ಳೆಗಳಿಂದ ನಿದ್ರೆ ಅರೆಬರೆಯಾಗಿತ್ತು. ಸುಯ್ಯನೆ ಬೀಸುವ ಚಳಿಗಾಳಿಗೆ ಬೆಳಗಿನ ಐದು ಗಂಟೆಗೆ ಎಚ್ಚರವಾಯಿತು. ಸ್ಲೀಪಿಂಗ್ ಬ್ಯಾಗಿನಿಂದ ಆಮೆಯಂತೆ ಗೋಣು ಹೊರಗಾಕಿ ಕಣ್ಣು ತೆರೆದು ನೋಡಿದರೆ.. ಬೆಳದಿಂಗಳ ಬೆಳಕು ಆಶ್ರಮದ ಅಂಗಳದಲ್ಲಿ ಚೆಲ್ಲಿತ್ತು. ಬೆಟ್ಟಗಳೆಡೆ ದೃಷ್ಟಿ ಎಸೆದರೆ ಬೆಳದಿಂಗಳ ಬೆಳಕಿನಲ್ಲಿ ಗುಡ್ಡಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು.

ತಣ್ಣನೆಯ ಗಾಳಿ ಇದ್ದರೂ ಎದ್ದು ಅಂಗಳಕ್ಕೆ ಬಂದವನೆ, ಬೆಟ್ಟಗಳನ್ನೆ ನೋಡುತ್ತಾ ನಿಂತೆ. ಈ ಸಮಯ ಅಮೃತ ಘಳಿಗೆ. ಹಾಗೆ ಸುತ್ತಲೂ ನೋಡುತ್ತಾ ನಿಂತವನ ಏಕಾಂತವನ್ನು ಕದಡಿದ್ದು ಆಶ್ರಮದ ಸನ್ಯಾಸಿಯ ಧ್ವನಿ.. “ಚಳಿ ಇದೆ ಈ ಕಡೆ ಬನ್ನಿ.. ಚಹಾ ತಗೊಳ್ಳಿ..!!” ಎಂದು.. ಚಹಾ ಕೊಟ್ಟರು.
ಅವರ ಕಾಲಿಗೆ ನಮಸ್ಕರಿಸಿ.. ಚಹಾ ಕುಡಿದೆ. ಆ ಸನ್ಯಾಸಿ ನಾನು ಆಶ್ರಮಕ್ಕೆ ಬಂದಾಗಿನಿಂದ ಅರೆಬೆತ್ತಲೆಯಾಗಿ ಚಟ್ಟುವಟಿಕೆಯಿಂದ ಓಡಾಡುತ್ತಿದ್ದ. ಸೊಂಟಕ್ಕೊಂದು ಕೇಸರಿ ಬಟ್ಟೆ ಸುತ್ತಿದ್ದಾನೆ ಅಷ್ಟೇಯಾ. ನಾನು ಟೋಪಿ, ಸ್ವೆಟರ್ ಹಾಕಿಕೊಂಡು ಚಳಿಯ ಹಿಡಿತದಿಂದ ಪಾರಗಲು ಪ್ರಯತ್ನಿಸಿದ್ದೆ ಆದರೆ ಆತ ಅರೆಬೆತ್ತಲೆ ಸಂತ. ಚಳಿಗೆ ಜಗ್ಗದೆ ಸಾಮಾನ್ಯವೆಂಬಂತೆ ಒಡಾಡಲು ತಮ್ಮ ಶರೀರವನ್ನು ಹುರಿಗೊಳಿಸಿಕೊಂಡಿದ್ದಾರೆ.
ಸನ್ಯಾಸಿಗೆ ವಂದಿಸಿ, 7:30 ಕ್ಕೆ ಬೆಟ್ಟಗಳ ತೊಪ್ಪಲಿ ಏರಿಳಿತ ರಸ್ತೆಗಳಲ್ಲಿ ನಂದಿಯನ್ನು ಓಡಿಸತೊಡಗಿದೆ. ಬೆಟ್ಟಗುಡ್ಡಗಳ ಏರಿಳಿತಗಳಲ್ಲಿ ನಡೆಯಲು ಮೈ ಕಸುವು ಬಸಿದು ಹೋಗುತ್ತೆ.
ಸುತ್ತಲೂ ಆವರಿಸಿರುವ ಮರಗಳು.. ಅರೆಬೋಳು ಬೆಟ್ಟಗಳು, ಸೂರ್ಯನ ಕಿರಣ ರಸ್ತೆಗಿಳಿಯಲು ಮರದ ಎಲೆಗಳ ಸಂದುಗಳನ್ನು ಪಾರು ಮಾಡಿ, ಚಿಮ್ಮಬೇಕಿತ್ತು… ಮೋಟಾರುಗಳ ದಟ್ಟಣೆಯಿದ್ದುದರಿಂದ ಪಕ್ಷಿಗಳ ಕಲರವವಿಲ್ಲ.

ಕಾಡಿನ ಪಾದತಲದಲ್ಲಿನ ಹಳ್ಳಿಗಳಲ್ಲಿ ಎಳೆಯ ಬಿಸಿಲು, ಮರದ ಕೆಳಗೆ ಶಾಲೆಯ ಬಸ್ಸಿಗಾಗಿ ಕಾಯುತ್ತಿರುವ ಮಕ್ಕಳು, ಚಹಾ ಹೀರುತ್ತಾ ಮನೆಯ ಬಾಗಿಲಿಗೆ ಕುಕ್ಕರುಗಾಲಿನಲ್ಲಿ ಕೂತ ಮುದಕರು, ಜನ ತುಂಬಿಕೊಂಡು ಕೆಲಸ ಅರಸುತ್ತಾ ಹೊರಟ ಟಂಟಂ ಗಾಡಿಗಳು, ಹಾಲಿನ ಗಾಡಿಯ ಹಿಂಭಾಗ ಪಾಳೆಯಲ್ಲಿ ನಿಂತ ಹೆಂಗಳೆಯರು, ದನಗಳೆಡೆಗೆ ಕೈ ಬೀಸುತ್ತಾ, ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣು ಕೀಲಿಸಿ ನಡೆಯುತ್ತಿರುವ ದನಗಾಹಿ.. ಹಳ್ಳಿಯ ಲವಲವಿಕೆಯ ಜೀವಕಳೆಗಳಿವು.
ಹೀಗೆಯೇ 24 ಕಿ.ಮೀ ಸವೇಸಿದಾಗ ಬಿಸಿಲು ಮೆಲ್ಲಗೆ ನೆತ್ತಿಯ ಸುಡತೊಡಗಿತು. “ಮೆಡಿಸಾಂಗ್” ಎಂಬ ಊರಿನಲ್ಲಿನ “ಮೇಕಲಸುತಾ” ಆಶ್ರಮಕ್ಕೆ ನಡೆದೆ. ತಣ್ಣನೆಯ ನೀರಿನ ಸ್ನಾನದ ನಂತರ ಪುಷ್ಕಳ ಭೋಜನವು ಆಯಿತು.
ಆಶ್ರಮಗಳಲ್ಲಿ ಬೆಳಗಿನ 11:30 ಕ್ಕೆಲ್ಲಾ ಊಟ ಶುರು ಮತ್ತೆ ಸಾಯಂಕಾಲದ 7 ಗಂಟೆಗೆ ಭೋಜನ. ಚಹಾ ದಿನಕ್ಕೇರಡು ಬಾರಿ ಅಷ್ಟೇ.. ದೇಹ ದಣಿಯದೆ ಜೀವಿಸಲು ಇಷ್ಟು ಸಾಕು. ಆರೋಗ್ಯಕರ ಆಹಾರ ಪದ್ಧತಿಯಿದು.
ಇಲ್ಲಿಂದ ನಂದಿಯ ಜೊತೆ ನಡೆಯಲು ಪ್ರಾರಂಭ ಮಾಡಿದೆ, ಏಕೆಂದರೆ ನಾನು “ಶೂಲಪಾಣಿ ವನ್ಯಜೀವಿ ಅಭಯಾರಣ್ಯ” ಪ್ರವೇಶಿಸಿದೆ. ಯಾವುದಾದರೂ ಪ್ರಾಣಿ ಕಾಣಬಹುದೆ ಅಂತ.
ಅಳಿಲು, ಮುಂಗುಸಿ, ಒಂದು ಕಾಡಿನ ಬೆಕ್ಕು ಅಷ್ಟೇ.. ಕಂಡಿದ್ದು.

ಈ ಅಭಯಾರಣ್ಯದಲ್ಲಿ ಹಾರುವ ಅಳಿಲುಗಳು ಇವೆಯಂತೇ, ತೇಜಸ್ವಿಯವರ “ಕರ್ವಾಲೋ” ಕಾದಂಬರಿಯ ರೂವಾರಿ. ಶೂಲಪಾಣಿತ ಅಭಯಾರಣ್ಯ ಭಯಂಕರವಾಗಿದೆ, ಅಲ್ಲಲ್ಲಿ “ನರ್ಮದಾ ನದಿ”ಯ ಉಪನದಿಗಳು ಹರಿದು ಹೋಗಿವೆ. ಮನಸೊರೆಗೊಳ್ಳುವ ಆಹ್ಲಾದಕರ ವಾತಾವರಣ.
ಅಭಯಾರಣ್ಯದ ಮಧ್ಯದಲ್ಲಿ ಸಿಗುವ “ಡೇಡಿಯಾಪಾಡಾ” ಊರಿಗೆ ಬರುವಷ್ಟೋತ್ತಿಗೆ ಮಧ್ಯಾಹ್ನ 3 ಗಂಟೆ. ನನ್ನ ನಂದಿಯ ಜೊತೆ ನೋಡಿದ ದಾರಿಹೊಕನೊಬ್ಬ “ಚಹಾ” ಕುಡಿಸಿ, ಕೈ ಮುಗಿದು ನಡೆದ. ಈ ನರ್ಮದಾ ಖಂಡದಲ್ಲಿ ದೇವಿಯ ಲೀಲೆಗಳು ಅಪಾರ. ಬಯಸುವ ಮುನ್ನವೇ ಸಾಕ್ಷಾತ್ಕಾರ. ಡೇಡಿಯಾಪಾಡಾದಿಂದ ಮುಂದೆ ಸಾಗುವ ರಸ್ತೆ ಕಾಡಿನ ದುರ್ಗಮ ದಾರಿಯಾಗಿತ್ತು, ಅಲ್ಲಲ್ಲಿ ದುರಸ್ತಿ ಕಾರ್ಯವು ಚಾಲ್ತಿಯಲ್ಲಿದ್ದುದರಿಂದ “ಅಂಕಲೇಶ್ವರ” ರಸ್ತೆಯತ್ತ ನಂದಿಯನ್ನು ತಿರುಗಿಸಿದೆ.

ರಸ್ತೆಯ ಮೇಲೆ ಓಡುತ್ತಾ.. ಸಂಜೆಯ ಸಮಯಕ್ಕೆ ಬಂದು ತಲುಪಿದ್ಧು “ಹಿಡಿಂಬಾ ವನ” ಕ್ಷೇತ್ರದಲ್ಲಿನ ಊರು “ನೇತ್ರಾಂಗ”. ಊರಿನ ಮಧ್ಯದ ರಾಧಾಕೃಷ್ಣ ದೇವಸ್ಥಾನದ ಪ್ರಾಂಗಣದಲ್ಲಿ ವಸತಿ. ದೇವಸ್ಥಾನದ ಅರ್ಚಕರೆ ಊಟದ ವ್ಯವಸ್ಥೆ ಮಾಡಿ, ಮಲಗಲು ದೇವಸ್ಥಾನದ ಎದುರಿನ ಕಟ್ಟೆಯನ್ನು ಸ್ವಚ್ಚ ಮಾಡಿಸಿ ಕೊಟ್ಟರು. ನಂದಿಯನ್ನು ಪಕ್ಕದ ಸರಳಿಗೆ ಕಟ್ಟಿ, ಲಗೇಜುಗಳನ್ನು ಪಕ್ಕಕ್ಕಿರಿಸಿಕೊಂಡು ಮಲಗಿರುವೆ.
ಆಕಾಶದಲ್ಲಿ ಓಡುವ ಮೋಡಗಳು, ಮೋಡಗಳು ಮರೆಯಿಂದ ಇಣುಕಿ ನೋಡುವ ಪೂರ್ಣ ಚಂದಿರ.
ಮುಂದಿನ ಪಯಣ ನಾಳೆಗೆ…
ನರ್ಮದೇ ಹರ್
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
- ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ
