ಕತ್ತರಿಸಿ ಬೇರ್ಪಡಿಸುವ ಕತ್ತರಿ ಬೇಡ, ಒಂದಾಗಿಸಲು ಹೊಲಿಯುವ ಸೂಜಿ ಬೇಕು!… ಸಿದ್ಧಾಪುರ ಶಿವಕುಮಾರ್ ಅವರ ‘ಭಾವ ರೇಖೆಗಳ ನಡುವೆ’ ಹನಿಗವಿತೆಗಳ ಸಂಕಲನದಲ್ಲಿ ಬರುವ ಸುಂದರ ಸಾಲುಗಳು. ಈ ಪುಸ್ತಕದ ಕುರಿತು ಶಿಕ್ಷಕಿ ಡಿ.ಶಬ್ರಿನಾ ಮಹಮದ್ ಅಲಿ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಭಾವ ರೇಖೆಗಳ ನಡುವೆ
ಲೇಖಕರು : ಸಿದ್ಧಾಪುರ ಶಿವಕುಮಾರ್
ಪ್ರಕಾರ : ಹನಿಗವಿತೆಗಳ ಸಂಕಲನ
ಕೆಲವರಿಗೆ ತಮ್ಮ ಹವ್ಯಾಸಗಳೇ ಬದುಕಾಗಿ ಬದಲಾಗುತ್ತವೆ! ಅವುಗಳಿಲ್ಲದೇ ಅವರ ಇರುವಿಕೆಯನ್ನ ಊಹಿಸಲು ಸಾಧ್ಯವಾಗುವುದಿಲ್ಲ! ಅಂಥವರ ಸಾಲಿಗೆ ಸೇರುವ ನಮ್ಮ ಚಳ್ಳಕೆರೆಯ ಚಿತ್ರಕಲಾವಿದ, ಸಾಹಿತಿ ಶಿವಕುಮಾರ ಸಿದ್ದಾಪುರ ಅವರು, ಗುರುವಿಲ್ಲದೆ ಕುಂಚ ಹಿಡಿದು ಬಿಡಿಸಿದ ಚಿತ್ರಗಳು ಸದ್ದು ಮಾಡಿದ್ದರ ಪ್ರಭಾವದಿಂದ ಚಿತ್ರಕಲೆ ಇವರಿಗೆ ಜೀವನದ ಉತ್ಸಾಹ ತುಂಬಿತು. ಇಷ್ಟಕ್ಕೆ ಸುಮ್ಮನಿರದ ಇವರು ತಮ್ಮ ಅನುಭವಗಳನ್ನು ವ್ಯಕ್ತಪಡಿಸಲು ‘ಕುಂಚ’ದ ಜೊತೆ ಜೊತೆಗೆ ‘ಲೇಖನಿ’ ಹಿಡಿಯುವ ಮೂಲಕ ತಮ್ಮ ಬದುಕಿಗೆ ಮತ್ತೊಂದು ಸುಂದರ ಸ್ವಚ್ಛಂದ ತಿರುವು ಪಡೆದುಕೊಂಡರು ಎಂದೇ ಹೇಳಬಹುದು! ಹೀಗೆ ಪ್ರಾರಂಭದಲ್ಲಿ ಶಿವಕುಮಾರ ಅವರಿಗೆ ಬದುಕಿನ ಭಾಗವಾಗಿದ್ದ ಕುಂಚ & ಲೇಖನಿಗಳು ದಿನಕಳೆದಂತೆ ಅವರ ಶ್ವಾಸದ ಉಚ್ವಾಸ ನಿಚ್ವಾಸಗಳಾಗಿ (ಬದುಕಾಗಿ) ಬದಲಾಗಿವೆ ಎಂಬುದು ನನ್ನ ಮನದಿಂಗಿತ!
ಶಿವಕುಮಾರ್ ಅವರ ಕುಂಚ ಮತ್ತು ಲೇಖನಿಯಿಂದ ಅರಳಿದ ‘ಭಾವ ರೇಖೆಗಳ ನಡುವೆ’ ಹನಿಗವಿತೆಗಳ ಸಂಕಲನವಾಗಿದೆ. ಬೆಂಗಳೂರಿನ ಕಗ್ಗೆರೆ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಗೆ ಅರ್ಥಪೂರ್ಣ ಮುನ್ನುಡಿಯನ್ನು ಚಿತ್ರಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಅವರು, ಬೆನ್ನುಡಿಯನ್ನು ಪ್ರಕಾಶಕರಾದ ಕಗ್ಗೆರೆ ಪ್ರಕಾಶ್ ಅವರು ಬರೆದಿದ್ದು ಇದರಲ್ಲಿ ಭಿನ್ನ ವಿಷಯಗಳನ್ನಾಧರಿಸಿದ ಒಟ್ಟು ೧೦೮ ಹನಿಗವಿತೆಗಳಿದ್ದು ಪ್ರತಿ ಹನಿಗವಿತೆಗೆ ಸೂಕ್ತ ರೇಖಾಚಿತ್ರಗಳನ್ನು ಕವಿಯೇ ಬಿಡಿಸಿರುವುದು ಈ ಕೃತಿಯ ವಿಶೇಷವಾಗಿದೆ.

ಈ ಕೃತಿಯ ಒಳಹೋಗುವ ಮುನ್ನ ಓದುಗರಾಗಿ ನಾವು ಯಾವುದೇ ಒಂದು ಕೃತಿಯಿಂದ ಏನನ್ನು ನಿರೀಕ್ಷಿಸುತ್ತೇವೆ ಎಂಬುದರತ್ತ ಗಮನ ಹರಿಸಿದರೆ,ನನ್ನ ಪ್ರಕಾರ ಪ್ರತಿಯೊಂದು ಕೃತಿಯು ಮೊದಲು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿರಬೇಕು, ಸಮಾಜದಲ್ಲಿನ ಸರಿ ತಪ್ಪುಗಳನ್ನ,ನ್ಯಾಯ ಅನ್ಯಾಯಗಳನ್ನ ಸ್ಪಷ್ಟವಾಗಿ ತಿಳಿಸುತ್ತಾ ‘ಸಮಸಮಾಜ’ದ ಪರಿಕಲ್ಪನೆಯನ್ನ ಗಟ್ಟಿಯಾಗಿ ಕೂಗಿ ಹೇಳಬೇಕು. ಕಲ್ಪನೆಗಿಂತ ಹೆಚ್ಚಾಗಿ ವಾಸ್ತವಾಂಶಗಳನ್ನ ಒಳಗೊಂಡಿರಬೇಕು. ಅಷ್ಟೇಯಲ್ಲದೇ ನಾವು ಆ ಕೃತಿಯನ್ನ ಓದುತ್ತಾ ಓದುತ್ತಾ ನಮ್ಮಲ್ಲಿನ ಧನಾತ್ಮಕ ,ಋಣಾತ್ಮಕ ಭಾವನೆಗಳನ್ನು ಗುರುತಿಸಿಕೊಂಡು (ಹೆಮ್ಮೆ ಪಡುವಂತಿದ್ದರೆ ಹೆಮ್ಮೆ ಪಟ್ಟು, ತಿದ್ದಿಕೊಳ್ಳುವಂತಿದ್ದರೆ ತಿದ್ದಿಕೊಂಡು) ನಮ್ಮನ್ನ ನಾವು ಆತ್ಮಾವಲೋಕನ ಮಾಡಿಕೊಳ್ಳಲು ಆ ಕೃತಿ ಅನುವು ಮಾಡಿಕೊಡಬೇಕು ಎಂಬುದು ನನ್ನ ಆಶಯ! ನನ್ನ ಈ ಎಲ್ಲಾ ನಿರೀಕ್ಷೆಗಳನ್ನು ಸಿದ್ಧಾಪುರ ಶಿವಕುಮಾರ್ ಅವರ ‘ಭಾವ ರೇಖೆಗಳ ನಡುವೆ’ ಕೃತಿ ಒಳಗೊಂಡಿದೆ ಎಂಬುದೆ ನನಗೆ ಅತ್ಯಂತ ಖುಷಿ ಕೊಟ್ಟ ಸಂಗತಿ ಎಂದು ತುಂಬಾ ಹೆಮ್ಮೆಯಿಂದ ಹೇಳುತ್ತಾ ಅವುಗಳಲ್ಲಿ ಕೆಲವನ್ನ ತಮ್ಮ ಮುಂದೆ ಪ್ರಸ್ತುತಪಡಿಸುತಿದ್ದೇನೆ.
ಆತ್ಮಾವಲೋಕನ
ಲೇಖನಿ ಇದೆ ಎಂದು
ತೋಚಿದಂತೆ ಗೀಚಿದರೆ
ಆಗದು ಕವನ
ಜೀವವಿದೆಯೆಂದು
ಮೂಢರಂತೆ ಜೀವಿಸಿದರೆ
ಆಗದು ಜೀವನ
ಎಲ್ಲದುಕ್ಕು ಇರಬೇಕು
ಆತ್ಮಾವಲೋಕನ!
ಇತ್ತೀಚಿನ ದಿನಗಳಲ್ಲಿ ದಿಢೀರ್ ಕವಿಗಳ,ಲೇಖಕರ,ಕಾದಂಬರಿಕಾರರ ಸಂಖ್ಯೆ ಹೆಚ್ಚಾಗುತ್ತಿದೆ! ಇದು ಖುಷಿ ಪಡುವ ಸಂಗತಿಯೇ,ಆದರೆ ಬರೆಯುವ ಎಲ್ಲಾ ಬರಹಗಾರರ ಬರಹಗಳು ಎಷ್ಟು ಪ್ರಬುದ್ಧತೆಯಿಂದ ಕೂಡಿವೆ ಎಂಬುದನ್ನ ಆಲೋಚಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ! ಒಬ್ಬ ಬರಹಗಾರನಿಗೆ ಹಿಂದಿನ & ಇಂದಿನ ವಿಚಾರಗಳ ಬಗೆಗಿನ ತಿಳುವಳಿಕೆ, ಸತ್ಯ ಅಸತ್ಯಗಳ ಗುರುತಿಸುವಿಕೆ, ಸರಿ ತಪ್ಪುಗಳ ಎತ್ತಿಹಿಡಿಯುವಿಕೆಗೆ ಬೇಕಾದ ಜ್ಞಾನ, ಸಂಯಮ& ಸೂಕ್ಷ್ಮತೆ ಬರವುದು ಆಳವಾದ ಅಧ್ಯಯನದಿಂದ ಮಾತ್ರ! ಇಂದಿನ ಬರಹಗಾರರಲ್ಲಿರುವ ಇದರ ಕೊರತೆಯ ಕುರಿತಂತೆ ಕೆಲ ಹಿರಿಯ ಸಾಹಿತಿಗಳು ತಮ್ಮ ಸಂದರ್ಶನಗಳಲ್ಲಿ ಕಳವಳ ವ್ಯಕ್ತಪಡಿಸಿರುವುದನ್ನ ನಾವಿಲ್ಲಿ ನೆನೆಯಬಹುದು. ಅಂತಹದೇ ಕಾಳಜಿಯನ್ನು ಹೊಂದಿದ ಕವಿ ಶಿವಕುಮಾರ ಅವರು ಓದದೇ ತೋಚಿದ್ದೆಲ್ಲಾ ಬರೆದರೆ ಕವನ ಆಗದು ಎಂದು ಹೇಳಿರುವುದು ಸಮಂಜಸವಾಗಿದೆ. ಮುಂದುವರೆದು ‘ಎಲ್ಲದಕೂ ಇರಬೇಕು ಆತ್ಮಾವಲೋಕನ’ ಎಂದು ಹೇಳಿರುವುದು ಕವಿಗೆ ಜೀವನದ ಬಗೆಗಿರುವ ಗಾಂಭೀರ್ಯತೆಯನ್ನು ಪ್ರಸ್ತುತಪಡಿಸುತ್ತದೆ. ಈ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ವರ್ತನೆ ಕುರಿತಂತೆ ಆತ್ಮಾವಲೋಕನ ಮಾಡಿಕೊಂಡರೆ ಭವಿಷ್ಯತ್ತಿನಲ್ಲಿ ಆಗುವ ತಪ್ಪುಗಳ ಸಂಖ್ಯೆ ಕಡಿಮೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಕವಿಯ ಆಂತರ್ಯದ ತುಡಿತವಾಗಿದೆ. ಸರ್ವಜ್ಞನ ಒಂದು ತ್ರಿಪದಿ ಕೂಡ ಇದನ್ನೇ ಸಾರಿ ಸಾರಿ ಹೇಳುತ್ತದೆ.

ತನ್ನ ತಾನರಿದವಂಗೆ ಭಿನ್ನ ಭಾವನೆಯಿಲ್ಲ
ತನ್ನವರು ಇಲ್ಲ ಪರರಿಲ್ಲ ,ತ್ರೈಭುವನವೇ
ತನ್ನೊಳಗೆ ಇಹುದು ಸರ್ವಜ್ಞ.
ಆತ್ಮಾವಲೋಕನ ಮಾಡಿಕೊಂಡಾಗಲೇ ನಮ್ಮನ್ನು ನಾವು ಅರಿಯಲು ಸಾಧ್ಯ! ಇಲ್ಲವಾದಲ್ಲಿ ನಮ್ಮ ನಡೆ ನುಡಿಯಲ್ಲಿನ ತಪ್ಪು ಒಪ್ಪುಗಳು ನಮಗೆ ಗೋಚರಿಸುವುದೇ ಇಲ್ಲ ಅಲ್ಲವೆ?
ಗೆಲುವು
ನಾನು ನಿನಗೆ ಸೋಲಬೇಕು
ನೀನು ನನಗೆ ಸೋಲಬೇಕು
ಗೆಲುವು ನಮ್ಮಿಬ್ಬರ
ಬದುಕಿಗೆ ಸಲ್ಲಬೇಕು
ನಮ್ಮ ಹಿರಿಯರ ದಾಂಪತ್ಯ ಹೇಗೆ ಇರುತಿತ್ತು ಎಂಬುದಕೆ ದ.ರಾ.ಬೇಂದ್ರೆಯವರ ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು, ಬಳಸಿಕೊಂಡೆವು ಅದನೆ ನಾವು ಅದಕು ಇದಕು ಎದಕೊ’ ಎಂಬ ಕವಿತೆ ಸಾಕ್ಷಿಯಾಗಿದೆ. ಇನ್ನು ಕುವೆಂಪು ಅವರು,’ನಾ ನಿನಗೆ ನೀನೆನಗೆ ಜೇನಾಗುವಾ ರಸದೇವ ಗಂಗೆಯಲಿ ಮೀನಾಗುವ,ಹೂವಾಗುವ,ಹಣ್ಣಾಗುವ,ಪ್ರತಿರೂಪಿ ಭಗವತಿಗೆ ಮುಡಿಪಾಗುವ’ ಎಂದಿದ್ದಾರೆ. ಇಂತಹ ಗಟ್ಟಿ ಬಾಂಧವ್ಯ ಈಗಿನ ದಂಪತಿಗಳಲ್ಲಿ ಇದಿಯಾ?ಎಂದು ನಮ್ಮನ್ನು ಯಾರಾದರೂ ಕೇಳಿದಾಗ ‘ಹೌದು’ ಎಂದು ಹೇಳುವುದಕೆ ಕಷ್ಟ ಆಗಬಹುದು. ಕಾರಣ ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ದೀರ್ಘ ಆಯಸ್ಸನ್ನು ಕಳೆದುಕೊಳ್ಳುತ್ತಿವೆ! ಕಣ್ಣು,ಮುಚ್ಚಿ ತೆಗೆಯುವುದರೊಳಗೆ ಮದುವೆ,ವಿಚ್ಚೇದನ ಎರಡು ಆದರೂ ಆಶ್ಚರ್ಯಪಡುವಂತಿಲ್ಲ! ಗಂಡ ಹೆಂಡತಿ ಜೊತೆಗಿದ್ದರೆ ಮಾತ್ರ ಅದು ‘ಜಾಯಿಂಟ್ ಫ್ಯಾಮಿಲಿ’ ಎಂಬ ಭಾವನೆ ಮೂಡಲು ಶುರುವಾಗಿದೆ. ದಂಪತಿಗಳಲ್ಲಿ ‘ನಾನು’ ಎನ್ನುವ ಮದ ನೆತ್ತಿಗೇರಿ ಎಷ್ಟೋ ಮಕ್ಕಳು ಹೆತ್ತವರು ಬದುಕಿದ್ದರೂ, ಅವರ ಜೊತೆ ಒಂದಾಗಿ ಜೀವಿಸುವ ಅವಕಾಶವನ್ನು ಕಳೆದುಕೊಂಡು ಭಾವನಾತ್ಮಕವಾಗಿ ಕುಗ್ಗುವ ಚಿತ್ರಣ ಕಣ್ಮುಂದೆ ಹಾದುಹೋಗುತ್ತಿದೆ. ಈ ರೀತಿ ಆಗದಿರಲು ದಂಪತಿಗಳು ಅಹಂಕಾರ ಬಿಟ್ಟು ಸೋತು ಗೆಲ್ಲುವ ಮನೋಭಾವ ಬೆಳೆಸಿಕೊಂಡು ಅವರಿಬ್ಬರು ಸೇರಿ ‘ಬದುಕು’ನ್ನ ಗೆಲ್ಲುವಂತೆ ಮಾಡಬೇಕು ಎಂದು ಹೇಳಿರುವ ಕವಿ ಶಿವಕುಮಾರ ಅವರ ಈ ಹನಿಗವಿತೆ ನಮ್ಮ ದಾಂಪತ್ಯ ಕುರಿತು ನಮ್ಮನ್ನ ನಾವು ‘ಆತ್ಮಾವಲೋಕನ’ ಮಾಡಿಕೊಳ್ಳುವುದಕೆ ಅನುವು ಮಾಡಿಕೊಟ್ಟಿದೆ.
ಸದಾಚಾರ
ಕೆಟ್ಟದ್ದನ್ನು ಕಾಣದ ಹಾಗೆ
ಇರಲಿ ನನ್ನ ಕಣ್ಣುಗಳಿಗೆ
ಸದಾ ಕಟ್ಟೆಚ್ಚರ
ತಪ್ಪನ್ನು ನುಡಿಯದ ಹಾಗೆ
ಇರಲಿ ನನ್ನ ನಾಲಿಗೆಗೆ
ಸದಾ ಸದ್ವಿಚಾರ!
ಶಿವಕುಮಾರ್ ಅವರ ಈ ಹನಿಗವತೆ ಜಗಜ್ಯೋತಿ ಬಸವಣ್ಣನವರ “ಕಳಬೇಡ ಕೊಲಬೇಡ. ಹುಸಿಯ ನುಡಿಯಲು ಬೇಡ’ಈ ವಚನವನ್ನು ನೆನಪಿಸುತ್ತದೆ ಜೊತೆಗೆ ಈ ವಚನ ಸಾರುವ ಮುಖ್ಯಸಂದೇಶವನ್ನ ಈ ಹನಿಗವಿತೆ ಹೇಳಹೊರಟಿದೆ. ಮನುಷ್ಯನ ಮನಸ್ಸು ‘ಮರ್ಕಟ’ ಇದ್ದ ಹಾಗೆ! ಮನುಷ್ಯ ತನ್ನ ಮನಸ್ಸನ್ನ ನಿಗ್ರಹಿಸಿ ತನ್ನ ಜ್ಞಾನೇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಂಡರೆ ಸಮಾಜದಲ್ಲಿ ಆಗುವ ಅಪರಾಧಗಳ, ದೌರ್ಜನ್ಯಗಳ, ಅನ್ಯಾಯಗಳ ಸಂಖ್ಯೆ ಇಳಿಮುಖವಾಗುತ್ತದೆ ಎಂಬುದು ಕವಿಯ ಅಂಬೋಣವಾಗಿ, ತಮ್ಮ ಕಣ್ಣುಗಳಿಗೆ ತಾವೇ ಕೆಟ್ಟದ್ದನ್ನು ನೋಡದ ಹಾಗೆ ಕಟ್ಟೇಚ್ಚರ ಇರಬೇಕೆಂದು ಹೇಳಿಕೊಂಡಿದ್ದಾರೆ. ಮುಂದುವರೆದು ನನ್ನ ನಾಲಿಗೆಗೆ ಸದಾ ಇರಲಿ ಸದ್ವಿಚಾರ ಎಂದು ಹೇಳುವ ಮೂಲಕ ಅವರ ವ್ಯಕ್ತಿತ್ವಕ್ಕೆ ಸುಂದರ ರೂಪ ನೀಡುವ ಹಾದಿಯಲ್ಲಿ ಸಾಗಿ, ಒಬ್ಬ ಮನುಷ್ಯ ಇಷ್ಟನ್ನು ಪಾಲಿಸದರೆ ಸಾಕು ಅವನು ಸಮಾಜಕ್ಕೆ ‘ದೊಡ್ಡ ಆಸ್ತಿ’ಯಾಗುತ್ತಾನೆ ಎಂಬ ಭರವಸೆಯನ್ನ ಈ ಹನಿಗವಿತೆಯಲ್ಲಿ ಮೂಡಿಸಿದ್ದಾರೆ.
ಬೆಸುಗೆ
ಕತ್ತರಿಸಿ ಬೇರ್ಪಡಿಸುವ
ಕತ್ತರಿ ಬೇಡ
ಒಂದಾಗಿಸಲು ಹೊಲಿಯುವ
ಸೂಜಿ ಬೇಕು!
ಎಂತಹ ಮಾರ್ಮಿಕ ಸಾಲುಗಳು ನೋಡಿ! ಪ್ರಸ್ತುತ ಸಮಾಜದಲ್ಲಿನ ಜನಗಳ ಕಚ್ಚಾಡುವಿಕೆ,ತಿಕ್ಕಾಡುವಿಕೆಯಿಂದ ನೊಂದ ಕವಿ ಹೇಳಹೊರಟಿರುವುದು ಜಾತಿ,ಧರ್ಮಗಳ ಹೆಸರಲ್ಲಿ ತಮ್ಮ ಸ್ವಾರ್ಥಕ್ಕಾಗಿ ಜನರ ಸಾಮರಸ್ಯವನ್ನು ಕತ್ತರಿಸಿ ತುಂಡು ತುಂಡಾಗಿ ಮಾಡಿ ಬೇರ್ಪಡಿಸಿ ‘ಕತ್ತರಿ’ ಕೆಲಸ ಮಾಡುವ ಮನಸ್ಸುಗಳು ಬೇಡ; ಜಾತ್ಯಾತೀತವಾಗಿ,ಭಾವೈಕ್ಯತೆ ಮೂಡಿಸಿ ‘ಸಮಸಮಾಜ’ದ ಪ್ರತೀಕವಾಗಿ ಬಾಳುವಂತೆ ಪ್ರೇರೇಪಿಸಿ ‘ಸೂಜಿ’ಯಂತೆ ಒಂದಾಗಿಸುವ ಕೆಲಸ ಮಾಡುವ ಸುಮನಸ್ಸುಗಳು ಬೇಕಾಗಿದೆ ಎಂದು ಪರಿತಪಿಸಿದ್ದಾರೆ.
ಇವಷ್ಟೇಯಲ್ಲದೇ ‘ನಿಸ್ವಾರ್ಥ’ ಹನಿಗವಿತೆಯಲ್ಲಿ, ಭೂಮಿ ಬಾನನ್ನು ಬಯಸುವುದು ಬೇಡುವದು ತನಗಾಗಿ ಅಲ್ಲ ತನ್ನವರಿಗಾಗಿ ಎಂದು ಹೇಳುವ ಮೂಲಕ ಪ್ರಕೃತಿಯ ನಿಸ್ವಾರ್ಥವನ್ನ ಸ್ಮರಿಸಿದ್ದಾರೆ, ‘ಋಣಿ’ ಯಲ್ಲಿ ದಣಿದು ದುಡಿಯದೆ ಧಣಿಯಾದವನು ಧರೆಗೆ ಋಣಿಯಾಗಿರುತ್ತಾನೆ;ದಣಿದು ದುಡಿದು ಧಣಿಯಾದವನಿಗೆ ಧರೆಯೇ ಋಣಿಯಾಗಿರುತ್ತದೆ ಎಂದು ಹೇಳುವ ಮೂಲಕ ‘ಕಾಯಕ’ದ ಮಹತ್ವವನ್ನ ಸಾರಿದ್ದಾರೆ,’ಹಸಿವು’ನಲ್ಲಿ ಮನುಷ್ಯನಿಗೆ ಅನ್ನದ ಹಸಿವಿಗಿಂತ ಜ್ಞಾನದ ಹಸಿವು ಹೆಚ್ಚಾಗಿ ಇರಬೇಕೆಂದಿದ್ದಾರೆ, ತಮ್ಮ ಬಡತನದ ಕಷ್ಟದ ದಿನಗಳನ್ನು ನೋಡಿ ಗಹಗಹಿಸಿ ನಕ್ಕ ಗೆಳೆಯನನ್ನ ಮಾರ್ಮಿಕವಾಗಿ ‘ಗುರು’ಎಂದಿದ್ದಾರೆ, ಹೀಗೆ ನಮ್ಮನ್ನು ಚಿಂತನೆಗೆ ಒಳಪಡಿಸುವಂತಹ ಸಾಲು ಸಾಲು ಹನಿಗವಿತೆಗಳು ‘ಭಾವ ರೇಖೆಗಳ ನಡುವೆ’ಯಲ್ಲಿದ್ದು ಸಮಾಜದ ಒಳಿತಿಗಾಗಿ ಕಿರಿದರಲ್ಲಿ ಹಿರಿ ಅರ್ಥ ಹೇಳುವಲ್ಲಿ ಸಫಲರಾಗಿರುವ ಸಿದ್ಧಾಪುರ ಶಿವಕುಮಾರ್ ಅವರು ತಮ್ಮ ಕುಂಚ & ಲೇಖನಿಯಿಂದ ಪ್ರತಿ ಕನ್ನಡಿಗರ ಮನೆ ಮನೆ ಮಾತಾಗಲಿ ಎಂದು ಮನಸಾರೆ ಆಶಿಸುತ್ತೇನೆ.
- ಡಿ.ಶಬ್ರಿನಾ ಮಹಮದ್ ಅಲಿ – ಶಿಕ್ಷಕಿ,ಲೇಖಕಿ,ಚಳ್ಳಕೆರೆ.
