‘ಮನದ ಗೋಡೆಗಳ ನಡುವೆ’ ಕವನ – ನಾಗರಾಜ ಜಿ. ಎನ್. ಬಾಡ

ನಾಲ್ಕು ಗೋಡೆಗಳಂತಾಗಿದೆ ಮನಸ್ಸು, ಒಲವು ನಲಿವುಗಳ ಬಂಧನವಿಲ್ಲ… ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಈಗೀಗ ಹಳ್ಳಿ ಪೇಟೆಯ ಜೀವನದಲ್ಲಿ
ಅಂತ ವ್ಯತ್ಯಾಸ ಏನೂ ಕಾಣುತ್ತಿಲ್ಲ
ಅಲ್ಲಿ ಇಲ್ಲಿ ಎರಡೂ ಕಡೆ ದೊಡ್ಡ ದೊಡ್ಡ
ಬಂಗಲೆಗಳು ಎದ್ದು ನಿಂತಿವೆಯಲ್ಲ

ದೊಡ್ಡ ದೊಡ್ಡ ಬಂಗಲೆಗಳ ನಡುವೆ
ಒಬ್ಬಂಟಿ ಜೀವಗಳೇ ನೆಲೆಸಿವೆಯಲ್ಲಿ
ಹಿರಿದಾಗುತ್ತಿರುವ ಮನೆಗಳ ನಡುವೆ
ಮನಸ್ಸು ಮಾತ್ರ ಕಿರಿದಾಗುತ್ತಿದೆ ಅಲ್ಲಿ

ಪ್ರೀತಿಯ ಆತ್ಮೀಯತೆಯ ಕೊರತೆ
ಅಲ್ಲಿ ಇಲ್ಲಿ ಎದ್ದು ಕಾಣುತ್ತಿದೆಯಲ್ಲ
ಸಂಕುಚಿತ ಮನೋಭಾವ ಮಾತ್ರವೇ
ಎಲ್ಲೆಡೆಯೂ ಎದ್ದು ತೋರುತ್ತಿದೆಯಲ್ಲ

ನಾಲ್ಕು ಗೋಡೆಗಳಂತಾಗಿದೆ ಮನಸ್ಸು
ಒಲವು ನಲಿವುಗಳ ಬಂಧನವಿಲ್ಲ
ಪ್ರೀತಿ ಪ್ರೇಮದ ಯಾವುದೇ ಮಾತುಗಳಿಲ್ಲ
ನಗುನಗುವ ಮನಸ್ಸುಗಳ ಸ್ಪಂದನವಿಲ್ಲ

ನೋವುಗಳ ಹಂಚಿಕೊಳ್ಳುವ ಜೀವಗಳಿಲ್ಲ
ನಲಿವುಗಳಿಗೆ ಸ್ಪಂದಿಸುವ ಬಂಧನವಿಲ್ಲ
ಎಲ್ಲಾ ವರ್ಗದ ಜನರ ಕಾಟಚಾರದ ಬದುಕು
ಇಂದಿನ ಆಧುನಿಕ ಆರ್ಥಿಕತೆಯ ಕೆಡುಕು

ಮಕ್ಕಳಲ್ಲೂ ಕಾಣುತ್ತಿಲ್ಲ ಮುಗ್ಧತೆಯ ಭಾವ
ಸಂಬಂಧಗಳಲ್ಲಿ ಹೊಂದಾಣಿಕೆಯ ಅಭಾವ
ಬದಲಾಗುತ್ತಿದೆ ಮಾನವನ ಮೂಲ ಸ್ವಭಾವ
ತುಂಬಿಕೊಂಡಿದ್ದಾರೆ ಮನಸ್ಸಿನೊಳಗೆ ನೋವ

ಮನೆಯ ಗೋಡೆಗಳ ನಡುವೆ ಒಲವ ಮಾತಿಲ್ಲ
ಹೊರಗೂ ಒಳಗೂ ಹೊಂದಾಣಿಕೆ ಕಾಣುತ್ತಿಲ್ಲ
ಕಲಹದಲ್ಲಿ ಬದುಕು ಕೊನೆಯಾಗುತ್ತಿದೆಯಲ್ಲ
ತೋರಿಕೆಯ ಜೀವನದಿ ಯಾವುದೇ ಹುರುಳಿಲ್ಲ


  • ನಾಗರಾಜ ಜಿ. ಎನ್. ಬಾಡ, ಕುಮಟ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading