ಕಲಾ ಭಾಗ್ವತ್ ಅವರ ‘ಮುಂಬಾಪುರಿ’ ಅಂಕಣಗಳ ಸಂಕಲನದ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮುಂಬಾಪುರಿ
ಲೇಖಕರು : ಕಲಾ ಭಾಗ್ವತ್
ಪ್ರಕಾಶನ : ಕನ್ನಡ ವಿಭಾಗ, ಮುಂಬೈ
ನನ್ನ ಪ್ರೀತಿಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಕಲಾ ಭಾಗ್ವತ್ ಅವರು ಈಗಾಗಲೇ ಆರನೆಯ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅದರಲ್ಲಿ ಮೂರು ಕೃತಿಗಳನ್ನು ಕುರಿತು ಬರೆದಿರುವೆ. ಅವು: ಪ್ರಸಿದ್ದ ವೈದ್ಯರಾದ ಬಿ.ಎಂ.ಹೆಗಡೆ , ನನ್ನ ಮುಂಬಯಿ ಗೆಳೆಯರಾದ ಜಯಂತ ಕಾಯ್ಕಿಣಿ ಕುರಿತು ಜೀವ ಸ್ವರ ಹಾಗೂ ಅವರ ವಿಮರ್ಶಾ ಲೇಖನಗಳ ಸಂಕಲನ ಜಾಲಂದರ.

ಇದು ಅವರ ಐದನೆಯ ಕೃತಿ ಮುಂಬಾಪುರಿ. ನನ್ನ ಗೆಳೆಯರಾದ ಶಶಿಧರ ಹಾಲಾಡಿಯವರ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣಗಳ ಸಂಕಲನ. ಹೆಸರೆ ಹೇಳುವಂತೆ ಭಾರತದ ವಾಣಿಜ್ಯದ ರಾಜಧಾನಿ ಎನಿಸಿಕೊಂಡು ಮಿನಿ ಭಾರತವೆಂದು ಖ್ಯಾತವಾದ ಮುಂಬಯಿ ಮಹಾನಗರದ ಬಹುಮುಖಿ ಅನಾವರಣವನ್ನು ಒಳಗೊಂಡ ಬರಹಗಳು ಇಲ್ಲಿ ಇವೆ. ಈಗಾಗಲೆ ಮುಂಬಯಿ ಕುರಿತು ಇಂಗ್ಲಿಷ್ ನಲ್ಲಿ ಹಲವಾರು ಪುಸ್ತಕಗಳು ಕನ್ನಡದಲ್ಲಿ ಕೂಡಾ ಹಲವಾರು ಅಂಕಣ ಸಂಕಲನಗಳು ,ಸಂಶೋಧಾನಾ ಬರಹಗಳು ಪ್ರಕಟಗೊಂಡಿವೆ. ಇದಲ್ಲದೆ ಸೃಜನಶೀಲ ಕೃತಿಗಳು ಪ್ರಕಟವಾಗಿವೆ. ಏಕೆಂದರೆ ಅದೊಂದು ಮುಂಬಯಿ ಒಂದು ವಿಸ್ಮಯಗಳ ನಗರ. ಬಗೆದಷ್ಟೂ ಮುಗಿಯದ ಭಂಡಾರ. ಆದ್ದರಿಂದಲೆ ಅದನ್ನು ಕುರಿತು ಬರೆದ ಪ್ರತಿಯೊಬ್ಬರದು, ಅವರವರ ಅನುಭವಗಳ ತೆಕ್ಕೆಗೆ ಸಿಕ್ಕಷ್ಟು, ಮುಂಬಯಿ ಮಹಾಕಡಲಿನ ಒಂದೊಂದು ಹನಿಗಳು ಮಾತ್ರ. ಇಂತಹ ನಗರದ ಹತ್ತು ಹಲವು ಮುಖಗಳನ್ನು ಇಲ್ಲಿ ಲೇಖಕಿ ತಮಗೆ ದಕ್ಕಿದಷ್ಟನ್ನು ತಮ್ಮ ವಿಶಿಷ್ಟವಾದ ಮುಂಬಯಿಯ ಸಂಕೀರ್ಣ ಸಂಸ್ಕೃತಿಗೆ ತಕ್ಕ ಸಂಕರ ಭಾಷಾ ಶೈಲಿಯಲ್ಲಿ ಸೆರೆಹಿಡಿದಿದ್ದಾರೆ. ಅದರಲ್ಲಿ ತಕ್ಕಮಟ್ಟಿಗೆ ಸಫಲರಾಗಿದ್ದಾರೆ ಎನ್ನುವುದು ಈ ಮುಂಬಾಪುರಿ ಕೃತಿಯ ಹಿರಿಮೆ. ಅದಕ್ಕೆ ನಿದರ್ಶನವಾಗಿ ಇಲ್ಲಿ ಕೆಲವು ಅವರ ಬರಹದ ಆಯಾಮಗಳನ್ನು ನೋಡಬಹುದು. ಅವು: ಸಪ್ತ ದ್ವೀಪಗಳ ನಗರವಾದ ಮುಂಬಯಿಯ ಇತಿಹಾಸವನ್ನು ಅದಕ್ಕೆ ಸಾಕ್ಷಿಯನ್ನು ಇಲ್ಲಿ ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ. ಅದು ಕನ್ಹೇರಿ ಗುಹೆಗಳ ಬುದ್ದ ವಿಗ್ರಹಗಳಿರಬಹುದು, ಅಥವಾ ಎಲಿಫೆಂಟಾ ಗುಹೆಗಳ ಕಥನವಿರಬಹುದು ಅಥವಾ ವಸಾಯಿ ನಗರವಿಬಹುದು. ಮಾಹಿಮ್ , ಮಾತುಂಗ, ನಲಸೊಪರಾ( ಮೊದಲಿನ ನಲ ಇಲ್ಲಿ ಬಿಟ್ಟುಹೋಗಿದೆ) ಪ್ರಾಚೀನ ವಾಸಿಗಳಾದ ಕೋಲಿಗಳ ಪ್ರಾಚೀನ ಭಾಗವಾದ ಕೋಳಿವಾಡ ಇರಬಹುದು. ಇವುಗಳೊಂದಿಗೆ ಆಧನಿಕ ವ್ಯವಸ್ಥಿತ ನಗರವಾದ ನವಿ ಮುಂಬಯಿ ಇರಬಹುದು. ಕುಖ್ಯಾತ ಧಾರಾವಿ ಇಲ್ಲಿನ ಸಂಮಿಶ್ರ ಜೀವನ ವಿಧಾನದ ಮೇಲೆ ಬೆಳಕು ಚೆಲ್ಲಿದ್ದಾರೆ.
ಮುಂಬಯಿಗೆ ವಿಶಿಷ್ಟವಾದ ಅಲ್ಲಿನ ಮಳೆ ಬಂದು ನೆರೆಯುನ್ನುಂಟು ಮಾಡಿ ಜೋಪಡಾ ಪಟ್ಟಿಗಳನ್ನು ನೆಲಸಮಗೈಯುವ, ಬೇಸಿಗೆಯ ವಸಂತ ಮಾಸದಲ್ಲಿ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಲೆ ಸವಿವ ಆಮ್ ರಸ, ಸರ್ವಜನಪ್ರಿಯವಾದ ವಡಾಪಾವ್ ಅದರ ವಿವಿಧ ಖಾದ್ಯಗಳನ್ನು ಇಲ್ಲಿ ಬಾಯಲ್ಲಿ ನೀರೂರುವಂತೆ ವಿವರಿಸಿದ್ದಾರೆ.ಇಲ್ಲಿ ಬಿಟ್ಟು ಹೋಗಿರುವ ಅದನ್ನು ಕುರಿತ ಹಾಡು” ವಡಾ ಪಾವ್ ಖಾನೆವಾಲಾ ದೋಸ್ತೋ ಸಲಾಮ್ ಕರೊ” ಇದರಂತೆ ದುಡಿವ ಜನರಿಗೆ ಮನೆಗಳಿಂದ ಅವರಿಗೆ ಊಟ ತಂದುಕೊಡುವ ಪ್ರಸಿದ್ದ ಡಬ್ಬಾವಾಲಾಗಳ ಸಾಹಸಗಾಥೆಯ ಚಾತುರ್ಯವನ್ನು ಇಲ್ಲಿ ವರ್ಣಿಸಿದ್ದಾರೆ. ಇಲ್ಲಿ ಭಾರ ಹೊರುವ ಬೆವರ ಜೀವಿಗಳಾದ ಮಾಥಾದಿಗಳ ಪರಾಕ್ರಮವನ್ನು, ಮುಂಬಯಿಗರ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಜೀವಿಗಳಾದ ,ದೋಬಿ ಘಾಟ್ ನ ದೋಬಿಗಳು, ಹಾಲನ್ನು ಪೂರೈಸಲು ಕಾರಣವಾದ ಅಲ್ಲಿನ ಗೌಳಿಗರು ಹಸುಗಳಿಂದ ಹಾಲು ಕರೆಯುವ ಕ್ರಮ ಹಾಲಿನ ಕೊಟ್ಟ ಎನ್ನುವ ( ಗ್ರಾಮೀಣ) ವಿಶಿಷ್ಟ ಶಬ್ದವನ್ನು ಬಳಸಿದ್ದಾರೆ. ಮುಂಬಯಿಗೆ ರಂಗು ತುಂಬುವ ವಿಶಿಷ್ಟವಾದ ಸಾಮೂಹಿಕ ಹಬ್ಬಗಳಾದ ಗೋವಿಂದ ಆಲಾರೆ ಕೃಷ್ಣಜನ್ಮಾಷ್ಟಮಿ , ಸಾರ್ವಜನಿಕ ಗಣೇಶೋತ್ಸವ,( ಅದಕ್ಕೆ ಕಾರಣ ಕರ್ತರಾದ ಬಾಲಗಂಗಾಧರ ತಿಲಕ್ ಅವರ ಹೆಸರು ಲಾಲ್ ಬಾಗಚಾ ರಾಜಾ ಹೆಸರುಗಳು ಬಿಟ್ಟುಹೋಗಿವೆ) ಕನ್ನಡ ಅಧ್ಯಯನಕ್ಕೆ ಇಲ್ಲಿ ನಾಂದಿ ಹಾಡಿದ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಇತಿಹಾಸ ಅದರ ಪ್ರಕಟಣೆಗಳ ವಿಶಿಷ್ಟ ಸಾಧನೆ ಮತ್ತು ಈಗಿನ ಮುಖ್ಯಸ್ಥರ ಸಾಧನೆ ಸಿದ್ದಿಗಳನ್ನು ಇಲ್ಲಿ ವಿವರಿಸಿರುವುದಲ್ಲದೆ, ಇತರ ಇಲ್ಲಿನ ಕನ್ನಡ ಸಂಘ ಸಂಸ್ಥೆಗಳ ಜೊತೆಗೆ ಅದು ಹಾಸು ಹೊಕ್ಕಾಗಿರುವ ಪರಿಯನ್ನು, ಕನ್ನಡ ಚಿಣ್ಣರ ಬಿಂಬದ ಸಾಧನೆಯನ್ನು ಅದರ ರೂವಾರಿಗಳನ್ನು ಇಲ್ಲಿ ಉಲ್ಲೇಖಿಸಿ ಅವರು ಕನ್ನಡದ ವಿದ್ಯಾರ್ಥಿಯಾಗಿ ನ್ಯಾಯ ಸಲ್ಲಿಸಿದ್ದಾರೆ.

ಮುಂಬಯಿ ಷೇರು ಪೇಟೆಯ ಏರಿಳಿತಗಳನ್ನು, ಅದು ಮಧ್ಯಮವರ್ಗದಲ್ಲಿ ಉಂಟುಮಾಡುವ ತಲ್ಲಣಗಳನ್ನು ಕುರಿತು ಬರೆದಿದ್ದರೂ , ದೇಶದ ಆರ್ಥಿಕ ವ್ಯವಸ್ಥೆಯ ಸೂತ್ರಧಾರತ್ವವನ್ನು ವಹಿಸಿದ ರಿಸರ್ವಬ್ಯಾಂಕ್ ನ ಹೆಸರು ಬಿಟ್ಟುಹೋಗಿದೆ. ಇದು ಬಹುತೇಕ ಮಹಾರಾಷ್ಟ್ರಿಯರಿಗೆ ಉದ್ಯೋಗ ಕಲ್ಪಿಸಿದ ಗಿರಣಿಗಳ ನಗರ ಕೂಡಾ ಹೌದು ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ.
ಕಡಲಿನ ರಾಣಿಯಾದ ಇವಳ ಮಡಿಲಲ್ಲಿ ಹಲವಾರು ಜನಪ್ರಿಯ ಬೀಚುಗಳನ್ನು ಜುಹೂ, ಮೆರಿನ್ ಲೈನ್ಸ, ಬಾಂದ್ರಾ, ಚೌಪಾಟಿಗಳ ಅವುಗಳ ವೈಶಿಷ್ಟ್ಯಗಳನ್ನು ಇಲ್ಲಿ ಮರೆಯದೆ ಉಲ್ಲೇಖಿಸಿದ್ದಾರೆ.
ಮುಂಬೈನ ಜೀವನಾಡಿಯಾದ ಲೋಕಲ್ ರೈಲುಗಳು ಅವುಗಳಲ್ಲಿ ಪ್ರಯಾಣಿಸುವವರು ಅದರೊಳಗೆ ಪ್ರವೇಶಿಸಿ ವ್ಯಾಪಾರ ಮಾಡುವವರ ವೈವಿಧ್ಯಮಯ ಲೋಕದ ಅನಾವರಣ ಕೂಡಾ ಇಲ್ಲಿದೆ. ಮುಂಬಯಿ ನಗರದ ಸಂಕೀರ್ಣ ಸಂಸ್ಕೃತಿಯನ್ನು ಅಲ್ಲಿನ ಭಾಷೆಯಾದ ಮರಾಠಿ ಅಲ್ಲಲ್ಲಿ ಬಳಸಿದ್ದಾರೆ, ಘಮೇಲಿ, ಆಲಾರೆ, ಪುಡ್ಚೆ ವರ್ಷೆ ಲೌಕರ್ ಯಾ ಇತ್ಯಾದಿ. ಹಿಂದಿ ಭಾಷೆಯ ಹಲವು ಸೂಕ್ತಿಗಳನ್ನು ಉಲ್ಲೇಖ ಮಾಡಿದ್ದಾರೆ. ಹಲವಾರು ಕನ್ನಡ ಕವಿಗಳ ಕಾವ್ಯದ ಸಾಲುಗಳನ್ನು ಹದವರಿತು( ಕೆಲವು ಸಲ ಕವಿಗಳ ಹೆಸರು ಬಿಟ್ಟುಹೋಗಿದೆ) ಇಲ್ಲಿ ಉಲ್ಲೇಖ ಮಾಡಿರುವುದು ಪಂಪನ ತಿರುಳುಗನ್ನಡದ ದೇಸಿಯಂತೆ ಮೇಲಿನ ಭಾಷಾ ಬಳಕೆ ಅವು ಸಜೀವಗೊಳಿಸಿವೆ. ಗಮಲನ್ನು ಸೆರೆಹಿಡಿವಲ್ಲಿ ಸಫಲವಾಗಿವೆ.
ನಾಲ್ಕು ದಶಕಗಳ ಕಾಲ ನಾನು ಮುಂಬಯಿಯಲ್ಲಿದ್ದರೂ, ಕಾಣದ ಮುಂಬಯಿನ ಹಲವು ಮುಖಗಳನ್ನು, ನಾನು ಬಂದ ಕಾಲು ಶತಮಾನದ ನಂತರ ಮುಂಬಯಿಗೆ ಕಾಲಿಟ್ಟ ಈ ನನ್ನ ಶಿಷ್ಯೆ, ಕಾಣಿಸಿರುವುದಕ್ಕೆ ಅಭಿನಂದನೆ, ಪುಸ್ತಕ ಕಳಿಸಿ ಓದಲು ಅವಕಾಶ ಮಾಡಿಕೊಟ್ಟುದಕ್ಕೆ ವಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
