ಜೊತೆಯಲಿ ನೀನಿದ್ದರೆ ಎದೆಯಲಿ ಸಡಗರ

ಆ ಒಬ್ಬ ವ್ಯಕ್ತಿ ಈ ಪ್ರಪಂಚದಲ್ಲಿ ನನಗೆ ನೀನೆ ಕಣೇ. ಈ ಜೀವನವೆಂಬುವುದು ಸುಂದರವಾದ ಕಾವ್ಯ. ಆ ಕಾವ್ಯಕ್ಕೆ ರಾಗ ಮತ್ತು ತಾಳವಾಗುವುದು ನಮಗೆ ಸಿಗುವ ನಿಜವಾದ ಸಾಂಗತ್ಯ.  ಈ ಕೃತಿಯ ಕುರಿತು ಶ್ರೀಧರ ದೊಡಮನಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಗೆಳತಿಗೆ ಬರೆ(ಯ)ದ ಪತ್ರಗಳು
ಲೇಖಕರು : ಸಿದ್ದೇಶ್ ಸಿದ್ದನಮಠ
ಪ್ರಕಾರ : ಪ್ರವಾಸ ಕಥನ

ಪ್ರಿಯ ಗೆಳತಿ,

ಅಂದು ಮುಳ್ಳಯ್ಯನಗಿರಿಯ ಮಂಜಿನ ಮಧ್ಯದಲ್ಲಿ ಹಸಿರುಹಾಸಿದ ತಣ್ಣನೆಯ ನೆಲದಮೇಲೆ ನನ್ನೆದೆಗೆ ಒರಗಿ ಚಿಕ್ಕ ಮಗುವಿನಂತೆ “ಸದಾ ಕಾಲ ನಿನ್ನ ಜೊತೆಯಲ್ಲೇ ಇರಬೇಕು ಕಣೋ ಒಂದು ಕ್ಷಣವೂ ನಿನ್ನನ್ನು ಬಿಟ್ಟಿರಲು ಈ ನನ್ನ ಮನಸ್ಸು ಚಡಪಡಿಸುತ್ತದೆ ಜೊತೆಯಲ್ಲಿ ನೀನಿದ್ದರೆ ಎದೆಯಲ್ಲಿ ಸಡಗರ ಕಣೋ” ಎಂದು ತುಂಬಾ ಬಾವುಕಳಾಗಿ ನೀನಾಡಿದ ಮಾತು ಇಂದಿಗೂ ನನ್ನ ಮನಸಿನ‌ಲ್ಲಿ ಹಸಿರಾಗಿದೆ. ನನ್ನ ಜೊತೆ ಜೀವನದ ಕೊನೆ ಉಸಿರಿರುವವರೆಗೂ ಇರ್ತಿಯಾ ತಾನೆ? ಎಂದು ಕೈಯಲ್ಲಿ ಕೈಯಿಟ್ಟು ಕೇಳಿದ ನಿನ್ನ ಆಣೆ ಪ್ರಮಾಣ ಹೃದಯದಲ್ಲಿ ಶಾಶ್ವತ ಶಾಸನವಾಗಿ ಹೋಗಿದೆ ಕಣೇ. ಆ ದಿನ ನೀನಿಟ್ಟ ನಿನ್ನ ತುಟಿಯಂಚಿನ ಗುರುತುಗಳು ನನ್ನ ಕೆನ್ನೆಯ ಮೇಲೆ ಮುಷ್ಕರಮಾಡಿವೆ ಸದಾಕಾಲ ಜೊತೆಯಲಿರು ಎಂದು.

ಯಾವಾಗಲೂ ನಾನು ನಿನಗೆ ಹೇಳುತ್ತಿದ್ದೆ ನೆನಪಿದೆಯಾ. ನಾನು ಎಂದಿಗೂ ಏಕಾಂಗಿಯಾಗಿ ಜೀವಿಸಲು ಬಯಸುವುದಿಲ್ಲ ಸದಾಕಾಲ ನನ್ನ ಮನಸ್ಸು ನಿನ್ನ ಅನ್ವೇಷಣೆಯಲ್ಲೇ ಇರುತ್ತದೆ. ಆ ಅನ್ವೇಷಣೆ ಪೂರ್ಣಗೊಂಡು ನನಗಾಗಿ ನೀನು ಜೊತೆಯಲಿರುವೆ ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡಿದ ಕ್ಷಣದಿಂದಲೇ ಜೀವನದ ನಿಜವಾದ ಸಡಗರ ಪ್ರಾರಂಭವಾಗುತ್ತದೆ. ಇದೇ ಅಲ್ವಾ ಪ್ರೀತಿಯ ಸಾಂಗತ್ಯದ ರಸ ನಿಮಿಷಗಳು.

ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೇ
ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ…ಒಲವೇ ವಿಸ್ಮಯ
ನಿನ್ನಾ ಪ್ರೇಮ ರೂಪ ಕಂಡು ನಾನು ತನ್ಮಯ…

ಜೀವನದ ಪಯಣದಲ್ಲಿ ಅನೇಕರು ಬಂದು ಹೋಗುತ್ತಾರೆ. ಕೆಲವರು ನೆನಪಿನ ಅಂಚಿನಲ್ಲಿ ಮಾಸಿ ಹೋದರೆ, ಮತ್ತೆ ಕೆಲವರು ಕಣ್ಣ ರೆಪ್ಪೆಯಂತೆ ಜೀವನದುದ್ದಕ್ಕೂ ಕಾಯುತ್ತಾರೆ.ಆದರೆ ಒಬ್ಬ ವ್ಯಕ್ತಿ ನಮ್ಮ ಜೀವನಕ್ಕೆ ಕಾಲಿಟ್ಟಾಗ ಇಡೀ ಜಗತ್ತೆ ಬದಲಾದಂತೆ ಭಾಸವಾಗುತ್ತದೆ. ಆ ಒಬ್ಬ ವ್ಯಕ್ತಿ ಈ ಪ್ರಪಂಚದಲ್ಲಿ ನನಗೆ ನೀನೆ ಕಣೇ. ಆ ಕ್ಷಣದವರೆಗೂ ಮೌನವಾಗಿದ್ದ ಮನಸ್ಸಿನಲ್ಲಿ ಹೊಸರಾಗವೊಂದು ಮೀಟಲು ತೊಡಗುತ್ತದೆ. ಬರಿಗಣ್ಣಿಗೆ ಕಾಣುವ ಸಾಮಾನ್ಯ ದೃಶ್ಯಗಳು ಕಾವ್ಯಮಯವಾಗಿ ಕಾಣಲಾರಂಭಿಸುತ್ತವೆ.

ಜೊತೆಯಲಿ ನೀನಿದ್ದರೆ ಎನ್ನುವಾಗ ಅಲ್ಲಿರುವುದು ಕೇವಲ ಶಾರೀರಿಕ ಉಪಸ್ಥಿತಿಯಲ್ಲ. ಬದಲಾಗಿ ಭಾವಾನಾತ್ಮಕ ಸಾಂಗತ್ಯ. ಒಬ್ಬರ ಕಷ್ಟ ಸುಖಗಳನ್ನು ಸೋಲು ಗೆಲುವುಗಳನ್ನು ಮಾತು ಮೌನಗಳನ್ನು ಅರ್ಥೈಸಿಕೊಳ್ಳುವ ಅಪರೂಪದ ಬಂಧವದು.

ಕತ್ತಲೆಯ ಹಾದಿಯಲ್ಲಿ ಹಿಡಿದ ದೀವಟಿಗೆಯಂತೆ ಬಿರುಗಾಳಿಯ ನಡುವೆ ಸಿಲುಕಿದ ದೋಣಿಗೆ ಸಿಕ್ಕ ದಡದಂತೆ ಪ್ರೀತಿಯ ಆ ಜೊತೆಗಾರಿಕೆ ನಮಗೆ ಹೊಸ ಭರವಸೆಯನ್ನು ನೀಡುತ್ತದೆ ಜೊತೆಯಲಿರುವುದೆಂದರೆ ಪ್ರತಿಯೊಂದು ಕ್ಷಣವನ್ನು ಹಬ್ಬದಂತೆ ಆಚರಿಸುವುದು.ಆ ಸಾಂಗತ್ಯ ದಲ್ಲಿ ಹಗಲು ರಾತ್ರಿಗಳ ವ್ಯತ್ಯಾಸ ಮರೆತು ಹೋಗುತ್ತದೆ. ಕಾಲದ ಚಕ್ರವೂ ಮಂದಗತಿಯಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತದೆ. ಮಳೆಯ ಹನಿಯೊಂದು ಒಣಗಿದ ಭೂಮಿಯ ಮೇಲೆ ಬಿದ್ದಾಗ ಮೂಡುವ ಮಣ್ಣಿನ ಕಂಪು ಹೇಗೋ ಹಾಗೆಯೆ ಪ್ರೀತಿಯ ಸ್ಪರ್ಶ ಮನಸ್ಸಿನ ಒಣಗಿದ ಮೂಲೆಯಲ್ಲಿ ವಸಂತವನ್ನು ತರುತ್ತದೆ. ಎದೆಯಲ್ಲಿ ಮೂಡುವ ಈ ಸಡಗರವು ಬಹಿರಂಗದ ಗಲಾಟೆಯಲ್ಲ, ಅದು ಅಂತರಂಗದಲ್ಲಿ ಹರಿಯುವ ಪ್ರಶಾಂತವಾದ ಸುಂದರವಾದ ನದಿ. ಒಬ್ಬರ ಸಾಂಗತ್ಯ ಸಿಕ್ಕಾಗ ಕಷ್ಟಗಳೂ ಹಗುರವೆನಿಸುತ್ತವೆ ಕಣ್ಣಿರೂ ಸಹ ಆನಂದ ಭಾಷ್ಪವಾಗಿ ಮಾರ್ಪಡುತ್ತದೆ.

ಪ್ರಿಯ ಗೆಳತಿ ನೀನಿದ್ದರೆ ಎನ್ನುವ ಆ ಒಂದು ಶಬ್ದಕ್ಕೆ ಜಗತ್ತಿನ ಸಕಲ ಸಂಬಂಧಗಳನ್ನು ಆವರಿಸಿಕೊಳ್ಳುವ ಶಕ್ತಿಯಿದೆ ಕಣೇ ನೀನಿರದ ಈ ಜೀವನ ಕಲ್ಪಿಸಿಕೊಳ್ಳಲು ಅಸಾದ್ಯ ಏಕೆಂದರೆ ನನ್ನಾ ನಿನ್ನ ಈಕಲ್ಪನೆಗೂ ನಿಲುಕದ್ದು.

“ನೀ ಇರಲು ಜೊತೆಯಲ್ಲಿ ಬಾಳೆಲ್ಲಾ ಹಸಿರಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲಾ ಹಸಿರಾದಂತೆ
ನಗುತ ನೀ ಕರೆದರೆ ನಗುತ ನೀ ಕರೆದರೆ
ಮನಕೆ ಸಂತೋಷ ಹಾಡಾದಂತೆ”

ನಿಜವಾದ ಸಾಂಗತ್ಯಕ್ಕೆ ಪದಗಳ ಅಗತ್ಯವಿರುವುದಿಲ್ಲ. ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿಸಿದಾಗ ಅವರ ನಡುವಿನ ಮೌನವು ಸುಂದರವಾದ ಕವಿತೆಯಾಗುತ್ತದೆ. ಕಣ್ಣುಗಳೇ ಮಾತಾನಾಡುವಾಗ ಹೃದಯದ ಮಿಡಿತಗಳೇ ಸಂಭಾಷಣೆಯಾಗುವಾಗ ಮಾತಿನ ಹಂಗು ಉಳಿಯುವುದಿಲ್ಲ.

ಜೊತೆಯಲಿ ನೀನಿದ್ದರೆ ಎನ್ನುವ ಭಾವನೆಯಲ್ಲಿ ಕೇವಲ ಸುಖದ ಹಂಚಿಕೆ ಮಾತ್ರವಿರುವುದಿಲ್ಲ ದುಃಖದ ಭಾರವನ್ನು ಹಗುರಗೊಳಿಸುವ ಕರುಣೆಯಿರುತ್ತದೆ.ಬದುಕಿನ ಕಠಿಣ ಸನ್ನಿವೇಶಗಳಲ್ಲಿ ಪ್ರಪಂಚವೇ ನಮಗೆ ವಿರುದ್ದವಾಗಿ ನಿಂತಾಗ ನಮಗಾಗಿ ಒಬ್ಬರು ಜೊತೆಗಿದ್ದಾರೆ ಎನ್ನುವ ಸಣ್ಣ ಕಲ್ಪನೆಯೂ ನಮಗೆ ಬಂಡೆಯಷ್ಟು ಧೈರ್ಯವನ್ನು ನೀಡುತ್ತದೆ. ಆ ಧೈರ್ಯವೇ ಎದೆಯೊಳಗಿನ ಸಡಗರ.

ನಮ್ಮ ಕಷ್ಟಗಳನ್ನು ಕೇಳಲು ಒಬ್ಬರಿದ್ದಾರೆ ನಮ್ಮ‌ಕಣ್ಣೀರು ಒರೆಸಲು ಒಂದು ಕೈ ಇದೆ ಮತ್ತು ನಮ್ಮ ಯಶಸ್ಸನ್ನು ಕಂಡು ನಮ್ಮಷ್ಟೇ ಸಂತೋಷಪಡುವ ಒಂದು ಹೃದಯವಿದೆ ಎನ್ನುವುದಕ್ಕಿಂತ ದೊಡ್ಡ ಆಸ್ತಿ, ಈ ಪ್ರಪಂಚದಲ್ಲಿ ಬೇರೊಂದಿಲ್ಲ. ಈ ಭಾವನೆಯೇ ಮನುಷ್ಯನನ್ನು ಜೀವಂತವಾಗಿಡುತ್ತದೆ.

ಪ್ರೀತಿಯಲ್ಲಿರುವಾಗ ಇಡೀ ಪ್ರಕೃತಿಯೇ ನಮಗಾಗಿ ಶೃಂಗಾರಗೊಂಡಂತೆ ಕಾಣುತ್ತದೆ. ಸಂಜೆಯ ತಂಪಾದ ಗಾಳಿ ಶ್ರಾವಣದ ಸಿಹಿಮಳೆ ಮುಂಜಾನೆಯ ಇಬ್ಬನಿ ಮತ್ತು ಅರಳುವ ಹೂಗಳು ಪ್ರತಿಯೊಂದು ನಮ್ಮ‌ ಭಾವನೆಗಳಿಗೆ ದನಿಯಾಗುತ್ತದೆ.

ಯಾವಾಗ ಅಂತರಂಗದಲ್ಲಿ ಪ್ರೀತಿಯ ಸಡಗರವಿರುತ್ತದೋ ಆಗ ಕಲ್ಲು ಕೂಡ ರತ್ನದಂತೆ ಕಾಣುತ್ತದೆ. ಬಂಜರು ಭೂಮಿಯೂ ಉದ್ಯಾನವನದಂತೆ ಭಾಸವಾಗುತ್ತದೆ. ಏಕೆಂದರೆ ಪ್ರೀತಿ ಎನ್ನುವುದು ನಾವಿರುವ ಜಗತ್ತನ್ನು ನೋಡುವ ಕಣ್ಣೋಟವನ್ನೆ ಬದಲಾಯಿಸಿ ಬಿಡುತ್ತದೆ. ಪ್ರಕೃತಿಯ ಪ್ರತಿಯೊಂದು ಚಲನೆಯಲ್ಲೂ ಪ್ರೀತಿಯ ನಾದವೇ ಕೇಳಿಸುತ್ತದೆ ನದಿಯ ಕಲಕಲ ಸದ್ದು, ಹಕ್ಕಿಗಳ ಚಿಲಿಪಿಲಿ, ಗಾಳಿಗೆ ತೇಲಾಡುವ ಮರಗಳ ಎಲೆಗಳು ಇವೆಲ್ಲವೂ ಜೊತೆಯಲಿ ನೀನಿದ್ದರೆ ಎದೆಯಲಿ ಸಡಗರ ಎನ್ನುವ ಸತ್ಯವನ್ನು ಸಾರುತ್ತವೆ.

ನೆನಪಿರಲಿ ಗೆಳತಿ…ಸ್ಕ್ರೀನ್ ಮೇಲಿನ ಲೈಕ್ಸ್ ಮತ್ತು ಕಮೆಂಟ್ ಗಳು ಎಂದಿಗೂ ಒಬ್ಬ ವ್ಯಕ್ತಿಯ ನೇರ ಕಣ್ಣೊಟಕ್ಕಾಗಲಿ ಆತ ನೀಡುವ ಬೆಚ್ಚಗಿನ ಅಪ್ಪುಗೆಗಾಗಲಿ ಪರ್ಯಾಯವಾಗಲು ಸಾದ್ಯವಿಲ್ಲ. ನಮಗೆ ಬೇಕಿರುವುದು ವರ್ಚುವಲ್ ಪ್ರಪಂಚದ ನಕಲಿ ಜೊತೆಯಲ್ಲ. ನಮ್ಮ ಕಷ್ಟ ಸುಖಗಳಿಗೆ ನೇರವಾಗಿ ಮಿಡಿಯುವ ನಮ್ಮ ಎದೆಯಂತರಾಳವನ್ನು ಅರ್ಥಮಾಡಿಕೊಳ್ಳುವ ನಿಜವಾದ ಜೀವ.

ಪರಸ್ಪರ ಗೌರವ ನಂಬಿಕೆ ಮತ್ತು ಒಬ್ಬರಿಗಾಗಿ ಒಬ್ಬರು ಬಿಟ್ಟುಕೊಡದ ಮನೋಭಾವವಿದ್ದಾಗ ಮಾತ್ರ ಪ್ರೀತಿಯ ಪಯಣ ಸುಂದರವಾಗುತ್ತದೆ ಎಷ್ಟೇ ಕಷ್ಟಗಳೂ ಬಂದರೂ ಎಷ್ಟೆ ಬಿರುಗಾಳಿಗಳೂ ಬೀಸಿದರೂ ನಾನು ನಿನ್ನ ಜೊತೆಗಿದ್ದೇನೆ ಎನ್ನುವ ಒಂದೇ ಒಂದು ಮಾತು ಜೀವನದ ಎಲ್ಲಾ ನೋವುಗಳನ್ನು ಮರೆಸಿ ಬಿಡುತ್ತದೆ ಆ ಅಭಯವೇ ಎದೆಯಲ್ಲಿ ನಿರಂತರ ಸಡಗರವನ್ನು ಕಾಯ್ದುಕೊಳ್ಳುತ್ತದೆ.

ಈ ಜೀವನವೆಂಬುವುದು ಸುಂದರವಾದ ಕಾವ್ಯ. ಆ ಕಾವ್ಯಕ್ಕೆ ರಾಗ ಮತ್ತು ತಾಳವಾಗುವುದು ನಮಗೆ ಸಿಗುವ ನಿಜವಾದ ಸಾಂಗತ್ಯ. ವಯಸ್ಸು ಮುರಿದುಬಿದ್ದರೂ ತಲೆಯಕೂದಲು ಬೆಳ್ಳಗಾದರೂ ದೇಹದ ಶಕ್ತಿ ಕುಂದಿದರೂ ಕಣ್ಣುಗಳಲ್ಲಿನ ಪ್ರೀತಿ ಮತ್ತು ಎದೆಯೊಳಗಿನ ಸಡಗರ ಮಾತ್ರ ಎಂದಿಗೂ ಮುದಿಯಾಗುವುದಿಲ್ಲ.

ಕೈ ಹಿಡಿದು ನಡೆವಾಗ ಹಾದಿಯ ಉದ್ದ ಮುಖ್ಯವೆನಿಸುವುದಿಲ್ಲ. ಆ ಪಯಣದ ಪ್ರತಿಯೊಂದು ಕ್ಷಣವೂ ಅಪರೂಪದ ನೆನಪಾಗಿ ಉಳಿಯುತ್ತದೆ.ನಮಗಾಗಿ ಮಿಡಿಯುವ ನಮ್ಮೊಂದಿಗೆ ಹೆಜ್ಜೆಹಾಕುವ ಒಂದು ಜೀವ ನಮ್ಮೊಂದಿಗಿದ್ದರೆ ಈ ಜೀವನವೇ ಒಂದು ನಿರಂತರ ಉತ್ಸವ ಎಂದಿಗೂ ಮುಗಿಯದ ಸಡಗರ. ಬದುಕಿನ ಕಡೆಗಳಿಗೆಯಲ್ಲೂ” ಜೊತೆಯಲಿ ನೀನಿದ್ದರೆ ಎದೆಯಲಿ ಸಡಗರ ” ಎಂದು ಹೆಮ್ಮೆಯಿಂದ ತೃಪ್ತಿಯಿಂದ ಹೇಳಿಕೊಳ್ಳುವಂತಹ ಸುಂದರ ಪ್ರೀತಿ ಮತ್ತು ಸಾಂಗತ್ಯ ಪ್ರತಿಯೊಬ್ಬರ ಜೀವನದಲ್ಲೂ ಅವಶ್ಯವಾಗಿ ಇಂದು ಬೇಕಾಗಿದೆ ಇದೇ ಪ್ರೀತಿಯ ನಿಜವಾದ ಅರ್ಥಅಲ್ವಾ..?

ಅತಿಯಾದರೂ ಹಿತವಾಗಿದೆ
ನಿನ್ನ ನೆನಪಿನ ಮಂಪರು
ನನ್ನ ಬಾಳಿಗೆ ವರವಾಗಿದೆ

ನಿನ್ನ ಪ್ರೀತಿಯ ತುಂತುರು, ಓ… ಮುದ್ದು ಮನಸೇ.


  • ಸಿದ್ದೇಶ್ ಸಿದ್ದನಮಠ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading