ಅಂಗೈಯಲ್ಲಿ ಪ್ರಪಂಚ (ಭಾಗ- ೩೫)

ಊಟಕ್ಕೆ ಕರೆದಾಗ ಎಲ್ಲರಿಗೂ ಒಂದೇ ರೀತಿ ಉಪಚರಿಸಿ. ಕೂತವರನ್ನು ಎಬ್ಬಿಸಿ ತಮಗೆ ಬೇಕಾದವರನ್ನು ಅಲ್ಲಿ ಕೂರಿಸುವುದು ಹೀಗೆಲ್ಲಾ ಮಾಡಿ ಯಾರಿಗೂ ಅವಮಾನಿಸಬೇಡಿ. ಇದು ನಮ್ಮ ಸಂಸ್ಕಾರವೂ ಅಲ್ಲ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಅನ್ನದಾತೋ ಸುಖೀಭವ’ ತಪ್ಪದೆ ಮುಂದೆ ಓದಿ…

ಊಟ ತನ್ನಿಚ್ಛೆ , ನೋಟ ಪರರಿಚ್ಛೆ ಅಂತಾರೆ. ಹಾಗೇ ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯೂ ಇದೆ. ಇದೆಲ್ಲಾ ಹಿರಿಯರ ಅನುಭವದಲ್ಲಿ ಬಂದ ನುಡಿಮುತ್ತುಗಳು. ಬೇಕಾದಷ್ಟೇ ಹಾಕಿಸಿಕೊಂಡು ಊಟ ಮಾಡಬೇಕು. ಎಲ್ಲವನ್ನೂ ಹಾಕಿಸಿಕೊಂಡು ಅರ್ಧಂಬರ್ಧ ತಿಂದು ಉಳಿಸಿದರೆ ಎಲ್ಲವೂ ವ್ಯರ್ಥ. ಇದನ್ನು ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಜೊತೆಗೆ ಅದರ ಹಿಂದಿನ ಶ್ರಮ, ಮಹತ್ವವನ್ನು ತಿಳಿಸಿ ಹೇಳಬೇಕು. ಆಗ ಅವರು ಬೇಕಾದಷ್ಟೇ ಹಾಕಿಸಿಕೊಂಡು ತಿನ್ನುವುದನ್ನು ರೂಢಿ ಮಾಡಿಕೊಳ್ಳುತ್ತಾರೆ. ಜೊತೆಗೆ ಇತರರಿಗೂ ಹೇಳುತ್ತಾರೆ.

ಹಿಂದೆಲ್ಲಾ ಅವಿಭಕ್ತ ಕುಟುಂಬ ಇದ್ದಾಗ ಮೊದಲು ಗಂಡಸರು, ಮಕ್ಕಳಿಗೆಲ್ಲ ಬಡಿಸಿ ನಂತರ ಹೆಂಗಸರು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರು. ಆದರೆ ಈಗಿನ ಜಂಜಾಟದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ. ಮನೆಯಲ್ಲಿ ಒಬ್ಬೊಬ್ಬರದೂ ಒಂದೊಂದು ಸಮಯ. ಅವರವರ ಕೆಲಸದ ಸಮಯಕ್ಕೆ, ಶಾಲಾ-ಕಾಲೇಜುಗಳ ಸಮಯಕ್ಕೆ ತಕ್ಕಂತೆ. ದಿನದಲ್ಲಿ ಒಂದು ಹೊತ್ತಾದರೂ ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುವುದು ಒಳ್ಳೆಯದು. ಅದು ಸಾಧ್ಯವಾಗದಿದ್ದಲ್ಲಿ ಕೊನೇಪಕ್ಷ ವಾರಕ್ಕೆ ಒಂದು ದಿನವಾದರೂ ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡುತ್ತಾ , ಸಂತೋಷದಿಂದ ಸಮಯ ಕಳೆದರೆ ಮನೆಯವರ ಬಾಂಧವ್ಯವೂ ಹೆಚ್ಚುತ್ತದೆ. ಒಟ್ಟಿಗೆ ಸಮಯ ಕಳೆಯುವುದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯವೂ ಆಗುತ್ತದೆ.

ಊಟವನ್ನು ಮದುವೆ ಊಟ, ಹಬ್ಬದೂಟ, ಸಿಹಿಯೂಟ , ದೇವಸ್ಥಾನದ ಊಟ, ತಿಥಿ ಊಟ, ಹೀಗೆ ಆಯಾ ಸನ್ನಿವೇಶಗಳಿಗೆ ತಕ್ಕಂತೆ ಹೆಸರಿಸುತ್ತಾರೆ. ಬಾಳೆ ಎಲೆ, ತಟ್ಟೆ, ಬೆಳ್ಳಿತಟ್ಟೆ, ಮುತ್ತುಗದ ಎಲೆ, ಅಡಿಕೆ ಹಾಳೆಯ ತಟ್ಟೆ , ಪೇಪರ್ನಿಂದ ಮಾಡಿದ ಉಪಯೋಗಿಸಿ ಬಿಸಾಡುವಂತಹ ತಟ್ಟೆಗಳು, ಪ್ಲಾಸ್ಟಿಕ್, ಪಿಂಗಾಣಿ ಹೀಗೆ ತರತರದ ತಟ್ಟೆಗಳಲ್ಲಿ ಊಟ ಮಾಡುತ್ತಾರೆ. ಬಾಳೆ ಎಲೆಯ ಊಟ ಆರೋಗ್ಯಕ್ಕೆ ಒಳ್ಳೆಯದೆಂಬ ಪ್ರತೀತಿ ಇದೆ. ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವ. ಹಾಗೆಯೇ ಇದರಲ್ಲಿ ಬಡಿಸುವ ವಿಧಾನವೂ ಸಹ ಇದೆ.

ನೆಲದಲ್ಲಿ ಚಾಪೆ, ಮಣೆಯ ಮೇಲೆ ಕುಳಿತು ಅನ್ನಕ್ಕೆ ಕೈಮುಗಿದು, ಇನ್ನು ಕೆಲವರು ಸುತ್ತುಗಟ್ಟಿ ನಂತರ ಊಟ ಶುರು ಮಾಡುತ್ತಾರೆ. ಟೇಬಲ್ ಊಟ, ಕೈಯ್ಯಲ್ಲಿ ತಟ್ಟೆ ಹಿಡಿದುಕೊಂಡು, ಬಫೆ ಸಿಸ್ಟಮ್ ಹೀಗೆ ಅವರವರ ಅನುಕೂಲಕ್ಕೆ ಹಾಗೂ ಆಯಾ ಸಂದರ್ಭಗಳಿಗೆ, ಸ್ಥಳಕ್ಕೆ ತಕ್ಕಂತೆ ವ್ಯವಸ್ಥೆಗಳಿರುತ್ತವೆ.

ಫೋಟೋ ಕೃಪೆ : ಅಂತರ್ಜಾಲ

ಊಟಕ್ಕೆ ಕರೆದು/ ಹಾಕಿ ಅವಮಾನಿಸಬೇಡಿ

ಬಡವರಾಗಲಿ, ಶ್ರೀಮಂತರಾಗಲಿ ಹಸಿವು ಎಲ್ಲರಿಗೂ ಒಂದೇ. ಮೊದಲನೆಯದಾಗಿ ಎಲ್ಲರೂ ದುಡಿಯುವುದು ಊಟಕ್ಕಾಗಿಯೇ. ನಂತರ ಉಳಿದದ್ದು. ಏಕೆಂದರೆ, ಊಟವಿದ್ದರೆ ಮನುಷ್ಯನ ಮುಂದಿನ ಎಲ್ಲಾ ಕೆಲಸಗಳಿಗೆ ಶಕ್ತಿ. ಮೈಯ್ಯಲ್ಲಿ ಕಸುವಿದ್ದರಲ್ಲವೇ ಮನಸ್ಸಿಗೂ ಚೈತನ್ಯ. ವೃತ್ತಿ ಬೇರೆ ಬೇರೆ ಇರಬಹುದು. ಕೆಲಸದಲ್ಲಿ ಸ್ಥಾನಮಾನ ಇರಬಹುದು. ತಿನ್ನುವ ಆಹಾರ ಪದಾರ್ಥಗಳು ಬೇರೆ ಬೇರೆ ಇರಬಹುದು. ಅವರವರ ಅಭಿರುಚಿಗೆ, ಅನುಕೂಲಕ್ಕೆ ತಕ್ಕಂತೆ, ಆರೋಗ್ಯಕ್ಕೆ ಸರಿಹೊಂದುವಂತೆ. ಆಯಾ ಪ್ರದೇಶದ ಬೆಳೆಗಳಿಗೆ, ವಾತಾವರಣಕ್ಕೆ , ಕೆಲವೊಮ್ಮೆ ಮನೆಯಲ್ಲಿ ಬಂದ ಪರಂಪರೆ, ರೂಢಿಯಂತೆ.

ಮನೆಯಲ್ಲಿ ಯಾರನ್ನಾದರೂ ಊಟಕ್ಕೆ ಕರೆದೋ ಅಥವಾ ಅವರು ಬಂದಾಗ ಊಟದ ಸಮಯವಾಗಿದ್ದು, ನಿಮ್ಮ ಮನೆಯಲ್ಲಿ ಅವರು ಊಟ ಮಾಡುತ್ತಿದ್ದಾಗ ದಯವಿಟ್ಟು ಹಂಗಿಸುವುದು, ವ್ಯಂಗ್ಯ, ಕೊಂಕು ಮಾತುಗಳಿಂದ ನೋಯಿಸುವುದು ಮಾಡಬೇಡಿ. ಉದಾಹರಣೆ, ಅಕ್ಕಿಗೆ ಇಷ್ಟ್ರುಪಾಯಿ, ತರಕಾರಿ ಅಷ್ಟು ಕೊಟ್ಟು ತಂದ್ವಿ , ನಿಮ್ಮನೇಲಿ ಈ ರೀತಿ ಎಲ್ಲ ಅಡುಗೆ ಮಾಡಲ್ಲ ಅನ್ಸುತ್ತೆ ಅಲ್ವಾ ಅಂತೆಲ್ಲಾ . ಇನ್ನು ಕೆಲವರು ಹಾಕಿಸಿಕೊಳ್ಳುವ ಮೊದಲೇ ಬೇರೆಯವರ ಬಗ್ಗೆ ಹೇಳಿಬಿಡ್ತಾರೆ ಅವರು ತಿನ್ನುವುದೇ ಇಷ್ಟು ಎಂದು. ನಿಜವಾಗಲೂ ಬೇಕಾಗಿದ್ದರೂ ಹಾಗೆ ಹೇಳಿದ ಮೇಲೆ ಹಾಕಿಸಿಕೊಳ್ಳಲು ಖಂಡಿತಾ ಮನಸ್ಸು ಬರುವುದಿಲ್ಲ. ಎಲ್ಲರೂ ಅವರವರ ಮಟ್ಟಿಗೆ ಚೆನ್ನಾಗೇ ಇರುತ್ತಾರೆ. ಯಾರೂ ಊಟಕ್ಕೋಸ್ಕರ ಇನ್ನೊಬ್ಬರ ಮನೆಗೆ ಹೋಗುವುದಿಲ್ಲ. ಪ್ರೀತಿ, ವಿಶ್ವಾಸ, ಸಂಬಂಧ, ಸ್ನೇಹ, ಪರಿಚಿತರು , ಇನ್ನು ಕೆಲವೊಮ್ಮೆ ಅನಿವಾರ್ಯ ಹೀಗೆ ನಾನಾ ಕಾರಣಗಳಿಂದ ಬೇರೆಯವರ ಮನೆಯಲ್ಲಿ ಊಟ ಮಾಡುವ ಸಂದರ್ಭ ಒದಗಿ ಬರಬಹುದು. ಏನಾದರೂ ಅಂದು, ಆಡಿ ಊಟ ಹಾಕಿದರೆ ಮುಂದೆ ಅದೇ ಉಳಿಯುವುದು. ಸ್ಟಾರ್ ಹೋಟೆಲ್ಗಳಿರುವಂತೆ ಇಪ್ಪತ್ತು, ಇಪ್ಪತ್ತೈದು ರೂಪಾಯಿಗೂ ಒಂದು ಊಟ ಅಥವಾ ತಿಂಡಿ ಸಿಗುವ ಚಿಕ್ಕ ಚಿಕ್ಕ ಸ್ಥಳಗಳು ರಸ್ತೆಯ ಬದಿಗಳಲ್ಲಿ ಸಾಕಷ್ಟು ಇವೆ. ಸದ್ಯದ ಹಸಿವು ನೀಗಿಸಿಕೊಳ್ಳಲು ಅಷ್ಟು ಸಾಕು. ನಿಮ್ಮ ಮನೆಯಲ್ಲಿ ಊಟಕ್ಕೆ ಬಂದವರಿಗೆ ಅಷ್ಟು ಶಕ್ತಿಯಂತೂ ಖಂಡಿತಾ ಇರುತ್ತದೆ ಎಂಬುದನ್ನು ಮರೆಯಬೇಡಿ.

ಇನ್ನು ಬಡಿಸುವ ಊಟ ಸ್ವಚ್ಛವಾಗಿರಲಿ. ಅಡುಗೆ ಮಾಡುವಾಗ, ಬಡಿಸುವಾಗ ಸ್ವಚ್ಛತೆ ಇದ್ದರೆ ನೋಡಲೂ ಚೆಂದ, ಆರೋಗ್ಯಕ್ಕೂ ಒಳ್ಳೆಯದು. ಅಡುಗೆಗೆ ಹಾಕುವ ಪದಾರ್ಥಗಳ ಮೇಲೆ ಕಣ್ಣಾಡಿಸಿ ಕಲ್ಲು, ಭತ್ತದ ಹೊಟ್ಟು, ಹುಳ ಇವೆಲ್ಲ ಇದ್ದರೆ ತೆಗೆದು ಹಾಕಿ. ಊಟದಲ್ಲಿ ಕಲ್ಲು ಸಿಕ್ಕು ಹಲ್ಲುಗಳಿಗೆ, ಹೊಟ್ಟೆಗೆ ತೊಂದರೆಯಾಗಬಹುದು. ಹುಳವನ್ನು ನೋಡಿ ತಿನ್ನಲೂ ಆಗದೇ, ಹೇಳಲೂ ಆಗದೇ ಸಂಕಟ ಅನುಭವಿಸಬಹುದು. ಆದಷ್ಟು ಕೂದಲು ಬೀಳದಂತೆ ಜಾಗೃತೆ ವಹಿಸಬೇಕು. ಆದಾಗ್ಯೂ ಕೆಲವೊಮ್ಮೆ ಗಾಳಿಗೆ ಹಾರಿ ಅಡುಗೆ ಪದಾರ್ಥದಲ್ಲಿ ಸೇರಿಕೊಳ್ಳುತ್ತದೆ. ಹಾಗಾಗಿ ಮಾಡಿದ ಅಡುಗೆಯನ್ನು ಚೆನ್ನಾಗಿ ಎಲ್ಲೂ ಕಂಡಿ ಬಿಡದಂತೆ ಮುಚ್ಚಿಡುವುದು ಒಳ್ಳೆಯದು. ಇದರಿಂದ ಕಣ್ಣಿಗೆ ಕಾಣಿಸದಂತಹ ಚಿಕ್ಕ ಚಿಕ್ಕ ಧೂಳಿನ ಕಣಗಳು, ಜಿರಳೆ ಮುಂತಾದ ಕ್ರಿಮಿಕೀಟಗಳು ಆಹಾರ ಪದಾರ್ಥದಲ್ಲಿ ಬೀಳುವುದನ್ನು ತಡೆಯಬಹುದು.

ಫೋಟೋ ಕೃಪೆ : ಅಂತರ್ಜಾಲ

ವಾರಾನ್ನ

ಹಿಂದೆಲ್ಲ ವಾರಾನ್ನ ಅಂತ ಇರುತ್ತಿತ್ತು. ಓದುತ್ತಿರುವ ಬಡಮಕ್ಕಳು ಇತರರ ಮನೆಗೆ ವಾರಕ್ಕೆ ಒಂದು ದಿನ, ಒಂದು ಹೊತ್ತು ಊಟಕ್ಕೆ ಹೋಗುತ್ತಿದ್ದರು. ಊಟ ಹಾಕುವವರಲ್ಲಿ ಕೆಲವರು ಶ್ರೀಮಂತರು. ಇನ್ನು ಕೆಲವರಿಗೆ ಅವರಿಗೇ ಕಷ್ಟ . ಮನೆ ತುಂಬಾ ಮಕ್ಕಳು, ದುಡಿವ ಕೈಗಳು ಒಂದೋ, ಎರಡೋ. ಹಾಗಿದ್ದಾಗಲೂ ಆ ಮಕ್ಕಳು ಬಂದಾಗ ತಮ್ಮ ಮಕ್ಕಳ ಜೊತೆ ಕೂರಿಸಿ ಭೇದಭಾವವಿಲ್ಲದೇ ಪ್ರೀತಿಯಿಂದ ಬಡಿಸಿ, ಮಾತನಾಡಿಸಿ ಹೊಟ್ಟೆ ತುಂಬಾ ಊಟ ಹಾಕಿ ಕಳಿಸುತ್ತಿದ್ದರು. ಆ ಮಕ್ಕಳಲ್ಲಿ ಓದಬೇಕೆಂಬ ಛಲ ಇರುತ್ತಿತ್ತು. ಹಾಗಾಗಿ ವಾರಾನ್ನಕ್ಕೆ ಹೋಗುತ್ತಿದ್ದ ಅನೇಕ ಮಕ್ಕಳು ದೊಡ್ಡವರಾದ ಮೇಲೆ ಉನ್ನತ ಹುದ್ದೆಯನ್ನು ಅಲಂಕರಿಸಿದ ಉದಾಹರಣೆಗಳೇ ಜಾಸ್ತಿ. ಹಾಗೆಯೇ ಅನ್ನ ಹಾಕಿದವರನ್ನು ಮರೆಯದಿರುವುದು ಅವರ ಸಂಸ್ಕಾರ.

ಅನ್ನದಾನ

ಅನೇಕರು ತಾವು ದುಡಿಯುವ ಹಣದಲ್ಲಿ ಅನ್ನ ಸಂತರ್ಪಣೆ, ಅನ್ನದಾನ ಎನ್ನುವ ಹೆಸರಿನಲ್ಲಿ ಸಾರ್ವಜನಿಕವಾಗಿ ಅಥವಾ ಕೆಲವು ಸಮಾರಂಭಗಳಲ್ಲಿ, ಸಾಂಸ್ಕೃತಿಕ, ಸಾಹಿತ್ಯದ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ, ಗಣೇಶ ಇಟ್ಟ ಸಂದರ್ಭದಲ್ಲಿ , ಶಾಲಾ-ಕಾಲೇಜುಗಳಿಗೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ, ಸಾಮೂಹಿಕ ಮದುವೆಗಳನ್ನು ಮಾಡಿಸುವ ಮೂಲಕ, ಯಾರೂ ಇಲ್ಲದಂತಹ ಪರಿಸ್ಥಿತಿಯಲ್ಲಿ ಭಿಕ್ಷೆ ಬೇಡುತ್ತಿರುವವರಿಗೆ, ತುಂಬಾ ಕಷ್ಟದಲ್ಲಿರುವವರಿಗೆ, ದೇವಸ್ಥಾನಗಳಲ್ಲಿ ಹೀಗೆ ಅನೇಕ ಕಡೆಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡುತ್ತಾರೆ. ನಿಜವಾಗಲೂ ಇದು ಬಹಳ ಒಳ್ಳೆಯ ಹಾಗೂ ಭಗವಂತ ಮೆಚ್ಚುವ ಕೆಲಸ. ಆದರೆ ನೀವು ಮಾಡುವ ಕೆಲಸ ಪ್ರಚಾರಕ್ಕೆ, ಹೆಸರಿನ ಪ್ರಸಿದ್ಧಿಗೆ ಆಗಿರದೇ ನಿಸ್ವಾರ್ಥ ಸೇವಾ ಮನೋಭಾವನೆ ಇರಲಿ. ಇನ್ನೊಂದು ವಿಷಯ, ನೀವು ಮಾಡಿದ ಕಾರ್ಯಕ್ರಮದಲ್ಲಿ ಬೇರೆಯವರು ಬಂದು ಊಟ ಮಾಡಿದಾಗ, ಮತ್ತೊಂದು ದಿನ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆಯೋ ಅಥವಾ ಯಾವುದೋ ಮಾತಿನ ಭರದಲ್ಲೋ ಅಥವಾ ಯಾರಾದರೊಂದಿಬ್ಬರ ವಿಷಯವಾಗಿಯೋ ಎಲ್ಲರನ್ನೂ ಸೇರಿಸಿ ಬಿಟ್ಟಿ ಊಟ ಮಾಡ್ಕೊಂಡು ಹೋಗ್ತಾರೆ ಎನ್ನುವ ಪದ ದಯವಿಟ್ಟು ಬಳಸಬೇಡಿ. ಏಕೆಂದರೆ, ಅದರಲ್ಲಿ ಎಲ್ಲಿಯೂ ಹೇಳಿಕೊಳ್ಳದೇ ಸಾವಿರಾರು ಜನರಿಗೆ ಪ್ರತಿವರ್ಷ ಊಟ ಹಾಕುವವರು ಇರಬಹುದು. ಅನೇಕರಿಗೆ ಜೀವನಕ್ಕೆ ದಾರಿ ಮಾಡಿಕೊಟ್ಟಿರುವವರು ಇರಬಹುದು. ಎಲೆಮರೆ ಕಾಯಿಯಂತೆ ಬೇರೆ ಬೇರೆ ರೀತಿಯ ಸಮಾಜ ಸೇವೆ ಮಾಡುತ್ತಿರುವವರು ಇರಬಹುದು. ಒಂದು ಹೊತ್ತು ಊಟಕ್ಕೆ ಇಲ್ಲದಿದ್ದರೂ ಸ್ವಾಭಿಮಾನವಾಗಿ ಬದುಕುವವರು ಇರಬಹುದು. ಇಂತಹ ಮಾತುಗಳು ಅವರಿಗೆ ತುಂಬಾ ನೋವುಂಟು ಮಾಡುತ್ತದೆ. ಅನ್ನದ ಋಣ ಅಂತಾರಲ್ಲ ಹಾಗೆ. ಅಂದು ಅಲ್ಲಿ ಅವರಿಗೆ ಅನ್ನ ಬರೆದಿತ್ತು ಅಷ್ಟೇ. ಸಿಹಿ ಊಟ ಹಾಕಿ ಕಹಿ ಮಾತಿನಿಂದ ನಿಂದಿಸಿದರೆ ಏನು ಪ್ರಯೋಜನ.

ಅಲ್ಲದೇ ಒಂದು ಕಾರ್ಯಕ್ರಮ ಮಾಡಿದ ಮೇಲೆ ಊಟವೂ ಅದರಲ್ಲಿನ ಒಂದು ಪ್ರಕ್ರಿಯೆ. ಹಾಗಾಗೇ ಕಾರ್ಯಕ್ರಮದ ನಂತರ ಎಲ್ಲರೂ ಊಟ ಮುಗಿಸಿ ಹೊರಡುತ್ತಾರೆ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಅಲ್ಲಿ ಊಟ ಇಲ್ಲದಿದ್ದರೆ ಅವರು ಬೇರೆ ವ್ಯವಸ್ಥೆ ಖಂಡಿತಾ ಮಾಡಿಕೊಳ್ಳುತ್ತಾರೆ. ಒಂದು ಕಾರ್ಯಕ್ರಮ ಮಾಡಿದಾಗ ನಾಲ್ಕು ಜನ ಬಂದು ಸಂತೋಷದಿಂದ ಭಾಗವಹಿಸಿ, ಊಟ ಮಾಡಿ ತೃಪ್ತರಾಗಿ ಚೆನ್ನಾಗಿತ್ತು ಎಂದು ಒಂದು ಮಾತು ಹೇಳಿದರಲ್ಲವೇ ಊಟ ಹಾಕಿದವರಿಗೂ ಒಂದು ಸಾರ್ಥಕದ ಭಾವ. ಒಂದು ವೇಳೆ ಎಲ್ಲರೂ ಅಥವಾ ಒಂದಷ್ಟು ಜನ ಊಟ ಮಾಡದೇ ಹಿಂದಿರುಗಿದರೆ ಅಥವಾ ನಿರೀಕ್ಷಿಸಿದಷ್ಟು ಜನರು ಬರದಿದ್ದರೆ ಮಾಡಿದ/ಉಳಿದ ಅಡುಗೆ ವ್ಯರ್ಥವಾಗುತ್ತದೆ. ಆಗ ಅದನ್ನು ಅವಶ್ಯಕತೆ ಇರುವಲ್ಲಿಗೆ ಸಾಗಿಸಬೇಕು. ಒಂದು ವೇಳೆ ತಲುಪಿಸುವುದು ತಡವಾದರೆ ಆಹಾರ ಪದಾರ್ಥಗಳೆಲ್ಲ ಹಳಸಿ ಮಾಡಿದ ಶ್ರಮ, ಹಾಕಿದ ಹಣ, ಬೆಳೆದ ಬೆಳೆ ಎಲ್ಲಾ ನೀರಲ್ಲಿ ಹೋಮ ಮಾಡಿದಂತೆ.

ಭೇದಭಾವ ಮಾಡಬೇಡಿ

ಊಟಕ್ಕೆ ಕರೆದಾಗ ಎಲ್ಲರಿಗೂ ಒಂದೇ ರೀತಿ ಉಪಚರಿಸಿ. ಕೂತವರನ್ನು ಎಬ್ಬಿಸಿ ತಮಗೆ ಬೇಕಾದವರನ್ನು ಅಲ್ಲಿ ಕೂರಿಸುವುದು ಹೀಗೆಲ್ಲಾ ಮಾಡಿ ಯಾರಿಗೂ ಅವಮಾನಿಸಬೇಡಿ. ಇದು ನಮ್ಮ ಸಂಸ್ಕಾರವೂ ಅಲ್ಲ.

ಊಟದಲ್ಲಿ ಮಾತ್ರ ಮನುಷ್ಯನನ್ನು ತಕ್ಷಣಕ್ಕೆ ಆದರೂ ಸಾಕು ಎಂದು ಹೇಳುವಂತೆ ಮಾಡಿ ತೃಪ್ತಿ ಪಡಿಸಲು ಸಾಧ್ಯ. ಹಸಿವು ನಿತ್ಯ ಕರ್ಮದಂತೆ ನಿರಂತರ ಪ್ರಕ್ರಿಯೆ ಆಗಿರುವುದರಿಂದ ಮತ್ತೊಂದು ಹೊತ್ತಿಗೆ ತನ್ನ ಪ್ರತಾಪವನ್ನು ತೋರಿಸುತ್ತದೆ. ಊಟ ಎನ್ನುವುದು ದಿನನಿತ್ಯದ ಅಗತ್ಯವಾಗಿರುವುದರಿಂದ ಇದು ಒಂದು ವ್ಯವಹಾರವಾಗಿ ಮಾರ್ಪಟ್ಟಿದೆ. ಇದರಿಂದ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಗಳಿಂದ ಹಿಡಿದು ರಸ್ತೆ ಬದಿಯ ತಳ್ಳುಗಾಡಿಯವರೆಗೆ ಇದರ ವಿಸ್ತಾರವಿದೆ. ಇದರಿಂದಲೇ ಹೆಸರು ಮಾಡಿ ಗೌರವ ಸಂಪಾದಿಸಿದವರು ಇದ್ದಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಂಡು ಗೌರವಯುತವಾಗಿ ಬಾಳುತ್ತಿರುವವರೂ ಇದ್ದಾರೆ. ಹಗಲು ರಾತ್ರಿ ಕಷ್ಟಪಟ್ಟು ದುಡಿಯುವುದು ಇವರ ವೃತ್ತಿಪರತೆಯನ್ನು ತೋರಿಸುತ್ತದೆ. ಕಷ್ಟ, ನಷ್ಟಗಳ ಮಧ್ಯೆಯೂ ಅನೇಕರಿಗೆ ಕೆಲಸ ಕೊಟ್ಟು ತಾವು ಬದುಕುವುದರ ಜೊತೆಗೆ ಇತರರು ಬದುಕು ಕಟ್ಟಿಕೊಳ್ಳುವಂತೆ ಮಾಡಿರುವುದು ಇವರ ಸಾಧನೆ.

ಆರೋಗ್ಯ ಸರಿಯಿಲ್ಲದಾಗ ಊಟ ಸೇರುವುದಿಲ್ಲ. ಆಗ ಅದಕ್ಕೆ ಬೇಕಾದಂತಹ ಪಥ್ಯ, ಮಾತ್ರೆ, ಔಷಧಿಗಳ ಸೇವನೆ ಜೊತೆಗೆ ಆಹಾರವೂ ಮುಖ್ಯ. ಮೃದುವಾದ, ಹೆಚ್ಚು ಖಾರ, ಹುಳಿ, ಮಸಾಲೆ ಇಲ್ಲದ ಸುಲಭವಾಗಿ ಜೀರ್ಣವಾಗುವಂತಹ ಇಡ್ಲಿ , ಗಂಜಿ ಈ ತರದ ಆಹಾರ ಒಳ್ಳೆಯದು.

ಕೊನೆಯದಾಗಿ ಒಂದು ಮಾತು. ತಿನ್ನುವ ಆಹಾರ ಪದಾರ್ಥಗಳ ಮೇಲೆ ಬೇರೆ ಬೇರೆ ರೀತಿಯ ಹೋಲಿಕೆ ಮಾಡಿ ಅದನ್ನೇ ಹಾಸ್ಯವೆಂದು ಬಿಂಬಿಸಿ ಅಸಹ್ಯ ತರಿಸಬೇಡಿ. ನಿಮಗೆ ಇಷ್ಟವಿಲ್ಲವೆಂದು ಬೇರೆಯವರು ತಿನ್ನುವ ಆಹಾರ ಪದಾರ್ಥಗಳನ್ನು ಆಡಿಕೊಳ್ಳುವುದು ಸರಿಯಲ್ಲ. ಆಯಾ ದೇಶದ, ಪ್ರದೇಶದ ವಾತಾವರಣಕ್ಕೆ ಅನುಕೂಲವಾದ, ಅವರವರಿಗೆ ಇಷ್ಟವಾದದ್ದನ್ನು ಅವರು ತಿನ್ನುತ್ತಾರೆ. ನಿಮಗೆ ಬೇಡವೆಂದರೆ ಬಿಡಿ, ತಿನ್ನುವಾಗ ನಿಮ್ಮ ಹೇಳಿಕೆಗಳು ನೆನಪಿಗೆ ಬಂದರೆ ಅದು ಇಷ್ಟದ ಪದಾರ್ಥವಾಗಿದ್ದರೂ ಸಹ ತಿನ್ನಲು ಸೇರುವುದಿಲ್ಲ.

ಅನ್ನದಾತೋ ಸುಖೀಭವ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading