ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಅವರಿವರ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದರ ಜೊತೆಗೆ ಬೇರೆಯವರ ತೇಜೋವಧೆ ಮಾಡಬಾರದು. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮಾತನಾಡುವುದೂ ಒಂದು ಕಲೆ’ ತಪ್ಪದೆ ಮುಂದೆ ಓದಿ…
ಅದು ಸಾವಿರಾರು ಜನರು ಸೇರಿರುವ ದೊಡ್ಡ ಸಮಾರಂಭ. ಅಲ್ಲಿ ಅತ್ಯುತ್ತಮ ವಾಗ್ಮಿ ಎನಿಸಿಕೊಂಡವರೊಬ್ಬರು ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜೀವನವನ್ನು ಆದಷ್ಟು ಸರಳವಾಗಿ ಹೇಗೆ ಬದುಕಬಹುದು ಎಂಬುದು ಅಂದಿನ ವಿಷಯ. ಒಂದೊಂದೇ ಘಟನೆಗಳನ್ನು ಉದಾಹರಣೆಯಾಗಿಟ್ಟುಕೊಂಡು ಅವರು ಮಾತನಾಡುತ್ತಿದ್ದರೆ ಎಲ್ಲರಿಗೂ ತಮ್ಮದೇ ಸುತ್ತಮುತ್ತಲಿನಲ್ಲಿ ನಡೆದದ್ದೇನೋ ಎನಿಸುವಷ್ಟು ಆಪ್ತವಾಗಿತ್ತು ಅವರ ಮಾತು. ಹಾಗಾಗಿ ಎಲ್ಲೆಡೆಯೂ ನಿಶ್ಯಬ್ಧ. ಅವರ ಮಾತಿನಿಂದ ನೆರೆದಿದ್ದವರಿಗೆ ತಾವು ಹೇಳಿಕೊಳ್ಳದೆಯೇ ತಮ್ಮ ದಿನನಿತ್ಯದ ಅನೇಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಕ್ಕಂತಾಗಿತ್ತು. ಬೆಟ್ಟವೆಂದುಕೊಂಡಿದ್ದು ಮಂಜಿನಂತೆ ಕರಗಿದಾಗ ಸಿಗುವ ನೆಮ್ಮದಿ ಅವರೆಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅಷ್ಟು ಜನ ಸೇರಿದ್ದರೂ ಪ್ರತಿಯೊಬ್ಬರನ್ನೂ ನೋಟದಲ್ಲಿ, ಮಾತಿನಲ್ಲಿ ಸೆಳೆದಿಡುವ ಶಕ್ತಿ ಆ ವ್ಯಕ್ತಿಯ ಮಾತಿಗಿತ್ತು. ಅದಕ್ಕೇ ಹೇಳುವುದು ಮಾತನಾಡುವುದೂ ಒಂದು ಕಲೆ ಎಂದು.
ಸುಮನಾಳೇನೂ ಮನಃಶಾಸ್ತ್ರ ಓದಿದವಳಲ್ಲ. ಅವಳು ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯಳು. ಆದರೆ ಅನೇಕರ ಸಮಸ್ಯೆಗಳಿಗೆ ತನ್ನ ಮಾತಿನಿಂದ ಸಾಂತ್ವನ ಹೇಳುವಷ್ಟು ತಿಳುವಳಿಕೆ ಉಳ್ಳವಳು. ಎಲ್ಲಕ್ಕಿಂತ ಹೆಚ್ಚಾಗಿ ದಿನನಿತ್ಯದ ಆಗುಹೋಗುಗಳ ಬಗ್ಗೆ ಚೆನ್ನಾಗಿ ಅರಿತವಳು. ಇನ್ನೊಬ್ಬರ ಮಾತಿಗೆ, ಅವರ ಕಷ್ಟ-ಸುಖಕ್ಕೆ ಕಿವಿಯಾಗಿ ಸ್ಪಂದಿಸುವವಳು. ಹಾಗಾಗೇ ತಮ್ಮ ಮನೆಯವರ ಬಳಿ, ಮಕ್ಕಳ ಬಳಿ ಹೇಳಿಕೊಳ್ಳಲಾಗದ ಎಷ್ಟೋ ವಿಷಯಗಳನ್ನು (ಏಕೆಂದರೆ, ಯಾವುದಾದರೂ ವಿಷಯದಿಂದ ಯಾರಿಂದಲಾದರೂ ನೋವಾಯಿತು ಅಥವಾ ಸಮಸ್ಯೆಯಾಗಿದೆ ಎಂದಾಗ ನಿನಗ್ಯಾಕೆ ಬೇಕಿತ್ತು ಎಂದು ಮನೆಯವರು, ಮಕ್ಕಳು ಇವರಿಗೇ ಬೈಯ್ಯುವುದರಿಂದ ಅಲ್ಲದೇ ಕೆಲವೊಮ್ಮೆ ಇವರ ಮಾತನ್ನು ಸಮಾಧಾನದಿಂದ ಪೂರ್ತಿಯಾಗಿ ಕೇಳಿಸಿಕೊಳ್ಳುವವರು, ಸ್ಪಂದಿಸುವವರು ಇಲ್ಲದಿರುವುದರಿಂದ, ತಮ್ಮ ಭಾವನೆಗಳನ್ನು ಹೊರ ಹಾಕುವಂತಹ ವಾತಾವರಣ ಮನೆಯಲ್ಲಿ ಇಲ್ಲದಿರುವುದರಿಂದ, ಬರೀ ನಕಾರಾತ್ಮಕ ಪ್ರತಿಕ್ರಿಯೆ ನೀಡಿ ಇನ್ನಷ್ಟು ಕುಗ್ಗಿಸುವುದರಿಂದ) ನೋವು, ದುಃಖಗಳನ್ನು ಸ್ನೇಹಿತರು, ಅಕ್ಕಪಕ್ಕದವರು, ಸಂಬಂಧಿಕರು ಅವಳ ಬಳಿ ಹೇಳಿಕೊಂಡು ಮಾತು ಮುಗಿಸುವಷ್ಟರಲ್ಲಿ ಕೊಡಲಿ ತೆಗೆದುಕೊಳ್ಳಬೇಕೆಂದುಕೊಂಡಿದ್ದ ತಮ್ಮ ಸಮಸ್ಯೆ ಉಗುರಿನಲ್ಲೇ ಹೋಗುತ್ತದೆಂದು ತಿಳಿದು ಸಮಾಧಾನ ತಳೆದಿರುತ್ತಿದ್ದರು. ಹಾಗಾಗಿ ಇದು ಅವಳಿಗೂ ಒಂದು ತರದ ತೃಪ್ತಿ ನೀಡುತ್ತಿತ್ತು.

ಫೋಟೋ ಕೃಪೆ : ಅಂತರ್ಜಾಲ
ಹಾಗೇ ಮಾತನಾಡುವುದು ವ್ಯಕ್ತಿಗತ ಸ್ವಾತಂತ್ರ್ಯವೂ ಹೌದು. ನಾವು ಆಡೋ ಮಾತಲ್ಲಿ ತೂಕ, ನೀತಿ, ಅರ್ಥ ಎಲ್ಲಾ ಇರಬೇಕು. ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಅವರಿವರ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದರ ಜೊತೆಗೆ ಬೇರೆಯವರ ತೇಜೋವಧೆ ಮಾಡಬಾರದು. ಇದು ಮೊದಲನೆಯದಾಗಿ ನಮಗೆ ನಾವೇ ಹಾಕಿಕೊಳ್ಳಬೇಕಾದ ಲಕ್ಷ್ಮಣರೇಖೆ ಎಂದರೆ ತಪ್ಪಲ್ಲ.
ಮಕ್ಕಳು ಬೆಳೆಯುವ ವಾತಾವರಣ ಅವರ ಮೇಲೆ ಬಹಳ ಪ್ರಭಾವ ಬೀರುವುದರಿಂದ ಗಂಡ-ಹೆಂಡತಿಯ ಜಗಳವಾಗಲಿ, ಒಬ್ಬರನ್ನೊಬ್ಬರು ದೂಷಿಸುವುದಾಗಲಿ, ಸಂಬಂಧಿಕರ, ನೆರೆ ಹೊರೆಯವರ ಬಗ್ಗೆ ಆಡಿಕೊಳ್ಳುವುದಾಗಲಿ ಅವರ ಮುಂದೆ ಮಾಡಬಾರದು. ಏನಾದರೂ ವಿಷಯವಿದ್ದರೂ ಅವರು ಇಲ್ಲದ ಸಮಯದಲ್ಲಿ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಮಕ್ಕಳಿಗೆ ಯಾವ ವಿಷಯದಲ್ಲಾದರೂ ಆದಷ್ಟು ಧನಾತ್ಮಕವಾದದ್ದನ್ನೇ ತಿಳಿಸಿ ಹೇಳಬೇಕು. ಇಲ್ಲದಿದ್ದರೆ ಅವರೂ ಸಹ ಮುಂದೆ ಎಲ್ಲದರಲ್ಲಿಯೂ ತಪ್ಪು ಕಂಡು ಹಿಡಿಯುವುದು, ತಮಗೆ ಮಾಡಲಾಗದ ಕೆಲಸಗಳಿಗೆ ಕಾರಣಗಳನ್ನು ಹೇಳುವುದು, ತಪ್ಪು ಮಾಡಿದಾಗ ಆ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸುವುದನ್ನು ಮಾಡಲು ಪ್ರಾರಂಭಿಸುತ್ತಾರೆ.
ಶಾಲಾ- ಕಾಲೇಜುಗಳಲ್ಲಿ ಮಾಡುವ ಚರ್ಚಾ ಸ್ಪರ್ಧೆಗಳು (ಯಾವ ವಿಷಯವಾದರೂ ಸರಿ) ಮಕ್ಕಳಲ್ಲಿ ಮಾತನಾಡುವ ಕಲೆ ಕಲಿಯಲು ಉತ್ತಮ ಮಾರ್ಗದರ್ಶನ ಎಂದೇ ಹೇಳಬಹುದು. ಪರ/ವಿರೋಧ ಇದ್ದಾಗ ವಿಷಯವನ್ನು ನಾಲ್ಕು ಜನರ ಮುಂದೆ ಹೇಗೆ ಧೈರ್ಯವಾಗಿ ಮಂಡಿಸಬೇಕು, ಅದಕ್ಕೆ ಮೊದಲು ಬೇಕಾದ ಪೂರ್ವಭಾವಿ ತಯಾರಿ, ಶಿಕ್ಷಕರು ನೀಡುವ ಸಲಹೆ, ಸೂಚನೆ , ಪ್ರೋತ್ಸಾಹ ಮಕ್ಕಳು ಮಾತನಾಡಲು ಹಿಂಜರಿಯದೇ ಸ್ಪಷ್ಟ ನಿಲುವಿನೊಂದಿಗೆ ಮಾತನಾಡುವಂತೆ ಮಾಡುವಲ್ಲಿ ಸಹಕಾರಿಯಾಗುತ್ತದೆ.
ಮನೆಯಲ್ಲಾಗಲಿ, ಹೊರಗಡೆಯಲ್ಲಾಗಲಿ ಮಾತನಾಡುವಾಗ ಮುಖಭಾವ, ಧ್ವನಿ ಎಲ್ಲವೂ ಎದುರಿಗಿರುವ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ವಿಪರೀತ ಜೋರಾದ ಧ್ವನಿಯಲ್ಲಿ ಮಾತನಾಡಿದರೆ,ಯಾಕೆ ಹೀಗೆ ಕಿರುಚ್ತಾ ಇದಾರೆ ಎನಿಸಲೂಬಹುದು ಜೊತೆಗೆ ಸುತ್ತಮುತ್ತಲಿನವರಿಗೆ ಕಿರಿಕಿರಿಯುಂಟಾಗಬಹುದು. ಕೊಂಕು, ವ್ಯಂಗ್ಯ, ಆ ವ್ಯಕ್ತಿಯ ಹಾವ-ಭಾವಗಳು ಎದುರಿಗಿರುವವರಲ್ಲಿ ಇನ್ನಷ್ಟು ರೋಷ ತರಿಸಬಹುದು. ಹಾಗಾಗಿ ಯಾವ ವಿಷಯವನ್ನಾದರೂ ಮಾತನಾಡುವಾಗ ಎದುರಿನವರಿಗೆ ಬೇಸರ, ಅವಮಾನ ಆಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಫೋಟೋ ಕೃಪೆ : ಅಂತರ್ಜಾಲ
ಒಂದು ಸಭೆ/ಸಮಾರಂಭಗಳಲ್ಲಿ ಗಹನವಾದ ವಿಷಯಗಳ ಬಗ್ಗೆ ಮಾತನಾಡುವಾಗ ಅದರ ಬಗ್ಗೆ ಆಳವಾದ ಅರಿವು ಇರಬೇಕು. ಯಾವುದೋ ಒಂದು ವಿಷಯದ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅದನ್ನು ನಾಲ್ಕು ಜನರ ಮುಂದೆ ಹೇಗೆ ವ್ಯಕ್ತಪಡಿಸಬೇಕು ಎಂಬ ಅರಿವಿರಬೇಕು. ದ್ವೇಷ, ಸಿಟ್ಟಿನಿಂದ ಕಿಚ್ಚು ಹಚ್ಚಿಸುವಂತಹ ಹೇಳಿಕೆಗಳನ್ನು ನೀಡಬಾರದು. ಮಾತನಾಡಬೇಕಾದರೆ ಅದರ ಮುಂದಿನ ಪರಿಣಾಮಗಳ ಬಗ್ಗೆ ಒಂದಲ್ಲ ಹತ್ತು ಬಾರಿ ಯೋಚಿಸಿ ಮಾತನಾಡಬೇಕು. ಏಕೆಂದರೆ, ಕೆಲವೊಂದು ಹೇಳಿಕೆಗಳು ಸಮಾಜದಲ್ಲಿ ಜನರ ನಡುವೆ ಭಿನ್ನಾಭಿಪ್ರಾಯ, ವೈಷಮ್ಯಕ್ಕೆ ಕಾರಣವಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ.
ಪಾಪ, ಇನ್ನು ಕೆಲವರಿಗೆ ಮನೆಯಲ್ಲಿ ಯಾರೂ ಮಾತನಾಡಲು ಅವಕಾಶವನ್ನೇ ಕೊಡುವುದಿಲ್ಲ. ನೀನು ಮಾತನಾಡಿದ್ದೇ ಸರಿ ಇಲ್ಲ, ನಿನಗೆ ಮಾತನಾಡಲು ಬರುವುದಿಲ್ಲ, ನಿನಗೇನೂ ತಿಳಿಯುವುದಿಲ್ಲ ಎಂದು ಅವರನ್ನು ಯಾವ ವಿಷಯದಲ್ಲೂ ಗಣನೆಗೇ ತೆಗೆದುಕೊಳ್ಳುವುದಿಲ್ಲ. ನಿಜವಾಗಲೂ ಅವರು ಸರಿಯಾಗೇ ಮಾತನಾಡುತ್ತಿದ್ದರೂ ಸಹ ತಮ್ಮ ಮಾತೇ ಸರಿ ಎಂಬ ಧೋರಣೆಯೋ/ಇನ್ನೊಬ್ಬರ ಮೇಲೆ ಹಿಡಿತ ಸಾಧಿಸುವ ಮನೋಭಾವವೋ ಅಂತೂ ಅವರ ಮಾತಿಗೆ ಕಿಮ್ಮತ್ತು ಬೆಲೆ ನೀಡದಿರುವುದು ಈಗಲೂ ಅನೇಕ ಮನೆಗಳಲ್ಲಿ ನಡೆಯುವ ಕಥೆ. ಇದರಿಂದ ಅವರಿಗೆ ತಮ್ಮ ಮೇಲೆ ಕೀಳರಿಮೆ ಬೆಳೆದು ಯಾರ ಮುಂದಾದರೂ ಮಾತನಾಡಬೇಕಾದ ಸಂದರ್ಭ ಬಂದಾಗ ಕೈಕಾಲು ನಡುಕ ಉಂಟಾಗುವುದು, ಗಂಟಲು ಒಣಗುವುದು, ನಾಲಿಗೆ ತಡವರಿಸುವುದು ಮುಂತಾದ ತೊಂದರೆಗಳಾಗಿ ಇನ್ನಷ್ಟು ಕುಗ್ಗಿ ಹೋಗುತ್ತಾರೆ. ಹಾಗಾಗಿ ಯಾರೂ ಇನ್ನೊಬ್ಬರ ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಬಾರದು. ಒಂದು ವೇಳೆ ನಿಜವಾಗಲೂ ಅವರ ಮಾತಿನಲ್ಲಿ ಸ್ಪಷ್ಟತೆ ಇಲ್ಲದಿದ್ದರೆ, ಬೇಕಾಬಿಟ್ಟಿ ಮಾತನಾಡುತ್ತಿದ್ದರೆ, ಅವರ ಮಾತಿನಿಂದ ಬೇರೆಯವರಿಗೆ ಸಮಸ್ಯೆಯಾಗುತ್ತಿದ್ದರೆ ಅವರಿಗೆ ಅದನ್ನು ನಿಧಾನಕ್ಕೆ ತಿಳಿಸಿ ಸರಿಪಡಿಸುವುದು ಅಥವಾ ತೀರಾ ಅವಶ್ಯಕತೆ ಎನಿಸಿದ ಸಂದರ್ಭದಲ್ಲಿ ಬೇಕಾದ ಆಪ್ತಸಮಾಲೋಚನೆಯ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಎಲ್ಲರಂತೆ ಅವರೂ ಸಹಜವಾಗಿ ಮಾತನಾಡುವಂತೆ ಮಾಡುವ ಪ್ರಯತ್ನ ಮಾಡುವುದು ಜೊತೆಯಲ್ಲಿರುವವರ ಕರ್ತವ್ಯವೂ ಹೌದು.
ಕೆಲವರಂತೂ ಯಾವಾಗಲೂ ನಗುನಗುತ್ತಾ ಮಾತನಾಡುತ್ತಾರೆ. ಅಂತಹವರನ್ನು ನೋಡುವುದೇ ಒಂದು ಖುಷಿ. ಎಂತಹ ಬೇಸರದಲ್ಲಿದ್ದರೂ ನೋಡುವವರ ಮೊಗದಲ್ಲೂ ಒಮ್ಮೆ ನಗು ಸುಳಿದು ಹೋಗುತ್ತದೆ. ಒಂದು ರೀತಿಯ ಸ್ಫೂರ್ತಿ ಬಂದಂತಾಗುತ್ತದೆ. ಹಾಗಂತ ಅವರಿಗೇನು ಕಷ್ಟ, ಬೇಸರ, ದುಃಖ ಇಲ್ಲವೆಂದಲ್ಲ. ಎಲ್ಲರಂತೆ ಅವರ ಜೀವನದಲ್ಲೂ ಇವೆಲ್ಲವನ್ನೂ ದಾಟಿಯೇ ಬಂದಿರುತ್ತಾರೆ. ಪ್ರಸ್ತುತದಲ್ಲೂ ಅನುಭವಿಸುತ್ತಿರುತ್ತಾರೆ. ಆದರೆ ಎಲ್ಲವನ್ನೂ ಅವರು ತೆಗೆದುಕೊಳ್ಳುವ ರೀತಿ ಮಾತ್ರ ಅನನ್ಯ.
ಎಲ್ಲರಿಗೂ ಮಾತನಾಡುವ ಕಲೆ ಒಲಿಯುತ್ತದೆಯೋ/ ಇಲ್ಲವೋ ಗೊತ್ತಿಲ್ಲ. ಆದರೆ ಏನು ಮಾತನಾಡುತ್ತಿದ್ದೇವೆಂಬ ಅರಿವಂತೂ ಇದ್ದೇ ಇರುತ್ತದೆ. ಹಾಗಾಗಿ ಆಡುವ ಮಾತು ಬೇರೆಯವರಿಗೆ ಯಾಕಾದ್ರು ಇವ್ರತ್ರ ಮಾತಾಡಿದ್ವೋ ಎನಿಸದೇ ನಿಮ್ಮತ್ರ ಮಾತಾಡಿದ್ದು ತುಂಬಾ ಖುಷಿಯಾಯ್ತು ಎನ್ನುವಂತಿರಲಿ ಎಂಬ ಆಶಯದೊಂದಿಗೆ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
-
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಅಂಗೈಯಲ್ಲಿ ಪ್ರಪಂಚ (ಭಾಗ- ೩೦)
- ಅಂಗೈಯಲ್ಲಿ ಪ್ರಪಂಚ ‘ ಬಫೆ ಸಿಸ್ಟಮ್’ (ಭಾಗ- ೩೧)
- ಅಂಗೈಯಲ್ಲಿ ಪ್ರಪಂಚ ‘ ಸ್ನೇಹ ಸಂಬಂಧ’ (ಭಾಗ- ೩೨)
- ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.
