ಮಣ್ಣೆತ್ತಿನ ಅಮಾವಾಸ್ಯೆ ವಿಶೇಷತೆ

ಮಣ್ಣೆತ್ತಿನ ಅಮಾವಾಸ್ಯೆಯ ದಿನ ರೈತರು ಹೊಲಕ್ಕೆ ಹೋಗಿ ಹೊಲದ ಮಣ್ಣು ತಂದು ಆ ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸಿ ಅವುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡಿ ಪೂಜಿಸುತ್ತಾರೆ. ಮಣ್ಣೆತ್ತಿನ ಅಮಾವಾಸ್ಯೆಯ ದಿನದ ವಿಶೇಷತೆಯ ಕುರಿತು ಲೇಖಕರಾದ ಸುಜಾತಾ ರವೀಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ನಮ್ಮ ದೇಶ ವೈವಿಧ್ಯತೆಯ ದೇಶವಾದಂತೆ ನಮ್ಮ ಸಂಸ್ಕೃತಿಯ ಸಂಪ್ರದಾಯ ಹಬ್ಬ ಆಚರಣೆಗಳಿಗೆ ಬಹಳ ಮಹತ್ವವಿದೆ ಕೃಷಿಯೇ ಮೂಲ ವಾದ ನಮ್ಮ ದೇಶದಲ್ಲಿ ರೈತ ವರ್ಗಕ್ಕೆ ಕೆಲವರು ಹಬ್ಬಗಳಿದೆ ರೈತರ ಉಸಿರು ಮಣ್ಣು ಮತ್ತು ಜಾನುವಾರುಗಳು ಇವೆರಡಕ್ಕೂ ಪ್ರಾಮುಖ್ಯತೆ ದೈವಿಕತೆ ತಂದು ಕೊಡುವ ಹಬ್ಬ ಮನೆತನ ಅಮಾವಾಸ್ಯೆ ಸಾಮಾನ್ಯ ಜನರಿಗೆ ಇದರ ಆಚರಣೆ ಅಷ್ಟೇನೂ ಇಲ್ಲದಿದ್ದರೂ ನೇಗಿಲ ಯೋಗಿ ಗಂತು ಇದು ಬಲು ಸಡಗರದ ಹಬ್ಬ ತನ್ನ ಕೃತಜ್ಞತೆಯನ್ನು ತೋರಿಸಿಕೊಳ್ಳಲು ಒಂದು ಸದವಕಾಶ.

ವೃಷಭ ತನ್ನ ಗಂಡು ರೂಪದಲ್ಲಿ ಹೋರಿ ಎನಿಸಿ ಅತ್ಯಂತ ಬಲಶಾಲಿಯಾಗಿ ಸಂತಾನೋತ್ಪತ್ತಿಯ ಸಂಕೇತ ಎನಿಸಿದರೆ ತನ್ನ ಹೆಣ್ಣು ರೂಪದಲ್ಲಿ ಮಣ್ಣನ್ನು ಪ್ರತಿನಿಧಿಸಿ ಸಂತಾನೋತ್ಪತ್ತಿಗೆ ಸಹಾಯಕ ಎನಿಸುತ್ತಾನೆ. ಹಾಗಾಗಿ ವೃಷಭ ಹಾಗೂ ಮಣ್ಣು ಎರಡನ್ನೂ ಪೂಜಿಸುವ ಈ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆ ಅರ್ಥಪೂರ್ಣ.

ಗ್ರೀಷ್ಮ ಋತುವಿನ ಅಂತ್ಯ ಹಾಗೂ ವರ್ಷ ಋತುವಿನ ಆರಂಭವೆಂದರೆ ದೇಶದಲ್ಲಿ ಮುಂಗಾರು ಮಳೆಯ ಕಾಲ ಅಂದರೆ ಮಾನ್ಸೂನ್ ಮಾರುತಗಳು ದೇಶದಲ್ಲಿ ಸಮೃದ್ಧ ಮಳೆ ನೀಡುವ ಸಮಯ. ಅಂದರೆ ಈ ಜೂನ್ ವೇಳೆ ಆರಂಭವಾದಾಗ ಕೃಷಿ ಚಟುವಟಿಕೆಗಳು ಸಹ ಆರಂಭವಾಗುತ್ತದೆ ಪುನರ್ವಸು ಮಳೆ ಬೀಳುವ ಹೊತ್ತಿಗೆ ಬಿತ್ತನೆ ಮುಗಿದು ನಾಟಿ ಸಹ ಆಗಿರುತ್ತದೆ ಇಲ್ಲಿಗೆ ಒಂದು ಹಂತದ ಕೃಷಿ ಚಟುವಟಿಕೆಗಳ ಮುಕ್ತಾಯ ಅದನ್ನು ಆಚರಿಸಲು ಆ ಸಂಭ್ರಮವನ್ನು ಸವಿಯಲು ರೈತರು ಜೇಷ್ಠ ಮಾಸದ ಅಮಾವಾಸ್ಯೆಯ ದಿನ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸುತ್ತಾರೆ.

ಅಂದಿನ ದಿನ ರೈತರು ಹೊಲಕ್ಕೆ ಹೋಗಿ ಹೊಲದ ಮಣ್ಣು ತಂದು ಆ ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸಿ ಅವುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡಿ ಪೂಜಿಸುತ್ತಾರೆ. ನಂತರ ಎತ್ತುಗಳಿಗೆ ಹೋಳಿಗೆ ಸಿಹಿ ಕಡಬು ನೈವೇದ್ಯ ಸಮರ್ಪಿಸಲಾಗುತ್ತದೆ ನಂತರ ಅದನ್ನು ಹೊಲಕ್ಕೆ ತೆಗೆದುಕೊಂಡು ಹೋಗಿ ಭೂಮಿತಾಯಿಗೂ ನೈವೇದ್ಯ ಇಟ್ಟು ಭೂತಾಯಿ ಹಾಗೂ ಎತ್ತುಗಳನ್ನು ನಮ್ಮ ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುವುದು ವಾಡಿಕೆ. ಹೀಗೆ ಇಲ್ಲಿ ಭೂಮಿತಾಯಿಯ ಆರಾಧನೆಯು ಸಹ ನಡೆಯುತ್ತದೆ ಇತ್ತೀಚೆಗೆ ಮಣ್ಣಿನ ಎತ್ತುಗಳನ್ನು ಕುಂಬಾರರಿಂದ ಕೊಂಡು ತಂದು ಸಹ ಪೂಜಿಸುವ ವಾಡಿಕೆ ಇದೆ.

ಹೀಗೆ ವೃಷಭ ಆರಾಧನೆಯನ್ನು ಮಾಡುವಾಗ ಈ ಧ್ಯಾನ ಶ್ಲೋಕವನ್ನು ಹೇಳಿಕೊಳ್ಳುತ್ತಾರೆ.

ಧರ್ಮಸ್ಥಂ ವೃಷ ರೂಪೇಣ ಜಗದಾನಂದ ಕಾರಕ
ಅಷ್ಟಮೂರ್ತೇರಧಿಷ್ಠಾನಂ ಅತಃ ಪಾಹಿ ಸನಾತನ.

ನಾವು ಇಷ್ಟೆಲ್ಲಾ ಪೂಜನೀಯ ಎಂದು ಭಾವಿಸುವ ನಂದಿ ಅಥವಾ ಬಸವಣ್ಣ ನ ಪರಿಸ್ಥಿತಿ ಇಂದಿನ ದಿನಮಾನಗಳಲ್ಲಿ ಹೇಗಿದೆ ಎಂದು ಅವಲೋಕಿಸಿದಾಗ ನಿಜಕ್ಕೂ ತುಂಬಾ ದುಃಖವೆನಿಸುತ್ತದೆ ಯಾಂತ್ರಿಕೃತ ಕೃಷಿ ಪದ್ಧತಿ ಹೆಚ್ಚಾಗುತ್ತಿರುವ ಕಾರಣ ಎತ್ತುಗಳನ್ನು ವ್ಯವಸಾಯದಲ್ಲಿ ಬಳಸುವುದು ಕಡಿಮೆಯಾಗುತ್ತಿದೆ ಗೊಬ್ಬರಕ್ಕಾಗಿ ಸಾವಯವ ಗೊಬ್ಬರಕ್ಕಾಗಿ ಬಳಕೆಯಾಗುತ್ತಿದ್ದ ಹಸು ಎತ್ತುಗಳ ಸಗಣಿ ಈಗ ರಾಸಾಯನಿಕ ಗೊಬ್ಬರಗಳ ಭರಾಟೆಯಲ್ಲಿ ಮಾಯವಾಗುತ್ತಿದೆ ಹಾಲಿಗೋಸ್ಕರ ಹೈನು ಉದ್ಯಮದಲ್ಲಿ ಹೆಣ್ಣು ಕರುಗಳಿಗೆ ಹೆಚ್ಚಿನ ಬೇಡಿಕೆ ಹಾಗಾಗಿ ಗಂಡು ಕರು ಹುಟ್ಟಿದರೆ ಅದನ್ನು ಕಸಾಯಿಖಾನೆಗಳಿಗೆ ಮಾರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಲ್ಲದಿದ್ದರೆ ಸರಿಯಾಗಿ ಪೋಷಣೆ ಮಾಡದೆ ಬೀದಿಗೆ ಬಿಟ್ಟು ಜನರಿಗೆ ತೊಂದರೆಗಳು ಸಹ. ಇದನ್ನೆಲ್ಲಾ ತಡೆಯಲು ಕೆಲವೊಂದು ಪ್ರಾಣಿ ದಯಾ ಸಂಘಗಳು ಹಾಗೂ ಎನ್‌ಜಿಓ ಗಳು ಪ್ರಯತ್ನ ಪಡುತ್ತಿದ್ದಾರೆ .‌ಬೀದಿಗೆ ಬಿಟ್ಟ ಬಸವಗಳ ಯೋಗಕ್ಷೇಮಕ್ಕಾಗಿ ಅವುಗಳನ್ನು ದತ್ತು ತೆಗೆದುಕೊಂಡು ಪೋಷಣೆಗೆ ಹಣ ನೀಡುವುದು, ಹೊಸ ಹೊಸ ಗೋಶಾಲೆಗಳನ್ನು ಸ್ಥಾಪಿಸಿ ಎತ್ತುಗಳ ಮಾರಣ ಹೋಮ ತಡೆಯುವುದು ಮೊದಲಾದ ಕಾರ್ಯಗಳಿಗೆ ಜನರನ್ನು ಪ್ರೇರೇಪಿಸನಡೆಯುತ್ತಿದೆ. ಆ ಕಸಾಯಿ ಖಾನೆಗಳಲ್ಲಿ ಕಿಂಚಿತ್ತು ದಯವಿರದೆ ಅವುಗಳನ್ನು ಸಂಹರಿಸುವ ವಿಧಾನಗಳು ಕರುಳು ಕಲಕುತ್ತವೆ ಕಣ್ಣೀರು ತರುತ್ತದೆ. ಈ ವಿಷಯದಲ್ಲಿ ಒಂದು ವಿಡಿಯೋ ಸ್ವಲ್ಪ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಹರಿದಾಡುತ್ತಿತ್ತು. ಸರಕಾರವೂ ಸಹ ಅನೇಕ ಕ್ರಮಗಳನ್ನು ಕೈಗೊಂಡಿದೆ. ಏನೇ ಆದರೂ ಈ ವಿಷಯದಲ್ಲಿ ಸಾಮಾಜಿಕ ಜಾಗೃತಿ ಮೂಡಬೇಕಾದದ್ದು ಅವಶ್ಯ. ಹಿಂದಿನಿಂದ ಪೂಜಿಸಿಕೊಂಡು ಆರಾಧಿಸಿಕೊಂಡು ಬಂದಿರುವ ವೃಷಭವನ್ನು ಕಡೆಗಣಿಸುವುದು ಮನು ಸಂಸ್ಕೃತಿಗೆ ತರವಲ್ಲ ಒಳಿತಲ್ಲ. ಈ ಬಗ್ಗೆ ಮತ್ತಷ್ಟು ಹೆಚ್ಚಿನ ಕ್ರಮ ಪರಿಶ್ರಮ ಕಾಳಜಿ ಗಮನ ವಹಿಸಬೇಕಾದದ್ದು ಹಿಂದೂಗಳಾದ ನಮ್ಮೆಲ್ಲರ ಆಧ್ಯ ಕರ್ತವ್ಯ.

ಹಿಂದೂ ಧರ್ಮದ ಆಚರಣೆಗಳ‌ ಹಿಂದೆ ಯಾವಾಗಲೂ ಸಕಾರಣಗಳು ಇದ್ದೇ ಇರುತ್ತವೆ. ಪ್ರಕೃತಿಯ ಭಾಗವಾದ ಮಾನವ, ಪ್ರಕೃತಿಯ ಇತರೆ ಸಹಚರಗಳನ್ನೂ ತನ್ನಂತೇ ಭಾವಿಸಿ ಅವುಗಳಿಗೆ ಗೌರವಾಭಿಮಾನಗಳನ್ನು ನೀಡಲು ಹಿಂದಿನವರು ಈ ರೀತಿಯ ಆಚರಣೆಗಳನ್ನು ಪರಿಚಯಿಸಿದ್ದಾರೆ.

ಪರಿಸರ ಸಂರಕ್ಷಣೆ ಹಾಗೂ ಸಮತೋಲನ ಕಾಪಾಡಬೇಕಾಗಿರುವುದು ಇಂದಿನ ಅತ್ಯಂತ ದೊಡ್ಡ ಹೊಣೆಗಾರಿಕೆ. ಎಲ್ಲಾ ಜೀವಿಗಳು ಸಮುದಾಯದೊಳಗೆ ಕ್ರಿಯಾತ್ಮಕ ಸಮತೋಲನದ ಸ್ಥಿತಿಯಲ್ಲಿದ್ದಲ್ಲಿ ಮಾತ್ರ ಪ್ರಕೃತಿಯ ಎಲ್ಲಾ ಜೀವಿಗಳ ಸಂತುಲಿತ ಬಾಳ್ವೆ ಸಾಧ್ಯ. ವೈವಿಧ್ಯಮಯ ಜೀವಿಗಳು ಒಂದಕ್ಕೊಂದು ಪೂರಕವಾಗುವಂತೆ ಪರಿಸರ ನಿರ್ಮಾಣವಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನ. ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತಿ ಪ್ರಾಮುಖ್ಯ ಅಥವಾ ಅನಿವಾರ್ಯದ ಸಂಗತಿಯಾಗಿ ಬಿಟ್ಟಿದೆ. ಹೊಸ ಪ್ರಭೇದಗಳ ಪರಿಚಯ, ಕೆಲವು ಜಾತಿಗಳ ಹಠಾತ್ ಸಾವು, ನೈಸರ್ಗಿಕ ಅಪಾಯಗಳು ಅಥವಾ ಮಾನವ ನಿರ್ಮಿತ ಕಾರಣಗಳಿಂದಾಗಿ ಈ ಸಮತೋಲನವು ತೊಂದರೆಗೊಳಗಾಗುತ್ತಿದೆ. ಇತಿಹಾಸದುದ್ದಕ್ಕೂ ಪರಿಸರದ ಬಗ್ಗೆಗಿದ್ದ ಕಾಳಜಿಗಳು ಹಾಗೂ ಆ ಕಾಳಜಿ ಯಾವ ರೀತಿ ಮಾನವನಿಗೆ ಮಾತ್ರ ಅನುಕೂಲವಾಗುವಂತೆ ಹೇಗೆ ನಿಧಾನವಾಗಿ ಬದಲಾವಣೆಗೊಂಡು ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ ಎಂಬುದು ಗೊತ್ತಾಗಿಯೇ, ಹಿಂದೂ ಧರ್ಮದಲ್ಲಿ ನಾಗರ ಪಂಚಮಿ, ವೃಷಭ ಸಂಕ್ರಮಣ, ಮಕರ ಸಂಕ್ರಂತಿ ಇತ್ಯಾದಿ ಆಚರಣೆಗಳನ್ನು ಪರಿಚಯಿಸಿರಬೇಕು. ಈ ರೀತಿಯ ಎಷ್ಟೋ ಆಚರಣೆಗಳಿಂದ ನಾವು ಪರಿಸರದ ಇತರೆ ಪ್ರಾಣಿ, ಪಕ್ಷಿ ಸಂಕುಲದ ಬಗ್ಗೆ ಕಾಳಜಿ ತೋರಲಿ ಎಂಬ ಆಶಯವಿದೆ.

ಆದ್ದರಿಂದ, ಹಿಂದೂ ಧರ್ಮದ ಆಚರಣೆಗಳ ಹಿಂದೆ ಇರುವ ನಿಖರ ನಿರ್ದಿಷ್ಟ ಕಾರಣಗಳನ್ನು ಅರಿತು ಅದಕ್ಕೆ ಪೂರಕವಾಗಿ ನಮ್ಮ‌ ನಡೆಯನ್ನು ಬದಲಾಯಿಸಿಕೊಂಡು ಆಚರಿಸಿದಲ್ಲಿ ಮಾತ್ರ ಈ ಆಚರಣೆಗಳು ಹಾಗೂ ರೀತಿ ರಿವಾಜುಗಳು ಅರ್ಥಪೂರ್ಣ ಎನಿಸಿತ್ತವೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಸಾಗೋಣ. ಸುಮ್ಮನೆ ಹಿರಿಯರು ಪಾಲಿಸುತ್ತಿದ್ದರು ಎಂದು ಕಾರಣ ತಿಳಿಯದೆ ಅಂಧ ಆಚರಣೆ ಮಾಡುವುದು ಸಲ್ಲ. ಪರಿಸರದ ಇತರೆ ಜೀವ ಸಂಕುಲಗಳೂ ಬಾಳಲು ಅನುಕೂಲವಾಗುವಂತೆ, ಪ್ರಕೃತಿಯ ನಮ್ಮ ಸಹಬಂಧುಗಳಿಗೆ ನಮ್ಮ ಕೃತಜ್ಞತೆ ತೋರಿಸಲು ಪಾಲಿಸುತ್ತಿರುವ ಈ ಹಬ್ಬಗಳನ್ನು ಅರ್ಥಪೂರ್ಣವಾಗಿ ನಾವು ಆಚರಿಸಬೇಕು.


  • ಸುಜಾತಾ ರವೀಶ್ – ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading