“ಹೆಣ್ಣು ಒಂದು ಕುಟುಂಬದ ಕಣ್ಣು,” ಸಂಸಾರದ ನಾವಿಕ ಎಂದು ಕರೆಯಲಾಗುತ್ತದೆ. ಅವಳಲ್ಲಿ ಶಾಂತಿ, ಸಹನೆಯಂತಹ ತಾಪತ್ರಯಗಳು ಎದುರಾದರೂ ಹೊಂದಿಕೊಂಡು ಹೋಗುವ ಸ್ವಭಾವವಿದ್ದರೆ ಬದುಕು ಸರಾಗವಾಗಿ ಸಾಗುತ್ತದೆ. ಲೇಖಕರಾದ ಓಂಕಾರ ಪಾಟೀಲ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಹೆಣ್ಣಿಗೆ ಹಠ ಗಂಡಿಗೆ ಚಟ ಒಳ್ಳೆದಲ್ಲ
ಹೆಣ್ಣಿಗೆ ಹಠ ಗಂಡಿಗೆ ಚಟ ಒಳ್ಳೆದಲ್ಲ ಅನ್ನುವ ಹಿರಿಯರು ತಲತಲಾoತರದಿಂದ ಹೇಳಿಕೊಂಡು ಬರುತ್ತಿರುವ ಗಾದೆಮಾತು ಅಕ್ಷರಸಹ ಸತ್ಯ. ನಮ್ಮ ಕನ್ನಡ ಸಂಸ್ಕೃತಿ ಮತ್ತು ಜನಪದ ಸಾಹಿತ್ಯದಲ್ಲಿ ಇಂತಹ ಗಾದೆ ಮಾತುಗಳಿಗೆ ಅತ್ಯಂತ ಉನ್ನತವಾದ ಸ್ಥಾನವಿದೆ. “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎಂಬ ಮಾತಿನಂತೆ, ಹಿರಿಯರು ತಮ್ಮ ಅನುಭವದ ಸಾರವನ್ನು ಇಂತಹ ಚುಟುಕಾದ ಮಾತುಗಳಲ್ಲಿ ಹಿಡಿದಿಟ್ಟಿದ್ದಾರೆ. ಅಂತಹ ಜನಪ್ರಿಯ ಹಾಗೂ ಇಂದಿನ ಕಾಲಕ್ಕೂ ಪ್ರಸ್ತುತವಾಗಿರುವ ಅತ್ಯಂತ ಅರ್ಥಗರ್ಭಿತ ಗಾದೆ ಮಾತಾಗಿದೆ.
“ಹೆಣ್ಣಿಗೆ ಹಠ ಗಂಡಿಗೆ ಚಟ ಒಳ್ಳೆದಲ್ಲ”. ಈ ಗಾದೆಯ ಮಾತು ಆಳವಾದ ಅರ್ಥ ಮತ್ತು ಸಾಮಾಜಿಕ ಪ್ರಸ್ತುತತೆಯನ್ನು ವಿಶ್ಲೇಷಿಸುತ್ತದೆ. ಮಾನವನ ಸ್ವಭಾವ ಮತ್ತು ಹಠ ಮತ್ತು ಚಟವುಳ್ಳ ಮನುಷ್ಯನ ಬದುಕನ್ನು ಹೇಗೆ ಅವನತಿಯತ್ತ ತಳ್ಳುತ್ತದೆ, ಹಾಗು ಅದರಿಂದ ಆಗುವ ದುಷ್ಪರಿಣಾಮಗಳನ್ನು ಕುರಿತು ಈ ಮಾತು ವ್ಯಕ್ತವಾಗಿದೆ ಅನ್ನಬಹುದು.
“ಹೆಣ್ಣು ಒಂದು ಕುಟುಂಬದ ಕಣ್ಣು,” ಸಂಸಾರದ ನಾವಿಕ ಎಂದು ಕರೆಯಲಾಗುತ್ತದೆ. ಅವಳಲ್ಲಿ ಶಾಂತಿ, ಸಹನೆ ಹೆಂತಹ ತಾಪತ್ರಯಗಳು ಎದುರಾದರೂ ಹೊಂದಿಕೊಂಡು ಹೋಗುವ ಸ್ವಭಾವವಿದ್ದರೆ ಬದುಕು ಸರಾಗವಾಗಿ ಸಾಗುತ್ತದೆ. ಮನೆ ನಂದಾದೀಪದಂತೆ ಬೆಳಗುತ್ತದೆ. ಆದರೆ ಅದೇ ಹೆಣ್ಣು ಅನಗತ್ಯ ವಿಷಯಗಳಿಗೆ ಅತಿಯಾಗಿ ಹಠಮರಿಯಾದರೆ ಆ ಇಡೀ ಸಂಸಾರದ ಶಾಂತಿ ಕಣ್ಮರೆಯಾಗುತ್ತದೆ. ಇಲ್ಲಿ ‘ಹಠ’ ಎಂದರೆ ಕೇವಲ ತನಗೆ ಬೇಕಾದುದನ್ನು ಸಾಧಿಸಿಕೊಳ್ಳುವುದಲ್ಲ; ಬದಲಿಗೆ ಅಹಂಕಾರ, ಮೊಂಡುತನ ಮತ್ತು ಇತರರ ಭಾವನೆಗಳಿಗೆ ಗೌರವ ನೀಡದಿರುವುದು. ಹೆಣ್ಣಿನ ಇಂತಹ ಮೊಂಡುತನವು ಗಂಡ-ಹೆಂಡತಿಯ ನಡುವೆ ಬಿರುಕು ಮೂಡಿಸುವುದಲ್ಲದೆ, ಮಕ್ಕಳ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಅಂತಿಮವಾಗಿ ಸುಂದರವಾದ ಸಂಸಾರ ನರಕಸದೃಶವಾಗುತ್ತದೆ.
ಗಂಡಿನ ಚಟ ಮತ್ತು ಅದರ ವಿನಾಶಕಾರಿ
ಹೆಣ್ಣಿನಂತೆ ಗಂಡು ಕೂಡ ತನ್ನ ಕುಟುಂಬದ ಜವಾಬ್ದಾರಿ ಹೊರುವ ಮುಖ್ಯಸ್ಥ, ಅವನು ಕುಟುಂಬದ ಆಧಾರಸ್ತಂಭವಾಗಿ ಕುಟುಂಬ ನಿರ್ವಹಣೆ ಮಾಡುವ ದೊಡ್ಡ ಜವಾಬ್ದಾರಿ ಹಾಗು ಇಡೀ ಕುಟುಂಬದ ಆರ್ಥಿಕ ಭದ್ರತೆ ಮತ್ತು ಸುರಕ್ಷತೆಯ ಜವಾಬ್ದಾರಿ ಆತನ ಮೇಲಿರುತ್ತದೆ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಗಂಡಸು ಕುಡಿತ, ಜೂಜು, ಸಿಗರೇಟ್ ಅಥವಾ ಇನ್ಯಾವುದೇ ದುಷ್ಟ ಚಟಗಳಿಗೆ ದಾಸನಾದರೆ, ಆತ ಕೇವಲ ತನ್ನ ಆರೋಗ್ಯವನ್ನಷ್ಟೇ ಅಲ್ಲದೆ ಇಡೀ ಕುಟುಂಬದ ಭವಿಷ್ಯವನ್ನೇ ನಾಶಪಡಿಸುತ್ತಾನೆ.
ಚಟಗಳು ಚಟ್ಟ ಕಟ್ಟುತ್ತವೆ
ಚಟಗಳು ಮನುಷ್ಯನ ವಿವೇಚನಾ ಶಕ್ತಿಯನ್ನು ಕುಂದಿಸುತ್ತವೆ. ಇದರಿಂದ ಕಷ್ಟಪಟ್ಟು ಸಂಪಾದಿಸಿದ ಹಣವೆಲ್ಲ ನೀರಾಗಿ ಹರಿದು ಹೋಗುತ್ತದೆ, ಸಾಲದ ಶೂಲಕ್ಕೆ ಸಿಲುಕಿ ಇಡೀ ಕುಟುಂಬ ಬೀದಿಗೆ ಬರುವಂತಾಗುತ್ತದೆ. ಗಂಡಸರು ಅವರ ಚಟದಿಂದಾಗಿ ಅರೋಗ್ಯ ಹದಗೆಟ್ಟು ಸಮಾಜದಲ್ಲಿ ಎಷ್ಟೋ ಜನ ಹೆಂಡರು ಮಕ್ಕಳು ಹಾಗು ಅವರನ್ನೇ ನಂಬಿದ ಕುಟುಂಬದವರು ಅನಾಥರಾಗಿರುವುದು ಕಾಣ ಬಹುದಾಗಿದೆ.
ಹೆಣ್ಣು ಮತ್ತು ಗಂಡು ಸಂಸಾರದ ದಾರವಿದ್ದಂತೆ,ದಾರವೇ ಕಡಿದು ದಾರದಲ್ಲಿರುವ ಮುತ್ತುಗಳು ಛಿದ್ರವಾಗಿ ಚದುರಿ ಹೋದಂತೆ ಹಠ ಮತ್ತು ಚಟದ ಗುಣಗಳ ಕಾರಣ ಕುಟುಂಬದಲ್ಲಿ ಕಲಹ ಮೂಡಿ ಮನುಷ್ಯನ ಮನಸ್ಸು ಕಲುಷಿತವಾಗಿ ಕುಟುಂಬಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.
ಆತ್ಮೀಯರೇ ಮನುಷ್ಯನಿಗೆ ಹಠ ಮತ್ತು ಚಟ ಎರಡು ಇರಲಿ ಆದರೆ ಅವುಗಳು ಹೇಗಿರಬೇಕೆಂದರೆ ಹಠ ಎಂದರೆ ಸಾಧಿಸುವ ಛಲವಾಗಿರಬೇಕು, ಅದು ಮನುಷ್ಯನ ಬದುಕಿನ ಅಂತ್ಯವಾಗದೆ ಮನುಷ್ಯನ ಬದುಕಿನ ಪ್ರಗತಿಗೆ ನಾಂದಿಯಾಗಬೇಕು.
ಅದೇ ರೀತಿ ಮನುಷ್ಯ ದುಷ್ಟಗಳ ದಾಸನಾಗುವ ಬದಲು ಒಳ್ಳೆಯ ಅಭ್ಯಾಸಗಳನ್ನು ಚಟವಾಗಿಸಿಕೊಳ್ಳಬೇಕು. ಪುಸ್ತಕ ಓದುವುದು, ಯೋಗ ವ್ಯಾಯಾಮ, ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸುವದು, ಇನ್ನಿತರ ಸಮಾಜಮುಖಿ ಚಟುವಟಿಕೆಗಳನ್ನು ರೂಡಿಸಿಕೊಂಡರೆ ಅಂಥ ವ್ಯಕ್ತಿ ಸಮಾಜಕ್ಕೆ ಮಾದರಿಯಾಗುತ್ತಾನೆ.
ಒಂದು ಕುಟುಂಬದ ವಿಷಯವಾಗಿ ಹೇಳುವದಾದರೆ ಸಂಸಾರದಲ್ಲಿ ಸಾರವಿರಬೇಕು, ಸಂಸಾರ ಖಾರವಾಗಬಾರದು. ಬಂಡಿಯ ಎರಡು ಚಕ್ರಗಳoತಿರುವ ಗಂಡು ಹೆಣ್ಣು ಜೋಡೆತ್ತುಗಳಂತೆ ಪರಸ್ಪರ ಹೊಂದಾಣಿಕೆ, ಪ್ರೀತಿ ಮತ್ತು ಜವಾಬ್ದಾರಿಯನ್ನು ಅರಿತು ಸಾಗಿದರೆ ಮಾತ್ರ ಸಂಸಾರ ಸರಾಗವಾಗಿ ಸಾಗಿ ಮನೆ ನಂದನವನವಾಗಲು ಸಾಧ್ಯ.
- ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.
