ನಗು ಎನ್ನುವುದು ಒಂದು ಸಹಜ ಪ್ರಕ್ರಿಯೆ. ನಗುವಿನಲ್ಲೂ ಅನೇಕ ವಿಧಗಳಿವೆ. ಮುಖ ಸಿಂಡರಿಸಿಕೊಂಡಿದ್ದರೆ ಯಾರೂ ಹತ್ತಿರ ಬರುವುದಿಲ್ಲ. ಅಂತಹವರ ಸಹವಾಸವೇ ಬೇಡವೆಂದು ಎಲ್ಲರೂ ದೂರ ಹೋಗುತ್ತಾರೆ. ಆದ್ದರಿಂದ ಒಮ್ಮೆ ಬಿಗುಮಾನ ಬಿಟ್ಟು ನಕ್ಕು ಎಲ್ಲರೊಂದಿಗೆ ಬೆರೆತು ನೋಡಿ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ನಗು’ ವಿನ ಮಹತ್ವವನ್ನು ತಪ್ಪದೆ ಮುಂದೆ ಓದಿ…
ಮದುವೆಯಾಗಿ ಆರು ವರ್ಷದ ನಂತರ ಈಗ ಆ ಮನೆಯಲ್ಲಿ ಸಂಭ್ರಮದ ವಾತಾವರಣ. ಇಂದು ಆ ಐದು ತಿಂಗಳ ಮಗುವಿನ ನಾಮಕರಣ. ಮನೆಯೆಲ್ಲಾ ಮಗುವಿನ ನಗುವಿನಿಂದ ಕಳಕಳೆಯಾಗಿದೆ. ತೊಟ್ಟಿಲಲ್ಲಿ ಆಡುವ ಕಂದನ ಮುಗ್ಧ ನಗು, ನಿದ್ದೆಯಲ್ಲಿನ ಹುಸಿ ನಗು ತಾಯಿ-ತಂದೆಯ ಕಳೆದು ಹೋಗಿದ್ದ ನಗುವನ್ನು ಮತ್ತೆ ಹಿಂದಿರುಗಿಸಿದೆ. ಆ ಮನೆ ಈಗ ನಂದನವನ.
ಅದೊಂದು ಹಾಸ್ಯ ಕಾರ್ಯಕ್ರಮ. ತಮ್ಮದೇ ಆದ ಮಾತಿನ ಶೈಲಿಯಿಂದ ಜನರ ಮನಸ್ಸನ್ನು ಗೆದ್ದ ನಾಡಿನ ಹೆಸರಾಂತ ಹಾಸ್ಯ ಕಲಾವಿದರ ಸಂಗಮವೇ ಅಲ್ಲಿತ್ತು. ಅವರನ್ನೆಲ್ಲಾ ಟಿವಿಯಲ್ಲಿ ನೋಡುತ್ತಿದ್ದವರು ತಮ್ಮ ಹಳ್ಳಿಗೇ ಬರುತ್ತಾರೆಂದು ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮಕ್ಕಳು ಪಟ್ಟಣ, ವಿದೇಶ ಸೇರಿ ಇಳಿ ವಯಸ್ಸಿನಲ್ಲಿ ಇಬ್ಬರೇ ದಿನದೂಡುತ್ತಿದ್ದ ದಂಪತಿಗಳು ಈ ಕಾರ್ಯಕ್ರಮಕ್ಕೆ ತಮ್ಮ ನೋವು ಮರೆಯಲೆಂದೇ ಬಂದಿದ್ದರು. ಒಬ್ಬೊಬ್ಬರು ಹಾಸ್ಯ ಕಲಾವಿದರು ವೇದಿಕೆಯ ಮೇಲೆ ಬಂದಾಗಲೂ ಆ ಜನರಿಗೆ ತಮ್ಮ ಮನೆಮಕ್ಕಳು ಬಂದಷ್ಟೇ ಸಂಭ್ರಮ. ಅವರ ಮೇಲೆ ಪ್ರೀತಿ, ಅಭಿಮಾನ ಎಲ್ಲಾ. ಅಂದು ತಮ್ಮ ನೋವನ್ನೆಲ್ಲಾ ಮರೆತು ಅವರ ಹಾಸ್ಯಕ್ಕೆ ಮನಸಾರೆ ಹೊಟ್ಟೆ ಹುಣ್ಣಾಗುವಂತೆ ನಕ್ಕು ಖುಷಿಪಟ್ಟಿದ್ದರು. ತಮ್ಮ ಬದುಕಿನ ಜಂಜಾಟ, ಅತಿವೃಷ್ಟಿ, ಅನಾವೃಷ್ಟಿ, ವಯೋ ಸಹಜ ಕಾಯಿಲೆ ಹೀಗೆ ಏನಾದರೊಂದು ಬೇಸರದಲ್ಲೇ ದಿನ ಕಳೆಯುತ್ತಿದ್ದ ಅವರೆಲ್ಲಾ ಈತರ ನಕ್ಕು ಯಾವುದೋ ಕಾಲವಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಕಲಾವಿದರನ್ನು ಮಾತನಾಡಿಸಿ, ಬಾಯಿ ತುಂಬಾ ಹರಸಿ, ನಗು ಮೊಗದೊಂದಿಗೆ ಅವರ ಹಾಸ್ಯಗಳನ್ನು ಮೆಲುಕು ಹಾಕುತ್ತಾ ಸಾಗಿದ್ದರು. ಅವರ ಈ ಖುಷಿ ಮುಂದಿನ ಎಷ್ಟೋ ದಿನಗಳಿಗೆ ತುಂಬಿದ ಜೀವನೋತ್ಸಾಹ ಎಂದರೆ ಅತಿಶಯೋಕ್ತಿಯಲ್ಲ. ಹಾಗಾಗಿ ನಿಜವಾಗಲೂ ಹಾಸ್ಯ ಕಲಾವಿದರದ್ದು ಪುಣ್ಯದ ಕೆಲಸ.

ಅಂತೆಯೇ ನಗು ಎನ್ನುವುದು ಸಾಂಕ್ರಾಮಿಕ. ಒಬ್ಬರು ನಗುವುದನ್ನು ನೋಡಿ ವಿಷಯ ತಿಳಿಯದಿದ್ದರೂ ಇನ್ನೊಬ್ಬರ ಮುಖದಲ್ಲೂ ನಗು ಮೂಡುತ್ತದೆ. ಕೆಲವೊಮ್ಮೆ ಅವರ ನಗು ನೋಡಿ ಜೊತೆಗಿರುವವರೂ ಸಹ ನಗು ತಡೆಯಲಾರದೇ ಬಿದ್ದೂ ಬಿದ್ದೂ ನಗುತ್ತಾರೆ. ಏಕೆ ಅಷ್ಟೊಂದು ನಕ್ಕೆವೆಂದು ತಿಳಿಯುವುದು ಮಾತ್ರ ಅವರ ನಗು ಮುಗಿದು ವಿಷಯ ಹೇಳಿದಾಗಲೇ.
ನಗು ಎನ್ನುವುದು ಒಂದು ಸಹಜ ಪ್ರಕ್ರಿಯೆ. ತನ್ನಿಂದ ತಾನಾಗೇ ಮೂಡುವಂಥದ್ದು. ನಗು ಎಂದರೆ ಸಂತೋಷ, ಆರೋಗ್ಯ. ನಗು ಒತ್ತಡ ಕಡಿಮೆ ಮಾಡುತ್ತದೆ. ಧನಾತ್ಮಕತೆ, ಸಂತೋಷ ನಗುವಿನ ಕುರುಹು ಎಂದರೆ ತಪ್ಪಲ್ಲ. ಕಿರುನಗೆ, ಮುಗುಳ್ನಗೆ, ಜೋರಾದ ನಗು, ಹುಸಿನಗು, ನಸುನಗು, ವ್ಯಂಗ್ಯದ ನಗು, ತೃಪ್ತಿಯ ನಗು ಇತ್ಯಾದಿ. ಹೀಗೆ ನಗುವಿನಲ್ಲೂ ಅನೇಕ ವಿಧಗಳಿವೆ.
- ಬಲವಂತದ ನಗು: ಕೆಲವೊಮ್ಮೆ ಯಾರನ್ನಾದರೂ ನೋಡಿದಾಗ ಇಷ್ಟವಿಲ್ಲದಿದ್ದರೂ ಅನಿವಾರ್ಯಕ್ಕೆ ಬಲವಂತದ ನಗು ನಗಬೇಕಾಗುತ್ತದೆ. ಇನ್ನು ಎಷ್ಟೇ ದುಃಖವಾಗಿದ್ದರೂ ನಮ್ಮವರೆನಿಸಿಕೊಂಡವರ ಖುಷಿಗೆ ನಮ್ಮ ದುಃಖ ಮರೆಮಾಚಿ ಬಲವಂತದ ನಗು ನಗಬೇಕಾಗುತ್ತದೆ.
- ವಿಕಟ ನಗು: ಬೇರೆಯವರನ್ನು ಆಡಿಕೊಂಡು ಹ ಹ್ಹ ಹ್ಹಾ.. ಎಂದು ಜೋರಾಗಿ ನಗುವುದು. ಅದರಲ್ಲೇ ಖುಷಿಪಡುವುದು.
- ಮುಗುಳ್ನಗು: ಯಾರನ್ನಾದರೂ, ಏನನ್ನಾದರೂ ನೋಡಿದಾಗ, ಸವಿ ನೆನಪುಗಳು ಬಂದಾಗ ಮನಸ್ಸಿಗೆ ಖುಷಿಯಾಗಿ ತಂತಾನೇ ಮೊಗದಲ್ಲಿ ಮೂಡುವಂಥದ್ದು. ಈ ನಗು ಮನದಾಳದಾದದ್ದರಿಂದ ಆ ಸಮಯದಲ್ಲಿ ಮೊಗವೂ ಅಷ್ಟೇ ಚೆಂದವಾಗಿ ಕಾಣಿಸುತ್ತದೆ.
- ನಕ್ಕಷ್ಟೂ ಆರೋಗ್ಯವಂತೆ: ಹಾಗಾಗಿ ಪ್ರತಿನಿತ್ಯದ ವ್ಯಾಯಾಮದಲ್ಲಿ ನಗುವನ್ನೂ ಅಳವಡಿಸಿಕೊಂಡವರು ಅನೇಕ ಮಂದಿ. ಅದಕ್ಕೆಂದೇ ಹುಟ್ಟಿಕೊಂಡ ಲಾಫಿಂಗ್ ಕ್ಲಬ್ಗಳೇ ಬೇಕಾದಷ್ಟಿವೆ.
- ಹಾಸ್ಯ: ಹೊಟ್ಟೆ ಹುಣ್ಣಾಗುವಂತೆ ನಗಿಸುವುದು. ನಗುವನ್ನು ತಡೆಯಲು ಆಗದೇ ಕೆಲವರಂತೂ ಬಿದ್ದೂ ಬಿದ್ದೂ ನಗುತ್ತಾರೆ. ನಕ್ಕೂ ನಕ್ಕೂ ಹೊಟ್ಟೆ ನೋವು ಬರುವುದೂ ಇದೆ. ಈ ನಗುವಿನ ಜೊತೆಗೆ ಖುಷಿಯಾಗಿ ಕೆಲವೊಮ್ಮೆ ಕಣ್ಣೀರು ನಾನೂ ಜೊತೆಯಾಗುತ್ತೇನೆಂದು ಬರುತ್ತದೆ.
ಹಿಂದೆಲ್ಲಾ ಚಲನಚಿತ್ರಗಳಲ್ಲಿ ವಿಲನ್ ಗಳು ನಗುವುದನ್ನು ನೋಡಿದರೆ ನಿಜವಾಗಲೂ ಭಯವಾಗುತ್ತಿತ್ತು. ಅದು ಅವರ ಪ್ರತಿಭೆಯ ಅನಾವರಣ. ಕಲೆಯ ಶಕ್ತಿ. ಅವರು ಪಾತ್ರಕ್ಕೆ ಒದಗಿಸುತ್ತಿದ್ದ ನ್ಯಾಯ. ಆ ಕಲಾವಿದರಿಗೊಂದು ನಮನ.
ಇನ್ನೊಬ್ಬರ ರೂಪವನ್ನು, ಬಣ್ಣವನ್ನು, ಗಾತ್ರವನ್ನು, ಆರೋಗ್ಯವನ್ನು, ವಿದ್ಯೆಯನ್ನು, ಭಾಷೆಯನ್ನು, ಮಾತನಾಡುವ ಶೈಲಿಯನ್ನು, ಕೆಲಸವನ್ನು ಆಡಿಕೊಂಡು ನಗುವವರು ಬಹಳಷ್ಟು ಮಂದಿ. ಇದು ಮಾತ್ರ ತೀರಾ ಅಮಾನವೀಯ ವರ್ತನೆ. ಮನುಷ್ಯತ್ವ ಇರುವವರು ಮಾಡುವ ಕೆಲಸ ನಿಜವಾಗಲೂ ಅಲ್ಲ. ಆದರೆ ಅಂತಹ ವಿಕೃತ ಮನಸ್ಸಿನವರಿಗೆ ಅದರಲ್ಲೇ ತೃಪ್ತಿ.
ಹೀಗೆ ಒಂದಲ್ಲಾ ಒಂದು ಕಾರಣ ಹುಡುಕಿ ಅಂದು/ಆಡಿ ಅಳಿಸುವ ಜನರೇ ಹೆಚ್ಚಾದ ದಿನಗಳಲ್ಲಿ ಎಲ್ಲರಿಗೂ ನಗಿ ಎನ್ನುವವರು ಛಾಯಾಗ್ರಾಹಕರು. ಅದು ಅವರ ವೃತ್ತಿಯೇ ಇರಬಹುದು. ಆದರೆ ಅವರು ಸ್ಮೈಲ್ ಪ್ಲೀಸ್ ಎಂದ ತಕ್ಷಣ ತಮ್ಮ ಫೋಟೋ ಚೆನ್ನಾಗಿ ಬರಲೆಂದು ತಮಗರಿವಿಲ್ಲದಂತೆಯೇ ಯಾವ ಯೋಚನೆ, ಮನಸ್ಥಿತಿ, ಮಾತುಕತೆಯಲ್ಲಿದ್ದರೂ ಸಹ ಒಮ್ಮೆ ಎಲ್ಲಾ ಮರೆತು ಮನದಾಳದಿಂದ ಮುಗುಳ್ನಗುತ್ತಾರೆ. ಹೀಗೆ ನಕ್ಕ ಕೆಲವು ಫೋಟೋಗಳಂತೂ ಅವರ ಜೀವನದಲ್ಲಿ ಕೊನೆಯವರೆಗೂ ಸ್ಮರಣೀಯವಾಗಿ ಇರುತ್ತವೆ. ಹಾಗೆ ನೋಡಿದರೆ ತಮ್ಮ ನೋವು, ಬೇಸರ ಏನಿದ್ದರೂ ಅದನ್ನೆಲ್ಲಾ ಬದಿಗಿಟ್ಟು ಯಾವಾಗಲೂ ಎಲ್ಲರನ್ನೂ ನಗಿಸುವ ಛಾಯಾಗ್ರಾಹಕರದೂ ಒಂದು ತರದಲ್ಲಿ ಪುಣ್ಯದ ಕೆಲಸವೇ.
ಒಬ್ಬರು ಹಿರಿಯರು ಸೂಜಿಗೆ ದಾರ ಪೋಣಿಸುತ್ತಿದ್ದರು. ಒಂದೆರಡು ಬಾರಿ ದಾರ ಸೂಜಿಯ ಕಣ್ಣಿನೊಳಗೆ ಹೋಗಿದೆಯೆಂದುಕೊಂಡು ಎಳೆದರು. ಆದರೆ ದಾರ ಅದರೊಳಗೆ ಹೋಗೇ ಇರಲಿಲ್ಲ. ಎದುರಿನವರು ಇದನ್ನು ನೋಡಿ ಕಿಸಕ್ಕನೆ ನಕ್ಕರು. ಅವರಿಗೆ ಅವಮಾನವಾದಂತಾಯಿತು. ನಾನಿಲ್ಲಿ ಕಷ್ಟಪಡ್ತಿದ್ರೆ ನೀನ್ ನಗ್ತಿದ್ಯಾ ಎಂದು ಬೈದರು. ಹಾಗಾಗಿ ಕೆಲವೊಮ್ಮೆ ಸಮಯ ಸಂದರ್ಭ ನೋಡಿ ನಗಬೇಕಾಗುತ್ತದೆ. ಎಲ್ಲೆಂದರಲ್ಲಿ , ಹೇಗೆಂದರೆ ಹಾಗೆ ನಗಲಾಗುವುದಿಲ್ಲ.
ಇನ್ನು ಯಾರಾದರೂ ಜಾರಿ ಬಿದ್ದರೆ ಉಳಿದವರಿಗೆ ಜೋರಾಗಿ ನಗು ಬರುತ್ತದೆ. ಆದರೂ ತಡೆದುಕೊಳ್ಳಬೇಕಾಗುತ್ತದೆ. ಆ ವ್ಯಕ್ತಿಗೆ ಪೆಟ್ಟಾಗಿದ್ದರೆ ಬೇರೆಯವರು ನಕ್ಕಾಗ ಎಷ್ಟೊಂದು ನೊಂದುಕೊಳ್ಳುತ್ತಾರಲ್ಲ. ಆದರೆ ಕೆಲವೊಮ್ಮೆ ಬಿದ್ದವರಿಗೇ ಜೋರಾಗಿ ನಗು ಬಂದುಬಿಡುತ್ತದೆ. ಆಗ ಮಾತ್ರ ಎಲ್ಲರೂ ಮುಕ್ತವಾಗಿ ನಗಬಹುದು.
ಕೊನೆಯದಾಗಿ ಒಂದು ಮಾತು. ಮುಖ ಸಿಂಡರಿಸಿಕೊಂಡಿದ್ದರೆ ಯಾರೂ ಹತ್ತಿರ ಬರುವುದಿಲ್ಲ. ಕೆಲವರಿಗೆ ನಗಲೂ ಬಿಗುಮಾನ. ಅಂತಹವರ ಸಹವಾಸವೇ ಬೇಡವೆಂದು ಎಲ್ಲರೂ ದೂರ ಹೋಗುತ್ತಾರೆ. ಆದ್ದರಿಂದ ಒಮ್ಮೆ ಬಿಗುಮಾನ ಬಿಟ್ಟು ನಕ್ಕು ಎಲ್ಲರೊಂದಿಗೆ ಬೆರೆತು ನೋಡಿ. ಅದರಲ್ಲಿನ ಖುಷಿ ಏನೆಂದು ಅರ್ಥವಾಗುತ್ತದೆ. ಎಲ್ಲರೊಡನೆ ಬೆರೆತು ಮನಸಾರೆ ನಗುವುದರಿಂದ ಸಂಬಂಧ, ಆರೋಗ್ಯ ಎಲ್ಲಾ ವೃದ್ಧಿಯಾಗುತ್ತದೆ. ಕಷ್ಟ, ನೋವು ಎಲ್ಲವೂ ಜೀವನದಲ್ಲಿ ಇದ್ದದ್ದೇ. ಅವನ್ನೆಲ್ಲಾ ಮೆಟ್ಟಿ ನಿಂತು ನಗುನಗುತ್ತಾ ಸಾಗೋಣ ಎಂಬ ಆಶಯದೊಂದಿಗೆ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಮಂಗಳ ಎಂ ನಾಡಿಗ್ – ಲೇಖಕಿ, ಅಂಕಣಕಾರ್ತಿ, ಬೆಂಗಳೂರು.
