ಅಂಗೈಯಲ್ಲಿ ಪ್ರಪಂಚ (ಭಾಗ- ೪೧)

ಬೆಂಗಳೂರಿಗೆ ಬರುವ ಉದ್ದೇಶ ಒಳ್ಳೆಯದಾಗಿರಬೇಕು. ಇಲ್ಲಿ ಬಂದು ಬದುಕು ಕಟ್ಟಿಕೊಂಡವರೆಷ್ಟೋ, ಅದರ ಜೊತೆಗೆ ಕೆಟ್ಟ ಕೆಲಸ ಮಾಡಿ ಸಮಾಜಕ್ಕೆ ಕಂಟಕ ತಂದವರು ಇನ್ನೆಷ್ಟೋ ಮಂದಿ. ಬೆಂಗಳೂರು ತನ್ನ ಒಡಲಿನ ನೋವ ಕಂಚಿಕೊಂಡಾಗ ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ನಾನ್ರೀ…ನಿಮ್ ಬೆಂಗ್ಳೂರು’ ತಪ್ಪದೆ ಮುಂದೆ ಓದಿ…

ಮುಂದಿನ ವರ್ಷ ಮಗನ್ನ ಇಂಜಿನಿಯರಿಂಗ್ ಓದಕೆ ಬೆಂಗ್ಳೂರಿಗ್ ಕಳುಸ್ತ್ಯಂತೆ ರಾಘಣ್ಣನನ್ನು ಅವನ ಸ್ನೇಹಿತ ಮೋಹನ ಕೇಳಿದಾಗ, ಹೌದು ಕಣೋ, ಇನ್ನೇನು ಒಂದ್ತಿಂಗ್ಳಿಗೆ ಎಕ್ಸಾಮ್ ಮುಗ್ಯುತ್ತೆ. ಈಗ್ಲೇ ಅಲ್ಲಿ ಒಂದೊಳ್ಳೆ ಕಾಲೇಜಲ್ಲಿ ವಿಚಾರ್ಸಿದೀನಿ. ಹಾಸ್ಟ್ಲು ವ್ಯವಸ್ಥೆನೂ ಆಗಿದೆ. ಆಮೇಲೆ ಕರ್ಕೊಂಡ್ಹೋಗಿ ಸೇರುಸ್ಬಂದ್ರೆ ಇನ್ನೊಂದ್ ನಾಲ್ಕ್ ವರ್ಷಕ್ಕೆ ಅವ್ನೂ ದುಡ್ಯೋ ಹಂಗಾಗ್ತಾನೆ. ಆಗ ನಂಗೂ ಸ್ವಲ್ಪ ನೆಮ್ದಿ ನೋಡು ಎಂದಾಗ ಮೋಹನ ಅದೂ ಸರಿ ಅನ್ನು, ಇರೋ ಮೂರ್ ಎಕ್ರೇಲಿ ಮಳೆ ಬಂದೋ, ಬರ್ದೇನೋ ಆಗೋ ನಷ್ಟಕ್ಕೆ ನಿಂಗೂ ಸಂಸಾರ ನಡ್ಸದು ಕಷ್ಟನೇಯ. ತಂದೆ-ತಾಯಿ, ಹೆಂಡ್ತಿ , ಮೂರ್ಜನ ಮಕ್ಳು, ಜೊತೆಗೆ ವಿಧವೆ ಅಕ್ಕ , ಅವ್ಳ ಮಗ್ಳು ಜವಾಬ್ದಾರಿ ಬೇರೆ. ಹೌದು, ಏನ್ಮಾಡದು, ಎಷ್ಟು ಕಷ್ಟ ಆದ್ರೂ ಎಲ್ಲಾ ಮಾಡ್ಳೇಬೇಕಲ್ಲ. ಭತ್ತದ್ ಜೊತೆ ಸ್ವಲ್ಪ ತರಕಾರಿ, ಸೊಪ್ಪು ಬೆಳ್ದು ಮಾರದುಕ್ಕೆ ಜೊತೆಗೆ ಒಂದೆರ್ಡ್ ಹಸು ಕಟ್ಗಂಡಿರದುಕ್ಕೆ ಹೆಂಗೋ ನಡೀತಿದೆ ನೋಡು. ಅವ್ನೊಬ್ಬ ಕೆಲ್ಸಕ್ ಸೇರಿದ್ರೆ ನಮ್ ಕಷ್ಟನು ಸ್ವಲ್ಪ ಕಡ್ಮೆ ಆಗುತ್ತೆ, ಇದು ರಾಘಣ್ಣನ ಮನದಾಳದ ಮಾತು.

ಇದೆಲ್ಲಾ ಕಳೆದು ಈಗ ಹನ್ನೆರಡು ವರ್ಷಗಳೇ ಆಗಿದೆ. ಅವನ ಮಗನಿಗೆ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಕೆಲಸವೂ ಸಿಕ್ಕಿ ಈಗ ಒಳ್ಳೆಯ ಸಂಬಳದೊಂದಿಗೆ ಬೆಂಗಳೂರಲ್ಲಿ ಒಂದು ಸೈಟನ್ನೂ ಖರೀದಿಸಿದ್ದಾನೆ. ಅದರ ಸಾಲ ತೀರಿಸುವ ಬಗ್ಗೆ ಅವನಿಗೇನೂ ಚಿಂತೆಯಿಲ್ಲ. ಏಕೆಂದರೆ, ಅವನ ಹೆಂಡತಿಯೂ ಸಾಫ್ಟ್ವೇರ್ ಇಂಜಿನಿಯರ್ರೇ. ಅವಳಿಗೂ ಕೈತುಂಬಾ ಸಂಬಳ. ಇಬ್ಬರೂ ಮುಂದಿನ ಜೀವನದ ಪ್ಲಾನ್ ಮಾಡಿಕೊಂಡೇ ಈ ನಿರ್ಧಾರ ತಳೆದದ್ದು. ಹಾ, ಇಲ್ಲಿ ಇನ್ನೊಂದು ಮಾತು. ಅವನ ತಮ್ಮ, ತಂಗಿ, ಹಾಗೂ ಸೋದರತ್ತೆ ಮಗಳು ಎಲ್ಲರಿಗೂ ಈಗ ಬೆಂಗಳೂರಿನಲ್ಲೇ ಕೆಲಸ. ಎಲ್ಲರೂ ತಕ್ಕಮಟ್ಟಿಗೆ ಆರಾಮಾಗಿದ್ದಾರೆ. ಊರಲ್ಲಿ ಈಗ ರಾಘಣ್ಣ, ಅವನ ಹೆಂಡತಿ ಮತ್ತು ಅವನ ವಯಸ್ಸಾದ ತಾಯಿ ಮಾತ್ರ. ಅವನ ತಂದೆ ಐದು ವರ್ಷದ ಹಿಂದೆ ಇಹಲೋಕ ತ್ಯಜಿಸಿಯಾಗಿದೆ. ಇದು ಒಂದು ಉದಾಹರಣೆ ಅಷ್ಟೆ. ರಾಘಣ್ಣನೊಬ್ಬನ ಮಕ್ಕಳ ಕಥೆಯಲ್ಲ.” ಎಷ್ಟೋ ಕುಟುಂಬದ ಮಕ್ಕಳು ಹುಟ್ಟಿದ ಊರಲ್ಲಿ ಜೀವನಕ್ಕೆ ಬೇಕಾದಷ್ಟು
ಆಸ್ತಿಪಾಸ್ತಿಯಿಲ್ಲದೇ, ಕೆಲಸದ ಅವಕಾಶವೂ ಇಲ್ಲದೇ, ಮುಂದಿನ ಜೀವನದ ಬಗ್ಗೆ ನೂರಾರು ಕನಸು ಹೊತ್ತು ಬೆಂಗಳೂರಿನತ್ತ ಮುಖ ಮಾಡಿ ಬದುಕು ಕಟ್ಟಿಕೊಂಡು ಆ ಮೊಗದಲ್ಲಿ ನಗು ತುಂಬಿಕೊಂಡವರೇ”.

ಫೋಟೋ ಕೃಪೆ : ಅಂತರ್ಜಾಲ

ಎಷ್ಟು ನದಿಗಳು ಹರಿದು ಬಂದು ಸೇರಿದರೂ ಸಮುದ್ರ ಬೇಡವೆನ್ನುವುದಿಲ್ಲ. ಅವುಗಳನ್ನೆಲ್ಲಾ ತನ್ನೊಳಗೆ ಸೇರಿಸಿಕೊಳ್ಳುತ್ತದೆ. ಇದು ನಿರಂತರ ಪ್ರಕ್ರಿಯೆ. ನಾನೂ ಹಾಗೇ. ಕೋಟ್ಯಂತರ ಜನರನ್ನು ನನ್ನೊಡಲೊಳಗೆ ಅಪ್ಪಿಕೊಂಡಿದ್ದರೂ ಮುಂದೆ ಬರುವವರಿಗೂ ಬಾಗಿಲು ತೆರೆದೇ ಇಟ್ಟಿದ್ದೇನೆ. ಯಾವಾಗಲೂ ಅದು ಹಾಗೇ ಇರುತ್ತದೆ. ಆದರೆ, ನೀವು ಬರುವ ಉದ್ದೇಶ ಒಳ್ಳೆಯದಾಗಿರಬೇಕಷ್ಟೇ. ಈ ಮಾತು ಯಾಕೆ ಹೇಳುತ್ತೇನೆಂದರೆ, ನನ್ನಲ್ಲಿ ಬಂದು ಬದುಕು ಕಟ್ಟಿಕೊಂಡವರೆಷ್ಟೋ ಮಂದಿ. ಅದರ ಜೊತೆಗೆ ಕೆಟ್ಟ ಕೆಲಸ ಮಾಡಿ ಸಮಾಜಕ್ಕೆ ಕಂಟಕ ತಂದವರು ಇನ್ನಷ್ಟು ಮಂದಿ. ಅದೆಲ್ಲಾ ನಿಮ್ಮ ನಿಮ್ಮ ಮನಸ್ಥಿತಿಯ ಮೇಲೆ, ನೀವುಗಳು ಮಾಡುವ ಕರ್ಮದ ಮೇಲೆ ಅವಲಂಬಿತ. ಅದಕ್ಕೆ ನನ್ನನ್ನು ಯಾರೂ ದೂಷಿಸುವಂತಿಲ್ಲ. ಬೆಂಗ್ಳೂರಿಗ್ ಹೋಗಿ ಹಾಳಾದ್ರು ಅಂತ. ಹಾ, ಈಗ್ಲಾದ್ರು ಗೊತ್ತಾಯ್ತಲ್ಲ ನಾನ್ಯಾರೂಂತ. ನಾನ್ರೀ… ನಿಮ್ ಬೆಂಗ್ಳೂರು. ಎಷ್ಟೋ ವರ್ಷಗಳಿಂದ ಎಲ್ಲವನ್ನೂ ನೋಡುತ್ತಾ , ಒಳ್ಳೆಯದು-ಕೆಟ್ಟದ್ದು ಎಲ್ಲವನ್ನೂ ಕೇಳಿಸಿಕೊಂಡು ಮೌನವಾಗಿದ್ದ ನನಗೆ ಈಗ ಮಾತನಾಡುವ ಸಮಯ ಒದಗಿ ಬಂದಿದೆ ಎಂದರೆ ತಪ್ಪಲ್ಲ. ಅಥವಾ ನೀವೇ ಅವಕಾಶ ಮಾಡಿಕೊಟ್ಟಿದ್ದೀರಿ ಎಂದರೂ ತಪ್ಪಲ್ಲ.

ನನ್ನಲ್ಲಿ ವಿದ್ಯಾರ್ಥಿಗಳಿಗೆ, ಕೆಲಸ ಮಾಡುವವರಿಗೆ, ಅನಾರೋಗ್ಯ ಪೀಡಿತರಿಗೆ ಹೀಗೆ ಎಲ್ಲರಿಗೂ ಎಷ್ಟೊಂದು ರೀತಿಯ ವ್ಯವಸ್ಥೆಗಳಿವೆ. ಒಂದು ವೇಳೆ ಅವ್ಯವಸ್ಥೆ ಏನಾದರೂ ಆಗಿದ್ದರೆ ಅದಕ್ಕೆ ನೀವೇ ಹೊಣೆ ಹೊರತು ನಾನಲ್ಲ. ನಿಮ್ಮ ದುರಾಸೆಗೆ ನಾನು ಬಲಿಯಾಗಿದ್ದೇನೆ. ನನ್ನಲ್ಲಿ ಮಾಲಿನ್ಯವಾಗಿದೆ, ನನ್ನಲ್ಲಿದ್ದ ಕೆರೆಗಳನ್ನೆಲ್ಲ ಒತ್ತುವರಿ ಮಾಡಿ, ಮನೆ ಕಟ್ಟಿಕೊಂಡದ್ದು ನಿಮ್ಮ ತಪ್ಪು. ಮಳೆ ಬಂದಾಗ ನನ್ನಲ್ಲಿ ತುಂಬುವ ನೀರು, ಅದರ ಪರಿಣಾಮ ಅಂದಿನ ನಿಮ್ಮ ತಪ್ಪಿಗೆ ಶಿಕ್ಷೆ ಅಷ್ಟೇ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಅಯ್ಯೋ, ಬೆಂಗ್ಳೂರಲ್ಲಂತೂ ಇರಕಾಗಲ್ಲಪ್ಪ, ಬರೀ ಹೊಗೆ, ಮಳೆ ಬಂದ್ರೆ ಮನೆಯೊಳ್ಗೆಲ್ಲ ನೀರು, ಜನಜಾತ್ರೆ, ಯಾವಾಗ್ಲೂ ಗಲಾಟೆ, ಹಾಗೆ-ಹೀಗೆ ಎಂದು ನೂರಾಯೆಂಟು ಕೊಂಕು ನುಡಿಯುವವರಿಗೆ ನನ್ನದೊಂದು ಮಾತು.
ಮೊದಲನೆಯದಾಗಿ ನಾನು ನಿಮ್ಮನ್ನು ಕರೆಯಲೇ ಇಲ್ಲ. ನೀವಿದ್ದಲ್ಲಿ ಬದುಕು ಕಟ್ಟಿಕೊಳ್ಳಲಾಗದೆಯೋ, ನನ್ನಲ್ಲಿ ಇನ್ನೂ ಹೆಚ್ಚಿನ ಹಣ ಸಂಪಾದಿಸಬಹುದೆಂದೋ, ಒಳ್ಳೆಯ ವಿದ್ಯಾಭ್ಯಾಸಕ್ಕಾಗಿಯೋ, ಹೀಗೆ ಏನೇನೋ ಉದ್ದೇಶ, ಕಾರಣಗಳನ್ನಿಟ್ಟುಕೊಂಡು ನನ್ನನ್ನು ಹುಡುಕಿಕೊಂಡು ಬಂದವರು ನೀವೇ. ಎಲ್ಲರಂತೆ ನಿಮಗೂ ಆಶ್ರಯ ಕೊಟ್ಟಿದ್ದೇನೆ. ಇಲ್ಲಿಯ ಗಾಳಿ, ನೀರು, ಇಲ್ಲಿಯ ದುಡಿಮೆಯಿಂದ ಮೂರ್ಹೊತ್ತಿನ ಊಟ ಮಾಡುತ್ತಾ, ಇನ್ನೂ ಕೆಲವರು ಮೋಜು-ಮಸ್ತಿ ಮಾಡಿಕೊಂಡು ಐಷಾರಾಮದ ಬದುಕು ನಡೆಸುತ್ತಿದ್ದಾಗ್ಯೂ ನನ್ನದಲ್ಲದ ತಪ್ಪಿಗೆ, ನನ್ನ ಹೆಸರು ಹೇಳಿ ನನ್ನ ಮೇಲೆ ದೋಷಾರೋಪ ಹೊರಿಸುವುದು ಎಷ್ಟು ಸರಿ? ನನ್ನನ್ನು ಬೈದುಕೊಂಡೇ ಇಲ್ಲಿರಬೇಕೆಂದೇನೂ ಇಲ್ಲ. ಬೇಡವೆನಿಸಿದವರು ಧಾರಾಳವಾಗಿ ಹೊರಡಬಹುದು. ನನ್ನಲ್ಲಿಗೆ ಬರಲು ಕಾದಿರುವವರು, ಮುಂದೆ ಬರುವವರು, ಹೀಗೆ ನನ್ನ ಅವಶ್ಯಕತೆ ಇರುವವರು ಬೇಕಾದಷ್ಟು ಜನರಿದ್ದಾರೆ. ಅವರಿಗಾದರೂ ಸ್ವಲ್ಪ ಸ್ಥಳವಾಗಲಿ.

ಕರೋನಾ ಸಮಯದಲ್ಲಿ ಅನೇಕರ ಬದುಕು ಬೀದಿಗೆ ಬಂದಿದ್ದಂತೂ ಸತ್ಯ. ಆದರೆ ಅದಕ್ಕೆ ನಾನು ಕಾರಣ ಅಲ್ಲ. ಅದು ಇಡೀ ವಿಶ್ವಕ್ಕೇ ಆದ ಹೊಡೆತ. ಅದರ ಹೊರತಾಗ್ಯೂ ನೀವು ಊರಿಗೆ ಹೋದರೂ, ನಿಮ್ಮ ಮನೆಯಲ್ಲಿ ಕೂತು ಕೆಲಸ ಮಾಡುವ ಅವಕಾಶ ಕೊಟ್ಟಿದ್ದೂ ನನ್ನಲ್ಲಿರುವ ಕಂಪನಿಗಳೇ. ಈಗ ಮತ್ತೆ ಕೆಲಸದ ಕಡೆ ಮುಖ ಮಾಡುತ್ತಿರುವುದೂ ಸಹ ನನ್ನಲ್ಲಿಗೇ. ತೊಂದರೆಗಳಾದಾಗ ದೂಷಿಸುವುದು, ಚೆನ್ನಾಗಿದ್ದಾಗ ನನ್ನನ್ನೇ ಮರೆಯುವುದು ಇದು ಯಾವ ನ್ಯಾಯ?.

ಫೋಟೋ ಕೃಪೆ : ಅಂತರ್ಜಾಲ

ಕೆಲವರ ಧನದಾಹ, ಲಂಚ, ಮೋಸ, ವಂಚನೆ, ಅಧಿಕಾರದ ದುರುಪಯೋಗ, ಅಹಂಕಾರದ ವರ್ತನೆ, ಸ್ವೇಚ್ಛಾಚಾರದ ಪರಮಾವಧಿ ಇನ್ನೂ ಹಲವು ಕಾರಣಗಳಿಂದ ನನ್ನಲ್ಲಿ ಕೆಲವೆಡೆ ಕೆಲಸ, ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಇದಕ್ಕೆಲ್ಲಾ ಸಂಬಂಧಪಟ್ಟವರು ಜವಾಬ್ದಾರರು. ಅವರು ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಜವಾಬ್ದಾರಿ, ಆದರ್ಶಗಳಿದ್ದಿದ್ದರೆ ನನ್ನ ಕಡೆ ಯಾರೂ ಬೊಟ್ಟು ಮಾಡಿ ತೋರಿಸಲು ಅವಕಾಶ ಇರುತ್ತಿರಲಿಲ್ಲ. ಈಗಲೂ ಅಷ್ಟೇ, ಋಣಾತ್ಮಕ ಅಂಶಗಳ ಪಟ್ಟಿ ಮಾಡುವ ಬದಲು ವ್ಯವಸ್ಥೆಯಲ್ಲಿ ಸುಧಾರಿಸಿದರೆ ಒಳ್ಳೆಯದು. ಅದು ನನ್ನಲ್ಲಿರುವ ಪ್ರತಿಯೊಬ್ಬರ ಕರ್ತವ್ಯವೂ ಹೌದು. ಏಕೆಂದರೆ, ನನಗೆ ನನ್ನದೇ ಆದ ಒಂದು ದೊಡ್ಡ ಸ್ಥಾನಮಾನವಿದೆ. ಕನ್ನಡ ನಾಡು, ನುಡಿ, ಜಾನಪದ, ಕಲೆ, ಸಂಸ್ಕೃತಿ,
ಕೋರ್ಟು-ಕಛೇರಿಗಳು, ಉದ್ಯಾನವನಗಳು, ಧಾರ್ಮಿಕ ಸ್ಥಳಗಳು, ವಸ್ತುಸಂಗ್ರಹಾಲಯಗಳು, ಸುಸಜ್ಜಿತ ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು, ತಾರಾಲಯ, ಚಲನಚಿತ್ರ, ಪತ್ರಿಕೋದ್ಯಮ, ವಿದ್ಯಾಭ್ಯಾಸ, ಇನ್ನೂ ಹತ್ತು-ಹಲವು ಕ್ಷೇತ್ರಗಳು, ಓದಿದವರಿಗೆ ತಕ್ಕ ಕೆಲಸ, ಓದದವರಿಗೂ ಬದುಕಲೊಂದು ದಾರಿ, ಹೀಗೆ ಹೇಳುತ್ತಾ ಹೋದರೆ ನನ್ನಲ್ಲಿರುವ ಪಟ್ಟಿ ಮುಗಿಯುವುದಿಲ್ಲ. ಇದೆಲ್ಲದಕ್ಕೂ ನನ್ನ ಕೊಡುಗೆ ಅಪಾರ. ಹಾಗಾಗೇ ನಾನು ಏಷ್ಯಾ ಖಂಡದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದೇನೆ. ನನಗೆ ಚ್ಯುತಿ ಬರದಂತೆ ಅದನ್ನು ಉಳಿಸುವುದು ನಿಮ್ಮ ಕೈಯ್ಯಲ್ಲೇ ಇದೆ. ನನ್ನಲ್ಲಿ ನೀವು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ನನ್ನನ್ನೂ ಬದುಕಲು ಬಿಡಿ. ನಿಮ್ಮ ಅಭಿವೃದ್ಧಿಯ ಜೊತೆಜೊತೆಗೆ ನನ್ನ ಹೆಜ್ಜೆಯ ಗುರುತೂ ಇರಲಿ.

  • ಸುತ್ತ ಮುತ್ತ – ಲೇಖನಗಳ ಸಂಕಲನದಿಂದ

  •  ಮಂಗಳ ಎಂ ನಾಡಿಗ – ಅಂಕಣಕಾರ್ತಿ, ಕವಿಗಳು, ಬೆಂಗಳೂರು.

One thought on “ಅಂಗೈಯಲ್ಲಿ ಪ್ರಪಂಚ (ಭಾಗ- ೪೧)”

Leave a Reply

Home
Search
Menu
Recent
About
×